ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸರ್ಕಾರ: ಮೂರನೇ ಹುಟುıಹಬĽದ ಎದುರು

Last Updated 10 ಮೇ 2016, 19:30 IST
ಅಕ್ಷರ ಗಾತ್ರ

ಇವತ್ತಿಗೆ ಸರಿಯಾಗಿ ಮೂರು ವರ್ಷಗಳ ಕೆಳಗೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಾಗ ನಾನು ಪ್ರಜಾವಾಣಿಯ ಇದೇ ಪುಟದಲ್ಲಿ ‘ಹೊಸ ಸರ್ಕಾರ; ಹೊಸ ಕನಸು’ ಎಂಬ ಲೇಖನ ಬರೆದಿದ್ದು ನೆನಪಾಗುತ್ತಿದೆ. ಅವತ್ತು ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ‘ಸ್ಥಿರ ಸರ್ಕಾರ’ ಹಾಗೂ ‘ಶುದ್ಧ ಸರ್ಕಾರ’ದ ಅಗತ್ಯ ಕುರಿತು ಮಾತಾಡಿದ್ದನ್ನು ಆ ಬರಹದಲ್ಲಿ ಉಲ್ಲೇಖಿಸಿದ್ದೆ.

ಮೂರು ವರ್ಷಗಳ ನಂತರ ನೋಡಿದರೆ ಸರ್ಕಾರವೇನೋ ಸ್ಥಿರವಾಗಿ ಇದೆ; ಆದರೆ ಶುದ್ಧ ಸರ್ಕಾರದ ಕನಸು ಹಾಗೇ ಉಳಿದಿದೆ. ಒಂದು ವರ್ಷ ಪೂರೈಸಿರುವ ದೆಹಲಿಯ ಆಮ್ ಆದ್ಮಿ ಪಕ್ಷ ಸ್ಥಿರ ಸರ್ಕಾರದ ಜೊತೆಗೇ ಶುದ್ಧ ಸರ್ಕಾರ ಕೊಡುವ ನಿಟ್ಟಿನಲ್ಲಿ ಇಟ್ಟಿರುವ ಹೆಜ್ಜೆಗಳಿಗೆ ಹೋಲಿಸಿ ನೋಡಿ: ಕಾಂಗ್ರೆಸ್ ಸರ್ಕಾರ ‘ಶುದ್ಧ’ ಎಂದು ಅದರ ಕಟ್ಟಾ ಅಭಿಮಾನಿಗಳೂ ಹೇಳಲಾರರು. ಆದರೆ ಈ ಸರ್ಕಾರದ ಕಲ್ಯಾಣ ಯೋಜನೆಗಳಾದ ಅನ್ನಭಾಗ್ಯ, ವಿದ್ಯಾಸಿರಿ, ಋಣಮುಕ್ತ ಭಾಗ್ಯ, ಮನಸ್ವಿನಿ, ಮೈತ್ರಿ ಜನಮೆಚ್ಚುಗೆ ಗಳಿಸಿವೆ.

ಪಂಚಾಯತ್ ವ್ಯವಸ್ಥೆಯ ಸುಧಾರಣೆಗಳು, ಯು.ಟಿ. ಖಾದರ್, ಆಂಜನೇಯ, ಎಚ್.ಕೆ.ಪಾಟೀಲ ಮುಂತಾದವರ ಇಲಾಖೆಗಳು ಮಾಡುತ್ತಿರುವ ಕೆಲಸಗಳ ಬಗ್ಗೆ ಮೆಚ್ಚುಗೆಯಿದೆ.

ಮುಖ್ಯಮಂತ್ರಿಗಳು ಮಂಡಿಸಿರುವ ಮೂರು ಬಜೆಟ್ಟುಗಳ ಸಮತೋಲನ ಹಾಗೂ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಸಂಪನ್ಮೂಲಗಳನ್ನು ಕಾದಿರಿಸಿರುವ ಕ್ರಮ ಕೂಡ ಮಹತ್ವದ್ದಾಗಿದೆ. ದೇಶಪಾಂಡೆಯವರ ಕಾಲದಲ್ಲಿ ಕಾಲೇಜು ಶಿಕ್ಷಕರ ಆಯ್ಕೆಗೆ ಸಿ.ಇ.ಟಿ. ಪರೀಕ್ಷೆ ಆರಂಭಿಸಿದ್ದು ಅಧ್ಯಾಪಕರ ಆಯ್ಕೆಯ ಹಂತದ ಭ್ರಷ್ಟತೆಯನ್ನು ತೊಡೆಯಲಿದೆ. ಈಚೆಗೆ ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳವನ್ನು ನೇರ ಪಾವತಿ ಮಾಡುವ ನಿರ್ಧಾರ ಕೂಡ ಮುಖ್ಯವಾದದ್ದು. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಅರ್ಧದಷ್ಟು ಭರವಸೆಗಳಾದರೂ ಜಾರಿಯಾದಂತಿವೆ.

ಇಷ್ಟಾದರೂ ಇದು ಯಾಕೆ ‘ಜನಪ್ರಿಯ’ ಸರ್ಕಾರವಾಗಿಲ್ಲ ಎಂಬ ಬಗ್ಗೆ ಈ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಸರ್ಕಾರದ ವಿರುದ್ಧ ನಿತ್ಯ ಹರಿದುಬರುವ ಟೀಕೆಗಳನ್ನು ಎಚ್ಚರದಿಂದ ಅಧ್ಯಯನ ಮಾಡಿ, ಅವುಗಳಲ್ಲಿ ಸರ್ಕಾರವನ್ನು ತಿದ್ದಬಲ್ಲ ನಿಜವಾದ ವಿಮರ್ಶೆಗಳನ್ನು ಹೆಕ್ಕಿಕೊಳ್ಳಬೇಕಾಗುತ್ತದೆ. ಇಂಥ ಸ್ವವಿಮರ್ಶಾ ವ್ಯವಸ್ಥೆಯೇ ಸರ್ಕಾರದಲ್ಲಿದ್ದಂತಿಲ್ಲ.

ವಾರದಲ್ಲಿ ಒಂದೇ ಒಂದು ದಿನ ಸಾರಿಗೆ ಮಂತ್ರಿಗಳು ನಗರದಲ್ಲಿ ಅಡ್ಡಾಡಿ, ಬೆಳಿಗ್ಗೆ ಕೆಲಸಕ್ಕೆ ಹೊರಟ ಬೈಕ್ ಸವಾರರಿಗೆ ದಿನವಿಡೀ ಪೊಲೀಸರು ಕೊಡುತ್ತಿರುವ ಕಿರುಕುಳಗಳನ್ನು ಕಣ್ಣಾರೆ ನೋಡಲಿ: ಜನರು ಯಾಕೆ ಸರ್ಕಾರಕ್ಕೆ ನಿತ್ಯ ಶಾಪ ಹಾಕುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಹಿಂದಿನ ಸರ್ಕಾರಗಳಲ್ಲಿದ್ದ ಅವ್ಯವಸ್ಥೆಯೇ ಮುಂದುವರಿದಿದೆ. ಮಧ್ಯವರ್ತಿಗಳಿಲ್ಲದೆ ಕೆಲಸಗಳು ನಡೆಯುತ್ತಿಲ್ಲ.

ಮಂತ್ರಿಗಳು, ಶಾಸಕರು ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ಎಚ್ಚರದಲ್ಲಿಡುವ ತೋರಿಕೆಯ ಕೆಲಸ ಕೂಡ ನಡೆಯುತ್ತಿಲ್ಲ. ‘ಇದು ನಿಧಾನಗತಿಯ ಸರ್ಕಾರ’ ಎಂಬ ಆಪಾದನೆಯನ್ನು ತೊಡೆಯಲು ಸರ್ಕಾರ ಯಾವ ಪ್ರಯತ್ನವನ್ನೂ ಮಾಡಿದಂತಿಲ್ಲ. ‘ರೈತನಾಯಕರಾದ ಪ್ರೊ. ನಂಜುಂಡಸ್ವಾಮಿ ನನ್ನ ಗುರು’ ಎಂದು ಹೇಳಿದ್ದ ಮುಖ್ಯಮಂತ್ರಿಗಳು ರೈತರ ಬಡ್ಡಿ ಮನ್ನಾ ಬಿಟ್ಟರೆ ಇತರ ಬೇಡಿಕೆಗಳ ಬಗ್ಗೆ ತೋರುತ್ತಿರುವ ನಿರುತ್ಸಾಹ ರೈತರನ್ನು ಸಿಟ್ಟಿಗೆಬ್ಬಿಸಿದೆ.

ಲೋಕಾಯುಕ್ತದ ಗೊಂದಲದ ಬಗ್ಗೆ ರಾಜ್ಯ ಹೈಕೋರ್ಟಿನ ನ್ಯಾಯಮೂರ್ತಿಗಳೇ ಕೇಳಿರುವ ಕಟುವಾದ ಪ್ರಶ್ನೆ: ‘ಗಣಿ ಲೂಟಿ ತಪ್ಪಿಸಲು ಬಳ್ಳಾರಿಯವರೆಗೆ ಕಾಲ್ನಡಿಗೆಯಲ್ಲಿ ಜಾಥಾ ಹೋದವರ ಸರ್ಕಾರವೇನು ಇದು?’   

ಇಂಥ ಸಾರ್ವಜನಿಕ ಟೀಕೆಗಳ ಜೊತೆಗೇ ಸಿದ್ದರಾಮಯ್ಯನವರ ವಿರುದ್ಧ ಕೆಲವು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗಳನ್ನು ಗಮನಿಸಿ: ಇವುಗಳಲ್ಲಿ ಜನಾರ್ದನ ಪೂಜಾರಿಯವರು ಮಾಡುತ್ತಿರುವ ಟೀಕೆಗಳಲ್ಲಿ ಮಾತ್ರ ನಿಜವಾದ ಕಾಳಜಿ ಕಾಣುತ್ತಿರುತ್ತದೆ. ಉಳಿದಂತೆ ಎಸ್.ಎಂ.ಕೃಷ್ಣ, ವೀರಪ್ಪ ಮೊಯಿಲಿ, ವಿಶ್ವನಾಥ್ ಥರದವರು ಆಗಾಗ್ಗೆ ಎತ್ತುವ ಯೋಜಿತ ಅಪಸ್ವರಗಳಲ್ಲಿ ಸ್ವಹಿತರಕ್ಷಣೆಯೇ ಎದ್ದು ಕಾಣುವಂತಿದೆ!

ಇದೀಗ ಎಂಬತ್ತೈದರ ಇಳಿವಯಸ್ಸಿನಲ್ಲಿಯೂ ರಾಜ್ಯಸಭೆಗೆ ಅಭ್ಯರ್ಥಿಯಾಗಲು ಕೃಷ್ಣ ಹಾತೊರೆಯುತ್ತಿರುವ ವರದಿಗಳನ್ನು ನೋಡಿದರೆ, ಹಿರಿಯ ರಾಜಕಾರಣಿಯೊಬ್ಬರು ತಮ್ಮ ಸರ್ಕಾರದ ವಿರುದ್ಧವೇ ಅಪಸ್ವರ ಎತ್ತಿ  ಹುದ್ದೆಯೊಂದನ್ನು ಹಿಡಿಯುವ ಅಡ್ಡಹಾದಿ ಬಳಸಿದ್ದು ಕರುಣಾಜನಕವಾಗಿ ಕಾಣುತ್ತದೆ. ಈ ಹಿರಿಯರೆಲ್ಲರೂ ಕರ್ನಾಟಕವನ್ನು ಮುತ್ತಿರುವ  ಬರಗಾಲದ ಬಗ್ಗೆ ಒಟ್ಟಾಗಿ ಚಿಂತಿಸಿ ಜನರಿಗೆ ನೆರವಾಗಬಹುದಿತ್ತು.

ಬರಗಾಲ ನಿರ್ವಹಣೆಯ ವೈಫಲ್ಯದಿಂದಲೂ ಅಧಿಕಾರ ಕಳೆದುಕೊಂಡ ಕೃಷ್ಣ ಈ ನಿಟ್ಟಿನಲ್ಲಿ ತಮ್ಮ ಅನುಭವವನ್ನು ಧಾರೆ ಎರೆಯಬಹುದಿತ್ತು. ಆದರೆ ಈ ಹಿರಿಯರೆಲ್ಲ ಸುಮ್ಮನೆ ರಾಜಕೀಯ ದೂಳೆಬ್ಬಿಸಿ ತಮಾಷೆ ನೋಡುತ್ತಿರುವಂತೆ ಕಾಣುತ್ತಿದೆ. ಇತ್ತ ಕಾಂಗ್ರೆಸ್ಸಿನಲ್ಲಿರುವ ಕಿರಿಯ ನಾಯಕರು, ಕಾರ್ಯಕರ್ತರು ಜಿಲ್ಲಾ, ತಾಲ್ಲೂಕು ಘಟಕಗಳ ಅಧ್ಯಕ್ಷರು ತಮ್ಮ ಪಕ್ಷದ ಸಾಧನೆಗಳನ್ನು ಹೇಳಿ ಎಂದರೆ, ಎರಡು ಮೂರು ವಾಕ್ಯಕ್ಕಿಂತ ಮುಂದೆ ಸಾಗಲಾರದಷ್ಟು ಜಡರಾಗಿ ಹೋಗಿದ್ದಾರೆ!

ಕಾಂಗ್ರೆಸ್ಸಿನಲ್ಲೇ ಇರುವ ಕೊಂಚ ‘ನ್ಯೂಟ್ರಲ್’ ನಾಯಕರ ಪ್ರಕಾರ ಸಿದ್ದರಾಮಯ್ಯನವರು ‘ಹಿರಿಯರನ್ನು’ ಲೆಕ್ಕಕ್ಕೆ ಇಟ್ಟುಕೊಂಡಿಲ್ಲವೆಂಬಂತೆ ವರ್ತಿಸುವುದು ಭಿನ್ನಮತ ಹೊಗೆಯಾಡಲು ಒಂದು ಕಾರಣ. ದೆಹಲಿಯ ಮೂಲಗಳು ಹೇಳಿದಂತೆ ರಾಜ್ಯ ಕಾಂಗ್ರೆಸ್ ಭಿನ್ನಮತಕ್ಕೆ ಹೈಕಮಾಂಡಿನಿಂದ ಯಾವುದೇ ಬೆಂಬಲವಿಲ್ಲ. ಹೀಗಿರುವಾಗ, ಮುಖ್ಯಮಂತ್ರಿಗಳು ಅತೃಪ್ತರನ್ನು ಮಾತಾಡಿಸಿ, ಅಷ್ಟಿಷ್ಟು ಸಲಹೆ ತೆಗೆದುಕೊಂಡಂತೆ ಆಡಿದ್ದರೂ ಸಾಕಾಗಿತ್ತು, ಸಮಸ್ಯೆ ಇರುತ್ತಿರಲಿಲ್ಲ ಎನ್ನುವವರಿದ್ದಾರೆ.

ಆದರೆ ಸಿದ್ದರಾಮಯ್ಯ ಇಂಥ ದೇಶಾವರಿ ಶೈಲಿಯವರಲ್ಲ. ಇನ್ನು ಸಿದ್ದರಾಮಯ್ಯನವರ ಮೇಲೆ ಆಪಾದನೆಗಳು ಬಂದರೆ, ಕಾಂಗ್ರೆಸ್ ಪಕ್ಷದವರೇ ಆ ಬಗ್ಗೆ ಆನಂದ ಪಡುತ್ತಿರುತ್ತಾರೆ; ಉಗ್ರಪ್ಪ, ಪರಮೇಶ್ವರ್, ಆಂಜನೇಯ, ಮಹದೇವಪ್ಪ ಥರದ ಕೆಲವೇ ಕೆಲವು ನಾಯಕರು ಮುಖ್ಯಮಂತ್ರಿಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿರುತ್ತಾರೆ.

‘ನನ್ನ ಕೆಲಸ ನಾನು ಮಾಡುತ್ತೇನೆ; ಹಿರಿಯರನ್ನೆಲ್ಲ ಯಾಕೆ ಹೊಸೆಯುತ್ತಾ ಕೂರಬೇಕು?’ ಎಂಬ ಧೋರಣೆಯಿಂದ ಈ ಕಾಲದ ರಾಜಕೀಯ ಸಾಗಲಾರದು. ದಲಿತ ಮುಖ್ಯಮಂತ್ರಿಯ ಪ್ರಶ್ನೆ ಬಂದಾಗ ಕೂಡ ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯನವರು ‘ಹೌದು, ಆ ಕಾಲ ಬಂದಿದೆ. ಅದಕ್ಕಾಗಿ ನಾವೆಲ್ಲ ಸಿದ್ಧರಾಗೋಣ’ ಎಂಬ ತಾತ್ವಿಕ ನಿಲುವನ್ನಾದರೂ ತಳೆಯಬಹುದಿತ್ತು.

ನಾಯಕನೊಬ್ಬ ತನ್ನ ಸುತ್ತಣ ಭಟ್ಟಂಗಿಗಳನ್ನು ಸಂದೇಹದಿಂದ ನೋಡಬೇಕು ಎಂಬುದನ್ನು ಇಂಡಿಯಾದ ರಾಜಕೀಯ ಇತಿಹಾಸ ಮತ್ತೆ ಮತ್ತೆ ಹೇಳಿಕೊಡುತ್ತಿರುತ್ತದೆ. ಲಂಕೇಶರ ‘ಗುಣಮುಖ’ದ ನಾಟಕದ ನಾದಿರ್ ಷಾ ಶತ್ರುಗಳಿಗಿಂತ ಭಟ್ಟಂಗಿಗಳನ್ನು  ಹೆಚ್ಚು ಅನುಮಾನದಿಂದ ನೋಡುತ್ತಿರುತ್ತಾನೆ. ಮೊಘಲ್ ರಾಜ ನಜೀರುದ್ದೀನ್ ತನ್ನ ಸ್ವಾರ್ಥಕ್ಕಾಗಿ ನಾದಿರ್‌ನನ್ನು ಹಾಡಿಹೊಗಳತೊಡಗುತ್ತಾನೆ.

ಈ ಹೊಗಳಿಕೆಯ ಹಿಂದಿರುವ ಸ್ವಹಿತಾಸಕ್ತಿ ನಾದಿರ್‌ಗೆ ತಕ್ಷಣ ಹೊಳೆಯುತ್ತದೆ; ಕೆರಳಿದ ನಾದಿರ್ ನಜೀರ್‌ನನ್ನು  ಅಲ್ಲಿಂದ ಓಡಿಸುತ್ತಾನೆ. ನಾಯಕನೊಬ್ಬ ಭಟ್ಟಂಗಿಗಳನ್ನು ತೊಲಗಿಸುವುದೇ ವಾಸ್ತವಸತ್ಯವನ್ನು ಅರಿಯುವ ಮೊದಲ ಹೆಜ್ಜೆ ಎಂಬುದನ್ನು ಈ ದೃಶ್ಯ ಸೂಚಿಸುತ್ತದೆ. ಜನಸಾಮಾನ್ಯರ ಸಹಜ ಮೆಚ್ಚುಗೆಗೂ, ಲಾಭಕ್ಕಾಗಿ ತಲೆದೂಗುವ ಠಕ್ಕರಿಗೂ ಇರುವ ವ್ಯತ್ಯಾಸ ಎಲ್ಲ ನಾಯಕರಿಗೂ ಗೊತ್ತಿರಬೇಕು.

ಪತ್ರಕರ್ತರೊಬ್ಬರು ಹೇಳುವಂತೆ, ಸಿದ್ದರಾಮಯ್ಯನವರ ಅನೇಕ ಕಷ್ಟಗಳಿಗೆ ಅವರ ಸುತ್ತ ಇರುವ ಭಟ್ಟಂಗಿಗಳೂ ಕಾರಣ. ಯಾವುದೇ ಉತ್ತಮ ನಾಯಕನಿಗೆ ವಸ್ತುನಿಷ್ಠ ವಿಮರ್ಶಕರ ಪಡೆಯೇ ಇರಬೇಕು. ಆಗಾಗ್ಗೆ ಇಂದಿರಾ ಗಾಂಧಿಯವರನ್ನು ಸಮರ್ಥಿಸಿಕೊಳ್ಳುತ್ತಿದ್ದ ಖ್ಯಾತ ಲೇಖಕ ಖುಷವಂತ ಸಿಂಗ್ ಇಂದಿರಾ ಗಾಂಧಿಯವರಿಗೆ ಅಪ್ರಿಯವಾದ ಸತ್ಯಗಳನ್ನು ಖಾಸಗಿಯಾಗಿ ಹೇಳುತ್ತಿದ್ದರಂತೆ.

ಕೆಲವು ಕಮ್ಯುನಿಸ್ಟ್ ನಾಯಕರು ಕೂಡ ಕಟುಸತ್ಯಗಳನ್ನು ಇಂದಿರಾ ಗಾಂಧಿಯವರಿಗೆ ಹೇಳುತ್ತಿದ್ದರಂತೆ.  ಆದರೆ ‘ಇಂದಿರಾ ಈಸ್ ಇಂಡಿಯಾ’ ಎನ್ನತೊಡಗಿದ ಬರೂವಾ ಥರದವರ ಪರಾಕುಗಳಿಗೆ ಒಲಿದ ಇಂದಿರಾ ಗಾಂಧಿಯರಿಗೆ ವಸ್ತುನಿಷ್ಠ ವಿಮರ್ಶೆಯ ಸತ್ಯ ಹಿಡಿಸದೇ ಹೋಯಿತು; ಅವರ ಪತನ ಶುರುವಾಯಿತು. ದೇವರಾಜ ಅರಸು ಮೊದಮೊದಲು ಜವಾಬ್ದಾರಿಯುತ ಪತ್ರಕರ್ತರಿಂದ ವಾಸ್ತವಚಿತ್ರ ಪಡೆಯುತ್ತಿದ್ದರು; ಆನಂತರ ‘ಬುದ್ಯೋರು’ ಎಂದು ಸಲಾಮು ಹೊಡೆಯುವರೇ ಅವರಿಗೆ ಹಿತವಾಗತೊಡಗಿದರು.

ಮೊನ್ನೆ ತಾನೇ ಕೆಲವು ಪತ್ರಕರ್ತರು ಹಾಗೂ ಸ್ವಜಾತಿಯ ಸ್ವಾಮೀಜಿಗಳ ಶ್ಲಾಘನೆಗಳ ಮಂಪರಿನಲ್ಲಿ ಮುಳುಗಿ ತಾವು ‘ಜನಪ್ರಿಯ’ ಎಂದು ಭ್ರಮಿಸಿದ್ದ ಯಡಿಯೂರಪ್ಪನವರಿಗೆ ತಮ್ಮ ಬಗೆಗೆ ಜನ ನಿಜಕ್ಕೂ ಏನೆಂದುಕೊಂಡಿದ್ದಾರೆ ಎಂಬುದು ಗೊತ್ತಾದದ್ದು ಚುನಾವಣೆಯ ನಂತರವೇ. ಸಿದ್ದರಾಮಯ್ಯನವರೂ ಅದೇ ಹಾದಿಯಲ್ಲಿದ್ದರೆ ಅದರಿಂದ ಹಿಂದೆ ಸರಿಯಲು ಇದು ಸಕಾಲ. ಆದರೆ ‘ಇತಿಹಾಸದಿಂದ ನಾವು ಕಲಿಯುವ ಪಾಠ ಏನೆಂದರೆ, ನಾವು ಇತಿಹಾಸದಿಂದ ಏನನ್ನೂ ಕಲಿಯುವುದಿಲ್ಲ ಎಂಬುದು!’ ಎಂದ ಲೇಖಕರೊಬ್ಬರ ಮಾತು ನೆನಪಾಗುತ್ತಿದೆ! 

ಹಾಗೆಯೇ, ಕಾಲಕಾಲಕ್ಕೆ ಎದುರಾಗುವ ಬಿಕ್ಕಟ್ಟುಗಳನ್ನು ಎದುರಿಸಿರುವ ಸರ್ಕಾರ ಅವುಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಲಿಲ್ಲ ಎಂಬ ಆಪಾದನೆಗೂ ಗುರಿಯಾಗಿದೆ.ತೀರ್ಥಹಳ್ಳಿಯ ಪ್ರಾಯೋಜಿತ ಕೋಮುಗಲಭೆ, ಡಿ.ಕೆ.ರವಿ ಪ್ರಕರಣಗಳನ್ನು ಪೊಲೀಸರು ದಕ್ಷವಾಗಿ ಭೇದಿಸಿದರು. ಆದರೆ ಹೆಚ್ಚು ಹಾನಿಯಾಗುವ ತನಕ ಸರ್ಕಾರ ಎಚ್ಚರಗೊಂಡಿರಲಿಲ್ಲ. ಈ ನಡುವೆ, ಸಚಿವರಾದ ಕಿಮ್ಮನೆ ರತ್ನಾಕರ್ ಹಾಗೂ ಎಚ್.ಕೆ. ಪಾಟೀಲ್ ಈಚೆಗೆ ಎರಡು ಬಿಕ್ಕಟ್ಟುಗಳನ್ನು ನಿಭಾಯಿಸಿದ ರೀತಿಯಲ್ಲಿರುವ ಪ್ರಾಮಾಣಿಕ ಪ್ರಯತ್ನ ಇತರ ಸಚಿವರಿಗೂ ಮಾದರಿಯಾಗಬೇಕು.

ಕಿಮ್ಮನೆಯವರಿಗೆ ಪಿಯುಸಿ ಕೆಮಿಸ್ಟ್ರಿ ಪತ್ರಿಕೆ ಎರಡು ಸಲ ‘ಮಿಸ್ಟರಿ’ಯಾದದ್ದು ನಿಜ. ಆದರೆ 15 ವರ್ಷಗಳಿಂದ ಮಲೆತಿದ್ದ ಕೊಳಕು ವ್ಯವಸ್ಥೆಯೊಂದನ್ನು ತೊಳೆಯಲು ಅವರು ದಿಟ್ಟವಾಗಿ ಹೊರಟಿದ್ದಾರೆ ಎಂಬುದನ್ನು ಮರೆಯದಿರೋಣ. ಈ ತನಿಖೆ ಗುರಿ ಮುಟ್ಟಿದರೆ, ಮುಂದೆ ಮಕ್ಕಳು ನೆಮ್ಮದಿ ಯಿಂದ ಪರೀಕ್ಷೆ ಬರೆಯುವ ವಾತಾವರಣ ಸೃಷ್ಟಿಯಾಗಬಲ್ಲದು.  ಗ್ರಾಮೀಣ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಟೆಂಡರ್ ನೀಡಿಕೆಯಲ್ಲಿ ಅಕ್ರಮ ಆಗಿದೆ ಎಂಬ ಆರೋಪ ಕೇಳಿಬಂದ  ಒಂದೇ ದಿನದಲ್ಲಿ  ಎಚ್.ಕೆ.ಪಾಟೀಲರು ಸಿ.ಐ.ಡಿ. ತನಿಖೆಗೆ ಆದೇಶ ನೀಡಿದ್ದೂ ಗಮನಾರ್ಹ. ಇಂಥ ನಡೆಗಳು ಮಾತ್ರ ಸರ್ಕಾರದ ಮಾನ ಉಳಿಸಬಲ್ಲವು.

ಇನ್ನೂ ಈ ಸರ್ಕಾರ ಪ್ರಣಾಳಿಕೆಯಲ್ಲಿ ಈಡೇರಿಸಬೇಕಾದ ಭರವಸೆಗಳು ಬಹಳ ಇವೆ. ಎಲ್ಲ ವರ್ಗಗಳ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುವ ಕೆಲಸ ತಕ್ಷಣ ಆರಂಭವಾಗಬೇಕು. ಮಹಿಳೆಯರನ್ನೇ ಗಮನದಲ್ಲಿಟ್ಟುಕೊಂಡು ಹತ್ತಾರು ಯೋಜನೆಗಳನ್ನು ರೂಪಿಸಬೇಕು. ಪ್ರತಿ ಸಲ ಬರಗಾಲ ಬಂದಾಗ ತೇಪೆ ಹಚ್ಚುವ ಕೆಲಸ ಕೈಬಿಟ್ಟು, ನೀರಿನ ಸಂರಕ್ಷಣೆಯಿಂದ ಹಿಡಿದು ಎಲ್ಲ ಬಗೆಯ ಸಮಸ್ಯೆಗಳ ಬಗ್ಗೆ ಶಾಶ್ವತ ಪರಿಹಾರಗಳನ್ನು ಸೂಚಿಸುವ ತಜ್ಞರ ಸಲಹೆಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರಬೇಕು.

ರಾಮಕೃಷ್ಣ ಹೆಗಡೆ ಸರ್ಕಾರದ ಥಿಂಕ್ ಟ್ಯಾಂಕ್ ಒಂದೆರಡು ವರ್ಷವಾದರೂ ರಾಜ್ಯಕ್ಕೆ ಉಪಯುಕ್ತವಾಗಿದ್ದನ್ನು ಈ ಸರ್ಕಾರ ಗಮನಿಸಬೇಕು. ಸರ್ಕಾರ ಸಂಪೂರ್ಣ ಹೊಸ ರೀತಿಯಲ್ಲಿ ಸಜ್ಜಾಗಲು ಇನ್ನು ಒಂದೇ ಒಂದು ವರ್ಷ ಸಮಯವಿದೆ.

ಅದೆಲ್ಲಕ್ಕಿಂತ ಮುಖ್ಯವಾಗಿ ‘ಕಾಂಗ್ರೆಸ್ ಪೊಲಿಟಿಕಲ್ ಲೀಗ್’ ಪಂದ್ಯಗಳಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕರು ತಮ್ಮ ಸ್ವಾರ್ಥಮಯ ಅತೃಪ್ತಿಗಳನ್ನು ತಮ್ಮತಮ್ಮಲ್ಲೇ ಬಗೆಹರಿಸಿಕೊಳ್ಳದೆ, ದಿನನಿತ್ಯ ಮಾಧ್ಯಮರಂಜನೆಯ ವಸ್ತುಗಳಾದರೆ ಈ ಸರ್ಕಾರಕ್ಕೆ ಭವಿಷ್ಯವಿಲ್ಲ ಎಂಬ ಗೋಡೆಯ ಮೇಲಿನ ಬರಹ ನಿಚ್ಚಳವಾಗಿದೆ. ಆದರೆ ಅದನ್ನು ಓದಲು ಕಾಂಗ್ರೆಸ್ ನಾಯಕರು ಸಿದ್ಧರಿದ್ದಾರೆಯೇ?              
         
ಕೊನೆ ಟಿಪ್ಪಣಿ:   ಕಪಿಲ್ ದೇವ್ ಕಂಡ ಸತ್ಯ

ಕಪಿಲ್ ದೇವ್ ಇಂಡಿಯನ್ ಕ್ರಿಕೆಟ್ ಟೀಮ್ ನಾಯಕರಾಗಿ ಕೆಲವು ವರ್ಷಗಳಾಗಿದ್ದವು. ಪಂದ್ಯವೊಂದರ ಕೊನೆಗೆ ಟೆಲಿವಿಷನ್ ಆ್ಯಂಕರ್ ಅವರನ್ನು ಕೇಳಿದರು: ‘ನಿಮಗಿಂತ ಮೊದಲು ನಾಯಕರಾಗಿದ್ದ ಗಾವಸ್ಕರ್ ನಗುನಗುತ್ತಾ ಮಾತಾಡುತ್ತಿದ್ದರು; ನೀವು ಹಾಗಿಲ್ಲವಲ್ಲ?’ ಅದಕ್ಕೆ ಕಪಿಲ್ ಪ್ರಾಮಾಣಿಕವಾಗಿ ಹೇಳಿದರು: ‘ನೀವು ಯಾವಾಗಲೂ ಮ್ಯಾಚುಗಳನ್ನು ಗೆಲ್ಲುತ್ತಿದ್ದರೆ, ಹಾಗೆ ನಗುತ್ತಾ ಇರಬಹುದು.

ಸೋಲು ಹೆಚ್ಚಾದಾಗ ಸುಮ್ಮನೆ ನಗುವುದು ಅಸಹಜವಾಗಿರಬಲ್ಲದು’. ಈಚೆಗೆ ಸಿದ್ದರಾಮಯ್ಯನವರು ಸಾರ್ವಜನಿಕವಾಗಿ ರೇಗುವ ವರದಿಗಳು ಹೆಚ್ಚು ಬರುತ್ತಿರುವುದನ್ನು ಕಂಡಾಗ ಕಪಿಲ್ ಮಾತಿನ ಸತ್ಯ ಹೊಳೆಯತೊಡಗಿತು. ಜೊತೆಗೆ, ಟೆಲಿವಿಷನ್ನಿನಲ್ಲಿ ಒಮ್ಮೆ ಮಿಂಚಿ ಮರೆಯಾದ ಮತ್ತೊಂದು ಚಿತ್ರವೂ ಕಣ್ಣೆದುರು ಬಂತು: ಕುರ್ಚಿ ಕಳೆದು ಕೊಂಡ ನಂತರ ಡ್ರೈವರ್ ಕಪಾಳಕ್ಕೆ ಬೀಸಿದ ಮತ್ತೊಬ್ಬ ಮುಖ್ಯಮಂತ್ರಿಯ ಕೈ; ಸಿಟ್ಟಿನಿಂದ ಅದುರುತ್ತಿದ್ದ ಮೈ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT