ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಲು ಹಾದಿಯಲ್ಲಿ ‘ಎಎಪಿ’

Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಆಮ್‌ ಆದ್ಮಿ ಪಾರ್ಟಿಯು (ಎಎಪಿ) ಇಂತಹ ದಿನವೇ ಅಸ್ತಿತ್ವಕ್ಕೆ ಬಂದಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. 2012ರ ಆಗಸ್ಟ್‌ 4, ಈ ಪಕ್ಷದ ಸ್ಥಾಪನಾ ದಿನವಾಗಿದೆ ಎಂದಷ್ಟೇ ತಾಂತ್ರಿಕವಾಗಿ ಹೇಳಬಹುದು. ಇದರ ಸ್ಥಾಪಕರು ಆ ದಿನ, ತಮ್ಮ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಂದರ್ಭದಲ್ಲಿ ರಾಜಕೀಯವನ್ನು ಕೊಚ್ಚೆಗುಂಡಿ ಎಂದು ಹೇಳುತ್ತಲೇ ತಾವೇ ಆ ಗುಂಡಿಗೆ ಧುಮುಕಿದ್ದರು.

‘2010ರಲ್ಲಿ ಭ್ರಷ್ಟಾಚಾರ ವಿರುದ್ಧದ ಜನಾಂದೋಲನವು ತನ್ನ ಉತ್ತುಂಗ ಸ್ಥಿತಿಯಲ್ಲಿ ಇದ್ದಾಗ ಅಣ್ಣಾ ಹಜಾರೆ ಅವರು ಈ ಚಳವಳಿಯ ಮುಂಚೂಣಿಯಲ್ಲಿದ್ದರು. ಅದರ ಪ್ರಚಾರ ರಾಯಭಾರಿಯಾಗಿ ತುತ್ತೂರಿ ಊದುತ್ತಾ ಮುನ್ನಡೆಸುತ್ತಿದ್ದಾಗಲೇ ಈ ಪಕ್ಷದ ವೇದಿಕೆ ಸಿದ್ಧಗೊಂಡಿತ್ತು. ಯುವ ಅರವಿಂದ ಕೇಜ್ರಿವಾಲ್‌ ಅವರೇ ಈ ವಾದ್ಯಗೋಷ್ಠಿಯ ನಿರ್ವಾಹಕರಾಗಿದ್ದರು’ ಎಂದು ನಾನು ನನ್ನ ಪುಸ್ತಕದಲ್ಲಿ ಉಲ್ಲೇಖಿಸಿರುವೆ.

ನಿರ್ದಿಷ್ಟ ಉದ್ದೇಶ ಸಾಧಿಸಲು ಅಸ್ತಿತ್ವಕ್ಕೆ ಬಂದಿರುವ ಈ ಕಾರ್ಯಪಡೆಯು ಈಗಲೂ ಅಸಂಘಟಿತ ಸ್ವರೂಪದಲ್ಲಿಯೇ ಇದೆ. ಅದಕ್ಕೊಂದು ಸ್ಪಷ್ಟವಾದ ಕಾರ್ಯಸೂಚಿಯಾಗಲಿ ಅಥವಾ ಪ್ರಣಾಳಿಕೆಯಾಗಲಿ ಇಲ್ಲವೇ ಇಲ್ಲ. ಜನ ಲೋಕಪಾಲ್‌ ಹೆಸರಿನ ಶಸ್ತ್ರಾಸ್ತ್ರದ ಮೂಲಕ, ಭ್ರಷ್ಟಾಚಾರ ಎನ್ನುವ ರಾಕ್ಷಸನನ್ನು ನಾಶಪಡಿಸುವುದೊಂದೇ ಅದರ ಮುಖ್ಯ ಗುರಿಯಾಗಿತ್ತು.
ಈ ಸದುದ್ದೇಶವೊಂದನ್ನು ಹೊರತುಪಡಿಸಿದರೆ ಆ ಪಕ್ಷಕ್ಕೆ ಯಾವುದೇ ಸಿದ್ಧಾಂತ ಇಲ್ಲ. ಸಮಾಜದ ಎಲ್ಲ ಕಡೆಗಳಿಂದ ಬಂದು ಪಕ್ಷದ ವೇದಿಕೆ ಹಂಚಿಕೊಳ್ಳಲು ಮತ್ತು ಸಾಮಾಜಿಕ ಮಾಧ್ಯಮಗಳಿಂದ ವೈಭವೀಕರಣಗೊಂಡ ಅಣ್ಣಾ ಹಜಾರೆ ಅವರ ಹೋರಾಟದ ಕಿಚ್ಚಿನಲ್ಲಿ ಬೆಂಕಿ ಕಾಯಿಸಿಕೊಂಡು ಪ್ರಚಾರ ಗಿಟ್ಟಿಸಲು ಅನೇಕರಿಗೆ ಅದೊಂದು ಉತ್ತಮ ಅವಕಾಶ ಕಲ್ಪಿಸಿಕೊಟ್ಟಿತ್ತು. ಸೈದ್ಧಾಂತಿಕವಾಗಿ ಇದು ಎ‌ಲ್ಲ ವಿಚಾರಧಾರೆಯ ಜನರಿಗೂ ಆಶ್ರಯ ಒದಗಿಸಿತ್ತು.

ಸಂಪೂರ್ಣ ವಿಭಿನ್ನ ಬಗೆಯ ಆಲೋಚನೆಗಳನ್ನು ಪ್ರತಿನಿಧಿಸುತ್ತಿದ್ದ ಕಾವಿಧಾರಿಗಳಾದ ಸ್ವಾಮಿ ಅಗ್ನಿವೇಶ್‌ ಮತ್ತು ಬಾಬಾ ರಾಮದೇವ್‌ ಅವರೂ ಈ ವೇದಿಕೆಯನ್ನು ಹಂಚಿಕೊಂಡಿದ್ದರು. ಎಡಪಂಥೀಯ ವಿಚಾರಧಾರೆಯ ವಕೀಲ ಪ್ರಶಾಂತ್‌ ಭೂಷಣ್‌ ಮತ್ತು ಬಲಪಂಥೀಯ ಕವಿ ಕುಮಾರ್‌ ವಿಶ್ವಾಸ್‌ ಅವರೂ ಇಲ್ಲಿ ಜತೆಯಾಗಿದ್ದರು. ಮನೀಷ್‌ ಸಿಸೋಡಿಯಾ, ಆಶೀಷ್‌ ಖೇತಾನ್‌ ಮತ್ತು ಅಶುತೋಷ್‌ ಅವರಂತಹ ವಿಶಿಷ್ಟ ಸಿದ್ಧಾಂತವಾದಿಗಳೂ ಇದರಿಂದ ಆಕರ್ಷಿತರಾಗಿದ್ದರು. ಜನಪರ ಹೋರಾಟದಲ್ಲಿ ತೊಡಗಿರುವ ಮೇಧಾ ಪಾಟ್ಕರ್‌, ಅಖಿಲ್‌ ಗೊಗೊಯ್‌, ಮಯಂಕಾ ಗಾಂಧಿ, ವೃತ್ತಿನಿರತರಾದ ಮೀರಾ ಸನ್ಯಾಲ್‌, ನಿವೃತ್ತ ಹಿರಿಯ ಅಧಿಕಾರಿಗಳಾದ ಅರುಣ್‌ ಭಾಟಿಯಾ, ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರೂ ಈ ಚಳವಳಿಯಿಂದ ಪ್ರಭಾವಿತರಾಗಿದ್ದರು. ಉದಾರವಾದಿ ಬುದ್ಧಿಜೀವಿ ಯೋಗೇಂದ್ರ ಯಾದವ್‌ ಕೂಡ ಇವರ ಜತೆ ಕೈಜೋಡಿಸಿದ್ದರು.

ಭ್ರಷ್ಟಾಚಾರ ವಿರೋಧಿ ಜನಾಂದೋಲನವು ತನ್ನ ಉತ್ತುಂಗದ ದಿನಗಳಲ್ಲಿ ಇದ್ದಾಗ, ಈ ಚಳವಳಿಯ ಧ್ಯೇಯೋದ್ದೇಶ, ಹೋರಾಟದ ಸ್ವರೂಪದ ಬಗ್ಗೆ ಪ್ರಶ್ನಿಸುವ ಭ್ರಮೆಯು ಕೆಲವರಲ್ಲಿ ಮನೆ ಮಾಡಿತ್ತು. ಹೋರಾಟಗಾರರ ತಂಡವು ಯಾವ ಉದ್ದೇಶಕ್ಕೆ ಸಂಘಟಿತಗೊಂಡಿದೆ ಎನ್ನುವುದು ನಮ್ಮ ಮುಖ್ಯ ಪ್ರಶ್ನೆಯಾಗಿತ್ತು. ಆಗ ಅರವಿಂದ ಕೇಜ್ರಿವಾ‌ಲ್‌ ಅವರೇ ಬರೆದಿದ್ದ ಪುಟ್ಟ ಪ್ರಣಾಳಿಕೆಯತ್ತ ನಮ್ಮ ಗಮನ ಸೆಳೆಯಲಾಗಿತ್ತು. ಅದನ್ನು ಓದಿದಾಗ ನಮಗೆ ಅನಿಸಿದ್ದು ಏನೆಂದರೆ, ಅವೆಲ್ಲ ‘ಅರವಿಂದ ಚಿತ್ರ ಕಥಾ’ದಲ್ಲಿ ಬರುವ ಪೊಳ್ಳು ಭರವಸೆಗಳಾಗಿದ್ದವಷ್ಟೆ.

ಯಾವುದೋ ಒಂದು ನಿರ್ದಿಷ್ಟ ಸೈದ್ಧಾಂತಿಕ ಬೆಂಬಲ ಇಲ್ಲದೆ, ಭ್ರಷ್ಟಾಚಾರ ವಿರೋಧಿ ಹೋರಾಟವನ್ನೇ ನೆಚ್ಚಿಕೊಂಡು ಸುಸ್ಥಿರ ಸ್ವರೂಪದ ರಾಜಕೀಯ ಪಕ್ಷವೊಂದನ್ನು ಕಟ್ಟಿ ಬೆಳೆಸಲು ಸಾಧ್ಯವೇ? ಎನ್ನುವುದು ನಮ್ಮ ಸಂದೇಹವಾಗಿತ್ತು.

‘ನಮ್ಮ ರಾಜಕೀಯ ಮುಖಂಡರು ಕಳ್ಳರಾಗಿದ್ದಾರೆ’ ಎಂದು ದೊಡ್ಡ ದನಿಯಲ್ಲಿ ಹೇಳುತ್ತಾ ಹೋರಾಟ ನಡೆಸುವವರೇ ರಾಜಕೀಯ ಸಿದ್ಧಾಂತವೊಂದನ್ನು ಪ್ರತಿಪಾದಿಸಲು ಹೇಗೆ ಸಾಧ್ಯ? ‘ಸಂಸತ್ತು, ಕಳ್ಳರು ಮತ್ತು ಡಕಾಯಿತರ ಅಡಗುತಾಣವಾಗಿದೆ’ ಎಂದೇ ಅವರು ದೂಷಿಸುತ್ತಿದ್ದರು. ಜನ ಲೋಕಪಾಲ ವ್ಯವಸ್ಥೆಯನ್ನು ರಾಜಕೀಯಕ್ಕೆ ಹೊರತಾದ, ನೊಬೆಲ್‌ ಮತ್ತು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರ ನೇತೃತ್ವದಲ್ಲಿ ನಿರ್ವಹಿಸುವುದೂ ಅವರ ಮುಖ್ಯ ಉದ್ದೇಶವಾಗಿತ್ತು.

ವ್ಯವಸ್ಥೆಯನ್ನು ಬದಲಾಯಿಸಲು ತಮಗೆ ಬೇರೆ ದಾರಿಯೇ ಇಲ್ಲ ಎನ್ನುವ ಅಂತಿಮ ನಿರ್ಧಾರಕ್ಕೆ ಬಂದಿದ್ದ ಭ್ರಷ್ಟಾಚಾರ ವಿರೋಧಿ ಹೋರಾಟಗಾರರೆಲ್ಲ ತಾವೂ ರಾಜಕೀಯ ಮುಖಂಡರಾಗಲು ತೀರ್ಮಾನಿಸಿದ್ದರು.

ಯುವಕರೇ ಮುನ್ನಡೆಸುತ್ತಿದ್ದ ಜನಪ್ರಿಯ ಜನಾಂದೋಲನವೊಂದು ರಾಜಕೀಯ ಪಕ್ಷವಾಗಿ ಮಾರ್ಪಾಡುಗೊಂಡಿತ್ತು. ಮೊದಲೇ ನಿರೀಕ್ಷಿಸಿದಂತೆ ರಾಜಕೀಯ ವ್ಯವಸ್ಥೆಗೆ ಹೊಂದಿಕೊಳ್ಳುವ ಬಹುಮುಖ್ಯ ಸವಾಲು ಅವರಿಗೆ ಎದುರಾಗಿತ್ತು. ಅಧಿಕಾರದ ವ್ಯಾಮೋಹದ ಮುಂದೆ ಜನಾಂದೋಲನದ ಜತೆಗಿನ ಬಾಂಧವ್ಯದ ಕೊಂಡಿ ಕಳಚಿಕೊಂಡಿತ್ತು. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಈಗ ಅವರ ಮುಖ್ಯ ಉದ್ದೇಶವಾಗಿರಲಿಲ್ಲ. ಅದರ ಬದಲಿಗೆ, ಸ್ವಚ್ಛ ಆಡಳಿತ ನೀಡಿ ಮಾದರಿಯಾಗಿರುವುದು ಅವರ ಕಾಳಜಿಯಾಗಿತ್ತು.

ಇಂತಹ ಆಶಯವು ಭಾರತದ ಸಂದರ್ಭದಲ್ಲಿ ಯಾವತ್ತೂ ಪೂರ್ಣ ಪ್ರಮಾಣದಲ್ಲಿ ನೆರವೇರಿಲ್ಲ. ಇದಕ್ಕೆ ಆಸ್ಸಾಂನಲ್ಲಿ ಈ ಹಿಂದೆ ನಡೆದಿದ್ದ ವಿದ್ಯಾರ್ಥಿ ಚಳವಳಿಯು ರಾಜಕೀಯ ಪಕ್ಷವಾಗಿ ಹೊರಹೊಮ್ಮಿ ವಿಫಲಗೊಂಡ ನಿದರ್ಶನ ನಮ್ಮ ಕಣ್ಣೆದುರಿಗೆ ಇದೆ. ದೆಹಲಿಯಲ್ಲಿ ಎಎಪಿ ಮೊದಲ ಯತ್ನದಲ್ಲಿಯೇ ಅಭೂತಪೂರ್ವ ಗೆಲುವು ಸಾಧಿಸಿದಂತೆ, ಚಳವಳಿಯ ಹಿನ್ನೆಲೆಯಿಂದ ಬಂದಿದ್ದ ವಿದ್ಯಾರ್ಥಿ ಮುಖಂಡರೇ ಕಟ್ಟಿ ಬೆಳೆಸಿದ್ದ ಆಸ್ಸಾಂ ಗಣ ಪರಿಷತ್ತು ಕೂಡ 1985ರಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು.

ಆಸ್ಸಾಂನಲ್ಲಿ ವಿದೇಶಿಯರ ಅಕ್ರಮ ನುಸುಳುವಿಕೆಯ ವಿರುದ್ಧ ನಡೆದಿದ್ದ ಜನಾಂದೋಲನದ ಮುಂಚೂಣಿಯಲ್ಲಿ ಇದ್ದ ವಿದ್ಯಾರ್ಥಿ ಮುಖಂಡರು ಇಂದು ತಮ್ಮ ಹಳೆಯ ಒಗ್ಗಟ್ಟನ್ನು ಕಾಯ್ದುಕೊಂಡಿಲ್ಲ. ಬಹುತೇಕ ಮುಖಂಡರು ಈಗ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಅವರಲ್ಲಿ ಆಸ್ಸಾಂನ ಮುಖ್ಯಮಂತ್ರಿಯೂ ಆಗಿರುವ ಸರ್ಬಾನಂದ ಸೋನೊವಾಲ್‌ ಮತ್ತು ಅವರ ಸಂಪುಟದ ಪ್ರಮುಖ ಸಚಿವರಾಗಿರುವ ಹಿಮಂತ್‌ ಬಿಸ್ವಾ ಶರ್ಮಾ ಪ್ರಮುಖರಾಗಿದ್ದಾರೆ.

ಆಸ್ಸಾಂ ಚಳವಳಿಯ ರಾಜಕೀಯ ಅವತಾರವಾಗಿರುವ ಆಸ್ಸಾಂ ಗಣ ಪರಿಷತ್‌ ಈಗ ಬಿಜೆಪಿಯ ಮಿತ್ರ ಪಕ್ಷವಾಗಿದೆ. ಈ ಹಿಂದೆ ಈ ಪಕ್ಷವು ಎಡಪಕ್ಷಗಳ ಜತೆ ಸೇರಿ ರಾಜ್ಯದಲ್ಲಿ ಅಧಿಕಾರ ನಡೆಸಿತ್ತು.

ಹೋರಾಟದ ಕಿಚ್ಚು ಮತ್ತು ಉದ್ದೇಶ ತಣ್ಣಗಾದಂತೆ ಯಾವುದೇ ಸಿದ್ಧಾಂತವು ಆ ಅಂತರವನ್ನು ತುಂಬಲಾರದು. ಪ್ರತಿ ವ್ಯಕ್ತಿಯೂ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಾನೆ. ಎಎಪಿ ಕೂಡ ಇದೇ ಬಗೆಯ ಬಿಕ್ಕಟ್ಟು ಎದುರಿಸುತ್ತಿದೆ. ಆದರೆ, ಇಲ್ಲೊಂದು ಸಣ್ಣ ವ್ಯತ್ಯಾಸ ಇದೆ. ಅದರ ಬಹುತೇಕ ಪ್ರಮುಖ ಸ್ಥಾಪಕರು ಕಹಿ ಅನುಭವದಿಂದಾಗಿ ಈಗಾಗಲೇ ಪಕ್ಷದಿಂದ ಹೊರ ನಡೆದಿದ್ದಾರೆ. ಎಎಪಿ ತ್ಯಜಿಸಿದವರಲ್ಲಿ ಪ್ರಮುಖರಾಗಿರುವ ಯೋಗೇಂದ್ರ ಯಾದವ್‌ ಮತ್ತು ಪ್ರಶಾಂತ್‌ ಭೂಷಣ್‌ ಅವರು ಹೊಸ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದಾರೆ.

ಕೆಲವರು ತಮ್ಮ ಹತಾಶೆಯನ್ನು ವಿಭಿನ್ನ ರೀತಿಯಲ್ಲಿ ಹೊರ ಹಾಕಿದ್ದಾರೆ. ‘ಅಧಿಕಾರದ ಹಸಿವಿ’ನಿಂದ ಬಳಲುತ್ತಿರುವ ಕೇಜ್ರಿವಾಲ್ ಅವರನ್ನು ಅಣ್ಣಾ ಅವರು ನಿಯಮಿತವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಮಯಂಕಾ ಗಾಂಧಿ ಅವರು ಇತ್ತೀಚಿಗೆ ಹೊಸ ಗ್ರಂಥವನ್ನು ಪ್ರಕಟಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ತಮ್ಮನ್ನು ಟ್ವೀಟ್‌ಗಳ ಮೂಲಕ ಟೀಕಿಸುತ್ತಿದ್ದ ಸಚಿವರೊಬ್ಬರನ್ನು ಕೇಜ್ರಿವಾಲ್‌ ಅವರು ಸಂಪುಟದಿಂದಲೇ ಕೈಬಿಟ್ಟಿದ್ದಾರೆ.

ಪಕ್ಷದ ಒಳಗಿನ ಬಿಕ್ಕಟ್ಟಿಗೆ ಈಗ ಪಂಜಾಬ್‌ ರಾಜ್ಯ ಘಟಕದಲ್ಲಿನ ವಿದ್ಯಮಾನಗಳೂ ಸಾಕ್ಷಿಯಾಗಿವೆ. ವರ್ಷದ ಹಿಂದೆ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬರಲು ಪಕ್ಷವು ತನ್ನೆಲ್ಲ ಸಾಮರ್ಥ್ಯವನ್ನು ಪಣಕ್ಕೆ ಒಡ್ಡಿತ್ತು. ಈ ಮೂಲಕ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಲು ಹವಣಿಸಿತ್ತು. ಕೊನೆಯ ಹಂತದಲ್ಲಿ ಅದು ತನ್ನ ಈ ಪ್ರಯತ್ನದಲ್ಲಿ ವೈಫಲ್ಯ ಕಂಡಿತ್ತು.

ಜನಪ್ರಿಯ ಚಳವಳಿಯ ಫಲವಾಗಿ ಅಸ್ತಿತ್ವಕ್ಕೆ ಬಂದಿದ್ದ ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ, ಎಎಪಿಯು ಹಲವಾರು ಕಾರಣಗಳಿಗೆ ಭಿನ್ನವಾಗಿ ಕಂಡು ಬರುತ್ತದೆ. ಪಕ್ಷದ ಸರ್ವೋಚ್ಚ ಮುಖಂಡರಾಗಿರುವ ಅರವಿಂದ ಕೇಜ್ರಿವಾಲ್‌ ಅವರು ಪ್ರಶ್ನಾತೀತ ನಾಯಕರಾಗಿದ್ದಾರೆ. 2010 ರಿಂದೀಚೆಗಿನ 8 ವರ್ಷಗಳಲ್ಲಿ ಅವರು ನರೇಂದ್ರ ಮೋದಿಯಂತೆ ‘ಅಧಿಕಾರ ರಾಜಕಾರಣ’ ನೀತಿಯನ್ನು ನಿರ್ದಯವಾಗಿ ಪಾಲಿಸಿಕೊಂಡು ಬರುತ್ತಿರುವುದನ್ನು ಸಾಬೀತುಪಡಿಸಿದ್ದಾರೆ. ಇದರ ಫಲವಾಗಿಯೇ ಪಕ್ಷವು ತನ್ನ ಹಳೆಯ ಸಿದ್ಧಾಂತಕ್ಕೆ, ಯುವ ಜನಾಂಗದ ಮುಗ್ಧತೆಗೆ ಎಳ್ಳು ನೀರು ಬಿಟ್ಟಿದೆ. ‌‌‌‌ವ್ಯಕ್ತಿಯೊಬ್ಬನನ್ನು ಆರಾಧಿಸುವ ಮತ್ತು ಕ್ರಮಾಗತ ಅಧಿಕಾರ ಶ್ರೇಣಿ ಗೌರವಿಸದ ವ್ಯವಸ್ಥೆಯನ್ನು ಪಕ್ಷವು ರೂಢಿಸಿಕೊಂಡಿದೆ.

ನರೇಂದ್ರ ಮೋದಿ ಅವರಿಗೆ ಎದುರಾದಂತೆ, ತಮಗೆ ಎದುರಾಗುವ ಯಾವುದೇ ಸವಾಲು ಅಥವಾ ಸ್ಪರ್ಧೆಯನ್ನು ಕೇಜ್ರಿವಾಲ್‌ ಅವರೂ ತುಂಬ ಗಂಭೀರವಾಗಿ ಪರಿಗಣಿಸುತ್ತಾರೆ. ತಮ್ಮನ್ನು ಎದುರು ಹಾಕಿಕೊಂಡವರು ಸರ್ವನಾಶ ಆಗುತ್ತಾರೆ ಎನ್ನುವ ಧೋರಣೆ ಅವರಲ್ಲಿಯೂ ಮನೆ ಮಾಡಿದೆ. ಇನ್ನೊಬ್ಬ ವ್ಯಕ್ತಿಯ ಪ್ರಾಮಾಣಿಕತೆಯ ಬಗ್ಗೆ ತೀವ್ರ ಕೆಳಮಟ್ಟದಲ್ಲಿ ಟೀಕೆ ಮಾಡುವುದಕ್ಕೂ ಕೇಜ್ರಿವಾಲ್‌ ಹಿಂದೇಟು ಹಾಕುವುದಿಲ್ಲ. ತಮ್ಮ ಬಳಿ ದಾಖಲೆ ಮತ್ತು ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಅವರು ಅದರ ಬಗ್ಗೆ ಚಿಂತಿಸುವುದಿಲ್ಲ. ಇನ್ನೊಬ್ಬರ ವ್ಯಕ್ತಿತ್ವದ ಮೇಲೆ ದಾಳಿ ಮಾಡುವುದರತ್ತಲೇ ಗಮನ ಕೇಂದ್ರೀಕರಿಸಿರುತ್ತಾರೆ.

ತಮಗೆ ಸವಾಲೊಡ್ಡುವವರು ಮತ್ತು ಟೀಕಾಕಾರರನ್ನು ಹೆದರಿಸಲು ಕೇಜ್ರಿವಾಲ್‌ ಕಳಂಕರಹಿತ ವರ್ಚಸ್ಸು ತಮ್ಮ ರಕ್ಷಣೆಗೆ ಇದೆ ಎಂದು ಭಾವಿಸಿದ್ದಾರೆ. ಆದರೆ, ದೇಶದ ಹೊಸ ಪಕ್ಷವೂ ಕೂಡ ಪುಂಡರನ್ನು ಒಳಗೊಂಡಿರುವುದು ವಿರೋಧಾಭಾಸದ ಸಂಗತಿಯಾಗಿದೆ.

ದೆಹಲಿಯಲ್ಲಿ ಮೂರು ವರ್ಷಗಳ ಕಾಲ ಅಧಿಕಾರ ನಡೆಸಿರುವ ಕೇಜ್ರಿವಾಲ್‌ ಅವರು, ಇದುವರೆಗೆ ಭ್ರಷ್ಟಾಚಾರ, ನೈತಿಕ ನೀಚತನದ ಕಾರಣಕ್ಕೆ ತಮ್ಮ ಸಂಪುಟದ ಕೆಲವರನ್ನು ಕೈಬಿಟ್ಟಿದ್ದಾರೆ. ಇದು ಅವರ ಕಳಂಕರಹಿತ ವ್ಯಕ್ತಿತ್ವದ ಹೊಳಪನ್ನು ಮಸುಕುಗೊಳಿಸಿದೆ.

ಹಲವರ ವಿರುದ್ಧ ನಡೆಸಿದ ಟೀಕೆಗಳಿಂದಾಗಿ ಕೇಜ್ರಿವಾಲ್‌ ಅವರು ಈಗ ಕೋರ್ಟ್‌ಗಳಲ್ಲಿ 30ಕ್ಕೂ ಹೆಚ್ಚು ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಹೂಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯೂ ತೀವ್ರಗೊಂಡಿದೆ. ಈ ಎಲ್ಲ ಪ್ರಕರಣಗಳು ಕೆಚ್ಚೆದೆಯ ಬಂಡಾಯಗಾರ ಎನ್ನುವ ಅವರ ವರ್ಚಸ್ಸನ್ನು ಕುಂದಿಸಿವೆ.

ಎಎಪಿಯು ಈಗಲೂ ದೆಹಲಿಯಲ್ಲಿ ಪ್ರಭಾವಶಾಲಿ ರಾಜಕೀಯ ಪಕ್ಷವಾಗಿ ಉಳಿದಿದೆ. ಅದರ ಕಾರ್ಯಕರ್ತರು ಸಾಕಷ್ಟು ಪರಿಶ್ರಮ ಪಟ್ಟು ದೆಹಲಿಯ ಬಡವರಲ್ಲಿ ಪಕ್ಷದ ನೆಲೆಯನ್ನು ಭದ್ರಪಡಿಸಿದ್ದಾರೆ. ಮಧ್ಯಮ ವರ್ಗದವರು ಈ ಪಕ್ಷದ ಕೈಬಿಟ್ಟಿದ್ದರೂ, ದೆಹಲಿಯಲ್ಲಿ ಈಗ ಮತ್ತೆ ಚುನಾವಣೆ ನಡೆದರೂ ಈ ಪಕ್ಷ ಗೆಲ್ಲುವ ಸಾಧ್ಯತೆ ಹೆಚ್ಚಿಗೆಯೇ ಇದೆ.

ಕೇಜ್ರಿವಾಲ್‌ ಮತ್ತು ಅವರ ತಂಡದ ಸದಸ್ಯರು ವ್ಯವಸ್ಥೆ ಬದಲಿಸುವ ಮತ್ತು ದೇಶ ಉಳಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಅದೀಗ ತನ್ನ ಅರ್ಥ ಕಳೆದುಕೊಂಡಿದೆ. ಈಗ ಅವರು ಮತ್ತೆ ತಲೆ ಎತ್ತಿ ನಿಲ್ಲುವರೇ ಎನ್ನುವುದನ್ನು ಕಾದು ನೋಡಬೇಕು. ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ. ಎಎಪಿ ಮತ್ತೆ ತನ್ನ ಹಳೆಯ ವೈಭವದ ದಿನಗಳಿಗೆ ಮರಳಲಿ ಎಂದು ನಾವೆಲ್ಲ ಆಶಿಸೋಣ. ಆದರೆ, ನಿಂದನೆಯ ರಾಜಕೀಯವನ್ನೇ ಪುನರಾವರ್ತನೆ ಮಾಡದಿರಲಿ ಎಂದು ಶುಭ ಹಾರೈಸೋಣ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT