ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಚಿತ್ರರಂಗಕ್ಕೆ ಆಗಬೇಕಾಗಿರುವುದೇನು?

Last Updated 4 ಜುಲೈ 2013, 19:59 IST
ಅಕ್ಷರ ಗಾತ್ರ

ಜೆಟ್ ಸಮಯ ಸನಿಹವಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಏನು ಬೇಕಾಗಿದೆ ಎನ್ನುವುದು ಬಹುಶಃ ಚಿತ್ರರಂಗದವರಿಗೇ ಸ್ಪಷ್ಟವಾಗಿಲ್ಲ. ಹಿರಿಯ ನಟ ಅಂಬರೀಷ್ ಸಂಪುಟದಲ್ಲಿದ್ದಾರೆ. ಪೋಷಕ ನಟಿ ಉಮಾಶ್ರೀ ಸಂಸ್ಕೃತಿ ಇಲಾಖೆ ಹೊಣೆ ಹೊತ್ತಿದ್ದಾರೆ. ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಶಾಸಕರಾಗಿದ್ದಾರೆ.

ಈ ಹಿಂದೆಯೂ ಸಂಪುಟದಲ್ಲಿ, ಸರ್ಕಾರದಲ್ಲಿ ಸಿನಿಮಾ ಸಂಬಂಧಿತ ಜನ ಇದ್ದರು. ಚಿತ್ರರಂಗದವರು ಒಳಗಿದ್ದಾರೆ ಎಂಬ ಧೈರ್ಯ ಉದ್ಯಮದಲ್ಲಿದ್ದರೂ, ಉದ್ಯಮಕ್ಕೆ ಆಗಿರುವ ಉಪಕಾರ ಅಷ್ಟಕ್ಕಷ್ಟೇ. ಇತ್ತೀಚೆಗೆ ಶಾಸಕ ಮುನಿರತ್ನ ಅವರನ್ನು ಮುಂದಿಟ್ಟುಕೊಂಡು ಚಿತ್ರರಂಗದ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಬಜೆಟ್‌ನಲ್ಲಿ ಚಿತ್ರರಂಗಕ್ಕೆ ಏನು ಕೊಡಬಹುದು ಎಂಬ ಚರ್ಚೆ ಆಯಿತು.

ಯಶಸ್ಸುಗಳು ಮರೀಚಿಕೆಯಾಗುತ್ತಿರುವ ಈ ದಿನಗಳಲ್ಲಿ ಚಲನಚಿತ್ರಗಳ ಭವಿಷ್ಯ ತೂಗುಯ್ಯಾಲೆಯಾಗಿದೆ. ಪರಭಾಷೆ ಚಿತ್ರಗಳು ಮೇಲುಗೈಯಾಗಿ ಕನ್ನಡಕ್ಕೆಂದು ಮೀಸಲಾದ ಚಲನಚಿತ್ರ ಮಂದಿರಗಳು ಅವರ ವಶವಾಗಿವೆ. ಮತ್ತಷ್ಟು ಚಿತ್ರಮಂದಿರಗಳು ನೆಲಸಮವಾಗಿ ಮಾಲ್‌ಗಳಾಗಿ ಪರಿವರ್ತನೆಯಾಗುತ್ತಿವೆ.

ಪ್ರದರ್ಶನ ಹಾಗೂ ವಿತರಣೆ ವ್ಯವಸ್ಥೆ ಏರುಪೇರಾಗಿ ಹೊಸ ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ. ನಿರ್ಮಾಣ ಸಂಖ್ಯೆ ದ್ವಿಗುಣಗೊಂಡಿದ್ದರೂ ಲಾಭ ಶೂನ್ಯವಾಗಿದೆ. ಇಂತಹ ಸಂಕೀರ್ಣ ಸಮಸ್ಯೆಗಳಿರುವ ಚಿತ್ರೋದ್ಯಮ ರಾಜ್ಯ ಬಜೆಟ್ ಮೂಲಕ ಏನನ್ನು ನಿರೀಕ್ಷಿಸಬಹುದು? ಚಿತ್ರರಂಗಕ್ಕೆ ಈಗ ಸಹಾಯಹಸ್ತ ಬೇಕಾಗಿದೆಯೇ? ಬೇಕಾಗಿದ್ದರೆ ಯಾವ ರೀತಿಯ ನೆರವನ್ನು ಸರ್ಕಾರದಿಂದ ಬೇಡಬಹುದು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಒಂದೇ ಒಂದು ಚಲನ ಚಿತ್ರದ ನಾಯಕ ನಟನಾಗಿದ್ದಿರಬಹುದು.

ಆದರೆ ಚಿತ್ರರಂಗದ ಬಗ್ಗೆ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಮಾಹಿತಿ ಇದೆ ಎಂದು ಭಾವಿಸಲಾಗದು. ಗುಂಡೂರಾವ್, ರಾಮಕೃಷ್ಣ ಹೆಗಡೆ, ಕುಮಾರಸ್ವಾಮಿ ಅವರುಗಳ ರೀತಿಯಲ್ಲಿ ಇಂದಿನ ಮುಖ್ಯಮಂತ್ರಿಗಳು ಸಿನಿಮಾರಂಗದ ಜೊತೆ `ನಿಕಟ' ಸಂಪರ್ಕ ಹೊಂದಿಲ್ಲ ಎನ್ನುವುದು ಸ್ಪಷ್ಟ. ಹೀಗಾಗಿ ಚಿತ್ರೋದ್ಯಮಿಗಳು ಕನ್ನಡ ಚಿತ್ರರಂಗ ಈಗ ಎದುರಿಸುತ್ತಿರುವ ಸಮಸ್ಯೆಗಳೇನು. ಅದನ್ನು ಸರ್ಕಾರ ಯಾವ ರೀತಿಯಲ್ಲಿ ಪರಿಹರಿಸಬಹುದು ಎಂಬ ಚಿಂತನೆಯನ್ನು ಸರ್ಕಾರದ ಮುಂದೆ ಮಂಡಿಸುವುದು ಸೂಕ್ತವೆನಿಸುತ್ತದೆ.

ಆದರೆ, ಚಿತ್ರರಂಗದವರು ಸರ್ಕಾರದ ಮುಂದೆ ಹೋದಾಗ ಮಂಡಿಸುವ ಬೇಡಿಕೆಗಳು ತಮಾಷೆಯಾಗಿ ಕಾಣುತ್ತವೆ. ಹೆಸರಘಟ್ಟದ ಬಳಿ ಇರುವ ಚಿತ್ರನಗರಿಗೇ ಮೀಸಲಾದ ಸ್ಥಳವನ್ನು ಚಿತ್ರರಂಗ ಬಳಸಿಕೊಳ್ಳಲೇ ಇಲ್ಲ. ಅದು ದೂರವಾಗಿರುವ ಕಾರಣ, ಯಶವಂತಪುರದ ಬಳಿ ಇರುವ ಮೈಸೂರು ಸೋಪ್ ಕಾರ್ಖಾನೆಯಿರುವ ಜಾಗವನ್ನು ಚಿತ್ರೋದ್ಯಮ ಚಟುವಟಿಕೆಗಳಿಗೆ ನೀಡಬೇಕೆಂದು ಚಿತ್ರೋದ್ಯಮದವರು ಕೋರಿಕೆಯಿಟ್ಟಿದ್ದಾರೆ.

ಚಿತ್ರೋದ್ಯಮ ಎದುರಿಸುತ್ತಿರುವ ಸಮಸ್ಯೆಗೂ ಚಿತ್ರನಗರಿ ಸ್ಥಾಪನೆಗೂ ಸಂಬಂಧ ಅಷ್ಟೇನೂ ಕಾಣುತ್ತಿಲ್ಲ. ವಾಣಿಜ್ಯ ದೃಷ್ಟಿಯಿಂದ ಆಕರ್ಷಕವಾಗಿ ಕಾಣುವ ಮೈಸೂರು ಸೋಪ್ ಕಾರ್ಖಾನೆಯ ಆವರಣವನ್ನು ಚಿತ್ರರಂಗಕ್ಕೆ ಕೊಡಿ ಎಂದು ಕೇಳುವುದು `ರಿಯಲ್ ಎಸ್ಟೇಟ್' ಮನಸ್ಥಿತಿಯದ್ದಾಗುತ್ತದೆಯೇ ಹೊರತು, ಚಿತ್ರೋದ್ಯಮ ಅಭಿವೃದ್ಧಿಯ ದೃಷ್ಟಿಕೋನದಿಂದ ಕೂಡಿದೆ ಎಂದು ಭಾವಿಸುವುದು ಕಷ್ಟವಾಗುತ್ತದೆ.

ಹೆಸರಘಟ್ಟದ ಬಳಿ ಚಿತ್ರನಗರಿಗೆಂದೇ ಸೃಷ್ಟಿಯಾದ ವಿಶಾಲ ಪ್ರದೇಶವನ್ನು ಪಡೆಯಲು ಚಿತ್ರರಂಗದವರು ನಿರಾಸಕ್ತಿ ತೋರಿದರು. `ಅದು ಬಹಳ ದೂರ' ಎಂಬ ಮೊಂಡುವಾದವನ್ನು ಒಡ್ಡಿದರು. ಗುತ್ತಿಗೆಗೆ ಕೊಡುವ ಬದಲು, ಸ್ವಂತಕ್ಕೆ ಕೊಡಬೇಕೆಂಬ ವಾದ ಮುಂದಿಟ್ಟರು. 30 ವರ್ಷಗಳ ಕಾಲ ಹೀಗೆ ಜಗ್ಗಾಡಿ, ಇಷ್ಟೊತ್ತಿಗೆ ಚಟುವಟಿಕೆಗಳಿಂದ ಕಂಗೊಳಿಸಬೇಕಿದ್ದ ಹೆಸರಘಟ್ಟದ ಜಾಗ, ಇಂದಿಗೂ ಖಾಲಿ ನಿವೇಶನವಾಗಿದೆ. ತೋಟಗಾರಿಕೆ ಇಲಾಖೆಗೆ ಮರಳಿ ಆ ಜಾಗವನ್ನು ಹಸ್ತಾಂತರಿಸಲಾಗಿದೆ. ಈಗ ಬೇಡಿಕೊಂಡರೂ ಹೆಸರಘಟ್ಟದ ನಿವೇಶನ ಚಿತ್ರರಂಗಕ್ಕೆ ದಕ್ಕುವುದಿಲ್ಲ. ಆದರೂ ಬೆಂಗಳೂರಿನಿಂದ ಹೆಸರುಘಟ್ಟ ದೂರ ಎಂಬ ವಾದವೇ ತಮಾಷೆಯಾಗಿ ಕಾಣುತ್ತಿದೆ.

ಚಿತ್ರನಗರಿ ಊರಿನಿಂದ ಹೊರವಲಯದಲ್ಲಿ ಇದ್ದರೇನೇ ಕೆಲಸಗಳು ಸುಗಮ. ಚೆನ್ನೈಗೆ, ಮುಂಬೈಗೆ, ಹೈದರಾಬಾದ್, ಕೇರಳಕ್ಕೆ ತೆರಳಿ ಚಿತ್ರೀಕರಣ ಮುಗಿಸಿಕೊಂಡು ಬರುವ ನಿರ್ಮಾಪಕರಿಗೆ ನಗರದೊಳಗೇ ಇರುವ ಹೆಸರಘಟ್ಟ ಹೇಗೆ ದೂರವಾಗುತ್ತದೆ? ಇದೇ ವಾದವನ್ನಿಟ್ಟು `ಅಭಿಮಾನ್' ಸ್ಟುಡಿಯೊವನ್ನು ಚಿತ್ರರಂಗ ಕಳೆದುಕೊಂಡಿತು. ಮೈಸೂರಿನ ಪ್ರೀಮಿಯರ್ ಸ್ಟುಡಿಯೊ ಹಾಳಾಯಿತು.

ನಗರದ ನಡುವೆಯೇ ಇರುವ ಕಂಠೀರವ ಸ್ಟುಡಿಯೊದಲ್ಲಿ ಎಷ್ಟು ಚಿತ್ರೀಕರಣ ನಡೆಯುತ್ತಿದೆ? ಆಡಂಬರಕ್ಕಾಗಿ ಮುಹೂರ್ತವನ್ನಷ್ಟೇ ಕಂಠೀರವದಲ್ಲಿ ನಡೆಸುವ ನಿರ್ಮಾಪಕರಿಗೆ ನಂತರ ಕಂಠೀರವ ನೆನಪಿಗೇ ಬರುವುದಿಲ್ಲ. ಇಂತಹ ಹಿನ್ನೆಲೆಯಿರುವಾಗ ಮೈಸೂರು ಸೋಪ್ ಕಾರ್ಖಾನೆ ಆವರಣವನ್ನು ಕೇಳುವ ಹಿನ್ನೆಲೆಯೇ ಅರ್ಥವಾಗುವುದಿಲ್ಲ. ಅಲ್ಲದೆ, ಚಿತ್ರನಗರಿ ಸ್ಥಾಪನೆಗೆ ಬೆಂಗಳೂರಿಗಿಂತ ಮೈಸೂರು ಬಹಳ ಸೂಕ್ತವಾದ ಪ್ರದೇಶ ಎನ್ನುವುದನ್ನೂ ಮನಗಾಣಬೇಕು.

ಸಾಂಸ್ಕೃತಿಕನಗರಿ, ಇತಿಹಾಸದ ಹಿನ್ನೆಲೆ, ಪ್ರವಾಸಿಗರ ಸ್ವರ್ಗವಾಗಿರುವ ಮೈಸೂರಿನಲ್ಲಿ ಚಿತ್ರನಗರ ನಿರ್ಮಾಣಕ್ಕೆ 400 ಎಕರೆ ಪ್ರದೇಶವನ್ನು ನೀಡುವಂತೆ ಕೋರುವುದು ಭಾರತೀಯ ಚಿತ್ರರಂಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಮಯೋಚಿತವಾಗುತ್ತದೆ. ಬೆಂಗಳೂರಿನ ಒತ್ತಡವೂ ಈ ಮೂಲಕ ಕಡಿಮೆಯಾದಂತಾಗುತ್ತದೆ.

ಸಾಮಾನ್ಯವಾಗಿ ಸರ್ಕಾರ ಚಿತ್ರರಂಗದವರು ಬೇಡಿಕೆ ಇಟ್ಟಾಗಲೆಲ್ಲಾ, ಸಹಾಯ ಧನ ನೀಡಲಿರುವ ಚಿತ್ರಗಳ ಸಂಖ್ಯೆಯನ್ನು ಹೆಚ್ಚು ಮಾಡುತ್ತಲೇ ಬಂದಿದೆ. ಮನರಂಜನಾ ತೆರಿಗೆ ವಿನಾಯಿತಿಯನ್ನೂ ನೀಡುತ್ತಲೇ ಬಂದಿದೆ. ಮಕ್ಕಳ ಚಿತ್ರರಂಗ ನಿರ್ಮಾಣಕ್ಕಾಗಿ ಹೆಚ್ಚುವರಿ ಸಹಾಯಧನ ನೀಡುತ್ತಿದೆ. ಇವೆಲ್ಲಾ ಪ್ರಸ್ತುತ ಸಂದರ್ಭಕ್ಕೆ ಅವೈಜ್ಞಾನಿಕವಾಗಿ ಕಾಣುತ್ತಿವೆ. ಸಹಾಯ ಧನವನ್ನು ನೂರು ಚಿತ್ರಗಳವರೆಗೆ ನೀಡುವ ಉದ್ದೇಶವೇ ಅರ್ಥಹೀನ. ತಯಾರಾಗುವ ಎಲ್ಲ ಚಿತ್ರಗಳಿಗೂ ತಲಾ ಐದೈದು ಲಕ್ಷ ರೂಪಾಯಿ ಸಹಾಯಧನ ಕಡ್ಡಾಯವಾಗಿ ನೀಡಬೇಕು ಎಂಬ ವಾದವನ್ನು ಈಗಾಗಲೇ ಚಿತ್ರೋದ್ಯಮಿಗಳು ಮುಂದಿಟ್ಟಿದ್ದಾರೆ.

ಚಿತ್ರರಂಗವೊಂದು ಬೆಳೆಯುವ ಹಂತದಲ್ಲಿದ್ದಾಗ ಇಂತಹ ಸೌಲಭ್ಯಗಳನ್ನು ನೀಡುವುದು ಅರ್ಥವತ್ತಾಗಿರುತ್ತದೆ. ಆದರೆ 80 ವರ್ಷಗಳ ಇತಿಹಾಸವಿರುವ ಚಿತ್ರರಂಗಕ್ಕೆ ಇಂದಿಗೂ ಆರಂಭಿಕ ಹಂತದ ಅನುಕೂಲಗಳನ್ನು ಕಲ್ಪಿಸುವುದರಲ್ಲಿ ಅರ್ಥವಿಲ್ಲ. `ಹೀರೋ'ಗಳಿಗೆ ಮೂರು ಕೋಟಿ ರೂ. ಸಂಭಾವನೆ ಸುರಿಯುತ್ತಾರೆ. ವಿದೇಶದಲ್ಲಿ ಚಿತ್ರೀಕರಣಕ್ಕೆ ಕೋಟ್ಯಾಂತರ ರೂಪಾಯಿ ವ್ಯಯಿಸುತ್ತಾರೆ. ರೀಮೇಕ್ ಹಕ್ಕು ಕೊಂಡುತರಲು ಲಕ್ಷಾಂತರ ಕೊಡುತ್ತಾರೆ. ಇಷ್ಟು ಶ್ರೀಮಂತಿಕೆ ಮೆರೆಯುವ ಕೋಟಿ ನಿರ್ಮಾಪಕರೆಲ್ಲ ಹತ್ತು ಲಕ್ಷ ರೂಪಾಯಿ ಸಬ್ಸಿಡಿಗೆ ಕೈಚಾಚುತ್ತಾರೆ ಎಂದರೆ ನಾಚಿಕೆಗೇಡಲ್ಲವೇ?

ಸಬ್ಸಿಡಿ ಮನರಂಜನಾ ತೆರಿಗೆ ವಿನಾಯಿತಿ ಮೊದಲಾದ ಅನುಕೂಲತೆಗಳನ್ನು ಸರ್ಕಾರ ಕೊಡಲಾರಂಭಿಸಿದ್ದೇ ಚಿಗುರಲು ಒದ್ದಾಡುತ್ತಿದ್ದ ಚಿತ್ರೋದ್ಯಮವನ್ನು ಎತ್ತಿ ಹಿಡಿಯಲು. ಆದರೆ ಈಗ ಚಿತ್ರೋದ್ಯಮ 80 ವರ್ಷಕ್ಕೆ ಕಾಲಿಟ್ಟಿದೆ. ತಾನೇ ಸೃಷ್ಟಿಸಿಕೊಂಡ ಭಾರದಿಂದಾಗಿಯೇ ಮುಳುಗಿ, ತೇಲುತ್ತಿದೆ. ಆದರೆ ಈಗ ಸಬ್ಸಿಡಿ, ತೆರಿಗೆ ವಿನಾಯಿತಿ ಸೌಲಭ್ಯ ಅರೆಕಾಸಿನ ಮಜ್ಜಿಗೆಯಂತಾಗಿದೆ. ಈಗ ಚಿತ್ರೋದ್ಯಮಕ್ಕೆ ಬೇಕಾಗಿರುವ ನೆರವಿನ ಸ್ವರೂಪವೇ ಬೇರೆಯಾಗಿರಬೇಕಾಗಿದೆ.

ನಮ್ಮ ಚಲನ ಚಿತ್ರರಂಗದ ಇತಿಹಾಸ ಆರಂಭವಾಗುವುದೇ ಹೊರ ರಾಜ್ಯದಿಂದ. 1934 ರಲ್ಲಿ ಕನ್ನಡದ ಮೊದಲ ವಾಕ್ಚಿತ್ರ, ಪಕ್ಕದ ರಾಜ್ಯದಲ್ಲಿ ನಿರ್ಮಾಣವಾಯಿತು. ಆದರೆ ಅದರ ಮಾರುಕಟ್ಟೆ ಕರ್ನಾಟಕದಲ್ಲಿತ್ತು. ಹಿಂದಿ, ತಮಿಳು, ತೆಲುಗು, ಇಂಗ್ಲಿಷ್ ಚಲನಚಿತ್ರಗಳ ಭರಾಟೆಯಿಂದಾಗಿ 1965ರ ವರೆಗೆ ಕನ್ನಡ ಚಿತ್ರಗಳ ನಿರ್ಮಾಣ ಕುಂಟುತ್ತಾ, ತೆವಳುತ್ತಾ ಸಾಗಿತ್ತು. ಕನ್ನಡ ಚಿತ್ರೋದ್ಯಮವನ್ನು ಹೇಗಾದರೂ ಮಾಡಿ ಕಾಪಾಡಬೇಕೆಂದು 1966 ರಲ್ಲಿ ತೀರ್ಮಾನಿಸಿದ ಸರ್ಕಾರ, ಮೈಸೂರು ರಾಜ್ಯದಲ್ಲಿ ತಯಾರಾದ ಎಲ್ಲ ಚಿತ್ರಗಳಿಗೂ ಸಬ್ಸಿಡಿ ನೀಡುವ ಯೋಜನೆಯನ್ನು ಜಾರಿಗೆ ತಂದಿತು. ಆ ವೇಳೆಗೆ ಚಿತ್ರೋದ್ಯಮ ಹುಟ್ಟಿ 32 ವರ್ಷಗಳಾಗಿ ಬಿಟ್ಟಿತ್ತು. ಅದುವರೆಗೆ ತಯಾರಾದ ಚಿತ್ರಗಳ ಸಂಖ್ಯೆ ಕೇವಲ 204 ಮಾತ್ರ.

1967-68ರ ರಾಜ್ಯ ಬಜೆಟ್ ಮಂಡಿಸುವಾಗ, ಸರ್ಕಾರ, ಮನರಂಜನಾ ತೆರಿಗೆಯ ಮೇಲೆ ಸರ್ಚಾರ್ಜ್ ವಿಧಿಸಿ ಅದರಿಂದ ಸಂಗ್ರಹವಾಗುವ ಹಣದ ಮೊತ್ತವನ್ನು ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗೆ ಬಳಸುವ ಭರವಸೆ ನೀಡಿತು. ಸರ್ಚಾರ್ಜ್ ವಸೂಲಾಗುತ್ತಲೇ ಇದೆ. ಚಿತ್ರರಂಗದಿಂದ ಸರ್ಕಾರಕ್ಕೆ ಕೋಟಿಗಟ್ಟಳೆ ಹಣ ಸಂಗ್ರಹವಾಗುತ್ತಿದೆ. ಆದರೆ ಅದು ಚಿತ್ರರಂಗಕ್ಕೆ ಅಭಿವೃದ್ಧಿ ರೂಪದಲ್ಲಿ ಹೇಗೆ ಹರಿಯುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ.

ಸಬ್ಸಿಡಿ ಕೊಡುವುದರಿಂದ ತೆರಿಗೆ ವಿನಾಯಿತಿಯಿಂದ ನಿರ್ಮಾಪಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವುದು ಎಲ್ಲರಿಗೂ ಅರಿವಾಗಿದೆ. ಚಿತ್ರಮಂದಿರಗಳ ಕೊರತೆ ನೀಗಿಸಬೇಕು. ಕನ್ನಡ ಚಿತ್ರಗಳ ಪ್ರದರ್ಶನಕ್ಕೆಂದೇ ಚಿಕ್ಕ ಚಿತ್ರಮಂದಿರಗಳ ಕಲ್ಪನೆ ರಾಜ್ಯದಾದ್ಯಂತ ಸಾಕಾರಗೊಳ್ಳಬೇಕು.

ನಿರ್ಮಾಪಕರ ವರ್ಗೀಕರಣ ಪ್ರಕ್ರಿಯೆ ಆರಂಭಿಸಿ, ಕಡಿಮೆ ಬಜೆಟ್ಟಿನ ಚಿತ್ರ ನಿರ್ಮಾಪಕರಿಗೆ ಅನುಕೂಲಕರವಾದಂತಹ ನಿಯಮಾವಳಿಗಳನ್ನು ರೂಪಿಸಬೇಕು. ಅಂತಹ ಒಂದು ಚಿಂತನೆಗಳಿರುವ ಪ್ರಸ್ತಾಪಗಳನ್ನು ಚಿತ್ರೋದ್ಯಮ ಸಲ್ಲಿಸುವುದಾದರೆ ಚಿತ್ರರಂಗಕ್ಕೆ ಬಂಪರ್ ಕೊಡುಗೆ ನಿರೀಕ್ಷಿಸಬಹುದೇನೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT