ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ್ ಮೇ ಮೋದಿ ಜೀತ್‌ಗಯಾ

ಅಕ್ಷರ ಗಾತ್ರ

ದೆಹಲಿ ಬಿಜೆಪಿ ಕಚೇರಿ ಬಳಿ ಪಟಾಕಿಗಳು ಸಿಡಿಯುತ್ತಿದ್ದುದನ್ನು ಕಂಡು ಪೆಕರ ಗಾಬರಿಯಾದ. ಯಾರಾದ್ರೂ ಟೆರರಿಸ್ಟು ಪಟಾಕಿ ತರಹದ ಬಾಂಬುಗೀಂಬು ಇಟ್ಟುಬಿಟ್ರಾ ಹೇಗೆ? ಸಾಮಾನ್ಯವಾಗಿ ಕಾಂಗ್ರೆಸ್ ಕಚೇರಿ ಮುಂದೆ ಆಕಾಂಕ್ಷಿಗಳು ಗಿರಕಿ ಹೊಡೆಯುತ್ತಿರುತ್ತಾರೆ. ಬಿಜೆಪಿ ಕಚೇರಿ ಮುಂದೆ ನೊಣ ಹೊಡೀತಾ ಇರೋದನ್ನು ಕಣ್ಣಾರೆ ನೋಡಿದ್ದೇನೆ. ಇವತ್ತು ಈ ಪಾಟಿ ಜನ ಸೇರಿರೋದನ್ನ ನೋಡಿದ್ರೆ ಮೋದಿಗೆ ವೀಸಾ ಸಿಕ್ಕಿರೋ ಹಾಗೆ ಕಾಣುತ್ತೆ, ಏನಾದ್ರೂ ಸರಿ ನೋಡೇ ಬಿಡೋಣ ಎಂದು ಪೆಕರ ಸರಸರನೆ ಬಿಜೆಪಿ ಕಚೇರಿಯತ್ತ ಹೆಜ್ಜೆಹಾಕಿದ.

ಅಲ್ಲಿ ಕೇಜಿಗಟ್ಟಲೆ ಸ್ವೀಟು ತರಿಸಿ ಕಮಲನಾಭಂದಿರು ಪರಸ್ಪರರ ಬಾಯಿಗಿಡುತ್ತಾ, ಒಬ್ಬರನ್ನೊಬ್ಬರು ಆಲಂಗಿಸುತ್ತಾ ಸಂಭ್ರಮಿಸುತ್ತಿದ್ದರು. ಎಲ್ಲರೂ ಎರಡು ಬೆರಳುಗಳನ್ನು `ವಿ' ಆಕಾರದಲ್ಲಿ ತೋರಿಸುತ್ತಾ ವಿಕ್ಟರಿ, ವಿಕ್ಟರಿ ಎಂದು ಕೂಗುತ್ತಿದ್ದರು. `ನಮೋಕಿ ಜೈ' ಎಂದು ಜೈಕಾರ ಹಾಕುತ್ತಿದ್ದರು.

ಬಿಜೆಪಿಯಲ್ಲಿ ಭಾರೀ ಬೆಳವಣಿಗೆ ಆದಂತಿದೆ. ತಕ್ಷಣ ಫ್ಲ್ಯಾಷ್ ಮಾಡಬೇಕು ಎಂದು ಜಾಗೃತಗೊಂಡ ಪೆಕರ, `ಯೇ ಕ್ಯಾ ಹೋ ರಹಾ ಹೈ' ಎಂದು ಸಂತೋಷದಿಂದ ಜೈಕಾರ ಹಾಕುತ್ತಿದ್ದ ಕಮಲನಾಭನೊಬ್ಬನನ್ನು ಪ್ರಶ್ನಿಸಿದ.

`ಹಮಾರ ಮೋದಿಜೀ ಕರ್ನಾಟಕ್‌ಮೇ ಜೀತ್‌ಗಯಾ' ಎಂದು ಏದುಸಿರುಬಿಡುತ್ತಾ ಹೇಳಿದ ಅಭಿಮಾನಿ ಮತ್ತೊಮ್ಮೆ `ನಮೋನಮೋ' ಎಂದು ಭಜನೆ ಮಾಡಲಾರಂಭಿಸಿದ.

ಪೆಕರನಿಗೆ ಸ್ವಲ್ಪವೂ ಅರ್ಥವಾಗಲಿಲ್ಲ. ಕರ್ನಾಟಕದಲ್ಲಿ ನಡೆದ ಜಂಗೀಕುಸ್ತಿಯಲ್ಲಿ ದೊಡ್ಡಗೌಡ ಅಂಡ್ ಸನ್ಸ್ ಹಾಕಿದ ಪಟ್ಟುಗಳನ್ನೆಲ್ಲಾ ಚಿತ್‌ಮಾಡಿ, ತೊಡೆತಟ್ಟಿ ಎರಡೂ ಕ್ಷೇತ್ರಗಳಲ್ಲಿ ಗೆದ್ದು ಬಂದದ್ದು ಅಯ್ಯ ಅವರ ಕಾಂಗ್ರೆಸ್. ದಳದವರಿಗೆ ಸಖತ್ತಾಗಿ ಕಾವೇರಿ ನೀರು ಕುಡಿಸಿ, ಮಾರಸ್ವಾಮಿಗಳ ಪ್ರತಿಪಕ್ಷ ನಾಯಕ ಸ್ಥಾನಕ್ಕೂ, ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ಬೆಂಕಿ ಇಟ್ಟದ್ದು ಅಯ್ಯ.

ಅಯ್ಯ ಅವರ ಸರ್ಕಾರಕ್ಕೆ ಆರು ತಿಂಗಳು ಟೈಂ ಕೊಡ್ತೀನಿ. ಆಮೇಲೆ ಭೂತ ಬಿಡಿಸ್ತೀನಿ ಎಂದು ಬೊಬ್ಬಿರಿಯುತ್ತಿದ್ದ ಮಾರಸ್ವಾಮಿಗಳು ಹಂಡ್ರೆಡ್ ಡೇಸ್‌ಗೇ ಔಟಾದದ್ದು, ಅಯ್ಯ ಅವರಿಗೆ ಶತದಿನೋತ್ಸವ ಸಂದರ್ಭದಲ್ಲಿ ಸಿಕ್ಕ ಗಿಫ್ಟು. ಬಿಜೆಪಿ ಜೊತೆ ಸೇರಿಕೊಂಡು `ದೋಸ್ತ್ ದೋಸ್ತ್ ನಾ ರಹಾ' ಎಂದು ಹಾಡುತ್ತಾ ಒಂದಾದರೂ, ಜನ ಅಪವಿತ್ರ ಮೈತ್ರಿ ಅಂತ ಗುರುತಿಸಿ, ಏಳ್ಕೆರೆ ನೀರು ಕುಡಿಸಿ ಕಳುಹಿಸಿದರು. ಅಂತಹದರಲ್ಲಿ ದೆಹಲಿ ಕಮಲನಾಭಂದಿರು ಮೈಮರೆತು ಕುಣೀತಾ ಇರೋದು ನೋಡಿದ್ರೆ ಸಮ್‌ಥಿಂಗ್ ರಾಂಗ್ ಆಗಿರೋ ತರಹ ಇದೆ ಎಂದು ಪೆಕರ ಮತ್ತಷ್ಟು ವಿಚಾರಣೆಗೆ ಮುಂದಾದ.

`ಸ್ವಾಮಿ, ಕರ್ನಾಟಕದ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರ್ರಮ್ ಯಾ ಅಳ್ತಾಅಳ್ತಾನೇ ಗೆದ್ದಿದ್ದಾರೆ. ಬ್ಯಾಂಗಳೂರ್ ರೂರಲ್‌ನಲ್ಲಿ ಕಾಂಗ್ರೆಸ್ ಪಾರ್ಟಿ ದಳದ ಫ್ಯಾಮಿಲಿ ಮೆಂಬರ್‌ನ ಚಿಂದಿ ಮಾಡಿದೆ. ಎರಡೂ ಕಡೆ ಬಿಜೆಪಿ ಕ್ಯಾಂಡಿಡೇಟ್ ನಿಲ್ಲಿಸದೆ, ಗೌಡ ಅಂಡ್ ಸನ್ಸ್‌ಗೆ ಸಪೋರ್ಟ್ ಮಾಡಿದ್ದೀರಿ. ಅಶೋಕ ದಂಡಯಾತ್ರೆಯೂ ದಂಡವಾಗಿದೆ. ನ್ಯಾಯವಾಗಿ ಶೋಕಾಚರಣೆ ಮಾಡಬೇಕಾದ ನೀವು ಸಂಭ್ರಮಾಚರಣೆ ಮಾಡ್ತಾ ಇದ್ದೀರಿ. ಏನೂ ಅರ್ಥವಾಗ್ತಾ ಇಲ್ಲವಲ್ಲ? ವಾಟ್ ಈಸ್ ದಿಸ್ ಸಾರ್' ಎಂದು ಪೆಕರ, ಕಮಲ ಪಕ್ಷದ ಎಲ್ಲ ಡಿಂಗುಡಾಂಗು ಟಿಂಗುಟಾಂಗು ನಾಯಕರುಗಳನ್ನೆಲ್ಲಾ ಪ್ರಶ್ನಿಸಿದ.

`ಅರೆರೆ ಭಯ್ಯೊ, ನೀವು ರಾಜಕೀಯವಾಗಿ ಬಚ್ಚಾ ಇದ್ದೀರಿ. ಕಾಂಗ್ರೆಸ್ ಗೆದ್ದಿರಬಹುದು. ಆದರೆ ಅದು ಗೆಲುವಲ್ಲ, ಸೋಲು. ಜನತಾದಳದ್ದು ಸೋಲಲ್ಲ, ನಿರ್ನಾಮ. ಕ್ಯಾಂಡಿಡೇಟ್ ನಿಲ್ಲಿಸದೇ ಬಿಜೆಪಿ ಗೆದ್ದಿದೆ. ಕರ್ನಾಟಕದ ಎರಡೂ ಕಡೆ ಗೆದ್ದಿರುವುದು ಮೋದಿ. ಈ ಚುನಾವಣೆಯಿಂದ ಕರ್ನಾಟಕದಲ್ಲಿ ಮೋದಿ ಅಲೆ ಇರುವುದು ಸ್ಪಷ್ಟವಾಗಿದೆ. ಹೀಗಿರುವಾಗ ಸಂಭ್ರಮಾಚರಣೆ ಮಾಡೋದು ಬಿಟ್ಟು ತಿಥಿ ಊಟ ಮಾಡೋಕ್ಕಾಗುತ್ತಾ?'

ಕಮಲ ಪಕ್ಷದ ನಾಯಕರೊಬ್ಬರು ದಬಾಯಿಸಿದರು.

`ಸ್ವಾಮಿ, ನಿಮ್ಮ ಮಾತು ಕೇಳಿದರೆ  `ಸೂಪರ್' ಪಿಕ್ಚರ್‌ನಲ್ಲಿ ಉಪೇಂದ್ರ ಹೇಳುವ ಡೈಲಾಗ್ ತರಹ ಇದೆ. ಗೆಲುವನ್ನು ಸೋಲು ಅಂತೀರಾ. ಸೋಲನ್ನು ಅದು ಸೋಲಲ್ಲ ಗೆಲುವು ಅಂತೀರಾ! ಈ ಉಪಚುನಾವಣೆಯಲ್ಲಿ ಯಾರೊಬ್ಬರೂ ಮೋದಿ ಹೆಸರು ಹೇಳಿಕೊಂಡು ಮತ ಕೇಳಲೇ ಇಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ಸಮುದ್ರವೂ ಇಲ್ಲ, ಗಿಮುದ್ರವೂ ಇಲ್ಲ. ನೀವೆಲ್ಲಿ ನೋಡಿದ್ರಿ ಅಲೇನಾ?!' ಎಂದು ಪೆಕರ ಪ್ರಶ್ನಿಸಿದ.

`ಪೇಪರ್‌ವಾಲಾ ಆಗಿ ನಿಮಗೇ ಇದು ಗೊತ್ತಿಲ್ವಾ? `ಸಿದ್ದರಾಮಯ್ಯ ಕಾಂಗ್ರೆಸ್‌ನ ಮೋದಿ' ಅಂತ ಹಂಬರೀಷ್ ಹೇಳಿಲ್ವ? ಅಯ್ಯ ಆವರು ಮೋದಿಯ ಹಾಗೆ, ಆದ್ದರಿಂದ ಜನ ಮೋದಿಗೆ ಓಟು ಹಾಕಿದ್ದಾರೆ. ಅಯ್ಯ ಅವರು ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿರುವುದರಿಂದ ಎರಡೂ ಕ್ಷೇತ್ರಗಳಲ್ಲಿ ಮೋದಿ ಅಲೆ ಬೀಸಿದೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಮೋದಿಗೇ ಜಯ' ಎಂದು ವಿವರಿಸಿದ ಕಮಲನಾಭ, ಮಿಠಾಯಿ ಖಾವೋ ಎಂದು ಸಿಹಿ ತಿಂಡಿ ನೀಡಲು ಮುಂದಾದ.

`ಹಂಬರೀಷ್ ತಪ್ಪಾಗಿ ಡೈಲಾಗ್ ಹೇಳಿದ್ದಾರೆ ಅಂತ ಅಯ್ಯ ಅವರೇ ಹೇಳಿದ್ದಾರಲ್ಲಾ? ಅವರದೇನಿದ್ರೂ ಅರಸು ಅವರ ಗರಡಿ. ಮೋದಿಗೀದಿ ಹೆಸರೇ ಎತ್ತಬೇಡಿ ಅಂತ ಕಟ್ಟಪ್ಪಣೆ ಆಗಿದೆಯಲ್ಲಾ' ಎಂದು ಪೆಕರ ವಾಸ್ತವ ಸ್ಥಿತಿಯನ್ನು ಹೇಳಲಾರಂಭಿಸಿದ.
`ರೀ ಪೆಕರ ಅವರೇ, ಹಂಬರೀಷ್ ಬಾಯಲ್ಲಿ ಮಚ್ಚೆ ಇದೆ. ಅವರು ಹೇಳಿದ್ದೆಲ್ಲಾ ನಿಜ ಆಗುತ್ತೆ ಅಂತ ಅವರೇ ಹೇಳಿಕೊಂಡಿದ್ದಾರೆ. ಮೋದಿ ಅವರಂತೆ  ಅಯ್ಯ ಅವರೂ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಮೂರು ತಿಂಗಳಿಗೇ ಇಷ್ಟೊಂದು ಭಾರೀ ಅಭಿವೃದ್ಧಿ ಮಾಡಿರುವಾಗ ಮುಂದಿನ ದಿನಗಳಲ್ಲಿ ಅವರು ರಾಷ್ಟ್ರವನ್ನು ಸುತ್ತುವ ಕಾಲ ದೂರವಿಲ್ಲ, ಇವರು ದಕ್ಷಿಣದ ಮೋದಿ, ಅವರು ಉತ್ತರದ ಮೋದಿ. ಅವರ ಬಾಯಲ್ಲಿ ಮಚ್ಚೆ ಇರೋದ್ರಿಂದ ಇದು ನಿಜ ಆಗುತ್ತೆ, ಕರ್ನಾಟಕದಲ್ಲಿ ಮೋದಿ ಅಲೆ ಬೀಸುತ್ತೆ' ಅತಿ ವಿಶ್ವಾಸದಿಂದ ಕಮಲನಾಭರ ಮುಖ ಮೊರವಾಯಿತು.

`ಇದು ಸ್ವಲ್ಪ ಅತಿಯಾಯ್ತು ಬಿಡಿ ಸಾರ್. ಯಾರೋ ಗೆದ್ರೆ ಯಾರೋ ಬೆನ್‌ತಟ್ಕೊಂಡ್ರೆ ಹೇಗೆ? ಅಯ್ಯ ಅವರು ಪಕ್ಕಾ ಅಹಿಂದ. ಮೋದಿದು ಕಟ್ಟಾ ಹಿಂದುತ್ವ. ಎಲ್ಲೆಂದೆಲ್ಲಿಯ ಸಂಬಂಧ ಸ್ವಾಮಿ? ಇಂಥಾ ಹೋಲಿಕೆಯನ್ನೆಲ್ಲಾ ಮಾಡಬೇಡಿ, ಅಯ್ಯ ಅವರಿಗೂ, ಅವರ ಬೆಂಬಲಿಗ ಬೆಂಬುಜೀಗಳಿಗೂ ಸಿಟ್ಟು ಬರುತ್ತೆ' ಎಂದು ಪೆಕರ ವಾದ ಬೆಳೆಸಿದ.

`ಬಹಳ ವ್ಯತ್ಯಾಸ ಇಲ್ಲಾ ಪೆಕರ ಅವರೇ, ಅಹಿಂದದಲ್ಲೇ ಇರುವ `ಹಿಂದ'ಕ್ಕೆ ಒಂದು ಕೊಂಬು ಹಾಕ್ಕೊಳ್ಳಿ `ಹಿಂದು' ಆಗುತ್ತೆ. ಅಯ್ಯ ಅವರಿಗೂ ಮೋದಿ ಅವರಿಗೂ ಬಹಳ ಹತ್ರಹತ್ರ ಸಂಬಂಧ ಇದೆ. ಮೋದಿಸಾಬ್ ರಾಮಮಂದಿರ ಕಟ್ಟಬೇಕು ಅಂತ ಹಂಬಲಿಸ್ತಾ ಇದಾರೆ. ಅಯ್ಯ ಅವರು ಹೆಸರಲ್ಲೇ ಅದನ್ನು ಇಟ್ಕೊಂಬಿಟ್ಟಿದ್ದಾರೆ. ಅಯ್ಯ ಅವರದು ಸಿಂಪಲ್ ಡ್ರೆಸ್ಸು, ನಮೋ ಅವರದೂ ಅಷ್ಟೇ ಸಿಂಪಲ್. ಇವ್ರ ಗುಜರಾತಿನ ಮಣ್ಣಿನ ಮಗ. ಅವ್ರ ಮೈಸೂರಿನ ಮಣ್ಣಿನ ಮಗ...' ಕಮಲ ಮುಖಂಡರು ರೀಲು ಸುತ್ತುತ್ತಲೇ ಇದ್ದರು.

`ಸಾಕು ಸ್ವಾಮಿ, ಇಂಥ ಹೋಲಿಕೆಯನ್ನೇ ಇನ್ಮುಂದೆ ಯಾರೂ ಮಾಡಬಾರದು ಅಂತ ಅಯ್ಯ ಅವರು ಕಟ್ಟಪ್ಪಣೆ ಕೊಟ್ಟಿದ್ದಾರೆ. ಏನೋ ಒಂದು ಕಾಲ್ದಲ್ಲಿ ಅನಿವಾರ್ಯವಾಗಿ ಅಯ್ಯ ಅವರು ಜನತಾ ಪರಿವಾರದಲ್ಲಿದ್ರು ಅನ್ನೋ ಕಾರಣಕ್ಕೆ ಏನು ಹೇಳಿದ್ರೂ ನಡೆಯುತ್ತಾ? ಮೋದಿ ಈಗಾಗ್ಲೆ ಪಿಎಮ್ಮೇ ಆಗೊದ್ರು ಅನ್ನೋ ಕನಸು ಕಾಣ್ತಾ ಇದೀರೋ ಹೇಗೆ? ನಮ್ಮ ಮ.ಮೋ.ಸಿಂಗು ನೋಡೋಕೆ ವೀಕಾಗಿ ಕಾಣ್ತಾ ಇದ್ರೂ, ಭಾರೀ ಸ್ಟ್ರಾಂಗು. ಅವರ ಸ್ವಾತಂತ್ರ್ಯೋತ್ಸವ ಭಾಷಣಾನ ಟೀಕೆ ಮಾಡಿದಾಕ್ಷಣ ಪಿಎಂ ಕ್ಯಾಂಡಿಟೇಟ್ ಆಗೋಕೆ ಆಗುತ್ತಾ? ಅವರ ತರಹಾನೇ ನಮ್ಮ ಅಯ್ಯ. ಎಲ್ಲಾ ಸೈಲೆಂಟ್. ನೋಡಿ ರಾಗಿ ಭಾಗ್ಯ, ಜೋಳ ಭಾಗ್ಯ ಹೇಗೆ ತಂದ್ರೂ ಅಂತ...' ಪೆಕರ ಪ್ರವಚನ ಆರಂಭಿಸಿದ.

`ಸರಿ ಬಿಡಿ, ನೀವು ಏನು ಹೇಳಿದ್ರೂ ನಂಬಲ್ಲ. ಅಯ್ಯ ಅವರ ಬೋಪರಾಕ್ ಸಾಹಿತಿಗಳ ತರ ಮಾತಾಡ್ತಾ ಇದ್ದೀರಾ. ನಂಬಿದ್ರೆ ನಂಬಿ, ಬಿಟ್ರೆ ಬಿಡಿ, ಅಯ್ಯ ಅವರು ನ್ಯಾಷನಲ್ ಲೀಡರ್. ಲೋಕಸಭೆ ಎಲೆಕ್ಷನ್ ಬರಲಿ ನೋಡಿ, ನೇಷನ್ ಸುತ್ತುತ್ತಾರೋ ಇಲ್ವೋ ನೋಡ್ತಿರಿ...'
ಇಲ್ಲಿದ್ದರೆ ಇನ್ನು ಪ್ರಯೋಜನ ಇಲ್ಲ ಎಂದುಕೊಂಡು ಪೆಕರ, ಕರ್ನಾಟಕ ಭವನದತ್ತ ಬಂದ. ಆಕಸ್ಮಿಕವಾಗಿ ಹಂಬರೀಷ್ ಅವರನ್ನು ಅಲ್ಲಿ ಕಂಡು ಖುಷಿಯಾಗಿ `ಏನ್ಸಾರ್ ನಿಮ್ ಮಾತು ನಿಜಾ ಆಗೋಯ್ತಲ್ಲ. ನಿಮ್‌ನಾಲ್ಗೇಲಿ ಮಚ್ಚೆ ಇರೋದು ನಿಜಾ ಆಯ್ತು' ಎಂದುಬಿಟ್ಟ.

`ಸ್ವಲ್ಪ ಬಾಯ್ಮುಚ್ಕಳಿ, ನಾನು ಅಯ್ಯ ಅವರು ಮೋಡಿ ಹಾಕಿದ್ದಾರೆ ಅಂದ್ರೆ ಅದನ್ನು `ಮೋದಿ' ಹಾಗಿದ್ದಾರೆ ಎಂದು ಬರೀತೀರಿ. ಪೂಜಾರಿ ಬೇರೆ ನನ್ನ ರಾಜೀನಾಮೆ ಕೇಳ್ತಾ ಇದಾರೆ. ನನ್ನತ್ರ ಏನೇನೋ ಡೈಲಾಗ್ ಹೇಳಿಸಿ ಮಜಾ ತಗೋತೀರೇನ್ರಿ. ನಾನೇನೂ ಮಾತಾಡಲ್ಲ ನಡೀರಿ'ಎಂದು ಭೂಗೋಳಪ್ಪನವರ ತರಹ ನಡೆದು ಒಳಹೋದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT