ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿ ಹಿಡಿದವರತ್ತ ಕಲ್ಲು ಬೀಸುವುದೇಕೆ?

Last Updated 14 ಜನವರಿ 2018, 20:36 IST
ಅಕ್ಷರ ಗಾತ್ರ

ಯಥಾಸ್ಥಿತಿವಾದಿಗಳು ಮತ್ತು ಪಟ್ಟಭದ್ರ ಹಿತಗಳಿಗೆ ಹಿಡಿದ ಹಳೆಯ ಕಾಯಿಲೆಯಿದು. ಈ ವರ್ಗಗಳು ಮತ್ತು ಅವುಗಳ ಬಾಲಬಡುಕರು ಕನ್ನಡಿಗಳು ಮತ್ತು ಅವುಗಳನ್ನು ಹಿಡಿದವರತ್ತ ಕಲ್ಲು ಹೊಡೆಯುತ್ತಲೇ ಬಂದಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಗಂಭೀರ ಹುಣ್ಣಿಗೆ ಕನ್ನಡಿ ಹಿಡಿದು ಚಿಕಿತ್ಸೆ ಬೇಡಿದ ಸುಪ್ರೀಂ ಕೋರ್ಟ್‌ನ ನಾಲ್ವರು ಅತಿ ಹಿರಿಯ ನ್ಯಾಯಮೂರ್ತಿಗಳತ್ತ ಇದೇ ಶಕ್ತಿಗಳು ಇದೀಗ ಕಲ್ಲು ತೂರತೊಡಗಿವೆ. ನ್ಯಾಯಾಂಗದ ಮನೆಯೊಳಗಿನ ಹೊಲಸನ್ನು ಬೀದಿಯಲ್ಲಿ ತೊಳೆಯಬಾರದಿತ್ತು. ನ್ಯಾಯ ನೀಡಿಕೆಯ ಮಹಾಮಂದಿರ ಎಂಬ ಜನರ ನಂಬಿಕೆಗೆ ಏಟು ಬೀಳುತ್ತದೆ ಎಂಬ ಆಕ್ಷೇಪವನ್ನು ಒಂದು ಹಂತಕ್ಕೆ ಒಪ್ಪಬಹುದು. ಆದರೆ ಈ ನ್ಯಾಯಮೂರ್ತಿಗಳನ್ನು ದೇಶವಿರೋಧಿಗಳೆಂದು ಬಗೆದು ಮನೆಗೆ ಕಳಿಸಬೇಕು ಎಂಬ ಆಕ್ರೋಶದ ಮೂಲ ಯಾವುದು?

ಬಹುಕಾಲದಿಂದ ಕಾವಿಗೆ ಕುಳಿತಿದ್ದ ಸಂಘರ್ಷವಿದು. ನ್ಯಾಯಮೂರ್ತಿಗಳು ಪರಸ್ಪರ ಕುಳಿತು ಈ ಸಂಘರ್ಷವನ್ನು ಬಗೆಹರಿಸಿಕೊಳ್ಳಲು ಬರುತ್ತಿರಲಿಲ್ಲವೇ. ಬೀದಿಗೆ ಎಳೆದು ತರಬೇಕಿತ್ತೇ ಎಂಬ ಪ್ರಶ್ನೆ ಸ್ವಾಭಾವಿಕ. ಆದರೆ ನಾಲ್ವರು ನ್ಯಾಯಮೂರ್ತಿಗಳು ಹಠಾತ್ತನೆ ಮುರಿದ ಮೌನ ಅಲ್ಲ ಇದು. ಇಂದು ನೆನ್ನೆಯ ಸಮಸ್ಯೆ ಅಲ್ಲ. ಬಹು ಕಾಲದಿಂದ ಬೂದಿ ಮುಚ್ಚಿದ ಕೆಂಡ. ಅವರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದು ಮೂರು ತಿಂಗಳ ಹಿಂದೆಯೇ ಮುಖ್ಯನ್ಯಾಯಮೂರ್ತಿಗೆ ಬರೆದಿದ್ದ ಪತ್ರ. ದಿನ, ವಾರ., ತಿಂಗಳುಗಳ ನಿರೀಕ್ಷೆ ಫಲ ನೀಡದೆ ಹೋದಾಗ ಅವರು ಅನಿವಾರ್ಯವಾಗಿ ಆರಿಸಿಕೊಂಡ ನೋವಿನ ದಾರಿಯಿದು. ಪತ್ರಕರ್ತರೆದುರು ಬರುವ ದಿನ ಮುಂಜಾನೆ ಕಡೆಯ ಪ್ರಯತ್ನವಾಗಿ ಮುಖ್ಯ ನ್ಯಾಯಮೂರ್ತಿಯನ್ನು ಭೇಟಿ ಮಾಡಿದ್ದರು. ತಪ್ಪುಗಳನ್ನು ತಿದ್ದಬೇಕೆಂಬ ಅವರ ಅಹವಾಲಿಗೆ ಮುಖ್ಯ ನ್ಯಾಯಮೂರ್ತಿ ಸೊಪ್ಪು ಹಾಕಲಿಲ್ಲ. ಮಾತುಕತೆಯ ಬಾಗಿಲನ್ನು ಅವರು ಕಡೆಯ ದಿನದವರೆಗೆ ತೆರೆದಿಟ್ಟಿದ್ದರು ಎಂಬುದು ಗಮನಾರ್ಹ.

ಪತ್ರಿಕಾಗೋಷ್ಠಿ ಅವರ ಕಟ್ಟ ಕಡೆಯ ಆಯ್ಕೆಯಾಗಿತ್ತೇ ವಿನಾ ಮೊಟ್ಟ ಮೊದಲನೆಯದಲ್ಲ. ವ್ಯಾಧಿಯು ಎಷ್ಟು ಉಲ್ಬಣಗೊಂಡಿತ್ತು ಎಂಬ ಕಟು ಸತ್ಯಕ್ಕೆ ಹಿಡಿದ ಕನ್ನಡಿ ಈ ಪತ್ರಿಕಾಗೋಷ್ಠಿ. ಅಸಾಧಾರಣ ಸನ್ನಿವೇಶಗಳು ಅಸಾಧಾರಣ ಕ್ರಮಗಳನ್ನು ಬೇಡುತ್ತವೆ. ಶಸ್ತ್ರಚಿಕಿತ್ಸೆ ಇಲ್ಲದೆ ರೋಗ ವಾಸಿಯಾಗದು. ನ್ಯಾಯಾಂಗದ ಮೇಲೆ ಜನರು ಇರಿಸಿರುವ ವಿಶ್ವಾಸಾರ್ಹತೆಗೆ, ಪವಿತ್ರ ಭಾವನೆಗೆ ಪೆಟ್ಟು ಬೀಳುತ್ತದೆ ಎಂದು ಭಾವಿಸಿ ತೆಪ್ಪಗಿದ್ದರೆ, ತಗುಲಿರುವ ವ್ಯಾಧಿಯು ನ್ಯಾಯಾಂಗ ವ್ಯವಸ್ಥೆಯನ್ನು ಮತ್ತು ಜನತಂತ್ರವನ್ನು ಒಳಗಿಂದೊಳಗೇ ತಿಂದುಬಿಟ್ಟೀತು. ತಿಪ್ಪೆ ಸಾರಿಸಿ ರಂಗೋಲಿ ಇರಿಸಿದರೆ ಇತಿಹಾಸ ತಮ್ಮನ್ನು ಕ್ಷಮಿಸುವುದಿಲ್ಲವೆಂದು ನಿರ್ಧರಿಸಿ ಈ ನ್ಯಾಯಮೂರ್ತಿಗಳು ಸಂಪ್ರದಾಯಗಳನ್ನು, ಶಿಷ್ಟಾಚಾರವನ್ನು ಬದಿಗಿಟ್ಟು ಹೊರಬಂದಿದ್ದಾರೆ.

ಇಂದಿರಾ ಗಾಂಧಿ ಕೂಡ ಸರ್ಕಾರಕ್ಕೆ ನಿಷ್ಠವಾಗಿರುವ ನ್ಯಾಯಾಂಗ ಬಯಸಿದ್ದುಂಟು. ಈಗ ಪುನಃ ಅಂತಹುದೇ ಮಾತುಗಳನ್ನು ಆಡಲಾಗುತ್ತಿದೆ. ಶಾಲಾ ತರಗತಿಗಳೇ ಇರಬಹುದು, ಸುಪ್ರೀಂ ಕೋರ್ಟೇ ಆಗಬಹುದು. ಎರಡರಲ್ಲೂ ಶಿಸ್ತು ಇಲ್ಲದಿದ್ದರೆ ಮಹಾನ್ ಆಗಲಾರವು ಎನ್ನಲಾಗುತ್ತಿದೆ. ಅನ್ಯಾಯವನ್ನು ಸಹಿಸಿಕೊಂಡು ಬಾಯಿ ಹೊಲಿದುಕೊಳ್ಳುವುದನ್ನು ಮಹಾನ್ ಎನ್ನಲಾಗುತ್ತದೆಯೇ? ಹೌದು ಎಂದಾದರೆ ಅಂತಹ ಮಹಾನ್ ಸ್ಥಾನಮಾನದ ಕಳಂಕದ ಕಿರೀಟವನ್ನು ಭಾರತ ಮಾತೆ ಧರಿಸಬೇಕೇ ಎಂಬ ಪ್ರಶ್ನೆಗೆ ಪ್ರಜ್ಞಾವಂತ ಸಮಾಜ ಉತ್ತರ ಹೇಳಬೇಕಿದೆ.

ನ್ಯಾಯಾಂಗ ಆಡಳಿತದಲ್ಲಿ ಕಾರ್ಯವಿಧಾನದ ಔಚಿತ್ಯಪಾಲನೆ ಬಹುಮುಖ್ಯ. ಒಂದು ಬಗೆಯ ಅನಾಮಿಕತೆ, ಅಂತರ, ತಟಸ್ಥ ಮೌನವನ್ನು ಮೌಲ್ಯಗಳ ಎತ್ತರಕ್ಕೆ ಏರಿಸಿಕೊಂಡಿರುತ್ತವೆ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳು. ರೂಢಿಗಳು, ಸಂಪ್ರದಾಯಗಳು, ವಿಧಿವಿಧಾನಗಳು, ಸದಾಚಾರ, ಶಿಷ್ಟಾಚಾರಗಳನ್ನು ಎದೆಗೊತ್ತಿಕೊಂಡು ಪಾಲಿಸುತ್ತವೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಇಂತಹ ಶಿಷ್ಟಾಚಾರದ ಉಕ್ಕಿನ ತೆರೆಯನ್ನು ಸರಿಸಿ ಪತ್ರಿಕಾಗೋಷ್ಠಿ ನಡೆಸುವುದು ಅಪೂರ್ವ, ಅಸಾಧಾರಣ ವಿದ್ಯಮಾನ. ಈ ನಾಲ್ವರೂ ನ್ಯಾಯಮೂರ್ತಿಗಳ ವ್ಯಕ್ತಿಗತ ಚಾರಿತ್ರ್ಯ ಪ್ರಶ್ನಾತೀತ. ಜನಪರ ತೀರ್ಪುಗಳನ್ನು ನೀಡಿರುವ ಅಪಾರ ನೈತಿಕ ಬಲದ ಹಿನ್ನೆಲೆಯವರು. ನಾಲ್ವರ ಪೈಕಿ ರಂಜನ್ ಗೊಗೋಯ್ ಅವರು ದೀಪಕ್ ಮಿಶ್ರ ನಿವೃತ್ತಿಯ ನಂತರ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗುವವರು. ಅವರು ಸ್ವಾರ್ಥಿಯಾಗಿದ್ದರೆ ತಮಗೆ ದೊರೆಯಲಿರುವ ಈ ಸ್ಥಾನಮಾನವನ್ನು ಅಪಾಯಕ್ಕೆ ಸಿಲುಕಿಸಿ ಬಂಡೇಳಬೇಕಿರಲಿಲ್ಲ. ದೇಶಹಿತವನ್ನು ಎತ್ತಿ ಹಿಡಿಯದೆ ಆತ್ಮಸಾಕ್ಷಿಯನ್ನು ಮಾರಿಕೊಂಡರು ಎಂಬ ಆಪಾದನೆಯನ್ನು ಇತಿಹಾಸ ನಮ್ಮ ಮೇಲೆ ಮಾಡಲು ಬಿಡುವುದಿಲ್ಲ ಎಂಬ ಅವರ ಕಳಕಳಿಗೆ ಜಾಣಕುರುಡು ಮತ್ತು ಜಾಣಕಿವುಡನ್ನು ನಟಿಸಲಾಗುತ್ತಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಈಗಿನ ಒಟ್ಟು ಸಂಖ್ಯೆ 25. ವಿಚಾರಣೆಗೆ ಪಟ್ಟಿ ಮಾಡಿದ ವ್ಯಾಜ್ಯಗಳ ಸಂಖ್ಯೆ ಮತ್ತು ಸ್ವರೂಪವನ್ನು ಅನುಸರಿಸಿ ಹತ್ತರಿಂದ ಹನ್ನೆರಡು ಪೀಠಗಳು ನಿತ್ಯ ಸಮಾವೇಶಗೊಳ್ಳುತ್ತವೆ. ಈ ಕೋರ್ಟ್‌‌‌‌ಗಳಿಗೆ ವ್ಯಾಜ್ಯಗಳನ್ನು ಹಂಚಿಕೊಡುವ ಆಡಳಿತಾಧಿಕಾರ ಮುಖ್ಯ ನ್ಯಾಯಮೂರ್ತಿ ಅವರಿಗೆ ಸೇರಿದ್ದು. ಆದರೆ ಈ ಅಧಿಕಾರಕ್ಕೆ ಅಂಕುಶವುಂಟು. ವಿಧಿ ವಿಧಾನಗಳ ಮಿತಿಗಳುಂಟು. ವಿಧಿ ವಿಧಾನಗಳ ಔಚಿತ್ಯ ಮೀರಿ ಹಂಚಿಕೆ ಮಾಡುವ ಅಧಿಕಾರ ಮುಖ್ಯ ನ್ಯಾಯಮೂರ್ತಿಯವರಿಗೂ ಇಲ್ಲ.

ಹಿರಿಯ ಮತ್ತು ಕಿರಿಯ ನ್ಯಾಯಮೂರ್ತಿಗಳ ಇಂತಿಂತಹ ನ್ಯಾಯಪೀಠಗಳು ಇಂತಿಂತಹ ಸ್ವರೂಪದ ಕೇಸುಗಳ ವಿಚಾರಣೆ ನಡೆಸಬೇಕು ಎಂಬ ಸಂಗತಿಯನ್ನು ನ್ಯಾಯಾಲಯದ ರೂಢಿಗಳು, ಆಚರಣೆಗಳು, ಸಂಪ್ರದಾಯಗಳು ಹಾಗೂ ಶಿಷ್ಟಾಚಾರಗಳು ಈಗಾಗಲೇ ನಿರ್ಧರಿಸಿವೆ. ಈ ಪವಿತ್ರ ಶಿಷ್ಟಾಚಾರವನ್ನು ಮುಖ್ಯ ನ್ಯಾಯಮೂರ್ತಿಯವರು ಮುರಿಯತೊಡಗಿದ್ದಾರೆ. ದೇಶದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಲ್ಲ ವ್ಯಾಜ್ಯಗಳನ್ನು ಹಿರಿಯ ನ್ಯಾಯಮೂರ್ತಿಗಳ ನ್ಯಾಯಪೀಠಗಳಿಗೆ ವಹಿಸಿಕೊಡುತ್ತಿಲ್ಲ. ತಮ್ಮ ಆಯ್ಕೆ ನ್ಯಾಯಪೀಠಗಳಿಗೆ ಅದರಲ್ಲೂ ಕಿರಿಯ ನ್ಯಾಯಮೂರ್ತಿಗಳಿಗೆ ಒಪ್ಪಿಸುತ್ತ ಬಂದಿದ್ದಾರೆ. ನಿರ್ದಿಷ್ಟ ವ್ಯಾಜ್ಯಗಳ ತೀರ್ಪುಗಳು ಈ ರೀತಿಯಲ್ಲೇ ಬರಬೇಕೆಂದು ಮುಖ್ಯನ್ಯಾಯಮೂರ್ತಿ ಮೊದಲೇ ನಿರ್ಧರಿಸಿರುತ್ತಿದ್ದರು. ಹೀಗಾಗಿಯೇ ನಿರ್ದಿಷ್ಟ ನ್ಯಾಯಪೀಠಗಳಿಗೆ ಅವುಗಳನ್ನು ಒಪ್ಪಿಸುತ್ತಿದ್ದರು. ನಿರ್ದಿಷ್ಟ ವ್ಯಾಜ್ಯದ ವಿಚಾರಣೆಯನ್ನು ಹೆಚ್ಚಿನ ಸಂಖ್ಯೆಯ ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ಒಪ್ಪಿಸುವಾಗ, ಈ ಹಿಂದೆ ಇದೇ ವ್ಯಾಜ್ಯದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಯನ್ನು ಹೊಸ ನ್ಯಾಯಪೀಠದಿಂದ ಹೊರಗೆ ಇರಿಸುವಂತಿಲ್ಲ ಎಂಬ ಸದಾಚಾರವನ್ನು ಮುರಿಯಲಾಗುತ್ತಿದೆ ಎಂಬುದು ಹಿರಿಯ ನ್ಯಾಯಮೂರ್ತಿಗಳ ಗಂಭೀರ ಆರೋಪ.

ಕೇಂದ್ರ ಸರ್ಕಾರಕ್ಕೆ ವಿಶೇಷ ಆಸಕ್ತಿಯಿರುವ ಆಧಾರ್ ವಿವಾದ, ಸಿಬಿಐ ಅಧಿಕಾರಿ ಅಸ್ಥಾನಾ ನೇಮಕ ಹಾಗೂ ಸಿಬಿಐ ವಿಶೇಷ ನ್ಯಾಯಲಯದ ನ್ಯಾಯಾಧೀಶ ಲೋಯಾ ಅವರ ನಿಗೂಢ ಸಾವಿನ ವ್ಯಾಜ್ಯಗಳ ವಿಚಾರಣೆಯನ್ನು ತಮ್ಮ ಮನಸೋ–ಇಚ್ಛೆ ತಾವೇ ಆರಿಸಿದ ನ್ಯಾಯಪೀಠಗಳಿಗೆ ವಹಿಸಿದರೆಂಬ ಆರೋಪವನ್ನು ಮುಖ್ಯ ನ್ಯಾಯಮೂರ್ತಿ ಎದುರಿಸಿದ್ದಾರೆ.

ಉದಾಹರಣೆಗೆ ನ್ಯಾಯಮೂರ್ತಿಗಳಾದ ಚಲಮೇಶ್ವರ್ ಮತ್ತು ಬೋಬ್ಡೆ ಅವರು ಆಧಾರ್ ಪ್ರಕರಣದ ವಿಚಾರಣೆಯನ್ನು 2013ರಿಂದ ನಡೆಸಿದವರು. ಆದರೆ ಹೊಸದಾಗಿ ರಚಿಸಿರುವ ಪೀಠದಲ್ಲಿ ಇವರಿಬ್ಬರೂ ಇಲ್ಲ. ಸಿಬಿಐ ಅಧಿಕಾರಿ ಅಸ್ಥಾನಾ ನೇಮಕ ವಿವಾದದ ವ್ಯಾಜ್ಯ ಹಿರಿಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಪೀಠದ ಮುಂದೆ ಬರಬೇಕಿತ್ತು. ಬದಲಿಗೆ ಕಿರಿಯ ನ್ಯಾಯಮೂರ್ತಿಯೊಬ್ಬರ ಪೀಠಕ್ಕೆ ಒಪ್ಪಿಸಲಾಯಿತು.

ಅಮಿತ್ ಷಾ ಮುಖ್ಯ ಆಪಾದಿತರಾಗಿದ್ದ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಚ್.ಲೋಯಾ ಅವರ ಅಸಹಜ ಸಾವಿನ ಪ್ರಕರಣದ ವಿಚಾರಣೆಯನ್ನು ಇದೇ ಬಗೆಯಲ್ಲಿ ತಾವೇ ಆರಿಸಿದ ಅಥವಾ ರಚಿಸಿದ ನ್ಯಾಯಪೀಠಕ್ಕೆ ಒಪ್ಪಿಸಿದ ಮುಖ್ಯ ನ್ಯಾಯಮೂರ್ತಿಯವರ ನಡೆಯೇ ನಾಲ್ವರು ನ್ಯಾಯಮೂರ್ತಿಗಳ ಬಹಿರಂಗ ಬಂಡಾಯಕ್ಕೆ ತಕ್ಷಣದ ಪ್ರಚೋದನೆ. ಈ ಮಾತನ್ನು ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಪತ್ರಕರ್ತರ ಮುಂದೆ ಅನುಮಾನಕ್ಕೆ ಆಸ್ಪದ ಇಲ್ಲದಂತೆ ಒಪ್ಪಿಕೊಂಡಿದ್ದಾರೆ.

ದೇಶದ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ರಾಜಕಾರಣಿಯ ಭವಿಷ್ಯವನ್ನು ನಿರ್ಧರಿಸುವಂತಹ ಸೂಕ್ಷ್ಮ ಕೇಸಿನ ವಿಚಾರಣೆ ನಡೆಸುತ್ತಿದ್ದ ಪ್ರಾಮಾಣಿಕ ನ್ಯಾಯಾಧೀಶರೊಬ್ಬರು ಹಠಾತ್ತನೆ ಅತ್ಯಂತ ನಿಗೂಢ ರೀತಿಯಲ್ಲಿ ಸಾಯುವುದು ತಳ್ಳಿ ಹಾಕುವ ಮಾಮೂಲು ಸಂಗತಿ ಅಲ್ಲ. ಪ್ರಾಮಾಣಿಕತೆಯು ಪ್ರಾಣಕ್ಕೆ ಸಂಚಕಾರ ತರಬಲ್ಲದು ಎಂಬ ಸಂದೇಶ ನ್ಯಾಯಾಂಗದಲ್ಲಿ ಹಬ್ಬುವುದು ಅತ್ಯಂತ ಅಪಾಯಕಾರಿ. ಜನತಂತ್ರ ವ್ಯವಸ್ಥೆಯ ಬೇರುಗಳನ್ನೇ ಅಲ್ಲಾಡಿಸುವ ಸಾಧಕ ಬಾಧಕಗಳನ್ನು ಹೊಂದಿರುವಂತಹುದು. ನೇರ ನಿಷ್ಠುರ ನ್ಯಾಯಾಧೀಶರನ್ನು ರಕ್ಷಿಸಿಕೊಳ್ಳಲಾರದ ಪಕ್ಷಪಾತಿ ನ್ಯಾಯಾಂಗದ ಕೈಗಳಲ್ಲಿ ಜನತಂತ್ರ ಸುರಕ್ಷಿತ ಅಲ್ಲ.

ಮುಂಬಯಿಯ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬ್ರಿಜಶರಣ್ ಹರಕಿಶನ್ ಲೋಯಾ ಅವರು ಸಂದೇಹಾಸ್ಪದ ಘಟನಾವಳಿಗಳಲ್ಲಿ ನಿಗೂಢ ಸಾವಿಗೀಡಾದವರು. ಇವರ ಮುಂದೆ ಮುಖ್ಯ ಆರೋಪಿಯಾಗಿ ಕಟಕಟೆಯಲ್ಲಿ ನಿಂತಿದ್ದವರು ಪ್ರಧಾನಿ ಮೋದಿಯವರ ನಂತರ ದೇಶದ ಅತ್ಯಂತ ಸರ್ವಶಕ್ತರಲ್ಲಿ ಒಬ್ಬರೆಂದು ಭಾವಿಸಲಾಗಿರುವ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು. ಗುಜರಾತಿನ ಸೊಹ್ರಾಬುದ್ದೀನ್ ಶೇಖ್ ಎಂಬ ಪಾತಕಿಯೊಬ್ಬನನ್ನು ಅಲ್ಲಿನ ಪೊಲೀಸರು 2005ರಲ್ಲಿ ನಕಲಿ ಎನ್‌ಕೌಂಟರಿನಲ್ಲಿ ಹತ್ಯೆ ಮಾಡಿದ್ದರು. ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದ ಅಂದಿನ ಗುಜರಾತಿನ ಗೃಹಮಂತ್ರಿಯಾಗಿದ್ದವರು ಅಮಿತ್ ಷಾ.

ಶೇಖ್‌ನನ್ನು ಲಷ್ಕರೆ ತಯ್ಯೆಬಾ ಭಯೋತ್ಪಾದಕನೆಂದು ಕರೆದು 2005ರ ನವೆಂಬರ್ ತಿಂಗಳಿನಲ್ಲಿ ಗುಜರಾತ್ ಪೊಲೀಸರು ಆತನನ್ನು ಗುಂಡಿಟ್ಟು ಕೊಂದಿದ್ದರು. ಶೇಖ್, ಅವನ ಪತ್ನಿ ಕೌಸರ್ ಬೀ ಹಾಗೂ ಅವನ ಸಹಚರ ತುಲಸೀರಾಂ ಪ್ರಜಾಪತಿಯನ್ನು ಅನಧಿಕೃತವಾಗಿ ವಶಕ್ಕೆ ಪಡೆದು ವಿಚಾರಣೆಯಿಲ್ಲದೆ ಕೊಂದು ಹಾಕಿದ ಸಂಗತಿ ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ವಿಶೇಷ ತನಿಖೆಯಿಂದ ಹೊರಬಿದ್ದಿತ್ತು. ಶೇಖ್ ಭಯೋತ್ಪಾದಕ ಎಂಬ ಆರೋಪವನ್ನೂ ವಿಶೇಷ ತನಿಖಾ ತಂಡ ತಳ್ಳಿಹಾಕಿತ್ತು.

ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 2010ರ ಜನವರಿಯಲ್ಲಿ ಸಿಬಿಐಗೆ ಒಪ್ಪಿಸಿತ್ತು. ಐದು ತಿಂಗಳ ನಂತರ ಗುಜರಾತಿನ ನ್ಯಾಯಾಲಯದಲ್ಲಿ ಅಮಿತ್ ಷಾ ವಿರುದ್ಧ ಸಿಬಿಐ ಆಪಾದನಾಪಟ್ಟಿ ಸಲ್ಲಿಸಿತು. ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು 2012ರಲ್ಲಿ ಗುಜರಾತಿನಿಂದ ಹೊರಕ್ಕೆ ಮುಂಬೈಗೆ ವರ್ಗ ಮಾಡಿತು. ಮೊದಲಿನಿಂದ ಕಡೆಯವರೆಗೆ ಒಬ್ಬರೇ ನ್ಯಾಯಾಧೀಶರು ಈ ವಿಚಾರಣೆ ನಡೆಸಬೇಕೆಂದೂ ಆದೇಶ ನೀಡಲಾಗಿತ್ತು.

2014ರ ಮೇ ತಿಂಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು. ಆಗ ಅಮಿತ್ ಷಾ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಷಾ ಅವರು ಪ್ರತಿಸಲ ಏನಾದರೂ ಕಾರಣ ಹೇಳಿ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆಂದು ನ್ಯಾಯಾಧೀಶ ಉತ್ಪತ್ 2014ರ ಜೂನ್ ಆರರಂದು ತೀವ್ರ ಆಕ್ಷೇಪ ಪ್ರಕಟಿಸಿದ್ದರು. ಮುಂದಿನ ವಿಚಾರಣೆಯ ದಿನಾಂಕ ಜೂನ್ 26 ಎಂದು ನಿಗದಿಯಾಗಿತ್ತು. ಜೂನ್ 25ರಂದು ಅವರ ಎತ್ತಂಗಡಿಯಾಗಿತ್ತು. ಷಾ ಗೈರುಹಾಜರಿಯನ್ನು ಆಕ್ಷೇಪಿಸಿದ 19 ದಿನಗಳಲ್ಲಿ ಉತ್ಪತ್ ಅವರನ್ನು ಪುಣೆಗೆ ವರ್ಗ ಮಾಡಲಾಯಿತು. ಷಾ ಅವರನ್ನು ಅಪಾದನಾ ಪಟ್ಟಿಯಿಂದ ಕೈ ಬಿಡುವ ಮನವಿಯ ಕುರಿತು ತೀರ್ಪು ನೀಡಬೇಕಿದ್ದ ದಿನದಂದೇ ವರ್ಗಾವಣೆ ಆಗಿತ್ತು. ತಮ್ಮ ಮಗಳ ಶಿಕ್ಷಣದ ಸಲುವಾಗಿ ಪುಣೆಗೆ ವರ್ಗ ಮಾಡಬೇಕೆಂಬ ಉತ್ಪತ್ ಅವರ ಕೋರಿಕೆ ಪ್ರಕಾರ ಈ ವರ್ಗಾವಣೆ ಜರುಗಿದೆ ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟನೆ ನೀಡಿತು. ತೆರವಾದ ಜಾಗಕ್ಕೆ ಲೋಯಾ ನೇಮಕ ನಡೆಯಿತು.

ಲೋಯಾ ಸಂಶಯಾಸ್ಪದವಾಗಿ ಸಾಯುತ್ತಾರೆ. ಅವರ ಜಾಗವನ್ನು ನ್ಯಾಯಾಧೀಶ ಎಂ.ಬಿ.ಗೋಸಾವಿ ತುಂಬುತ್ತಾರೆ. ಡಿಸೆಂಬರ್ 15ರಿಂದ 15 ದಿನಗಳ ವಿಚಾರಣೆ ನಡೆಸುವ ಗೋಸಾವಿ ತೀರ್ಪು ನೀಡಿ ಅಮಿತ್ ಷಾ ಅವರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸುತ್ತಾರೆ ಮತ್ತು ಈ ತೀರ್ಪಿನ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸುವುದಿಲ್ಲ.

ಭಾರತೀಯ ನ್ಯಾಯಾಂಗದ ಅತ್ಯುನ್ನತ ಹಂತದಲ್ಲಿ ಆಳದ ಬಿರುಕು ಮೂಡಿದೆ. ಮುಖ್ಯ ನ್ಯಾಯಮೂರ್ತಿಯ ಜೊತೆಗೆ ಇತರೆ ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡ 'ಕೊಲಿಜಿಯಂ' ನ್ಯಾಯಮೂರ್ತಿಗಳ ನೇಮಕ ಮಾಡುತ್ತದೆ. ಈ ಕೊಲಿಜಿಯಂ ವ್ಯವಸ್ಥೆ ಇದೀಗ ಮುರಿದುಬಿದ್ದಿದೆ.

ಅತ್ಯುನ್ನತ ನ್ಯಾಯಾಲಯದ ಸಾಂಸ್ಥಿಕ ಚಾರಿತ್ರ್ಯ ಮತ್ತು ನೈತಿಕ ಪಾರಮ್ಯಕ್ಕೆ ಪೆಟ್ಟು ಬಿದ್ದಿದೆ. ಇದನ್ನು ಪುನಃ ಇಟ್ಟಿಗೆಯ ಮೇಲೆ ಇಟ್ಟಿಗೆ ಇಟ್ಟು ಸಹನೆಯಿಂದ ಜತನದಿಂದ ಮತ್ತೆ ಕಟ್ಟಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT