ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಚಪ್ಪರಿಸಿ ತಿನ್ನೋನಿಗೆ ಹಪ್ಪಳ ಈಡೇ?

Last Updated 18 ಮೇ 2016, 19:30 IST
ಅಕ್ಷರ ಗಾತ್ರ

ಹುಡುಗಿಯರು ತಮ್ಮ ಬಗ್ಗೆ ಸುಳ್ಳುಸುಳ್ಳೇ ಏನೇನೋ ಊಹಿಸಿಕೊಂಡು ಮಾತಾಡುವುದನ್ನು ಕೇಳಿಸಿಕೊಂಡು ಸರಳಾ ಸಿಟ್ಟು ಮಾಡಿಕೊಂಡು ಹೋದರೂ, ಅದು ಅಂಥಾ ಗಟ್ಟಿ ಸಿಟ್ಟೇನೂ ಆಗಿರಲಿಲ್ಲ.

ಕಮ್ಮನೆ ಕಾದ ಹಾಲು ಉಕ್ಕಿ ಉರಿಯುತ್ತಿರುವ ಜ್ವಾಲೆ ಮೇಲೆ ಬಿದ್ದು ಬೆಂಕಿಯಂಥಾ ಬೆಂಕಿಯನ್ನೇ ಆರಿಸಿದರೂ ಕೊತಕೊತ ಕುದಿಯುತ್ತಾ ಇರುತ್ತದಲ್ಲಾ? ಅಂಥಾ ‘ಸುಮ್ ಸುಮ್ನೆ’ ಥರದ ಸಿಟ್ಟದು. ಸರಳಾ ತಮ್ಮನ್ನು ತಾವು ಎಂದೂ ಸೀರಿಯಸ್ಸಾಗಿ ಒಂದು ಸೀಕ್ರೆಟ್ಟಿನ ಥರಾ ಮೇಂಟೇನ್ ಮಾಡಿರಲಿಲ್ಲ.

ಆದರೆ ಎಲ್ಲರ ಮುಂದೆ ತನ್ನ ಜೀವನ ಬಿಚ್ಚಿಡಲು ಅದೇನು ಮಾರಾಟಕ್ಕಿಟ್ಟಿರುವ ಸೀರೆಯೇ?
ಹತ್ತು ನಿಮಿಷದ ಬಸ್ಸು ಪ್ರಯಾಣವಿರಲಿ, ಗಂಟೆಗಳ ವಿಮಾನ ಪ್ರಯಾಣವಿರಲಿ, ದಿನಗಟ್ಟಲೆಯ ರೈಲು ಪ್ರಯಾಣವಿರಲಿ – ನಮ್ಮ ದೇಶದ ಮಧ್ಯಮ ವರ್ಗದ ಬಹು ಮುಖ್ಯ ಸಾಂಸ್ಕೃತಿಕ ಗುರುತು ಎಂದರೆ ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳುವುದು.

ಯಾವುದೇ ಎಗ್ಗಿಲ್ಲದೆ ಅತೀ ಪರ್ಸನಲ್ ಪ್ರಶ್ನೆಗಳನ್ನೂ ಕೇಳಿಬಿಡುವುದು. ಪಕ್ಕದಲ್ಲಿರುವವರಿಗೆ ಆಸಕ್ತಿ ಇರಲೀ ಬಿಡಲೀ, ಮಾತಾಡುತ್ತಲೇ ಹೋಗುವುದು. ಇದನ್ನು ಎಂಜಾಯ್ ಮಾಡುವ ಜನ ಇರುತ್ತಾರೆ ಸರಿಯೇ ಆದರೆ, ಇದನ್ನು ಹಿಂಸೆ ಎಂದುಕೊಳ್ಳುವ ಜನ ಕೂಡ ಇರುತ್ತಾರೆನ್ನುವುದು ನಮಗೆ ಅರ್ಥವೇ ಆಗದ ವಿಷಯ.

‘ಅಂದ್ರೆ? ಪಕ್ಕದೋರನ್ನ ಮಾತಾಡಿಸಬಾರ್ದು ಅಂತೀರಾ? ಮಾತಾಡಿಸಲೇ ಬಾರದಾ? ಆದ್ರೆ ನಾನೆಲ್ಲಿ ಮಾತಾಡಿಸಿದೆ? ಯಾವ್ ಊರು, ಮದುವೆ, ಮಕ್ಕಳು, ಕೆಲಸ ಇತ್ಯಾದಿ ಕೇಳಿಕೊಂಡೆ ಅಷ್ಟೇ. ಅವ್ರೇ ಮುಂದುವರೆದು ನಮ್ ಆಸ್ತಿ ಅಲ್ಲೆಲ್ಲೋ ಇದೆ, ನಮ್ ಚಿಕ್ಕಪ್ಪಂದ್ರು, ದೊಡ್ಡಪ್ಪಂದ್ರು ನಮಗೆ ಮೋಸ ಮಾಡಿದ್ರು. ನಮ್ಮಪ್ಪನೂ ಮಹಾನ್ ಭೋಳೇ ಮನುಷ್ಯ. ಅವ್ರೂ ಅದಕ್ಕೆಲ್ಲಾ ಹೋರಾಟ ಮಾಡದೆ ಸುಮ್ಮನಾಗಿಬಿಟ್ರು.

ನಮ್ ಚಿಕ್ಕಪ್ಪ ಎಲ್ಲಾ ಆರಾಮಾಗಿದಾರೆ, ಆದ್ರೆ ನಾವೇ ಹೀಗೆ ಪೈಸ ಪೈಸಕ್ಕೂ ನರಳ್ತಾ ಇದೀವಿ... ನಮ್ ಕಷ್ಟಕ್ಕೆ ಯಾರೂ ಒದಗಿ ಬರಲ್ಲ ಬಿಡಿ. ನಾವೇ ದುಡೀಬೇಕು, ನಾವೇ ತಿನ್ನಬೇಕು’ – ಈ ಮಾತುಗಳು ಬಹುತೇಕರು ಇಂತಹ ಪ್ರಯಾಣದಲ್ಲಿ ಆಡಿರಬಹುದಾದ/ಕೇಳಿರಬಹುದಾದ ಸರ್ವೇ ಸಾಮಾನ್ಯವಾದ ಅಭಿವ್ಯಕ್ತಿ. ಇದಕ್ಕೆ ಕಾಲ, ವರ್ಗಗಳ ಹಂಗಿಲ್ಲ. ಭಾರತದಂತಹ ಕುಟುಂಬ ವ್ಯವಸ್ಥೆಯುಳ್ಳ ಎಲ್ಲಾ ಸಮಾಜಗಳ ಒಂದು ಸೀಮಿತ ಪೀಳಿಗೆಯ ಗೋಳು ಇದೇ ಇರಬಹುದು.

ಕರ್ಮವನ್ನು ನಂಬುತ್ತೇವೆ. ಮಾತುಮಾತಿಗೂ ಭಗವದ್ಗೀತೆಯನ್ನೇ ಉದ್ಧರಿಸುತ್ತೇವೆ. ಬಸವಣ್ಣನ, ಸರ್ವಜ್ಞನ ವಚನಗಳು ನಮಗೆ ದಾರಿ ದೀಪ. ರಾಮಾಯಣ ಮಹಾಭಾರತಗಳ ಉಪಕತೆಗಳ ಸತ್ಯಾಸತ್ಯತೆ ಬೇಕಿಲ್ಲ,

ಅವುಗಳ ಸಾರಾಂಶ ಮತ್ತು ಅದರಿಂದ ಹೊರಡುವ ಅರ್ಥದ ಬಗ್ಗೆ ವಾದವಿವಾದಗಳಲ್ಲಿ ಹೊಸ ಹೊಳಹುಗಳನ್ನು ಹುಡುಕುತ್ತೇವೆ, ಇವ್ಯಾವುದನ್ನೂ ತಮ್ಮದಾಗಿಸಿಕೊಳ್ಳದ, ಹಳ್ಳಿಯಲ್ಲಿ ಬೇರು ಬಿಟ್ಟು ಪೇಟೆಯಲ್ಲಿ ಗೂಡು ಕಟ್ಟಿದ ಜನ ಮಾತುಮಾತಿಗೂ ಅದ್ಭುತ ಗಾದೆಗಳನ್ನು ಚೆಲ್ಲುತ್ತಾ ಗಾಳಿಯಲ್ಲಿ ಅದರ ಗಂಧ ತೇಲಿಸುತ್ತಾ ಹೋಗುತ್ತಾರೆ.

ಆದರೆ, ನಮ್ಮ ಜೀವನದ ದುರ್ಭರ ಗಳಿಗೆಗಳಲ್ಲಿ, ಕಷ್ಟವೆಂದುಕೊಳ್ಳುವ ಕಷ್ಟಗಳನ್ನು ಜೀವಿಸುವಾಗ ಅದೆಲ್ಲಾ ಸ್ಕೂಲಿನಲ್ಲಿ ಕಲಿತ ಥೇರಮ್ಮುಗಳಂತೆ ಯಾಕೋ ಮನಸ್ಸಿನಿಂದ ಮಾಯವಾಗಿಬಿಡುತ್ತವೆ. ಅದರಿಂದ ಬೇಕಾದ ಬೆಳಕು ದಕ್ಕುವುದೇ ಇಲ್ಲ. ಓದಿದ್ದು, ಕೇಳಿದ್ದು,

ಕಂಡಿದ್ದು ಎಲ್ಲಾ ಮತ್ತೆ ನೆನಪಿಗೆ ಬರುವ ಗಳಿಗೆ ಎಂದರೆ ನಮ್ಮ ಕಷ್ಟ ಮುಗಿದು, ಇನ್ನೊಬ್ಬರ ಕಷ್ಟ ಶುರುವಾದಾಗ ಅಥವಾ ನಮ್ಮ ಕಷ್ಟಕ್ಕಿಂತ ಅವರದ್ದು ಇನ್ನೂ ನಾಯಿಪಾಡು ಎನ್ನಿಸುವಾಗ. ಆಗ ಮಾತ್ರ ನಾವು ಸಾಕ್ಷಾತ್ ದೇವರೇ!

ಅದ್ಯಾಕೋ ಈ ಹರೆಯದ ಹುಡುಗಿಯರಿಗೆ ತಮಗಿಂತ ಹದಿನೈದು ವರ್ಷ ಹೆಚ್ಚು ವಯಸ್ಸಾದ ಒಂಟಿ ಹೆಣ್ಣುಮಗಳೊಬ್ಬಳು ಬಹಳ ಕಷ್ಟದಲ್ಲಿದ್ದಾಳೆ ಎನ್ನಿಸಿತ್ತು. ಅದಕ್ಕಾಗಿಯೇ ಸರಳಾಗೆ ಸಹಾಯ ಮಾಡಲೇಬೇಕು ಅಂತ ಟೊಂಕ ಕಟ್ಟಿ ನಿಂತಿದ್ದರು. ಆದರೆ ಸರಳಾಗೆ ಇವರ ಸಹಾಯ ಅಧಿಕಪ್ರಸಂಗ ಅನ್ನಿಸಿತ್ತು. 

ಸರಳಾ ಬಗ್ಗೆ ಪ್ರಶ್ನೆಗಳು ಹುಟ್ಟುತ್ತಿದ್ದುದೂ ಅದೇ ಕಾರಣಕ್ಕೇ. ‘ಅಧೆಂಗೆ ಇವ್ರು ಸೊಸೈಟಿಯ ಯಾವ್ ರೂಲ್ಸೂ ಫಾಲೋ ಮಾಡದೆ ಸಿಕ್ ಸಿಕ್ಕಂಗೆ ಬದುಕ್ತಿದಾರೆ?’ ಎಲ್ಲರ ಮುಂದೂ ತೂಗುತ್ತಿದ್ದ ಪ್ರಶ್ನೆ. ‘ಅದನ್ನ ತಿಳ್ಕೊಳೋದ್ಯಾಕೆ ಇಂಪಾರ್ಟೆಂಟು?’ ಚಿತ್ರಾ ಉವಾಚ.

‘ಯಕೆಂದರೆ ನಾವೂ ಸಂದರ್ಭ ಬಂದ್ರೆ ಅದೇ ಥರ ಬದುಕಬಹುದಲ್ವಾ?’ ಸೂಸನ್ ವಿವರಣೆ.
‘ಅವ್ರ್ ಥರನೇ ಯಾಕ್ ಬದುಕಬೇಕು? ನಿಂದೇ ಹೊಸ ದಾರಿ ಮಾಡ್ಕೋ’ ಅಂದಳು ಚಿತ್ರಾ.

‘ಹೊಸ ದಾರಿ ಮಾಡ್ಕೊಳಕ್ಕೆ ಏನೂ ಪ್ರಾಬ್ಲಂ ಇಲ್ಲ. ಆದ್ರೆ ಎಕ್ಸಾಂಪಲ್ ಎದುರಿಗೇ ಇರುವಾಗ ಯಾಕೆ ತಿಳ್ಕೋಬಾರದು ಅಂತ’ ಸೂಸನ್ ಹೇಳಿದ ಈ ಡಿಫೆನ್ಸು ತೆಗೆದುಹಾಕುವಂತಿರಲಿಲ್ಲ.

ಈ ಮಧ್ಯೆ ಸರಳಾ ಒಂದು ವಾರ ಊರಿಗೆ ಹೋದರು. ಬರುವಾಗ ಏನೇನೋ ಉಡುಗೊರೆಗಳನ್ನು ತುಂಬಿಕೊಂಡು ಬಂದಿದ್ದರು. ಪರ್ಫ್ಯೂಮು, ಚಾಕಲೇಟು, ಪುಟ್ಟ ಪುಟ್ಟ ಕಿವಿಯೋಲೆಗಳು, ಬಣ್ಣ ಬಣ್ಣದ ಸ್ಕಾರ್ಫು, ವಾಚು, ಪೆನ್ನು ಇನ್ನೂ ಏನೇನೋ... ಎಲ್ಲವೂ ಸೌದಿ ಅರೇಬಿಯಾದಿಂದ ಬಂದಿದ್ದವು.

ಹಾಗಂತ ಅವರೇ ಹೇಳಿದರು. ಆದರೆ ವಿಚಿತ್ರ ಎನ್ನುವಂತೆ ಆ ಸಾಮಾನುಗಳಲ್ಲಿ ಒಂದನ್ನೂ ತಾವು ಇಟ್ಟುಕೊಳ್ಳದಂತೆ ಕೆಲವನ್ನು ಹುಡುಗಿಯರಿಗೂ, ಇನ್ನು ಕೆಲವನ್ನು ತಮ್ಮ ಸ್ನೇಹಿತೆ – ಅದೇ ಆ ಇಂದಿರಾನಗರ ಶಾಪಿಂಗ್ ಕಾಂಪ್ಲೆಕ್ಸಿನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಹೆಂಗಸು;

ಅವಳ ಹೆಸರು ಮಂಜು ಅಂತಲೋ ಅಂಜು ಅಂತಲೋ ಹೇಳಿದ್ದರು – ಅವಳಿಗೆ ಸಾಕಷ್ಟು ಸಾಮಾನು ಕೊಟ್ಟು ಖಾಲಿ ಮಾಡಿಬಿಟ್ಟರು. ಹುಡುಗಿಯರಿಗೆ ಈ ಎಲ್ಲ ವರ್ತನೆ ಯಾಕೋ ಅವರ ವಯಸ್ಸಿಗಿಂತ, ಮದುವೆಯ ಬಗೆಗಿನ ಮಾಹಿತಿಗಿಂತ, ಅವರ ಒಟ್ಟೂ ವ್ಯಕ್ತಿತ್ವಕ್ಕಿಂತ ಬಹಳ ದೊಡ್ಡ ಒಗಟಾಗಿ ಕಂಡಿತು.

ಆಗಿನ ದಿವಸದಲ್ಲಿ ಅಮೆರಿಕದಲ್ಲಿರುವವರಿಗೆ ದಕ್ಕದ ಬಹು ಘನ ಮರ್ಯಾದೆಯೊಂದು ಸೌದಿಯಲ್ಲಿ ಇರುವವರಿಗೆ ದೊರಕುತ್ತಿತ್ತು. ಅಲ್ಲಿ ಇದ್ದವರು ಹೇಗೆ ಬದುಕುತ್ತಿದ್ದಾರೆ ಎನ್ನುವುದು ಮುಖ್ಯವಲ್ಲ. ಆದರೆ, ಅವರು ಆ ಬಂಗಾರದ ಮರಳಿನ ಊರಲ್ಲಿ ಬದುಕುತ್ತಿದ್ದಾರೆ ಎನ್ನುವುದೇ ಸಂಬಂಧಿಕರಲ್ಲಿ ಉನ್ಮಾದ ಹುಟ್ಟಿಸುತ್ತಿತ್ತು, ಸರೀಕರಲ್ಲಿ ಕಿಚ್ಚನ್ನೂ ಹಚ್ಚಿಸುತ್ತಿತ್ತು.

ಅಲ್ಲಿದ್ದವರು ತಾವು ಮೂರು ಹೊತ್ತು ತಿನ್ನದಿದ್ದರೂ, ಅಲ್ಲಿಂದ ವರ್ಷಕ್ಕೊಮ್ಮೆ ಬರುವವರು ಸಂಬಂಧಿಕರಿಗೆ ಪ್ರೀತಿಯಿಂದಲೂ, ಸರೀಕರಿಗೆ ಲೇವಡಿ ಮಾಡಲೆಂತಲೂ ಚಂದ ಚಂದದ ಸಾಮಾನುಗಳನ್ನು ತಂದು ಕೊಡುತ್ತಿದ್ದರು.

ಅದನ್ನು ಹಾಕಿಕೊಂಡು ಮೆರೆಯಲೆಂದೇ ಮದುವೆ, ನಿಶ್ಚಿತಾರ್ಥ, ತೊಟ್ಲು, ಬಟ್ಲು ಇಂಥ ದೊಡ್ಡ-ಚಿಕ್ಕ ಎಲ್ಲಾ ಕಾರ್ಯಕ್ರಮಗಳಿಗೂ ಹೋಗಿಬರುತ್ತಿದ್ದರು.
ಬಿಸಿಲಿಲ್ಲದಿದ್ದರೂ, ಕತ್ತಲಾಗಿದ್ದರೂ ಮೂಗಿನ ಮೇಲಿಂದ ಇಳಿಯದ ರೇಬ್ಯಾನ್ ಗಾಗಲ್ಸು,

ರಣ ಸೆಕೆಯಲ್ಲೂ ಸ್ಪೋರ್ಟ್ಸ್ ಶೂಸು, ಕತ್ತಿನ ತುಂಬಾ ದಪ್ಪ, ತೆಳ್ಳ, ಚಿತ್ರ ವಿಚಿತ್ರ ವಿನ್ಯಾಸಗಳ ಬಂಗಾರದ ಚೈನುಗಳು, ಇಲ್ಲಿಯದಲ್ಲವೇ ಅಲ್ಲ ಎಂದು ಎದ್ದು ಕಾಣುವಂಥಾ ಸಿಲ್ಕು ಶರಟುಗಳು, ಮೂಗಿಗೆ ಕಣ್ಣಿಗೆ ಘಾಟು ಅಡರಿಸುವ ಸೆಂಟು, ಚಿಕ್ಕಮಕ್ಕಳ ಕೈಗೆ ಅಲ್ಲಿನ ರಿಯಾಲು ನಾಣ್ಯಗಳು – ಸೌದಿಯ ಶ್ರೀಮಂತಿಕೆಯ ಗುರುತು ಒಂದೇ ಎರಡೇ?

ಏನೇ ಅಂದರೂ ಇಂದು ಅಮೆರಿಕದಿಂದ ‘ಇಂಡಿಯಾ’ಕ್ಕೆ ಬರುವವರ ಬಗ್ಗೆ ಇರುವ ಕುತೂಹಲಕ್ಕಿಂತ ಸೌದಿಯಿಂದ ‘ಮನೆಗೆ’ ಅಥವಾ ‘ಊರಿಗೆ’ ಬರುವವರ ಬಗ್ಗೆ ಒಂದು ರೀತಿ ನೈಜ ಖುಷಿ ಇರುತ್ತಿತ್ತು. ಒಂಥರಾ ಸಂಪೂರ್ಣ ಮಮತೆ ಅವರ ಮೇಲೆ. ಚೈನಾ ಬಜಾರ್... ದುಬೈ ಮಾರ್ಕೆಟ್, ನ್ಯಾಷನಲ್ ಮಾರ್ಕೆಟ್ ಎಲ್ಲವೂ ಲಕಲಕ ಎನ್ನುತ್ತಿದ್ದವು ಆ ದಿನಗಳಲ್ಲಿ.

ಅಮೆರಿಕ, ಇಂಗ್ಲೆಂಡಿಗೆ ಜನ ಓದಲು ಹೋಗುತ್ತಾರೆ, ದುಬೈಗೆ ಜನ ದುಡಿಯಲು ಹೋಗುತ್ತಾರೆ ಎನ್ನುವುದು ಸರ್ವವಿದಿತವಾಗಿದ್ದ ವಿಷಯ. ಹಾಗಾಗಿ ಸೌದಿಯಿಂದ ಬಂದವರ ಕೈಲಿ ಉಡುಗೊರೆ ಗ್ಯಾರಂಟಿ ಇರುತ್ತಿತ್ತು.

ಆದರೆ ಮನೆಯ ಜನರ ಸಂಪರ್ಕವೇ ಇಲ್ಲದೆ ಬದುಕಿದ್ದ ಸರಳಾಗೆ ಸೌದಿಯಿಂದ ಲೋಡುಗಟ್ಟಲೆ ಉಡುಗೊರೆ ಕೊಡುವವರು ಎಲ್ಲಿಂದ ಬಂದರು?
‘ಈವತ್ತು ಆಗಿದ್ದಾಗ್ಲಿ. ನಾನಂತೂ ಕೇಳೇ ಕೇಳ್ತೀನಿ. ಸರಳಾ ಆಂಟಿ, ನೀವು ತಪ್ಪು ತಿಳ್ಕೊಂಡ್ರೂ ಪರವಾಗಿಲ್ಲ. ಸಸ್ಪೆನ್ಸಲ್ಲಿ ಸತ್ತು ಮರ್ಯಾದಸ್ತೆ ಅನ್ನಿಸಿಕೊಳ್ಳೋದಕ್ಕಿಂತಾ ನಿಮ್ ಕೈಲಿ ಬೈಸಿಕೊಂಡ್ರೂ ಓಕೆ,

ನಿಮ್ ಲೈಫ್ ಸ್ಟೋರಿ ಹೇಳಲೇಬೇಕು ಅಂತ ಕಾಲು ಹಿಡ್ಕೊಂಡು ಕೂತುಕೊಳ್ತೀನಿ’ ಅಂತ ನಿರ್ಧರಿಸಿದ್ದಳು ಸೂಸನ್. ವಿಜಿ, ಚಿತ್ರಾ ಇಬ್ಬರಿಗೂ ಅದೇ ಮಟ್ಟದ ಕುತೂಹಲ ಇದ್ದರೂ ಸಿಕ್ಕಾಪಟ್ಟೆ ಬಿಗುಮಾನ ಇತ್ತು. ಹಾಗಾಗಿ ಸೂಸನ್ ತನ್ನ ಕೆಟ್ಟ ಕುತೂಹಲಕ್ಕೆ ತಾನೇ ಬಲಿಪಶುವಾಗುವುದಾದರೆ ಇವರ ಅಭ್ಯಂತರವೇನಿರಲಿಲ್ಲ.

ಆವತ್ತು ಊಟ ಆದಮೇಲೆ ಸರಳಾರನ್ನು ಟೆರೇಸಿಗೆ ಕರೆದೊಯ್ದು ಫುಲ್ಲು ಇನ್ವೆಸ್ಟಿಗೇಷನ್ ಶುರು ಮಾಡಿದರು ಮೂರೂ ಜನ. ಸರಳಾ ಯಾವ ಹಿಂಜರಿಕೆಯೂ ಇಲ್ಲದೆ ಪ್ರಶ್ನೆಗೆ ಕಿವಿಯಾದರು. ಮೊದಮೊದಲಿಗೆ ಬಹಳ ಹುಷಾರಾಗಿ ಪ್ರಶ್ನೆಗಳನ್ನು ಕೇಳಿದರೂ, ಆಮೇಲೆ ಮೈ ಸಡಿಲ ಬಿಟ್ಟೇ ಪರ್ಸನಲ್ ವಿಷಯಗಳನ್ನೂ ಕೇಳಲು ಶುರು ಮಾಡಿದರು. ಪ್ರಶ್ನೆ ಕೇಳಿದ್ದು ಯಾರು ಅಂತ ಬೇರೆ ಹೇಳಬೇಕಿಲ್ಲ ತಾನೆ?

‘ಈ ಗಿಫ್ಟ್‌ ನಮಗೆ ಕೊಟ್ರಲ್ಲಾ? ಯಾರ್ ಕೊಟ್ಟಿದ್ದು?’
‘ಫ್ರೆಂಡು’

‘ಸುಮ್ನೆ ಹೇಳಿ ಆಂಟಿ! ಪ್ರಶ್ನೆ ಮತ್ತೆ ಉದ್ದ ಆಗುತ್ತೆ’
‘ಹಸ್ಬೆಂಡು’

ಒಂದು ನಿಮಿಷ ಪ್ರಶ್ನೋತ್ತರ ಮಾಲಿಕೆ ಸ್ತಬ್ಧವಾಗಿಹೋಯಿತು.
‘ಹಂಗಾರೆ ಮದುವೆ ಆಗಿದೆಯಾ ನಿಮಗೆ?’

‘ಇಲ್ಲ. ಆದ್ರೂ ಹಸ್ಬೆಂಡ್ ಇದಾರೆ’
‘ಥೂ! ಸರಿಯಾಗಿ ಹೇಳಿ ಆಂಟಿ...’

‘ಹಸ್ಬೆಂಡು ಅಂದ ಮೇಲೆ ಮತ್ತೆ ಮದುವೆ ಆಗಿದೆಯಾ ಅಂತ ಕೇಳ್ತೀಯಲ್ಲಾ? ನಿನ್ ಸ್ಕೂಲಲ್ಲಿ ಮೊದ್ಲು ಹೈಸ್ಕೂಲು ಓದಿಸಿ ಆಮೇಲೆ ನರ್ಸರಿ ಸೇರಿಸ್ತಾರೇನೋ?’
‘ಆತಪ್ಪಾ ತಪ್ಪಾಯ್ತು! ಬಾಯಿ ತಪ್ಪಿ ಹಂಗಂದೆ’

‘ಸೂಸನ್, ಸ್ಕ್ರಿಪ್ಟ್ ಥರಾ ಪ್ರಶ್ನೆ ರೆಡಿ ಇಟ್ಟುಕೊಂಡು ಕೂತ್ರೆ ತಲೆ ಓಡಲ್ಲ. ನಾನು ಹೇಳ್ತಿರೋದನ್ನ ಕೇಳಿಸಿಕೊಂಡು ಆಮೇಲೆ ಮಾತಾಡು. ಆಗ ಈ ಸೆಷನ್ ಮಾಡಿದ್ದಕ್ಕೂ ಒಂದು ಅರ್ಥ ಇರುತ್ತೆ.’

ಈ ಮಾತು ಹೇಳೋ ಬದಲು ಸರಳಾ ಕಪಾಳಕ್ಕೆ ಹೊಡೆದಿದ್ದರೂ ಸೂಸಿಗೆ ಅಷ್ಟು ನೋವಾಗ್ತಿರಲಿಲ್ಲವೇನೋ. ಇನ್ನೊಬ್ಬರ ಜೀವನ ನಮಗೆ ಕ್ರಾಸ್ ಎಕ್ಸಾಮಿನೇಷನ್ನಿನ ವಸ್ತು ಆಗಿಬಿಟ್ಟರೆ ಅದಕ್ಕಿಂತಾ ಅಮಾನವೀಯ ನಡವಳಿಕೆ ಇನ್ನೊಂದಿರಲು ಸಾಧ್ಯವೇನು?

‘ನಿಮಗೆ ನೋವು ಮಾಡೋದು ನನ್ನ ಉದ್ದೇಶ ಅಲ್ಲ ಆಂಟಿ’
‘ಅದು ನನಗೆ ಗೊತ್ತಮ್ಮಾ... ಆದರೆ ಉದ್ದೇಶ ಇಲ್ಲದೇನೇ ನಾಲಿಗೆ ಮತ್ತು ಮನಸ್ಸಿಗೆ ನೋವು ಕೊಡಲು ಸಾಧ್ಯವಿದೆ. ಇನ್ನು ಉದ್ದೇಶವೇ ನೋವು ಕೊಡೋದಾದರೆ ಇನ್ನೆಷ್ಟು ಅನಾಹುತ ಮಾಡಬಹುದು ಅಂತ ನೀನು ಯೋಚಿಸಬೇಕು’

ಸೂಸನ್ ತಲೆ ತಗ್ಗಿಸಿದಳು. ಫಳಕ್ ಅಂತ ಬೆಚ್ಚನೆ ಕಣ್ಣೀರು ಉದುರಿ ಸರಳಾ ಮುಂಗೈ ಮೇಲೆ ಬಿತ್ತು. ಸರಳಾ ಸೂಸಿಯನ್ನು ಒಮ್ಮೆ ತಬ್ಬಿಕೊಂಡರು.
‘ತಪ್ಪು ನಿಂದಲ್ಲ. ನಂದೂ ಅಲ್ಲ. ಆದರೂ ನಾವಿಬ್ಬರೂ ಒಬ್ಬರನ್ನೊಬ್ಬರು ಹೀಗೆ ಪ್ರೋಬ್ ಮಾಡ್ತಾ ಕೂತಿದೀವಿ, ಯಾಕೆ? ನಿನಗೆ ತೊಂದರೆ ಆದರೆ ನಾನು ಸಹಾಯ ಮಾಡಬೇಕು ಅಂತ ಯಾವ ಕಟ್ಟಳೆಯೂ ಇಲ್ಲ. ನಿನಗೂ ಅಷ್ಟೇ... ಮತ್ತೂ ಯಾಕಿಂಥಾ ಕುತೂಹಲ?’

‘ಆಂಟಿ... ಚರ್ಚಿಗೆ ಹೋಗ್ತೀನಲ್ಲ? ಅಲ್ಲಿಗೆ ಸುಮಾರು ಜನ ಹೆಣ್ಣು ಮಕ್ಕಳು ಬಂದು ಪ್ರೇಯರ್ ಮಾಡ್ತಾ ಬಹಳ ಹೊತ್ತು ಅಳ್ತಾ ಕೂತಿರ್ತಾರೆ. ಅವರಿಗೆ ಧೈರ್ಯ ಹೇಳೋ ಅಷ್ಟು ಜೀವನದ ಅನುಭವ ನನಗೆ ಇಲ್ಲ. ಅದಕ್ಕೆ ಧೈರ್ಯದಿಂದ ಜೀವನ ಸಾಗಿಸ್ತಾ ಇರೋ ಅವರಿವರ ಹತ್ತಿರ ಮಾತಾಡಿ ನನಗೆ ತಿಳಿದಷ್ಟನ್ನು ನನ್ನ ಸಂಪರ್ಕದಲ್ಲಿ ಬಂದೋರಿಗೆ ತಿಳಿಸಿಹೇಳೋದು ಮಾಡ್ತೀನಿ ಆಂಟಿ... ಅದಕ್ಕಾಗಿ ಈ ಪ್ರಶ್ನೆಗಳು..’

‘ಒಳ್ಳೆಯದು. ಆದರೆ ಒಂದು ವಿಷಯ. ಇನ್ಯಾರ ಜೀವನವನ್ನೋ ನೋಡಿಕೊಂಡು, ಸಲ್ಲದ ಆಸಕ್ತಿ ಬೆಳೆಸಿಕೊಂಡು, ವಿಷಯ ತಿಳಿದುಕೊಂಡು ಮತ್ತೊಬ್ಬರಿಗೆ ಹೇಳೋದಾದರೆ ಸಹಾಯ ಹೇಗಾಗುತ್ತೆ?’

‘ಪುಸ್ತಕ ಓದಿಕೊಂಡು ಕಲಿತುಕೊಳ್ಳೋದೂ ಹಂಗೇ ಅಲ್ವಾ ಆಂಟಿ? ಅದರಲ್ಲಿ ಇರೋದು ಬರೆದೋರ ಅನುಭವ ಅಲ್ಲದೇ ಇರಬಹುದು. ಆದರೆ ನಮಗೆ ಅದರಿಂದ ಸಹಾಯ ಆಗುತ್ತಲ್ವಾ? ಅದನ್ನ ನಾವು ಇನ್ನೊಬ್ಬರ ಜೊತೆ ಹಂಚಿಕೊಳ್ಳಬಹುದಲ್ವಾ?’– ಸೂಸನ್ನಳ ಈ ಮರುವಾದಕ್ಕೆ ಸರಳಾ ಜೋರಾಗಿ ನಕ್ಕು ಆಕಾಶದ ಕಡೆ ನೋಡಿದರು.

‘ವಯಸ್ಸಿಗೆ ಇರುವ ಚಾಲಾಕಿತನ ವಯಸ್ಸು ಕಳೆದಂತೆ ಚಟ ಆಗಿಬಿಡುತ್ತೆ ಸೂಸಿ. ಸ್ಮಾರ್ಟ್ ಆಗಿರೋದೇ ಜೀವನದ ಧ್ಯೇಯ ಅಲ್ಲ. ಒಮ್ಮೊಮ್ಮೆ ಭಾವನಾತ್ಮಕವಾಗಿಯೂ ಯೋಚಿಸಬೇಕಾಗುತ್ತೆ. ನಿನ್ನ ಪ್ರಶ್ನೆಗಳು ನನಗೆ ನೋವು ಕೊಡುತ್ತಿಲ್ಲ.

ಆದರೆ ನನ್ನೊಳಗಿನ ನೋವು ಕೆರಳುತ್ತಾ ಇರೋದು ನಿನ್ನ ವಯಸ್ಸಿನಲ್ಲಿ ನಾನೂ ಹೀಗೇ ಯೋಚಿಸ್ತಿದ್ದೆ ಅನ್ನೋದನ್ನ ನೆನೆಸಿಕೊಂಡಾಗ. ದಾರಿ ಬಹಳ ಉದ್ದವಾಗಿದೆ! ಪಾಠಗಳು ಬಹಳ ಕ್ರೂರವಾಗಿವೆ. ಆದರೆ ಕ್ಲಾಸಿನಲ್ಲಿ ಎಲ್ರೂ ಕೂರಬೇಕು, ಕಲೀಲೇಬೇಕು. ಆದರೆ ನೀನೀಗ ನಿಂತಲ್ಲೇ ಗುರಿಯೂ ಅಂತ್ಯವೂ ಕಾಣಬೇಕು ಅಂದರೆ ಹೇಗೆ?’

‘ಹಾಗಂತ ಯಾಕೆ ಬಯಸಬಾರದು? ಅನುಭವ ಇರುವವರ ಮಾತನ್ನಲ್ಲದೆ ಇನ್ಯಾರ ಮಾತನ್ನ ಕೇಳೋಕಾಗತ್ತೆ ನಾವು? ಚಿಕ್ ಮಗೂನ ಕೇಳಿದ್ರೆ ಏನ್ ಹೇಳುತ್ತೆ ಆ ಪುಟ್ಟಿ?’ ಅಂತ ಸೂಸನ್ ನಕ್ಕಳು.

‘ಜಗತ್ತು ಮಾಡ್ತಾ ಇರೋ ದೊಡ್ಡ ತಪ್ಪೇ ಇದು ಸೂಸಿ. ದೊಡ್ ದೊಡ್ಡೋರ ಹತ್ರ ಸಮಸ್ಯೆಗೆ ಪರಿಹಾರ ಇದೆ ಅಂತ ನಂಬಿರೋದು. ಯಾವುದಾದ್ರೂ ಚಿಕ್ ಪುಟ್ಟೀನ ಕೇಳಿ ನೋಡಿದ್ರೆ ನಾವಂದುಕೊಂಡಿರೋ ಸಮಸ್ಯೆ ಸಮಸ್ಯೆಯೇ ಅಲ್ಲ ಅಂತ ಗೊತ್ತಾಗಿರೋದು!’
‘ಈಗೇನು ಆಂಟಿ? ನಿಮ್ ಲೈಫ್ ಸ್ಟೋರಿ ಯಾವಾಗ ಹೇಳ್ತೀರಾ?’

‘ನಿಂದೊಳ್ಳೆ ಕಾಟ ಆಯ್ತಲ್ಲಾ? ಇಷ್ಟೂ ಹೊತ್ತೂ ಬುದ್ಧಿ ಹೇಳಿದ್ದು ತಲೆ ಒಳಗೆ ಹೋಗಲಿಲ್ವಾ ನಿನಗೆ?’
‘ಎಲ್ಲಾ ತಲೆಗೆ ಹೋದ್ ಮೇಲೂ ಕೇಳ್ತಿದೀನಿ. ಸುಮ್ನೆ ಹೇಳ್ಬಿಡಿ. ಕೇಳಿಸ್ಕಂಡು ನಾವಾದ್ರೂ ನೆಮ್ಮದಿಯಾಗಿರ್ತೀವಿ’
‘ಅಯ್ಯೋ ನಿಂದೊಳ್ಳೆ ಕಣೇ. ಸುಂಕದೋನ ಮುಂದೆ ಕಷ್ಟ ಸುಖ ಹೇಳ್ಕೊಂಡಂಗೆ’

‘ಸುಂಕ ಅಂದ್ರೆ?’
‘ಟ್ಯಾಕ್ಸ್ ಕಟ್ಟಿಸ್ಕೊಳೋನ ಮುಂದೆ ಏನ್ ಕಷ್ಟ ಹೇಳಿದ್ರೆ ಏನ್ ಬಂತು? ಕಟ್ಟೋದನ್ನ ಕಟ್ಟಿ ಮುಂದಕ್ಕೆ ಹೋಗಿ ಅಂತಾನೆ. ಹಂಗಾಯ್ತು ನಿನ್ ಕತೆ’
‘ನಂ ಕಡೇಲೂ ಒಂದು ಮಾತಿದೆ’

‘ಏನದು?’
‘ಕಲ್ಲು ತಿನ್ನೋರಿಗೆ ಹಪ್ಪಳವೂ ಒಂದು ಈಡಾ ಅಂತ’

‘ಅರ್ಥವಾಯಿತು ಬಿಡು. ನಾಳೆ ರಾತ್ರಿ ಕಥೆ ಹೇಳ್ತೀನಿ. ಬಿಯರ್ ತಗೊಂಡು ಬಾ. ಫುಲ್ ರಂಗ್ ಬಿರಂಗಿ ಶೇರಿಂಗ್ ಸೆಷನ್ ಮಾಡನ’
‘ಓಹೋ!!’
ಆವತ್ತು ರಾತ್ರಿ ತುಂಬಿಕೊಳ್ಳುತ್ತಿದ್ದ ಚಂದ್ರ ನಗೋ ಹಾಗೆ ಕಂಡ. ನಿಜವಾಗಿಯೂ ನಗ್ತಿದ್ನಾ ಇಲ್ವಾ ಅನ್ನೋದು ನಂಬಿಕೆಗೆ ಬಿಟ್ಟ ವಿಷಯ. ಏನಂತೀರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT