ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಂಕವೇನೋ ಹೋಯಿತು, ಆದರೆ ಆಟವೇ ಉಳಿದಿಲ್ಲ

Last Updated 11 ನವೆಂಬರ್ 2012, 19:30 IST
ಅಕ್ಷರ ಗಾತ್ರ

“ಈ ಗೆಲುವೊಂದೇ ನಾವು ಬಯಸುತ್ತಿರುವ ಬದಲಾವಣೆಯಲ್ಲ, ಆ ಬದಲಾವಣೆ ತರಲು ನಮಗೆ ದೊರಕಿರುವ ಒಂದು ಅವಕಾಶವಷ್ಟೇ”-ಹೀಗೆ ಹೇಳಿದವರು ಮಹಮ್ಮದ್ ಅಜರುದ್ದೀನ್. ಅವರ ಕ್ರಿಕೆಟ್ ಜೀವನ ಕಳಂಕದ ಲೇಪನದೊಂದಿಗೆ ಮುಗಿದಾಗ, ಕ್ರಿಕೆಟ್‌ನ ಇನ್ನೊಂದು ಮುಖವಾದ ರಾಜಕೀಯ ರಂಗ ಸೇರಿದರು.
 
2009ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಗಿ, ಉತ್ತರಪ್ರದೇಶದ ಮೊರಾದಾಬಾದ್‌ನಿಂದ ಸ್ಪರ್ಧಿಸಿ ಸಂಸದನಾಗಿ ಗೆದ್ದಾಗ `ಬದಲಾವಣೆ~ಯ ಮಾತು ಹೇಳಿದರು. ಕ್ರಿಕೆಟ್‌ನಲ್ಲಿ ಕಳೆದುಹೋದ ಮಾನ ಅವರಿಗೆ ರಾಜಕೀಯದಲ್ಲಿ ಸಿಕ್ಕಿದೆಯೆಂದೇನೂ ಅನಿಸುವುದಿಲ್ಲ. ಆದರೆ ಅವರ ಮುಖಕ್ಕೆ ಬಳಿದಿದ್ದ ಮೋಸದಾಟದ ಕಪ್ಪು ಮಸಿಯನ್ನು ಆಂಧ್ರಪ್ರದೇಶ ಹೈಕೋರ್ಟ್ ಅಳಿಸಿಹಾಕಿದೆ. ಅಂದರೆ ಅವರೀಗ ದೋಷಮುಕ್ತರಾಗಿದ್ದಾರೆ.

ಎಷ್ಟು ಬೇಗ 12 ವರ್ಷಗಳು ಕಳೆದುಹೋದವು. ಕ್ರಿಕೆಟ್ ರಂಗದಲ್ಲಿ ಬಿರುಗಾಳಿಯೆಬ್ಬಿಸಿದ್ದ ಮೋಸದಾಟದ ಹಗರಣದಲ್ಲಿ ಸಿಕ್ಕಿಬಿದ್ದವರು ಹಲವರು. ತೊಂಬತ್ತರ ದಶಕದ ಕೊನೆಯಲ್ಲಿ ಕಾಣಿಸಿಕೊಂಡ ಈ ಪಿಡುಗಿಗೆ ಬಲಿಬಿದ್ದ ಆಟಗಾರರು ಸಾಕಷ್ಟಿದ್ದರು. ಅದರ ಲಾಭ ಇಡೀ ಕ್ರಿಕೆಟ್ ರಂಗಕ್ಕೆ ಬೇರೆ ಬೇರೆ ರೂಪದಲ್ಲಿ ಆಗಿದ್ದು ನಿಜ.
 
ದಕ್ಷಿಣ ಆಫ್ರಿಕದ ಹ್ಯಾನ್ಸಿ ಕ್ರೋನಿಯೆ ತಮ್ಮ ತಪ್ಪನ್ನು ಒಪ್ಪಿಕೊಂಡರಾದರೂ ಶಿಕ್ಷೆ ಅನುಭವಿಸುವ ಮೊದಲೇ ವಿಮಾನ ಅಪಘಾತದಲ್ಲಿ ಸತ್ತುಹೋದರು. ಆದರೆ ಅದಕ್ಕೆ ಮೊದಲು ಅವರು ಅಜರುದ್ದೀನ್ ಹಾಗೂ ಭಾರತ ಇತರ ಕೆಲವು ಆಟಗಾರರ ಹೆಸರನ್ನು ಬಹಿರಂಗಗೊಳಿಸಿದ್ದರು. ತನಿಖೆಯಿಂದ ಅಜರ್ ತಪ್ಪಿಸಿಕೊಳ್ಳಲಾಗಲಿಲ್ಲ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಇವರ ಜೊತೆ ಅಜಯ್ ಶರ್ಮ ಎಂಬ ಆಟಗಾರನನ್ನೂ ಆಜೀವಪರ್ಯಂತ ಕ್ರಿಕೆಟ್ ಆಡದಂತೆ ನಿಷೇಧಿಸಿತು. ಮನೋಜ್ ಪ್ರಭಾಕರ್ ಮತ್ತು ಅಜಯ್ ಜಡೇಜ ಐದು ವರ್ಷಗಳ ಕಾಲ ನಿಷೇಧಕ್ಕೊಳಗಾದರು. ಮನೋಜ್ ಪ್ರಭಾಕರ್ ಇದರಲ್ಲಿ ಕಪಿಲ್ ದೇವ್ ಅವರ ಹೆಸರನ್ನೂ ಎಳೆದುತಂದಿದ್ದರು.

ಕಪಿಲ್ ಕಣ್ಣೀರು ಹಾಕಿದರು. ಕ್ರಿಕೆಟ್ ಜಗತ್ತು ಅಳುವ ಗಂಡಸನ್ನು ನಂಬಿತ್ತು. 
ಇವರೆಲ್ಲರೂ ತಮ್ಮ ಕ್ರಿಕೆಟ್ ಜೀವನದ ಸಂಜೆಯಲ್ಲಿದ್ದಾಗ ಈ ಶಿಕ್ಷೆ ಬಂತು. ನಿಷೇಧ ಬಿಟ್ಟರೆ ಬೇರೆ ಯಾವ ಶಿಕ್ಷೆಯೂ ಆಗಲಿಲ್ಲ. ಅವರು ತಿಂದಿರಬಹುದಾದ ಹಣವನ್ನೇನೂ ಮುಟ್ಟುಗೋಲು ಹಾಕಿಕೊಳ್ಳಲಿಲ್ಲ. ಭ್ರಷ್ಟ ರಾಜಕಾರಣಿಗಳಂತೆ ಇವರೂ ಆರಾಮವಾಗಿಯೇ ಇದ್ದಾರೆ.
 
ಹಣ ಇದ್ದರೆ ಎಲ್ಲ ಮರ್ಯಾದೆಯೂ ಇರುತ್ತದೆ ಎಂದು ರಾಜಕಾರಣಿಗಳು ನಂಬಿರುವಂತೆ ಕ್ರಿಕೆಟ್ ಆಟಗಾರರೂ ನಂಬಿದ್ದಾರೆ. ಮಂಡಳಿಯ ಕ್ರಮವನ್ನು ಅಜರುದ್ದೀನ್ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಆದರೆ ಅಲ್ಲಿ ಮಂಡಳಿಯ ನಿರ್ಧಾರವನ್ನು ಎತ್ತಿಹಿಡಿಯಲಾಯಿತು. ಅಜರ್ ಹೈಕೋರ್ಟ್‌ಗೆ ಹೋದರು. ನ್ಯಾಯಾಲಯದಲ್ಲಿ ನಡೆದ ಸುದೀರ್ಘ ಇನಿಂಗ್ಸ್‌ಗೆ ಈಗ ತೆರೆಬಿದ್ದಿದೆ. ಮಂಡಳಿ ಹೇರಿದ್ದ ನಿಷೇಧವನ್ನು ಹೈಕೋರ್ಟ್ ತೆರವುಗೊಳಿಸಿದೆ.

ಆದರೆ ಅಜರುದ್ದೀನ್ ಮತ್ತೆ ಬ್ಯಾಟ್ ಹಿಡಿಯುವ ಸ್ಥಿತಿಯಲ್ಲಿಲ್ಲ. ಬರುವ 2013ನೇ ಫೆಬ್ರುವರಿ 8 ರಂದು ಅವರು ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಮೈದಾನಕ್ಕಿಳಿಯುವ ವಯಸ್ಸಲ್ಲ ಇದು. ಕ್ರಿಕೆಟ್‌ನ ಬೇರೆ ಬೇರೆ ಬಾಗಿಲುಗಳು ಅವರಿಗೆ ತೆರೆದುಕೊಂಡರೂ, `ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದಂತೆ~ ಮೋಸದಾಟದ ಕಪ್ಪು ಮಸಿ ಎಲ್ಲೋ ಒಂದು ಕಡೆ ಇದ್ದೇ ಇರುತ್ತದೆ.

ಕಾನೂನಿನ ಪ್ರಕಾರ ಅವರೀಗ ನಿರಪರಾಧಿ ಎಂಬುದರಲ್ಲಿ ಎರಡು ಮಾತಿಲ್ಲ. ಕಾನೂನು ಸಾಕ್ಷಿಯನ್ನು ಕೇಳುತ್ತದೆ. ಈ ವ್ಯವಸ್ಥೆಯಲ್ಲಿ ಅಪರಾಧಿಗಳು ಪಾರಾಗಿ ಹೋಗಲು ಅವಕಾಶಗಳಿವೆ. ಆದರೆ ನ್ಯಾಯಾಲಯದ ತೀರ್ಪನ್ನು ಗೌರವಿಸಲೇಬೇಕಾಗುವುದರಿಂದ ಎಲ್ಲರೂ ಅಜರುದ್ದೀನ್ ಮೋಸದಾಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.

ರಾಜಕಾರಣಿಗಳು ಅಕ್ರಮವಾಗಿ ಸಂಪಾದಿಸುವ ಸಂಪತ್ತನ್ನು ಯಾರೂ ಹೇಗೆ ಅಳೆಯುವುದಿಲ್ಲವೋ ಹಾಗೆಯೇ ಕ್ರಿಕೆಟಿಗರ ಸಂಪತ್ತನ್ನೂ ಯಾರೂ ಲೆಕ್ಕಹಾಕಲು ಹೋಗುವುದಿಲ್ಲ.

`ನ್ಯಾಯಾಲಯದಲ್ಲಿ ಗೆದ್ದವ ಸೋತ, ಸೋತವ ಸತ್ತ~ ಎಂಬ ಮಾತಿದೆ. ಯಾರಿಗೇ ಆಗಲೀ ಜೈಲು ಶಿಕ್ಷೆಯೊಂದೇ ಶಿಕ್ಷೆಯಾಗುವುದಿಲ್ಲ. ಅಜರುದ್ದೀನ್ ಅನುಭವಿಸಬೇಕಾದ ಶಿಕ್ಷೆ ಅನುಭವಿಸಿಯಾಗಿದೆ. ಅವರು ನಿಷೇಧಕ್ಕೊಳಗಾಗದೇ ಇದ್ದಿದ್ದರೆ ಇನ್ನೂ ಒಂದೆರಡು ವರ್ಷ ಕ್ರಿಕೆಟ್ ಆಡುತ್ತಿದ್ದರು. ಅವರು ತಮ್ಮ ನೂರನೇ ಟೆಸ್ಟ್ ಆಡಿರುತ್ತಿದ್ದರು. ನಿಷೇಧದಿಂದಾಗಿ ಅವರ ಟೆಸ್ಟ್ ಜೀವನ 99 ಪಂದ್ಯಗಳಿಗೆ ಕೊನೆಗೊಂಡಿತು.

ಭಾರತದ ಯಶಸ್ವಿ ಕ್ರಿಕೆಟ್ ನಾಯಕ ಎಂದು ಹೆಸರು ಮಾಡಿದ್ದ ಅವರು ಕ್ರಿಕೆಟ್ ಪುಸ್ತಕದಲ್ಲಿ ಇನ್ನೂ ಕೆಲವು ದಾಖಲೆಗಳನ್ನು ಬರೆಯುತ್ತಿದ್ದರು. ಜೀವನದಲ್ಲಿ ಹಣದ ಬಲದಿಂದ ಏನೂ ಬೇಕಾದರೂ ಕೊಂಡುಕೊಳ್ಳಬಹುದಾದರೂ ನೆಮ್ಮದಿಯನ್ನು ಖರೀದಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆ ಅವರು ತಮ್ಮ ಕಳೆದುಹೋದ ಕನಸುಗಳನ್ನು ಮರಳಿ ಕಾಣಲಾಗುವುದಿಲ್ಲ. ಅವು ನನಸೂ ಆಗುವುದಿಲ್ಲ.

ಜೀವನದ ಸುಂದರ ವಸ್ತುಗಳೆಲ್ಲ ಅವರ ಮನಸ್ಸಿಗೆ ತಕ್ಕ ಹಾಗೆ ಸಿಕ್ಕಿವೆ. ಆದರೆ ನೋವೂ ಅವರನ್ನು ಕಾಡಿದೆ. ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಅವರ ಪುತ್ರ ಅಯಾಜುದ್ದೀನ್ ಸಾವನ್ನಪ್ಪಿದ್ದರು. ಆ ಶೋಕ ನಿರಂತರ. ಹಾಗೆಯೇ ದೇಹಕ್ಕೆ ಅಂಟಿದ ಹೊಲಸನ್ನು ತೊಳೆಯಬಹು ದಾದರೂ ಮನಸ್ಸನ್ನು ಚುಚ್ಚಿದ ಗಾಯ ಮಾಯುವುದಿಲ್ಲ. 

ನ್ಯಾಯಾಲಯದಲ್ಲಿ ಅವರು ನಡೆಸಿದ ಹೋರಾಟಕ್ಕೆ ಸಿಕ್ಕ ಗೆಲುವು ಅವರು ಬಯಸಿದ `ಬದಲಾವಣೆ~. ಆದರೆ ಅದು ಅವರ ಕ್ರಿಕೆಟ್ ಜೀವನದಲ್ಲಿ ಹೊಸತನ್ನು ತರುವ ಬದಲಾವಣೆಯಂತೂ ಖಂಡಿತ ಅಲ್ಲ. ಕ್ರಿಕೆಟ್ ಇತಿಹಾಸದಲ್ಲಿ ಇವರ ಹೆಸರು ಬಂದಾಗಲೆಲ್ಲ ಮೋಸದಾಟದ ಅಧ್ಯಾಯವೂ  ತೆರೆದುಕೊಳ್ಳುತ್ತದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ  ಹೈಕೋರ್ಟ್ ತೀರ್ಪಿನ ವಿರುದ್ಧ ಇನ್ನೂ ಏನೂ ಹೇಳಿಲ್ಲ. ಮಂಡಳಿ ವಿರುದ್ಧ ಯಾವುದೇ ರೀತಿಯ ಸೇಡು ತೀರಿಸಿಕೊಳ್ಳುವ ಯೋಚನೆ ಮಾಡುವುದಿಲ್ಲ ಎಂದು ಅಜರ್ ಹೇಳಿದ್ದಾರೆ. ಕ್ರಿಕೆಟ್ ಬೆಳವಣಿಗಾಗಿ ಮಂಡಳಿ ಜೊತೆ `ಕೈ~ಜೋಡಿಸುವುದಾಗಿಯೂ ಹೇಳಿದ್ದಾರೆ. ಅವರಿಗೆ ಮಂಡಳಿಯ ಅಧಿಕಾರದಲ್ಲಿ ಪಾಲು ಪಡೆಯುವ ಮನಸ್ಸಿರಬಹುದು.

ಜೊತೆಗೆ ತಮಗೆ ನಿರಾಕರಿಸಲಾಗಿರುವ ಮಂಡಳಿಯ ಸೌಲಭ್ಯಗಳು ಹಾಗೂ ಆರ್ಥಿಕ ನೆರವನ್ನು ವಸೂಲು ಮಾಡುವ ಯೋಚನೆಯೂ ಇರಬಹುದು. ಆದರೆ ಪಕ್ಕಾ ರಾಜಕಾರಣಿಗಳನ್ನೇ ಮೀರಿಸುವ ಪ್ರಚಂಡರು ಕ್ರಿಕೆಟ್ ಮಂಡಳಿಯಲ್ಲಿ ಇರುವುದರಿಂದ ಅವರೊಡನೆ ಗುದ್ದಾಡುವ ತಾಕತ್ತು, ಚಾಣಾಕ್ಷತನ ಇವರಲ್ಲಿದೆಯೇ ಎಂಬುದು ಗೊತ್ತಿಲ್ಲ. ರಾಜಕಾರಣಿಯಾಗಿ, ಸಂಸದನಾಗಿ ಅವರು ಏನು ಕಲಿತಿದ್ದಾರೆ ಎಂಬುದೂ ಗೊತ್ತಿಲ್ಲ.

ಅಜರುದ್ದೀನ್ ಕ್ರಿಕೆಟ್‌ನಲ್ಲಿ ಕಳೆದುಕೊಂಡಿದ್ದನ್ನು ರಾಜಕೀಯವಾಗಿ ಗಳಿಸಿದ್ದಾರೆಯೇ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಸಿಗುವುದಿಲ್ಲ. ಅವರು ಹೈದರಾಬಾದ್‌ನವರಾದರೂ ಉತ್ತರ ಪ್ರದೇಶದ ಮೊರಾದಾಬಾದ್‌ಗೆ ಹೋಗಿ ಸ್ಪರ್ಧಿಸಿದರು. ಜನರು ಇವರ ಕ್ರಿಕೆಟ್ ಖ್ಯಾತಿಯನ್ನು ನೋಡಿದರೇ ಹೊರತು ಅದರ ಮತ್ತೊಂದು ಮುಖವನ್ನು ನೋಡಲಿಲ್ಲ.

ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಅಲ್ಲಿಯ ಮತಬ್ಯಾಂಕ್ ಕೂಡ ವರದಾನವಾಯಿತು ಎಂದು ಜನ ಹೇಳುತ್ತಾರೆ. ಆ ಗೆಲುವು ಅಜರುದ್ದೀನ್ ಅವರಿಗೆ ವೈಯಕ್ತಿಕವಾಗಿ ಸಂತೋಷ ಮೂಡಿಸಿತೇ ಹೊರತು, ಪಕ್ಷದ ದೃಷ್ಟಿಯಿಂದಾಗಲೀ ಜನರ ದೃಷ್ಟಿಯಿಂದಾಗಲೀ ಯಾವುದೇ ರೀತಿಯ ಬದಲಾವಣೆ  ತರಲಿಲ್ಲ. ಆದರೆ ಗೆದ್ದ ನಂತರ ಅವರು ಮೊರಾದಾಬಾದ್‌ಗೆ ಎಷ್ಟು ಸಲ ಹೋಗಿದ್ದಾರೆ, ಅಲ್ಲಿಯ ಜನರ ಜೊತೆ ಎಷ್ಟು ಸಲ ವ್ಯವಹರಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕಿದೆ.

ಮೊರಾದಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬರುವ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮಣ್ಣುಮುಕ್ಕಿದೆ. ಮುಂದಿನ ಚುನಾವಣೆಯಲ್ಲಿ ಅಜರುದ್ದೀನ್ ಮೊರಾದಾಬಾದ್ ಬದಲು ಹೈದರಾಬಾದ್‌ನಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಈಗ ಬಂದಿರುವ ಹೈಕೋರ್ಟ್ ತೀರ್ಪು ಅವರಿಗೆ ಅನುಕೂಲಕರವಾಗಬಹುದು. `ನಮ್ಮ ಅಜ್ಜುಭಾಯಿ ಪಾಪ, ಮೋಸದಾಟದಲ್ಲಿ ಹಣ ತಿಂದಿಲ್ಲ~ ಎಂದು ಮತದಾರರು ಮರುಕ ತೋರಬಹುದು. ಜನರ ಕ್ರಿಕೆಟ್ ಮತ್ತು ರಾಜಕೀಯ ಪ್ರೇಮ ಒಂದೇ ನಾಣ್ಯದ ಎರಡು ಮುಖಗಳಂತೆಯೇ ಇವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT