ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಚಾರಕ್ಕೊಂದು ಪ್ರಶಸ್ತಿ ವಿತರಣೆ ಸಮಾರಂಭ

Last Updated 26 ಮೇ 2011, 19:30 IST
ಅಕ್ಷರ ಗಾತ್ರ

ಪ್ರಶಸ್ತಿ ಪ್ರಕಟವಾದಾಗಲೂ ವಿವಾದ. ಪ್ರಶಸ್ತಿ ವಿತರಣಾ ಸಮಾರಂಭವಾದಾಗಲೂ ವಿವಾದ. ಒಟ್ಟಿನಲ್ಲಿ ರಾಜ್ಯ ಸರ್ಕಾರ ನೀಡುವ ಚಲನಚಿತ್ರ ಪ್ರಶಸ್ತಿಗಳಿಗೆ ವಿವಾದದ ಗ್ರಹಣ ಬಿಡುವಂತೆ ಕಾಣುತ್ತಿಲ್ಲ.

ಮೊನ್ನೆ ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2008-2009ನೇ ಸಾಲಿನ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭ, ಒಂದು ಸಮಾರಂಭ ಹೇಗೆ ನಡೆಯಬಾರದು ಎಂಬುದಕ್ಕೆ ಉದಾಹರಣೆಯಂತಿತ್ತು. ಪ್ರಶಸ್ತಿ ಪಡೆದವರಿಗೆ ಸಂಭ್ರಮ. ಉದ್ಯಮದಲ್ಲಿರುವ ಇತರರಿಗೆ ನಿರುತ್ಸಾಹ, ಸರ್ಕಾರಕ್ಕೂ ಕೊಟ್ಟು ಕೈತೊಳೆದುಕೊಳ್ಳುವ ಉಮೇದು. 

ಚಲನಚಿತ್ರ ಲೋಕದಲ್ಲಿ ಸಂಭ್ರಮ ವೈಯಕ್ತಿಕ. ಪ್ರಶಸ್ತಿ ಯಾರಿಗೇ ಬಂದರೂ ಇಲ್ಲಿ ಸಂಭ್ರಮಿಸುವುದಕ್ಕಿಂತ ಮುಖ ಕಿವುಚುವವರೇ ಹೆಚ್ಚು. ಪ್ರಶಸ್ತಿ ಪಡೆದವರಿಗಷ್ಟೇ ಸಂಭ್ರಮ. ಉಳಿದವರು ಪ್ರಶಸ್ತಿ ಪಡೆದವರನ್ನು ಅಭಿನಂದಿಸುವುದಿರಲಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಹಾಜರಾಗುವುದಿಲ್ಲ.

ಮೊನ್ನೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹೊರಗಿನವರು ಇರಲಿ, ಪ್ರಶಸ್ತಿ ಪಡೆದ ಬಹುತೇಕ ಮಂದಿಗೇ ಅಸಮಾಧಾನವಿತ್ತು. ಏನೋ ಅತೃಪ್ತಿ ಕಾಡುತ್ತಿತ್ತು. ಮುಖ್ಯಮಂತ್ರಿಗಳೇ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸದಿದ್ದರ ಬಗ್ಗೆ ನೋವಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂತ್ರಿಮಹೋದಯರ ದಂಡು, ಜೀವಮಾನ ಸಾಧನೆಗಾಗಿ ಪ್ರಶಸ್ತಿ ಪಡೆದವರಿಗೆ ಮಾತ್ರ ಪ್ರಶಸ್ತಿ ವಿತರಣೆ ಮಾಡಿ, ಭಾಷಣ ಮಾಡಿ, ನಿರ್ಗಮಿಸಿದ ನಂತರ ಇಡೀ ಕಾರ್ಯಕ್ರಮ, ಸಿನಿಮಾ ಭಾಷೆಯಲ್ಲೇ ಹೇಳುವುದಾದರೆ `ಎಕ್ಕುಟ್ಟಿ ಹೋಯ್ತು~. ಮುಖ್ಯಮಂತ್ರಿಗಳ ಮುಂದೆ - ಹಿಂದೆ ಇರಬೇಕು, ಅವರಿಗೆ ಮುಖತೋರಿಸಿ ಕೃತಾರ್ಥರಾಗಬೇಕು ಎನ್ನುವ ಏಕೈಕ ಉದ್ದೇಶದಿಂದಲೇ ಬಹಳ ಜನ ಅಲ್ಲಿ ಸೇರಿದ್ದರು.
 
ಮುಖ್ಯಮಂತ್ರಿಗಳು ಕೆಲಸ ಮುಗಿಸಿ ಹೋದ ಮೇಲೆ ಇತರರಿಗೇನು ಕೆಲಸ? ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಯೋಗೇಶ್ ಸ್ಥಳದಲ್ಲೇ ಅಸಮಾಧಾನ ತೋಡಿಕೊಂಡಿದ್ದು ಇದೇ ಕಾರಣಕ್ಕೆ. ಪ್ರಶಸ್ತಿಗೆ ಒಂದು ಘನತೆ, ಗೌರವ, ಮೌಲ್ಯ ಬರಬೇಕೆಂದರೆ ಅದು ಸರಿಯಾದ ರೀತಿಯಲ್ಲಿ ವಿತರಣೆಯಾದಾಗ ಮಾತ್ರ.
 
ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಪಡೆದವರು ಒಂದು ಮೂಲೆಯಲ್ಲಿ ಕುಳಿತಿದ್ದರೇ ವಿನಹ ಅವರನ್ನು ಕೇಳುವವರೇ ಇರಲಿಲ್ಲ. ಪ್ರಶಸ್ತಿ ಪಡೆದ ಅಷ್ಟೂ ಮಂದಿಗೆ ಮುಖ್ಯಮಂತ್ರಿಗಳೇ ಪ್ರಶಸ್ತಿ ವಿತರಿಸಿದ್ದರೆ ಅದರ ಮೌಲ್ಯವೇ ಬೇರೆಯಾಗುತ್ತಿತ್ತು.

ಮುಖ್ಯಮಂತ್ರಿ ಹಾಗೂ ಗಣ್ಯರ ದಂಡು ನಿರ್ಗಮಿಸಿದ ನಂತರ ಅಲ್ಲಿ ಉಳಿದದ್ದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು, ತೀರ್ಪುಗಾರರ ಸಮಿತಿ ಅಧ್ಯಕ್ಷರು. ಪ್ರಶಸ್ತಿ ನೀಡುವಾಗ ವೇದಿಕೆ ಮೇಲೆ ಇದ್ದವರನ್ನೆಲ್ಲಾ ಎಳೆ ತಂದು ಗ್ರೂಪ್ ಫೋಟೋಗೆ ನಿಲ್ಲಿಸಬೇಕಾದ ಪರಿಸ್ಥಿತಿ ತಲೆದೋರಿತ್ತು. ಇದು ಬೇಕಾಗಿತ್ತೇ?

ರಾಜ್ಯ ಸರ್ಕಾರ ಚಲನಚಿತ್ರ ಪ್ರಶಸ್ತಿಗಳನ್ನು ನೀಡಲು ಆರಂಭಿಸಿ 45 ವರ್ಷಗಳೇ ಕಳೆದಿದೆ.ಆದರೂ ಪ್ರಶಸ್ತಿ ವಿತರಣೆಗೆ ಒಂದು ಘನತೆ ಪ್ರಾಪ್ತವಾಗಿಲ್ಲ. ಕಾರ್ಯಕ್ರಮವನ್ನು ಹೇಗೆ ಅಚ್ಚುಕಟ್ಟಾಗಿ ರೂಪಿಸಬೇಕು ಎಂದು ತಿಳಿದುಕೊಂಡಿಲ್ಲ.

ಕೆಲವೊಮ್ಮೆ ಪ್ರಶಸ್ತಿ ವಿತರಣೆ ಸಮಾರಂಭ, ವಾರ್ತಾ ಮತ್ತು ಪ್ರಚಾರ ಇಲಾಖೆ ಹೊಣೆ ಹೊತ್ತಿರುವ ಸಚಿವರ ಕ್ಷೇತ್ರದಲ್ಲಿ ನಡೆಯುತ್ತದೆ. ಅದು ಅವರ ಕ್ಷೇತ್ರದ ಸಮಾರಂಭವೇನೋ ಎನ್ನುವ ರೀತಿಯಲ್ಲಿ ನಡೆಸುತ್ತಾರೆ.
 
ಇಲ್ಲದಿದ್ದರೆ ಮುಖ್ಯಮಂತ್ರಿಗಳ ತವರೂರಿನಲ್ಲಿ ನಡೆಸುತ್ತಾರೆ. ಅದೊಂದು ಚುನಾವಣಾ ಬಂಡವಾಳ ಕಾರ್ಯಕ್ರಮದೋಪಾದಿಯಲ್ಲಿ ನಡೆಯುವುದು ವಾಡಿಕೆ. ರಾಜಕಾರಣಿಗಳು ಈ ಕಾರ್ಯಕ್ರಮವನ್ನು ಹೀಗೆ ಇಷ್ಟಬಂದಂತೆ ದುಡಿಸಿಕೊಳ್ಳಲಾರಂಭಿಸುತ್ತಿದ್ದಂತೆಯೇ ಕಾರ್ಯಕ್ರಮಕ್ಕೆ ರಾಜಕೀಯ ಬಣ್ಣ ಬಂದಿತು.
 
ದೂರದ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮವನ್ನು ಮೈದಾನಗಳಲ್ಲಿ ಏರ್ಪಡಿಸಲಾಗುತ್ತದೆ. ಅಲ್ಲಿ ಜನ ಸೇರಿಸಬೇಕಾದರೆ ಹೆಸರಾಂತ ಕಲಾವಿದರು ಇದ್ದರೆ ಮಾತ್ರ ಸಾಧ್ಯ. ಬಾಗಲಕೋಟೆಯಲ್ಲೋ, ಬೀದರಿನಲ್ಲೋ ಪ್ರಶಸ್ತಿ ವಿತರಣಾ ಸಮಾರಂಭ ಏರ್ಪಡಿಸಿದರೆ, ಒಂದೊಂದು ಗಂಟೆಗೂ ರಿಕ್ಷಾ ಮೀಟರ್ ತರಹ ಸಂಭಾವನೆ ಏರಿಸಿಕೊಳ್ಳುವ ಸೂಪರ್ ನಟ - ನಟಿಯರು ಬರುವುದಿಲ್ಲ. ಬೆಂಗಳೂರಿನಲ್ಲಾದರೆ ಬರುತ್ತೇವೆ ಎನ್ನುತ್ತಾರೆ.

ಕೊನೆಗಳಿಗೆಯಲ್ಲಿ ನನಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತಿದ್ದು ಬಿಡುತ್ತಾರೆ.ಆರಂಭದ ಕೆಲ ವರ್ಷಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸಹಜವಾಗಿ ರಾಜ್‌ಕುಮಾರ್ ಅವರ ಪಾಲಾಗುತ್ತಿತ್ತು. ಪುಟ್ಟಣ್ಣ ಕಣಗಾಲರ ಚಿತ್ರಗಳು ಅತ್ಯುತ್ತಮ ಚಿತ್ರವಾಗಿರುತ್ತಿತ್ತು. ಅಂದಿನ ದಿನದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರಂಭ ನಡೆಯುತ್ತಿತ್ತು.

1969-70 ರಲ್ಲಿ `ಶ್ರೀ ಕೃಷ್ಣದೇವರಾಯ~ ಚಿತ್ರದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬಿ.ಆರ್. ಪಂತಲು ಅವರಿಗೆ ನೀಡಲಾಯಿತು. ಪಂತುಲು ಈ ಪ್ರಶಸ್ತಿಯನ್ನು ತಿರಸ್ಕರಿಸಿದರು. ಈ ಪ್ರಶಸ್ತಿ ರಾಜ್‌ಕುಮಾರ್ ಅವರಿಗೆ ಸಲ್ಲಬೇಕು ಎಂದರು. ಆ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಯಾರೂ ಸ್ವೀಕರಿಸಲಿಲ್ಲ.
 
ರಾಜ್‌ಕುಮಾರ್ ಬಳಗಕ್ಕೆ ಇದರಿಂದ ತೀರ ನಿರಾಸೆಯಾಯಿತು. ಪ್ರಶಸ್ತಿಯ ಬಗ್ಗೆ ಆಸಕ್ತಿಯೂ ಹೋಯಿತು. ರಾಜ್‌ಕುಮಾರ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಪ್ರಶಸ್ತಿ ಸಮಾರಂಭಗಳು ಕಳೆಗುಂದಲಾರಂಭಿಸಿದ್ದು ಹೀಗೆ.

1970ರ ನಂತರ ಹೊಸ ಅಲೆ ಚಿತ್ರಗಳೇ ಪ್ರಶಸ್ತಿ ಪಡೆಯಲಾರಂಭಿಸಿ, ಕಮರ್ಷಿಯಲ್ ಚಿತ್ರಗಳು ದೂರ ಸರಿಯಲಾರಂಭಿಸಿದ್ದರಿಂದ ಪ್ರೇಕ್ಷಕರಿಗೂ ಪ್ರಶಸ್ತಿ ವಿತರಣೆ ಸಮಾರಂಭಗಳಿಗೂ ಅಂತರ ಜಾಸ್ತಿಯಾಯಿತು. 1971-72ರಲ್ಲಿ `ವಂಶವೃಕ್ಷ~, 1972-73ರಲ್ಲಿ `ಸಂಕಲ್ಪ~, 1975-76ರಲ್ಲಿ `ಚೋಮನ ದುಡಿ~, 1976-77ರಲ್ಲಿ `ಪಲ್ಲವಿ~, 1977-78ರಲ್ಲಿ `ಘಟಶ್ರಾದ್ಧ~, 1978-79ರಲ್ಲಿ `ಗ್ರಹಣ~, 1979-80ರಲ್ಲಿ `ಅರಿವು~- ಹೀಗೆ ಹೊಸ ಅಲೆ ಚಿತ್ರಗಳು, ಅದರಲ್ಲಿ ಅಭಿನಯಿಸಿದ ಅಷ್ಟೊಂದು ಖ್ಯಾತರಲ್ಲದ ಕಲಾವಿದರು ಪ್ರಶಸ್ತಿಗಳನ್ನು ಬಾಚಲಾರಂಭಿಸಿದಾಗ ದೊಡ್ಡ ಚರ್ಚೆಯೇ ಆರಂಭವಾಯಿತು.
 
ಹೊಸ ಅಲೆ ಚಿತ್ರಗಳನ್ನು ನೋಡುವ ಪ್ರೇಕ್ಷಕವರ್ಗವೇ ಬೇರೆ. ರಾಜ್‌ಕುಮಾರ್, ವಿಷ್ಣುವರ್ಧನ್, ಶಿವರಾಜ್ ಕುಮಾರ್ ಚಿತ್ರಗಳನ್ನು ನೋಡುವ ಪ್ರೇಕ್ಷಕವರ್ಗವೇ ಬೇರೆ.ಹೊಸ ಅಲೆ ಚಿತ್ರಗಳು ಬಿಡುಗಡೆಯೂ ಆಗದೆ, ಪ್ರೇಕ್ಷಕರನ್ನು ತಲುಪಲು ವಿಫಲವಾಗಿದ್ದವು.
ಅದಕ್ಕೊಂದು ಮಾರುಕಟ್ಟೆಯೇ ರಾಜ್ಯದಲ್ಲಿ ಹುಟ್ಟಲಿಲ್ಲ. ಆದರೆ ಪ್ರಶಸ್ತಿಗಳು ಮಾತ್ರ ಪ್ರತೀಬಾರಿಯೂ ಅಂತಹ ಚಿತ್ರಗಳ ಪಾಲಾಗುತ್ತಿದ್ದವು. ಆಗ ಚಿತ್ರರಂಗದಲ್ಲೇ ದೊಡ್ಡ ಚರ್ಚೆ ಆರಂಭವಾಯಿತು. ಅಂತಹ ಪ್ರಶಸ್ತಿ ವಿತರಣಾ ಸಮಾರಂಭಗಳಿಗೆ ಕಮರ್ಷಿಯಲ್ ಚಿತ್ರ ನಿರ್ಮಾಪಕರು, ನಿರ್ದೇಶಕ ಬಳಗದವರಾರೂ ಹೋಗುತ್ತಿರಲಿಲ್ಲ.
 
ಕಮರ್ಷಿಯಲ್ ಚಿತ್ರಗಳಿಗೇ ಪ್ರಶಸ್ತಿ ಕೊಡಬೇಕು ಎನ್ನುವ ಚಳವಳಿ ಆರಂಭವಾಯಿತು. ಈ ವಿವಾದ ಪ್ರಶಸ್ತಿ ವಿತರಣಾ ಸಮಾರಂಭಗಳನ್ನು ಕಳೆಗುಂದಿಸಲು ಸಾಕಷ್ಟು ಕೊಡುಗೆ ನೀಡಿತು. (ಕೇಂದ್ರ ಸರ್ಕಾರದ ಪ್ರಶಸ್ತಿಗಳೂ ಕೂಡ ಇದೇ ಹಾದಿ ಹಿಡಿದಿದೆ. ಇದರಿಂದಾಗಿ ಹಿಂದಿ ಚಿತ್ರರಂಗದಲ್ಲಿ ನಿರಾಸಕ್ತಿ ಬಂತು. ಈ ಕಾರಣಕ್ಕೆ ಹಿಂದಿಯಲ್ಲಿ ಅತ್ಯುತ್ತಮ ಮನೋರಂಜನೆ ನೀಡಿದ ಚಿತ್ರ ಎಂದು ಪ್ರಶಸ್ತಿ ಕೊಡುವ ಪರಿಪಾಠ ಆರಂಭಿಸಿದರು.
 
ಈ ವರ್ಷ `ದಬಾಂಗ್~ ಎನ್ನುವ ಚಿತ್ರಕ್ಕೆ ಕೇಂದ್ರ ಸರ್ಕಾರದ ಪ್ರಶಸ್ತಿ ಬಂದಿರುವುದೂ ಇದೇ ಕಾರಣಕ್ಕೆ). ಪ್ರಶಸ್ತಿ ವಿತರಣಾ ಸಮಾರಂಭಗಳನ್ನು ಕಳೆಗಟ್ಟಿಸಲು ಏನು ಮಾಡಬೇಕು ಎಂಬ ಚಿಂತನೆ ಆರಂಭವಾಗುತ್ತಿದ್ದಂತೆಯೇ, ಖ್ಯಾತಿ ಪಡೆದ ನಟ - ನಟಿಯರಿಗೆ ಪ್ರತೀ ವರ್ಷ ಅತ್ಯುತ್ತಮ ನಟ - ನಟಿ ಪ್ರಶಸ್ತಿ ಕೊಟ್ಟರೆ, ಅಂತಹ ನಟರ ಅಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಸೆಳೆಯಬಹುದು ಎನ್ನುವ ಹೊಳಹು ಬಂತು. ತೀರ್ಪುಗಾರ ಸಮಿತಿಗೆ ಇಂತಹ ಒಂದು ಒತ್ತಡ ಬಂದಿದೆ.

ಆದರೂ ಪ್ರಶಸ್ತಿ ವಿತರಣೆ ಕಾರ್ಯಕ್ರಮಕ್ಕೆ ಕಳೆಗಟ್ಟಿಸುವ ಚಿಂತನೆ ನಮ್ಮಲ್ಲಿ ನಡೆದೇ ಇಲ್ಲ.ಸರ್ಕಾರಕ್ಕೂ ಅಂತಹ ಐಡಿಯಾ ಇಲ್ಲ. ಉದ್ಯಮದವರಿಗೂ ಇಲ್ಲ. ಕನ್ನಡ ಚಲನಚಿತ್ರರಂಗಕ್ಕೆ 75 ವರ್ಷವಾದ ಹಿನ್ನಲೆಯಲ್ಲಿ ನಡೆದ `ಅಮೃತ ಮಹೋತ್ಸವ~ ಸಮಾರಂಭದ ಉದ್ಘಾಟನೆ ಅರಮನೆ ಮೈದಾನದಲ್ಲಿ ನಡೆದದ್ದು ನಿಮಗೆಲ್ಲ ಗೊತ್ತೇ ಇದೆ.

ಅಂತಹ ಅಧ್ವಾನದ ಕಾರ್ಯಕ್ರಮ ಮತ್ತೊಂದಿಲ್ಲ. ಬೇರೆ ರಾಜ್ಯಗಳಲ್ಲಿ ಇಂತಹ ಕಾರ್ಯಕ್ರಮಗಳು ಹೇಗೆ ನಡೆಯುತ್ತವೆ ಎನ್ನುವುದನ್ನಾದರೂ ಸ್ವಲ್ಪ ಪರಿಶೀಲಿಸಲಿ.ಆಸ್ಕರ್, ಕ್ಯಾನೆ ಪ್ರಶಸ್ತಿಗಳು ಹೇಗೆ ನಡೆಯುತ್ತವೆ ಎನ್ನುವುದನ್ನು ನೋಡುವುದು ಬೇಡ, ಫಿಲಂಫೇರ್ ಪ್ರಶಸ್ತಿ ಯಾವ ರೀತಿ ಶಿಸ್ತಿನಿಂದ ನಡೆಯುತ್ತದೆ ಎನ್ನುವುದನ್ನಾದರೂ ಒಮ್ಮೆ ನೋಡಲಿ.

2008-2009ರ ಜೀವಮಾನ ಸಾಧನೆಗಾಗಿ ಪುಟ್ಟಣ್ಣ ಪ್ರಶಸ್ತಿಯನ್ನು ನಿರ್ದೇಶಕ ಕೆ.ಎಸ್.ಆರ್.ದಾಸ್ ಅವರಿಗೆ ಕೊಡಲಾಯಿತು. ತೀರ್ಪುಗಾರರ ಸಮಿತಿ ಅಧ್ಯಕ್ಷ ಭಾರ್ಗವ ಅವರು ದಾಸ್ ಹೆಸರು ಪ್ರಕಟಿಸುವಾಗ ಎಷ್ಟೊಂದು ಮೀನ - ಮೇಷ ಎಣಿಸಿದರು ನೋಡಿ.
 
ಪ್ರಶಸ್ತಿ ಪ್ರಕಟಿಸುವಾಗ ಕಾರ್ನಾಡರ ಹೆಸರು ಹೇಳಿದರು. ಕಾರ್ನಾಡರು ತಿರಸ್ಕರಿಸಿದಾಗ ಮತ್ತೆ ದಾಸ್ ಎಂದರು. ದಾಸ್ ಕೂಡ ತಿರಸ್ಕರಿಸಿದಾಗ ಏನು? ಎತ್ತ? ಎಂಬ ಗೊಂದಲವಾಯಿತು. ಪ್ರಶಸ್ತಿ ವಿತರಣೆ ದಿನ ಮತ್ತೆ ಕೆ.ಎಸ್.ಆರ್. ದಾಸ್ ಪ್ರತ್ಯಕ್ಷ. ಈ ಬಗ್ಗೆ ಸ್ಪಷ್ಟೀಕರಣವಿಲ್ಲ. ಎಲ್ಲವೂ ಮಾಯಾಬಜಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT