ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ಸಿಗೆ ಈಗ ರಸ್ತೆಯ ಕೊನೆಯೇ?...

Last Updated 4 ಜೂನ್ 2016, 19:30 IST
ಅಕ್ಷರ ಗಾತ್ರ

ಕಾಂಗ್ರೆಸ್‌ ಪಕ್ಷಕ್ಕೆ ಇದು ರಸ್ತೆಯ ಕೊನೆಯೇ? ಕೇವಲ ಎರಡು ವರ್ಷಗಳ ಹಿಂದೆ ದೇಶವನ್ನೇ ಆಳಿದ ಒಂದು ಪಕ್ಷ ನಿರ್ನಾಮ ಆಗುವ ಹಾದಿಯಲ್ಲಿ ಇದೆಯೇ? ಈ ಪ್ರಶ್ನೆ ದೇಶದ ಉದ್ದಗಲಕ್ಕೂ ಇರುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಎಷ್ಟು ಕಾಡುತ್ತಿದೆಯೋ ಒಂದು ‘ಕೇಂದ್ರ’ ಪಕ್ಷವನ್ನು ಬಯಸುವ ಜನರನ್ನೂ ಅಷ್ಟೇ ಕಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಯಾರೂ ಯಾವ ಸವಾಲೂ ಇಲ್ಲದೆ ಒಂದು ಪಕ್ಷ ಅಧಿಕಾರದಲ್ಲಿ ಇರಬೇಕು ಎಂದು ಬಯಸುವುದಿಲ್ಲ.

ಅದಕ್ಕೆ ಪ್ರತಿಸ್ಪರ್ಧೆ ಒಡ್ಡುವ, ಲಗಾಮು ಹಾಕುವ ಒಂದು ವಿರೋಧ ಪಕ್ಷವೂ ಇರಬೇಕು ಎಂದು ಬಯಸುತ್ತಾರೆ. ಹಾಗಿದ್ದರೆ ಮಾತ್ರ ಪ್ರಜಾಪ್ರಭುತ್ವ ಜೀವಂತವಾಗಿ ಇರುತ್ತದೆ ಮತ್ತು ಆಡಳಿತ ಮಾಡುವ ಪಕ್ಷ ನಿರಂಕುಶವಾಗುವ ಧೈರ್ಯ ಮಾಡುವುದಿಲ್ಲ. ಈಗ ದೇಶದಲ್ಲಿನ ಸ್ಥಿತಿ ಹಾಗೆ ಕಾಣುವುದಿಲ್ಲ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಭಾರಿ ಬಹುಮತ ಗಳಿಸಿ ಅಧಿಕಾರಕ್ಕೆ ಬಂತೇನೋ ನಿಜ.

ಅದಕ್ಕಿಂತ ಮುಂಚೆಯೇ ಕಾಂಗ್ರೆಸ್ಸು ಅವನತಿಯ ಹಾದಿಯಲ್ಲಿ ಇತ್ತು. ಹರಿಯಾಣ, ರಾಜಸ್ತಾನ, ಜಾರ್ಖಂಡ್, ಛತ್ತೀಸಗಡ, ಮಧ್ಯಪ್ರದೇಶ, ದೆಹಲಿ, ಜಮ್ಮು–ಕಾಶ್ಮೀರ, ಆಂಧ್ರಪ್ರದೇಶ, ತೆಲಂಗಾಣ ಹೀಗೆ ಒಂದೊಂದೇ ರಾಜ್ಯವನ್ನು ಕಳೆದುಕೊಳ್ಳುತ್ತ ಹೋಯಿತು. ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರ, ದೆಹಲಿ ಮತ್ತು ಇದೀಗ ಮೊನ್ನೆ ನಡೆದ ಚುನಾವಣೆಯಲ್ಲಿ ಅಸ್ಸಾಂ ಹಾಗೂ ಕೇರಳದಲ್ಲಿಯೂ ಅಧಿಕಾರ ಕಳೆದುಕೊಂಡಿತು. ಇಡೀ ದೇಶದ ಜನಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷವು ಶೇಕಡಾ 6ರಷ್ಟು ಜನರು ಇರುವ ಪ್ರದೇಶದಲ್ಲಿ ಮಾತ್ರ ಈಗ ಆಡಳಿತ ಮಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಕಾಂಗ್ರೆಸ್‌ ಮುಕ್ತ ಮಾಡುವುದಾಗಿ ಹೇಳುತ್ತಿದ್ದಾರೆ. ಅವರ ಮಾತನ್ನೇ ರಾಜ್ಯಗಳಲ್ಲಿನ ಅವರ ಪಕ್ಷದ ನಾಯಕರೂ ಪುನರುಚ್ಚರಿಸುತ್ತಿದ್ದಾರೆ. ದೇಶದ ಒಬ್ಬ ಪ್ರಧಾನಿ ವಿರೋಧ ಪಕ್ಷವನ್ನು ದೇಶದಿಂದಲೇ ಓಡಿಸುತ್ತೇನೆ ಎಂದು ಹೇಳಬಹುದೇ ಎಂಬುದು ಒಂದು ಪ್ರಶ್ನೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ಸಲ್ಲದ ಮಾತು. ಆದರೆ, ಆಡಳಿತ ಪಕ್ಷದ ಆ ಧಾರ್ಷ್ಟ್ಯಕ್ಕೆ ಸ್ವತಃ ಕಾಂಗ್ರೆಸ್‌ ಪಕ್ಷವೂ ಕಾರಣವಾಗಿರಬಹುದು. ಅದು ಈಗ ನಿರ್ವಿಣ್ಣ ಸ್ಥಿತಿಯಲ್ಲಿ ಇದೆ. ಅದರ ಪುನರುಜ್ಜೀವನ ಕಷ್ಟ ಎಂಬ ಮಾತು ಆ ಪಕ್ಷದ ಒಳಗಿನಿಂದಲೇ ಕೇಳಿ ಬರುತ್ತಿದೆ.

ಕಾಂಗ್ರೆಸ್‌ ಪಕ್ಷದ ಸಮಸ್ಯೆ ಏನು ಎಂದರೆ ಅದು ಬಹಳ ಹಳೆಯ ಪಕ್ಷ. ಅದು ಯಾವಾಗಲೂ ಬಲಿಷ್ಠ ನಾಯಕನ ಅಥವಾ ನಾಯಕಿಯ ಅಧೀನದಲ್ಲಿ ಇದ್ದ ಪಕ್ಷ. ಹೈಕಮಾಂಡ್‌ ಸಂಸ್ಕೃತಿಯನ್ನು ಉದ್ದೇಶಪೂರ್ವಕವಾಗಿ ಪಾಲಿಸಿಕೊಂಡು ಮತ್ತು ಪೋಷಿಸಿಕೊಂಡು ಇಡೀ ದೇಶಕ್ಕೆ ಪರಿಚಯಿಸಿದ ಪಕ್ಷ. ಅದೇ ಕಾರಣಕ್ಕಾಗಿ ಒಂದಿಷ್ಟು ಭಿನ್ನಮತವನ್ನೂ ಸಹಿಸಿಕೊಳ್ಳದ ಪಕ್ಷ.

ಜವಾಹರಲಾಲ್‌ ನೆಹರೂ ಅವರು ಪ್ರಧಾನಿಯಾಗಿದ್ದಾಗ, ‘ಅವರ ನಂತರ ಯಾರು’ ಎಂಬ ಪ್ರಶ್ನೆ ಇಡೀ ದೇಶವನ್ನು ಕಾಡಿತ್ತು. ನೆಹರೂ ಕಾಲವಾದ ನಂತರ ಮತ್ತೆ, ‘ಇಂದಿರಾ ನಂತರ ಯಾರು’ ಎಂಬ ಪ್ರಶ್ನೆ ಎದ್ದು ನಿಂತಿತ್ತು. ಈಗ, ‘ಸೋನಿಯಾ ನಂತರ ಯಾರು’ ಎಂಬ ಪ್ರಶ್ನೆ. ಸೋನಿಯಾ ಅವರ ಉತ್ತರಾಧಿಕಾರಿಯಾಗಿ ರಾಹುಲ್‌ ಅಧಿಕಾರ ವಹಿಸಿಕೊಳ್ಳುತ್ತಾರೆಯೇ? ಅವರಿಗೆ ಪಕ್ಷದ ಅಧ್ಯಕ್ಷರಾಗುವ ಮನಸ್ಸು ಮತ್ತು ಸಾಮರ್ಥ್ಯ ಇವೆಯೇ? ಉತ್ತರ ಸೋನಿಯಾ ಅವರಿಗೂ ಗೊತ್ತಿರುವಂತೆ ಕಾಣುವುದಿಲ್ಲ. ಏಕೆಂದರೆ ಅವರು ತಮ್ಮ ಮನಸ್ಸಿನಲ್ಲಿ ಏನಿದೆ ಎಂದು ಇದುವರೆಗೆ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಅವರ ಮಗನ ಮನಸ್ಸಿನಲ್ಲಿ ಏನಿದೆ ಎಂದೂ ಯಾರಿಗೂ ತಿಳಿದಿಲ್ಲ.

ಒಂದು ಮಾತು ನಿಜ: ಕಾಂಗ್ರೆಸ್‌ ಪಕ್ಷ ಈಗ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಷ್ಟು ವರ್ಷಗಳದು ಒಂದು ಮಾತು, ಇನ್ನು ಮುಂದಿನದು ಬೇರೆ ಮಾತು. ಈ ವಾಸ್ತವವನ್ನು ಅದು ಅರ್ಥ ಮಾಡಿಕೊಳ್ಳಬೇಕು. ಒಂದು ಚುನಾವಣೆಯಲ್ಲಿ ಸೋತ ದಿನ ಆತ್ಮಾವಲೋಕನದ ಮಾತು ಆಡಿ, ಯಾರೋ ಒಬ್ಬಿಬ್ಬರು ಭಾರಿ ಧೈರ್ಯದಿಂದ ಟ್ಟೀಟ್ ಮಾಡಿ ಸುಮ್ಮನಾಗಿಬಿಟ್ಟರೆ ಪಕ್ಷ ಪುನರುಜ್ಜೀವನ ಆಗುವುದಿಲ್ಲ.

ಆತ್ಮಾವಲೋಕನ ಎಂಬುದು ಒಂದು ಕಠಿಣ ಕಸರತ್ತು. ಅದು ನಮ್ಮ ಒಳಗೆ ನೋಡಿಕೊಳ್ಳಲು ಹಚ್ಚುತ್ತದೆ ಮತ್ತು ನಮ್ಮ ದೌರ್ಬಲ್ಯಗಳನ್ನು ಪಟ್ಟಿ ಮಾಡಲು ಒತ್ತಾಯಿಸುತ್ತದೆ.

ಅದಕ್ಕೆ ಧೈರ್ಯ ಬೇಕಾಗುತ್ತದೆ. ಆ ಧೈರ್ಯವನ್ನು ಸ್ವತಃ ಸೋನಿಯಾ ಗಾಂಧಿಯವರೇ ಪ್ರದರ್ಶಿಸಬೇಕಾಗುತ್ತದೆ. ಏಕೆಂದರೆ ಪಕ್ಷದ ಅಧ್ಯಕ್ಷರಾಗಿ ಅವರಿಗೆ ಆ ನೈತಿಕ ಹೊಣೆಗಾರಿಕೆ ಇದೆ. ಕಾಂಗ್ರೆಸ್ ಕಾರ್ಯಕಾರಿಣಿ ಎಂಬುದು ಕೇವಲ ಹೌದಪ್ಪಗಳ ಸಂತೆಯಾಗಿರುವುದರಿಂದ ಮತ್ತು ಅದು ಪಕ್ಷದ ಅಧ್ಯಕ್ಷೆಯಲ್ಲಿ ಮತ್ತೆ ಮತ್ತೆ ತನ್ನ ನಿಷ್ಠೆಯನ್ನು ತೋರಿಸಲು ಪೈಪೋಟಿ ನಡೆಸುವ ಒಂದು ವೇದಿಕೆ ಆಗಿರುವುದರಿಂದ ಅಲ್ಲಿ ಏನಾದರೂ ಧೈರ್ಯದ ಮಾತು ಹೊರಗೆ ಬರುತ್ತದೆ ಎಂದು ಭಾವಿಸುವುದು ಕಷ್ಟ.

ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ (ಎಐಸಿಸಿ) ಸಭೆ ನಡೆಯದೇ ಎರಡು ವರ್ಷಗಳೇ ಗತಿಸಿ ಹೋಗಿವೆ. ಈ ಎರಡು ವರ್ಷಗಳಲ್ಲಿಯೇ ಕಾಂಗ್ರೆಸ್‌ ಪಕ್ಷ ವಿನಾಶದ ಅಂಚಿಗೆ ಬಂದು ತಲುಪಿದೆ. 2014ರ ಚುನಾವಣೆ ನಂತರ ಪಕ್ಷದ ಹಿರಿಯ ಧುರೀಣ ಎ.ಕೆ.ಆಂಟನಿ ನೇತೃತ್ವದ ಸಮಿತಿ ಒಂದು ವರದಿ ಸಲ್ಲಿಸಿತ್ತು. ಅದರ ಒಂದೇ ಪ್ರತಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಳಿ ಇರುವಂತಿದೆ.

ಎರಡು ವರ್ಷಗಳು ಗತಿಸಿದರೂ ಅದರಲ್ಲಿ ಇರುವ ಅಂಶಗಳು ಏನು ಎಂದು ಯಾರಿಗೂ ಗೊತ್ತಿಲ್ಲ. ಆಂಟನಿಯವರೂ ಬಾಯಿ ಬಿಟ್ಟಿಲ್ಲ. ನಾವೇ ಸ್ವತಃ ಆತ್ಮಾವಲೋಕನ ಮಾಡಿಕೊಳ್ಳುವುದು ಬಿಡಿ. ಯಾರಾದರೂ ನಮ್ಮ ಮುಖಕ್ಕೆ ಕನ್ನಡಿ ಹಿಡಿದರೆ ಅದರಲ್ಲಿಯೂ ನಾವು ಕಣ್ಣು ತೆರೆದು ನೋಡಲು ಸಿದ್ಧರಿಲ್ಲದೇ ಇದ್ದರೆ ಅವರನ್ನು ‘ದೇವರೂ’ ಕಾಪಾಡಲಾರ.

ಸ್ವಾತಂತ್ರ್ಯ ಬಂದ ಕಾಲಘಟ್ಟದಲ್ಲಿ ಜವಾಹರಲಾಲ್‌ ನೆಹರೂ ಪ್ರಶ್ನಾತೀತ ನಾಯಕರಾಗಿದ್ದರು. ನಂತರ ಇಂದಿರಾ ಗಾಂಧಿಯವರೂ ಅಷ್ಟೇ ಪ್ರಶ್ನಾತೀತ ನಾಯಕಿಯಾಗಿದ್ದರು.

ಅವರ ಹತ್ಯೆಯ ಅನುಕಂಪದ ಅಲೆಯಲ್ಲಿ ಅಧಿಕಾರಕ್ಕೆ ಬಂದ ರಾಜೀವ್‌ ಗಾಂಧಿ, ಕಾಲಬುಡಕ್ಕೆ ಬಂದಿದ್ದ ಪ್ರಧಾನಿ ಹುದ್ದೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟ ಸೋನಿಯಾ ಗಾಂಧಿಯವರು ಪಕ್ಷದ ಮೇಲೆ ಹೊಂದಿದ್ದ ಹಿಡಿತ ಸಾಮಾನ್ಯವಾದುದಲ್ಲ. ಆದರೆ, ಈ ಎಲ್ಲ ಕಾಲಘಟ್ಟದಲ್ಲಿ ದೇಶದಲ್ಲಿ ಅನೇಕ ರಾಜಕೀಯ ವಿದ್ಯಮಾನಗಳು ನಡೆದಿವೆ. ಒಂದು ಕಾಲದಲ್ಲಿ ತಮಿಳುನಾಡಿನಲ್ಲಿ ಮಾತ್ರ ಇದ್ದ ಪ್ರಾದೇಶಿಕ ಪಕ್ಷದ ಹಿಡಿತ ಈಗ ಅನೇಕ ರಾಜ್ಯಗಳಿಗೆ ವಿಸ್ತರಿಸಿದೆ.

ತಮಿಳುನಾಡಿನ ಜೊತೆಗೆ ಬಿಹಾರ, ಉತ್ತರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಲದಂಥ ರಾಜ್ಯಗಳಲ್ಲಿ ಪ್ರಾದೇಶಿಕ ನಾಯಕರು ಬಲಿಷ್ಠರಾಗಿದ್ದು ಅವು ಮತ್ತೆ ಕಾಂಗ್ರೆಸ್ಸಿನ ತೆಕ್ಕೆಗೆ ಬರಲಿಕ್ಕಿಲ್ಲ ಎಂಬ ಸ್ಥಿತಿ ಈಗ ಇದೆ.

ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳು ಎಷ್ಟು ಮುಖ್ಯ ಎಂದು ಬಿಡಿಸಿ ಹೇಳಬೇಕಿಲ್ಲ. ಜತೆಗೆ ರಾಷ್ಟ್ರೀಯ ಪಕ್ಷಗಳಿಗೆ ಒಗ್ಗಿಕೊಂಡಿರುವ ರಾಜಸ್ತಾನ, ಮಧ್ಯಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಅಸ್ಸಾಂ ಮತ್ತು ಕೇರಳದಂಥ ರಾಜ್ಯಗಳೂ ತನ್ನ ಕೈ ಬಿಡುತ್ತಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಆಘಾತವುಂಟು ಮಾಡುವ ಸಂಗತಿ.

ಒಂದು ಕಡೆ ಪ್ರಾದೇಶಿಕ ಪಕ್ಷಗಳ ಸಡ್ಡು, ಇನ್ನೊಂದು ಕಡೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ಸವಾಲು. ಎರಡಕ್ಕೂ ಕಾಂಗ್ರೆಸ್ಸಿನ ಬಳಿ ಉತ್ತರ ಇರುವಂತೆ ಇಲ್ಲ. ಒಬ್ಬ ನಾಯಕನನ್ನೇ ಬಿಂಬಿಸಲು ಹೋಗಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ದಯನೀಯವಾಗಿ ಸೋತ ಬಿಜೆಪಿ ಈಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ತನ್ನ ತಪ್ಪನ್ನು ಸರಿಪಡಿಸಿಕೊಂಡಿತು.

ಈಶಾನ್ಯ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿಯಲು ಅದರ ಬದಲಾದ ಈ ಕಾರ್ಯತಂತ್ರ ನೆರವಾಯಿತು. ಕಾಂಗ್ರೆಸ್‌ ಪಕ್ಷ ಹೀಗೆ ತನ್ನ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿಕೊಂಡ ಕುರುಹು ನಮಗೆ ಕಾಣುವುದಿಲ್ಲ. ಎಡಪಕ್ಷಗಳಲ್ಲಿ ಇರುವ ಕಠಿಣ ಜಡತ್ವವೇ ಕಾಂಗ್ರೆಸ್‌ ಪಕ್ಷಕ್ಕೂ ಆವರಿಸಿದಂತೆ ಭಾಸವಾಗುತ್ತದೆ. ಯುಪಿಎ–1 ಸರ್ಕಾರದ ಭಾಗವಾಗಿದ್ದ ಎಡಪಕ್ಷಗಳೂ ನಿರ್ನಾಮವಾಗುವ ಹಂತಕ್ಕೆ ಬಂದು ತಲುಪಿವೆ. ಇದು ಒಂದು ಸಿದ್ಧಾಂತಕ್ಕೆ ಆಗುತ್ತಿರುವ ಹಿನ್ನಡೆ. ಅದು ಒಳ್ಳೆಯದಲ್ಲ.

ಕಾಂಗ್ರೆಸ್‌ ಮತ್ತು ಎಡಪಕ್ಷಗಳು ನಾಶವಾಗುವುದು ಎಂದರೆ ಒಂದು ಸಿದ್ಧಾಂತ ಮತ್ತು ಒಂದು ನಿಲುವು ನಾಶವಾದಂತೆ ಎಂದು ಬಿಜೆಪಿ ಭಾವಿಸುತ್ತಿರಬಹುದು, ಮತ್ತು ಅದು ಸಾಧ್ಯವಾಗುವುದಾದರೆ ಒಳ್ಳೆಯದು ಎಂದು ಬೀಗುತ್ತಿರಲೂಬಹುದು. ಆದರೆ, ಈ ದೇಶದ ಮುಖ್ಯ ಲಕ್ಷಣ ಬಹುತ್ವ, ವೈವಿಧ್ಯ. ಬಹುತ್ವಕ್ಕೆ ವಿರುದ್ಧವಾದುದು ಏಕತ್ವ. ಏಕತ್ವ ಈ ದೇಶಕ್ಕೆ ಹೊಂದದ ತತ್ವ.

ಈಗ ಬಿಜೆಪಿ ಏಕಪ್ರಭುತ್ವದ ಹಾದಿಯಲ್ಲಿ ಇದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ಪಕ್ಷದಲ್ಲಿ ಯಾರಾದರೂ ಪ್ರಶ್ನೆ ಮಾಡುವವರು ಇದ್ದಾರೆ ಎಂದು ಅನಿಸುವುದಿಲ್ಲ.

ಬಿಜೆಪಿ ಈಗ ಪ್ರಧಾನಿಯ ಬಿಗಿಮುಷ್ಟಿಯಲ್ಲಿ ಇರುವ ಪಕ್ಷ. ಪಕ್ಷದ ಅಧ್ಯಕ್ಷರಿಗೆ ಅಲ್ಲಿ ಸ್ವತಂತ್ರ ಅಸ್ತಿತ್ವವಿದೆ ಎಂದು ಅನಿಸುವುದಿಲ್ಲ. ಒಂದು ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಅಧಿಕಾರಕ್ಕೆ ತರಲು, ಒಂದು ದೇಶದ ಆಶೋತ್ತರಗಳನ್ನು ಪ್ರತಿನಿಧಿಸಲು ರಾಷ್ಟ್ರಮಟ್ಟದ ಒಬ್ಬ ನಾಯಕ ಬೇಕು ಎಂಬುದು ನಿಜ.

ಅದರ ಜೊತೆಗೆ ರಾಜ್ಯಗಳಲ್ಲಿ ಅಧಿಕಾರ ಹಿಡಿಯಬೇಕು ಎಂದರೆ ಕೇವಲ ಆ ನಾಯಕತ್ವದ ಮಹಿಮೆ ಸಾಕಾಗುವುದಿಲ್ಲ. ಹಾಗೆ ಸಾಕಾಗುತ್ತಿದ್ದರೆ ದೆಹಲಿಯಲ್ಲಿ ಮತ್ತು ಬಿಹಾರದಲ್ಲಿ ಬಿಜೆಪಿ ಸೋಲುತ್ತಿರಲಿಲ್ಲ. ಅಸ್ಸಾಂ ಚುನಾವಣೆ ವೇಳೆಗೆ ಆ ರಾಜ್ಯದ ಚುಕ್ಕಾಣಿ ಹಿಡಿಯುವಂಥ ಒಬ್ಬ ಸ್ಥಳೀಯ ನಾಯಕನ ಆಶ್ರಯಕ್ಕೆ ಆ ಪಕ್ಷ ಮೊರೆ ಹೋಯಿತು. ಇದನ್ನು ವಿನಯ ಎಂದು ಕರೆಯಬೇಕೋ ಅಥವಾ ರಾಜಕೀಯ ಚಾಣಾಕ್ಷತೆ ಎಂದು ಕರೆಯಬೇಕೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್ಸಿನಲ್ಲಿ ಈ ಎರಡರ ಕೊರತೆಯೂ ಇರುವುದು ಢಾಳವಾಗಿ ಕಾಣುತ್ತದೆ.   

ಇಡೀ ದೇಶದ ಗಮನ ಸೆಳೆಯುವಂಥ,  ಅದರ ಆಶೋತ್ತರಗಳಿಗೆ ಸ್ಪಂದಿಸುವಂಥ ಮತ್ತು ಅದಕ್ಕೆ ಬೇಕಾದ ನುಡಿಗಟ್ಟಿನಲ್ಲಿ ಮಾತನಾಡುವಂಥ ನಾಯಕತ್ವ ಕಾಂಗ್ರೆಸ್ಸಿನಲ್ಲಿ ಇಲ್ಲ. ರಾಜ್ಯಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಮತ್ತು ಹುಟ್ಟಿಕೊಳ್ಳುತ್ತಿರುವ ಪ್ರಾದೇಶಿಕ ನಾಯಕತ್ವದ ಸವಾಲನ್ನು ಹೇಗೆ ನಿಭಾಯಿಸಬೇಕು ಎಂದೂ ಅದಕ್ಕೆ ತಿಳಿಯುತ್ತಿಲ್ಲ.

ಮುಖ್ಯವಾಗಿ ಇದಕ್ಕೆ ವಿನಯ ಬೇಕು. ನಾಯಕತ್ವಕ್ಕೆ ತನ್ನ ಸಾಮರ್ಥ್ಯದ ಜೊತೆಗೆ ತನ್ನ ಮಿತಿಗಳು ಏನು ಎಂದು ತಿಳಿದಿರಬೇಕು. ಸಂಘಟನಾತ್ಮಕವಾಗಿ ಏನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಗೊತ್ತಿರಬೇಕು. ಇದೆಲ್ಲ ತಿಳಿದವರು ಆ ಪಕ್ಷದಲ್ಲಿ ಇಲ್ಲ ಎಂದು ಅಲ್ಲ. ಆದರೆ, ಅವರು ಯಾರಿಗೆ ಹೇಳಬೇಕು? ಕಾಂಗ್ರೆಸ್‌ ಪಕ್ಷದ ಸಮಸ್ಯೆಯೇನು ಎಂದರೆ ಅದು ಅನೇಕ ಪರಪುಟ್ಟಗಳನ್ನು ಹೊಂದಿರುವ ಒಂದು ಪಕ್ಷ. ನೀವು ಕಾಂಗ್ರೆಸ್‌  ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರ ಹೆಸರುಗಳನ್ನು ನೋಡುತ್ತ ಹೋಗಿ.

ಅದರಲ್ಲಿ ಎಷ್ಟು ಜನ ನೇರವಾಗಿ ಜನರಿಂದ ಚುನಾಯಿತರಾದವರು ಇದ್ದಾರೆ ಎಂದು ಲೆಕ್ಕ ಹಾಕಿ. ಬೇರುಗಳೇ ಇಲ್ಲದ ಇಂಥ ನಾಯಕರು ತಳಮಟ್ಟದ ಕಾರ್ಯಕರ್ತರ ಜತೆ ಎಂಥ ಸಂಬಂಧ ಹೊಂದಿರಲು ಸಾಧ್ಯ? ಪಕ್ಷಕ್ಕೆ ಸಂಘಟನಾತ್ಮಕವಾಗಿಯಾಗಲೀ, ಸೈದ್ಧಾಂತಿಕವಾಗಿಯಾಗಲೀ ಯಾವುದೇ ಪ್ರಯೋಜನವಿಲ್ಲದ ನಾಯಕರನ್ನು, ಅವರನ್ನು ನಾಯಕರು ಎಂದು ಅನ್ನಬಹುದಾದರೆ, ಎಷ್ಟು ದಿನ ಎಂದು ಸಹಿಸುವುದು? ಏಕೆ ಸಹಿಸುವುದು?

ಒಂದು ಸಾರಿ ಪಕ್ಷದ ಕಾರ್ಯಕಾರಿಣಿಯಲ್ಲಿ ಹೊಸ ರಕ್ತ ಬಂದರೆ ಅದರ ಜತೆಗೆ ಹೊಸ ಆಲೋಚನಾ ಕ್ರಮವೂ ಬರಬಹುದು. ಈಗಿನ ಬಿಕ್ಕಟ್ಟಿಗೆ ಪರಿಹಾರಗಳೂ ಸಿಗಬಹುದು. ತಳಮಟ್ಟದಲ್ಲಿ ಇರುವ ಕಾರ್ಯಕರ್ತರ ಜೊತೆಗೆ ಹೇಗೆ ಸಂವಹನ ಮಾಡಬೇಕು ಹಾಗೂ ಪಕ್ಷವನ್ನು ಹೇಗೆ ಮತ್ತೆ ಅಧಿಕಾರದ ದಡಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಗೊತ್ತಾಗಬಹುದು.

ಹೊಸ ರಕ್ತ ಎಂದರೆ ಅದು ರಾಹುಲ್‌ ಗಾಂಧಿಯೇ? ರಾಹುಲ್‌ ಗಾಂಧಿಯವರ ಸಮಸ್ಯೆ ಏನು ಎಂದರೆ ಅವರು ಒಲ್ಲದ ಮನಸ್ಸಿನ ನಾಯಕ. ಕಾಂಗ್ರೆಸ್‌ ನೇತೃತ್ವದ ಯುಪಿಎ ಎರಡು ಅವಧಿಗೆ ಆಡಳಿತ ನಡೆಸಿತು. ಎರಡು ಅವಧಿಯಲ್ಲಿಯೂ ಅವರು ಸಚಿವರಾಗಿ ಕೆಲಸ ಮಾಡಲು ಅವಕಾಶ ಇತ್ತು. ಅದನ್ನು ಅವರು ಏಕೆ ಬಿಟ್ಟುಕೊಟ್ಟರು ಎಂದು ಯಾರಿಗೂ ತಿಳಿಯಲಿಲ್ಲ.

ಉತ್ತರ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆದಾಗ ಅವರು ಅಖಿಲೇಶ್‌ ಸಿಂಗ್‌ಗೆ ಪೈಪೋಟಿ ಕೊಡುವ ಹಾಗೆ ಆ ರಾಜ್ಯದ ಉದ್ದಗಲಕ್ಕೆ ಸಂಚರಿಸಿದರು. ಆದರೆ, ತಾವು ಮುಖ್ಯಮಂತ್ರಿ ಅಭ್ಯರ್ಥಿ ಎಂದು ತಮ್ಮನ್ನೇ ತಾವು ಬಿಂಬಿಸಿಕೊಳ್ಳಲು ಅವರು ಹಿಂದೇಟು ಹಾಕಿದರು. ಅಂದರೆ, ಗಾಂಧಿ ಕುಟುಂಬದವರು ಆದರೆ ಪ್ರಧಾನಿಯೇ ಆಗಬೇಕು ಎಂದರೆ ಕಷ್ಟ. ರಾಹುಲ್‌ ಜವಾಬ್ದಾರಿಯಿಲ್ಲದ ‘ಹೊಣೆ’ ಬಯಸುವ ನಾಯಕ ಆಗಿರಬಹುದೇ? ಅದಕ್ಕಾಗಿಯೇ ಪ್ರಿಯಾಂಕಾ ಅವರು ನಾಯಕತ್ವ ವಹಿಸಿಕೊಳ್ಳಬೇಕು ಎಂಬ ಕೂಗು ಕಾಂಗ್ರೆಸ್ಸಿನ ಒಳಗಿನಿಂದಲೇ ಕೇಳಿಬರುತ್ತಿರಬಹುದು.

ಪ್ರಿಯಾಂಕಾ ಪ್ರವೇಶವನ್ನು ತಡೆಯಲು ಅವರ ಗಂಡ ರಾಬರ್ಟ್‌ ವಾಧ್ರಾ ವಿರುದ್ಧ ಕೇಂದ್ರ ಸರ್ಕಾರ ಒಂದೊಂದೇ ಬಾಣ ಬಿಡುತ್ತಿರುವಂತಿದೆ. ಸೋನಿಯಾ ಮತ್ತು ರಾಹುಲ್‌ ಅವರನ್ನು ಹಣಿಯಲೂ ಬಿಜೆಪಿ ಪ್ರಾಯೋಜಿತ ಪಡೆ ಕಾರ್ಯನಿರತವಾಗಿರುವಂತೆ ಕಾಣುತ್ತದೆ.

ಮತ್ತೆ ಅದೇ ಪ್ರಶ್ನೆ : ಹೀಗೆಲ್ಲ ಇದ್ದರೂ ಕಾಂಗ್ರೆಸ್ಸು ಚೇತರಿಸಿಕೊಳ್ಳುತ್ತದೆಯೇ? ಅಥವಾ ಅದಕ್ಕೆ ಈಗ ರಸ್ತೆಯ ಕೊನೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT