ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲೆಸೆಯುವ ಕಾಶ್ಮೀರದ ಕೈಗಳ ಬಗ್ಗೆ...

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಕಾಶ್ಮೀರದಲ್ಲಿನ ಹಿಂಸಾಚಾರದ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಅದರಲ್ಲೂ ಮುಖ್ಯವಾಗಿ, ಅಲ್ಲಿನ ಕಥನದ ಒಂದು ಮುಖವನ್ನು ಮಾತ್ರ ತಿಳಿದುಕೊಂಡಿರಬಹುದಾದ ದೇಶದ ಮಕ್ಕಳನ್ನು ಉದ್ದೇಶಿಸಿ ಇದನ್ನು ಬರೆಯಬೇಕು ಅಂದುಕೊಂಡಿದ್ದೇನೆ. ಕಾಶ್ಮೀರದಲ್ಲಿ ನಾಗರಿಕರನ್ನು ಹತ್ಯೆ ಮಾಡಿದ್ದಕ್ಕಾಗಿ ಸೈನಿಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಕ್ಕೆ ಕಳೆದ ಕೆಲವು ದಿನಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಎಫ್‌ಐಆರ್‌ಗೆ ಪ್ರತಿಕ್ರಿಯೆಯಾಗಿ ಕೆಲವು ಸೈನಿಕರ ಮಕ್ಕಳು ಕ್ರಮ ಕೈಗೊಂಡಿದ್ದಾರೆ.

‘ಸೈನಿಕರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದು ಹಾಗೂ ಕಲ್ಲು ಎಸೆಯುವವರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದಿರುವುದರ ಬಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚರ್ಚೆ ನಡೆಯುತ್ತಿರುವ ವೇಳೆಯಲ್ಲೇ, ಸೇನೆಯ ಇಬ್ಬರು ಅಧಿಕಾರಿಗಳ ಮಕ್ಕಳು ನ ಭೂತೋ ಎಂಬಂತಹ ಕ್ರಮಕ್ಕೆ ಮುಂದಾಗಿದ್ದಾರೆ. ಕಲ್ಲು ಎಸೆಯುವವರಿಂದ ಸೈನಿಕರ ಮಾನವ ಹಕ್ಕುಗಳನ್ನು ರಕ್ಷಿಸಬೇಕು ಎಂದು ಕೋರಿ ಇವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ’ ಎಂದು ವರದಿಯಾಗಿದೆ.

‘ಪ್ರೀತಿ, ಕಾಜಲ್ ಮತ್ತು ಪ್ರಭಾವ್‌ ಎನ್ನುವವರು ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರಿಗೆ ದೂರು ಸಲ್ಲಿಸಿದ್ದಾರೆ. ಸಂಘರ್ಷಕ್ಕೆ ಗುರಿಯಾಗಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸ್ಥಳೀಯರ ಮಾನವ ಹಕ್ಕುಗಳನ್ನು ರಕ್ಷಿಸಲು ಆಯೋಗ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆ ಮಾಡುತ್ತಿರುವ ಕಾರ್ಯಗಳ ಬಗ್ಗೆ ದೂರಿನಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಆದರೆ ಕಲ್ಲು ಎಸೆಯುವವರಿಂದ ಪ್ರತಿದಿನವೂ ಜೀವಭಯ ಎದುರಿಸುತ್ತಿರುವ ಸೇನಾ ಪಡೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹೇಳಲಾಗಿದೆ. ಸ್ವಾತಂತ್ರ್ಯ ಬಂದ ದಿನದಿಂದಲೂ ಕಾಶ್ಮೀರದಲ್ಲಿ ಸಣ್ಣ ಪ್ರಮಾಣದ ಯುದ್ಧ ನಡೆದೇ ಇದೆ. ರಾಜ್ಯದ ಆಡಳಿತಯಂತ್ರ ವಿಫಲವಾಗಿರುವ ಕಾರಣ, ಸೇನೆಯ ನೆರವು ಪಡೆಯಲು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (ಎ.ಎಫ್‌.ಎಸ್‌.ಪಿ.ಎ) ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೀರ್ಮಾನಿಸಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ’ ಎನ್ನುತ್ತದೆ ಆ ವರದಿ.

ಈ ಬಗೆಯ ವಿವರಣೆಗಳು ನಮಗೆ ಹೊಸದೇನೂ ಅಲ್ಲ. ಆದರೆ, ಭಾರತದ ಕಿರಿಯರು ಇನ್ನೂ ಏನನ್ನೋ ತಿಳಿದುಕೊಳ್ಳಬೇಕು ಎಂಬುದು ನನ್ನ ಬಯಕೆ. ಈ ಕುರಿತ ಒಂದು ಪ್ರಶ್ನೆಯನ್ನು ಸಂಸತ್ತಿನಲ್ಲಿ ಜನವರಿಯಲ್ಲಿ ಕೇಳಲಾಗಿತ್ತು:

‘ಅ) ಸಶಸ್ತ್ರ ಪಡೆಗಳ (ಜಮ್ಮು ಮತ್ತು ಕಾಶ್ಮೀರ) ವಿಶೇಷ ಅಧಿಕಾರ ಕಾಯ್ದೆ (ಎ.ಎಫ್‌.ಎಸ್‌.ಪಿ.ಎ)- 1990ರ ಅಡಿ ಸೈನಿಕರ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ಕೋರಿ ಜಮ್ಮು ಮತ್ತು ಕಾಶ್ಮೀರ ಸರ್ಕಾರದಿಂದ ಎಷ್ಟು ಪ್ರಕರಣಗಳು ಕೇಂದ್ರದ ಬಳಿಗೆ ಬಂದಿವೆ? ಬ) ಈ ಪೈಕಿ ಎಷ್ಟು ಪ್ರಕರಣಗಳಲ್ಲಿ ಅನುಮತಿ ನೀಡಲಾಗಿದೆ, ಅನುಮತಿ ನಿರಾಕರಿಸಲಾಗಿದೆ, ತೀರ್ಮಾನ ಬಾಕಿ ಇದೆ? ಕ) ಅನುಮತಿ ಕೋರಿ ಕೇಂದ್ರ ಸ್ವೀಕರಿಸಿದ ಎಲ್ಲ ಪ್ರಕರಣಗಳ ವಿವರ, ಯಾವ ವರ್ಷ ಆ ಮನವಿ ಬಂತು, ಆರೋಪ ಏನು, ತನಿಖೆಯ ಫಲಶ್ರುತಿ ಏನು, ಕ್ರಮ ಜರುಗಿಸಲು ಅನುಮತಿ ನೀಡುವ ವಿಚಾರ ಈಗ ಯಾವ ಹಂತದಲ್ಲಿದೆ? ಡ) ಕ್ರಮ ಜರುಗಿಸಲು ಅನುಮತಿ ನಿರಾಕರಿಸಿದ್ದು ಏಕೆ ಅಥವಾ ಅನುಮತಿ ನೀಡುವ ವಿಚಾರ ಇನ್ನೂ ಬಾಕಿ ಉಳಿದಿರಲು ಕಾರಣ ಏನು? ಈ ಎಲ್ಲ ಪ್ರಶ್ನೆಗಳಿಗೆ ರಕ್ಷಣಾ ಸಚಿವರು ದಯವಿಟ್ಟು ಉತ್ತರ ಕೊಡಬೇಕು...’ ಎಂಬುದು ಆ ಪ್ರಶ್ನೆ.

ರಕ್ಷಣಾ ಸಚಿವಾಲಯದ ರಾಜ್ಯ ಖಾತೆ ಸಚಿವರು ಈ ಪ್ರಶ್ನೆಗೆ ಹೀಗೆ ಉತ್ತರ ನೀಡಿದರು: ಅ) ಎ.ಎಫ್‌.ಎಸ್‌.ಪಿ.ಎ- 1990ರ ಅಡಿ ಸೈನಿಕರ ವಿರುದ್ಧ ಕ್ರಮ ಜರುಗಿಸಲು ಅನುಮತಿ ಕೋರಿ ಜಮ್ಮು ಮತ್ತು ಕಾಶ್ಮೀರ ಸರ್ಕಾರದಿಂದ ಕೇಂದ್ರ ಸರ್ಕಾರವು 50 ಪ್ರಕರಣಗಳನ್ನು ಸ್ವೀಕರಿಸಿದೆ.

ಬ) ಮತ್ತು ಕ) ಪ್ರತಿ ವರ್ಷ ಸ್ವೀಕರಿಸಿದ ಪ್ರಕರಣಗಳ ವಿವರ, ಆರೋಪ ಏನು, ಕ್ರಮ ಜರುಗಿಸಲು ಅನುಮತಿ ನೀಡಿರುವ, ಅನುಮತಿ ನಿರಾಕರಿಸಿರುವ, ಅನುಮತಿ ನೀಡುವುದನ್ನು ಬಾಕಿ ಇರಿಸಿರುವ ಪ್ರಕರಣಗಳ ಮಾಹಿತಿಯನ್ನು ಲಗತ್ತಿಸಲಾಗಿದೆ.

ಡ) ಆರೋಪಗಳು ಮೇಲ್ನೋಟಕ್ಕೆ ಸತ್ಯ ಎಂದು ತೋರಿಸಿಕೊಡುವಂತಹ ಆಧಾರಗಳು ಇಲ್ಲದಿರುವುದು ಅನುಮತಿ ನಿರಾಕರಿಸಿರುವುದಕ್ಕೆ ಅಥವಾ ಅನುಮತಿ ನೀಡುವುದನ್ನು ಬಾಕಿ ಇರಿಸಿರುವುದಕ್ಕೆ ಕಾರಣ’.

ಸೈನಿಕರ ವಿರುದ್ಧದ ಪ್ರಕರಣಗಳನ್ನು ಈ ರೀತಿ ಪಟ್ಟಿ ಮಾಡಲಾಗಿದೆ: ಹತ್ಯೆ ಮಾಡಿದ್ದಕ್ಕಾಗಿ 2001ರಲ್ಲಿ ಒಂದು ಎಫ್‌ಐಆರ್‌ ದಾಖಲಾಯಿತು (ಸೈನಿಕರ ವಿರುದ್ಧ ಕ್ರಮ ಜರುಗಿಸಲು ಅನುಮತಿ ನಿರಾಕರಿಸಲಾಗಿದೆ). ಹತ್ಯೆ ಮಾಡಿದ್ದಕ್ಕಾಗಿ 2005ರಲ್ಲಿ ಎರಡು ಎಫ್‌ಐಆರ್‌ಗಳು (ಅನುಮತಿ ನಿರಾಕರಿಸಲಾಗಿದೆ). 2006ರಲ್ಲಿ ಒಟ್ಟು 17 ಎಫ್‌ಐಆರ್‌ಗಳು ದಾಖಲಾಗಿವೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಒಂದು, ಮಹಿಳೆಯರಿಗೆ ಅಗೌರವ ತೋರಿಸಿದ್ದಕ್ಕೆ ಸಂಬಂಧಿಸಿದಂತೆ ಒಂದು, ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದಂತೆ ಆರು ಎಫ್‌ಐಆರ್‌ಗಳು ದಾಖಲಾಗಿವೆ. ಇನ್ನುಳಿದ ಬಹುತೇಕ ಎಫ್‌ಐಆರ್‌ಗಳು ಕೊಲೆಗೆ ಸಂಬಂಧಿಸಿದವು (ಎಲ್ಲ ಪ್ರಕರಣಗಳಲ್ಲೂ ಅನುಮತಿ ನಿರಾಕರಿಸಲಾಗಿದೆ, ಅಪಹರಣಕ್ಕೆ ಸಂಬಂಧಿಸಿದ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ತೀರ್ಮಾನ ಆಗಿಲ್ಲ).

2007ರಲ್ಲಿ 13 ಎಫ್‌ಐಆರ್‌ಗಳು ದಾಖಲಾಗಿವೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಒಂದು, ಕೊಲೆ ಮತ್ತು ಹಿಂಸೆಗೆ ಸಂಬಂಧಿಸಿದಂತೆ ಒಂದು. ಇನ್ನುಳಿದ ಬಹುತೇಕ ಎಫ್‌ಐಆರ್‌ಗಳು ಹತ್ಯೆಗೆ ಸಂಬಂಧಿಸಿದವು. ಇವುಗಳ ವಿಚಾರದಲ್ಲಿ ಕ್ರಮ ಜರುಗಿಸಲು ಅನುಮತಿ ನಿರಾಕರಿಸಲಾಗಿದೆ. 2008ರಲ್ಲಿ, ಅತ್ಯಾಚಾರ, ಕಳ್ಳತನ ಮತ್ತು ಹತ್ಯೆಗೆ ಸಂಬಂಧಿಸಿದಂತೆ ತಲಾ ಒಂದು (ಒಟ್ಟು ಮೂರು) ಎಫ್‌ಐಆರ್‌ಗಳು ದಾಖಲಾಗಿದ್ದು, ಎಲ್ಲ ಪ್ರಕರಣಗಳಲ್ಲೂ ಕ್ರಮ ಕೈಗೊಳ್ಳುವ ಅನುಮತಿ ನಿರಾಕರಿಸಲಾಗಿದೆ. 2009ರಲ್ಲಿ ಹತ್ಯೆ ಮತ್ತು ಅಪಹರಣಕ್ಕೆ ಸಂಬಂಧಿಸಿದಂತೆ ಎರಡು ಎಫ್‌ಐಆರ್‌ಗಳು (ಅನುಮತಿ ನಿರಾಕರಣೆ). 2010ರಲ್ಲಿ ಹತ್ಯೆಗೆ ಸಂಬಂಧಿಸಿದಂತೆ 4 ಎಫ್‌ಐಆರ್‌ಗಳು (ಅನುಮತಿ ನಿರಾಕರಣೆ).

2011ರಲ್ಲಿ ಎರಡು ಎಫ್‌ಐಆರ್‌; ಹತ್ಯೆಯ ವಿಚಾರವಾಗಿ ಒಂದು (ಅನುಮತಿ ನಿರಾಕರಣೆ), ಅಪಹರಣದ ವಿಚಾರವಾಗಿ ಇನ್ನೊಂದು (ಅನುಮತಿ ಬಾಕಿ ಇದೆ). ಹತ್ಯೆಗೆ ಸಂಬಂಧಿಸಿದಂತೆ 2013ರಲ್ಲಿ ಮೂರು ಎಫ್‌ಐಆರ್‌ (ಅನುಮತಿ ನಿರಾಕರಣೆ). ಹತ್ಯೆಗೆ ಸಂಬಂಧಿಸಿದಂತೆ 2014ರಲ್ಲಿ ಎರಡು ಎಫ್‌ಐಆರ್‌ (ಒಂದರಲ್ಲಿ ಅನುಮತಿ ನಿರಾಕರಣೆ, ಇನ್ನೊಂದರಲ್ಲಿ ಬಾಕಿ). ಹತ್ಯೆಗೆ ಸಂಬಂಧಿಸಿದಂತೆ 2016ರಲ್ಲಿ ಒಂದು ಎಫ್‌ಐಆರ್‌ (ಅನುಮತಿ ನಿರಾಕರಣೆ).

ಕಾಶ್ಮೀರದಲ್ಲಿ ಅಪರಾಧ ಎಸಗಿದ ಆರೋಪದ ಅಡಿ ನಾಗರಿಕ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿದ ಸೈನಿಕರ ಸಂಖ್ಯೆ ಸೊನ್ನೆ. ಸೈನಿಕರ ವಿರುದ್ಧ ಎಫ್‌ಐಆರ್‌ ದಾಖಲಾಗುವುದನ್ನು ಕಂಡು ಸೈನಿಕರ ಮಕ್ಕಳಿಗೆ ಸಿಟ್ಟು ಬರಬಹುದು. ಆದರೆ ನಾವು ಈಗಾಗಲೇ ಕಂಡಿರುವಂತೆ ಎಫ್‌ಐಆರ್‌ಗಳಿಂದ ಏನೂ ಆಗುವುದಿಲ್ಲ. ಕೇಂದ್ರ ಸರ್ಕಾರ ನೀಡಿರುವ ಅಂಕಿ-ಅಂಶ ಆಧರಿಸಿ ಹೇಳುವುದಾದರೆ, ಭಾರತದಲ್ಲಿ ಕಾಶ್ಮೀರಿಗಳಿಗೆ ನ್ಯಾಯ ಸಿಗುವುದಿಲ್ಲ. ಈ ವಿಚಾರ ನಮ್ಮಲ್ಲಿ ಕೋಪ ಮೂಡಿಸಬೇಕು. ಸೇನೆಯು ತನ್ನದೇ ಆದ ನ್ಯಾಯಾಲಯದ ಮೂಲಕ ನ್ಯಾಯ ಒದಗಿಸುವ ಸೋಗು ಹಾಕುತ್ತದೆ. ಆದರೆ ದೌರ್ಜನ್ಯಕ್ಕೆ ಒಳಗಾದವರ ಪಾಲಿಗೆ ಸೇನಾ ನ್ಯಾಯಾಲಯಗಳ ಬಾಗಿಲು ತೆರೆದಿರುವುದಿಲ್ಲ. ಸೇನಾ ನ್ಯಾಯಾಲಯ ವ್ಯವಸ್ಥೆಯ ಮೂಲಕ ಸೈನಿಕರನ್ನು ಹೇಗೆ ಬಿಟ್ಟುಬಿಡಲಾಗುತ್ತದೆ ಎಂಬುದನ್ನು ಅರಿಯುವ ಆಸಕ್ತಿ ಇದ್ದರೆ ಪತ್ರಿಬಲ್ ಮತ್ತು ಮಚಿಲ್ ಪ್ರಕರಣಗಳಲ್ಲಿ ಏನಾಯಿತು ಎಂಬುದನ್ನು ಓದಿಕೊಳ್ಳಿ.

ನಮ್ಮಲ್ಲಿ ಕೋಪ ಮೂಡಿಸಬೇಕಿರುವ ಇನ್ನೂ ಒಂದು ವಿಚಾರ ಇದೆ. ಇತರ ಭಾರತೀಯರಿಂದ ರಕ್ಷಣೆ ಕೇಳಲು ಭಾರತೀಯ ಸೇನೆಯು ಮಕ್ಕಳನ್ನು ಬಳಸಿಕೊಳ್ಳುತ್ತಿದೆ. ಭಾರತದ ಪ್ರಜೆಗಳು ಭಾರತದ ಪೊಲೀಸ್ ಠಾಣೆಯಲ್ಲಿ ಭಾರತದ ಪೊಲೀಸರ ಮೂಲಕ ದಾಖಲಿಸುವ ಪ್ರಕರಣಗಳ ಬಗ್ಗೆ, ಭಾರತದ ನ್ಯಾಯಾಧೀಶರು ಭಾರತದ ನ್ಯಾಯಾಲಯದಲ್ಲಿ ನಡೆಸುವ ವಿಚಾರಣೆಗಳ ಬಗ್ಗೆ ಸೇನೆ ಭಯ ಹೊಂದಿದೆ.

ಇದು ನನ್ನ ಪಾಲಿಗೆ ಅಪರಾಧದ ರೀತಿಯಲ್ಲಿ ಕಾಣಿಸುವುದಕ್ಕಿಂತಲೂ, ಮುಜುಗರದ ರೀತಿಯಲ್ಲಿ ಕಾಣುತ್ತಿದೆ. ಭಾರತದ ಸೈನಿಕರು ಯಾವುದೇ ಅಪರಾಧ ಎಸಗಲಿ, ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇರಲಿ, ಸೇನೆಯು ಭಾರತದಲ್ಲಿ ನ್ಯಾಯ ವ್ಯವಸ್ಥೆಯ ಕೈಗಳಿಂದ ದೂರವೇ ಉಳಿದಿರುತ್ತದೆ. ಜವಾನರು ಅತ್ಯಾಚಾರ ನಡೆಸಬಹುದು, ಹತ್ಯೆ ಮಾಡಬಹುದು, ಅಪಹರಣ ನಡೆಸಬಹುದು, ಕಿರುಕುಳ ನೀಡಬಹುದು... ಅವರು ಈ ಎಲ್ಲ ಅಪರಾಧ ಕೃತ್ಯಗಳಿಂದ ತಪ್ಪಿಸಿಕೊಳ್ಳುವ ಭರವಸೆ ಪಡೆದಿರುತ್ತಾರೆ. ಏಕೆಂದರೆ ಯಾವ ಸರ್ಕಾರವೂ ಅನುಮತಿಯ ಸ್ಥಿತಿಯನ್ನು ‘ನಿರಾಕರಣೆ’ ಮತ್ತು ‘ಬಾಕಿ’ ಎಂಬುದರಿಂದ ‘ಅನುಮತಿ ನೀಡಲಾಗಿದೆ’ ಎಂದು ಬದಲಾಯಿಸುವುದಿಲ್ಲ. ಕಾಶ್ಮೀರದ ಸಹಸ್ರಾರು ಮಂದಿ ಕಲ್ಲು ಎಸೆಯುತ್ತಿರುವುದು ಏಕೆ ಎಂಬುದನ್ನು ಭಾರತದ ಚಿಣ್ಣರು ಹಾಗೂ ನಾವೆಲ್ಲರೂ ಒಂದಲ್ಲ ಒಂದು ಬಾರಿ ಆಲೋಚಿಸಬೇಕು.

ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT