ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ರಂಗಭೂಮಿಯ ನವವಸಂತ!

Last Updated 12 ಏಪ್ರಿಲ್ 2016, 19:44 IST
ಅಕ್ಷರ ಗಾತ್ರ

ಈ ಅಂಕಣ ಬರೆಯುವ ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸಿ.ಜಿ.ಕೆ. ರಾಷ್ಟ್ರೀಯ ನಾಟಕೋತ್ಸವ’ ನಡೆಯುತ್ತಿದೆ.  ರಂಗಪ್ರಿಯರೆಲ್ಲ ಪ್ರೀತಿಯಿಂದ ‘ಸಿ.ಜಿ.ಕೆ.’ ಎಂದು ಕರೆಯುತ್ತಿದ್ದ ಸಿ.ಜಿ. ಕೃಷ್ಣಸ್ವಾಮಿ ರೂಪಿಸಿದ ರಂಗಸಂಸ್ಕೃತಿ ಅಂದಿನಷ್ಟೇ ಕ್ರಿಯಾಶೀಲವಾಗಿದೆ ಎನ್ನಿಸುವಂತೆ ಜನ ನಾಟಕ ನೋಡುತ್ತಿದ್ದಾರೆ.

ಸಿ.ಜಿ.ಕೆ.ಯವರ ಕ್ರಿಯಾಶೀಲತೆಯನ್ನು ಕುರಿತು ಯೋಚಿಸುತ್ತಿರುವಾಗ ಅವರು ರಂಗಸಂಸ್ಕೃತಿಯ ಬಗ್ಗೆ ಕೊಟ್ಟ ಒಂದು ಒಳನೋಟ ನೆನಪಾಯಿತು. ಒಮ್ಮೆ ಸಿ.ಜಿ.ಕೆ., ಗಾಂಧೀಜಿ ಕ್ಯಾಲೆಂಡರಿನ ಟಿಪ್ಪಣಿಗಳನ್ನು ಬರೆಯುವ ಕೆಲಸವೊಂದನ್ನು ನನಗೆ ಒಪ್ಪಿಸಿದ್ದರು.

‘ಅದು ಮುಗಿಯುವಾಗ ರಾತ್ರಿ ಹನ್ನೆರಡಾಗಬಹುದು’ ಅಂದೆ. ‘ಹಾಗಾದರೆ ಹನ್ನೆರಡೂವರೆಗೆ ನಮ್ಮ ‘ರಂಗನಿರಂತರ’ದ ಹುಡುಗ ಬಂದು ಅದನ್ನು ಕಲೆಕ್ಟ್ ಮಾಡುತ್ತಾನೆ’ ಅಂದರು ಸಿ.ಜಿ.ಕೆ; ‘ಅಷ್ಟು ಹೊತ್ತಿನಲ್ಲಿ?’ ಅಂದೆ. ಸಿ.ಜಿ.ಕೆ. ನಗುತ್ತಾ ‘ನಿಮಗೆ ಥಿಯೇಟರ್ ಕಲ್ಚರ್ ವಿಚಾರ ಸರಿಯಾಗಿ ಗೊತ್ತಿಲ್ಲ’ ಅಂದರು.

‘ರಂಗನಿರಂತರ’ದ ಗೆಳೆಯ ರಾತ್ರಿ  ಹನ್ನೆರಡಕ್ಕೆ ಬಂದು ಟಿಪ್ಪಣಿಗಳನ್ನು ತೆಗೆದುಕೊಂಡು ಹೋದ. ಈ ಪುಟ್ಟ ಪ್ರಸಂಗ ಬಹುಕಾಲದಿಂದ ರಂಗಸಂಸ್ಕೃತಿಯ ವಿಶಿಷ್ಟ ಶಿಸ್ತಿನ ಉದಾಹರಣೆಯಾಗಿ ನನ್ನೊಳಗೆ ನೆಲೆಸಿದೆ. ಆ ಬಗ್ಗೆ ಸಿ.ಜಿ.ಕೆ. ಜೊತೆ ಮಾತಾಡುತ್ತಾ, ರಂಗತಂಡಗಳನ್ನು ನೋಡುತ್ತಾ ರಂಗಭೂಮಿಯ ಅದ್ಭುತ ಸಾಮೂಹಿಕ ಸಂಸ್ಕೃತಿಯ ಗುಣಗಳು ಅರ್ಥವಾಗತೊಡಗಿದವು.

ಕರ್ನಾಟಕದಲ್ಲಿ ಎಪ್ಪತ್ತರ ದಶಕದಿಂದೀಚೆಗೆ ರೂಪುಗೊಂಡ ರಂಗಸಂಸ್ಕೃತಿ ತಾತ್ವಿಕವಾಗಿಯೂ ಈ ಸಾಮೂಹಿಕ ದುಡಿಮೆಯ ಸಂಸ್ಕೃತಿಯನ್ನು ಬೆಳೆಸುತ್ತಾ ಬಂದಿತ್ತು. ಸಿ.ಜಿ.ಕೆ., ಕಾರ್ಮಿಕ ಕಲಾಸಂಘಗಳಿಂದ ಹಿಡಿದು ಸಾಣೇಹಳ್ಳಿಯ ಶಿವಕುಮಾರ ರಂಗಪ್ರಯೋಗ ಶಾಲೆಯವರೆಗೂ ಈ ರಂಗಸಂಸ್ಕೃತಿಯನ್ನು ಸೃಷ್ಟಿಸುತ್ತಿದ್ದರು;  ಅನೇಕರು ಆ ಕೆಲಸವನ್ನು ಮುಂದುವರಿಸುತ್ತಲೇ ಇದ್ದಾರೆ.

ಎಪ್ಪತ್ತರ ದಶಕದಿಂದ ಇಪ್ಪತ್ತನೆಯ ಶತಮಾನದ ಕೊನೆಯವರೆಗೂ ಕರ್ನಾಟಕದ ಫ್ಯಾಕ್ಟರಿಗಳಲ್ಲಿ ನಡೆಯುತ್ತಿದ್ದ ರಂಗ ಚಟುವಟಿಕೆಗಳು ಇಡೀ ಕರ್ನಾಟಕದಲ್ಲಿ ನಾಟಕ ಆಡುವ, ನೋಡುವ, ಹೊಸ ಚಿಂತನೆ ರೂಢಿಸಿಕೊಳ್ಳುವ ಪ್ರೇಕ್ಷಕರನ್ನು ಹುಟ್ಟು ಹಾಕುತ್ತಿದ್ದ ರೀತಿಯನ್ನು ನೆನೆದರೆ ಅಚ್ಚರಿಯಾಗುತ್ತದೆ.

ಆ ದಶಕಗಳಲ್ಲಿ ಕರ್ನಾಟಕದ ಕಾರ್ಮಿಕರ ಕಲೆ, ಚಿಂತನೆ ಎಲ್ಲವೂ ಅರಳಿದ್ದವು. ಇದೆಲ್ಲದರ ಜೊತೆಗೆ ಸಮುದಾಯ ತಂಡ, ಬಂಡಾಯ ಸಾಹಿತ್ಯ ಸಂಘಟನೆ, ಕಮ್ಯುನಿಸ್ಟ್ ಪಾರ್ಟಿಗಳು, ಪ್ರಗತಿಪರ ವೇದಿಕೆಗಳು, ಬೀದಿ ನಾಟಕ ತಂಡಗಳು... ಎಲ್ಲವೂ ಇದ್ದವು.

ಇವೆಲ್ಲ ಎಲ್ಲಿ ಹೋದವು ಎಂದು ವಿಷಾದಪಡುವವರಿದ್ದಾರೆ. ‘ಖಾಸಗೀಕರಣದಿಂದಾಗಿ ಹೊಸ ತಲೆಮಾರಿನ ಹುಡುಗಹುಡುಗಿಯರಿಗೆ ಕಾರ್ಖಾನೆಗಳಲ್ಲಿ ಕೆಲಸ ಸಿಕ್ಕುವುದು ನಿಂತುಹೋಯಿತು; ಹೊಸರಕ್ತವಿಲ್ಲದೆ ಕಾರ್ಮಿಕರಂಗಭೂಮಿಗೆ ಹೊಡೆತ ಬಿತ್ತು’ ಎನ್ನುತ್ತಾರೆ ನಿರ್ದೇಶಕ ಕೆ.ಎಸ್.ಡಿ.ಎಲ್. ಚಂದ್ರು. ಪ್ರತಿವರ್ಷ ನಾಟಕ ಸ್ಪರ್ಧೆಯ ಮೂಲಕ ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳನ್ನು ಕೊಡುತ್ತಿದ್ದ ತುಮಕೂರಿನ ಎಚ್.ಎಂ.ಟಿ. ಕಾರ್ಖಾನೆಯ ಅವಸಾನವೊಂದನ್ನೇ ಪ್ರಾತಿನಿಧಿಕವಾಗಿ ನೋಡಿದರೂ ಸಾಕು, ನಮ್ಮ ರಂಗಸಂಸ್ಕೃತಿಯ ಮೇಲೆ ಜಾಗತೀಕರಣ ಘಟ್ಟದ ಹೊಡೆತ ಎಂಥದೆಂಬುದು ಗೊತ್ತಾಗುತ್ತದೆ.

ಎನ್.ಜಿ.ಇ.ಎಫ್., ಮೈಸೂರ್ ಲ್ಯಾಂಪ್ಸ್ ಎಲ್ಲ ಕಡೆ ನಡೆಯುತ್ತಿದ್ದ ನಾಟಕ ಸ್ಪರ್ಧೆಗಳು ನಿಂತುಹೋಗಿವೆ; ಮೈಕೊ, ಬಿ.ಇ.ಎಲ್.ನಲ್ಲಿ ಮಾತ್ರ ನಾಟಕ ಸ್ಪರ್ಧೆಗಳು ಇನ್ನೂ ನಡೆಯುತ್ತಿವೆ. 

ಇಷ್ಟೆಲ್ಲ ಏರುಪೇರುಗಳ ನಡುವೆಯೂ ಕರ್ನಾಟಕದಲ್ಲಿ ರಂಗಸಂಸ್ಕೃತಿ ಹಬ್ಬುತ್ತಲೇ ಇದೆ. ಕಳೆದ ಜನವರಿಯಲ್ಲಿ ಮೈಸೂರಿನಲ್ಲಿ ನಡೆದ ಬಹುರೂಪಿ ನಾಟಕೋತ್ಸವದಲ್ಲಿ ನಾಟಕಗಳು, ಬೀದಿ ನಾಟಕಗಳನ್ನು ನೋಡಿದವರ ಸಂಖ್ಯೆ ಹತ್ತು ಸಾವಿರಕ್ಕೂ ಹೆಚ್ಚು. ರಂಗಾಯಣದ ಹೊಸ ನಾಟಕಗಳು- ‘ಸಂಸ್ಕಾರ’, ‘ಜೂಲಿಯಸ್ ಸೀಸರ್’ ಹೌಸ್ ಫುಲ್ ಪ್ರದರ್ಶನ ಕಾಣುತ್ತಲೇ ಇವೆ. 

ಬಸವಲಿಂಗಯ್ಯನವರು ಮಾಡಿದ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನಾಟಕದ ಇಡೀ ರಾತ್ರಿಯ ಪ್ರದರ್ಶನ ಸಾವಿರಾರು ಹೊಸ ತಲೆಮಾರಿನ ಪ್ರೇಕ್ಷಕರನ್ನು ಸೃಷ್ಟಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿರುವ ಕಲಾಗ್ರಾಮದಲ್ಲಿ, ಹನುಮಂತನಗರದ ಕಲಾಸೌಧದಲ್ಲಿ ವರ್ಷದ ಬಹುತೇಕ ಸಂಜೆಗಳಲ್ಲಿ ನಾಟಕಗಳು ನಡೆಯುತ್ತಿವೆ.

ರಂಗಶಂಕರ ತನ್ನದೇ ಆದ ಪ್ರೇಕ್ಷಕವರ್ಗವನ್ನು ಬೆಳೆಸಿದೆ. ಹತ್ತಾರು ಜನ ಹೊಸ ನಿರ್ದೇಶಕ, ನಿರ್ದೇಶಕಿಯರು, ನಟ, ನಟಿಯರು ಸೃಷ್ಟಿಯಾಗಿದ್ದಾರೆ. ಕೆಲವರು ಪುಟ್ಟ ಊರುಗಳಲ್ಲಿ ರಂಗ ಚಟುವಟಿಕೆ ನಡೆಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ, ಬೆಂಗಳೂರಿನಲ್ಲಿ ತಿಂಗಳಿಗೆ ಸುಮಾರು ನೂರಕ್ಕೂ ಹೆಚ್ಚು ನಾಟಕಗಳು ಪ್ರದರ್ಶನವಾಗುತ್ತಿವೆ.

ಇದೀಗ ನಡೆಯುತ್ತಿರುವ ಸಿ.ಜಿ.ಕೆ. ನಾಟಕೋತ್ಸವದಲ್ಲಿ ಪ್ರತಿದಿನ ಸರಾಸರಿ ನಾನೂರು ಪ್ರೇಕ್ಷಕರು ಟಿಕೆಟ್ ಕೊಂಡು ನಾಟಕ ನೋಡುತ್ತಿದ್ದಾರೆ. ನೀನಾಸಂ ನಾಟಕಗಳು ಎಲ್ಲಿ ನಡೆದರೂ ಅವುಗಳನ್ನು ತಪ್ಪದೇ ನೋಡುವವರಿದ್ದಾರೆ. ರಂಗಾಯಣ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸೇರಿ, ಭಾರತೀಯ ಭಾಷೆಗಳ ನಾಟಕಗಳನ್ನು ನಾಟಕಕಾರರು, ನಟ–ನಟಿಯರು, ನಿರ್ದೇಶಕರು ತೊಡಗಿ ಮಾಡುವ ‘ಕಮ್ಮಟ ಭಾಷಾಂತರ’ದ ಯೋಜನೆಯನ್ನು ನಡೆಸುತ್ತಿವೆ.

ಹೊಸಬರು ನಾಟಕಗಳನ್ನು ಬರೆಯುತ್ತಿದ್ದಾರೆ. ‘ರೂಪಾಂತರ’ ತಂಡ 25 ವರ್ಷಗಳಿಂದ ಕನ್ನಡದ ಕತೆ, ಕಾದಂಬರಿಗಳನ್ನು ನಾಟಕವಾಗಿಸಿ ಪ್ರದರ್ಶನ ಮಾಡುತ್ತಲೇ ಇದೆ. ‘ಜನಮನದಾಟ’ ತಂಡ ಮಾಡಿದ ಸಿದ್ಧಲಿಂಗಯ್ಯಅವರ ‘ಊರುಕೇರಿ’ ಆತ್ಮಕತೆಯ ನಾಟಕರೂಪ ಕರ್ನಾಟಕದ ಬಹುತೇಕ ಭಾಗಗಳನ್ನು ತಲುಪಿ, ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ.

ರಾಜ್ಯದಾದ್ಯಂತ ಇರುವ ಆರು ರಂಗಶಾಲೆಗಳು, ಹತ್ತು ರೆಪರ್ಟರಿಗಳಲ್ಲಿ ವರ್ಷಕ್ಕೆ ಸುಮಾರು ಇನ್ನೂರು ಜನ ನಟ, ನಟಿ, ನಿರ್ದೇಶಕ, ತಂತ್ರಜ್ಞರು ತಯಾರಾಗುತ್ತಿದ್ದಾರೆ. ಭಾರತ ಯಾತ್ರಾಕೇಂದ್ರ 29 ವರ್ಷಗಳಿಂದ ನಡೆಸುತ್ತಿರುವ ಕಾಲೇಜು ರಂಗಸ್ಪರ್ಧೆಗಳು ಜನಪ್ರಿಯವಾಗುತ್ತಲೇ ಇವೆ. ಈಗ ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ಚಿಣ್ಣರ ಮೇಳದಲ್ಲಿ ನಾನೂರಕ್ಕೂ ಹೆಚ್ಚು ಮಕ್ಕಳು ರಂಗಸಂಸ್ಕೃತಿಗೆ ತೆರೆದುಕೊಳ್ಳುತ್ತಿದ್ದಾರೆ...

ಕನ್ನಡ ರಂಗಭೂಮಿಯ ಈ ಬೆಳವಣಿಗೆಗಳನ್ನು ಆಸೆ, ನಿರೀಕ್ಷೆಗಳಿಂದ ನೋಡಿದರೆ, ಇದು ಕನ್ನಡ ರಂಗಭೂಮಿಯ ನವವಸಂತದ ಕಾಲ ಎಂಬ ವರ್ಣನೆ ತೀರಾ ಉತ್ಪ್ರೇಕ್ಷೆಯದಾಗಿರಲಾರದು ಎಂದುಕೊಂಡಿರುವೆ. ಪ್ರಸನ್ನರಂಥ ಹಿರಿಯರು ಈ ಕಾಲದ ರಂಗಭೂಮಿ ಮಹೋನ್ನತ ಉದ್ದೇಶವನ್ನು ಕಳೆದುಕೊಂಡಿದೆ ಎಂದು ವಿಷಾದದಿಂದ ಮಾತಾಡಿದರೆ ಅದಕ್ಕೂ ಕಾರಣವಿರುತ್ತದೆ.

ಆದರೆ ಎಪ್ಪತ್ತು, ಎಂಬತ್ತರ ದಶಕದ ಕಾಲಘಟ್ಟದ ಚಲನೆಯಂತೆಯೇ ಇನ್ನೊಂದು ಕಾಲದ ಚಾಲಕ ಶಕ್ತಿಗಳು ಹಾಗೂ ಚಲನೆಗಳೂ ಇರಬೇಕೆಂದು ನಿರೀಕ್ಷಿಸಲಾಗದು. ರಂಗಭೂಮಿಯಲ್ಲಿ ತೊಡಗುವವರ ಆದರ್ಶಗಳ ಮೂಲಮಾದರಿಗಳು ಎಲ್ಲ ಕಾಲದಲ್ಲೂ ಇರುತ್ತವೆ ಎಂಬ ನಂಬಿಕೆಯನ್ನು ನಾವು ಎಂದೂ ಬಿಟ್ಟುಕೊಡಬಾರದು.

ಮೊನ್ನೆ ಧಾರವಾಡದ ರಂಗಾಯಣದಲ್ಲಿ ಹೊಸ ತಲೆಮಾರಿನ ನಟರೊಬ್ಬರು ತಮ್ಮ ಎದುರಿಗಿದ್ದ ಎರಡು ತಲೆಮಾರುಗಳ ನಿರ್ದೇಶಕರಾದ ಪ್ರಸನ್ನ ಹಾಗೂ ನಟರಾಜ ಹೊನ್ನವಳ್ಳಿಯವರಿಗಿರುವ ಚಳವಳಿಗಳ ಹಿನ್ನೆಲೆ ಈ ಕಾಲದವರಿಗೆ ಇಲ್ಲ ಎಂದರು. ಅದು ಒಂದು ಕೊರತೆಯಿರಬಹುದು. ಆದರೆ ಚಳವಳಿಗಳಲ್ಲಿ ತೊಡಗಲು ನಟ, ನಟಿಯರ, ನಿರ್ದೇಶಕರ ಆಂತರಿಕ ಒತ್ತಡಗಳೂ ಅಗತ್ಯ.

ಪ್ರಸನ್ನ ಹೇಳುವಂತೆ ಈ ಕಾಲದ ಅನೇಕರಿಗೆ ಚಳವಳಿಯ ‘ಸ್ವಾದ’ ಸಿಕ್ಕಿಲ್ಲ ಎನ್ನುವುದೂ ನಿಜ; ಈಗ ರಂಗಭೂಮಿ ಮನರಂಜನೆಗೆ ಒತ್ತು ಕೊಟ್ಟು ಹೊಸ ಸೌಂದರ್ಯಪ್ರಜ್ಞೆಯನ್ನು ರೂಪಿಸುವ ಕೆಲಸದಲ್ಲಿ ಹಿಂದೆ ಬಿದ್ದಂತಿದೆ ಎಂಬ ಅವರ ಮಾತು ಕೂಡ ನಿಜ. ಹಿಂದೆಲ್ಲ ರಂಗಭೂಮಿ ಸಾಮಾಜಿಕ ಚಳವಳಿಗಳ ಪ್ರಯೋಗಶಾಲೆಯಂತೆಯೂ ಕೆಲಸ ಮಾಡುತ್ತಿತ್ತು.

ಇವತ್ತು ಚಳವಳಿಗಳಿಗೆ ಕರೆದೊಯ್ಯುವ ದೊಡ್ಡ ನಾಯಕರು ಎಲ್ಲಿದ್ದಾರೆ; ದೊಡ್ಡ ನಿರ್ದೇಶಕರು ಎಲ್ಲಿ ಹುಟ್ಟುತ್ತಿದ್ದಾರೆ ಎಂಬ ಮಾತುಗಳೂ ಧಾರವಾಡದಲ್ಲಿ ಕೇಳಿಬಂದಾಗ, ಬ್ರೆಕ್ಟ್‌ನ ‘ಗೆಲಿಲಿಯೋ’ ನಾಟಕದ ಡಯಲಾಗ್ ನೆನಪಾಯಿತು: ಈ ನಾಟಕದಲ್ಲಿ ಆಂದ್ರಿಯಾ, ‘ಧೀರರಿಲ್ಲದ ನಾಡು ದುರದೃಷ್ಟಶಾಲಿ’ ಎನ್ನುತ್ತಾನೆ; ಅದಕ್ಕೆ ಉತ್ತರವಾಗಿ ‘ಧೀರರಿಗಾಗಿ ಕಾಯುವ ನಾಡು ದುರದೃಷ್ಟಶಾಲಿ’ ಎನ್ನುತ್ತಾನೆ ಗೆಲಿಲಿಯೋ.

ಇದನ್ನೇ ಕೊಂಚ ಬದಲಿಸಿ ‘ನಾಯಕರಿಗಾಗಿ ಕಾಯುವ ನಾಡು ದುರದೃಷ್ಟಶಾಲಿ’ ಎಂದು ಇವತ್ತು ಓದಿಕೊಳ್ಳಬಹುದು. ಎಲ್ಲ ಕಾಲಗಳೂ ತಂತಮ್ಮ ನಾಯಕರನ್ನೋ ಸಮೂಹನಾಯಕತ್ವವನ್ನೋ ಹೊಸ ತತ್ವಗಳನ್ನೋ ರೂಪಿಸುತ್ತಿರುತ್ತವೆ. ಆದ್ದರಿಂದ ತಮ್ಮನ್ನು ‘ಮುನ್ನಡೆಸುವವರಿಲ್ಲ’ ಎಂದು ಕಲಾವಿದರು ಗೊಣಗುತ್ತಾ ಕೂರಲಾಗದು.

ಆದರೂ ಈಚಿನ ವರ್ಷಗಳಲ್ಲಿ ಬುದ್ಧಿಜೀವಿಗಳಲ್ಲಿ, ಸಾಹಿತಿಗಳಲ್ಲಿ ರಂಗಭೂಮಿಯ ಬಗ್ಗೆ ಉಪೇಕ್ಷೆ ಹಬ್ಬಿರುವುದು ಕೂಡ ರಂಗಭೂಮಿಯಲ್ಲಿ ಬೌದ್ಧಿಕ ಚಟುವಟಿಕೆ ಕೊಂಚ ಮಂಕಾಗಲು ಕಾರಣ. ತಮ್ಮ ಸ್ಥಾವರವ್ಯಕ್ತಿತ್ವಗಳಿಗೆ ರಂಗಭೂಮಿಯಿಂದ ಜಂಗಮಪ್ರಜ್ಞೆಯನ್ನು ರೂಪಿಸಿಕೊಳ್ಳಬಹುದೆಂಬ ಅರಿವು ಉಳಿದ ಪ್ರಕಾರಗಳ ಲೇಖಕ ಲೇಖಕಿಯರಿಗಿರಲಿ, ನಾಟಕ ಬರೆಯುವವರಿಗೂ ಕಡಿಮೆಯಾದಂತಿದೆ! ಇವರೆಲ್ಲ ಸೇರಿ ರಂಗಭೂಮಿಯನ್ನು ಮತ್ತೆ ಕಂಡುಕೊಂಡರೆ ಅವರಿಗೂ, ರಂಗಭೂಮಿಗೂ ಒಳ್ಳೆಯದಾಗಬಲ್ಲದು.

ಇವತ್ತು ಜನಬಳಕೆಯ ಸಮೂಹ ಮಾಧ್ಯಮಗಳು ಸೃಷ್ಟಿಸಿರುವ ಯಶಸ್ಸಿನ ಕಲ್ಪನೆ ಹಾಗೂ ಜನಪ್ರಿಯತೆಯ ಮಾನದಂಡಗಳ ಸವಾಲಿಗೆ ಉತ್ತರಿಸಲು ರಂಗಭೂಮಿಯೂ ಕೆಲವು ಗಿಮಿಕ್‌ಗಳಿಗೆ ಬಲಿಯಾಗಿರುವುದು ನಿಜ. ಹೊಸ ಸವಾಲುಗಳ ಎದುರಿಗೆ ನಿರ್ದೇಶಕರು ಆರೋಗ್ಯಕರವಾಗಿ ನಾಟಕಗಳನ್ನು ಜನಪ್ರಿಯಗೊಳಿಸಲು ಹೊಸಕಾಲದ ತಂತ್ರಗಳನ್ನು, ಕೊಂಚ ಪ್ರದರ್ಶಕ ಗುಣವನ್ನು, ಮಾಧುರ್ಯವನ್ನು ಬಳಸಿದರೆ ತಪ್ಪೇನಿಲ್ಲ.

ಆದರೂ ರಂಗಭೂಮಿ ಉಳಿದ ಮಾಧ್ಯಮಗಳ ಜೊತೆಗಿನ ಸ್ಪರ್ಧೆಯ ಇಕ್ಕಟ್ಟಿಗೆ ತನ್ನನ್ನು ತಾನು ದೂಡಿಕೊಳ್ಳುವ ಅಗತ್ಯವಿಲ್ಲ. ಪ್ರೇಕ್ಷಕರು ಏನನ್ನು ಕೇಳುತ್ತಾರೋ ಅದಕ್ಕೆ ತಕ್ಕಂತೆ ಕಲೆಯನ್ನು ಹೊಸೆಯಬೇಕು ಎಂಬ ಒತ್ತಡಕ್ಕೆ ರಂಗಭೂಮಿ ಬಲಿಯಾಗಬೇಕಾಗಿಲ್ಲ. ಟಿ.ಆರ್.ಪಿ. ಜಾಲ ಹಾಗೂ ಒತ್ತಡಗಳು ರಂಗಭೂಮಿಗೆ ಇಲ್ಲ; ಹೀಗಾಗಿ ಅದು ಕಲಾಸೃಷ್ಟಿಯ ಧ್ಯಾನ ಹಾಗೂ ವ್ಯವಧಾನಗಳನ್ನು ಸದಾ ಉಳಿಸಿಕೊಳ್ಳಲೇಬೇಕು.

ಎರಡು ತಿಂಗಳ ಕೆಳಗೆ ಮೈಸೂರಿನ ರಂಗಾಯಣದಲ್ಲಿ ಸಿಕ್ಕ ನಟ ಇರ್ಫಾನ್ ಖಾನ್ ತಮ್ಮ ರಂಗಭೂಮಿಯ ದಿನಗಳನ್ನು ನೆನೆಸಿಕೊಳ್ಳುತ್ತಿದ್ದರು. ಕನ್ನಡದ ಪ್ರಸನ್ನರ ಕೈಯಲ್ಲಿ ತಾವು ಪಳಗಿದ್ದ ದಿನಗಳನ್ನು ನೆನೆಯುತ್ತಿದ್ದ ಅವರು ‘ಮತ್ತೆ ಪ್ರಸನ್ನರ ನಿರ್ದೇಶನದಲ್ಲಿ ನಾಟಕ ಮಾಡುತ್ತೇನೆ’ ಅಂದರು.

ಸಿನಿಮಾಗಳಿಗೆ, ಜಾಹೀರಾತಿನ ನಟನೆಗಳಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಇರ್ಫಾನ್ ಹೀಗೆಂದಾಗ, ನಾನು ‘ಆ ಕಾಲ ಯಾವಾಗ ಬರುತ್ತದೆ?’ ಎಂದೆ; ‘ಎನಿ ಡೇ’ ಎಂದರು ಇರ್ಫಾನ್. ಬಿಡುವಿಲ್ಲದ ಸಿನಿಮಾ ನಟ ನಾಸಿರುದ್ದೀನ್ ಷಾ ಇವತ್ತಿಗೂ ಬಿಡುವು ಮಾಡಿಕೊಂಡು ನಾಟಕ ಮಾಡುತ್ತಾರೆ.

ಕನ್ನಡದಲ್ಲೂ ರಂಗಭೂಮಿ ಹಾಗೂ ಸಿನಿಮಾಗಳ ನಡುವೆ ಚಲಿಸುವವರಿದ್ದಾರೆ. ಟೆಲಿವಿಷನ್ ನಟನೆ ಬೋರಾಗಿ, ರಂಗಭೂಮಿಗೆ ಮರಳಿ ಕೈ, ಕಾಲು, ಮನಸ್ಸುಗಳ ಹೊಸಚಲನೆ ಪಡೆಯುವವರಿದ್ದಾರೆ. ಇವರೆಲ್ಲರೂ ಪೂರ್ಣಪ್ರಮಾಣದಲ್ಲಿ ರಂಗಭೂಮಿಯಲ್ಲಿ ತೊಡಗಿರುವವರ ಭದ್ರತೆ ಕುರಿತು ಕಾಳಜಿಯಿಂದ ಯೋಚಿಸಬೇಕು.

ಅದರಲ್ಲೂ ಉಮಾಶ್ರೀಯವರಂಥ ಖ್ಯಾತ ರಂಗಭೂಮಿ ನಟಿಯೇ ಸಂಸ್ಕೃತಿ ಸಚಿವರಾಗಿರುವ ಈ ಕಾಲದಲ್ಲಿ ರಂಗಭೂಮಿಯನ್ನು ಬಲಗೊಳಿಸಲು ಹೊಸ ನೀಲಿನಕಾಶೆಯೊಂದನ್ನು ಹಿರಿಯರು ಹಾಗೂ ಹೊಸ ತಲೆಮಾರು ಕೂತು ರೂಪಿಸಿ, ರಂಗಭೂಮಿ ಹಾಗೂ ಕಲಾವಿದರ ಭವಿಷ್ಯ ಕುರಿತಂತೆ ಸರ್ಕಾರದ, ಸಮಾಜದ ಜವಾಬ್ದಾರಿಗಳನ್ನು ಕುರಿತು ಆಳವಾಗಿ ಚಿಂತಿಸಿ, ಯೋಜನೆಗಳನ್ನು ರೂಪಿಸಬೇಕು.      
    
ಕೊನೆ ಟಿಪ್ಪಣಿ: ಶರೀಫರ ‘ಕೊಡ’: ಸಿ.ಜಿ.ಕೆ. ವ್ಯಾಖ್ಯಾನ! ಸಿ.ಜಿ.ಕೆ. ನಿರ್ದೇಶಿಸಿದ್ದ ‘ಶರೀಫ’ (ರಚನೆ: ಮಂಜುನಾಥ ಬೆಳಕೆರೆ) ನಾಟಕದಲ್ಲಿ ಇದ್ದಕ್ಕಿದ್ದಂತೆ ಶರೀಫರ ‘ಏನ್ ಕೊಡನೇನ್ ಕೊಡವಾ! ಹುಬ್ಬಳ್ಳಿ ಮಾಟ’ ಹಾಡು ಬಂತು. ಮರುಗಳಿಗೆಗೇ ಕೊಡ ಹಿಡಿದ ಚೆಲುವೆಯೊಬ್ಬಳು ನರ್ತಿಸುತ್ತಾ, ರಂಗಕ್ಕೆ ಹೊಸ ಜೀವ ತಂದಳು.

ಎಷ್ಟೋ ಸಲ ಈ ಹಾಡು ಕೇಳಿದ್ದ ನನಗೆ ಆ ಹಾಡಿನ ಮತ್ತೊಂದು ಅರ್ಥ ರಾಗ ಹೊಳೆಯಿತು: ಹಾಡಿನಲ್ಲಿರುವ ಕೊಡ ಬರಿ ಕೊಡ ಅಲ್ಲ; ಅದು ಸುಂದರ ಹುಡುಗಿಯ ಮಾಟವನ್ನೂ ಸೂಚಿಸಬಲ್ಲದು ಎಂಬುದನ್ನು ಕಂಡು ಬೆರಗಾಯಿತು! ಹೀಗೆ ನಾಟಕಗಳ ಸೃಜನಶೀಲ ಬೋಧಕನಾಗಿಯೂ ಕೆಲಸ ಮಾಡುವ ರಂಗಭೂಮಿ ನಿತ್ಯ ಹೊಸ ಅರ್ಥಗಳನ್ನು ಹೊರಡಿಸುವ ಮುಕ್ತ ಓದಿನ ವೇದಿಕೆ ಕೂಡ; ಅದು ಕಾಲಕಾಲಕ್ಕೆ ಹೊಸ ವಸಂತ
ಗಳನ್ನು ಸೃಷ್ಟಿಸಬಲ್ಲದೆಂಬ ನಿರೀಕ್ಷೆ ನಮ್ಮಂಥವರಲ್ಲಿ ಹುಟ್ಟಿದರೆ ಅದು ತೀರ ಸಹಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT