ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ತನ ಆದ ಮನೇಲಿ ಮತ್ಯಾರಿದ್ರು ಅಂತ ಕೇಳಿದ್ರೆ...

Last Updated 24 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಕಿಟಕಿಯ ಪಕ್ಕದಲ್ಲಿ ಇದ್ದ ಹೆಣದಾಕಾರದ ಬೆಡ್ ಶೀಟು ಯಾರಿಗೋ ಏಣಿಯಾಗಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಅದೆಲ್ಲಾ ನಡೆದಿರುವುದು ತಾವು ಮಲಗಿದ್ದ ರೂಮಿನ ಪಕ್ಕದಲ್ಲೇ ಎನ್ನುವುದು ಇನ್ನೂ ಹೆದರಿಕೆ-ತುಂಬಿದ ಸೋಜಿಗವಾಗಿತ್ತು. ಎಚ್ಚರವೇ ಇಲ್ಲದೆ ಮಲಗಿದ್ದರಲ್ಲ!!

ಕೋಟಿ ಪರಿಸ್ಥಿತಿಯ ವಿಶ್ಲೇಷಣೆಗೆ ತೊಡಗಿದ. ‘ಅಕಾ, ಮೇಲಿನ್ ಮನೆ ಹುಡುಗರು ಊರಲ್ಲಿಲ್ಲ... ಸೆಕ್ಯೂರಿಟಿ ಹೇಳಿದ’ ಅಂತ ತಾನಾಗಲೇ ಇನ್ವೆಸ್ಟಿಗೇಷನ್ ಶುರು ಮಾಡಿದ್ದನ್ನು ಅರುಹಿದ. ‘ಎಲ್ಲೋಗಿದಾರಂತೆ?’ ಜಯಾ ಕೇಳಿದಳು.

‘ಏನೋ ಗೊತ್ತಿಲ್ಲ. ಮೂರು ಜನ ಇದ್ದಾರಂತೆ. ಬೇರೆ ಯಾರ ಹತ್ತಿರವೂ ಮಾತಾಡಲ್ಲವಂತೆ. ಬೀಗ ಹಾಕ್ಕೊಂಡು ಹೋಗಿ ನಾಲ್ಕು ದಿನವಾಯಿತಂತೆ. ಒಂದು ವಾರ ಇರಲ್ಲ ಅಂತ ಹೇಳಿ ಹೋದರಂತೆ’

‘ಸೆಕ್ಯೂರಿಟಿ ಹತ್ತಿರ ಬೀಗ ಕೊಟ್ಟಿಲ್ವಾ?’
‘ಗೊತ್ತಿಲ್ಲ. ಅಪಾರ್ಟ್ಮೆಂಟ್ ಮ್ಯಾನೇಜರೇ ಬರಬೇಕು ಅಂತ ಕಾಣುತ್ತೆ. ಸೆಕ್ಯೂರಿಟಿ ಹತ್ತಿರ ಬೀಗ ಇರಲ್ಲ’
‘ಈಗೇನ್ಮಡ್ತಾರೋ?’ ಜಯಸುಧಾಗೆ ಸ್ವಲ್ಪ ಭಯ ಆವರಿಸತೊಡಗಿತ್ತು. ಹಾಗೂ ಹೀಗೂ ಸಂಜೆಯ ತನಕ ದಿನ ಕಳೆಯಿತು. ಜಯಾಗೆ ಪೋಲಿಸರ ಬಗ್ಗೆ ಭಯ. ಮುನಿರಾಜುವಿನ ಸಂಪರ್ಕದಿಂದಾಗಿ ದೊಡ್ಡ ಪಾಠವೊಂದು ದೊರೆತುಹೋಗಿತ್ತು. ಅವನನ್ನು ಅರೆಸ್ಟ್ ಮಾಡಿದಾರೆ ಅಂತ ಗೊತ್ತಾದಾಗಲೇ ತನ್ನವರೆಗೂ ಈ ಕೇಸು ಬರುತ್ತದೇನೋ ಅಂತ ಹೆದರಿ ನಡುಗಿ ಹೋಗಿದ್ದಳು. ಆದರೆ ಅವಳ ಪುಣ್ಯಕ್ಕೆ ಅದ್ಯಾವುದೂ ಆಗದೆ, ಕಾಲವು ಹೊಟ್ಟೆ ತುಂಬಿದ ಹೆಬ್ಬಾವಿನಂತೆ ತಣ್ಣಗೆ ಮಲಗಿತ್ತು. ಈಗ ಪೊಲೀಸರು ಬಂದು ಅಕಸ್ಮಾತ್ ತನ್ನನ್ನು ವಿಚಾರಣೆಗೊಳಪಡಿಸಿದರೆ, ತನ್ನನ್ನು ಕಾಪಾಡುವವರು ಯಾರೂ ಇಲ್ಲ ಅಂತ ನಡುಗಿಬಿಟ್ಟಳು.

‘ಅಯ್ಯೋ ಅದಕ್ಕೆಲ್ಲಾ ಯಾಕೆ ಹೆದರ್ತೀರ ಜಯಾ? ಪೊಲೀಸರು ನಮ್ಮನ್ನೇನೂ ನುಂಗಿ ಹಾಕಲ್ಲ’ ಅಂತ ಸರಳಾ ಸಮಾಧಾನ ಮಾಡಲೆತ್ನಿಸಿದರೂ ಜಯಾಗೆ ಬಿಟ್ಟ ಉಸಿರು ಒಳಗೆ ಎಳೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇಡೀ ಘಟನೆ ಮುಂದೆ ಹೇಗೆ ಬಿಡಿಸಿಕೊಳ್ಳುತ್ತದೆ ಅಂತ ಅವಳ ತಲೆಯಲ್ಲಾಗಲೇ ಮ್ಯಾಪ್ ಒಂದು ಪ್ರತ್ಯಕ್ಷವಾಗತೊಡಗಿತ್ತು. ಅದರ ಪ್ರಕಾರ ಖಂಡಿತಾ ತನ್ನನ್ನು ವಿಚಾರಣೆಗೆ ಒಳಪಡಿಸುತ್ತಾರೆ, ಆಮೇಲೆ ತನ್ನ ಗಂಡನಿಗೆ ಅವನ ಸಂಬಂಧಿಗಳಿಗೆ ವಿಷಯ ಗೊತ್ತಾಗುತ್ತದೆ. ಮುನಿರಾಜು ಇಲ್ಲಿಗೆ ಬರುತ್ತಿದ್ದ ಅನ್ನುವುದೂ ತಿಳಿದುಹೋಗುತ್ತದೆ, ಅದು ಅನೈತಿಕ ಸಂಬಂಧವೇ ಎನ್ನುವ ನಿರ್ಧಾರಕ್ಕೆ ಬರಲು ಎಷ್ಟು ಸಮಯ ಬೇಕು? ತಾನು ಜೈಲಿಗೆ ಹೋಗುತ್ತೇನೆ. ತನ್ನ ಗಂಡ ತನ್ನನ್ನು ಬಿಟ್ಟು ಅಲ್ಲೇ ಸೌದಿಯಲ್ಲಿ ಇನ್ನೊಂದು ಮದುವೆ ಆಗುತ್ತಾನೆ. ತಾನು ಜೈಲಿನಲ್ಲಿ ಬಿಳೆ ಸೀರೆ ಉಟ್ಟು ಮುದ್ದೆ ಕಟ್ಟುತ್ತಿರುವಾಗ ತನ್ನ ಪುಟ್ಟ ಮಗ ಅಸಹಾಯಕ ಅಜ್ಜಿಯ ಆಶ್ರಯದಲ್ಲಿ ಆಂಧ್ರದ ಹಳ್ಳಿಯಲ್ಲಿ ಬಿರುಬಿಸಿಲಿನಲ್ಲಿ ನಡೆಯುತ್ತಾ ಸ್ಕೂಲಿಗೆ ಹೋಗುತ್ತಿರಲು ಓರಗೆ ಹುಡುಗರು ಅವನನ್ನು ತಮಾಷೆ ಮಾಡುತ್ತಾ ‘ಕೈದಿಯ ಮಗ’ ಅಂತೆಲ್ಲಾ ಕರೆದು ಕಲ್ಲಿನಲ್ಲಿ ಹೊಡೆಯುತ್ತಾರೆ. ಆಮೇಲೆ ಅವನು...

‘ಜಯಾ ದೀದಿ... ಜಯಾ ದೀದಿ...’ ಹೀಗೆ ಸೂಸನ್ ಅವಳ ಭುಜ ಹಿಡಿದು ಅಲುಗಾಡಿಸಿ ಕರೆಯುವ ಹೊತ್ತಿಗೆ ಜಯಾ ಮನಸ್ಸಿನ ಪಟಲದಲ್ಲಿ ಚಿರಂಜೀವಿ ಸಿನಿಮಾದ ಅರ್ಧ ಭಾಗ ಆಗಲೇ ಆಗಿ, ಬೆಳೆದು ದೊಡ್ಡವನಾದ ಅವಳ ಮಗ ಫುಲ್ಲು ‘ಆ್ಯಂಗ್ರಿ ಯಂಗ್ ಮ್ಯಾನ್’ ಗೆಟಪ್ಪಲ್ಲಿ ಇನ್ನೇನು ಹೀರೋ ಥರ ಎಂಟ್ರಿ ಕೊಡಬೇಕಿತ್ತು. ಸೂಸನ್ ಕರೆದಿದ್ದರಿಂದ ಸಿನಿಮಾ ಮುರಿದು ಬಿತ್ತು. ತನ್ನ ಪುಟ್ಟ ಮಗ, ತನ್ನ ಮುಗ್ಧ ಕಳೆಯ ಕೂಸು ಪಕ್ಕದ ರೂಮಲ್ಲಿ ಬೆಚ್ಚಗೆ ಮಲಗಿದ್ದಾನೆ ಎನ್ನುವುದು ನೆನಪಾಗಿ ಸಮಾಧಾನವಾಯಿತು. ಆದರೆ ಹೆದರಿಕೆ ಕಡಿಮೆ ಆಗಲಿಲ್ಲ. ಹೇಗೋ ತಾನು ಈ ಕೇಸಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತೀನಿ ಅಂತ ಜಯಾ ಒಳಮನಸ್ಸು ಖಾತ್ರಿಯಾಗಿ ಹೇಳುತ್ತಿತ್ತು.
‘ಜಯಕ್ಕ... ಏನು ಯೋಚಿಸ್ತಿದೀರಿ?’ ವಿಜಿ ಕೇಳಿದಳು.

ವಿಹ್ವಲಗೊಂಡಿದ್ದ ಜಯಾ ಮುಖ ನೋಡುತ್ತಿದ್ದಂತೆ ಇದು ಅತಿ ಸಿನಿಮಾ ನೋಡುವವರಿಗೆ ಅಂಟಿದ ಶಾಶ್ವತ ಕಾಯಿಲೆ ಎನ್ನುವುದು ವಿಜಿಗೆ ಅರ್ಥವಾಯಿತು. ದಾವಣಗೆರೆಯಲ್ಲಿ ಕುಸುಮಾ ಅಂತ ಅವಳ ಫ್ರೆಂಡೊಬ್ಬಳು ಹೀಗೇ ಅವಳ ಮಾತೃಭಾಷೆಯಾದ ತೆಲುಗು ಭಾಷೆಯ ಸಿನಿಮಾಗಳನ್ನು ಒಂದರ ಮೇಲೊಂದು ನೋಡಿ ನೋಡಿ ತಲೆ ಚಿಟ್ಟು ಹಿಡಿಯುವಷ್ಟು ಕಲ್ಪನಾ ಶಕ್ತಿ ಬೆಳೆಸಿಕೊಂಡಿದ್ದಳು. ಅವಳಿಗೆ ಎಲ್ಲವೂ ಮೆಲೋಡ್ರಮಾಟಿಕ್. ಜಯಾನ್ನ ನೋಡಿದರೆ ಅವಳೇ ನೆನಪಾಗುವಷ್ಟು ತಾದ್ಯಾತ್ಮ ಇತ್ತು ಕುಸುಮಾಗೂ, ಜಯಾಗೂ.

ವಿಜಿ ಮತ್ತು ಕುಸುಮಾ ಇಬ್ಬರೂ ಒಂದೇ ವಯಸ್ಸಿನವರು. ತೊಂಬತ್ತರ ದಶಕದಲ್ಲಿ ವಿ.ಸಿ.ಆರ್ (ವಿಡಿಯೊ  ಕ್ಯಾಸೆಟ್ ರೆಕಾರ್ಡರ್) ಅಂದರೆ ಏನೋ ಸಂಭ್ರಮ. ಇಡೀ ಊರಿಗೆ ಎಲ್ಲೋ ನಾಲ್ಕೈದು ಅಂಗಡಿಗಳಲ್ಲಿ ಮಾತ್ರ ಕಪ್ಪು ಬಣ್ಣದ ಸಣ್ಣ ಬ್ರೀಫ್ ಕೇಸಿನಂತಹ ಬಾಕ್ಸು –ಅದೇ ವಿ.ಸಿ.ಆರ್- ಬಾಡಿಗೆಗೆ ಸಿಗುತ್ತಿತ್ತು. ಸಿನಿಮಾದ ಕ್ಯಾಸೆಟ್ಟುಗಳೂ ಬಹುತೇಕ ಅಲ್ಲೇ ಸಿಗುತ್ತಿದ್ದವು.

ವಿ.ಸಿ.ಆರ್, ಕ್ಯಾಸೆಟ್ಟನ್ನು ದಿನದ ಬಾಡಿಗೆ ಮೇಲೆ ತರಬೇಕೆಂದರೆ ಬಹುತೇಕ ಮಿನಿಸ್ಟರ್ ಮಟ್ಟದ ವಶೀಲಿ ಬೇಕಾಗುತ್ತಿತ್ತು. ವಾರಗಟ್ಟಲೆ ಬುಕ್ ಆಗಿರುತ್ತಿತ್ತು. ಹಾಗಾಗಿ ಈಗ ಫ್ಲೈಟ್ ಟಿಕೆಟ್ ಬುಕ್ ಮಾಡುವ ಹಾಗೆ ಮೊದಲೇ ಬ್ಲಾಕ್ ಮಾಡಿಕೊಂಡಿರಬೇಕಿತ್ತು. ಆಮೇಲೆ ತೆಗೆದುಕೊಂಡು ಹೋಗುವ ದಿನ ಅಡ್ರೆಸ್ ಬರೆದು, ಅಕ್ಕಪಕ್ಕದವರ ಪರಿಚಯ ಹೇಳಿ, ಬಾಡಿಗೆಯ ಮೂರು ಪಟ್ಟು ಮುಂಗಡ ಹಣ ಕೊಟ್ಟು, ವಾಪಸು ಕೊಡುವಾಗ ಚೆಕ್ ಮಾಡಿಸಿ ಏನೇನೆಲ್ಲ ಪರೀಕ್ಷೆಗಳು! ಅದೆಲ್ಲ ಅಡ್ಡಿ ಆತಂಕಗಳನ್ನು ದಾಟಿ ಏಕಾಗ್ರಚಿತ್ತ ಕ್ರೀಡಾಪಟುವಿನ ಹಾಗೆ ವಿ.ಸಿ.ಆರನ್ನೂ, ಕ್ಯಾಸೆಟ್ಟನ್ನೂ ಬಾಡಿಗೆಗೆ ತಂದು ಸಿನಿಮಾ ನೋಡುವ ಮಜಾದ ಮುಂದೆ ಎಲ್ಲಾ ಕಷ್ಟಗಳೂ ನಿಕೃಷ್ಟವೆನ್ನಿಸಿಕೊಳ್ಳುತ್ತಿದ್ದವು. ಫ್ಲಾಟ್ ಸ್ಕ್ರೀನ್ ಟಿ.ವಿ, ಮಲ್ಟಿಪ್ಲೆಕ್ಸಿನಲ್ಲಿ ಬೇಕೆಂದಾಗ ಕಾಲು ಚಾಚಿ ಸಿನಿಮಾ ನೋಡುವ ಈಗಿನ ಜನಾಂಗಕ್ಕೆ ವಿ.ಸಿ.ಆರ್‌ನ ಕಷ್ಟಗಳ ರೂಪದಲ್ಲಿದ್ದ ಸಣ್ಣ ಪುಟ್ಟ ಸಂತೋಷಗಳು ಅರ್ಥ ಆಗಲೇಬೇಕು ಅಂತೇನೂ ಇಲ್ಲ. ಯಾಕೆಂದರೆ ಕಾಲದ ಗುರುತುಗಳು ಒಂದೊಂದು ಪೀಳಿಗೆಗೂ ಬದಲಾಗುತ್ತವಲ್ಲ?

ಹಾಗೆ ಹರಸಾಹಸ ಮಾಡಿ ತಂದ ಸಿನಿಮಾಗಳು ಅಸಾಧ್ಯ ಎನ್ನಿಸುವಷ್ಟು ಮಂಜುಮಂಜಾಗಿರುತ್ತಿದ್ದವು. ಅದು ವಿ.ಸಿ.ಆರ್ ತೊಂದರೆಯೋ ಅಥವಾ ಕ್ಯಾಸೆಟ್ಟಿನ ಮ್ಯಾಗ್ನೆಟಿಕ್ ಟೇಪು ಬಳಕೆಯ ಮಿತಿಯನ್ನು ಮೀರಿದ ಕಾರಣಕ್ಕೋ ಎನ್ನುವುದು ಗೊತ್ತಾಗುತ್ತಿರಲಿಲ್ಲ.  ವಿ.ಸಿ.ಆರ್‌ನ ‘ಹೆಡ್’ಗೆ ಉಜ್ಜೀ ಉಜ್ಜೀ ಅದು ಸಾವಿಗೆ ಹತ್ತಿರವಾಗಿರುವ ಸಂಕೇತಗಳು ಧಾರಾಳಾವಾಗಿರುತ್ತಿದ್ದರೂ ಆಶಾಭಾವನೆ ಮಾತ್ರ ಕಳೆಯುತ್ತಿರಲಿಲ್ಲ. ಹಾಗೇ ಕೆಲವೊಮ್ಮೆ ಟೇಪು ಸಿಕ್ಕಿಕೊಂಡರೆ ಇಡೀ ವಿ.ಸಿ.ಆರ್ ಅನ್ನು ಬಿಚ್ಚಿ ನೋಡಿ ಅದರ ‘ಹೆಡ್’ ಕ್ಲೀನ್ ಮಾಡುವ ವಿದ್ಯೆ ಕುಸುಮಾಗೂ, ವಿಜಿಗೂ ಧಾರಾಳವಾಗಿ ಪ್ರಾಪ್ತವಾಗಿತ್ತು. ಅದಕ್ಕೆಂದೇ ಒಂದು ಸ್ಪ್ರೇ ಸಿಗುತ್ತಿತ್ತು. ಅದು ತುಟ್ಟಿ ಅಂತ ಗೊತ್ತಾಗಿ, ಅದೇ ಕೆಲಸವನ್ನು ಕಡಿಮೆ ಬೆಲೆಯ ನೇಲ್ ಪಾಲಿಷ್ ರಿಮೂವರ್ ಮಾಡುತ್ತೆ ಅಂತ ಹೇಗೋ ಜ್ಞಾನ ಸಂಪಾದನೆಯಾಗಿಬಿಟ್ಟು... ಬ್ಯಾಡ ವಿ.ಸಿ.ಆರ್‌ನ ಕತೆ, ತಂದ ತಕ್ಷಣ ಅದರ ಬಾಯಿಯೊಳಗೆ ಕ್ಯಾಸೆಟ್ಟು ತುರುಕುವುದು, ಚಿತ್ರ ಮೂಡಲು ಕಾಯುವುದು, ಸರಿಯಾಗಿಲ್ಲ ಒಡಕು ಒಡಕಾಗಿ ಚಿತ್ರ ಬಂತು ಅಂದರೆ ಕ್ಯಾಸೆಟ್ಟು ತೆಗೆದು ಹಡಪ ಬಿಚ್ಚಿಟ್ಟುಕೊಂಡು ಹೆಡ್ ಕ್ಲೀನ್ ಮಾಡುವುದು ಮತ್ತೆ ಕ್ಯಾಸೆಟ್ ತುರುಕುವುದು.

ಹಾಗಾಗಿಯೂ ಚಿತ್ರ ಸರಿಯಾಗಿ ಬರುವುದು ಅಷ್ಟರಲ್ಲೇ ಇತ್ತೆನ್ನಿ. ಪುಟ್ಟ ಟಿ.ವಿ ಮೇಲೆಲ್ಲ ಸಾಸಿವೆ ಚಟ ಚಟ ಅಂದ ಹಾಗೆ ಸೌಂಡು ಮಾಡುತ್ತಾ ಮೂಡುತ್ತಿದ್ದ ಹರಳು ಹರಳಿನಂತಹಾ ಬೂದು ಬಣ್ಣದ ಚುಕ್ಕೆಗಳು. ಹಾಲು ಒಡೆದ ಹಾಗೆ ಚಿತ್ರ. ಹೀರೋ ಹೀರೋಯಿನ್ ಮುಖ ಕಾಣದಂತಿದ್ದರೂ ಶಬ್ದವೇಧಿ ವಿದ್ಯೆಯಲ್ಲಿ ಸಿನಿಮಾ ನೋಡುವ ಕಲೆ ಕರಗತವಾಗಿತ್ತು.

ಶಬ್ದವೇಧಿ ವಿದ್ಯೆ ಅಂದರೆ ಬರೀ ಸೌಂಡು ಕೇಳಿಸಿಕೊಂಡು, ಮಾತುಗಳನ್ನೂ ಮುಖಭಾವವನ್ನೂ ಕಾಸ್ಟ್ಯೂಮನ್ನೂ ಊಹಿಸುವ ಕಲೆ. ತೆಲುಗು ಭಾಷಿಕಳಾಗಿದ್ದ ಕುಸುಮಾ ಸಾಮಾನ್ಯವಾಗಿ ನೋಡುತ್ತಿದ್ದುದು ಚಿರಂಜೀವಿ-ರಾಧಾ ಜೋಡಿಯ ಚಿತ್ರಗಳನ್ನೇ. ‘ಮುಠಾ ಮೇಸ್ತ್ರಿ’ಯನ್ನು ಇಪ್ಪತ್ತು ಸಾರಿ ನೋಡಿದ್ದಳು.

ಇಪ್ಪತ್ತೊಂದನೇ ಸಾರಿ ಕ್ಯಾಸೆಟ್ಟು ಬಾಡಿಗೆಗೆ ತರಲು ಹೋದಾಗ ಅಂಗಡಿಯವನು ವಿಷಯವನ್ನು ಕುಸುಮಾ ಅಮ್ಮನಿಗೆ ತಿಳಿಸಿದ. ಇದನ್ನು ಕೇಳಿ ಅವರಮ್ಮನಿಗೆ ಅಗಾಧ ಅವಮಾನವಾಗಿ ಕುಸುಮಾಗೆ ದನಕ್ಕೆ ಬಡಿದ ಹಾಗೆ ಬಡಿದಿದ್ದರು. ಆದರೇನು! ಸಿನಿಮಾ ದೆವ್ವ ಮೆಟ್ಟಿದ ತೆಳ್ಳನೆ ಹುಡುಗಿ ‘ಚಿರಂಜೀವಿ ಥರಾ ಫೈಟಿಂಗ್ ಆಡೋಕೆ ಬಂದಿದ್ದರೆ ನಮ್ಮಮ್ಮನ್ನ ಚಟ್ನಿ ಮಾಡಿರುತ್ತಿದ್ದೆ’ ಅಂತ ಹಳಹಳಿಸಿದ್ದಳು. ಅವಳು ಎಷ್ಟು ಸಿನಿಮಾ ನೋಡಿದ್ದಳೆಂದರೆ, ಅವಳಿಗೆ ವಾಸ್ತವವೇ ಒಂಥರಾ ಭ್ರಮೆಯಾಗಿತ್ತು. ಸಿನಿಮಾ ಸೃಷ್ಟಿಸುತ್ತಿದ್ದ ಜಗತ್ತಿನಲ್ಲಿ ಎಲ್ಲವೂ ಅವಳ ಕಲ್ಪನೆಯಂತೇ ನಡೆಯುತ್ತಿತ್ತು. ಮನಸ್ಸಿನ ಮೇಲೆ ಅದೊಂಥರಾ ಬಲವಾದ ಹಿಡಿತ ಸಾಧಿಸಿದ್ದ ಮಾಧ್ಯಮ.

ಹೀಗೆ ಸಿನಿಮಾ ನೋಡುವುದು ಕಡಿಮೆಯಾದ ಮೇಲೆ ಆ ಕೊರತೆಯನ್ನು ತುಂಬಿಸಿಕೊಳ್ಳು ತ್ತಿದ್ದ ರೀತಿಯೇ ವಿಚಿತ್ರವಾಗಿತ್ತು. ಬಹುತೇಕ ಘಟನೆಗಳು ಅವಳ ಕಣ್ಣು-ಕಿವಿಯ ಮೂಲಕ ಒಳಗೆ ಹೋಗಿ ಅವಳ ಬಾಯಿಯಿಂದ ಹೊರಗೆ ಬರುವ ಹೊತ್ತಿಗೆ ಹೊಸದೊಂದು ರೂಪ ಪಡೆದಿರುತ್ತಿದ್ದವು. ಎಷ್ಟರ ಮಟ್ಟಿಗೆ ರೂಪಾಂತರ ಹೊಂದಿರುತ್ತಿದ್ದವು ಅಂದರೆ, ಅಲ್ಲಿ ಸತ್ಯವಾಗಿ ನಡೆದದ್ದಕ್ಕೂ ಇಲ್ಲಿ ಇವಳು ಹೇಳುತ್ತಿರುವುದಕ್ಕೂ ಸಂಬಂಧವೇ ಇಲ್ಲ ಎನ್ನುವ ಥರಾ.

ಉದಾಹರಣೆಗೆ, ಮನೆಯ ಹತ್ತಿರ ಯಾರಿಗಾದರೂ ಜ್ವರ ಬಂದರೆ ಅವರಿಗೆ ಕ್ಯಾನ್ಸರ್ ಸಿಂಪ್ಟಮ್ಸ್ ಇದೆ ಅಂದುಬಿಡೋದು. ಅದನ್ನು ಕೇಳಿ ನೆರೆಹೊರೆಯವರು ಗಾಬರಿಯಾಗಿ ಹುಷಾರಿಲ್ಲದ ಹುಡುಗಿಗೋ ಹುಡುಗನಿಗೋ ಹಣ್ಣು ಹಂಪಲು ತೆಗೆದುಕೊಂಡು ಹೋದರೆ ಇವಳು ಹೇಳಿದ್ದೆಲ್ಲಾ ಬುರುಡೆ ಎನ್ನುವುದು ಗೊತ್ತಾಗುತ್ತಿತ್ತು. ಮನೆಯವರಿಗೆ ಬೇಸರವಾದರೂ ಇವಳ ಅಮ್ಮನಿಗೆ ಕಂಪ್ಲೇಂಟ್ ಹೇಳಿದರೆ ಮತ್ತೆ ಈ ಹುಡುಗಿಗೆ ಧಬಧಬ ಹೇರುತ್ತಾರೆ ಅನ್ನುವ ಅಂತಃಕರಣದಿಂದ ಬಾಯಿ ಮುಚ್ಚಿಕೊಂಡಿರುತ್ತಿದ್ದರು.

ಹೀಗೆ ಪರದೆ ಮೇಲೆ ಮಂಜುಮಂಜಾದ ಸಿನಿಮಾ ನೋಡಿ ಅವಳಿಗೆ ತಲೆನೋವು ಶುರುವಾಗಿ ದಪ್ಪ ಕನ್ನಡಕ ಬಂದಿತ್ತು. ಕನ್ನಡಕ ಯಾತಕ್ಕೆ ಬಂತೋ, ಅಂತೂ ಸಿನಿಮಾ ನೋಡಿಯೇ ಬಂತು ಅಂತ ಅವರಮ್ಮ ನಂಬಿಬಿಟ್ಟಿದ್ದರು. ಆಗಿನಿಂದ ವಿ.ಸಿ.ಆರ್ ಅಂಗಡಿಯವನಿಗೆ ತಾಕೀತು ಮಾಡಿ ಸಿನಿಮಾ ನೋಡುವ ಎಲ್ಲಾ ದಾರಿಗಳನ್ನೂ ಆ ಮಹಾತಾಯಿ ಬಂದ್ ಮಾಡಿಟ್ಟಿದ್ದರು. ತನ್ಮೂಲಕ ಉಂಟಾದ ಸಿನಿಮಾ ಭ್ರಮೆಯ ಕೊರತೆಯನ್ನು ಅವಳು ‘ಲಾರ್ಜರ್ ದ್ಯಾನ್ ಲೈಫ್’ ಕತೆಗಳನ್ನು ಕಲ್ಪಿಸಿಕೊಳ್ಳುವ ಮೂಲಕ ಪೂರೈಸಿಕೊಳ್ಳುತ್ತಿದ್ದಳು. ಅವಳ ಪ್ರಕಾರ ಎಲ್ಲವೂ ಒಂದು ಸ್ಕ್ರಿಪ್ಟ್ ಅನ್ನು ಆಧರಿಸಿ ನಡೆಯುತ್ತದೆ. ಆ ಕತೆಯ ನಿರ್ದೇಶಕಿ ತಾನೇ. ಹಾಗಾಗಿ ತನಗೆ ಬೇಕಾದ ಪಾತ್ರಗಳನ್ನು ಸೃಷ್ಟಿಸಿಕೊಂಡು ಇಲ್ಲದ ಬಾಧೆಗಳನ್ನು ಅನುಭವಿಸಿಕೊಂಡು ಕಾಲ ಕಳೆಯುತ್ತಿದ್ದಳು.

ಜಯಾ ಕೂಡ ಹಾಗೇ ಎಂದು ವಿಜಿಗೆ ಗೊತ್ತಾಗಿತ್ತಾದರೂ ಅದರಿಂದ ತೊಂದರೆಯೇನೂ ಇಲ್ಲವಾದ್ದರಿಂದ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಮೇಲಿನ ಮನೆಯಲ್ಲಿ ಕಳ್ಳತನವಾಗಿ ತಮ್ಮ ಕಲ್ಪನಾ ಜಗತ್ತಿನಲ್ಲಿ ಜಯಾ ತನ್ನನ್ನು ತಾನೇ ಅರೆಸ್ಟ್ ಮಾಡಿಕೊಂಡು ಜೈಲಿಗೂ ಸೇರಿಸಿಕೊಂಡು ಬಿಟ್ಟಿದ್ದರು.

‘ಜಯಕ್ಕ... ಏನೂ ಪ್ರಾಬ್ಲಮ್ ಆಗಲ್ಲ ಸುಮ್ನಿರ್ರಿ...’
‘ಇಲ್ಲಾ ವಿಜೂ... ನನ್ ಅದೃಷ್ಟವೇ ಚೆನ್ನಾಗಿಲ್ಲ. ಮದುವೆ ಅದ್ರೆ, ಗಂಡನಿಗೆ ಸಾಲ ಆಯಿತು. ಬಹಳ ವರ್ಷಗಳ ನಂತರ ಮಗು ಆಯಿತು, ಅದಕ್ಕೆ ತಂದೆಯ ಕಣ್ಣೆದುರಿಗೆ ಬೆಳೆಯುವ ಭಾಗ್ಯವೇ ಇಲ್ಲ. ಈಗ ನೋಡು, ಸುಮ್ಮನೆ ನನ್ನ ಪಾಡಿಗೆ ನಾನಿರೋಣ ಅಂದರೆ ಆ ಮುನಿರಾಜು ಎಂಥಾ ಇಕ್ಕಟ್ಟಲ್ಲಿ ಸಿಕ್ಕಿಸಿಬಿಟ್ಟ! ಹೆದರಿಕೇಲೇ ಜೀವನ ಮಾಡಬೇಕು ನಾನು...’

‘ಅಯ್ಯೋ ನೀವು ಹೆದರೋ ಅಷ್ಟು ಏನೂ ಆಗಿಲ್ಲ ಕಣ್ರೀ... ಸ್ವಲ್ಪ ಸುಮ್ಮನಿರ್ರಿ...’ ಸರಳಾ ತಲೆ ಕೆಟ್ಟು ಜೋರಾಗಿಯೇ ಹೇಳಿದರು.
‘ಪೊಲೀಸರ ಸಾವಾಸ ನಿಮಗೆ ಗೊತ್ತಿಲ್ಲ ಸರಳಾ. ನೀವೇನು, ಆರಾಮಾಗಿ ಒಬ್ಬರೇ ಇದೀರಿ...’

ಈ ಹೆಣ್ಣು ಮಕ್ಕಳ ನಡುವೆ ‘ನೀವೇನು ಆರಾಮಾಗಿ ಇದೀರಿ’ ಅಂತ ಮಾತು ಶುರುವಾಯಿತೆಂದರೆ ವಾಗ್ಯುದ್ಧಕ್ಕೆ ಮುನ್ನುಡಿ ಬಿತ್ತು ಅಂತಲೇ ಅರ್ಥ. ಇನ್ನು ಅವಳು ತನ್ನ ಕಷ್ಟಗಳನ್ನೆಲ್ಲಾ ಎತ್ತೆತ್ತಿ ಹೇಳಿ, ಅದಕ್ಕೆ ಬಣ್ಣ ಬಳಿದು, ಬಟ್ಟೆ ತೊಡಿಸಿ ಸಕಲ ವಿಶೇಷಣ ಪುಷ್ಪಗಳಿಂದ ಅಲಂಕಾರ ಮಾಡಿ, ಆರತಿ ಎತ್ತಿ ಇಷ್ಟೆಲ್ಲಾ ಅನುಭವಿಸಿ ತಾನು ಬದುಕಿರುವುದೇ ಈ ಸೃಷ್ಟಿ ಪ್ರಕ್ರಿಯೆಗೆ ಒಂದು ಸವಾಲು, ಇನ್ಯಾರೋ ಆಗಿದ್ದರೆ ಇಷ್ಟು ಹೊತ್ತಿಗೆ ಸತ್ತು ಹೋಗುತ್ತಿದ್ದರು ಅಂತ ಹೇಳದೆ ಮಾತುಗಳು ಮುಗಿಯುವುದಿಲ್ಲ.
ಸರಳಾ ಇನ್ನೇನು ಹಾಗೇ ಮಾತು ಶುರುಮಾಡುತ್ತಾರೆ ಅಂದುಕೊಂಡರೆ ಸರಳಾ ಹಾಗೆಲ್ಲಾ ಏನೂ ಮಾಡಲಿಲ್ಲ, ಸಧ್ಯ! ಜಯಾಳ ಹೆಗಲ ಮೇಲೆ ಕೈ ಇಟ್ಟು ಹೇಳಿದರು. ‘ಹೆದರಿಕೆ ವಿಷಯ ನಂಗೆ ಬಿಡಿ. ಪೊಲೀಸರು ಬಂದು ಕೇಳಿದರೆ ಉತ್ತರ ನಾನು ಕೊಡ್ತೀನಿ. ಆಯ್ತಾ? ಇವಳು ನಮ್ಮಕ್ಕ ಅಂತ ಹೇಳಿ. ಕೋಟೀಗೂ ಸರಿಯಾಗಿ ಅರ್ಥ ಮಾಡಿಸಿ. ನಿಮಗೇನೂ ತೊಂದರೆ ಆಗಲ್ಲ.’

‘ನಿಜವಾಗಿ? ನೀವು ಮಾತಾಡುತ್ತೀರಾ?’
‘ಹೌದು. ನಾನೇ ಮಾತಾಡ್ತೀನಿ. ಡೋಂಟ್ ವರಿ’
ಜಯಾಗೆ ಈ ತೆರನ ನಂಬಿಕೆಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ಗೊತ್ತಾಗಲಿಲ್ಲ. ಯಾಕೋ ಇದ್ದಕ್ಕಿದ್ದ ಹಾಗೆ ಚುಳ್ ಅಂತ ಪಾಪಪ್ರಜ್ಞೆ ಹೆಗಲೇರಿತು. ಸರಳಾರನ್ನು ಸೈಡಿಗೆ ಕರೆದುಕೊಂಡು ಹೋಗಿ ಹೇಳಿದರು.

‘ಮುನಿರಾಜು ಜೊತೆ ನನಗೆ ಸಂಬಂಧ ಇರಲಿಲ್ಲ. ಆದರೆ ಅವರಿಂದ ತುಂಬಾ ಹೆಲ್ಪ್ ಆಯಿತು. ಅವರಿಗೆ ನನ್ನ ಮೇಲೆ ಆಸಕ್ತಿ ಇತ್ತು. ಆದರೆ ಎಂದೂ ನನಗೆ ಬಲವಂತ ಮಾಡಲಿಲ್ಲ’

‘ಅದು ನನಗೆ ಗೊತ್ತು. ಒಂದು ಪಕ್ಷ ನಿಮಗೆ ಅವರ ಜೊತೆ ಸಂಬಂಧ ಇದ್ದಿದ್ದರೂ ಅದು ನನ್ ಆಫ್ ಅವರ್ ಬಿಸ್‌ನೆಸ್. ನಿಮ್ಮ ಜೀವನ. ನಿಮ್ಮ ಅವಶ್ಯಕತೆ, ನಿಮ್ಮ ಆಯ್ಕೆ’
‘ನಿಮಗೆ ಹೇಗೆ ಗೊತ್ತು ಇದೆಲ್ಲಾ?’

‘ಇಲ್ಲೇ ಇದ್ದಾಗ ಒಂದು ದಿನ ಮುನಿರಾಜು ಕೋಟಿ ಕೈಯಲ್ಲಿ ಚೀಟಿ ಕೊಟ್ಟು ಕಳಿಸಿದರು. ಕಾಂಡೊಂ ತಗೊಂಡು ಬಾ ಅಂತ. ಅದನ್ನು ಅವನಿಗೆ ಓದಕ್ಕೆ ಆಗಲಿಲ್ಲ, ನನ್ನ ಹತ್ತಿರ ತಂದಿದ್ದ. ಇದೇನು ಹೇಳಿ ಅಂತ ಕೇಳಿದ. ನಾನು ಚೀಟಿ ಹರಿದು ಬಿಸಾಕಿದೆ. ಅಂಗಡೀಲಿ ಇದನ್ನ ನಿನಗೆ ಕೊಡಲ್ಲ, ಅದಕ್ಕೆ ಎಲ್ಲೂ ಸಿಗಲಿಲ್ಲ ಅಂತ ಹೇಳು ಅಂತ ಕಳಿಸಿದೆ. ಅಲ್ಲಿಗೆ ಆ ಮಾತು ಮುಗೀತು’

‘ಮತ್ಯಾರಿಗೆ ಗೊತ್ತು ಈ ವಿಷಯ?’
‘ನನಗೆ ಮಾತ್ರ’
ಜಯಾ ಕಣ್ಣಲ್ಲಿ ಆವತ್ತು ಹರಿದದ್ದು ಕಣ್ಣೀರು ಅಂದರೆ ಅದರ ಔಚಿತ್ಯ ಕಡಿಮೆ ಮಾಡಿದ ಹಾಗೆ. ವಿಷಯದ ಭಾರವೊಂದು ಹೀಗೆ ಒಬ್ಬರೊಬ್ಬರ ಸಮ್ಮುಖದಲ್ಲಿ ಮುಕ್ತವಾದ ಘಳಿಗೆಯಲ್ಲಿ ಇಳಿದದ್ದು ಬರೀ ಕಣ್ಣೀರಲ್ಲ, ಎದೆಯ ಭಾರವೂ ಕೂಡ, ಅಳಿಸಿಹೋಗಿದ್ದು ನೈತಿಕ-ಅನೈತಿಕ, ಸರಿ-ತಪ್ಪುಗಳ ನಡುವಿನ ಆ ದಪ್ಪನೆ ಗೆರೆ. ಇಬ್ಬರೂ ಹೀಗೆ ನಿಂತಿದ್ದ ಒಂದು ಆರ್ದ್ರ ಘಳಿಗೆಯಲ್ಲಿ ಕೋಟಿ ಓಡೋಡಿ ಬಂದ.

‘ಅಕ್ಕಾ, ಪೊಲೀಸ್ನೋರು ಬಂದಿದ್ದಾರೆ. ಮೇಲಿನ ಮನೆ ಬೀಗ ಒಡೆದ್ರು. ಕಳ್ತನ ಆಗಿದೆ. ಸಾಮಾನೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಇಲ್ಲಿ ಯಾರ್‍್ಯಾರು ಇದಾರೆ ಅಂತ ಕೇಳಿದ್ರು. ಸೆಕ್ಯೂರಿಟಿ ಮೂರು ಜನ ಹುಡುಗರು ಇದಾರೆ ಅಂತ ಹೇಳಿದ. ಬರೀ ಹುಡುಗರಾ ಇಲ್ಲಾ ಹುಡುಗೀರೂ ಇದಾರಾ ಅಂತ ಕೇಳಿ, ಸರಿಯಾಗಿ ಹೇಳು ಅಂತ ಜೋರು ಮಾಡಿದರು...’

‘ಅದಕ್ಕೆ?’
‘ಸೆಕ್ಯೂರಿಟಿ ನನಗೆ ಗೊತ್ತಿರೋ ಹಂಗೆ ಹುಡುಗರು ಮಾತ್ರ ಸರ್ ಅಂದ’
‘ಆಮೇಲೆ?’
‘ಮ್ಯಾನೇಜರನ್ನ ಕೇಳಿದ್ರು. ಅವರೂ ಹಂಗೇ ಹೇಳಿದ್ರು’

‘ಮುಂದಕ್ಕೆ ಹೇಳೋ ಕತ್ತೆ’
‘ಅಲ್ಲಿ...ಅಲ್ಲಿ...’
ಪಟ್ ಅಂತ ಕೋಟಿಯ ತಲೆ ಮೇಲೊಂದು ಮೊಟಕಿದರು ಜಯಾ. ಹಾ! ಅಂತ ತಲೆ ಉಜ್ಜಿಕೊಳ್ಳುತ್ತಾ ಕೋಟಿ ಹೇಳಿದ. ‘ಆ ಮನೇಲಿ ಎಲ್ಲಾ ಹುಡುಗೀರ್ ಡ್ರೆಸ್ಸು ಸಿಕ್ಕಿದಾವೆ ಅಕಾ’
‘ಡ್ರೆಸ್ಸಾ?’
‘ಹೂಂ. ಡ್ರಸ್ ಅಷ್ಟೇ ಅಲ್ಲ,  ಒಳಗ್ ಹಾಕ್ಕೊಳೋ ಬಾಡಿ ಗೀಡಿನೂ ಸಿಕ್ಕಿದಾವೆ. ಪೊಲೀಸ್ನೋರು ಈಗ ಫುಲ್ಲು ಕನ್ಫ್ಯೂಸ್ ಆಗಿದಾರೆ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT