ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲೆಹ ಎಂಬ ಪಟ್ಟಣದ ಕತೆ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಲ್ಯಕ್ಕೆ ಹೋಗಬೇಕೆಂದು ಬಹುದಿನಗಳಿಂದ ಬಯಸಿದ್ದೆ. ಕಲ್ಯದ ಸೆಳೆತಕ್ಕೆ ಕಾರಣ, ಅಲ್ಲಿರುವ ಐತಿಹಾಸಿಕ ಮಹತ್ವದ ಶಾಸನ. ಎರಡು ಮತಗಳ ನಡುವೆ ಭೀಕರ ತಿಕ್ಕಾಟ ಸಂಭವಿಸಿದಾಗ, ದೊರೆಯೊಬ್ಬ ನಡುಪ್ರವೇಶ ಮಾಡಿ, ಅವುಗಳಿಗೆ `ರಾಜಿ~ ಮಾಡಿಸಿ, ಕಟ್ಟಳೆ ವಿಧಿಸಿದ ಶಾಸನವಿದು. ಇದನ್ನು ಮತ ಸಾಮರಸ್ಯದ ಸಂಕೇತವೆಂದು ವಿದ್ವಾಂಸರು ಅಭಿಮಾನದಿಂದ ಉಲ್ಲೇಖಿಸುವುದುಂಟು. ಮತಧರ್ಮದ ಹೆಸರಲ್ಲಿ ಗಲಭೆಗಳು ಸಾಮಾನ್ಯವಾಗಿರುವ ಸಮಾಜದಲ್ಲಿ, ಅವನ್ನು ನೀಗಲು ಸರ್ಕಾರಗಳು ಕಟ್ಟಳೆ ರೂಪಿಸುತ್ತಿರುವ ಹೊತ್ತಲ್ಲಿ, ಇದರಿಂದ ಕಲಿಯಬಹುದಾದ ಪಾಠವೇನು ಎಂದು ನನಗೆ ಕಾಡುತ್ತದೆ. ಈಚೆಗೆ ಅಲ್ಲಿಗೆ ಹೋಗಲು ಸಾಧ್ಯವಾಯಿತು.

ಶಾಸನಗಳಲ್ಲಿ `ಕಲ್ಲೆಹ~ ಎಂದು ಕರೆಯಲಾಗುವ ಕಲ್ಯ, ಮಾಗಡಿ ತಾಲೂಕಿನ ಪುಟ್ಟ ಊರು. ಇದರ ಇತಿಹಾಸ ಕುರಿತು ವಿದ್ವಾಂಸರಾದ ಅ.ಸುಂದರ, ಚಿದಾನಂದಮೂರ್ತಿ, ಎಸ್.ಶೆಟ್ಟರ್, ಎಂ.ಜಿ.ನಾಗರಾಜ ಮುಂತಾದವರು ಅಧ್ಯಯನ ಮಾಡಿದ್ದಾರೆ. ಹುಲಿಯೂರು ದುರ್ಗ, ಕುಣಿಗಲ್, ದಾಬಸ್‌ಪೇಟೆ, ರಾಮನಗರ, ಬೆಂಗಳೂರು- ಹೀಗೆ ಹಲವು ದಿಕ್ಕಿನಿಂದ ಮಾಗಡಿಗೆ ಪ್ರವೇಶವಿದ್ದು, ನಾನು ರಾಮನಗರದಿಂದ ಸಾವನದುರ್ಗದ ಬಾಜು ಸಾಗುವ ಹಾದಿಯನ್ನು ಆಯ್ದುಕೊಂಡಿದ್ದೆ. ಬೇಶಕ್, ಕರ್ನಾಟಕದ ಸುಂದರವಾದ ಹಾದಿಗಳಲ್ಲಿ ಇದೊಂದು. ಇಲ್ಲಿನ ಭೂಪ್ರದೇಶವೇ ಚಂದ. ಚಿಕ್ಕ ಕಣಿವೆಗಳಲ್ಲಿ ಲಾವಾರಸವನ್ನೇ ಕಡೆದು ತೆಗೆದ ಮುದ್ದೆಗಳಂತಿರುವ ಹೆಬ್ಬಂಡೆಗಳು; ಅವುಗಳ ಇರುಕಿನಲ್ಲೇ ಹೇಗೋ ಬೇರುತಳೆದು ಬದುಕಿರುವ ಗಿಡಮರ. ನೆಲಕ್ಕೆ ಹರಡಿರುವ ಹಚ್ಚನೆಯ ಪೈರು; ಅಲ್ಲಲ್ಲಿ ಹಸಿರು ಹೆಪ್ಪುಗಟ್ಟಿ ನಿಂತಂತೆ ಮಾವಿನತೋಪು. ಕರ್ನಾಟಕದಲ್ಲಿ ಒಳ್ಳೇ ಮಳೆಬೀಳುವ ಪ್ರದೇಶಗಳಲ್ಲಿ ಮಾಗಡಿಯೂ ಒಂದು. ಇಲ್ಲಿನ ಕೊಳ್ಳಗಳಲ್ಲಿ ಅರ್ಕಾವತಿ ಮತ್ತು ಕಣ್ವ ಹೊಳೆಗಳು ಜನಿಸುತ್ತವೆ. ಇಂತಹ ಸಮದ್ಧಿಯ ಕಡೆ ತಾನೇ ವಣಿಕ ಮತ್ತು ರಾಜಕೀಯ ಕೇಂದ್ರಗಳು ರೂಪುಗೊಳ್ಳುವುದು? ತೊಡಕೆಂದರೆ, ಇವೆರಡೂ ಪೈಪೋಟಿ-ಹುನ್ನಾರವಿರುವ ಕ್ಷೇತ್ರಗಳು. ಇವುಗಳ ಜತೆ ಮತಧರ್ಮಗಳ ವೈಮನಸ್ಸೂ ಸೇರಿಕೊಂಡಿತೆಂದರೆ, ಮತಾಪನ್ನೂ ಕಿಡಿಯನ್ನೂ ಒಟ್ಟಿಗೆ ಇಟ್ಟಂತೆ. ಬಡವರು ಸಂಘರ್ಷವೆದ್ದರೆ, ಹೊಸ ವ್ಯವಸ್ಥೆಯಾದರೂ ಹುಟ್ಟುವುದು. ಅಧಿಕಾರ ಮತ್ತು ಸಂಪತ್ತಿಗಾಗಿ ಬಲಿಷ್ಠ ವರ್ಗಗಳು ಸೆಣಸಾಡಿದರೆ, ಕೋಣನೆರಡೂ ಹೋರಿದಂತೆ ಸರ್ವನಾಶ. ಕಲ್ಯ ಇಂತಹ ಹೋರಿನಲ್ಲಿ ನಲುಗಿತು.

ನನ್ನನ್ನು ಕಲ್ಯದ ಯಾನಕ್ಕೆ ಆಹ್ವಾನಿಸಿದ್ದ ಆತ್ಮೀಯರಾದ ಶ್ರೀ ಮಾಗಡಿ ಚಂದ್ರ ಹಾಗೂ ಅವರ ಬಳಗದ ಮಾರಣ್ಣ, ಲಕ್ಷ್ಮೀನರಸಿಂಹಯ್ಯ, ಬಸವರಾಜು ಅವರೊಂದಿಗೆ ಬೆಳಿಗ್ಗೆಯೇ ಹೊರಟೆ. ಮಾಗಡಿಯಿಂದ 5 ಕಿ.ಮೀ. ಫಾಸಲೆಯಲ್ಲಿರುವ ಕೆಂಪ್ಹಂಚಿನ ಮನೆಗಳ ಈ ಪುಟ್ಟಊರು, ಸುಟ್ಟ ಬೂದಿಯಿಂದಲೇ ಮರುಜೀವ ತಳೆದ ಫೀನಿಕ್ಸಿನಂತೆ ಕಾಣುತ್ತಿತ್ತು. ಊರಮುಂದೆ ಒಣಹಾಕಿರುವ ನೀರಪರದೆಯಂತೆ ಅಸಹಾಯಕವಾಗಿ ಮಲಗಿರುವ ಕೆರೆ; ಊರ ಬೆನ್ನಿಗೆ ಆತುಕೊಂಡಂತೆ ಬಂಡೆಗಳ ಬೆಟ್ಟ. ಊರ ಬಾಗಿಲಲ್ಲೇ ಹುಲಿಯ ಜತೆ ಸೆಣಸುತ್ತಿರುವ ವೀರನ ಸ್ಮಾರಕ. ಮಾಗಡಿಯಲ್ಲೂ ಆನೆಯೊಂದಿಗೆ ಹೋರಾಡಿ ಪ್ರಾಣಬಿಟ್ಟವನ ವೀರಗಲ್ಲಿತ್ತು. ಪ್ರಾಣಿ-ಮನುಷ್ಯರ ಸಂಘರ್ಷದ ಈ ಕುರುಹು ಕಂಡರೆ, ಮಾಗಡಿ ಒಂದು ಕಾಲಕ್ಕೆ ದಟ್ಟಕಾಡಿದ್ದ ಪ್ರದೇಶವಾಗಿತ್ತು ಎನಿಸುತ್ತದೆ. ಈ ಪರಿಸರದಲ್ಲಿ ಈಗಲೂ ಹುಲಿ ಹೆಸರಿನ ಹತ್ತಾರು ಊರುಗಳಿವೆ. ಕಾಡು ಹೊಲಗಳಾಗಿ, ಹುಲ್ಲೆಗಳು ನಾಶವಾಗಿ ಹುಲಿಯೂ ಅಳಿದಿರಬೇಕು. ಕಾಡುಪ್ರಾಣಿ ಸಂತತಿ ನಾಶಕ್ಕೆ, ಅವುಗಳ ಬೇಟೆಯಾಡಬೇಕಿಲ್ಲ. ಅವುಗಳ ಆಹಾರ ಸರಪಳಿ ಭಗ್ನಗೊಳಿಸಿದರೆ ಸಾಕು. ಪ್ರಾಣಿಗಳು ತಮ್ಮ ಮೂಲ ತಾಣಕ್ಕೆ ತಾವೇ ಅಕ್ರಮ ಪ್ರವೇಶಿಗರಾಗಿ ಕೊಲೆಗೊಳ್ಳುವುದು ಒಂದು ವೈರುಧ್ಯ. ಪ್ರಾಣಿ-ಪ್ರಾಣಿಯ ಸಂಘರ್ಷ ನಿಸರ್ಗ ಸಹಜವಾದರೆ, ಪ್ರಾಣಿ-ಮನುಷ್ಯ ಸಂಘರ್ಷ ನಿಸರ್ಗ ಮತ್ತು ನಾಗರಿಕತೆಗಳ ಮುಖಾಮುಖಿ ಎನ್ನಬಹುದು. ಮತೀಯ ಕಲಹ ಮಾತ್ರ, ಸಮುದಾಯ ಒಂದರ ಚೈತನ್ಯದ ಮೂಲವನ್ನೇ ಮುರಿಯಲು ಮಾಡುವ ಯೋಜಿತ ಆಕ್ರಮಣ. ಆಧುನಿಕ ಮತೀಯ ಕದನಗಳಿಗೆ ಇನ್ನೂ ಜಟಿಲ ಆಯಾಮಗಳಿವೆ. ಕಲ್ಯದ ವಿಶೇಷವೆಂದರೆ, ಹಲವು ಮತಗಳ ಅವಶೇಷಗಳು ಒಂದೆಡೆ ಇರುವುದು:

1. ಪ್ರಾಚೀನ ಬೌದ್ಧತಾಣವಾಗಿದ್ದ ಕಲ್ಯವನ್ನು ಶಾಸನಗಳಲ್ಲಿ `ಬೌದ್ಧವಾಸಾ ಮಹಾಪುರೀ~ ಎಂದು ಕರೆದಿದೆ. `ತಾರಕಾಚಲ~ವೆಂಬ ಇಲ್ಲಿನ ಬೆಟ್ಟದಲ್ಲಿ ಗುಹೆಗಳಿವೆ. ಇಲ್ಲಿರುವ ಒಂದು ರುಂಡಶಿಲ್ಪವು ಬೌದ್ಧರ ತಾರಾಭಗವತಿ ಎಂದು ಊಹಿಸಲಾಗಿದೆ. (ಇಲ್ಲಿರುವ ತಾವರೆಮೊಗ್ಗನ್ನು ಹಿಡಿದ ಸೂರ್ಯಮೂರ್ತಿ ಪದ್ಮಪಾಣಿ ಬುದ್ಧನದಿರಬಹುದು ನನ್ನ ಊಹೆ).  

2. ಕರ್ನಾಟಕದಲ್ಲಿ ಬೌದ್ಧತಾಣಗಳು ಶೈವವಾಗಿ ಜೈನವಾಗಿ ರೂಪಾಂತರ ಪಡೆಯುತ್ತಾ ಹೋದವು. ಧರ್ಮಸ್ಥಳ ಕದ್ರಿ ಇದಕ್ಕೆ ನಿದರ್ಶನ. ಕಲ್ಯ ಪರಿಸರದಲ್ಲಿ ಈಗಲೂ ಹೂಜಿಗಲ್ಲಿನಂತಹ ಪ್ರಸಿದ್ಧ ಜೈನಕೇಂದ್ರಗಳಿವೆ. ಸಿರಿವಂತ ಜೈನ ವಣಿಕರಿದ್ದ ಕಲ್ಯದಲ್ಲೇ ಐದು ಬಸದಿಗಳಿದ್ದವು. ಅವು ಮತಕದನದಲ್ಲಿ ಬೂದಿಯಾದವು. ಸದ್ಯಕ್ಕೆ ಅವಶೇಷಗಳು ಉಳಿದಿವೆ. ಬಸ್ತಿಬಾಗಿಲು, ಬಸ್ತಿಗುಂಡಿ ಎನ್ನಲಾಗುವ ಜಾಗಗಳು ಹೊಲಗಳಾಗಿ, ಅದರಲ್ಲಿ ರಾಗಿ, ತೊಗರಿ, ಅವರೆ ಬೆಳೆದಿವೆ. ಹೊಲಗಳ ನಡುವೆ ಮಾನಸ್ತಂಭ ಏಕಾಂಗಿ ನಿಂತಿದೆ.
3. ಹೊಯ್ಸಳ ದೊರೆ ಬಿಟ್ಟಿದೇವನು ರಾಮಾನುಜರ ಪ್ರಭಾವದಿಂದ ಜೈನಮತ ತೊರೆದು ವಿಷ್ಣುವರ್ಧನನಾದ ಬಳಿಕ, ದಕ್ಷಿಣ ಕರ್ನಾಟಕದಲ್ಲಿ ವೈಷ್ಣವೀಕರಣದ ಹೆದ್ದೆರೆಯೊಂದು ಎದ್ದಿತಷ್ಟೇ. ವಿಜಯನಗರ ದೊರೆಗಳ ಕಾಲದಲ್ಲಿ ಅದಕ್ಕೆ ಮತ್ತಷ್ಟು ಧಾಡಸಿತನ ಕೂಡಿಕೊಂಡಿತು. ಆಗ ಎಷ್ಟೋ ಸಮುದಾಯಗಳು ಶ್ರೀವೈಷ್ಣವವಾದವು. ಮಾಗಡಿ ಸೀಮೆ ಈಗಲೂ ಶ್ರೀವೈಷ್ಣವ ಗುಡಿಗಳಿಂದ ತುಂಬಿಕೊಂಡಿದೆ. ಆದರೆ ಕಲ್ಯದಲ್ಲಿದ್ದ ವರದರಾಜಸ್ವಾಮಿ ಗುಡಿ ಕಣ್ಮರೆಯಾಗಿ, ಸದ್ಯ ಗರುಡಗಂಬ ಮಾತ್ರ ಒಂಟಿಯಾಗಿ ನಿಂತಿದೆ. 

4. ಕಲ್ಯ ನಾಥಪಂಥದ ಭೈರವ ಆರಾಧನೆಗೂ ಹೆಸರಾಗಿತ್ತು. ಇದರ ಆಸುಪಾಸು ಭೈರವ ಹೆಸರಿನ ಬೆಟ್ಟ, ದುರ್ಗ, ಗುಡಿ, ಊರು ಮತ್ತು ಕೆರೆಗಳಿವೆ. ನಾಥಕೇಂದ್ರವಾಗಿದ್ದ ಆದಿಚುಂಚನಗಿರಿ ಇಲ್ಲಿಗೆ ಸಮೀಪ. ಕಲ್ಯದಲ್ಲೇ `ಬುರಾದೇವರ~ ಶಾಸನವಿದೆ. ಭೈರವನ ಬಾಗಿಲಿದೆ. ಕದ್ರಿಯಲ್ಲಿ ಬೌದ್ಧರ ತಾಣಗಳು ನಾಥವಾದಂತೆ, ಇಲ್ಲೂ ರೂಪಾಂತರ ಸಂಭವಿಸಿರಬಹುದು.

5. ಕಲ್ಯದಲ್ಲಿ ಶೈವವಿತ್ತು. ವೀರಶೈವವೂ ಇತ್ತು. `ಬಸಪುರಾಣಮು~ ರಚಿಸಿದ ತೆಲುಗು ಕವಿ ಪಾಲ್ಕುರಿಕೆ ಸೋಮನಾಥ, ದೂರದ ಆಂಧ್ರದಿಂದ ಇಲ್ಲಿದ್ದ ಸರ್ವಶೀಲೆ ಚನ್ನಮ್ಮನೆಂಬ ಸಾಧಕಿ ಕಾಣಲು ಬಂದವನು ಇಲ್ಲಿಯೇ ಕಾಲವಾದನು. ಅವನ ಸಮಾಧಿ ಇಲ್ಲಿದೆ. 

ಕಲ್ಯದಂತೆ ಹಲವು ಮತ-ಪಂಥಗಳ ಅವಶೇಷಗಳು ಒಟ್ಟಿಗಿರುವ ತಾಣಗಳೆಂದರೆ- ಲಕ್ಕುಂಡಿ, ಕದ್ರಿ, ಧರ್ಮಸ್ಥಳ, ಐಹೊಳೆ, ಬದಾಮಿ, ಬನವಾಸಿ, ಹಂಪಿ, ಕೊಪ್ಪಳ. ಜೀವಂತವಿದ್ದಾಗ ಕಾದಾಡಿದ ಮತಗಳು ಅವಶೇಷರೂಪದಲ್ಲಿ ಮಾತ್ರ ಸಾಮರಸ್ಯದಲ್ಲಿ ಒಟ್ಟಿಗಿವೆ. ಮತಗಳು ಕೊಡುಕೊಳು ಮಾಡುತ್ತ ಸಹಬಾಳಿಕೆ ಮೂಲಕ ಒಟ್ಟಿಗೆ ನೆಲೆಸುವುದು ಒಂದು ಪರಿ; ಪರಸ್ಪರ ಘರ್ಷಿಸಿ ಅವಶೇಷಗಳಾಗಿ ನೆಲೆಸುವುದು ಇನ್ನೊಂದು ಪರಿ. ಕಲ್ಯದ `ಬೌದ್ಧ~ ದೇವತೆಯ ರುಂಡವು, ಡಂಬಳ ಲಕ್ಕುಂಡಿಗಳಲ್ಲಿರುವ ಬುದ್ಧನ ರುಂಡಗಳನ್ನು ನೆನಪಿಸುತ್ತದೆ. ಆದರೆ ಭಗ್ನತೆ ಇವುಗಳ ಮೊಗದ ನಗುವನ್ನು ಕಸಿದಿಲ್ಲ. ಐಹೊಳೆಯ ಚೈತ್ಯಾಲಯದ ಮತ್ತು ಬದಾಮಿ ಗುಹೆಯ ಪದ್ಮಪಾಣಿ ಬುದ್ಧನ ನಗು ನೋಡಬೇಕೆಂದರೆ, ಅವಕ್ಕೆ ಮೊಗವನ್ನೇ ಒಡೆದು ಕಳೆಯಲಾಗಿದೆ.   

ಕಲ್ಯದಲ್ಲಿ ಬಸವನೊಂದು ತನ್ನ ಪಾದದಿಂದ ಮನುಷ್ಯ ರುಂಡದ ಮೇಲೆ ಕಾಲಿಟ್ಟು ನಿಂತಿರುವ ಶಿಲ್ಪವಿದೆ. ಅದು ವೈಷ್ಣವಾಚಾರ್ಯ ಚಕ್ರಪಾಣಿ ರಂಗನಾಥನನ್ನು ಪಾಲ್ಕುರಿಕೆ ಸೋಮನಾಥನು ಸೋಲಿಸಿ ಶೈವೀಕರಿಸಿದ ಸಂಕೇತವೆಂದು ವಿದ್ವಾಂಸರ ಊಹೆ. ಇದಾಗಲೀ, ಬೌದ್ಧರ ತಾರೆಯನ್ನು ಜೈನಮುನಿಗಳು ಸೋಲಿಸಿದ ಕತೆಯಾಗಲೀ, ಚಕ್ರಾತ್ತಾಳ್ವಾರರ ಭಗ್ನವಿಗ್ರಹವಾಗಲೀ, ಇಲ್ಲಿರುವ ಶಾಸನವಾಗಲೀ, ಅನಾಥವಾಗಿ ನಿಂತಿರುವ ಮಾನಸ್ತಂಭ-ಗರುಡಗಂಬಗಳಾಗಲೀ, ಹೊಲಗಳಲ್ಲಿ ಅಗೆದರೆ ಸಿಗುತ್ತದೆ ಎನ್ನಲಾಗುವ ಬೂದಿಯಾಗಲೀ- ಎಲ್ಲವೂ ಮತ ಸಂಘಟನೆಯಿಂದ ಸರ್ವನಾಶವಾದ ಕತೆಯನ್ನು ಮೂಕವಾಗಿ ನಿರೂಪಿಸುತ್ತಿವೆ. ಈ ಘರ್ಷಣೆಗಳಲ್ಲಿ ಪೆಟ್ಟುತಿಂದವರು ಮಾತ್ರವಲ್ಲ, ಹಲ್ಲೆ ಮಾಡಿದವರೂ ನೆಮ್ಮದಿಯಿಂದ ಬಾಳಿದಂತಿಲ್ಲ.

ಮುಖ್ಯ ಪ್ರಶ್ನೆ- ಕಲ್ಯದ ಜೈನ-ವೈಷ್ಣವರ ಘರ್ಷಣೆಗೆ ಪ್ರಚೋದನೆ ನೀಡಿದ್ದಾದರೂ ಏನು? ಜೈನ ಮಹಿಳೆಯೊಬ್ಬಳು ವೈಷ್ಣವರ ಕೇರಿಯಲ್ಲಿ ಕುಂಬಳಕಾಯಿ ಮಾರ ಹೋದಳೆಂದೂ, ಸಂಜೆತನಕ ತಿರುಗಿದರೂ ಯಾರೂ ಕೊಳ್ಳದ ಕಾರಣ, ಅದನ್ನು ಕೇರಿಯ ಮುಂದೆ ಎತ್ತಿಹಾಕಿ ಒಡೆದಳೆಂದೂ, ಇದುವೇ ಕಲಹಕ್ಕೆ ನಾಂದಿಯಾಯಿತೆಂದೂ ಐತಿಹ್ಯವಿದೆ. ಜಾನಪದವು ನಡೆದಿರಬಹುದಾದ ಘೋರವನ್ನು ಸಾಂಕೇತಿಕವಾಗಿ ಹೇಳುತ್ತಿರುವಂತಿದೆ. ನಡೆದಿದ್ದು ಮಾತ್ರ, ಜೈನರ ಸಂಪತ್ತಿನ ಮೂಲವಾದ ವಾಣಿಜ್ಯವನ್ನು ನಾಶಮಾಡಿ, ಅವರ ಎದೆಗುಂದಿಸುವ ಯುದ್ಧವೇ. ಮತಗಳ ನಡುವೆ ಮಚ್ಚರ ಹುಟ್ಟುವುದು, ಅವುಗಳ ಧಾರ್ಮಿಕ ನಂಬಿಕೆ ಆಚರಣೆಗಳ ಭಿನ್ನತೆಯ ಕಾರಣದಿಂದಲ್ಲ; ಮತಧರ್ಮಗಳನ್ನು ನಂಬಿ ದೈನಿಕ ಬಾಳಿಗೆ ಸೆಣಸಾಟ ನಡೆಸುವ ಸಾಮಾನ್ಯರ ವೈಮನಸ್ಸಿನಿಂದಲೂ ಅಲ್ಲ. ಸಂಪತ್ತು, ಅಧಿಕಾರ, ಸಾಮಾಜಿಕ ಯಜಮಾನಿಕೆಗಾಗಿ ಹುರುಡಿಸುವ, ಅದಕ್ಕಾಗಿ ಮತವನ್ನು ಹತ್ಯಾರವಾಗಿ ಬಳಸುವ, ಹಿತಾಸಕ್ತ ವರ್ಗಗಳ ಹುನ್ನಾರದಿಂದ. ಆಗ ಸಣ್ಣನೆಪವೂ ಸೇಡಿನ ಸುಪ್ತ ಲಾವಾರಸ ಚಿಮ್ಮಲು ಕಾರಣವಾಗುತ್ತದೆ. ಮತಗಳ ಬೆನ್ನಿಗೆ ಪ್ರಭುತ್ವವು ನಿಂತು ಅವು ರಾಜಧರ್ಮವಾದರಂತೂ, ಉಗ್ರಹುಲಿಗಳಾಗಿ ರೂಪಾಂತರ ಪಡೆಯುತ್ತವೆ. ಇಸ್ಲಾಂ, ಶೈವ, ವೀರಶೈವ, ಶ್ರೀವೈಷ್ಣವ- ಎಲ್ಲವೂ ತಂತಮ್ಮ ಹಂಗಾಮಿನಲ್ಲಿ ಹೀಗೆ ಹುಲಿಗಳಾಗಿ ಪಂಜದ ಹೊಡೆತ ಕೊಟ್ಟವು.

ವಿಚಿತ್ರವೆಂದರೆ, ಬದಲಾದ ರಾಜಕೀಯ - ಸಾಮಾಜಿಕ ಸನ್ನಿವೇಶದಲ್ಲಿ ಹುಲಿಯಾಗಿದ್ದ ಮತವೊಂದು ಹುಲ್ಲೆಯಾಗುವ ಅಥವಾ ಹುಲ್ಲೆಯಾಗಿದ್ದು ಹುಲಿಯಾಗುವ ರೂಪಾಂತರ ಪಡೆಯುವುದು. ಶೈವ ಚೋಳರಿಂದ ಮಾರಣಾಂತಿಕ ಪೆಟ್ಟು ತಿನ್ನುತ್ತ ಬೆದರಿದ ಹುಲ್ಲೆಯಾಗಿ ಬಂದ ಶ್ರೀವೈಷ್ಣವವು, ಕರ್ನಾಟಕದಲ್ಲಿ ಜೈನರ ಮೇಲೆ ಹುಲಿಯಾಗಿ ಬೀಳತೊಡಗಿತು; ವಿಜಯನಗರದ ಕಾಲದಲ್ಲಿ ಶೈವ-ವೈಷ್ಣವಗಳೆರಡೂ ಹುಲಿಗಳೇ ಆಗಿದ್ದವು. ಮೈಸೂರೊಡೆಯರ ಕಾಲದಲ್ಲಿ ಜೈನ-ಶೈವ-ವೈಷ್ಣವಗಳ ಘರ್ಷಣೆಯನ್ನು ಮಾಸ್ತಿಯವರ `ಪಂಡಿತನ ಮರಣಶಾಸನ~ ಕತೆ ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಇಷ್ಟಕ್ಕೂ ಕರ್ನಾಟಕದಲ್ಲಿ ಅತಿಹೆಚ್ಚು ಪೆಟ್ಟುತಿಂದ ಮತ ಜೈನವೇ ಇರಬೇಕು. ಕರ್ನಾಟಕದಾದ್ಯಂತ ಸಿಗುವ ಭಗ್ನ ಜಿನಮೂರ್ತಿಗಳೂ ಪಾಳು ಬಸದಿಗಳೂ ಇದಕ್ಕೆ ಪುರಾವೆ. 12ನೇ ಶತಮಾನದ ಬಳಿಕ ರಾಜಾಶ್ರಯ ತಪ್ಪಿದ ಬಳಿಕ ಜೈನವು, ನಿರಂತರ ಘಾಸಿಗೀಡಾಗುತ್ತಾ ಹೋಯಿತು. ಹರಿಹರನ `ಆದಯ್ಯನ ರಗಳೆ~ಯು ಪುಲಿಗೆರೆಯ ಜೈನರ ಸಾಮೂಹಿಕ ವಧೆಯ ರೂಪಕದಂತಿದೆ. ಜೈನಕವಿ ದೇವಚಂದ್ರ ಇತರ ಮತಗಳು ಜೈನದ ಮೇಲೆ ನಡೆಸಿದ ದುಂಡಾವರ್ತಿಯ ಪಟ್ಟಿಯನ್ನೇ ಕೊಡುತ್ತಾನೆ. ಮತೀಯ ಕದನಗಳು ಕರ್ನಾಟಕ ಚರಿತ್ರೆಯನ್ನು ನೆತ್ತರಿನಿಂದ ಸಾಕಷ್ಟು ತೋಯಿಸುತ್ತಾ ಬಂದಿವೆ.

ಕಲ್ಯದ ಮಹತ್ವವಿರುವುದು ಮತ ಘರ್ಷಣೆಯಲ್ಲಿ ಪ್ರಭುತ್ವವು ನಡುಪ್ರವೇಶಿಸಿ, ರಾಜಧರ್ಮ ಪಾಲಿಸಿದ್ದರಲ್ಲಿ; ಮುಂದೆ ಹೀಗಾಗದಂತೆ ಧಾರ್ಮಿಕ ನೀತಿಯೊಂದನ್ನು ರೂಪಿಸಿದ್ದರಲ್ಲಿ. ಕಲ್ಯ ಮತ್ತು ಬೆಳಗೊಳದಲ್ಲಿ ಬುಕ್ಕರಾಯನು ಹಾಕಿಸಿದ ಶಾಸನಗಳ (1368) ಪ್ರಕಾರ- ಕಲ್ಯ, ಆನೆಗೊಂದಿ, ಹೊಸಪಟ್ಟಣ, ಪೆನುಗೊಂಡೆ ಮುಂತಾದ ಕಡೆಯಿಂದ ದೊರೆಗೆ `ಸಮಸ್ತ ನಾಡ ಭವ್ಯಜನಂಗಳು ಭಕ್ತರು ಮಾಡುವ ಅನ್ಯಾಯಂಗಳನು ಬಿನ್ನಹ~ ಮಾಡುತ್ತಾರೆ; ಆಗ ದೊರೆಯು ಮತ ಪ್ರಮುಖರನ್ನು ಒಟ್ಟಿಗೆ ಕೂರಿಸಿ, `ವೈಷ್ಣವ ದರ್ಶನಕ್ಕೆಯೂ ಜೈನದರ್ಶನಕ್ಕೆಯೂ ಭೇದವಿಲ್ಲೆಂದು ವೈಷ್ಣವರ ಕೈಯಲು ಜೈನರ ಕೈವಿಡಿದು~ ಕೊಡುತ್ತಾನೆ; ``ಜೈನದರ್ಶನಕ್ಕೆ ಭಕ್ತರ ದೆಸೆಯಿಂದ ಹಾನಿವೃದ್ಧಿಯಾದರೂ, ವೈಷ್ಣವ ಹಾನಿವೃದ್ಧಿಯಾಗಿ ಪಾಲಿಸುವರು... ಚಂದ್ರಾರ್ಕಸ್ಥಾಯಿಯಾಗಿ ವೈಷ್ಣವ ಸಮಯವು ಜೈನದರ್ಶನವ ರಕ್ಷಿಸಿಕೊಂಡು ಬಹೆವು. ವೈಷ್ಣವರೂ ಜೈನವೂ ವೊಂದು. ಭೇದವಾಗಿ ಕಾಣಲಾಗದು~ ಎಂದು ಕರಾರು ಮಾಡಿಸುತ್ತಾನೆ. ಇದೊಂದು ಅಪೂರ್ವ ಯತ್ನವೇ ದಿಟ. ಆದರೆ ಈ ಕರಾರು ಅಸಮಾನರ ನಡುವೆ ಏರ್ಪಟ್ಟ ಸಾಮರಸ್ಯವೆಂದೂ, ನಷ್ಟಕ್ಕೀಡಾದ ಜೈನರು ತಮಗೆ ಪೆಟ್ಟು ಕೊಟ್ಟವರಿಗೇ ರಕ್ಷಣಾ ತೆರಿಗೆ ಕೊಡಬೇಕಾದ ವಿಚಿತ್ರ ಅಸಹಾಯಕತೆಗೆ ನೂಕಲ್ಪಟ್ಟರು ಎಂಬ ವ್ಯಾಖ್ಯಾನವೂ ಇದೆ. ಕಾರಣ, ದೊರೆಯು ಬಸದಿಗಳ ರಕ್ಷಣೆಯ ಹೊಣೆಯನ್ನು ಶ್ರೀವೈಷ್ಣವರಿಗೆ ವಹಿಸಿ, ಅಂಗರಕ್ಷಣೆಯ ವೆಚ್ಚವಾಗಿ ರಾಜ್ಯದ ಸಮಸ್ತ ಜೈನರು ಮನೆಯೊಂದಕ್ಕೆ 1 ಹಣ ಕೊಡಬೇಕೆಂದು ವಿಧಿಸುವುದು. ಪ್ರಭುತ್ವಗಳು ಬಲಿಷ್ಠರ ಪರವಾಗಿ ನಿಲ್ಲುವುದನ್ನೇ ನ್ಯಾಯ ಎಂದು ಭಾವಿಸುತ್ತಾ ಬಂದಿವೆಯೇನು?

ಸಂಘರ್ಷ ನಡೆದ ತಾಣಕ್ಕೆ ಗಾಯ ಹಸಿಯಾಗಿರುವಾಗಲೇ ಹೋಗುವುದಕ್ಕೂ, ನಡೆದದ್ದೆಲ್ಲ ಮರೆವಿಗೆ ಸಂದು  ಶತಮಾನಗಳಾದ ಬಳಿಕ ಹೋಗುವುದಕ್ಕೂ ಫರಕಿರುತ್ತದೆ. ಕಲ್ಯದಲ್ಲಿ ಸುಟ್ಟ ಊರು ಹೊಲಗಳಾಗಿ, ಮನೆಯ ಬುನಾದಿ ಕಲ್ಲುಗಳು ಬದುಗಳಾಗಿ, ಅವುಗಳ ಮೇಲೆ ಹಸಿರು ಬೆಳೆದು ನಿಂತಿದೆ. ಹೀಗಿರುವಾಗ ಅದನ್ನು ಮತ್ತೆ ಅಗೆಯಬೇಕೇಕೆ? ಹೊಸ ಅರಿವಿಗಾಗಿಯೇ? ಹೀಗೆ ಅಗೆದು ಪಡೆದ ಅರಿವು ಮತ ಸಂಘರ್ಷವಿಲ್ಲದ ನಾಳೆಯನ್ನು ರೂಪಿಸಬಲ್ಲುದೇ? ಈ ಅರಿವೇ ಭವಿಷ್ಯಕ್ಕೆ ಪಾಠವಾಗುವ ಬದಲು ಕರಾಳವಾದರೆ? ಕೆಲವು ಲೇಖಕರು ಚರಿತ್ರೆಯಿಂದ ಇಂತಹ ನಂಜನ್ನು ಅಗೆದುತೆಗೆದು ವರ್ತಮಾನಕ್ಕೆ ಊಡುತ್ತಿದ್ದಾರಲ್ಲವೇ? ಹಾಗಾದರೆ ಇತಿಹಾಸದೊಂದಿಗೆ ವರ್ತಮಾನದ ಸಂಬಂಧ ಸ್ವರೂಪವೇನು? ಪ್ರಶ್ನೆಗಳು ತಲೆಯಲ್ಲಿ ಕುಮ್‌ಚಟ್ಟು ಹಾಕತೊಡಗಿ, ನನಗೆ ಈ ಚರಿತ್ರೆ ಅಗೆಯುವ ಕೆಲಸವೇ ವ್ಯರ್ಥವೆನಿಸತೊಡಗಿತು.

ತಿರುಗಾಡಿ ಬಳಲಿ ಬಿಸಿಲಿಳಿಯುವ ಹೊತ್ತಿಗೆ ಬುಕ್ಕರಾಯನ ಶಾಸನವಿರುವ ಹೊಲಕ್ಕೆ ಹೋದೆವು. ರಾಗಿ ಫಸಲು ನಳನಳಿಸುತ್ತಿತ್ತು. ಹೊಲದೊಡೆಯ ಶಿವಲಿಂಗಪ್ಪ, ಕುಟುಂಬ ಸಮೇತ ಕಳೆ ಕೀಳುತ್ತಿದ್ದವರು, ನಮ್ಮತ್ತ ಬಂದರು. ಅವರಿಗೆ ತಮ್ಮ ಹೊಲದಲ್ಲಿರುವ ಐತಿಹಾಸಿಕ ಮಹತ್ವದ ಶಾಸನದ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಬದುವಿನ ಮೇಲೆ ಕುಳಿತು ಅವರೊಂದಿಗೆ ಮಾತುಕತೆ ಹೀಗೆ ನಡೆಯಿತು;

`ಅಣ್ಣಾ, ಈಸಲ ಫಸಲು ಚೆನ್ನಾಗಿ ಬಂದಿದೆ~.
`ಏನು ಪ್ರಯೋಜನ ಸಾ? ರಾಗಿ ಮೂಟೆಗೆ 700 ರೂಪಾಯಿ. ಮಂಡೀಲಿ ಒಂದು ಮೂಟೇಲಿ 5 ಕೆಜಿ ಹೊಡದುಬಿಡ್ತಾರೆ~. 

`ಬೇರೆ ಬೆಳೆ ಬೆಳೆದರೆ ಹೇಗೆ?~

`ನೀರು? ನೀರು ಬ್ಯಾಡವರಾ? ಎಲ್ಲಾ ಮಳೆ ಆಶ್ರಯದ ಬೆಳೆ ಇವು~.

`ಹಣ್ಣಿನ ಗಿಡ ಹಾಕಿದರೆ?~

`10 ಕೆಜಿ ಟಮಟ ಹಣ್ಣಿಗೆ ನಮಿಗೆ 50 ರೂಪಾಯಿ. ಬೆಂಗಳೂರಲ್ಲಿ ಮಾರೋನಿಗೆ 150 ರೂಪಾಯಿ. ಅಲ್ನೋಡಿ, ನೂರಾರು ಎಕರೆ ಜಮೀನು ಪಾಳು ಬಿದ್ದದೆ ಉಳೋರಿಲ್ಲದೆ.

ಗೇಯೋಕಾಗದೆ ಇದ್ದೋರು ಮಾವಿನಗಿಡ ಇಟ್ಟವರೆ. ಅವರೂ ಈ ಸಲ ಮುಣಗೋಗಬಿಟ್ಟರಲ್ಲ ಸಾ. ಹೂಜಿ ನೊಣಬಿದ್ದು ಕೆಜಿಗೆ 2 ರೂಪಾಯಿಯಂಗೆ ಹಣ್ಣು ಇಟ್ಟಾಡಿಬಿಟ್ಟವು~. 

`ರೈತರಿಗೆ ಇನ್ನೇನು ಕಷ್ಟವಿದೆ?~ 

`ಆಳಿಂದು. ಆಳ್ ಸಿಕ್ತಾಯಿಲ್ಲ ಸಾ. ಒಂದಾಳ್ ತಂದು ಕೆಲಸ ಮಾಡಿಸಿದರೆ, ಊಟ ತಿಂಡಿ ಬೀಡಿ ಬೆಂಕಿಪಟ್ಟಣದ ಜತಿಗೆ 200 ರೂಪಾಯಿ ಕೊಡಬೇಕು. ನಮ್ಮ ತಲೀಗೆ ವ್ಯವಸಾಯ ಲಾಸ್ಟ್ ಮಾಡ್‌ಬಿಡ್ತೀವಿ ಸಾ. ಏನೂ ವರ್ಕ್‌ಔಟ್ ಆಯ್ತೊ ಇಲ್ಲ~.

`ವ್ಯವಸಾಯದ ಬಗ್ಗೆ ನಿಮ್ಮ ಹೆಣ್ಮಕ್ಕಳ ಅಭಿಪ್ರಾಯ ಏನು?~

`ನಮಗೂ ಗೇದುಗೇದು ಸಾಕಾಗ್ ಬಿಟ್ಟದೆ, ಜಮೀನು ಮಾರಿ ಬ್ಯಾಂಕಲ್ಲಿ ಮಡಗಿ, ಬಡ್ಡಿ ದುಡ್ಡಲ್ಲಿ ಜೀವನ ಮಾಡನ ಅಂತಾರೆ. ಈಗ ಅವರೆಲ್ಲ ಶ್ರೀಶಕ್ತಿ ಸಂಗಕ್ಕೆ ಹೋಯ್ತೊ ಅವರೆ. ಶ್ರೀಶಕ್ತಿಯಿಂದ ಪ್ರಯೋಜನ ಏನದೆ ಹೇಳ್ರಿ? ಅವರೆಲ್ಲ ಶ್ರೀಶಕ್ತಿಗೆ ಹೋಗಿ ನಾವೆಲ್ಲ ನಿಶ್ಶಕ್ತಿ ಆಗಿಹೋಗಿಬಿಟ್ಟಿವಿ. ನಾವು ಅಡಿಗೆ ಮಾಡಿ ಉಣ್ಣೋಕಾಯ್ತದ? ನಾವು ಹೊಲಾ ಉಳೋದೆಲ್ಲಿ? ಅಡಿಗೆ ಮಾಡಿ ಉಣ್ಣೋದೆಲ್ಲಿ? ಈಗ ಗಂಡಸರನ್ನ ಮಾತಾಡಿಸಬಹುದು. ಹೆಂಗಸರನ್ನ ಮಾತಾಡಸ್ಕಾಗಲ್ಲ. ಇವರ ಚಾಪ್ಟರ್ ಇನ್ನೂ ಏನಾಗುತ್ತೆ ನೋಡ್ತಾ ಇರಿ~.

`ಏನಾಗುತ್ತೆ?~

`ಅವರದೇ ಪಟ್ಟಾಭಿಷೇಕ ಆಗಿ ನಾವೆಲ್ಲ ಕಾಲು ಹಿಡ್ಕೋಬೇಕಾಗುತ್ತೆ. ಮೀಟಿಂಗಿಂದ ಬರ್ತಾರಲ್ಲ, ಬಟ್ಟೆ ಹಿಂಡಿದೀಯೇನಪ್ಪ ಅಂತ ಕೇಳ್ತಾರೆ~.

`ಆದರೆ ನಿಮ್ಮ ಮನೆಯವರು ಹೊಲದಲ್ಲಿ ಕೆಲಸ ಮಾಡ್ತಿದಾರಲ್ಲ?~
`ಅವರು ಶ್ರೀಶಕ್ತಿಗೆ ಹೋಗಿಲ್ಲ, ಅದ್ಕೇ ಕಳೆ ಕೀಳ್ತಾ ಅವರೆ. ಎಲ್ಲ ಸಂಗಕ್ಕೆ ಸೇರವರೆ, ನಾವೂ ಸೇರತೀವಿ ಅಂದರು. ನಾವು ಆ ಸಂಗಾನು ಬಂಗಾನೂ ಬ್ಯಾಡ. ನಮಿಗೆ ಅಡಿಗೆ ಮಾಡ್ಹಾಕಿ ಅಂದಿವಿ~.  

`ವ್ಯವಸಾಯದ ಬಗ್ಗೆ ಮಕ್ಕಳೇನು ಹೇಳ್ತಾರೆ?~

`ನಮ್ಮ ಹುಡುಗರಾ? ಆ ಬದೀನಿಂದ ಮ್ಯಾಲಕ್ ಬಂದಿಲ್ಲ, ತಿಳ್ಕಳಿ. ಹತ್ತು ಸಾವ್ರ ಖರ್ಚು ಮಾಡಿದರೆ, ಐದು ಸಾವ್ರ ಆದಾಯ ಬತ್ತದೆ, ಯಾಕ್ ಮಾಡಬೇಕು ಅಂತ ಕೇಳ್ತಾರೆ. ವ್ಯವಸಾಯದಲ್ಲಿ ಶ್ರಮಾ ಆಯ್ತದೆ. ಪ್ರಯೋಜನ ಇಲ್ಲ. ವ್ಯವಸಾಯಾ, ಮನಮಕ್ಕಳೆಲ್ಲ ಸಾಯಾ ಅಂತ. ನೌಕರಿ ಮಾಡೋ ನಿಮಗಿರೋ ಸುಖ ನಮಿಗಿಲ್ಲ ಸಾ~.

`ಬೇಸಾಯದಲ್ಲೇ ಊರ್ಜಿತ ಆಗೋಕೆ ಏನು ಮಾಡಬಹುದು?~

`ಸಾಧ್ಯಾನೇ ಇಲ್ಲ ಸಾ~. 

`ಸರ್ಕಾರದಿಂದ ಬೆಂಬಲ ಬೆಲೆ ಸಿಕ್ಕರೆ?~

`ಸರ್ಕಾರದಿಂದ? ರಾಜ್ಯ ಆಳೋರು ಕೋಟಿಕೋಟಿ ಹೊಡೀತಾ ಅವರೆ. ಎಲ್ಲಾಸಿ ಬಂತು ಸಾ ಅಷ್ಟೊಂದು ದುಡ್ಡು ಅವರಿಗೆ? ನಮ್ಮಂತೆ ಕೂಲಿಕಾರರ ಮಕ್ಕಳು, ಅಷ್ಟೊಂದು ದುಡ್ಡು ಮಾಡಿರಬೇಕಾದರೆ, ದೇಶಾನ ಎಷ್ಟು ಮುಳುಗಿಸಿರಬೌದು? ಅವರೇನು ಗುದ್ಲೀಲಿ ಅಗದಿದ್ರಾ? ಮೈಯಲ್ಲಿ ಬೆವರು ಸುರಿಸಿದ್ರಾ? ಅವರ ಹೆಂಡ್ರೇನು ಹಿಟ್ಟು ಹೊತ್ತಿದ್ರಾ? ಚಿನ್ನದ ಚೇರ್ ಮಾಡಿಸ್ಕೊಂಡವರಲ್ಲ, ಇಂಥವರು ರೈತರ ಉದ್ಧಾರ ಮಾಡ್ತಾರಾ ಸಾ? ದೇಶ ಎಕನಾತಿ ಎದ್ದೋತು~.

ಆಕ್ರೋಶದ ಲಾವಾರಸ ಉಕ್ಕಿ ಹರಿಯತೊಡಗಿತು. ಕಲ್ಯದ ರೈತರು ಮತ್ತು ಮಹಿಳೆಯರು ಬೇರೆಬೇರೆ ಹುಲಿಗಳ ಜತೆ ಕದನ ಹಿಡಿದಂತೆ ತೋರಿತು. ಸರ್ಕಾರ ಮತ್ತು ಮಾರುಕಟ್ಟೆಯ ಹುಲಿನೀತಿಗಳ ಮುಂದೆ ಹುಲ್ಲೆಗಳಂತಾಗಿರುವ ರೈತರು, ತಮ್ಮ ಮನೆಯ ಮಹಿಳೆಯರ ಪಾಲಿಗೆ ಹುಲಿ ರೂಪಧಾರಣೆ ಮಾಡುತ್ತಿದ್ದರು. ಆದರೆ ಈ ಯಾರಿಗೂ ತಮ್ಮೂರ ಐತಿಹಾಸಿಕ ಅವಶೇಷಗಳ ಬಗ್ಗೆ ಅರಿವೂ ಇರಲಿಲ್ಲ, ಆಸಕ್ತಿಯೂ ಇರಲಿಲ್ಲ. ಕಾರಣ, ಅವರ ಸಮಸ್ಯೆ ಗತದ ಚರಿತ್ರೆಯದಾಗಿರಲಿಲ್ಲ, ಸುಡುವ ವರ್ತಮಾನದ್ದಾಗಿತ್ತು. `ಚರಿತ್ರೆ ಅರಿಯಲಾರದವರು ಭವಿಷ್ಯ ನಿರ್ಮಿಸಲಾರರು~ ಎಂಬ ಪ್ರಸಿದ್ಧ ಹೇಳಿಕೆಯಿದೆಯಷ್ಟೆ. ಅದು ಅರ್ಥ ಕಳೆದುಕೊಂಡ ಸವಕಲು ನಾಣ್ಯದಂತೆ ಭಾಸವಾಯಿತು. ವರ್ತಮಾನವು ಪಾಠ ಕಲಿಯಬೇಕಾದ್ದು ಗತದ ಚರಿತ್ರೆಯಿಂದಲೊ, ಚರಿತ್ರೆ ರೂಪಾಂತರಗೊಂಡು ಸಂಭವಿಸಿ ಎದುರು ನಿಂತಿರುವ ನಿಕ್ಕಿ ವರ್ತಮಾನದಿಂದಲೊ? ಇಂತಹ ಪರಿವರ್ತನಶೀಲ ವರ್ತಮಾನವನ್ನು ಮುಖಾಮುಖಿ ಮಾಡಲು ಬೇಕಾದ ದೃಷ್ಟಿಕೋನ, ದಿಟ್ಟತನ, ವಿಷನ್, ಕ್ರಿಯಾಶೀಲತೆ ಇಲ್ಲದ ಕಾರಣಕ್ಕಾಗಿಯೇ, ನಾವು ಮತ್ತೆಮತ್ತೆ ಗತದ ಮುಸುಕಿನಲ್ಲಿ ಮುಖ ಮುಖಮರೆಸಿಕೊಳ್ಳಲು ಹೋಗುತ್ತಿದ್ದೇವೆಯೋ ಏನೋ? ಗತವನ್ನು ಅಗೆಯುವ ವ್ಯಸನದ ನಿರರ್ಥಕತೆಯನ್ನು ಬಸ್ರೂರಿನಲ್ಲಿ ನನಗೆ ಒಬ್ಬ ಬೆಸ್ತೆ ತೋರಿಸಿಕೊಟ್ಟಿದ್ದಳು. ಇಲ್ಲೊಬ್ಬ ರೈತ ತೋರಿಸಿಕೊಟ್ಟನು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT