ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಣಾರಸ, ಕುತೂಹಲರಸ ಹಾಕಿದ್ರ್ ಪ್ರಶ್ನಾರಸ ರೆಡಿ ಟು ಈಟ್!

Last Updated 7 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ಯಾವ್ ಮುನಿರಾಜು ಸರ್?’ ಅಂತ ಜಯಾ ಕೇಳಿದ್ದು ಇನ್ಸ್‌ಪೆಕ್ಟರಿಗೆ ಮಹಾನ್ ಗೊಂದಲವನ್ನು ಸೃಷ್ಟಿ ಮಾಡಿತು. ‘ಮೊನ್ನೆ ಅರೆಸ್ಟಾಗಿದ್ದನಲ್ಲ ಅವನು’ ಅಂತ ಹೇಳಿದರೂ ಅವರ ಮಾತಿನಲ್ಲೇ ಸ್ಪಷ್ಟತೆ ಇರಲಿಲ್ಲ ಎನ್ನುವ ಅರಿವು ಜಯಾಗಿಂತ ಮುಂಚೆ ಸರಳಾಗೆ ಹೊಳೆಯಿತು. ಜಯಾ ಇನ್ನೇನೋ ಹೇಳಬೇಕು ಅಂತ ಬಾಯಿ ತೆಗೆಯುವ ಮುನ್ನ ಸರಳಾ ಛಕ್ ಅಂತ ಕೆಳಗಿನ ಫ್ಲೋರಿನ ತಮ್ಮ ಮನೆಯ ಕಡೆ ನೋಡಿ, ‘ಆ! ಬಂದ್ವಿಇಇಇಇ!’ ಅಂತ ಯಾವುದೋ ಅನೂಹ್ಯ ಕರೆಗೆ ಓಗೊಟ್ಟಂತೆ ನಟಿಸಿದರು.

ಆ ಟೆನ್ಷನ್ನಿನ ಸಿಚುಯೇಶನ್ನಿನಲ್ಲಿ ಒಂದು ಶಿಫ್ಟ್‌  ಇದ್ದಕ್ಕಿದ್ದಂತೆ ಅವತರಿಸಿತು. ‘ಜಯಾ ಪಾಪು ಕರೀತಾ ಇದ್ದಾನೆ ಕಣ್ರೀ...ಅಳ್ತಾ ಇದ್ದಾನೆ ಅನ್ಸುತ್ತೆ. ಬನ್ನಿ ಹೋಗೋಣ...’ ಅಂತ ಹೇಳಿ ಕೈ ಹಿಸುಕಿದ ತಕ್ಷಣ ಜಯಾಗೆ ಇದೆಲ್ಲದರ ಹಿಂದಿನ ಮರ್ಮ ಅರ್ಥವಾಗಿ, ಮಾತಾಡದೆ ಸುಮ್ಮನೆ ಮೇಲಕ್ಕೂ ಕೆಳಕ್ಕೂ ನೋಡುತ್ತಾ ನಿಂತುಬಿಟ್ಟಳು. ಇನ್ಸ್‌ಪೆಕ್ಟರು ಪಾಪ ಬಹಳ ಮನುಷ್ಯತ್ವ ಇದ್ದವರು ಅಂತ ಕಾಣಿಸುತ್ತೆ. ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಹೃದಯವುಳ್ಳವರೂ ಬೇಕಾದಷ್ಟು ಜನ ಕಾಣುತ್ತಾರಲ್ಲಾ? ಹಾಗೇ ಇವರೂ ಒಬ್ಬರು ಇದ್ದರು.

‘ನೀವ್ ಹೋಗಿ ಬನ್ನೀಮಾ... ಮಗು ಚಿಕ್ಕದು ಅನ್ಸುತ್ತೆ...’ ಅಂದರು. ಜಯಾ ಬಾಯಿ ತೆಗೆದು ಇನ್ನೇನೋ ಅಸಂಬದ್ಧ ಉಲಿದು ಸಿಕ್ಕಾಕಿಕೊಳ್ಳುವ ಮುನ್ನ ಪರಿಸ್ಥಿತಿಯನ್ನು ತನ್ನ ನಿಯಂತ್ರಣದಲ್ಲಿ ತೆಗೆದುಕೊಳ್ಳಬೇಕು ಅಂತ ಸರಳಾ ಆಗಲೇ ತಯಾರಾಗಿ ನಿಂತಿದ್ದರು.

‘ಸರ್, ಇವಳಿಗೆ ಒಬ್ಬನೇ ಮಗ... ಚಿಕ್ಕೋನಷ್ಟೇ ಅಲ್ಲ...ಬಲೇ ತುಂಟ ಕೂಡ. ಈವತ್ತು ಹುಷಾರಿಲ್ಲ ಅವನಿಗೆ. ಅವರಮ್ಮನ್ನ ಬಹಳ ನೆನೆಸ್ತಿದಾನೆ. ಅವ್ಳು ಪಕ್ಕದಲ್ಲೇ ಇದ್ರೂ ಅವನಿಗೆ ಸಮಾಧಾನ ಇಲ್ಲ ಸರ್. ಅವರಪ್ಪ ಬೇರೆ ಇಲ್ಲಿ ಇಲ್ವಲ್ಲ...ಪಾಪದ್ದು ಮಗು, ಬನ್ರೀ ಜಯಾ...’ ಅಂತ ಶುರು ಮಾಡಿ ಕರುಣಾ ರಸದಿಂದ ಇನ್ಸ್‌ಪೆಕ್ಟರ್‌ ಮನಸ್ಸು ಕರಗುವಂತೆ ಮಾಡಿ ಅಲ್ಲಿಂದ ಜಾಗ ಖಾಲಿ ಮಾಡಲು ಹೆಜ್ಜೆ ಮುಂದಿಟ್ಟರು.

ಇನ್ಸ್‌ಪೆಕ್ಟರಿಗೆ ಇತ್ತ ತನ್ನ ಪ್ರಶ್ನೆಗೆ ಉತ್ತರ ಡಿಮಾಂಡ್ ಮಾಡಬೇಕಾ ಅಥವಾ ತನ್ನ ಕಣ್ಣ ಮುಂದಿರುವ ಮಗುವಿನ ತಾಯಿಗೆ ಹೋಗು ಅಂತ ಹೇಳಬೇಕಾ ಅನ್ನುವ ಸಂದಿಗ್ಧದಲ್ಲಿ ಹುಟ್ಟಿದ ಮಾನಸಿಕ ಯುದ್ಧದಲ್ಲಿ ಮಗ್ನರಾಗಿರಲು, ಇದ್ದಕ್ಕಿದ್ದಂತೆ ಖಾಕಿಯೊಳಗಿನ ಆ ತಂದೆ ಎನ್ನುವ ಕ್ಯಾರೆಕ್ಟರೇ ಗೆದ್ದುಬಿಟ್ಟಿತು.

‘ದಯವಿಟ್ಟು ಹೊರಡೀಮ್ಮಾ. ಪ್ರಶ್ನೆ ಇದ್ರೆ ಅಲ್ಲೇ ಬಂದು ಕೇಳ್ತೀವಿ...’ ಅಂತ ಇನ್ಸ್‌ಪೆಕ್ಟರು ಹೇಳಿದರು. ಜಯಾಗೆ ಒಳಗೆ ಅಪರಿಮಿತ ಸಂತೋಷ ಆಗುತ್ತಿರುವ ಕ್ಷಣದಲ್ಲೇ ಸರಳಾಗೆ ಇದು ಒಳ್ಳೆಯ ಅವಕಾಶ ಎನಿಸಿತು. ಸರಳಾ ವ್ಯಕ್ತಿತ್ವ ಒಂಥರಾ ಕಬ್ಬಿನ ಹಾಲು ಅರೆಯುವವನ ಅಪರಿಮಿತ ಆಶಾಭಾವನೆಯ ಹಾಗೆ; ಒಣಗಿದ ಕಬ್ಬನ್ನು ತಿರುಗಿಸಿ ಮುರುಗಿಸಿ ಮತ್ತೆ ಮತ್ತೆ ಮೆಶಿನ್ನಿಗೆ ಕೊಟ್ಟರೂ ಹಾಲು ತೆಗೆದುಕೊಡುವ ಯಂತ್ರ ಇರುವಾಗ, ಕಬ್ಬಿಗೆ ನೋವಾಗುತ್ತೆ ಅಂತ ಯಾರಾದ್ರೂ ಬಿಡ್ತಾರಾ?

‘ಸಾರ್ ಮಗುವಿಗೆ ಹುಷಾರಿಲ್ಲದೆ ಆಗಿರೋದೇ ನಿಮ್ಮಿಂದ ಗೊತ್ತಾ?’ ಅಂತ ಬ್ರಹ್ಮಾಸ್ತ್ರವೊಂದನ್ನು ಬಿಲ್ಲಿನ ಹೆದೆಗೆ ಹಾಕಿ ಹಿಂದಕ್ಕೆ ಎಳೆದು ಹುರಿ ಮಾಡಿಕೊಂಡಳು. ಖಾಕಿ ಅಧಿಕಾರಿ ಮುಂದಕ್ಕೆ ಮಾತಾಡಿದರೆ ಈ ಬಾಣ ಬಿಟ್ಟೇ ಸಿದ್ಧ ಎನ್ನುವಂತೆ ರೆಡಿಯಾಗಿದ್ದಳು. ಏನನ್ನೋ ಬರೆದುಕೊಳ್ಳುತ್ತಿದ್ದ ಇನ್ಸ್‌ಪೆಕ್ಟರಿಗೆ ಸೋಜಿಗವಾಯಿತು. ತಾವು ಇಲ್ಲಿಗೆ ಬಂದು ಕೆಲವೇ ಗಂಟೆಗಳು ಕಳೆದಿವೆ. ತಮ್ಮ ಕಾರಣವಾಗಿ ಐದು ವರ್ಷವೂ ತುಂಬಿಲ್ಲದ ಮಗುವಿಗೆ ಅನಾರೋಗ್ಯ ಹೇಗೆ ಉಂಟಾಯಿತೆಂದು ಅರ್ಥವಾಗಲಿಲ್ಲ.

‘ಅದೆಂಗ್ರೀ? ನಾವೇನ್ ಮಾಡಿದ್ವಿ? ಮಗು ನಮ್ಮನ್ನು ನೋಡೇ ಇಲ್ಲ. ನಾವೂ ಮಗುವನ್ನು ನೋಡಿಲ್ಲ. ಅದ್ಹೆಂಗೆ ಸುಮ್ನೆ ಹೇಳ್ತೀರಿ?’ ಅಂತ ಸ್ವಲ್ಪ ತರಾಟೆಗೆ ತೆಗೆದುಕೊಳ್ಳುವ ಧ್ವನಿಯಲ್ಲೇ ಮಾತನಾಡಿದರು. ಆ ಧ್ವನಿ ಕೇಳಿ ಸರಳಾಗೆ ಚೂರು ಕಾಲು ನಡುಕ ಬಂತು. ತಾನು ಹೆದೆ ಏರಿಸಿ ರೆಡಿ ಮಾಡಿಕೊಂಡಿದ್ದ ಬ್ರಹ್ಮಾಸ್ತ್ರದ ಶಕ್ತಿ ಹೆಚ್ಚಾಯಿತೇನೋ ಅನ್ನಿಸಿ ತೀವ್ರತೆಯನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕಾಗಿ ಬಂದು ಆ ಅಸ್ತ್ರವನ್ನು ಕೆಳಗಿಟ್ಟು ಶರಣಾಗತಿ ಮೂಲಕ ವೈರಿಯನ್ನು ಗೆಲ್ಲಲೆಂದು ಸ್ಟ್ರಾಟೆಜಿ ರೆಡಿ ಮಾಡಿಕೊಂಡು ಸ್ಪಾಟಲ್ಲೇ ಧಿಡೀರ್ ಅಂತ ಕಾರ್ಯಗತವಾದಳು.

‘ನೀವು ಮಾಡಿದ್ದು ಅಂತ ಹೇಳಲಿಲ್ಲ ಸರ್. ಕಾರಣ ಏನೆಂದರೆ ಮಗು ಚಿಕ್ಕೋನಿದ್ದಾಗಲೇ ಅವರಪ್ಪ ಹೋದರಂತೆ. ಅವನು ಹಟ ಮಾಡಿದಾಗಲೆಲ್ಲ ಈ ಜಯಾ ಇದ್ದಾರಲ್ಲ? ನೋಡಲ್ಲಿ ಪೊಲೀಸಪ್ಪ ಬಂದು ನಿನ್ನ ಎತ್ಕೊಂಡು ಹೋಗಿ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕ್ತಾರೆ ಅಂತ ಆಗಾಗ ಹೇಳಿ ಹೆದರಿಸಿದ್ದಾಳೆ. ಹೇಳಿ ಕೇಳಿ ಮಕ್ಕಳಲ್ವೇ ಸರ್? ನಾವು ದೊಡ್ಡೋರು ಏನನ್ನೋ ಹೇಳಿ ಮರೆತುಬಿಡ್ತೀವಿ.

ಆ ಮಕ್ಕಳು ಎಲ್ಲವನ್ನೂ ನೆನಪಿಟ್ಟುಕೊಂಡು ನಮ್ಮ ಪ್ರಾಣ ತಿಂತಾರೆ. ಹಾಗೇ ಇದೂ... ಬೆಳಿಗ್ಗೆ ಪೊಲೀಸರು ಅಪಾರ್ಟ್‌ಮೆಂಟಿಗೆ ಬಂದಿದ್ದಾರೆ ಅಂತ ಗೊತ್ತಾದ ಕೂಡಲೆ ’ನನ್ನ ಅವರ ಜೊತೆ ಕಳಿಸಿಬಿಡ್ತೀಯಾ’ ಅಂತ ಅಳೋಕೆ ಶುರು ಮಾಡಿದ. ಆಗಲೇ ಜ್ವರ ಶುರು ಆಯಿತು. ಮೊದಲ ಸಾರಿ ಇಲ್ಲಿಗೆ ನಿಮ್ಮನ್ನ ಮಾತಾಡಿಸೋಕೆ ಬಂದಾಗ ಅವನಿಗೆ ಗೊತ್ತಿರಲಿಲ್ಲ. ಎರಡನೇ ಸಾರಿ ನಿಮ್ಮ ಪೀಸಿ ಬಂದು ಕರೆದರಲ್ಲ ಸರ್? ಆಗ ಅವ್ರನ್ನ ನೋಡಿಬಿಟ್ಟ. ಇದ್ದ ಜ್ವರ ಇನ್ನೂ ಹೆಚ್ಚಾಯ್ತು. ಈಗ ಕನವರಿಸ್ತಾ ಇದಾನಂತೆ.

ಪಾಪ...ಮಗು ಅಲ್ವಾ? ಇವಳೂ ಅವನನ್ನ ಒಬ್ಬಳೇ ಸಂಭಾಳಿಸೋದು...ದಿನವೆಲ್ಲಾ ಇವಳನ್ನ ಬಿಟ್ಟು ಒಂದು ಕ್ಷಣವೂ ಇರಲ್ಲ ಅವನು! ಸ್ಕೂಲಿಗೆ ಕಳಿಸೋ ಕಾಲಕ್ಕೆ ಕಷ್ಟ ಇದೆ’
ಹೀಗೆ ಭೋರ್ಗರೆಯುವ ಜಲಧಿಯ ಥರ ಒಡಲಲ್ಲಿ ಇದ್ದ ಎಲ್ಲವನ್ನೂ, ಅಂದರೆ ಬೇಕಾದ್ದು, ಬೇಡವಾದ್ದು ಅಂತ ಭೇದವೆಣಿಸದೆ ದಡಕ್ಕೆ ತಂದು ಹಾಕಿ ಸುಮ್ಮನೆ ನೋಡಲು ಶುರು ಮಾಡಿದಳು.

ಮಧ್ಯೆ ಮಧ್ಯೆ ಸರಳಾ ಜಯಾ ಕೈಯನ್ನು ಹಿಡಿದು ಹಿಸುಕುತ್ತಿದ್ದುದರಿಂದ ಜಯಾಗೆ ತಾನು ಇದರಲ್ಲಿ ಮಧ್ಯ ಪ್ರವೇಶಿಸದಿದ್ದರೇ ಕ್ಷೇಮ ಎನ್ನುವ ಸಂದೇಶ ಆಗಲೇ ರವಾನೆಯಾಗಿತ್ತು. ಹಾಗಾಗಿ ಜಯಾ ಸುಮ್ಮನೆ ನೆಲ ನೋಡುತ್ತಾ, ಉಂಗುಷ್ಟದಿಂದ ನೆಲ ಕೆರೆಯುತ್ತಾ ಹಳೇ ಕಾಲದ ಹೀರೋಯಿನ್ನುಗಳ ಥರ ಅಪನಂಬಿಕೆ ಬರುವಷ್ಟು ದುಃಖ ನಟಿಸುತ್ತಾ ನಿಂತಿದ್ದಳು.  ಅವಳು ಹೇಳಿದ್ದಷ್ಟರಲ್ಲಿ ಇನ್ಸ್‌ಪೆಕ್ಟರಿಗೆ ಒಂದು ವಿಷಯ ಮಾತ್ರ ಗಟ್ಟಿಯಾಗಿ ನಿಂತುಬಿಟ್ಟಿತು. ‘ಅವರಪ್ಪ ಇಲ್ವಾ?’ ‘ಇಲ್ಲ ಸರ್’

‘ಇವರೊಬ್ರೇ ನೋಡ್ಕೊಳೋದಾ?’ ಅಂತ ಹೆಚ್ಚು ಸಹಾನುಭೂತಿಯಿಂದಲೂ, ಸ್ವಲ್ಪ ಕುತೂಹಲದಿಂದಲೂ ಕೇಳಿದರು. ‘ಹೌದು ಸರ್. ಬರ್ತೀವಿ ಸರ್...’ ಅಂತ ಹೇಳಿ ಸರಳಾ ಹೆಚ್ಚೂಕಮ್ಮಿ ಜಯಾನ್ನ ಎಳೆದುಕೊಂಡೇ ಮನೆಗೆ ಹೋದರು.

ಮನೆಯಲ್ಲಿ ಮಗುವೂ, ಅವರಜ್ಜಿಯೂ ಮಲಗಿದ್ದರು. ಕೋಟಿ, ವಿಜಿ ಮತ್ತು ಸೂಸನ್ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದರು. ಚಿತ್ರಾ ಒಬ್ಬಳೇ ಡೈನಿಂಗ್ ಟೇಬಲ್ಲಿನ ಮೇಲೆ ಪುಸ್ತಕಗಳನ್ನೆಲ್ಲಾ ಹರಡಿಕೊಂಡು ಅದೇನೋ ಲೆಕ್ಕಾಚಾರ ಹಾಕುತ್ತಿದ್ದಳು. ಟಿ.ವಿಯಲ್ಲಿ ಐಕ್ಯರಾದ ಮೂರು ಜನಕ್ಕೆ ಯಾರಾದರೂ ಮನೆಯನ್ನು ಕೊಳ್ಳೆ ಹೊಡೆದರೂ ಗೊತ್ತಾಗುವಂತಿರಲಿಲ್ಲ, ಜಯಾ ಮತ್ತು ಸರಳಾ ವಾಪಸು ಬಂದದ್ದನ್ನ ಚಿತ್ರಾ ಒಬ್ಬಳೇ ಗಮನಿಸಿ ‘ಟೀ ಮಾಡಿ ಕೊಡ್ಲಾ ಜಯಾ ದೀದಿ?’ ಅಂತ ಕಕ್ಕುಲತೆಯಿಂದ ಕೇಳಿದಳು.

ಪೊಲೀಸರು ಬಂದಾಗಿನಿಂದ ಅನಾವರಣಗೊಂಡ ಇಡೀ ಸನ್ನಿವೇಶ ಬಹುತೇಕ ತಮಾಷೆಯಿಂದ ಕೂಡಿದ್ದರೂ ಯಾಕೋ ಇದೆಲ್ಲಾ ತನ್ನ ಕೊರಳ ಸುತ್ತ ಸುತ್ತುತ್ತಿದೆ ಎನ್ನಿಸಿತ್ತು ಜಯಾಗೆ. ಎಲ್ಲರ ನಡುವೆ ಪ್ರಬುದ್ಧಳಾಗಿ, ಎಲ್ಲ ನಿರ್ಧಾರಗಳನ್ನೂ ಒಳಿತು-ಕೆಡುಕುಗಳನ್ನೂ ನೀಗಿಸುತ್ತಾ ಬದುಕಲೇ ಬೇಕಾದ ಅನಿವಾರ್ಯತೆ ಕೆಲವೊಮ್ಮೆ ಸುಸ್ತು ಮಾಡಿಬಿಡುತ್ತಿತ್ತು. ‘ಐ ಕ್ಯಾನ್ ಮ್ಯಾನೇಜ್’ ಎನ್ನುವ ‘ಬಲ’ ದುರ್ಬಲ ಘಳಿಗೆಗಳಲ್ಲಿ ಕಸುವು ಕಳೆದುಕೊಂಡು ಬೆನ್ನಲ್ಲಿ ನಿಧಾನವಾಗಿ ಇರಿಯುತ್ತಲೇ ಇಳಿಯುವ ಥಣ್ಣನೆ ಭರ್ಜಿಯಾಗುತ್ತಿತ್ತು.

ಇದನ್ನು ಅರ್ಥಮಾಡಿಕೊಳ್ಳಲು ಇನ್ನೊಬ್ಬ ಹೆಣ್ಣೇ ಆಗಬೇಕೆಂದೇನೂ ಇಲ್ಲ. ಗಂಡಸರಿಗೂ ಇದು ಅರ್ಥವಾಗಬಲ್ಲ ವಿಷಯವೇ. ಆದರೆ, ಹೆಣ್ಣು ಮಕ್ಕಳು ತಮ್ಮ ಮಾನಸಿಕ ಜಗತ್ತಿನ ಬಗ್ಗೆ ಹಕ್ಕಿನಿಂದ, ಧೈರ್ಯದಿಂದ ಸಮತೋಲಿತವಾಗಿ ಮಾತನಾಡಿದ್ದು ಕಡಿಮೆ. ಅಂಥಾ ಅವಕಾಶಗಳಿರಲಿಲ್ಲ ಅನ್ನುವ ಮಾತನ್ನೂ ಸ್ವಲ್ಪ ಒಪ್ಪಬಹುದಾದರೂ, ಹೆಣ್ಣು ಮಕ್ಕಳು ತಮ್ಮ ಬಗ್ಗೆ ವ್ಯಂಗ್ಯ ಅಥವಾ ಉಡಾಫೆಯ ಮಾತುಗಳು ಬಂದಾಗ ಪ್ರತಿರೋಧ ತೋರಿಸಲು ಕಷ್ಟಪಡುತ್ತಾರೆ.

ಹೀಗಾಗಿ ‘ಹೆಣ್ಣು ಮಕ್ಕಳ ನಡವಳಿಕೆಯೇ ವಿಚಿತ್ರ, ಅದನ್ನು ಬ್ರಹ್ಮನಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎನ್ನುವಂಥ ತಮಾಷೆಯ ಲೇಪನವುಳ್ಳ ಬೇಜವಾಬ್ದಾರಿಯ ಮಾತುಗಳು ಚಾಲ್ತಿಯಲ್ಲಿವೆ. ಇದಕ್ಕೆ ಹೊಣೆ ಯಾರು ಅಂತ ಪ್ರಶ್ನೆ ಕೇಳಿದರೆ, ಸಂವಹನ ಸಾಧ್ಯವಾಗಿಸದ ‘ನಮ್ಮ ಒಳ ಜಗತ್ತು’ ಎನ್ನುವ ಮಹಾನ್ ರಹಸ್ಯಮಯ ತಾಣವೊಂದನ್ನು ಸೃಷ್ಟಿಸಿಕೊಂಡು ಸೇತುವೆಗಳನ್ನು ಕಟ್ಟದೆ ಒಳಗೊಳಗೇ ಸುತ್ತಿಕೊಳ್ಳುತ್ತಾ ಸಂಕೀರ್ಣವಾದ ಕಟ್ಟಡವೊಂದನ್ನು ತಮ್ಮ ಸುತ್ತಲೂ ನಿರ್ಮಿಸಿಕೊಂಡ ಹೆಣ್ಣುಮಕ್ಕಳು ಒಂದು ರೀತಿಯಲ್ಲಿ ಮುಗ್ಧರೆನಿಸಿಕೊಂಡರೂ, ಸಮಾನ ಬಾಧ್ಯಸ್ಥರು ಎನ್ನಬಹುದು.

ನಾವ್ ಹೇಳಿದ್ರೆ ಅರ್ಥ ಆಗಬೇಕಲ್ಲ? ಅಂತ ಕೇಳಬಹುದು. ಆದರೆ, ಮೊದಲಿಗೆ ಹೇಳಿ ನೋಡುವ ಪ್ರಯತ್ನವನ್ನೇ ಮಾಡದೆ ‘ಯಾರಿಗೂ ಅರ್ಥ ಆಗಲ್ಲ’ ಎನ್ನುವ ರಮ್ಯ ದುಃಖದಲ್ಲಿ ಮುಳುಗಿ ಕತ್ತಲ ಕೋಣೆಯ ಬೆಚ್ಚನೆ ಮೂಲೆಯಲ್ಲಿ ಕೂತು ದುಃಖಗಳನ್ನು ಸೊರೆಯುತ್ತಿದ್ದರೆ ಅದಕ್ಕೆ ಪರಿಹಾರದ ಮದ್ದೆಲ್ಲಿಂದ ತರೋದು?

ಜಯಾ ಕೂಡ ಇಂಥದ್ದೇ ಒಂದು ವ್ಯೂಹಕ್ಕೆ ಒಳಗಾಗಿ ಎಲ್ಲವನ್ನೂ ಮ್ಯಾನೇಜ್ ಮಾಡಲು ಹೋಗಿ ಒಳಗೊಳಗೇ ಕುಸಿಯುತ್ತಿದ್ದಳು. ಅದು ಎಲ್ಲರಿಗೂ ಅರ್ಥವಾಗಿತ್ತು. ಈ ಕಷ್ಟದ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಹೆಗಲು ಕೊಟ್ಟು ನಿಲ್ಲಬೇಕಂತ ಏಕಕಾಲಕ್ಕೆ ನಿರ್ಧರಿಸಿದಂತೆ ಇತ್ತು. ಮಾನಸಿಕ ಬೆಂಬಲ ಒಂದು ರೀತಿಯಲ್ಲಿ ವಾಚ್ಯವಲ್ಲದ, ಯಾವ ಕಮಿಟ್‌ಮೆಂಟ್ ಅನ್ನೂ ಬೇಡದ ಒಂದು ಮಾರ್ಗ. ಆದರೆ, ಮಾತಿನಲ್ಲಿ ದೃಢಪಡಿಸುತ್ತಾ, ಆಗಾಗ ಕಾಳಜಿಯ ಬಾಹ್ಯ ಅಭಿವ್ಯಕ್ತಿಯೂ ಆದರೆ ಪರಿಣಾಮ ಇನ್ನೂ ಹೃದ್ಯವಾಗಿರುತ್ತದೆ.

‘ಜಯಾ ದೀದಿ, ಟೀ ಮಾಡ್ಲಾ?’ ಚಿತ್ರಾ ಇನ್ನೊಮ್ಮೆ ಕೇಳಿದಾಗ ಜಯಾ ಕಣ್ಣಲ್ಲಿ ನೀರು ಬಳಬಳ ಸುರಿಯಲಾರಂಭಿಸಿತು. ಒಳಗಿನ ಧೈರ್ಯ ಸಂಪೂರ್ಣ ಕುಸಿದ ಮೊದಲ ಚಿನ್ಹೆ ಇದು. ಸರಳಾ ಭುಜ ಒತ್ತಿ ಹಿಡಿದರು. ‘ನಿಮಗೇನೂ ಆಗಲ್ಲ ಕಣ್ರೀ. ಮುನಿರಾಜು ವಿಷಯ ಮುಗೀತು. ಅರ್ಥ ಮಾಡಿಕೊಳ್ಳಿ. ಹೆದರಿಕೊಂಡು ಭೂತವನ್ನ ಭುಜದ ಮೇಲೆ ಸವಾರಿ ಮಾಡಿಸ್ತಾ ಇದ್ದರೆ ನಿಮ್ಮ ಭವಿಷ್ಯ ನೀವೇ ಕತ್ತಲು ಮಾಡಿಕೊಂಡ ಹಾಗೆ. ಇಳಿಸಿ ಬಿಸಾಕ್ರಿ ಅದನ್ನ...’

‘ಅಯ್ಯೋ ಸರಳಾ... ಎಷ್ಟು ಪ್ರಯತ್ನಪಟ್ಟರೂ ಆಗ್ತಿಲ್ಲ... ಆಗಾಗ ಕಣ್ಣ ಮುಂದೆ ನನ್ನ ತಪ್ಪುಗಳು ಅಜಾಗರೂಕತೆಗಳು ಬರ್ತಾನೇ ಇರುತ್ತವೆ. ಹೇಗೆ ಪರಿಹಾರ ಮಾಡಿಕೊಳ್ಳಲಿ...’
‘ದೇವರು ಇದ್ದಾನಾ?’ ‘ಆಂ?’ ‘ನಿಮ್ಮ ನಂಬಿಕೆಯಲ್ಲಿ ದೇವರು ಇದ್ದಾನೇನ್ರೀ?’ ‘ಇದ್ದಾನೆ. ತಿರುಪತಿ ವೆಂಕಟರಮಣ ನನ್ನ ಕಾಪಾಡುವ ತಂದೆ... ಅವನೇ ನನ್ನ ಶಕ್ತಿ...’
‘ಅವನನ್ನ ನಂಬ್ತೀರಲ್ವಾ?’ ‘ಹೌದು’

‘ಹಾಗಿದ್ದ ಮೇಲೆ ಅವನ ಉಡಿಗೆ ಹಾಕ್ರೀ ಈ ದೆವ್ವಾನಾ! ಅವನು ಅದನ್ನು ನೋಡ್ಕೋತಾನೆ! ವೆಂಕಟರಮಣ ನಿಮ್ಮ ದೇವರು ಅಂದ ಮೇಲೆ ನನ್ನ ತಪ್ಪುಗಳನ್ನೂ ಅವನು ಹೊಟ್ಟೆಗೆ ಹಾಕ್ಕೊಂಡು ದಾರಿ ತೋರಿಸ್ತಾನೆ. ಪುಣ್ಯಕ್ಕೆ ಅವನು ಬಾಧ್ಯಸ್ಥನಾದರೆ, ಪಾಪಕ್ಕೂ ಅವನೇ ದಿಕ್ಕಲ್ಲವೇನು? ಜಯಾ, ನೀವು ಮಾಡಿರೋದು ಮೋಸ ಅಲ್ಲ, ಹಾಗಾಗಿ ಅದು ಪಾಪ ಅಲ್ಲ. ಬರೀ ‘ತಪ್ಪು’ ಅಷ್ಟೇ. ಸಾಕು ನಿಲ್ಲಿಸ್ರೀ ಇಲ್ಲಿಗೆ...’ ಸರಳಾ ಬಹುತೇಕ ಜೋರು ಮಾಡುವಂತೆ ಹೇಳಿದರು. ಜಯಾ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡುವುದಕ್ಕೂ ಇನ್ಸ್‌ಪೆಕ್ಟರು ಮನೆ ಬಾಗಿಲ ಹತ್ತಿರ ಬಂದು ನಿಲ್ಲುವುದಕ್ಕೂ ಸರಿಯಾಗಿ ಬಿಟ್ಟಿತು.

ಈ ಸಾರಿ ಸರಳಾನೇ ಬಾಗಿಲ ಹತ್ತಿರ ಹೋಗಿ ನಿಂತರು. ‘ಸಾರ್, ನಿಮ್ಮನ್ನು ಒಳಗೆ ಬನ್ನಿ ಅಂತ ಕರೆಯೋ ಅಷ್ಟು ಸಂದರ್ಭ ಸರಿಯಾಗಿಲ್ಲ. ಅದೇನು ಪ್ರಶ್ನೆ ಇದೆಯೋ ಅದನ್ನು ಫೋನಿನಲ್ಲಿ ಬಗೆಹರಿಸಿಕೊಳ್ಳಬಹುದಲ್ಲ? ದಯವಿಟ್ಟು ಅರ್ಥ ಮಾಡಿಕೊಳ್ಳಿ ಸರ್. ಆ ಮೇಲಿನ ಮನೆ ಹುಡುಗರಿಗೂ ನಮಗೂ ಯಾವ ಸಂಪರ್ಕವೂ ಇರಲಿಲ್ಲ. ಬೇರೆಯವರನ್ನು ವಿಚಾರಿಸಿ ನೋಡಿ ಸರ್. ನಮ್ಮ ಮನೆಯಲ್ಲಿ ಪರಿಸ್ಥಿತಿ ಅಷ್ಟು ಸರಿ ಇಲ್ಲ. ಕ್ಷಮಿಸಿ...’

‘ಇಲ್ಲ ಮೇಡಮ್. ನಿಮಗೆ ತೊಂದರೆ ಕೊಡಕ್ಕೆ ಬರಲಿಲ್ಲ. ಮಗುವಿಗೆ ನಮ್ಮ ಹೆಸರಲ್ಲಿ ಹೆದರಿಸಬೇಡಿ ಅಂತ ತಮಾಷೆ ಮಾಡಕ್ಕೆ ಬಂದೆ. ನಮ್ಮ ಇನ್ವೆಸ್ಟಿಗೇಷನ್ ಕಂಪ್ಲೀಟ್ ಆಗಿದೆ. ಮತ್ತೆ ನಿಮ್ಮ ಸಹಕಾರ ಬೇಕಾದ್ರೆ ಫೋನ್ ಮಾಡ್ತೀವಿ. ಅಂದ ಹಾಗೆ ನಾನೂ ಮುನಿರಾಜುವೂ ಸ್ನೇಹಿತರು.’ ‘ಅವರು ನಮಗೆ ಗೊತ್ತಿಲ್ಲ ಸರ್’ ‘ನಿಮಗೆ ಗೊತ್ತಿದ್ದರು ಅನ್ನೋದು ನನಗೆ ಗೊತ್ತಿದೆ ಮೇಡಮ್. ಅವನು ಇಲ್ಲಿಗೆ ಬರುತ್ತಿದ್ದುದು ನನಗೆ ಗೊತ್ತಿದೆ. ಅವನೂ ಹೇಳಿದ್ದ ಜಯಾ ಅವರ ಬಗ್ಗೆ’ ಜಯಾ ಅಳು ಗಕ್ಕನೆ ನಿಂತಿತು.

‘ಅದಕ್ಕೆ?’ ಸರಳಾ ಕೂಡ ಬಿಟ್ಟುಕೊಂಡುವಂತಿರಲಿಲ್ಲ. ‘ಅವನು ಅರೆಸ್ಟ್ ಆಗಿ ಜೈಲಿಗೆ ಹೋದ ಮೇಲೆ ಮೊನ್ನೆ ಅವನಿಗೆ ಬೈಲ್ ಸಿಕ್ತು. ಬಿಡುಗಡೆ ಆಗಿದ್ದಾನೆ. ಆದರೆ ನಿಮಗೆ ಅವನ ಸಹವಾಸ ಬೇಡ. ಅದನ್ನೇ ಹೇಳೋಕೆ ಪ್ರಯತ್ನಪಡ್ತಿದ್ದೆ. ಇಲ್ಲಾಂದರೆ ಅವನ ಕೇಸಿನಲ್ಲಿ ಇವರೂ ಕಷ್ಟ ಅನುಭವಿಸಬೇಕಾಗುತ್ತೆ. ಹುಷಾರು...’ 

ಏಡುಕೊಂಡಲವಾಡನಿಗೆ ಮೊರೆ ಆಗಲೇ ಮುಟ್ಟಿಬಿಟ್ಟು ಪರಿಹಾರವನ್ನೂ ಕಳಿಸಿಬಿಟ್ಟಿದ್ದ. ಆದರೆ ಇನ್ನೊಂದು ವಿಷಯ ಬಾಕಿ ಇತ್ತು. ಅದನ್ನ ಹೇಳುವ ಮುನ್ನ ಇನ್ಸ್‌ಪೆಕ್ಟರು ಕಣ್ಣೀರ ಧಾರೆ ಹರಿಯುವುದು ನಿಲ್ಲಲಿ ಅಂತ ಕಾದರು. ‘ಮೇಲಿನ ಮನೆಯಲ್ಲಿ ಸಿಂಪಲ್ ಆದ ಕಳ್ಳತನವಲ್ಲ ಇನ್ನೇನೋ ನಡೆದಿದೆ ಅಂತ ಗುಮಾನಿ ಇದೆ ನಮಗೆ. ಹುಡುಗಿಯ ಬಟ್ಟೆ ಸಿಕ್ಕಿದೆಯಲ್ಲ? ಅದು ಯಾರದ್ದು ಅಂತ ಕೇಳಿದರೆ ಎಲ್ಲರೂ ಒಂದೊಂಥರಾ ಉತ್ತರ ಕೊಟ್ಟಿದಾರೆ. ಸಂದರ್ಭ ಬಿದ್ದರೆ ಮತ್ತೆ ಇಲ್ಲಿಗೆ ಬರ್ತೀವಿ’.

‘ಅಯ್ಯೋ ಬರೀ ಆ ಬಟ್ಟೆ ಯಾವ ಹುಡುಗಿಯದ್ದು ಅಂತ ಕಂಡುಹಿಡಿಯೋಕೆ ಇನ್‌ವೆಸ್ಟಿಗೇಶನ್ನಾ?’ ಜಯಾ ಅಕಸ್ಮಾತ್ ಎಂಬಂತೆ ಮೂರ್ಖತನದ ಪ್ರಶ್ನೆ ಕೇಳಿಬಿಟ್ಟರು.ಅದರಿಂದ ಇನ್ಸ್‌ಪೆಕ್ಟರಿಗೆ ಸ್ವಲ್ಪ ಮುಖಭಂಗವಾದಂತಾದರೂ ಸುಧಾರಿಸಿಕೊಂಡು ‘ಬಟ್ಟೆ ಯಾರದ್ದು ಅಂತಷ್ಟೇ ಕಂಡುಹಿಡಿಯೋದಲ್ಲ, ಅದರಿಂದ ಬೇರೆ ಸತ್ಯಗಳನ್ನೂ ತಿಳಿದುಕೊಳ್ಳಬೇಕಿದೆ.

ನಾಲ್ಕು ಜನ ಹುಡುಗರ ನಡುವೆ ಒಬ್ಬ ಹುಡುಗಿ ಇಲ್ಲೇ ಉಳಿದು ಸ್ನಾನ ಗೀನ ಮಾಡುವಂಥ ಕೆಲಸ ಯಾವುದು ಮಾಡ್ತಾ ಇದ್ದಳು ಅಂತ. ಅಲ್ಲದೆ ಕಳ್ಳನ ಬಗ್ಗೆ ಈ ಹುಡುಗರಿಗೆ ಗೊತ್ತಿರೋ ಹಂಗಿಲ್ಲ. ಆ ಹುಡುಗಿಗೇನಾದರೂ ಗೊತ್ತಾ ಅಂತ ಕೇಳಬೇಕು. ಇರ್ಲಿ ನಿಮಗ್ಯಾಕೆ ಇದೆಲ್ಲ...’ ಅಂತ ಸ್ವಲ್ಪ ದರ್ಪದಿಂದಲೇ ಹೇಳಿದರು.

ಈ ಸಾರಿ ಬಾಯಿ ತೆರೆಯಬಾರದು ಅಂತ ಜಯಾಗೆ ತಾಕೀತು ಮಾಡಿದ್ದು ಚಿತ್ರಾ. ಅದಕ್ಕಾಗಿ ಜಯಾನ ಕೈ ಹಿಸುಕಿ ಸಾಕಾಗಿ ಒಂದು ಸಾರಿ ಕತ್ತು ಹಿಸುಕುವಷ್ಟು ಸಿಟ್ಟು ಬಂದುಬಿಟ್ಟಿತ್ತು ಅವಳಿಗೆ. ‘ಓಕೆ ಸರ್. ಹೋಗಿ ಬನ್ನಿ’ ಅಂತ ಸರಳಾ ರಪ್ಪನೆ ಬಾಗಿಲು ಹಾಕಿಕೊಂಡರು. ‘ಅಂದ್ರೆ ಮೇಲಿನ್ ಮನೆ ಹುಡುಗರಿಗೆ ಗರ್ಲ್ ಫ್ರೆಂಡ್ ಇದ್ದಳೇನ್ರೀ?’ ಸೂಸನ್ ಆಶ್ಚರ್ಯದಿಂದ ಕೇಳಿದಳು.

‘ಇದ್ದರೂ ಇರಬಹುದು..’ ಅಂದರು ಸರಳಾ. ‘ಅಯ್ಯೋ! ಅವರ್‍್ಯಾರೂ ನಮ್ಮನ್ನು ಒಂದು ದಿನವೂ ಮಾತಾಡಿಸೋಕೆ ಪ್ರಯತ್ನ ಪಡಲಿಲ್ವಲ್ಲಾ? ನಾವೆಲ್ಲ ಇಲ್ಲೇ ಓಡಾಡಿಕೊಂಡಿದ್ವಲ್ಲಾ? ನಾವು ಕಣ್ಣಿಗೇ ಕಾಣಲಿಲ್ವಾ ಹೆಂಗೆ?’ ಸೂಸನ್ ಮತ್ತು ವಿಜಿ ಏಕಕಾಲಕ್ಕೆ ದಿಗ್ಭ್ರಮೆಗೊಳಗಾದರು.

ಅಸ್ತಿತ್ವ ವಾದವನ್ನು ಮೂಲೆಗೆ ಬಿಸಾಕಿದ ಹುಡುಗಿಯರು ಮೇಲಿನ ಮನೆ ಹುಡುಗರಿಗೆ ತಮ್ಮನ್ನು ಕಂಡರೆ ಆಕರ್ಷಣೆ ಬೆಳೆಯದೆ ಇರುವುದಕ್ಕೆ ಕಾರಣ ಹುಡುಕುವುದನ್ನು ತಮ್ಮ ಹೆಣ್ತನದ ಅಸ್ಮಿತೆಯ ಮೂಲ ಪ್ರಶ್ನೆಯಾಗಿ ನೋಡತೊಡಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT