ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಮನಸ್ಸು ಕರಗುವ ಸಮಯ...

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಅದು ಒಂದು ತೀವ್ರ ಭಾವುಕ ಕ್ಷಣ. ಹಾಗೆ ಆಗುವುದು ವಿರಳ. ಮನಸ್ಸೆಲ್ಲ ಅಲ್ಲೋಲ ಕಲ್ಲೋಲ. 37ರ ಹರಯದ ರಘು ದೀಕ್ಷಿತ್ ಕಪ್ಪನೆಯ ಟೀ ಷರಟು, ಒಂದು ವಿಚಿತ್ರ ಪಂಚೆ ಉಟ್ಟುಕೊಂಡು ಕೈಯಲ್ಲಿ ಗಿಟಾರ್ ಹಿಡಿದು ಹಾಡುತ್ತಿದ್ದರೆ ನನ್ನ ಹಿರಿತನದ ಅಹಂಕಾರವೆಲ್ಲ ಜರ‌್ರನೆ ಇಳಿದು ಹೋಯಿತು. ಆ ಯುವಕ ಮೂರು ಸಾವಿರಕ್ಕೂ ಹೆಚ್ಚು ಸಭಿಕರ ಜತೆ ಸಂವಹನ ಮಾಡಿದ ರೀತಿ ನನಗೆ ದೊಡ್ಡ ಪಾಠ ಕಲಿಸಿತು.

 
ಅದು ಅಟ್ಲಾಂಟಾ ನಗರ. ಭಾರತದಿಂದ ಎಷ್ಟೋ ಸಾವಿರ ಮೈಲಿ ದೂರ ಬಂದು ನೆಲೆಸಿದ ಕನ್ನಡಿಗರು ಹಮ್ಮಿಕೊಂಡಿದ್ದ ಏಳನೇ ವಿಶ್ವ ಕನ್ನಡ ಸಮ್ಮೇಳನ. ಮುಖ್ಯ ವೇದಿಕೆ `ಅಮೋಘವರ್ಷ'ದ ಮೇಲೆ ರಘು ಬಂದಾಗ ರಾತ್ರಿ ಒಂಬತ್ತು ಗಂಟೆ ಆಗಿ ಹೋಗಿತ್ತು. ಅವರು ಹಾಡು ಮುಗಿಸಿದಾಗ ಮರುದಿನ ಪ್ರವೇಶ ಮಾಡುತ್ತಿತ್ತು. ಆತ ಆ ದಿನದ ಕೊನೆಯ ಹಾಡುಗಾರ. ಯುವಕರು `ವೇದಿಕೆ ಮೇಲೆ' ಬರಲು ಕಾಯಬೇಕಾಗುತ್ತದೆಯೇ?... ಕನ್ನಡದ ಹಾಡುಗಳನ್ನೇ ಗಿಟಾರ್ ಹಿಡಿದುಕೊಂಡು ಹಾಡಿದ ರಘು ಬರೀ ಯುವಕ-ಯುವತಿಯರು ಮಾತ್ರವಲ್ಲ 70 ದಾಟಿದ ಮುದುಕರ ಮೈ ಮನಸ್ಸಿನಲ್ಲಿಯೂ ನವ ಚೈತನ್ಯ ತುಂಬಿದ. ಎಲ್ಲರೂ ಒಬ್ಬೊಬ್ಬರಾಗಿ ವೇದಿಕೆ ಮುಂದೆ ಬಂದು ನಿಂತು ಕುಣಿಯತೊಡಗಿದರು. ಎಲ್ಲರ ಸಂಕೋಚ ಹೊರಟು ಹೋಗಿತ್ತು. ಒಂದೊಂದು ಹಾಡು ಮುಗಿದ ಮೇಲೂ `ಹೋ' ಎಂದು ಕೂಗುತ್ತಿದ್ದರು. ಹಾಡುಗಾರಿಕೆ ಮುಗಿಯುವ ವೇಳೆಗೆ ಸಭಾಂಗಣದಲ್ಲಿ ಇದ್ದ ಜನರೆಲ್ಲ ವೇದಿಕೆ ಮುಂದೆ ಬಂದು ನಿಂತಿದ್ದರು. ನಮ್ಮಂಥ ಕೆಲವರು ಸಂಕೋಚದ ಮುದ್ದೆಗಳು ಮಾತ್ರ ಮುಂದಿನ ಸೀಟಿನಲ್ಲಿ ಕುಳಿತಿದ್ದೆವು. ಉಳಿದವರೆಲ್ಲ ಕುಣಿಯುತ್ತಿದ್ದರು.
 
ನಮ್ಮಳಗಿನ ಒಬ್ಬ ಭಾವುಕನನ್ನು ಅವರು ಹೊರಗೆ ಎಳೆದು ತಂದಿದ್ದರು. ಮೊಬೈಲ್ ಎಂದರೆ ನಮ್ಮಂಥವರಿಗೆ ಮೈ ಉರಿದರೆ ಅದನ್ನೇ ಹಿಡಿದುಕೊಂಡು ಕುಣಿಯಿರಿ ಎಂದು ರಘು ಹೇಳುತ್ತಿದ್ದರು. ಆತ ಬೇರೆಯ ರೀತಿಯಲ್ಲಿಯೇ ಸಂವಹನ ಮಾಡುತ್ತಿದ್ದಾರೆ ಎಂದು ಅನಿಸಿತು. `ಎಲಾ ಇವ್ನ!' ಮೊಬೈಲ್ ಬಿಡಿ ಎಂದು ಯುವಕರಿಗೆ ಹೇಳುವುದರಲ್ಲಿ ಅರ್ಥವೇ ಇಲ್ಲ ಅಂದುಕೊಂಡೆ. `ಅದನ್ನು ಇಟ್ಟುಕೊಂಡೇ ಕುಣಿಯಿರಿ, ಜೀವನ ಆನಂದಿಸಿ' ಎಂದು ರಘು ಹೇಳುತ್ತಿರಬಹುದೇ ಅನಿಸಿತು. ಯುವಕರು ನಮಗೆ ಅರ್ಥವಾಗುತ್ತಿಲ್ಲವೇ? ಅವರ ಜತೆಗೆ ಸಂವಹನ ಮಾಡಲೂ ನಮಗೆ ಬರುತ್ತಿಲ್ಲವೇ ಎಂದೂ ಏಕೋ ಅನಿಸಿತು. ಮರುದಿನ ರಘು ಮತ್ತು ನಾನು ಜತೆಗೇ ತಿಂಡಿ ತಿನ್ನುತ್ತಿದ್ದೆವು. ನಿನ್ನೆ ವೇದಿಕೆ ಮೇಲೆ ಅವರ ಕೈ ಕುಲುಕಲು ಸಾಧ್ಯವಾಗದ ಎಲ್ಲರೂ ಬಂದು ಅವರ ಮೇಲೆ ಮುಗಿ ಬಿದ್ದರು. ಒಬ್ಬೊಬ್ಬರೂ ನಿನ್ನೆಯ ಪರ್‌ಫಾರ್ಮನ್ಸ್ ಬಗ್ಗೆ ಹೇಳುತ್ತಿದ್ದವರೇ; `ವೆಲ್ ಡನ್ ರಘು' ಎಂದು.
 
ರಘು ಮೈಸೂರಿನ ಹುಡುಗ. ಓದಿದ್ದು ಎಂ.ಎಸ್ಸಿ ಮೈಕ್ರೊ ಬಯಾಲಜಿ. ಎಂಟನೇ ವಯಸ್ಸಿನಿಂದ 23ನೇ ವಯಸ್ಸಿನವರೆಗೆ ಭರತ ನಾಟ್ಯ ಕಲಿತರು. ಪಾಶ್ಚಾತ್ಯ ಎಂಬುದು ಏನಿದ್ದರೂ ತಂದೆ ತಾಯಿಗೆ ಕಡು ವಿರೋಧ. ತಂದೆ ಬದುಕಿ ಇರುವವರೆಗೆ ಮಗ ಜೀನ್ಸ್ ಪ್ಯಾಂಟ್ ಹಾಕಿಕೊಂಡಿರಲಿಲ್ಲ! ಈಗ ಅದೇ ಮಗ ಪಾಶ್ಚಾತ್ಯ ವಾದ್ಯ ಹಿಡಿದುಕೊಂಡು ದೇಶ-ವಿದೇಶ ಸುತ್ತುತ್ತಿದ್ದಾನೆ. ಕನ್ನಡದ ಹಾಡು ಹೇಳಿಕೊಂಡು ಜೀವನ ಮಾಡುತ್ತಿದ್ದಾನೆ. ಇಂಥ ಆಕಸ್ಮಿಕಗಳು ಈ ಯುವಕನ ಜೀವನದಲ್ಲಿ ಬೇಕಾದಷ್ಟು ಆಗಿವೆ. ಅವರು ಗಿಟಾರ್ ಕಲಿತುದು ಕೂಡ ಒಂದು ಆಕಸ್ಮಿಕ. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ಸಹಪಾಠಿಯೊಬ್ಬ ಗಿಟಾರ್ ನುಡಿಸುತ್ತಿದ್ದ. `ಗಿಟಾರ್ ನುಡಿಸುವುದು ಹೆಂಗಸರು ಭರತ ನಾಟ್ಯ ಮಾಡಿದ ಹಾಗಲ್ಲ' ಎಂದೇನೋ ಆತ ಕಿಚಾಯಿಸಿದ. `ಒಂದು ತಿಂಗಳಲ್ಲಿ ಕಲಿತು ತೋರಿಸುತ್ತೇನೆ' ಎಂದು ಸವಾಲು ಹಾಕಿದ ರಘು ಮೈಸೂರು ಹೊರವಲಯದ ಬೋಗಾದಿಯ ಕ್ರೈಸ್ತ ಸೆಮಿನರಿಗೆ ಹೋಗಿ ಗಿಟಾರ್ ಮತ್ತು ಗಿಟಾರ್ ಪಾಠದ ಒಂದು ಪುಸ್ತಕ ಕೊಂಡು ತಂದು ಒಂದು ತಿಂಗಳಲ್ಲಿ ಹಾಡು ನುಡಿಸಲು ಕಲಿತರು. `ನಾನು ಗಿಟಾರ್ ಕಲಿತಿದ್ದೇನೆ. ನೀನು ಗಂಡಸಾದರೆ ನನ್ನ ಹಾಗೆ ಭರತ ನಾಟ್ಯ ಮಾಡು' ಎಂದು ಇವರು ಕಿಚಾಯಿಸಿದರು! ಅದೆಲ್ಲ ಹುಡುಗಾಟ. ಆಗ ಹಾಗೆ ಅಂಟಿಕೊಂಡ ಗಿಟಾರ್ ಈಗ ಅವರ ಜೀವನದ ಸಾಥಿ. ಗಿಟಾರ್ ಕಲಿಯುತ್ತಲೇ ತಮ್ಮಳಗೆ ಒಬ್ಬ ಹಾಡುಗಾರ ಇದ್ದಾನೆ ಎಂದೂ ಅವರಿಗೆ ಗೊತ್ತಾಯಿತು.

ಅಂದಿನಿಂದ ಇಂದಿನವರೆಗೆ ಇವರು ಹೇಳಿದ ಹಾಗೆ ಗಿಟಾರ್ ಕೇಳುತ್ತದೆಯೋ ಗಿಟಾರ್ ಹೇಳಿದ ಹಾಗೆ ಇವರು ಕೇಳುತ್ತಾರೋ ಗೊತ್ತಿಲ್ಲ. ಅವರೇ ಹಾಡುವ ಒಂದು ಹಾಡಿನ ಹಾಗೆ `ಹರ್ ಸಾಸ್‌ಮೇ, ಹರ್ ಧಡಕನ್ ಮೇ...'
 
ಹಾಡು ನಮ್ಮ ಉಸಿರಿನಲ್ಲಿ ಉಸಿರಾಗಿ, ಎದೆ ಬಡಿತದಲ್ಲಿ ಬಡಿತವಾಗಿ ಮನಸ್ಸನ್ನು ಕಲಕುವುದು ಹೀಗೆ. ಅದು ಹಾಡುಗಾರನನ್ನು ಅಲ್ಲಾಡಿಸಿದ ಹಾಗೆಯೇ ಕೇಳುಗನನ್ನೂ ಅಲ್ಲಾಡಿಸುತ್ತದೆ. ಅಟ್ಲಾಂಟಾದ ಮೇರಿಯಟ್ ಹೋಟೆಲ್‌ನಲ್ಲಿ ಚಿಕ್ಕ ಗುಂಪಿನ ನಡುವೆ ಕುಳಿತು ಅರ್ಚನಾ ಉಡುಪ ಹಾಡು ಹೇಳುತ್ತಿದ್ದಾಗ ಬೆಳಗಿನ ನಾಲ್ಕೂವರೆ! ಶುರುವಾಗಿದ್ದು ಯಾವಾಗಲೋ? ಅರ್ಚನಾ ಅವರು `ಕರುಣಾಳು ಬಾ ಬೆಳಕೆ' ಹಾಡು ಹೇಳಿ ಮುಗಿಸಿದಾಗ ನನ್ನ ಎದುರು ಕುಳಿತಿದ್ದ ಟಿ.ಎನ್.ಸೀತಾರಾಮ್ ಕಣ್ಣು ಒರೆಸಿಕೊಳ್ಳುತ್ತಿದ್ದರು. ಒತ್ತರಿಸಿ ಬರುತ್ತಿದ್ದ ದುಃಖವನ್ನು ನಿಯಂತ್ರಿಸಲು ಹೆಣಗುತ್ತಿದ್ದರು. ಹಾಡು ನಮ್ಮನ್ನು ಕುಣಿಸುತ್ತದೆ. ಕರಗಿಸುತ್ತದೆ. ಏಕೆ? ನಮ್ಮ ಆಳದ ಸಂತೋಷ, ಸುಖಗಳು ಖುಷಿಯ ಕುಣಿತದಲ್ಲಿ ಅಭಿವ್ಯಕ್ತಿ ಪಡೆದರೆ ದುಃಖಗಳು, ತಲ್ಲಣಗಳು ಕಣ್ಣೀರಾಗಿ ಹರಿಯುತ್ತವೆ. ಎರಡಕ್ಕೂ ತಕ್ಷಣದ ಕಾರಣಗಳು ಇರುವುದಿಲ್ಲ. ಎಲ್ಲೋ ಯಾವುದೋ ಆಳದ ನಗು, ಅಳು ಎದ್ದು ಬಂದು ಗುದ್ದುತ್ತವೆ.
 
ಭಾರತಕ್ಕೆ ಮರಳಿ ಬಂದು ಎರಡು ದಿನಗಳಾಗಿತ್ತು. ರಾತ್ರಿ ದೂರದರ್ಶನದ `ಭಾರತ್ ಕಿ ಶಾನ್' ಗಾಯನ ಸ್ಪರ್ಧೆ ನೋಡುತ್ತಿದ್ದೆ. ಅಂಧ ಯುವಕ ರಘುವೀರ್ ಶರಣ್ `ತೀಸರೀ ಕಸಂ' ಚಿತ್ರದ `ಝೂಟ್ ಮತ್ ಬೋಲೊ, ಖುದಾ ಕೆ ಪಾಸ್ ಜಾನಾ ಹೈ' ಹಾಡನ್ನು ಮನಸ್ಸು ತುಂಬಿ ಹಾಡುತ್ತಿದ್ದರು.

ತೀರ್ಪುಗಾರರಾಗಿ ಕುಳಿತಿದ್ದ ಪಾಪ್ ಗಾಯಕಿ ಉಷಾ ಉತುಪ್ ಕೆನ್ನೆಯ ಮೇಲೆ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಆಕೆ ಅಳ್ಳೆದೆಯ ಹೆಣ್ಣು ಮಗಳಲ್ಲ. ಕುಣಿಯುತ್ತ ಹಾಡು ಹೇಳಿದರೆ ಇಡೀ ಸಭೆಯನ್ನು ಕುಣಿಸುವಂಥ ದಢೂತಿ ಹೆಣ್ಣು ಮಗಳು. ಆದರೆ, `ಸಜನ್‌ರೇ ಝೂಟ್ ಮತ್ ಬೋಲೊ...' ಹಾಡು ಕೇಳುತ್ತ ಅವರು ಕರಗಿ ಹೋಗಿದ್ದರು. ಮಾತನಾಡಲು ಅವರಲ್ಲಿ ಶಬ್ದಗಳು ಇರಲಿಲ್ಲ. ನಿರೂಪಕ ಕರೆದರೂ ಅವರು ವೇದಿಕೆ ಮೇಲೆ ಬರಲಿಲ್ಲ. ತಮ್ಮ ಮುಂದೆ ಇದ್ದ ಐದೂ ಬಟನ್‌ಗಳನ್ನು ಒತ್ತಿ ರಘುವೀರ್‌ಗೆ ಸಂಪೂರ್ಣ ಐದು ಅಂಕ ಕೊಟ್ಟರು. ಅದಕ್ಕಿಂತ ಹೆಚ್ಚು ಹೇಳುವ ಶಕ್ತಿ ಅವರಲ್ಲಿ ಇರಲಿಲ್ಲ. ಮೈಸೂರಿನ ರಘು ದೀಕ್ಷಿತ್ ಉತ್ತರ ಭಾರತದ ಯಾವುದೋ ಊರಿನ ರಘುವೀರ್ ಶರಣ್ ಅವರ ಹಾಡುಗಾರಿಕೆ ನಡುವೆ ಅಂತರವೇನೂ ಇರಲಿಲ್ಲ. ದೀಕ್ಷಿತ್ ಕನ್ನಡದಲ್ಲಿ ಹಾಡಿದ್ದರೆ ರಘು ಹಿಂದಿಯಲ್ಲಿ ಹಾಡಿದ್ದರು. ಪರಿಣಾಮ ಒಂದೇ ಆಗಿತ್ತು. 
 
 ಸುಪರ್ಣಾ ವೆಂಕಟೇಶ್ ಭರತ ನಾಟ್ಯ ಪ್ರವೀಣೆ. ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ನೃತ್ಯಶಾಸ್ತ್ರ ಕಲಿಸುತ್ತಾರೆ. ಒಮ್ಮೆ ಹಂಪಿಯ ಉತ್ಸವದಲ್ಲಿ ಅವರು ಮತ್ತು ಸಹನೃತ್ಯಪಟು ಎಂ.ಬಿ.ನಾಗರಾಜ್ ಶಿವ-ಪಾರ್ವತಿಯ ನೃತ್ಯ ನಡೆಸಿ ಕೊಟ್ಟರು.

ಮರುದಿನ ಹಂಪಿಯ ರಸ್ತೆಯಲ್ಲಿ ಸುಪರ್ಣಾ ಮತ್ತು ನಾಗರಾಜ್ ಹೊರಟಿದ್ದರು. ಎದುರಿಗೆ ಒಬ್ಬ ವಯೋವೃದ್ಧ ವ್ಯಕ್ತಿ ಬಂದರು. ತಮ್ಮ ಕೊರಳಲ್ಲಿನ ಬೆಳ್ಳಿಖಚಿತ ರುದ್ರಾಕ್ಷಿ ಸರವನ್ನು ನಾಗರಾಜ್ ಕೊರಳಿಗೆ ಹಾಕಿ ಕಾಲು ಮುಟ್ಟಿ ನಮಸ್ಕರಿಸಿದರು. ನಾಗರಾಜ್ ವಯಸ್ಸಿನಲ್ಲಿ ಚಿಕ್ಕವರು. ತಕ್ಷಣ ಹಿಂದೆ ಸರಿದು `ನೀವು ಹಿರಿಯರು ನನಗೆ ನಮಸ್ಕಾರ ಮಾಡಬಾರದು' ಎಂದರು. ಆ ಹಿರಿಯ, `ಲೋ ಮೂಢ ನಿನಗೆ ಅಲ್ಲವೋ ನಾನು ನಮಸ್ಕಾರ ಮಾಡಿದ್ದು. ನಿನ್ನ ಒಳಗಿನ ಶಿವನಿಗೆ' ಎಂದು ಹೇಳಿ ಹೊರಟು ಹೋದರು.

ಚಿತ್ರದುರ್ಗದಲ್ಲಿ ಇಂಥದೇ  ಪಾರ್ವತಿಯ ನೃತ್ಯ ಮಾಡಿ ಕೆಳಗೆ ಇಳಿದು ಬಂದ ಸುಪರ್ಣಾ ಅವರಿಗೆ ಕೆಲವರು ಹೆಂಗಳೆಯರು ಪಾದ ತೊಳೆದು, ಅರಿಶಿನ-ಕುಂಕುಮ ಹಚ್ಚಿ ಆರತಿ ಮಾಡಿದರು. ಹಣವನ್ನು ಕಾಣಿಕೆಯಾಗಿ ಪಾದದ ಬಳಿ ಇಟ್ಟರು. ಸುಪರ್ಣಾ ಎಷ್ಟು ಬೇಡ ಎಂದರೂ ಕೇಳಲಿಲ್ಲ. ಅವರೂ ಸುಪರ್ಣಾ ಅವರಿಗೆ ಆರತಿ ಮಾಡಿರಲಿಲ್ಲ; ಅವರ ಒಳಗಿನ ಪಾರ್ವತಿಗೆ ಮಾಡಿದ್ದರು. ಸಂಗೀತ, ಸಾಹಿತ್ಯ, ನೃತ್ಯ ನಮ್ಮನ್ನು ಕಲಕುವ ರೀತಿ ಇದೇ ಆಗಿರಬೇಕೇ? ನಮ್ಮಳಗಿನ ಕಲ್ಲು ಮನುಷ್ಯನನ್ನು ಅದು ಹೀಗೆ ಕರಗಿಸುತ್ತಿರಬಹುದೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT