ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕೆಲಸ... ಏನೇನು ಆಗಬೇಕು?

Last Updated 15 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಸನ್ಮಾನ್ಯ ಮುಖ್ಯಮಂತ್ರಿಯವರೇ,
ಬ ಹು ದೊಡ್ಡ ಸಾಹಿತ್ಯ ಪರಂಪರೆಯಿರುವ ಕನ್ನಡದ ಒಬ್ಬ ಕನಿಷ್ಠ ಬರಹಗಾರನಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರಾದ ತಮಗೆ `ಪ್ರಜಾವಾಣಿ' ಓದುಗರ ಸಮಕ್ಷಮ ಈ ಸಾರ್ವಜನಿಕ ಓಲೆಯನ್ನು ಬರೆಯುವ ಧೈರ್ಯ ಮಾಡುತ್ತಿದ್ದೇನೆ.

ಕನ್ನಡಾಂಬೆಯ ಕೋಟಿ ದೀಪೋತ್ಸವದಲ್ಲಿ ತುಸುತುಸು ಮಿನುಗುತ್ತಿರುವ ಒಬ್ಬನಾಗಿ ನಾನು ಕರ್ನಾಟಕದ ಪರಿಸ್ಥಿತಿ ಅಧೋಗತಿಗಿಳಿದಿದ್ದ ದಿನಗಳಲ್ಲಿ ನಿಮ್ಮಂಥ ಸಮರ್ಥ ಮುಖ್ಯಮಂತ್ರಿ ಬರಲೆಂದು ಹಾರೈಸಿದ್ದೆ. ಕನ್ನಡ ಜನತೆಯ ಸಾಮೂಹಿಕ ತೀರ್ಮಾನ ನನ್ನ ಹಾರೈಕೆಯನ್ನು ನಿಜ ಮಾಡಿದೆ. ಈ ಕಾರಣಕ್ಕಾಗಿ ತುಂಬಾ ತಡವಾಗಿ ತಮ್ಮನ್ನು ಅಭಿನಂದಿಸುತ್ತಿದ್ದೇನೆ. ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಕನ್ನಡದ ಹಿರಿಯ ಸಾಹಿತಿಗಳನ್ನು ತಾವು ಖುದ್ದಾಗಿ ಅವರ ನಿವಾಸಗಳಿಗೆ ಹೋಗಿ ಭೇಟಿ ಮಾಡಿ ನಿಮ್ಮ ಭಾಷಾಭಿಮಾನ ಮತ್ತು ಸಾಹಿತ್ಯಾಭಿಮಾನಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ನಿಮ್ಮ ಮೇಲಿನ  ಗೌರವ ಇನ್ನೂ ಹೆಚ್ಚಿತು.

ನಾನು ತಮಗೆ ಬರೆಯುತ್ತಿರುವುದು ಒಂದು ಅಹವಾಲುಪತ್ರ. ಇದು ನನಗೋಸ್ಕರ ಅಲ್ಲ, ಕನ್ನಡದ ಬರಹ, ನುಡಿಗಟ್ಟು, ನಡೆಗಟ್ಟುಗಳಿಗೋಸ್ಕರ.

ಸುಮಾರು ಹದಿನೇಳು ವರ್ಷಗಳಿಂದ ಕನ್ನಡದ ವಾತಾವರಣದ ಹೊರಗಿದ್ದರೂ ಬರಹಗಾರನಾಗಿ ಕನ್ನಡದ ಸೇವೆಯನ್ನು ಮಾಡುತ್ತಿರುವುದಲ್ಲದೇ ಕನ್ನಡ ಜನತೆ ಜೊತೆ ಸದಾ ನಿಕಟ ಸಂಪರ್ಕ ಹೊಂದಿರುವ ನಾನು ಕರ್ನಾಟಕದಲ್ಲಿ ಕನ್ನಡಕ್ಕಾಗುತ್ತಿರುವುದರ ಬಗ್ಗೆ ಚಿಂತಿತನಾಗಿದ್ದೇನೆ. ಕನ್ನಡಾಭಿಮಾನಿಗಳಾದ ಹಲವಾರು ಗಣ್ಯರು, ಘನತೆವೆತ್ತ ಬರಹಗಾರರು, ಸೂಕ್ಷ್ಮ ಚಿಂತಕರು, ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಘಟನೆಗಳ ಮೂಲಕ ಕನ್ನಡ ಬರವಣಿಗೆ, ನುಡಿವಳಿಕೆ, ನಡೆವಳಿಕೆಗಳ ಏಳಿಗೆಗೋಸ್ಕರ ಹಲವಾರು ಸ್ತುತ್ಯ ಪ್ರಯತ್ನಗಳು ನಡೆಯುತ್ತಿವೆ, ನಿಜ. ಆದರೆ ಬಹುತೇಕ ಪ್ರಯತ್ನಗಳು ಗತದ ಆದರ್ಶ ಮತ್ತು ಅಗತ್ಯಗಳಿಂದ ಸ್ಫೂರ್ತಿಗೊಂಡಿದ್ದು ಇಂದು ಆಗಬೇಕಾದುದು ಆಗುತ್ತಿಲ್ಲವೆಂಬ ಸಂದೇಹ ಮೂಡುತ್ತದೆ.

ಹಿರಿಯ ಚಿಂತಕ, ದಿವಂಗತ ಕೆ.ವಿ. ಸುಬ್ಬಣ್ಣನವರು ಒಂದು ಕಡೆ ನಮಗೆ ನಮ್ಮ ಪರಿಸರದೊಂದಿಗಿರುವ ಸಂಬಂಧವನ್ನು ವಿವರಿಸಲು ನಮೆಗೆಲ್ಲರಿಗೂ ಗೊತ್ತಿರುವ ಪೌರಾಣಿಕ ಕತೆಯನ್ನು ಸಾಂಕೇತಿಕವಾಗಿ ಬಳಸಿಕೊಂಡಿದ್ದರು. ಶಿವ-ಪಾರ್ವತಿಯ ಬಳಿ ಇದ್ದ ಒಂದೇ ಒಂದು ಮಾವಿನ ಹಣ್ಣಿಗಾಗಿ ಮಕ್ಕಳಾದ ಗಣೇಶ ಮತ್ತು ಷಣ್ಮುಖರ ನಡುವೆ ಜಗಳಕ್ಕಿಟ್ಟುಕೊಂಡಿತು.

ಒಂದೇ ಹಣ್ಣನ್ನು ಹಂಚಿಕೊಳ್ಳಲು ಇಬ್ಬರೂ ಒಲ್ಲೆವೆಂದಾಗ ಶಿವ-ಪಾರ್ವತಿಯರು ಒಂದು ಪರೀಕ್ಷೆಯನ್ನೇರ್ಪಡಿಸಿದರು: ಅವರಿಬ್ಬರಲ್ಲಿ ಯಾರು ಜಗತ್ತನ್ನೇ ಸುತ್ತಿಕೊಂಡು ಮೊದಲು ಹಿಂತಿರುಗುತ್ತಾನೋ ಅವನಿಗೆ ಮಾವಿನಹಣ್ಣು, ಇನ್ನೊಬ್ಬನಿಗೆ ಇಲ್ಲ ಎಂದು. ಹೀಗೆಂದ ಕೂಡಲೇ ಷಣ್ಮುಖ ತನ್ನ ವಾಹನ ನವಿಲನ್ನೇರಿ ಹೊರಟ. ಆದರೆ ನೆಲವನ್ನು ಬಿಟ್ಟೇಳದ ಇಲಿವಾಹನನಾದ ಗಣೇಶನಿಗೆ ಹಾಗೆ ಮಾಡುವುದು ಸಾಧ್ಯವಿರಲಿಲ್ಲ. ತಂದೆ-ತಾಯಿಯರಾದ ಶಿವ-ಪಾರ್ವತಿಯರನ್ನೇ ಪ್ರಪಂಚವೆಂದು ಭಾವಿಸಿ, ಅವರನ್ನೊಂದು ಸುತ್ತು ಸುತ್ತಿ ತಾನೇ ಮಾವಿನ ಹಣ್ಣನ್ನು ಪಡೆದುಕೊಂಡ. ಜಗತ್ತೆಲ್ಲ ಅಲೆಯಲು ಹೋದ ಷಣ್ಮುಖನಿಗೆ ಏನೂ ಸಿಗಲಿಲ್ಲ.

ಸುಬ್ಬಣ್ಣನವರ ಪ್ರಕಾರ ಗಣೇಶ ತನ್ನ ಸಂಸ್ಕೃತಿ ಮತ್ತು ಪರಿಸರದಲ್ಲೇ ಇದ್ದುಕೊಂಡು ಅದರಲ್ಲಿ ಇಡೀ ಜಗತ್ತನ್ನು ಕಂಡುಕೊಳ್ಳುವ ಪ್ರಕ್ರಿಯೆಯ ಕುರುಹು. ಇದು ಸರಿಯೇ. ಹೊಸಗನ್ನಡದ ಹಿರಿಯ ಚೇತನಗಳಾದ ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ, ಶಂಬಾ ಜೋಷಿ, ಅಡಿಗ, ಜಿ.ಎಸ್. ಶಿವರುದ್ರಪ್ಪ, ಲಂಕೇಶ್, ತೇಜಸ್ವಿ, ಅನಂತಮೂರ್ತಿ, ಕಂಬಾರ, ದೇವನೂರ ಮಹಾದೇವ ಮತ್ತು ಸ್ವತಃ ಸುಬ್ಬಣ್ಣನವರು ತಮ್ಮ ಪರಿಸರದ ನೆಲೆಗಟ್ಟಿನಲ್ಲಿ ಇದ್ದುಕೊಂಡು ತಮ್ಮ ಕಲ್ಪನೆ-ಚಿಂತನೆ-ಕೃತಿಗಳ ಮೂಲಕ ಇಡೀ ವಿಶ್ವವನ್ನೇ ರೂಪಿಸಿದ್ದಾರೆ, ರೇಖಿಸಿದ್ದಾರೆ. ಇದಕ್ಕಾಗಿ ಈ ಎಲ್ಲ ಮಹನೀಯರೂ ಅಭಿನಂದನೀಯರು. ತನ್ನ ತಂದೆತಾಯಿಯರನ್ನೇ ಪ್ರದಕ್ಷಿಣೆ ಮಾಡಿ ಆ ಮೂಲಕ ಜಗತ್ತಿನಲ್ಲೇ ಶ್ರೇಷ್ಠವಾದದ್ದನ್ನು ಗಳಿಸಿಕೊಂಡ ಜನಪದ ದೇವತೆ ಗಣೇಶನ ಮೇಲ್ಪಂಕ್ತಿಯನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಅವರು ಜೀವಿಸಿದ್ದಾರೆ. ಇದನ್ನು ನಾಡು-ನುಡಿಗಳನ್ನು ಬೆಳೆಸುವ ಒಳಮುಖೀ ಮಾರ್ಗವೆನ್ನೋಣ.

ಆದರೆ ಷಣ್ಮುಖನ ಹೊರಮುಖಿ ಮಾರ್ಗವೂ ಇಂದು ಮುಖ್ಯ. ಕನ್ನಡದ ಭೌಗೋಳಿಕ ಸೀಮೆಯಿಂದ ಕಾರಣಾಂತರಗಳಿಂದ ದೂರವಾಗಿ ಹೊರರಾಜ್ಯ ಮತ್ತು ಹೊರದೇಶಗಳಲ್ಲಿ ನೆಲೆಸಿದವರು ಕನ್ನಡಕ್ಕೆ ಕೊಟ್ಟ ಯೋಗದಾನವನ್ನು ಮರೆಯುವಂತಿಲ್ಲ. ಗಂಗಾಧರ ಚಿತ್ತಾಲ, ಯಶವಂತ ಚಿತ್ತಾಲ, ಕುರ್ತಕೋಟಿ ಮುಂತಾದ ಹಿರಿಯರು ಹೊರರಾಜ್ಯಗಳಲ್ಲಿ ನೆಲೆಸಿದವರು. ಎ.ಕೆ. ರಾಮಾನುಜನ್, ಪೇಜಾವರ ಸದಾಶಿವರಾಯ, ಎಂ.ಜಿ. ಕೃಷ್ಣಮೂರ್ತಿ ಮುಂತಾದವರು ಹೊರದೇಶಗಳಲ್ಲಿ ನೆಲೆಸಿದವರು. ಕಾರಂತ, ಅನಂತಮೂರ್ತಿ, ಭೈರಪ್ಪ, ಕಾರ್ನಾಡ್, ಕಂಬಾರ ಅವರಂಥವರು ಹಲವು ಬಾರಿ ವಿದೇಶ ಯಾತ್ರೆ ಮಾಡಿ ಆ ಮೂಲಕ ತಮ್ಮ ಸಂಪನ್ಮೂಲಗಳನ್ನು ಹಿಗ್ಗಿಸಿಕೊಂಡವರು. ಹೊರನಾಡು, ರಾಜ್ಯಗಳಲ್ಲಿ ನೆಲೆಸಿದವರು, ಓಡಾಡಿ ಬಂದವರು. ಕನ್ನಡ ನಾಡು-ನುಡಿ-ಬರಹಗಳಿಗೆ ಕೊಟ್ಟ ಕೊಡುಗೆಯೂ ಗಣನೀಯವಾದುದೇ.

ಗಣಪತಿ, ಷಣ್ಮುಖ ಇಬ್ಬರ ಪ್ರಯತ್ನಗಳೂ ವಿಫಲವಲ್ಲ. ಗಣಪತಿ ತನ್ನ ಭಾಷಿಕ ಗಣಕೇಂದ್ರಿತನಾಗಿಯೇ ಜಗತ್ತನ್ನು ಗ್ರಹಿಸಿದವರ ಮಾದರಿ. ಷಣ್ಮುಖ ತನ್ನ ಪರಿಸರದಿಂದ ದೂರ ದೂರ ಹೋಗಿ ಆ ದೂರದ ಜಗತ್ತಿನಲ್ಲಿ ತನ್ನ ನಾಡಿನ ಪರಿಸರದ ಪರಿಮಳವನ್ನು ಹಬ್ಬಿಸಿದ ಹೊರಮಾರ್ಗಿಗಳ ಮಾದರಿ. ತಮಿಳಿನಲ್ಲಿ ಪ್ರಚಲಿತವಿರುವ ಕತೆಯ ಪ್ರಕಾರ ಷಣ್ಮುಖ ಕೈಲಾಸಕ್ಕೆ ಮರಳಲಿಲ್ಲ. ಪಳನಿಯಲ್ಲಿ ನೆಲೆಗೊಂಡ. ತಮಿಳಿನಲ್ಲಿ ಪಳನಿಯ ಅರ್ಥ ಪಳಂ ನೀ  (=ನೀನೇ ಹಣ್ಣು). ನೀ ಮೆಟ್ಟಿದ ನೆಲ ಅದೆ ಕರ್ನಾಟಕ ಎಂದರು ಕುವೆಂಪು. ಷಣ್ಮುಖ ತಾ ಮೆಟ್ಟಿ ನಿಂತ ಪಳನಿಯನ್ನೇ ಕೈಲಾಸವಾಗಿಸಿದ. ದೂರದ ಷಿಕಾಗೋನಲ್ಲಿದ್ದು ಅಲ್ಲಿ ಕನ್ನಡತ್ವವನ್ನು ಇಂಗ್ಲಿಷಿನಲ್ಲಿ ಅರಳಿಸಿದ ರಾಮಾನುಜನ್ ಕೊನೆಯುಸಿರೆಳೆದಿದ್ದು ಕಡಲಾಚೆಯ ಆ ಊರಿನಲ್ಲೇ.

ನನ್ನ ಅಹವಾಲು ಪತ್ರದ ಮೊದಲಿನ ಈ ಶಿವಕತೆಯನ್ನು ತೀರಾ ಲಂಬಿಸಿದ್ದಕ್ಕೆ ಕ್ಷಮೆಯಿರಲಿ. ಈ ಕತೆ ಮತ್ತು ವಿವರಣೆಯ ಮೂಲಕ ನಾನು ಹೇಳಹೊರಟದ್ದನ್ನು ಅಡಕವಾಗಿ ಹೇಳಬೇಕೆಂದರೆ, ಹೇಗೆ ಕನ್ನಡದ ಸಿದ್ಧ-ಪ್ರಸಿದ್ಧರು ಒಳಮುಖಿ ಮತ್ತು ಹೊರಮುಖಿ ಹಾದಿಗಳನ್ನು ಕ್ರಮಿಸಿ ಕನ್ನಡದ ಸಾರಸ್ವತ ಲೋಕವನ್ನು ಹುಲುಸಾಗಿ ಬೆಳೆಸಿದ್ದಾರೋ ಅದೇ ಪ್ರಕಾರವಾಗಿ ಕನ್ನಡದ ಹಿತೈಷಿಗಳೆಲ್ಲರೂ ಇಂದು ಈ ಎರಡೂ ಹಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮನೆ ಮತ್ತು ಮಾರುಗಳೆರಡನ್ನೂ ಗೆಲ್ಲಬೇಕಾಗಿದೆ.

ಗೋಳೀಕರಣದ ಸಂದರ್ಭದಲ್ಲಿ ನಮ್ಮ ವಿಶ್ವಾತ್ಮಕವಾದರೂ ವಿಶಿಷ್ಟವಾಗಿರುವ ನಮ್ಮ ನುಡಿಗಟ್ಟು-ಹಿಡಿಗಟ್ಟುಗಳನ್ನು ಬರವಣಿಗೆ-ಇರುವಣಿಗೆಗಳನ್ನು ವಿಶಾಲ ಕರ್ನಾಟಕದೊಳಗೂ ವಿಶಾಲ ವಿಶ್ವದೊಳಗೂ ಎತ್ತಿಹಿಡಿಯಬೇಕಾಗಿದೆ. ನಮ್ಮ ಕನ್ನಡತನ ಕೊಚ್ಚಿಕೊಂಡುಹೋಗದ ಹಾಗೆ ನಾವೂ ವಿಶ್ವಯಜ್ಞದಲ್ಲಿ ಪಾಲ್ಗೊಳ್ಳಬೇಕಿದೆ.

ಸಾವಿರ ಸಂವತ್ಸರಗಳ ಹಿಂದೆ ಕನ್ನಡದ ಸೀಮೆ ಕಾವೇರಿ-ಗೋದಾವರಿಗಳ ನಡುವಿನದಾಗಿತ್ತು. ಈಗ ನಮ್ಮ ಭೂಗೋಳ ಹಿಗ್ಗಿದೆ. ನಮ್ಮ ಮನೋಲೋಕವು ಆಯಾ ಕಾಲದ ಭೂಗೋಳದ ಮಿತಿಗೆ ಎಂದೂ ಒಳಪಡಲಿಲ್ಲ. ಬನವಾಸಿಯ ನಿವಾಸಿಯಾಗಿದ್ದ ಆದಿಕವಿ ಪಂಪನ ಕಲ್ಪನಾಪ್ರತಿಭೆ ಜೈನರ ಕಾಲ್ಪನಿಕ ಭೂಗೋಳದ ತುತ್ತತುದಿಯ ತನಕ ವ್ಯಾಪಿಸಿತ್ತು. ಆದರೆ ಪೂರ್ವಸೂರಿಗಳ ವಿಸ್ತಾರ ಮಾನಸಿಕವಾದುದು. ಇಂದು ಕನ್ನಡಿಗರನ್ನು ಕಾಲಪ್ರವಾಹವು ಕರ್ನಾಟಕದ ಗಡಿಯಾಚೆಗಿನ ರಾಜ್ಯಗಳಿಗೆ ದೇಶಗಳಿಗೆ ಸೆಳೆದುಕೊಂಡು ಹೋಗಿದೆ. ಅವರೊಂ ದಿಗೆ ಕನ್ನಡವೂ ಅಲ್ಲಿ ಹೋಗಿದೆ. ಇಂಥವರ ಒಬ್ಬರ ಪ್ರಯತ್ನದಿಂದ ಇಂಗ್ಲೆಂಡಿನಲ್ಲಿ ಈಚೆಗೆ ಬಸವಣ್ಣನವರ ಪುತ್ಥಳಿ ನಿರ್ಮಾಣವಾದುದು ಶ್ಲಾಘನೀಯ.

ಕನ್ನಡಿಗರ ಹಬ್ಬಗಳನ್ನು ಸಾಂಕೇತಿಕವಾಗಿ ಆಚರಿಸುವ ಪರದೇಶ ನಿವಾಸಿಗಳಲ್ಲಿ ಬಹುತೇಕರು ಕನ್ನಡದಿಂದ ಮಾನಸಿಕವಾಗಿ ದೂರವಾಗುತ್ತಿದಾರೆ. ವಿಶೇಷವಾಗಿ ಇಂಗ್ಲೆಂಡ್, ಉತ್ತರ ಅಮೆರಿಕ, ದುಬೈ ಮತ್ತು ಆಸ್ಟ್ರೇಲಿಯಾಗಳಿಗೆ ಡಾಕ್ಟರುಗಳಾಗಿ, ಎಂಜಿನಿಯರುಗಳಾಗಿ, ಅಧ್ಯಾಪಕರಾಗಿ, ಗಣಕಯಂತ್ರ ತಜ್ಞರಾಗಿ, ವಿಜ್ಞಾನಿಗಳಾಗಿ ಹೋಗಿ ನೆಲೆಸಿರುವ ಅವರ ಮುಂದಿನ ತಲೆಮಾರಿನವರು ಆಯಾ ದೇಶಗಳ ಸಂಸ್ಕೃತಿಗಳಲ್ಲಿ ವಿಲೀನವಾಗಿ ಹೋಗುತ್ತಿದ್ದಾರೆ.

ಅವರಲ್ಲಿ ಎಲ್ಲೋ ಕೆಲವರನ್ನು ಬಿಟ್ಟರೆ ಮಿಕ್ಕವರು ತಮ್ಮ ಮೂಲಸಂಸ್ಕೃತಿಯಿಂದ ಪರಕೀಯರಾಗುತ್ತಿದ್ದಾರೆ. ನಾವು ಈ ಪ್ರವೃತ್ತಿಯನ್ನು ತಡೆಯಲು ಕನ್ನಡಿಗರು ಹೆಚ್ಚಾಗಿ ನೆಲೆಸಿರುವ ಕಡೆಗಳಲ್ಲಿ ಕನ್ನಡದ ನೆಲೆ ಬೆಲೆಗಳನ್ನು ಹೆಚ್ಚಿಸುವ ಜರೂರು ಇದೆ. ಯಾಕೆಂದರೆ ದೂರದ ನಾಡುಗಳಲ್ಲಿ ತಮ್ಮ ಪ್ರತಿಭೆಯಿಂದ ಪ್ರತಿಷ್ಠಿತ ಜಾಗಗಳನ್ನು ಪಡೆದುಕೊಂಡಿರುವ ಅವರು ಆಯಾ ನಾಡುಗಳಲ್ಲಿ ಕನ್ನಡದ ದೀಪ ಹಚ್ಚುವ ಮತ್ತು ಕರ್ನಾಟಕಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ನೀಡುವ ಅಪಾರ ಸಾಧ್ಯತೆಗಳನ್ನು ಹೊಂದಿದ್ದಾರೆ. ಹೊರನಾಡ ಕನ್ನಡಿಗರ ಸಮ್ಮೇಳನಗಳನ್ನು ವ್ಯವಸ್ಥಿತವಾಗಿ ಮಾಡುವುದು ಇದಕ್ಕೊಂದು ಪರಿಹಾರ. ಆದರೆ ಅದಷ್ಟೇ ಸಾಲದು. ಸಮ್ಮೇಳನಗಳು ಬರೀ ಪರಿಷೆಯಾಗದಂತೆ ಎಚ್ಚರ ವಹಿಸಬೇಕು.

ಎರಡನೇ ಮೂರನೇ ತಲೆಮಾರಿನ ವಿದೇಶಿ ಕನ್ನಡಿಗರಿಗಾಗಿ ಆಯಾ ದೇಶಗಳಿಗೆ ಹೋಗಿ ವಿಕಸನಶೀಲವಾದ ಕನ್ನಡ ಭಾಷೆ ಮತ್ತು ಸಾಹಿತ್ಯ-ಸಂಸ್ಕೃತಿಗಳ ಪ್ರಸ್ತುತ ಅಂಶಗಳನ್ನು ಹೊರನಾಡ ಯುವಕನ್ನಡಿಗರಿಗೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ಪರಿಚಯಿಸಿ ಪ್ರಚಾರ ಮಾಡುವ ತರಬೇತಿ ಶಿಬಿರಗಳನ್ನೂ ಪರೀಕ್ಷೆಗಳನ್ನೂ ಕನ್ನಡ ವಿಶ್ವವಿದ್ಯಾಲಯ ಏರ್ಪಡಿಸಬೇಕು. ತಜ್ಞರ ಸಹಾಯದಿಂದ ಇದಕ್ಕೆ ಸಂಬಂಧಿಸಿದ ಉಪಯುಕ್ತ ಪಠ್ಯಕ್ರಮವನ್ನು ಎಚ್ಚರದಿಂದ ತಯಾರಿಸಬೇಕು. ಇಂಥ ತರಬೇತಿ ಶಿಬಿರಗಳನ್ನು ಕರ್ನಾಟಕದೊಳಗೂ ನಡೆಸಬೇಕು. ಹೊರನಾಡ ಕನ್ನಡಿಗರ ಇನ್ನೂ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದಲ್ಲಿರುವಂತೆ ಒಂದು ಕರ್ನಾಟಕ ಓವರ್‌ಸೀಸ್ ಮಂತ್ರಿಮಂಡಲವನ್ನೂ ರೂಪಿಸಿದರೆ ಈ ಕಾರ್ಯಕ್ಕೆ ಆನೆಬಲ ಬರುತ್ತದೆ.

ಕನ್ನಡ ಈಗ ಕ್ಲಾಸಿಕಲ್ ಭಾಷೆಯ ಸ್ಥಾನವನ್ನು ಪಡೆದಿರುವ ಸಂದರ್ಭದ ಲಾಭ ಪಡೆದು ಹೊರರಾಜ್ಯ ಮತ್ತು ರಾಷ್ಟ್ರಗಳಲ್ಲಿ ಕನ್ನಡ ಅಧ್ಯಯನವನ್ನು ಪೋಷಿಸುವ ಪ್ರಯತ್ನ ಮಾಡಬೇಕಾಗಿದೆ. ಕನ್ನಡ ಪೀಠಗಳು ಹೊರರಾಜ್ಯ ಮತ್ತು ಹೊರರಾಷ್ಟ್ರಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿತವಾಗಿವೆ. ನಮ್ಮ ಅಕ್ಕಪಕ್ಕದ ತಮಿಳರು, ತೆಲುಗರು ಮತ್ತು ಹಿಂದಿ ಭಾಷಿಕರು ನಮಗೆ ನಾಚಿಕೆಯಾಗುವ ಬಗೆಗಳಲ್ಲಿ ಈ ಕೆಲಸ ಮಾಡಿದ್ದಾರೆ; ಮಾಡುತ್ತಿದ್ದಾರೆ. ಅಮೆರಿಕದ ತಮಿಳು ಭಾಷಿಕರ ಹಣದಿಂದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ತಮಿಳು ಪೀಠ ಸ್ಥಾಪಿತವಾಗಿದೆ.

ಕೆನಡಾದ ಶ್ರೀಲಂಕಾ ತಮಿಳರು ಟೊರಾಂಟೊ ವಿಶ್ವವಿದ್ಯಾಲಯದಲ್ಲಿ ಪ್ರತಿವರ್ಷ ಅತ್ಯಂತ ಪ್ರಭಾವಿಯಾದ ಅಂತರರಾಷ್ಟ್ರೀಯ ತಮಿಳು ಸಮ್ಮೇಳನಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಹಾರ್ವರ್ಡ್‌ನಲ್ಲಿ ಹಿಂದಿ ಪೀಠ ಬಹಳ ಹಿಂದೆಯೇ ಸ್ಥಾಪಿತವಾಗಿದೆ. ದೊಡ್ಡ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಣವನ್ನು ಸೆಳೆಯುತ್ತಿರುವ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ತಮಿಳು, ಬಂಗಾಳಿ ಪೀಠಗಳು ಸಂಬಂಧಪಟ್ಟ ಸರ್ಕಾರಗಳ ಪ್ರಯತ್ನದಿಂದ ಸ್ಥಾಪಿತವಾಗಿವೆ. ನಾವೂ ಇದನ್ನು ಎಂದೋ ಮಾಡಬೇಕಾಗಿತ್ತು.

ಈ ಬಗ್ಗೆ ಹಿಂದಿನ ಮುಖ್ಯಮಂತ್ರಿಯವರಿಗೆ ಮತ್ತು ಅವರ ಆಗಿನ ಪ್ರಧಾನ ಕಾರ್ಯದರ್ಶಿಯವರಿಗೆ ನಾನು ಬರೆದ ಪತ್ರಕ್ಕೆ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ನನ್ನ ಮಾತುಗಳು ಅವರ ಘನತೆವೆತ್ತ ಕಿವಿಗಳನ್ನು ಮುಟ್ಟಲೇ ಇಲ್ಲ. ಅಷ್ಟೇ ಅಲ್ಲದೆ ಹಿಂದಿನ ಸರ್ಕಾರ ಜರ್ಮನಿ ಮತ್ತು ಆಸ್ಟ್ರಿಯಾದಲ್ಲಿ ಕನ್ನಡ ಪೀಠ ಸ್ಥಾಪನೆಗೆ ಕೈಹಾಕಿ ಎಡಬಿಡಂಗಿ ಕೆಲಸ ಮಾಡಿದೆ.

ಜರ್ಮನ್ ವಿಶ್ವವಿದ್ಯಾಲಯದಲ್ಲಿ ಸ್ಥಾಯಿಯಾಗಿ ಒಂದು ಕನ್ನಡ ಪೀಠ ಸ್ಥಾಪಿಸಲು ಕನಿಷ್ಠ ಎರಡು ಕೋಟಿ ರೂಪಾಯಿ ಅಗತ್ಯವೆಂದು ಹೈಡಲ್‌ಬರ್ಗ್ ಮತು ಮ್ಯೂನಿಕ್ ವಿಶ್ವವಿದ್ಯಾಲಯಗಳ ದಕ್ಷಿಣ ಏಷಿಯಾ ವಿಭಾಗದವರು ನನಗೆ ತಿಳಿಸಿದ್ದಾರೆ. ಈ ವಿಷಯವನ್ನು ಕನ್ನಡ ಪ್ರಾಧಿಕಾರದ ಹಿಂದಿನ ಅಧ್ಯಕ್ಷರಿಗೆ ನಾನು ತಿಳಿಸಿದ್ದೆ. ಅದನ್ನವರು ಕಿವಿಗೆ ಹಾಕಿಕೊಳ್ಳದೆ ಬರೀ ಐವತ್ತು ಲಕ್ಷ ರೂಪಾಯಿಗಳ ಮೊತ್ತವನ್ನು ಮಂಜೂರು ಮಾಡಿರುವ ಪತ್ರವನ್ನು ಆಯಾ ವಿಶ್ವವಿದ್ಯಾಲಯಗಳಿಗೆ ಕಳಿಸಿದ್ದಾರೆ.

ಇನ್ನೊಂದು ತಮಾಷೆಯೆಂದರೆ ಸದರಿ ಪತ್ರಗಳನ್ನು ಕನ್ನಡ ಬಾರದ ಅವರಿಗೆ ಕನ್ನಡದಲ್ಲೇ ಕಳಿಸಿದ್ದಾರೆ. ಇಂಥ ವಿಷಯಗಳನ್ನು ಜರ್ಮನಿಯ ಭಾರತೀಯ ದೂತಾವಾಸದ ಮೂಲಕ ಮಾಡಿದರೆ ಸುಲಭವಾಗುತ್ತದೆಂಬ ಸಾಮಾನ್ಯ ತಿಳಿವಳಿಕೆಯೂ ಅವರಿಗಿರಲಿಲ್ಲ. ಹೈಡಲ್‌ಬರ್ಗ್ ವಿಶ್ವವಿದ್ಯಾಲಯದ ಭಾರತೀಯತಜ್ಞರೂ ನನ್ನ ಸನ್ಮಿತ್ರರೂ ಆದ ಹನ್ಸ್ ಹರ್ಡರ್ ಅವರು ಆ ಪತ್ರವನ್ನು ನನಗೆ ಕಳಿಸಿ ಇದರ ಅರ್ಥವೇನು ಎಂದು ಕೇಳಿದರು.

ಅವರೊಂದಿಗೆ ಎಷ್ಟು ಹಣ ಬೇಕೆಂಬುದನ್ನು ಚರ್ಚಿಸದೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡು ತಮಗರ್ಥವಾಗದ ಭಾಷೆಯಲ್ಲಿ ಪತ್ರ ಕಳಿಸಿದ್ದು ಅವರ ಸಿಟ್ಟು ಮತ್ತು ನಗೆಗಳಿಗೆ ಕಾರಣವಾಯಿತು. ಜರ್ಮನಿಯ ಭಾರತೀಯ ದೂತಾವಾಸದಲ್ಲಿ ಕೆಲಸ ಮಾಡುತ್ತಿರುವ ನನ್ನಂಥ ಕನ್ನಡಿಗನ ನೆರವನ್ನೂ ಕೇಳದ ನನ್ನ ಸಲಹೆಯನ್ನೂ ಕಿವಿಗೆ ಹಾಕಿಕೊಳ್ಳದ ಕರ್ನಾಟಕ ಸರ್ಕಾರದ ಆ ಪ್ರತಿನಿಧಿಗಳ ಬಗ್ಗೆ ನನಗೆ ಅತೀವ ಬೇಸರವಾಗಿದೆ.

 ಅದು ಹಾಗಿರಲಿ. ಈಗಾಗಬೇಕಾದ ಕೆಲಸವೆಂದರೆ ಹಿಂದಿನ ಸರ್ಕಾರದವರು ಯಾವುದೇ ವಸ್ತುನಿಷ್ಠ ಆಲೋಚನೆಯಿಲ್ಲದೆ ಮಾಡಲೆತ್ನಿಸಿದಂತೆ, ಜರ್ಮನಿಯ ಮೂರು ವಿಶ್ವವಿದ್ಯಾಲಯಗಳಲ್ಲಿ ಮತ್ತು ಆಸ್ಟ್ರಿಯಾದ ಒಂದು ವಿಶ್ವವಿದ್ಯಾಲಯದಲ್ಲಿ ಒಟ್ಟು ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಒಂದಡಿಯ ನಾಲ್ಕು ಬಾವಿಗಳನ್ನು ತೋಡದೆ ಈಗಾಗಲೇ ಗಣನೀಯ ಸಂಖ್ಯೆಯಲ್ಲಿ ಕನ್ನಡದ ಬೋಧನೆ ನಡೆಯುತ್ತಿರುವ ಅತ್ಯಂತ ಪ್ರತಿಷ್ಠಿತವಾದ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಮತ್ತು ಜಗತ್ತಿನ ಅತ್ಯಂತ ಶ್ರೇಷ್ಠ ದಕ್ಷಿಣ ಭಾರತ ಅಧ್ಯಯನ ವಿಭಾಗವಿರುವ ಹೈಡಲ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ನಾಲ್ಕಡಿಯ ಒಂದು ಬಾವಿಯನ್ನು ತೋಡಿದರೆ ಇಂದು ಯೂರೋಪಿನ ಕೇಂದ್ರವಾಗಿರುವ ಜರ್ಮನಿಯಲ್ಲಿ ಕನ್ನಡ ಅಧ್ಯಯನಕ್ಕೆ ಭದ್ರವಾದ ಬುನಾದಿ ಹಾಕಿದಂತಾಗುತ್ತದೆ. ಭಾರತದ ಬಗ್ಗೆ ಆಸಕ್ತಿ ತಾಳಿರುವ ಪಶ್ಚಿಮದ ಯುವಕ ಯುವತಿಯರು ಈ ಮೂಲಕ ಕನ್ನಡದ ಬಗ್ಗೆ ಅಧ್ಯಯನ ಕೈಗೊಂಡು ಕನ್ನಡ ವಿದ್ವತ್ತಿಗೆ ವಿಶ್ವಮಟ್ಟದಲ್ಲಿ ಹೆಚ್ಚಿನ ಸ್ಥಾನ ನೀಡಬಲ್ಲರು.

ಇದೇ ರೀತಿ ಪ್ರೊ.ಅನಂತಮೂರ್ತಿಯವರ ಸ್ಫೂರ್ತಿಯಿಂದ ಅಮೆರಿಕದ ವಿಶ್ವಪ್ರಸಿದ್ಧ ವಿಶ್ವವಿದ್ಯಾಲಯವಾದ ಅಯೊವಾದಲ್ಲಿ ಕನ್ನಡ ಪೀಠ ಸ್ಥಾಪನೆಗಾಗಿ ಬಹಳ ಹಿಂದೆ ನಡೆದ ಪ್ರಯತ್ನವೂ ಕರ್ನಾಟಕ ಸರ್ಕಾರದ ಉದಾಸೀನದಿಂದ ಅಪೂರ್ಣವಾಗಿ ಉಳಿದಿದೆ. ನಮ್ಮ ಯುಗದಲ್ಲಿ ಜಗತ್ತಿನ ಹಲಸಂಸ್ಕೃತಿ-ಭಾಷೆಗಳ ಮುಖಾಮುಖಿಯ ಭಿತ್ತಿಯಾಗಿರುವ, ಅತ್ಯಧಿಕ ಸಂಖ್ಯೆಯಲ್ಲಿ ಕನ್ನಡಿಗರು ನೆಲೆಸಿರುವ ಅಮೆರಿಕದಲ್ಲಿ ಕನ್ನಡ ಪೀಠ ಸ್ಥಾಪನೆಯಾಗುವುದೂ ನಮ್ಮ ಕನ್ನಡಪರ ಆದ್ಯತೆಗಳಲ್ಲಿ ಮುಖ್ಯವಾಗಬೇಕು.

ಕನ್ನಡದ ಹಿಂದಿನ ಮತ್ತು ಇಂದಿನ ಸಾಹಿತ್ಯ, ಸಂಗೀತ, ಲಲಿತಕಲೆಗಳು ಮತ್ತು ಚಿಂತನೆಗಳ ಹಿರಿಮೆಯನ್ನು ಹೊರನಾಡುಗಳಲ್ಲಿ ಹರಡಿಸುವ ಪ್ರಚಾರ ಇನ್ನೂ ಪ್ರಭಾವಿಯಾಗಿ ಆಗಬೇಕಾಗಿದೆ. ಕನ್ನಡದ ಅತಿಶ್ರೇಷ್ಠ ಬರಹಗಾರರಿಗೆ ಈವರೆಗೆ ನೊಬೆಲ್ ಪುರಸ್ಕಾರ ಸಿಗದಿರಲು ಕಾರಣ ಇಂಗ್ಲಿಷನ್ನೂ ಒಳಗೊಂಡ ವಿಶ್ವಮಾನ್ಯ ಭಾಷೆಗಳಲ್ಲಿ ಕನ್ನಡದ ಮೇರುಕೃತಿಗಳ ಸಮರ್ಥ ತರ್ಜುಮೆಗಳ ಗೈರುಹಾಜರಿ. ಈ ಕೊರತೆಯನ್ನು  ತುಂಬಿಕೊಳ್ಳುವ ಹಾಗೆ ನಮ್ಮ ವಿಶ್ವವಿದ್ಯಾಲಯಗಳು, ಅಕಾಡೆಮಿಗಳು ಮಾಡಿರುವುದು ಅಂಗೈಯಗಲ, ಮಾಡಬೇಕಾದುದು ಕಡಲಗಲ...

ಈ ಓಲೆ ನಾನಂದುಕೊಂಡದ್ದಕ್ಕಿಂತಾ ದೀರ್ಘವಾಗುತ್ತಿರುವುದರಿಂದ ಕನ್ನಡ ಬರವಣಿಗೆ-ಇರುವಣಿಗೆಗಳ ಕುರಿತು ಕರ್ನಾಟಕದೊಳಗೆ ಏನು ಮಾಡಬಹುದೆಂಬುದನ್ನು ನನ್ನ ಮುಂದಿನ ಅಂಕಣದಲ್ಲಿ ಬರೆಯುತ್ತೇನೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT