ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತ್ತಗುಡ್ಡಕ್ಕೆ ಎದುರಾದ ಕುತ್ತು ಕಾಣದೆ?

Last Updated 18 ಮೇ 2014, 19:30 IST
ಅಕ್ಷರ ಗಾತ್ರ

ಗದಗ ಜಿಲ್ಲೆಗೆ ಕಪ್ಪತ್ತಗುಡ್ಡ ಮುಕುಟಪ್ರಾಯವಾಗಿದೆ. ಗದಗ ತಾಲ್ಲೂಕಿನ ಬಿಂಕದಕಟ್ಟೆಯಿಂದ ಮುಂಡರಗಿ ತಾಲ್ಲೂಕಿನ ಸಿಂಗಟಾಲೂರುವರೆಗೆ ಹರಡಿ­ಕೊಂಡಿರುವ ಈ ಗುಡ್ಡ, ಅತ್ಯಮೂಲ್ಯ ಔಷಧೀಯ ಹಾಗೂ ಸುಗಂಧ ದ್ರವ್ಯದ ಸಸ್ಯ ಸಂಪತ್ತನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಆದರೆ ಇಂಥ ಅಮೂಲ್ಯ ಸಸ್ಯ ಸಂಪತ್ತನ್ನು ಸಂರಕ್ಷಿಸಲು ಸರ್ಕಾರ ಏಕೋ ಗಂಭೀರ ಪ್ರಯತ್ನ ಮಾಡಿಲ್ಲ.

ಆಗೊಮ್ಮೆ ಈಗೊಮ್ಮೆ ವಿಧಾನಮಂಡಲದಲ್ಲಿ ವಿಷಯ ಪ್ರಸ್ತಾಪವಾದಾಗ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲೋ ಎಂಬಂತೆ ಕಪ್ಪತ್ತಗುಡ್ಡ ಸಂರಕ್ಷಣೆಗೆ ಪ್ರಾಧಿಕಾರ ರಚನೆ ಅಥವಾ ಔಷಧ ವನ ಅಥವಾ ವನ್ಯಧಾಮ ರಚಿಸುವ ಭರವಸೆ ನೀಡಿ ಜಾರಿಕೊಳ್ಳುತ್ತದೆ. ನಂತರ ಅತ್ತ ಗಮನವನ್ನೇ ಹರಿಸುವುದಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಕಪ್ಪತ್ತಗುಡ್ಡಕ್ಕೆ ಅಡ್ಡಿ ಆತಂಕಗಳು ಎದುರಾಗಿವೆ. ಇದು ತೀರಾ ಗಂಭೀರ ಸ್ವರೂಪದ್ದಾಗಿದೆ ಎಂಬುದು ಕಳವಳಕ್ಕೆ ಕಾರಣವಾದ ಸಂಗತಿ.

1974ರಿಂದ 2004ರವರೆಗೆ ಕಪ್ಪತ್ತಗುಡ್ಡ ಅರಣ್ಯ ಪ್ರದೇಶದಲ್ಲಿ ಲೂಟಿ ಅವ್ಯಾಹತವಾಗಿತ್ತು. ಈ ಲೂಟಿಯನ್ನು ತಪ್ಪಿಸುವ ಪ್ರಯತ್ನಕ್ಕೆ ಯಾರೂ ಕೈ ಹಾಕಿರಲಿಲ್ಲ. ಕಾಡು ಉಳಿಸಿ, ಬೆಳೆಸುವ ಮಹತ್ಕಾರ್ಯಕ್ಕೆ ಬೇಕಿದ್ದ ನಾಯಕತ್ವ ಅಚಾನಕ್ಕಾಗಿ ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಸ್ವಾಮೀಜಿ ಅವರಿಂದ ದೊರೆತಿದೆ. ಗುಡ್ಡದಲ್ಲಿರುವ ಮಠದಲ್ಲಿ ವಾಸ್ತವ್ಯ ಹೂಡಿ, ಪರಿಸರ ಸಂರಕ್ಷಣೆ ನೇತೃತ್ವವನ್ನು ಅವರು ವಹಿಸಿಕೊಂಡ ನಂತರ ಇಲ್ಲಿನ ಚಿತ್ರಣವೇ ಬದಲಾಗಿದೆ.

ಪಶ್ಚಿಮಘಟ್ಟ ಶ್ರೇಣಿಯಂತೆಯೇ ಹರಡಿಕೊಂಡಿರುವ ಕಪ್ಪತ್ತಗುಡ್ಡ ಸಹಸ್ರಾರು ಎಕರೆ ಪ್ರದೇಶದ ವ್ಯಾಪ್ತಿ ಹೊಂದಿದೆ. ಪೂರ್ಣವಾಗಿ ಇಡೀ ಗುಡ್ಡದ ಸಂರಕ್ಷಣೆ ಕಾರ್ಯ ಈ ಪುಟ್ಟ ಮಠದ ಸ್ವಾಮೀಜಿ ಒಬ್ಬರಿಂದ ಆಗದ ಕೆಲಸ. ಆದರೂ ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಸುಮಾರು 400 ಹೆಕ್ಟೇರ್‌ ಪ್ರದೇಶವನ್ನು ಸಂರಕ್ಷಿಸುವ ಕಾರ್ಯ­­ವನ್ನು ಸ್ವಾಮೀಜಿ ಮಾಡುತ್ತಿದ್ದಾರೆ. ಅರಣ್ಯವನ್ನು ಉಳಿಸ­ಲ­ೇಬೇಕು ಎಂದು ಅವರು ಏಕಾಂಗಿಯಾಗಿ ಅಲ್ಲಿ ವಾಸವಿದ್ದಾರೆ. ನಗರ–ಪಟ್ಟಣಗಳಲ್ಲೇ ನೆಲೆಸಿ, ನಾನಾ ವಿದ್ಯಾ­ಸಂಸ್ಥೆಗಳನ್ನು ತೆರೆದು ವಿದ್ಯಾದಾನ ಮಾಡುತ್ತಿರುವ ಸ್ವಾಮೀಜಿ­ಗಳಿಗಿಂತ ಶಿವಕುಮಾರ ಸ್ವಾಮೀಜಿ ಭಿನ್ನವಾಗಿದ್ದಾರೆ.

ಅವರ ಆಲೋ­ಚನೆ­ಯೂ ಭಿನ್ನ. ಒಕ್ಕಲುತನ ಅವರ ಕನಸು. ದೇಶಿ ರಾಸು­ಗಳ ಸಾಕಣೆಗೆ ಒತ್ತು ನೀಡಿದ್ದಾರೆ, ಪರಿಸರ ಸಂರಕ್ಷಣೆ­ಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಡೋಣಿ ರಸ್ತೆಯಲ್ಲಿ ಹಿಂದೊಮ್ಮೆ ಮರ ಕಡಿಯುತ್ತಿದ್ದ ರೈತರಿಂದ ಕೊಡಲಿ ಕಸಿದು­ಕೊಂಡಿ­ದ್ದರು. ಗಿಡ–ಮರ ಉಳಿಸಬೇಕು ಎಂಬ ಇವರ ಜೀವನ­ಕ್ರಮಕ್ಕೆ ಗ್ರಾಮಸ್ಥರು ಬೆಲೆಕೊಡದ ಕಾರಣ ಬೇಸರಗೊಂಡು ಕಪ್ಪತ್ತಗುಡ್ಡಕ್ಕೆ ತೆರಳಿ ಮಠದಲ್ಲಿ ನೆಲೆಯೂರಿದ್ದಾರೆ.

ಇದರ ಪರಿಣಾಮವಾಗಿ ಕಡು ಬೇಸಿಗೆಯ ಈ ದಿನಗಳಲ್ಲೂ ಕಪ್ಪತ್ತಗುಡ್ಡ ಹಸಿರಿನಿಂದ ಕಂಗೊಳಿಸುತ್ತಿದೆ. ಬೀಳುವ ಮಳೆಯ ನೀರನ್ನು ಸಂಗ್ರಹಿಸಿ, ಇಂಗಿಸಿ ಅಂತರ್ಜಲ ವೃದ್ಧಿಸಲು ಚೆಕ್‌­ಡ್ಯಾಂಗ­ಳನ್ನು ನಿರ್ಮಿಸಲಾಗಿದೆ.  ಹಸಿರು ಗುಡ್ಡದಲ್ಲಿ ಜೀವಂತಿಕೆ ಮೂಡಿಸಿದೆ. ಚಿರತೆ ಸೇರಿದಂತೆ ಒಂದಷ್ಟು ವನ್ಯಜೀವಿಗಳೂ ನೆಲೆಸಿವೆ. ಮಠದ ಎರಡು ಆಕಳುಗಳನ್ನು ಚಿರತೆ ಎಳೆ­ದೊಯ್ದಿದೆೆ. ಆದರೂ ಗುಡ್ಡದಲ್ಲಿ ಕುರಿ ಮೇಯಿಸುವ ಹುಚ್ಚು ಸಾಹಸ ಅಕ್ಕಪಕ್ಕದ ಗ್ರಾಮದವರದ್ದು. ಈ ಸಂಬಂಧ ಸ್ವಾಮೀಜಿ ಎಚ್ಚರಿಕೆ ನೀಡಿದರೂ ಅದು ಅವರಿಗೆ ಲೆಕ್ಕಕ್ಕಿಲ್ಲ.

‘ಚಿರತೆ ಇರೋದು ಗೊತ್ತು. ನಾವು ಡಂಬಳದವರು’ ಎಂದು ಮುಂದೆ ಸಾಗು­ತ್ತಾರೆ. ಅದೇ ಈ ಅರಣ್ಯ ಪ್ರದೇಶವನ್ನು ರಕ್ಷಿತ ಅರಣ್ಯ ಅಥವಾ ವನ್ಯಧಾಮ ಎಂದು ಘೋಷಣೆ ಮಾಡಿದ್ದರೆ ಈ ಪ್ರಮೇಯ ಬರುತ್ತಿರಲಿಲ್ಲ. ಇಂಥ ಒಳ್ಳೆ ಕೆಲಸ ಮಾಡಲು ಸರ್ಕಾರ­ಕ್ಕಂತೂ ಇಚ್ಛಾಶಕ್ತಿ ಇಲ್ಲ. ಸ್ಥಳೀಯ ಜನಪ್ರತಿ­ನಿಧಿ­ಗಳಾ­ದರೂ ಗಮನಹರಿಸಬೇಡವೇ? ಉತ್ತರ ಕರ್ನಾಟಕದ ಇತರೆ ವಿಷಯ­ಗಳ ಬಗ್ಗೆ ನಿರ್ಲಕ್ಷ್ಯ ತಾಳಿರುವಂತೆೇ ಅವರು ಈ ವಿಷಯ­ದಲ್ಲೂ ಸಂವೇದನೆ ಕಳೆದುಕೊಂಡಿದ್ದಾರೆ. ವಿಧಾನ­ಮಂಡ­ಲ­ದಲ್ಲಿ ವಿಷಯವನ್ನು ಸಮರ್ಪಕವಾಗಿ ಮಂಡಿಸಿ ಅಥವಾ ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಹೇರಿ ಕೆಲಸ ಸಾಧಿಸ­ಬೇಕಾದವರೇ ಲಕ್ಷ್ಯ ಕೊಡದಿದ್ದರೆ ಇನ್ನು ಸರ್ಕಾರ ತಾನೇ ತಾನಾಗಿ ಮುಂದೆ ಬಂದೀತೇ?

ಐದಾರು ವರ್ಷಗಳ ಹಿಂದೆ ಈ ಭಾಗದಲ್ಲೂ ಅಕ್ರಮವಾಗಿ ಭೂಮಿ ಅಗೆದು ಕಬ್ಬಿಣದ ಅದಿರು ತೆಗೆದು ಸಾಗಿಸುವ ಕೆಲಸ ಆರಂಭವಾಗಿತ್ತು. ಆದರೆ ಈಗ ನಿಂತಿದೆ. ಕಪ್ಪತ್ತಗುಡ್ಡದಲ್ಲಿ ಉತ್ತಮ ದರ್ಜೆಯ ಕಬ್ಬಿಣದ ಅದಿರು ಲಭ್ಯವಿದೆ. ಜತೆಗೆ ಬಂಗಾ­ರದ ನಿಕ್ಷೇಪವೂ ಇದೆ ಎಂದು ಗಣಿಗಾರಿಕೆಯ ಆರಂಭಿ­ಸುವ ಪ್ರಯತ್ನವೂ ನಡೆದಿದೆ. ‘ಬಂಗಾರಕ್ಕಿಂತ ಮಿಗಿಲಾದ ಅಮೂಲ್ಯ ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯ ಸಂಪತ್ತನ್ನು ಉಳಿಸಿ­ಕೊಳ್ಳಬೇಕು’ ಎನ್ನುವ ಸ್ವಾಮೀಜಿಯವರ ಕಳಕಳಿ ಚುನಾ­ಯಿತ ಪ್ರತಿನಿಧಿಗಳಲ್ಲಿ ಕಾಣುತ್ತಿಲ್ಲ. ಆದರೆ, ಬಂಗಾರದ ಆಸೆ­ಗಾಗಿ ಗುಡ್ಡವನ್ನು ಬಗೆಯುವ ಹುನ್ನಾರ ನಡೆಯುತ್ತಲೇ ಇದೆ.

ಇಲ್ಲಿಯವರೆಗೆ ಗುಡ್ಡದಲ್ಲಿನ 339 ಔಷಧೀಯ ಸಸ್ಯಗಳನ್ನು ಗುರುತಿಸಿ, ಚಿತ್ರ ಸಮೇತ ದಾಖಲಿಸಲಾಗಿದೆ. ಇದು ದೊಡ್ಡ ಕೆಲಸ. ವೆಚ್ಚವೂ ಅಧಿಕ. ಯಾರ ಬೆಂಬಲವೂ ಇಲ್ಲದೇ ಇಷ್ಟೊಂದು ಬೃಹತ್‌ ಕೆಲಸವನ್ನು ಸ್ವಾಮೀಜಿ ಒಬ್ಬರೇ ಮಾಡಿ­ದ್ದಾರೆ. ಬಿ.ಎಸ್ಸಿ ಪದವೀಧರರಾದ ಅವರು ಇಲ್ಲಿ ಅರಣ್ಯ ಸಂರಕ್ಷಣೆಯ ಜತೆಗೆ ಸಸ್ಯ ವಿಜ್ಞಾನಿ­ಯಾಗಿಯೂ ಕಾರ್ಯನಿರ್ವಹಿಸು­ತ್ತಿ­ದ್ದಾರೆ. ಇಲ್ಲಿ ಇನ್ನೂ ಹಲವು ಬಗೆಯ ಔಷಧೀಯ ಸಸ್ಯಗಳಿವೆ. ಅವುಗಳನ್ನು ಗುರುತಿಸುವ ಕಾರ್ಯವಾಗಬೇಕು.

ಇಲ್ಲಿನ ಸಸ್ಯ ಸಂಪತ್ತಿನ ಅರಿವಿರುವ ರಾಜ್ಯದ ವಿವಿಧ ಆಯುರ್ವೇದ ಕಾಲೇಜುಗಳ ವಿದ್ಯಾರ್ಥಿ­ಗಳು ಅಧ್ಯಯನಕ್ಕಾಗಿ, ಗಿಡಮೂಲಿಕೆಗಳ ಸಂಗ್ರಹ­ಕ್ಕಾಗಿ ಇಲ್ಲಿಗೆ ಬರುತ್ತಾರೆ. ರಾಜ್ಯದಲ್ಲಿ ಪ್ರತ್ಯೇಕ­ವಾಗಿ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪಿಸುವ ಆಲೋ­­ಚನೆ ಸರ್ಕಾರಕ್ಕೆ ಇದ್ದರೆ, ಅದು ಕಪ್ಪತ್ತ­ಗುಡ್ಡದ ಸಮೀಪವೇ ಆಗಬೇಕು. ಇದರಿಂದ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ. ಈ ಮೂಲಕ ಅಮೂಲ್ಯ ಗಿಡಮೂಲಿ­ಕೆ­ಗಳ ಸಂರಕ್ಷಣೆ, ಸಂಶೋಧನೆ, ಸಂವರ್ಧನೆಯೂ ಸಾಧ್ಯ­ವಾಗುತ್ತದೆ.

‘ಗುಡ್ಡದಲ್ಲಿರುವ ಪುರಾತನ ದೇವಾಲಯಗಳಲ್ಲಿ ಪೂಜೆ­ಗೆಂದು ಬರುವ ಸುತ್ತಮುತ್ತಲಿನ ಗ್ರಾಮಸ್ಥರು, ಹಿಂತಿರುಗು­ವಾಗ ಗುಡ್ಡಕ್ಕೆ ಬೆಂಕಿ ಹಚ್ಚುತ್ತಾರೆ. ಹಾಗಾಗಿ ಕಪ್ಪತ್ತಗುಡ್ಡ ಪ್ರತಿ­ವ­ರ್ಷ ಬೆಂಕಿಗೆ ಆಹುತಿಯಾಗುತ್ತಿದೆ’ ಎಂಬ ಮಾತುಗಳು ಕೇಳಿ­ಬರುತ್ತವೆ. ಇಲ್ಲಿ ಮೌಢ್ಯ ಹೆಚ್ಚು ಕೆಲಸ ಮಾಡುತ್ತಿದೆ.

‘ಗುಡ್ಡಕ್ಕೆ ಬೆಂಕಿ ಹಚ್ಚಿದರೆ ಇಷ್ಟಾರ್ಥ ಸಿದ್ಧಿಸುತ್ತದೆ, ಬೇಗ ಹುಲ್ಲು ಬೆಳೆ­ಯು­ತ್ತದೆ ಮತ್ತು ಗುಡ್ಡ ಬೆಳಗಿದರೆ ಜಗತ್ತು ಬೆಳಗುತ್ತದೆ’ ಎಂಬ ಮೂಢನಂಬಿಕೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಅರಣ್ಯಕ್ಕೆ ಬೆಂಕಿ ಹಚ್ಚಿ ನಾಶ ಮಾಡಿದರೆ ಮನುಷ್ಯನ ಸರ್ವನಾಶ ಎಂಬು­ದರ ಪರಿ­ವೆಯೇ ಇಲ್ಲದ ಗ್ರಾಮಸ್ಥರಲ್ಲಿ ಈ ಬಗ್ಗೆ ಅರಿವು ಮೂಡಿಸ­ಬೇಕು. ಅವರನ್ನು ಮೌಢ್ಯಧ ತೆಕ್ಕೆ­ಯಿಂದ ಬಿಡಿಸಿ, ಹೊರ­ತರಬೇಕು. ಅರಣ್ಯ ಉಳಿ­ಸ­ಲು ಈ ಕೆಲಸ ಜರೂರಾಗಿ ಆಗ ಬೇಕು. ಜತೆಗೆ ಬೆಂಕಿ ನಂದಿಸಲು ಅರಣ್ಯ ಇಲಾಖೆಗೆ ಸಮ­ರ್ಪಕ ಉಪಕರಣ ಗಳನ್ನು ಒದಗಿಸಬೇಕು.

ಪವನ ವಿದ್ಯುತ್‌ ಯೋಜನೆಗಳು ಗುಡ್ಡದ ನೆತ್ತಿ ಏರಿ ಕುಳಿತಿರುವುದು ಕೂಡ ಅದರ ಅಸ್ತಿತ್ವಕ್ಕೆ ಅಪಾಯ ತರುವ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಪರಿಸರವನ್ನು ಉಳಿಸಿ,  ಬೆಳೆಸುವುದಕ್ಕಾಗಿಯೇ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಪ್ರತ್ಯೇಕ ಇಲಾಖೆಗಳಿವೆ. ಸಚಿವ­ರಿದ್ದಾರೆ. ಅಧಿಕಾರಿಗಳೂ ಇದ್ದಾರೆ. ಆದರೆ ಗುಣಾತ್ಮಕವಾದ ಕೆಲಸ ಮಾತ್ರ ಆಗು­ತ್ತಿಲ್ಲ ಎಂಬುದಕ್ಕೆ ಕಪ್ಪತ್ತಗುಡ್ಡ ಸಾಕ್ಷಿಯಾಗಿ ನಿಂತಿದೆ. ಗದಗ ಜಿಲ್ಲೆಯಲ್ಲಿ ಲಕ್ಷಗಟ್ಟಲೆ ಸಸಿಗಳನ್ನು ನೆಟ್ಟಿರುವುದಾಗಿ ಲೆಕ್ಕ ತೋರಿಸಿದ ಅಧಿಕಾರಿಗಳು ಈಗ ತನಿಖೆ ಎದುರಿಸುತ್ತಿದ್ದಾರೆ.

ಅನಾಥವಾಗಿರುವ ಕಪ್ಪತ್ತಗುಡ್ಡ ಸಂರಕ್ಷಣೆಗೆ ಸರ್ಕಾರ ತ್ವರಿತ­ವಾಗಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಇಲ್ಲಿ ರಾಜಕೀಯ ಮುಖಂಡರಿಗೆ ಆಶ್ರಯ ಕಲ್ಪಿಸುವುದಕ್ಕಿಂತ ಹೆಚ್ಚಾಗಿ ಗುಡ್ಡದ ಬಗ್ಗೆ ಕಾಳಜಿ ಇರುವ ವ್ಯಕ್ತಿಗಳಿಗೆ ಅಧಿಕಾರ ನೀಡಿ ಸೂಕ್ತ ಹಣಕಾಸು ಒದಗಿಸಿ, ನಿಜರೂಪದಲ್ಲಿ ಅದನ್ನು ಸಂರಕ್ಷಿ­ಸುವ ಕೆಲಸಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಇಲ್ಲ­ವಾದಲ್ಲಿ ಇದೂ ಹತ್ತರಲ್ಲಿ ಹನ್ನೊಂದನೆಯ ಪ್ರಾಧಿ
ಕಾರ­ವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT