ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕಡಲತಡಿಯಿಂದ ಸಾವಂತವಾಡಿಯವರೆಗೂ

Last Updated 28 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕ್ಷಗಾನವನ್ನು ದಶಾವತಾರ ಕಲೆ ಎಂದೂ ಗುರುತಿಸುತ್ತಾರೆ. ಆದರೆ, ಇದೇ ಹೆಸರಿನ ಮತ್ತೊಂದು ಕಲೆ ಮಹಾರಾಷ್ಟ್ರದಲ್ಲಿ ಇದೆಯೆಂದು ಗೊತ್ತಾದುದು ೮೦ರ ದಶಕದಲ್ಲಿ. ವಿಜಯಕುಮಾರ್ ಫಾತೆರ್ಪಕರ್ ಎಂಬ ಸಹೃದಯಿ ವ್ಯಕ್ತಿ ಯಕ್ಷಗಾನ ಮತ್ತು ಶಿವರಾಮ ಕಾರಂತರ ಮೇಲಿನ ಅಭಿಮಾನದಿಂದ ದೂರದ ಸಾವಂತವಾಡಿಯಿಂದ ಉಡುಪಿಗೆ ಬಂದಿದ್ದರು. ೧೯೮೪ರಿಂದ ಇಂದಿನವರೆಗೂ ಸಾವಂತವಾಡಿ ಎಂಬ ಊರು ನಮ್ಮ ನೆರೆಮನೆಯಂತೆ ಆಗುವುದಕ್ಕೆ ಆ ಭೇಟಿಯೇ ಕಾರಣವಾಯಿತು.

ವಿಜಯಕುಮಾರ್ ಫಾತೆರ್ಪಕರ್ ಮೂಲತಃ ಕರ್ನಾಟಕದವರು. ಬೆಳಗಾವಿ, ಬಿಜಾಪುರಗಳಲ್ಲಿ ಬಾಲ್ಯ ಕಳೆದು, ಧಾರವಾಡದಲ್ಲಿ ವಿಜ್ಞಾನದ ಸ್ನಾತಕೋತ್ತರ ಪದವಿ ಪಡೆದು, ಮುಂಬಯಿಯಂಥ ಮಹಾನಗರದ ಹಾದಿ ತುಳಿಯದೆ ಸಾವಂತವಾಡಿಯಲ್ಲೊಂದು ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿಯನ್ನು ಹಿಡಿದವರು. ನಾಲ್ಕು ದಶಕಗಳ ಹಿಂದೆ ಆ ಊರಿನಲ್ಲಿ ನೆಲೆಯೂರಿದಾಗ ಅವರನ್ನು ಸೆಳೆದದ್ದು ಕೊಂಕಣ -– ಮರಾಠ ಪ್ರದೇಶದಲ್ಲಿ ಜನಪ್ರಿಯವಾಗಿದ್ದ ‘ದಶಾವತಾರ’ ಪ್ರದರ್ಶನಕಲೆ.

ವಿಜ್ಞಾನ ಪ್ರಾಧ್ಯಾಪಕರಾಗಿದ್ದವರಿಗೆ ರಂಗಭೂಮಿಯ ಬಗ್ಗೆ ಇದ್ದ ವಿಶೇಷ ಆಸಕ್ತಿ ಮತ್ತೆ ಚಿಗುರಿ ‘ದಶಾವತಾರ’ದ ಅಧ್ಯಯನಕ್ಕೆ ತೊಡಗಿ ಅದರ ಮೂಲವಾಗಿರಬಹುದಾದ ಕರಾವಳಿಯ ಯಕ್ಷಗಾನದ ಸೋಂಕಿಗೆ ಬಂದು ಒಂದು ಶುಭದಿನ ಸಾಲಿಗ್ರಾಮದ ‘ಸುಹಾಸ’ದ ಹೊಸ್ತಿಲಲ್ಲಿ ನಿಂತಿದ್ದರು.
ಫಾತೆರ್ಪಕರ್ ಅವರ ಆಸಕ್ತಿಯನ್ನು ಗಮನಿಸಿದ ಶಿವರಾಮ ಕಾರಂತರು, ‘ಒಮ್ಮೆ ನಮ್ಮ ಯಕ್ಷರಂಗದ ಯಕ್ಷಗಾನ ಪ್ರದರ್ಶನವನ್ನೊಮ್ಮೆ ನೋಡಿ’ ಎಂದು ಸೂಚಿಸಿದರು. ಅದರಂತೆ ಸನಿಹದ ಊರಿನಲ್ಲಿ ಆಯೋಜನೆಗೊಂಡಿದ್ದ ‘ಅಭಿಮನ್ಯು ಕಾಳಗ’ ಪ್ರದರ್ಶನವನ್ನು ನೋಡಿ ಫಾತೆರ್ಪಕರ್ ಮೆಚ್ಚಿಕೊಂಡರು.

ಮುಂದೆ ಅವರು ಕಾರಂತರಿಗೆ ಹಂತ ಹಂತವಾಗಿ ನಿಕಟರಾಗಿ ಅವರ ಪರಮಭಕ್ತರಾಗಿಬಿಟ್ಟರು. ಡಾಕ್ಟರೇಟ್ ಪಡೆಯಲು ಮಹಾಪ್ರಬಂಧ ಬರೆಯುವ ಕೆಲಸಕ್ಕೆ ತೊಡಗದೆ, ದಶಾವತಾರ – ಯಕ್ಷಗಾನ ರಂಗಕಲೆಗಳ ಅಧ್ಯಯನ ಮಾಡುವ ಉತ್ಕಟ ಆಸಕ್ತಿಯ ಮನುಷ್ಯ ಶಿವರಾಮ ಕಾರಂತರಿಗೂ ಪ್ರಿಯರೆನಿಸಿಬಿಟ್ಟರು. ೧೯೮೮ರಲ್ಲೊಮ್ಮೆ ನಮ್ಮ ತಂಡ ಅವರ ಆಹ್ವಾನದ ಮೇರೆಗೆ ಸಾಮಂತವಾಡಿಗೆ ಹೋಗಿ ಪ್ರದರ್ಶನ ನೀಡಿದ ಸಂದರ್ಭದಲ್ಲಿ ನನಗೂ ಅವರ ನಿಕಟ ಪರಿಚಯವಾಯಿತು. ಶಿವರಾಮ ಕಾರಂತರ ನೇತೃತ್ವದಲ್ಲಿ ಉಭಯ ಕಲೆಗಳ ಅಧ್ಯಯನಗೋಷ್ಠಿಯನ್ನೂ ಅವರು ಅಲ್ಲಿ ಆಯೋಜಿಸಿದ್ದರು.

ಮುಂದೊಮ್ಮೆ ಕಾರಂತರು, ‘ನಿಮ್ಮ ಕಲೆಯನ್ನು ಕಲಿಸಬೇಕಾದರೆ ಮೊದಲು ನಿಮ್ಮದ್ದನ್ನು ಕಲಿತುಕೊಳ್ಳಬೇಕು’ ಎಂದು ಹೇಳಿದಾಗ ಫಾತೆರ್ಪಕರ್ ಸಾಮಂತವಾಡಿಯಿಂದ ದಶಾವತಾರದ ಹಿರಿಯ ಕಲಾವಿದರನ್ನು ಕರೆತಂದಿದ್ದರು. ‘ಅವರೇನು ಮಾಡುತ್ತಾರೋ ನೀನದನ್ನು ಕಲಿತುಕೊಳ್ಳಬೇಕು’ ಎಂದು ಕಾರಂತರು ನನಗೆ ಆದೇಶಿಸಿದಂತೆ ಅವರ ಹೆಜ್ಜೆಗಳನ್ನು ಕಲಿಯಲು ಪ್ರಯತ್ನಿಸಿದೆ.

ದಶಾವತಾರದ ಹೆಜ್ಜೆಗಳಿಗೂ ಯಕ್ಷಗಾನದ ಹೆಜ್ಜೆಗಳಿಗೂ ಕೆಲವು ಅಂಶಗಳಲ್ಲಿ ಸಾಮ್ಯವನ್ನು ಗುರುತಿಸಿಕೊಂಡೆ. ಆದರೆ, ಕಾಲಾಂತರದಲ್ಲಿ ಆ ಕಲೆ ತನ್ನ ‘ಸ್ವ’ವನ್ನು ಮರೆತು ಕಂಪೆನಿ ನಾಟಕಗಳ ಪ್ರಭಾವಕ್ಕೆ ಪಕ್ಕಾಗಿರುವುದನ್ನೂ ಅರಿತುಕೊಂಡೆ. ವೇಷಭೂಷಣಗಳು ಬದಲಾಗಿದ್ದವು, ಮದ್ದಲೆಯ ಬದಲಿಗೆ ತಬಲಾ ಬಂದಿತ್ತು, ರಂಗದಲ್ಲಿ ಅನೌಪಚಾರಿಕ ನಡವಳಿಕೆಗಳೇ ಹೆಚ್ಚಾಗಿದ್ದವು. ಕರಾವಳಿಯಲ್ಲಿ ಯಕ್ಷಗಾನವಿರುವಂತೆ ಕೊಂಕಣ – ಮರಾಠ ಪ್ರದೇಶದಲ್ಲಿ ಜನಪ್ರಿಯವಾಗಿ, ವೃತ್ತಿಪರ ಮೇಳಗಳನ್ನೂ ಹೊಂದಿರುವ ದಶಾವತಾರದಂಥ ಕಲೆಯನ್ನು ಹೇಗೆ ಗ್ರಹಿಸಬೇಕು ಎಂಬುದೊಂದು ನನ್ನೆದುರಿನ ದೊಡ್ಡ ಸವಾಲಾಗಿತ್ತು.

೧೯೯೬ರಲ್ಲೊಮ್ಮೆ ಫಾತೆರ್ಪಕರ್ ‘ಲೀಲಾ ಗೌರಿ ಹರಾಚ’ ಎಂಬ ಕೃತಿಯನ್ನು ಶಿವರಾಮ ಕಾರಂತರಲ್ಲಿಗೆ ತಂದು ತೋರಿಸುತ್ತ ಅದನ್ನು ‘ದಶಾವತಾರ’ದ ನೂತನ ಪ್ರಯೋಗಕ್ಕೆ ಬಳಸುವ ಬಗ್ಗೆ ಅಪೇಕ್ಷೆ ವ್ಯಕ್ತಪಡಿಸಿದ್ದರು. ಅದು, ತಂಜಾವೂರಿನ ಮರಾಠ ರಾಜಮನೆತನದ ಸರ್ಫೋಜಿ ರಾಜೇ ಭೋಂಸ್ಲೆಯ ಕಾವ್ಯಾಧಾರಿತ ಪಠ್ಯವಾಗಿತ್ತು. ವಯಲಿನ್ ವಾದಕ ಎ.ವಿ. ಕೃಷ್ಣಮಾಚಾರ್ ಅವರಿಗೆ ಮರಾಠಿ ತಿಳಿಯುತ್ತಿದ್ದದ್ದರಿಂದ ಅದನ್ನು ಓದುವಂತೆ ಕಾರಂತರು ಅವರಿಗೆ ಸೂಚಿಸಿದರು. ಅವರು ಓದಿ ಅದನ್ನು ಗೇಯಸೌಖ್ಯಕ್ಕೆ ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಸಲಹೆ ನೀಡಿದರು.

ನನಗೀಗಲೂ ನೆನಪಿರುವುದು, ದಶಾವತಾರದ ಕಲಾವಿದರು ಗಟ್ಟಿಯಾಗಿ ಹಾಡುತ್ತಿರುವಾಗ ಕುರ್ಚಿಯಲ್ಲಿ ಕುಳಿತಿದ್ದ ಶಿವರಾಮ ಕಾರಂತರ ಪಾದಗಳು ಮೆಲ್ಲನೆ ಕುಣಿಯಲಾರಂಭಿಸಿದ್ದವು. ೧೯೯೬ ಎಂದರೆ ಊಹಿಸಿಕೊಳ್ಳಿ, ಶಿವರಾಮ ಕಾರಂತರು ಭೌತಿಕವಾಗಿ ನವ್ಮೊಂದಿಗೆ ಇದ್ದುದು ಮತ್ತೊಂದೇ ವರ್ಷ!
ಪೂರ್ವಭಾವಿ ಸಮಾಲೋಚನೆಯೆಲ್ಲ ನಡೆದ ಬಳಿಕ ‘ಅದಕ್ಕೆಲ್ಲ ಏನು ಅಗತ್ಯವೋ ಅದನ್ನೆಲ್ಲ ನೀನೇ ಮಾಡು’ ಎಂದು ಆಜ್ಞಾವಾಕ್ಯ ನನ್ನನ್ನುದ್ದೇಶಿಸಿ ಬಂತು.

ನಾನಾದರೋ ನನ್ನ ಬುದ್ಧಿಯ ಮಿತಿಯಲ್ಲಿ ನನ್ನ ಪ್ರಯತ್ನವನ್ನು ಆರಂಭಿಸಿದೆ. ಮೂರು ತಿಂಗಳ ಕಾಲ ‘ದಶಾವತಾರ’ದ ರಂಗಕೃತಿಗಾಗಿ, ಯಕ್ಷಗಾನವನ್ನು ಅವರಿಗೆ ಕಲಿಸುತ್ತ, ನಾನು ಅವರಿಂದ ಕಲಿಯುತ್ತ, ಫಾತೆರ್ಪಕರ್ ಅವರ ಮಾರ್ಗದರ್ಶನದಲ್ಲಿ ‘ಲೀಲಾ ಗೌರಿ ಹರಾಚ’ ಕೃತಿ ರಂಗಕ್ಕೆ ಸಿದ್ಧವಾಯಿತು. ನಿಜವಾಗಿ ಹೇಳಬೇಕೆಂದರೆ, ಅದು ದಶಾವತಾರ – ಯಕ್ಷಗಾನದ ಮಿಶ್ರಕೃತಿಯಾಗಿ ಮೈದಳೆದಿತ್ತು. ಚೆಂಡೆ-ಮದ್ದಲೆಗಳನ್ನು ಬಳಸಿದ್ದೆವು, ಮುಖವರ್ಣಿಕೆಯಲ್ಲಿ ಯಕ್ಷಗಾನದ ಗಂಧವಿತ್ತು, ನಾನೇ ಸ್ವತಃ ಚೆಂಡೆವಾದಕನಾಗಿಯೂ ಇದ್ದೆ.

ಮುಂಬಯಿಯಲ್ಲಿ ಮೂರು ಪ್ರದರ್ಶನಗಳು ಸೇರಿದಂತೆ ಔರಾಂಗಾಬಾದ್, ಪಣಜಿ ಮುಂತಾದ ನಗರಗಳಲ್ಲಿ ಒಟ್ಟು ಹದಿನಾರು ಪ್ರದರ್ಶನಗಳಾದವು. ಉಡುಪಿಯಲ್ಲಿಯೂ ಒಂದು ಪ್ರದರ್ಶನ ಆಯೋಜನೆಗೊಂಡಿತ್ತು. ಆದರೆ, ಕಾರಂತರ ದೇಹಸ್ಥಿತಿ ಕುಂದಿದುದರಿಂದ ಅವರಿಗೆ ಆ ಪ್ರದರ್ಶನವನ್ನು ನೋಡಲಾಗಿರಲಿಲ್ಲ. ಮರಾಠಿ ನೆಲದ ಕಲೆಯಲ್ಲಿ ಹೊಸ ಚಿಂತನೆಗೆ ಮೂಲ ಪ್ರೇರಕರಾಗಿದ್ದ ಶಿವರಾಮ ಕಾರಂತರು ‘ಲೀಲಾ ಗೌರಿ ಹರಾಚ’ವನ್ನು ರಕ್ಷಿಸಬೇಕೆಂಬುದು ಫಾತೆಪರ್ಕರ್ ಅವರ ಆಸೆಯಾಗಿತ್ತು.

ವ್ಯೂತ್ಸ್‌ಬುರ್ಗ್‌ನಲ್ಲಿ ಜರಗಿದ ಪ್ರದರ್ಶನದಲ್ಲಿ ಶ್ರೀಕೃಷ್ಣನಾಗಿ ಕ್ಯಾಥರಿನ್‌, ಜಾಂಬವಂತನಾಗಿ ಸಂಜೀವ ಸುವರ್ಣರು

ಕಾರಂತರ ಸಮಯಾನುಕೂಲವನ್ನು ಕೇಳಿ ಅವರು ಉಡುಪಿಯಲ್ಲಿ ಮತ್ತೊಂದು ಪ್ರದರ್ಶನವನ್ನು ಏರ್ಪಡಿಸಲು ಬರುವವರಿದ್ದರು. ಆ ದಿನ ಬೆಳಿಗ್ಗೆ ಆಸ್ಪತ್ರೆಗೆ ಹೋಗಿದ್ದಾಗ, ‘ನೀನು ಏನು ಮಾಡಿದ್ದೀಯೊ ನೋಡಬೇಕು’ ಎಂದು ನನ್ನೊಡನೆ ಹೇಳಿಯೂ ಇದ್ದರು. ಫಾತೆರ್ಪಕರ್ ಬರುವಷ್ಟರ ಹೊತ್ತಿಗೆ ಕಾರಂತರು ಕೋಮಾವಸ್ಥೆಗೆ ಜಾರಿದ್ದರು. ಕಾರಂತರನ್ನು ಮಾತನಾಡಿಸಲಾಗಲಿಲ್ಲವಲ್ಲ ಎಂದು ಫಾತೆರ್ಪಕರ್ ದುಃಖದಿಂದ ಹೇಳಿಕೊಂಡಿದ್ದರು.

ನನಗೆ ವಾಸ್ತವದಲ್ಲಿ ಈ ಪ್ರದರ್ಶನವನ್ನು ಕಾರಂತರು ನೋಡಿದರೆ ಅವರ ಪ್ರತಿಕ್ರಿಯೆ ಹೇಗಿರಬಹುದು ಎಂದು ಊಹಿಸಿಯೇ ನಡುಕಹುಟ್ಟಿತ್ತು. ‘ದಶಾವತಾರವನ್ನು ಅದರ ಮೂಲರೂಪದಲ್ಲಿ ಉಳಿಸದೆ ಯಕ್ಷಗಾನವನ್ನಾಗಿ ಮಾಡಿದ್ದೀಯಾ?’ ಎಂದು ನನ್ನನ್ನು ಝಾಡಿಸುತ್ತಿದ್ದರೋ ಏನೋ. ಆದರೆ, ಹೀಗೆ ಬೈಯಿಸಿಕೊಳ್ಳುವ ಬಗ್ಗೆ ನನಗೆ ಸಂಕೋಚವೇನೂ ಇರಲಿಲ್ಲ. ‘ಕೇಳುವವರೊಬ್ಬರು’ ಇಲ್ಲದಿದ್ದರೆ ‘ಸ್ವೇಚ್ಛೆಯ’ ಬೆಳವಣಿಗೆಯೂ ಅಧಿಕವಾಗಿಬಿಡುತ್ತದಲ್ಲ!
ಇವತ್ತಿಗೂ ಸಾವಂತವಾಡಿಯ ‘ದಶಾವತಾರ’ ಕೇಂದ್ರಕ್ಕೂ ನಮ್ಮ ಯಕ್ಷಗಾನ ಕೇಂದ್ರಕ್ಕೂ ಸೋದರ ಸಂಬಂಧ.

ಫಾತೆರ್ಪಕರ್ ಇಂದಿಗೂ ಯಕ್ಷಗಾನ ಕೇಂದ್ರದ ಕುರಿತು ಅಭಿಮಾನವನ್ನು ಇರಿಸಿಕೊಂಡು ನಮ್ಮ ತಂಡವನ್ನು ಅಲ್ಲಿಗೆ ಆಹ್ವಾನಿಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಸಾವಂತವಾಡಿ ಸಮೀಪದ ಕಾಲೇಜೊಂದರಲ್ಲಿ ಯುಜಿಸಿ ಸಹಯೋಗದೊಂದಿಗೆ ಜರುಗಿದ ಯಕ್ಷಗಾನ – ದಶಾವತಾರ ವಿಚಾರಗೋಷ್ಠಿಯಲ್ಲಿ ನಾನು ನಮ್ಮ ತಂಡದೊಂದಿಗೆ ಭಾಗವಹಿಸಿದ್ದೆ. ಯಕ್ಷಗಾನ ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿಯವರು ಯಕ್ಷಗಾನದ ಕುರಿತು ಒಂದು ಪ್ರಬಂಧ ಮಂಡಿಸಿದ್ದರು.

ಹಾಗೆಯೇ ಕಳೆದ ವರ್ಷ ಅಲ್ಲಿ ಜರುಗಿದ ಯಕ್ಷಗಾನ ಕರ್ಮಶಾಲೆಯಲ್ಲಿ ಅನೇಕ ಸ್ಥಳೀಯ ಮರಾಠಿ ಮಾತೃಭಾಷೆಯವರಿಗೆ ತರಬೇತಿ ಕೊಟ್ಟಿದ್ದೆವು. ಅಲ್ಲಿನವರೇ ಒಂದು ‘ಪಂಚವಟಿ’ ಯಕ್ಷಗಾನ ಪ್ರದರ್ಶನವನ್ನು ಕೊಟ್ಟಿದ್ದರು. ಅಲ್ಲಿಯೂ ನಮ್ಮ ಪ್ರದರ್ಶನವನ್ನು ಕನ್ನಡ ಭಾಷೆಯಲ್ಲಿಯೇ ನೀಡಿದ್ದೇವೆ. ಸಾವಂತವಾಡಿಯ ಪರಿಸರದಲ್ಲಿ ದಶಾವತಾರದಂತೆ ಯಕ್ಷಗಾನವೂ ಒಂದು ಜನಪ್ರಿಯ ಕಲೆಯೆನಿಸಿದೆ.  ಈ ಯಕ್ಷಗಾನವೆಂಬ ‘ಮಾಯಕ’ದ ಕಲೆ ಎಲ್ಲೆಲ್ಲಿ ಬಂಧುತ್ವವನ್ನು ಸೃಷ್ಟಿಸುತ್ತದೊ!

                                                                      ********************

ಇಲ್ಲದೆ ಹೋದರೆ, ನಾನೂ ನನ್ನ ಹೆಂಡತಿ ವೇದಾಳೂ, ನನ್ನಿಬ್ಬರು ಮಕ್ಕಳು ಜರ್ಮನಿಗೆ ಹೋಗುವುದಕ್ಕಿತ್ತೆ? ಅದೂ ‘ನೂತನ ಬಂಧು’ವಿನ ಮದುವೆ ಕಾರ್ಯಕ್ರಮಕ್ಕೆ!  ತವರುದೇಶಕ್ಕೆ ಮರಳಿದ ಕ್ಯಾಥರಿನ್ ನಮ್ಮನ್ನು ಮರೆತಿರಲಿಲ್ಲ. ೨೦೦೪ರಲ್ಲೊಮ್ಮೆ ಫೋನ್ ಮಾಡಿ, ‘ನನ್ನ ಮದುವೆ, ನೀವೆಲ್ಲರೂ ಬರಬೇಕು’ ಎಂದು ಹೇಳಿದಾಗ ನನಗೆ ಅಚ್ಚರಿಯಾಯಿತು. ಜರ್ಮನಿಯೇನು ಮಲ್ಪೆಯೆ? ನಾನು ಅವಳ ಮಾತನ್ನು ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳದಿದ್ದಾಗ, ‘ನೀವು ತಂದೆತಾಯಿಗಳಂತೆ.

ನೀವಿಲ್ಲದೆ ನನ್ನ ಮದುವೆಯ ಕಾರ್ಯಕ್ರಮ ಅಪೂರ್ಣವಾಗುತ್ತದೆ’ ಎಂದುಬಿಟ್ಟಳು. ‘ಹಾಗಿದ್ದರೆ, ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸು. ಬರುತ್ತೇನೆ. ಹಾಗೇ ಸುಮ್ಮನೆ ಬರುವುದಿಲ್ಲ’ ಎಂದೆ. ಕ್ಯಾಥರಿನ್ ಒಪ್ಪಿದಳು. ನಮ್ಮ ಮನೆಯಲ್ಲಿ ಮನೆಮಗಳಂತೆ ಸುಮಾರು ಮೂರು ವರ್ಷ ಇದ್ದುದರಿಂದ ನಮ್ಮ ಸಂಸ್ಕೃತಿಯ ಬಗ್ಗೆ ಅವಳಿಗೆ ವಿಶೇಷ ರೀತಿಯ ಒಲವು ಹುಟ್ಟಿತ್ತು. ಅವಳ ಮನಸ್ಸನ್ನು ಅರಿತುಕೊಂಡು ಒಂದು ಮದುವೆಗೆ ಅಗತ್ಯವಿರುವ ಸಾಹಿತ್ಯಗಳ ಜೊತೆಗೆ ಅವಳೇ ಕಳುಹಿಸಿದ ಟಿಕೆಟುಗಳನ್ನು ಹಿಡಿದುಕೊಂಡು ಜರ್ಮನಿಯ ವಿಮಾನವೇರಲು ಸಿದ್ಧರಾಗಿದ್ದೆವು.

ಮಂಜುಗಡ್ಡೆಯ ಪ್ಯಾಕೆಟ್‌ನಲ್ಲಿ ಸುತ್ತಿಕೊಂಡಿದ್ದ ಉಡುಪಿ ಸಮೀಪದ ಶಂಕರಪುರದ ಮಲ್ಲಿಗೆಯ ದಂಡೆಗಳು ಯಾವುದೇ ತಕರಾರಿಲ್ಲದೆ ಪರೀಕ್ಷಣಾ ಯಂತ್ರವನ್ನು ದಾಟಿ ಹೋದವು. ಒಳ್ಳೆಯದೊಂದು ಸೀರೆ, ಸಾಂಪ್ರದಾಯಿಕ ವಿನ್ಯಾಸ ಮಾಂಗಲ್ಯ, ಅರಶಿನ–ಕುಂಕುಮ ಎಲ್ಲವೂ ವೇದಾಳ ಬ್ಯಾಗಿನಲ್ಲಿ ಭದ್ರವಾಗಿದ್ದವು. ಜರ್ಮನಿಯಲ್ಲಿಳಿದದ್ದೇ ಕ್ಯಾಥರಿನ್‌ಳ ತಂದೆತಾಯಿ ಬಹಳ ಸಮಯದಿಂದ ಕಾಣದೇ ಇದ್ದ ಬಂಧುಗಳನ್ನು ಇದಿರುಗೊಳ್ಳುವಂತೆ ನಮ್ಮನ್ನು ಬರಮಾಡಿಕೊಂಡರು. ಮರುದಿನವೇ ಮದುವೆ. ಸ್ತ್ರೀಯರ ಅಲಂಕಾರದ ಕಸುಬಿನಲ್ಲಿ ಪರಿಣತೆಯಾಗಿರುವ ವೇದಾಳಿಗೆ ಮದುಮಗಳನ್ನು
ಶೃಂಗರಿಸುವುದು ಕಷ್ಟದ ಕೆಲಸವಾಗಿರಲಿಲ್ಲ.

ಮದುಮಗಳ ಅಲಂಕಾರವೊಂದು ಬಿಟ್ಟರೆ ಉಳಿದಂತೆ ಅಲ್ಲಿಯ ಸಂಪ್ರದಾಯದಂತೆಯೇ ನಡೆಯಲಿರುವ ಮದುವೆಯದು. ಸುಂದರ ತರುಣ ಎನ್ಸ್ ಬಿಂದರ್ (jens binder) ಮದುಮಗನಾಗಿ ಕ್ಯಾಥರಿನ್‌ಳ ಕೈಹಿಡಿಯಲಿದ್ದ. ಕ್ಯಾಥರಿನ್ ಕೆನೆ ಬಣ್ಣದ ಗಾಢ ಕೆಂಪಂಚಿನ ಸೀರೆ ಉಟ್ಟು, ತಲೆಗೆ ಮಲ್ಲಿಗೆಯ ಮುಡಿದು, ಹಣೆಗೆ ತಿಲಕವಿಟ್ಟು ಅಪ್ಪಟ ಕನ್ನಡ-ಕರಾವಳಿಯ ಮದುಮಗಳಂತೆ ಕಂಗೊಳಿಸುತ್ತಿದ್ದಳು. ಅವಳ ವಿಭಿನ್ನ ಸಾಂಸ್ಕೃತಿಕ ಒಲವನ್ನು ಅಲ್ಲಿನವರು ವಿಶಾಲಮನಸ್ಸಿನಿಂದ ಒಪ್ಪಿಕೊಂಡಿದ್ದರು. ಅವರ ಸಂಪ್ರದಾಯದ ಮದುವೆಯ ವಿಧಿ ಮುಗಿದ ಬಳಿಕ, ಕ್ಯಾಥರಿನ್ ನಮ್ಮ ಬಳಿಗೆ ಬಂದು ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಳು. ತನ್ನ ಪತಿಯಲ್ಲಿ ನನ್ನನ್ನು ಗುರುವೆಂದು ಪರಿಚಯಿಸಿ ವಂದಿಸುವಂತೆ ಸೂಚಿಸಿದಳು.

ನಮ್ಮ ಪ್ರಯಾಣವೆಚ್ಚ ಹೊರೆಯಾಗಬಾರದೆಂಬ ಕಾರಣಕ್ಕೆ ನಾನು ಕೆಲವು ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸುವ ಅಪೇಕ್ಷೆಯನ್ನು ಮೊದಲೇ ವ್ಯಕ್ತಪಡಿಸಿದಂತೆ ಒಟ್ಟು ಐದು ಪ್ರದರ್ಶನಗಳನ್ನು ಕ್ಯಾಥರಿನ್ ಆಯೋಜಿಸಿದ್ದಳು. ‘ಜಾಂಬವತಿ ಕಲ್ಯಾಣ’ ಪ್ರಸಂಗದಲ್ಲಿ ನಾನು ಜಾಂಬವಂತನಾದರೆ ಕ್ಯಾಥರಿನ್‌ ಶ್ರೀಕೃಷ್ಣ. ಸಿದ್ಧಹಿಮ್ಮೇಳದ ಧ್ವನಿದಾಖಲೆ ಮಾಡಿ ಜೊತೆಗೊಯ್ದಿದ್ದ ಕಾರಣ ಅದನ್ನು ಅಲ್ಲಿ ಬಳಸಲು ಅನುಕೂಲವಾಯಿತು. ವೇದಾ ಮತ್ತು ಮಕ್ಕಳಿಬ್ಬರು ಸೀಮಿತ ಅವಧಿಯ ಪೂರ್ವರಂಗವನ್ನು ನಡೆಸಿಕೊಟ್ಟರು.

ಮುಂದಿರಿಸಿದ್ದ ಕಾಲುದೀಪದ ಸಮಕ್ಷಮದಲ್ಲಿ ಶ್ರೀಕೃಷ್ಣನ ಸಾಂಪ್ರದಾಯಿಕ ಒಡ್ಡೋಲಗದೊಂದಿಗೆ ನಮ್ಮ ಪ್ರದರ್ಶನ ಆರಂಭಗೊಳ್ಳುತ್ತಿತ್ತು. ಅಲ್ಲಿ ಪ್ರವೇಶ ಶುಲ್ಕವಿರಿಸಿ ಪ್ರದರ್ಶನ ಏರ್ಪಡಿಸುವ ಪದ್ಧತಿ ಇರಲಿಲ್ಲ. ಪ್ರದರ್ಶನ ಇಷ್ಟವಾದರೆ ವೀಕ್ಷಿಸಿದ ಸಹೃದಯರು ತಮ್ಮ ಯಥಾಸಾಧ್ಯ ಮೊತ್ತವನ್ನು ಕೊಡಬಹುದಾಗಿತ್ತು. ಹಾಗೆ, ನಮ್ಮ ಪ್ರದರ್ಶನಕ್ಕೆ ಒಳ್ಳೆಯ ಪ್ರೋತ್ಸಾಹವೇ ಸಿಕ್ಕಿತು. ಜೊತೆಗೆ ಕ್ಯಾಥರಿನ್‌ಳಿಗೆ ಸ್ವಂತ ಊರಿನ ಸಹೃದಯರಲ್ಲಿ ಯಕ್ಷಗಾನವನ್ನು ಪರಿಚಯಿಸಲು ಇದೊಂದು ನೆಪವಾಯಿತು. ಆಕೆಯ ಸಂಪ್ರದಾಯಬದ್ಧ ಕೃಷ್ಣನ ಪಾತ್ರವನ್ನು ಎಲ್ಲರೂ ಮೆಚ್ಚಿದರು.

ವ್ಯೂತ್ಸ್‌ಬುರ್ಗ್‌ನ ಸ್ಪ್ರಿಂಗ್ ಫೆಸ್ಟಿವಲ್‌ನ ಪ್ರಯುಕ್ತ ಜರುಗಿದ ನಮ್ಮ ಯಕ್ಷಗಾನ ಪ್ರದರ್ಶನ – ಪ್ರಾತ್ಯಕ್ಷಿಕೆಯ ವೀಕ್ಷಕರ ಸಾಲಿನಲ್ಲಿ ಅಲ್ಲಿನ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ ಪ್ರೊಫೆಸರ್ ಹೈಡ್ರೂನ್ ಬ್ರೂಕ್ನರ್ ಇದ್ದರು. ಅಲ್ಲದೆ, ಜರ್ಮನ್- ಕನ್ನಡ ಭಾಷಾಧ್ಯಾಯನದ ಸಹಯೋಜನೆಯಲ್ಲಿ ಸೆಮಿನಾರ್‌ನಲ್ಲಿ ಭಾಗವಹಿಸುವುದಕ್ಕೆ ಆಗಮಿಸಿದ್ದ ಪ್ರೊಫೆಸರ್ ಆಗಿದ್ದ ಬಿ.ಎ. ವಿವೇಕ ರೈಯವರೂ ನಮ್ಮ ಪ್ರದರ್ಶನದ ಪ್ರೇಕ್ಷಕರಾಗಿದ್ದುದು ನನಗೆ ಅಭಿಮಾನದ ವಿಷಯವಾಗಿತ್ತು. ಪ್ರದರ್ಶನದಲ್ಲಿ ನನ್ನ ಭಾವಾಭಿನಯಗಳನ್ನು ಗಮನಿಸಿದ ಪ್ರೊಫೆಸರ್ ಬ್ರೂಕ್ನರ್ ಅವರು, ‘ಇದು ಭರತನಾಟ್ಯದ ಹಾಗಿದೆಯಲ್ಲ’ ಎಂದು ಕೇಳಿದಾಗ ಅದಕ್ಕೆ ಪ್ರೊಫೆಸರ್ ವಿವೇಕ ರೈಗಳು, ‘ಭರತನಾಟ್ಯವೇ ಬೇರೆ ಯಕ್ಷಗಾನವೇ ಬೇರೆ’ ಎಂದು ವಿವರವಾಗಿ ಉತ್ತರಿಸಿದ್ದರು.

ಕ್ಯಾಥರಿನ್ ಜರ್ಮನಿಯ ಪ್ರಸಿದ್ಧ ಸ್ಥಳಗಳಿಗೆ ನಮ್ಮನ್ನು ಸುತ್ತಾಡಿಸಿದಳು. ಇಪ್ಪತ್ತೆಂಟು ದಿನಗಳ ಪ್ರವಾಸದಿಂದ ಹಿಂದಿರುಗುತ್ತಿರುವಾಗ ಹತ್ತಿರದ ಬಂಧುವಿನ ಮನೆಯಿಂದ ಮರಳಿದ ಬೆಚ್ಚನೆಯ ನೆನಪುಗಳು ಮಡಿಲಲ್ಲಿದ್ದವು. ಜರ್ಮನ್ ಪ್ರವಾಸದಲ್ಲಿ ಅನೇಕರೊಂದಿಗಿನ ಭೇಟಿ ನನ್ನ ಅನುಭವ ವಿಸ್ತಾರಕ್ಕೂ ಕಾರಣವಾಯಿತು. ಅಲ್ಲೊಬ್ಬ ಮಹಿಳೆಯಿದ್ದರು, ಹೈಕ್ ವೊಜಾರ್ ಅಂತ. ‘ಪ್ರಿಯಾ’ ಎಂಬುದು ಅವರ ಭಾರತೀಯ ನಾಮ. ಕೇರಳಕ್ಕೆ ಬಂದು ಕೂಡಿಯಾಟ್ಟಮ್ ಕಲಿತಿದ್ದರು. ಸೀಮಿತ ಅವಧಿಯಲ್ಲಿ ಕೂಡಿಯಾಟ್ಟಮ್‌ನ ಮೂಲಪಾಠಗಳನ್ನು ಅವರು ನನಗೆ ಕಲಿಸಿದರೆ, ನಾನು ಆಕೆಗೆ ಯಕ್ಷಗಾನದ ಹೆಜ್ಜೆಗಳನ್ನು ಹೇಳಿಕೊಟ್ಟೆ.

ಯಕ್ಷಗಾನದ ಕುರಿತ ಅಧ್ಯಯನ, ಸಂಶೋಧನೆಯನ್ನು ಮುಂದುವರಿಸಿರುವ ಕ್ಯಾಥರಿನ್, ಪ್ರೊಫೆಸರ್ ಬ್ರೂಕ್ನರ್ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿರುವ ಯಕ್ಷಗಾನದ ಕುರಿತ ಮಹಾಪ್ರಬಂಧಕ್ಕೆ ತ್ಯುಬಿಂಗನ್ ವಿಶ್ವವಿದ್ಯಾನಿಲಯ ಪಿಎಚ್. ಡಿ ಪ್ರದಾನ ಮಾಡಿದೆ. ಇತ್ತೀಚೆಗೆ ಅದು ಕೃತಿರೂಪದಲ್ಲಿ ಜರ್ಮನಿಯಲ್ಲಿ ಪ್ರಕಟವಾಗಿದೆ. ಕ್ಯಾಥರಿನ್ ‘ಅಭಿಮನ್ಯು ಕಾಳಗ’ವನ್ನು ಜರ್ಮನ್ ಭಾಷೆಗೆ ಭಾಷಾಂತರ ಕೂಡ ಮಾಡಿದ್ದಾಳೆ. ಈಗಲೂ ವರ್ಷಕ್ಕೊಮ್ಮೆ ಉಡುಪಿಗೆ ಬಂದರೆ ಅವಳೂ, ಅವಳ ಪತಿಯೂ, ತಂದೆತಾಯಿಗಳೂ ನಮ್ಮ ಮನೆಯವರಾಗಿಯೇ ಇರುತ್ತಾರೆ.

ಪಾಶ್ಚಾತ್ಯ ಸಂಗೀತವನ್ನು ಅಭ್ಯಾಸ ಮಾಡಿರುವ, ನಮ್ಮ ಯಕ್ಷಗಾನ ಕೇಂದ್ರಕ್ಕೆ ಮೂರುನಾಲ್ಕು ಸಲ ಬಂದು ಹೋಗುತ್ತ ಯಕ್ಷಗಾನ ಕಲಿಯುತ್ತಿರುವ ಮತ್ತೋರ್ವ ಹುಡುಗಿ ಅನಿತಾ ಫ್ರಾನ್ಸ್ ದೇಶದವಳು. ಮೂಲತಃ ಕೇರಳದವಳಾಗಿರುವ ಅನಿತಾ ಮತ್ತವಳ ಸಹೋದರಿ ಫ್ರಾನ್ಸ್‌ನ ದಂಪತಿಗಳಿಂದ ಕೈಗೂಸುಗಳಾಗಿ ಸ್ವೀಕರಿಸಲ್ಪಟ್ಟು ಫ್ರೆಂಚ್‌ ಪ್ರಜೆಗಳಾಗಿಬಿಟ್ಟಿದ್ದರು. ಅನಿತಾಳಿಗೆ ತನ್ನ ಜನ್ಮಭೂಮಿಯ ಬಗ್ಗೆ ಒಲವು ಉಂಟಾಗಿ ಯಕ್ಷಗಾನ ಕಲಿಯಲೆಂದು ಬಂದವಳು ಚೆಂಡೆ ನುಡಿಸುವ ಕೈಚಳಕವನ್ನು ಸಿದ್ಧಿಸಿಕೊಂಡಿದ್ದಾಳೆ. ಇತ್ತೀಚೆಗೆ ಮೂರು ತಿಂಗಳು ನಮ್ಮ ಯಕ್ಷಗಾನ ಕೇಂದ್ರದಲ್ಲಿದ್ದು, ಮತ್ತೊಮ್ಮೆ ಬರುವೆ ಎಂದು ಮೊನ್ನೆ ಫ್ರಾನ್ಸ್‌ಗೆ ಹಿಂತಿರುಗಿದ್ದಾಳೆ.
 (ಸಶೇಷ) ನಿರೂಪಣೆ : ಹರಿಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT