ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಸಾಧನೆ; ವಿಶ್ವಬ್ಯಾಂಕ್‌ನ ಎಚ್ಚರಿಕೆ ಕರೆಗಂಟೆ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ವಿಶ್ವಬ್ಯಾಂಕ್‌ನ 2013ನೆ ಸಾಲಿನ ವರದಿ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದು, ಅದರಲ್ಲಿ ಭಾರತದ ಮಟ್ಟಿಗೆ ಚಕಿತಗೊಳಿಸುವಂತಹ ವಿವರಗಳೇನೂ ಇಲ್ಲ. ಉದ್ದಿಮೆಗಳಿಗೆ ಪೂರಕವಾದ ಉತ್ತೇಜನ ನೀಡುವಂತಹ ವಾತಾವರಣ, ಮೂಲ ಸೌಲಭ್ಯ ನೀಡುವ ಹಲವು ಮಾನದಂಡಗಳ ಅನ್ವಯ ಭಾರತ ವಿಶ್ವದಲ್ಲಿ 132ನೆ ಸ್ಥಾನದಲ್ಲಿ ಇದೆ. 

ನೆರೆಹೊರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳಲ್ಲದೇ, ಆಫ್ರಿಕಾದ ದೇಶಗಳಾದ ನೈಜಿರಿಯಾ ಮತ್ತು ಕೀನ್ಯಾಗಳಿಗಿಂತ ಭಾರತದ ಸ್ಥಾನಮಾನ ಕೆಳಮಟ್ಟದಲ್ಲಿ ಇದೆ. 2012ರ ಜೂನ್ ತಿಂಗಳಲ್ಲಿ ಇದ್ದ ಪರಿಸ್ಥಿತಿ ಆಧರಿಸಿ ಈ ಸ್ಥಾನಮಾನದ ದರ್ಜೆ ನಿಗದಿಪಡಿಸಲಾಗಿದೆ.

ಉದ್ದಿಮೆ ವಹಿವಾಟಿಗೆ ಪೂರಕವಾದ ಪರಿಸರ ಕಲ್ಪಿಸುವ  ವಿಷಯದಲ್ಲಿ ಭಾರತದ ಸಾಧನೆ ಕಳಪೆ ಮಟ್ಟದಲ್ಲಿಯೇ ಇರುವುದು ಈ ವರದಿಯಿಂದ ಇನ್ನೊಮ್ಮೆ  ಸಾಬೀತಾಗಿದೆ. ಹೋದ ವರ್ಷದ ಸ್ಥಾನಮಾನದಲ್ಲಿಯೂ ಯಾವುದೇ ಬದಲಾವಣೆ ಆಗಿಲ್ಲ. ಉದ್ದಿಮೆಗಳಿಗೆ ಪೂರಕ ಪರಿಸರ ಕಲ್ಪಿಸುವ ವಿಷಯದಲ್ಲಿ ದೇಶದ ಸ್ಥಾನಮಾನ ಈಗಲೂ ಅಸ್ಪಷ್ಟವಾಗಿಯೇ ಇದೆ. ಭಾರತೀಯರ ಪಾಲಿಗೆ ಇದೇನು ಆಶ್ಚರ್ಯ ಉಂಟು ಮಾಡುವ ಸಂಗತಿ ಏನೂ ಅಲ್ಲ. 

ಎಲ್ಲರಿಗೂ ಗೊತ್ತಿರುವ ಸಂಗತಿಯೇ ಇದಾಗಿದೆ.  ಹಲವು ಅನಿವಾರ್ಯತೆಗಳು ಮತ್ತು ಅಧಿಕಾರಶಾಹಿ ಸೃಷ್ಟಿಸಿರುವ ಗೊಂದಲಗಳ ಗೂಡಿನಲ್ಲಿ ಸಿಲುಕಿರುವ ಉದ್ದಿಮೆ ವಹಿವಾಟಿನ ಬಲ ಸಹಜವಾಗಿಯೇ ದುರ್ಬಲಗೊಂಡಿದೆ.
ವಿಶ್ವಬ್ಯಾಂಕ್ ನಡೆಸುವ ಈ ಅಧ್ಯಯನವು ಹಲವಾರು ಮಾನದಂಡಗಳನ್ನು ಆಧರಿಸಿರುತ್ತದೆ. ಜಾಗತಿಕ ಮಟ್ಟದಲ್ಲಿ ನೀಡುವ ಈ ಸ್ಥಾನಮಾನ ಮತ್ತು ಅದಕ್ಕೆ ಆಧಾರವಾಗಿಟ್ಟುಕೊಂಡ ಹಲವು ಮಾನದಂಡಗಳು ದೇಶಿ ಉದ್ದಿಮೆ ವಹಿವಾಟಿನ ಮೇಲೆ ಪರಿಣಾಮ ಬೀರುತ್ತವೆ.

ಉದ್ದಿಮೆ ವಹಿವಾಟು ನಡೆಸಲು ಪೂರಕವಾದ ವಾತಾವರಣ ಒದಗಿಸುವ ಬಗೆಗಿನ ಚರ್ಚೆಗಳಲ್ಲಿ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ವಿಶ್ವಬ್ಯಾಂಕ್‌ನ ಈ ಅಧ್ಯಯನ ವರದಿಯನ್ನೇ ಪ್ರಮುಖವಾಗಿ ಪರಿಗಣಿಸಲಾಗುತ್ತದೆ.

ನಿರ್ದಿಷ್ಟ ದೇಶವೊಂದರ  ಸ್ಥಾನಮಾನ ನಿಗದಿ ಮಾಡುವ ಮುನ್ನ ವಿಶ್ವಬ್ಯಾಂಕ್, ಪ್ರಾದೇಶಿಕ ನೆಲೆಯಲ್ಲಿ ವಿವರವಾದ ಸಂಶೋಧನೆ ನಡೆಸುತ್ತದೆ. ವಿಶ್ವಬ್ಯಾಂಕ್ ಭಾರತದಲ್ಲಿನ ಹಲವಾರು ರಾಜ್ಯಗಳ ರಾಜಧಾನಿಯಲ್ಲಿನ ಉದ್ಯಮ ಸ್ನೇಹಿ ಪರಿಸರ ಆಧರಿಸಿದ ಮಾನದಂಡಗಳ ಅನ್ವಯ ಆಯಾ ರಾಜ್ಯಗಳಿಗೆ ಸ್ಥಾನಮಾನ ನಿಗದಿಪಡಿಸುತ್ತದೆ. ರಾಜ್ಯಗಳ ಬಗ್ಗೆ 2009ರಲ್ಲಿ ಇಂತಹ ಅಧ್ಯಯನವನ್ನು ವಿಶ್ವಬ್ಯಾಂಕ್ ಕೈಗೊಂಡಿತ್ತು. ಬಹುಶಃ ಅದೇ ವರದಿ ಈಗಲೂ ಪ್ರಸ್ತುತವಾಗಿರುವ ಸಾಧ್ಯತೆಗಳಿವೆ.

ಸ್ಥಾನಮಾನ ನಿಗದಿಗೆ ಬಳಸುವ ವಿವಿಧ ಮಾನದಂಡಗಳು
185 ದೇಶಗಳ ಪೈಕಿ ಭಾರತದ ಜಾಗತಿಕ ಸ್ಥಾನಮಾನ
1. ವಹಿವಾಟು ಆರಂಭ 173
2. ಕಟ್ಟಡ ನಿರ್ಮಾಣ ಅನುಮತಿ 182
3. ವಿದ್ಯುತ್ ಪಡೆಯುವಿಕೆ 105
4. ಆಸ್ತಿ ನೋಂದಣಿ 94
5. ಸಾಲ ಪಡೆಯುವುದು 23
6. ಹೂಡಿಕೆದಾರರ ರಕ್ಷಣೆ 49
7. ತೆರಿಗೆ ಪಾವತಿ 152
8. ಗಡಿಯಾಚೆಗಿನ ವ್ಯಾಪಾರ 127
9. ಗುತ್ತಿಗೆಗಳನ್ನು ಜಾರಿಗೊಳಿಸುವುದು 184

2013ನೆ ವರ್ಷಕ್ಕೆ ಒಟ್ಟಾರೆ ಶ್ರೇಣಿಯಲ್ಲಿ (ರ‌್ಯಾಂಕ್ ಪಟ್ಟಿಯಲ್ಲಿ) 132ನೆ ಸ್ಥಾನ
2012ನೆ ವರ್ಷದ ಸ್ಥಾನಮಾನವೂ 132 ಆಗಿತ್ತು. 2013ರಲ್ಲಿಯೂ ಅದೇ ಸ್ಥಾನಮಾನ ಉಳಿಸಿಕೊಂಡಿರುವುದರಿಂದ ಶ್ರೇಣಿಯಲ್ಲಿ ಯಾವುದೇ ಸುಧಾರಣೆ ಆಗಿಲ್ಲದಿರುವುದು ವೇದ್ಯವಾಗುತ್ತದೆ.

ಈ ಮೇಲಿನ ಸ್ಥಾನಮಾನಗಳನ್ನು ವಿಶ್ಲೇಷಿಸಲು ವಿಶೇಷ ಜ್ಞಾನದ ಅಗತ್ಯವೇನೂ ಇಲ್ಲ. ಕೇವಲ ಎರಡೇ ಎರಡು ಮಾನದಂಡಗಳು ಮಾತ್ರ ಭಾರತಕ್ಕೆ ಕೆಲಮಟ್ಟಿಗೆ ಗೌರವ ತಂದುಕೊಟ್ಟಿವೆ. ಸಾಲ ಸೌಲಭ್ಯ ಲಭ್ಯತೆ ಮತ್ತು ಹೂಡಿಕೆದಾರರ ರಕ್ಷಣೆ ವಿಷಯದಲ್ಲಿ ವೃತ್ತಿನಿರತ ನಿರ್ವಾಹಕರು ಅಧಿಕಾರಶಾಹಿಯ ಮಧ್ಯಪ್ರವೇಶ ಇಲ್ಲದೇ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿ ಈ ಎರಡೂ ಮಾನದಂಡಗಳು ಭಾರತದ ಸ್ಥಾನಮಾನ ಇನ್ನಷ್ಟು ಕೆಳ ಹಂತಕ್ಕೆ ಹೋಗುವುದನ್ನು ತಡೆದಿವೆ.

ಉದ್ದಿಮೆ ಸ್ಥಾಪನೆಗೆ ಪೂರಕವಾದ ಪರಿಸರ ಕಲ್ಪಿಸುವಲ್ಲಿನ ವಿವಿಧ ಮಾನದಂಡಗಳನ್ನು ಆಧರಿಸಿದ ಸ್ಥಾನಮಾನದ ವಿವರಗಳೆಲ್ಲ ಅಂತರಜಾಲದಲ್ಲಿ ನೋಡಲು ದೊರೆಯುತ್ತವೆ. ಆಫ್ರಿಕಾದ ದೇಶಗಳನ್ನು ಹೊರತುಪಡಿಸಿ, ವಿಶ್ವದಲ್ಲಿನ ಇತರ ಬಹುತೇಕ ದೇಶಗಳು  ಈ ಸ್ಥಾನಮಾನ ವಿಷಯದಲ್ಲಿ ಭಾರತಕ್ಕಿಂತ ಉತ್ತಮ ಶ್ರೇಣಿಯಲ್ಲಿ (ರ‌್ಯಾಂಕಿಂಗ್ ಹೊಂದಿರುವುದು) ಇರುವುದು ನಮ್ಮ ಪಾಲಿಗೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ.

ಉದ್ದಿಮೆ ವಹಿವಾಟು ಹೆಚ್ಚಳಕ್ಕೆ ಪೂರಕವಾದ ಪರಿಸರ ಕಲ್ಪಿಸಲು ಮತ್ತು ಅಗತ್ಯವಾದ ಸುಧಾರಣೆಗಳನ್ನು ಜಾರಿಗೆ ತರುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಆಲೋಚನೆ ಮಾಡುತ್ತಿರುವ ಸಾಧ್ಯತೆಗಳು  ಕಡಿಮೆ ಇವೆ ಎಂದೇ ನನಗೆ ಈ ಸಂದರ್ಭದಲ್ಲಿ ಭಾಸವಾಗುತ್ತದೆ. ಭಾರತದ ಸ್ಥಾನಮಾನ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಸಾಗಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಗಂಭೀರ ಪ್ರಯತ್ನವೇ ನಮ್ಮಲ್ಲಿ ಕಂಡುಬರುತ್ತಿಲ್ಲ.

ಇದಕ್ಕೆ ಬದಲಾಗಿ ಸರ್ಕಾರದ ಉನ್ನತ ಮಟ್ಟದಲ್ಲಿನ ಅನೇಕ ಹಿರಿಯ ಅಧಿಕಾರಿಗಳು ಸ್ಥಾನಮಾನ ನಿಗದಿಪಡಿಸಲು ವಿಶ್ವಬ್ಯಾಂಕ್ ಅನುಸರಿಸುವ ವಿಧಿ - ವಿಧಾನಗಳಲ್ಲಿಯೇ ತಪ್ಪು ಹುಡುಕಿ, ರ‌್ಯಾಂಕಿಂಗ್ ತಿರಸ್ಕರಿಸುತ್ತಾರೆ.
ವಿಶ್ವಬ್ಯಾಂಕ್‌ನಲ್ಲಿ ತರಬೇತಿ ಪಡೆದ ಅನೇಕ ಆರ್ಥಿಕ ತಜ್ಞರೇ ಹಣಕಾಸು ಸಚಿವಾಲಯದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇಂತಹ ಆರ್ಥಿಕ ಪರಿಣತರೇ, ವಿಶ್ವಬ್ಯಾಂಕ್‌ನ ಅಧ್ಯಯನ ವರದಿಯಲ್ಲಿ ಇರುವ ಸ್ಪಷ್ಟ ಸಂದೇಶವನ್ನೇ  ತಿರಸ್ಕರಿಸುವ ಧೋರಣೆ ಅಳವಡಿಸಿಕೊಂಡಿರುವುದು ನಿಜಕ್ಕೂ ಶೋಚನೀಯ ಸಂಗತಿ.

ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್‌ಸಿಂಗ್ ಅಹ್ಲುವಾಲಿಯಾ,  ಹಣಕಾಸು ಇಲಾಖೆಯ ಸಲಹೆಗಾರ ರಘುರಾಂ ರಾಜನ್ ಅವರು ವಿಶ್ವಬ್ಯಾಂಕ್‌ನಲ್ಲಿ ಕೆಲಸ ಮಾಡಿದ ಅಪಾರ ಅನುಭವ ಹೊಂದಿದ್ದಾರೆ. ಸರ್ಕಾರದ ಅನೇಕ ಆರ್ಥಿಕ, ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದ ಹೆಗ್ಗಳಿಕೆಯೂ ಈ ಆರ್ಥಿಕ ತಜ್ಞರಿಗೆ ಸಲ್ಲುತ್ತದೆ. ಹಣಕಾಸು ಇಲಾಖೆಯ ಆರ್ಥಿಕ ಸಲಹೆಗಾರರಾಗಿದ್ದ ಕೌಶಿಕ್ ಬಸು ಅವರು ಕೂಡ ವಿಶ್ವಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸಿದ್ದರು.

ವಸ್ತುಸ್ಥಿತಿ ಹೀಗಿದ್ದರೂ, ವಿಶ್ವಬ್ಯಾಂಕ್ ಪ್ರಕಟಿಸಿದ ರ‌್ಯಾಂಕಿಂಗ್ ಸ್ವೀಕರಿಸಲು ಹಿಂದೇಟು ಹಾಕುವ ಅಧಿಕಾರಿಗಳ ಮನಸ್ಥಿತಿ ವಿಶ್ಲೇಷಣೆಗೆ ನಿಲುಕದು.

ವಿಶ್ವಬ್ಯಾಂಕ್‌ನ ಹಲವು ಸಂಪುಟಗಳಲ್ಲಿ ಇರುವ ಈ ಅಧ್ಯಯನ ವರದಿ ನೋಡಿದರೆ, ಬ್ಯಾಂಕ್ ಕಲೆ ಹಾಕಿರುವ ಅಗಾಧ ಪ್ರಮಾಣದ ಮಾಹಿತಿಯು ಅಧ್ಯಯನದ ವಿಶ್ವಾಸಾರ್ಹತೆ ಮತ್ತು ಪಕ್ಷಪಾತರಹಿತ ಧೋರಣೆಗೆ ಕನ್ನಡಿ ಹಿಡಿಯುತ್ತದೆ. ದೇಶದ ಆರ್ಥಿಕ ನೀತಿ ನಿರ್ಧರಿಸುವ ಉನ್ನತ ಅಧಿಕಾರಿಗಳು, ಯೋಜನಾ ಆಯೋಗದಂತಹ ಹಣಕಾಸು ಸಂಸ್ಥೆಗಳು ವಿನಯಪೂರ್ವಕವಾಗಿ ವರದಿ ಸ್ವೀಕರಿಸಬೇಕಾಗಿದೆ. ಉದ್ದಿಮೆ - ವಹಿವಾಟಿಗೆ ಪೂರಕ  ವಾತಾವರಣ ನಿರ್ಮಿಸಲು, ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಲು ಗಂಭೀರ ಪ್ರಯತ್ನ ಮಾಡಬೇಕಾಗಿದೆ.

ತುಂಬ ಸಮಯದ ನಂತರ ಭಾರತದ ಆರ್ಥಿಕತೆಯಲ್ಲಿ ಚೇತರಿಕೆಯ ಲಕ್ಷಣಗಳೂ ಕಂಡು ಬರುತ್ತಿವೆ. ಬಹುಬ್ರಾಂಡ್ ಚಿಲ್ಲರೆ ರಂಗದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಸಂಸತ್ತು ಅನುಮೋದನೆ ನೀಡಿದ ನಂತರ ಭಾರತ ಜಾಗತಿಕವಾಗಿ ಇನ್ನಷ್ಟು ಗಮನ ಸೆಳೆಯುತ್ತಿದೆ. ಷೇರುಪೇಟೆ ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ.
ಉದ್ದಿಮೆ ವಹಿವಾಟು ವಿಸ್ತರಣೆ, ಹೊಸ ಕೈಗಾರಿಕೆಗಳ ಸ್ಥಾಪನೆ ಮತ್ತಿತರ ಆರ್ಥಿಕ ಚಟುವಟಿಕೆಗಳಿಗೆ ಇನ್ನಷ್ಟು ಪೂರಕವಾದ ಪರಿಸರ, ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಗೊಳ್ಳಲು ಸರ್ಕಾರಕ್ಕೆ ಇದು ಸೂಕ್ತ ಸಮಯವಾಗಿದೆ. ಭಾರತದ ಬಗೆಗಿನ ಜಾಗತಿಕ ಸಮುದಾಯದ ದೃಷ್ಟಿಕೋನ ಬದಲಿಸಲು ವಿಶ್ವ ಬ್ಯಾಂಕ್‌ನ ಅಧ್ಯಯನ ವರದಿ ಒಪ್ಪಿಕೊಳ್ಳುವುದು ಈ ನಿಟ್ಟಿನಲ್ಲಿನ ಮೊದಲ ಹೆಜ್ಜೆಯಾಗಲಿದೆ.

ವಿಶ್ವದ ದೃಷ್ಟಿಯಲ್ಲಿ ಭಾರತದ ಸ್ಥಾನಮಾನದ ನಂತರ, ಬೆಂಗಳೂರಿನ ಸ್ಥಾನಮಾನದ ಬಗ್ಗೆಯೂ ಕೆಲ ಅನಿಸಿಕೆಗಳನ್ನು ಹಂಚಿಕೊಳ್ಳಲು ನಾನು ಇಲ್ಲಿ ಬಯಸುತ್ತೇನೆ.  ದೇಶದ ನಗರಗಳ ಪೈಕಿ ಬೆಂಗಳೂರಿನ ಸ್ಥಾನಮಾನವೂ ಕೆಳಮಟ್ಟದಲ್ಲಿಯೇ ಇದೆ. 17 ನಗರಗಳ `ರ‌್ಯಾಂಕಿಂಗ್ ಪಟ್ಟಿ'ಯಲ್ಲಿ ಬೆಂಗಳೂರಿನ ಸ್ಥಾನಮಾನ 13ನೆ ಸ್ಥಾನದಲ್ಲಿ ಇದೆ. ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ಉದ್ದಿಮೆ ವಹಿವಾಟು ಆರಂಭಿಸಲು ಸೂಕ್ತ ಪರಿಸರ ಇಲ್ಲ ಎಂದೇ ಇದರರ್ಥ. ಬೆಂಗಳೂರಿನ ವಿವಿಧ ಪ್ರಾಧಿಕಾರಗಳು ಈ  ಬಗ್ಗೆ ಗಮನ ಹರಿಸಿರುವ ಬಗ್ಗೆ ನನ್ನಲ್ಲಿ ಸಾಕಷ್ಟು ಅನುಮಾನಗಳು ಇವೆ.

ಇಷ್ಟೆಲ್ಲ ನಿರಾಶಾದಾಯಕ ವಿದ್ಯಮಾನಗಳ ಮಧ್ಯೆಯೂ ಭಾರತೀಯರು ಆಶಾವಾದ ತಳೆಯಬೇಕು. ಕಾರ್ಮೋಡಗಳ ಮಧ್ಯೆ ಬೆಳ್ಳಿ ಕಿರಣಗಳೂ ಗೋಚರಿಸುತ್ತವೆ. ವಿಶ್ವಬ್ಯಾಂಕ್ ವರದಿಯಲ್ಲಿ ಉಲ್ಲೇಖಿಸಿರುವ `ರ‌್ಯಾಂಕಿಂಗ್ ಪಟ್ಟಿ'ಯನ್ನು ಉದ್ದಿಮೆ ಪ್ರಮುಖರ ಸಭೆಯೊಂದರಲ್ಲಿ ಚರ್ಚೆಗೆ ಬಂದಿತ್ತು. ಕೈಗಾರಿಕಾ ವಲಯಕ್ಕೆ ಪೂರಕ ಪರಿಸರ ಕಲ್ಪಿಸುವಲ್ಲಿನ ವೈಫಲ್ಯಕ್ಕೆ  ಸರ್ಕಾರವೇ ಹೊಣೆ. ದೇಶಿ ಉದ್ಯಮಿಗಳು  `ರ‌್ಯಾಂಕಿಂಗ್ ಪಟ್ಟಿ'ಯಲ್ಲಿ ಮುಂಚೂಣಿಯಲ್ಲಿ ಇರುವ ಇತರ ದೇಶಗಳಿಗೆ ತೆರಳಿ ವಹಿವಾಟು ವಿಸ್ತರಿಸಿ ಸಾಕಷ್ಟು ಪ್ರಯೋಜನ ಪಡೆಯಬಹುದಾಗಿದೆ ಎಂದು ಉದ್ಯಮಿಯೊಬ್ಬರು ಸಭೆಯಲ್ಲಿ ಆಶಿಸಿದ್ದರು. ಉದ್ಯಮ ವಲಯದಲ್ಲಿನ ಇಂತಹ ಮನೋಭಾವ ನೋಡಿಯಾದರೂ ನಮ್ಮ ಅಧಿಕಾರಶಾಹಿ ಪಾಠ ಕಲಿಯಬೇಕಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT