ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡತೂಸುಗಳು ಕಣ್ಣೀರು ಒರೆಸುವುದಿಲ್ಲ

Last Updated 11 ಜೂನ್ 2017, 19:30 IST
ಅಕ್ಷರ ಗಾತ್ರ

ಎಲ್ಲ ವರ್ಗಗಳೂ ನೋವು ನಷ್ಟಗಳನ್ನು ಎದುರಿಸುತ್ತವೆ... ಆದರೆ ಸಾವಿರ ಸಾವಿರ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರು ರೈತರೇ ಯಾಕೆ ಆಗಿರುತ್ತಾರೆ ಎಂದು ಯಾರಾದರೂ ಆಲೋಚನೆ ಮಾಡಿದ್ದು ಇದೆಯೇ ಎಂಬ ಪ್ರಶ್ನೆಯನ್ನು ಮಹಾರಾಷ್ಟ್ರದ ರೈತನೊಬ್ಬ ಕೇಳಿದ್ದಾನೆ.

ಸರ್ಕಾರ ಮತ್ತು ಸಮಾಜ ಈ ಪ್ರಶ್ನೆಗೆ ಇನ್ನಾದರೂ ಎದೆ ಮುಟ್ಟಿ ಉತ್ತರ ಕೊಡಬೇಕಿದೆ.

ಮಹಾರಾಷ್ಟ್ರ, ಮಧ್ಯಪ್ರದೇಶವೇ ಮೊದಲಾದ ಪ್ರಾಂತಗಳ ರೈತರ ಸಿಟ್ಟು ಬೀದಿಗೆ ಹರಿದು ಸುಡತೊಡಗಿದೆ. ಲಕ್ಷಾಂತರ ಕೋಟಿ ರೂಪಾಯಿ ತೆರಿಗೆ ರಿಯಾಯಿತಿ ಮತ್ತು ಲಕ್ಷಾಂತರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿ ಕಾರ್ಪೊರೇಟ್ ವಲಯವನ್ನು ಅಚ್ಛೆ ಮಾಡುವ ಸರ್ಕಾರಗಳು ರೈತರನ್ನು ಮಲಮಕ್ಕಳಂತೆ ನಡೆಸಿಕೊಳ್ಳುತ್ತ ಬಂದಿವೆ. ನರೇಂದ್ರ ಮೋದಿ ನೇತೃತ್ವದ  ಸರ್ಕಾರ ರೈತ ಕಲ್ಯಾಣ ಕುರಿತು ಆಡಿರುವ ದೊಡ್ಡ ದೊಡ್ಡ ಮಾತುಗಳು ಕಾಲು ಮುರಿದು ಬಿದ್ದಿವೆ. ಅವುಗಳನ್ನು ಹಿಡಿದೆತ್ತಿ ನಿಲ್ಲಿಸಿ ನಡೆಸಬೇಕಿದೆ.

ಅರ್ಧಕ್ಕಿಂತ ಹೆಚ್ಚು ದೇಶವಾಸಿಗಳು ಬದುಕಿಗೆ ಕೃಷಿಯನ್ನೇ ನೆಚ್ಚಿದ್ದಾರೆ. ಅವರ ಆತ್ಮಹತ್ಯೆಗಳು ಸಾಮೂಹಿಕ ಸಾಕ್ಷಿಪ್ರಜ್ಞೆಯನ್ನು ಕದಡುವುದಿಲ್ಲ. ಬದಲಾಗಿ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೊದ ನಿರ್ಜೀವ ಅಂಕಿ ಅಂಶಗಳಾಗಿ ಉಳಿಯುತ್ತಿವೆ. ಪೊಲೀಸರ ಗೋಲಿಬಾರಿನಲ್ಲಿ ಸಾಯುವ ಅವರ ನೆತ್ತರು ನೆಲಕ್ಕೆ ಹರಿದಾಗ ಆಗೊಮ್ಮೆ ಈಗೊಮ್ಮೆ ಅವರ ಸಂಕಟಗಳು ಮುನ್ನೆಲೆಗೆ ಬರುತ್ತವೆ. ಅಷ್ಟೇ ವೇಗದಲ್ಲಿ ತೆರೆಯ ಹಿಂದಕ್ಕೆ ಸರಿಯುತ್ತವೆ.

ಈಗಲೂ ಹಾಗೆಯೇ ಆಗಿದೆ. ಮಧ್ಯಪ್ರದೇಶದಲ್ಲಿ ಆರು ಮಂದಿ ರೈತರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ವಾಸ್ತವ ಜಗತ್ತಿನ ಆಗುಹೋಗುಗಳಿಗೆ ಕಣ್ಣು ಮುಚ್ಚಿದ ಬಹುತೇಕ ಸಮೂಹ ಮಾಧ್ಯಮಗಳ ಪುಟಗಳು ಮತ್ತು ಟಿ.ವಿ. ತೆರೆಗಳು ನೆಲಕ್ಕೆ ಚೆಲ್ಲಿದ ರಕ್ತದ ವಾಸನೆ ಹಿಡಿದಿವೆ. ರಾಜಕೀಯ ಪಕ್ಷಗಳು ಪರಸ್ಪರ ಕೆಸರು ಎರಚುವಲ್ಲಿ ನಿರತವಾಗಿವೆ. 19 ವರ್ಷಗಳ ಹಿಂದೆ ಕಾಂಗ್ರೆಸ್ ಅಧಿಕಾರ ನಡೆಸಿದ್ದಾಗ ಗೋಲಿಬಾರಿನಲ್ಲಿ 24 ಮಂದಿ ರೈತರು ಸತ್ತಿದ್ದರು. ಆಗ ರೈತ ಬಂಡಾಯದ ಹಿಂದೆ ಬಿಜೆಪಿಯ ಪ್ರಚೋದನೆ ಇದೆಯೆಂದು ಕಾಂಗ್ರೆಸ್ ಆರೋಪಿಸಿತ್ತು. ಈಗ ಬಿಜೆಪಿ ಸರ್ಕಾರ ಅದೇ ಆರೋಪವನ್ನು ಕಾಂಗ್ರೆಸ್ ಪಕ್ಷದತ್ತ ಎಸೆದಿದೆ.

ಘರ್ಷಣೆಗಳಲ್ಲಿ ಪೊಲೀಸರು ಗಾಯಗೊಂಡರೆಂದು ಕಣ್ಣು ತೆರೆಯಿತು ಮಧ್ಯಪ್ರದೇಶದ ಸರ್ಕಾರ. ಆದರೆ ತೆರೆದ ಕಣ್ಣುಗಳು ಕಾಣಬೇಕಾದ್ದನ್ನು ಕಂಡ ಸೂಚನೆಗಳಿಲ್ಲ. ಮಾತುಕತೆಗೆ ಕರೆದದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಟಿಸಿಲು ಭಾರತೀಯ ಕಿಸಾನ್ ಸಂಘವನ್ನು ಮಾತ್ರ. ಈ ಸಂಘವನ್ನು ತೃಪ್ತಿಗೊಳಿಸಿ ಆಂದೋಲನ ಅಂತ್ಯವಾಯಿತೆಂದು ಸಾರಲಾಯಿತು. ಕೃಷಿ ಉತ್ಪನ್ನಗಳಿಗೆ ನ್ಯಾಯಬೆಲೆ ಮತ್ತು ಸಾಲ ಮನ್ನಾದ ಬೇಡಿಕೆಗಳನ್ನಿಟ್ಟು ಆಂದೋಲನ ಮುಂದುವರೆಸಿದವು ಇತರೆ ರೈತ ಸಂಘಟನೆಗಳು. ಅವುಗಳಿಗೆ ‘ಸಮಾಜವಿರೋಧಿ ಶಕ್ತಿ’ಗಳೆಂಬ ಹಣೆಪಟ್ಟಿ ಹಚ್ಚಿಬಿಟ್ಟರು. ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದರು.

ಮಂದಸೌರ್ ಬಳಿಯ ಪಿಪಾಲಿಯಾದಲ್ಲಿ ಆರು ಮಂದಿ ರೈತರು ಪೊಲೀಸರ ಗುಂಡಿಗೆ ಬಲಿಯಾದರು. ರೈತರು ಬಲಿಯಾದದ್ದು ಪೊಲೀಸ್ ಗೋಲಿಬಾರಿನಲ್ಲಿ ಎಂದು ಒಪ್ಪದಷ್ಟು ಆತ್ಮನಿರಾಕರಣೆಯಲ್ಲಿ ಮುಳುಗಿತ್ತು ಸರ್ಕಾರ. ಕಾಂಗ್ರೆಸ್ ಬೆಂಬಲಿತ ಸಮಾಜವಿರೋಧಿ ಶಕ್ತಿಗಳೇ ಕಾರಣವೆಂದು ದೂರಿತು. ಕೇಂದ್ರ ಮಂತ್ರಿಗಳೂ ಇದೇ ಗಿಣಿಪಾಠವನ್ನು ಇನ್ನಷ್ಟು ಮತ್ತಷ್ಟು ಕ್ರೋಧ ಬೆರೆಸಿ ಒಪ್ಪಿಸಿದರು.

ಒಮ್ಮೆ ಬರ, ಇನ್ನೊಮ್ಮೆ ನೆರೆ, ಒಮ್ಮೆ ಅಪ್ಪಳಿಸುವ ಅಕಾಲದ ಆಲಿಕಲ್ಲುಗಳು, ಮತ್ತೊಮ್ಮೆ ಫಸಲುಗಳ ಮೆತ್ತಿ ಮೇಯುವ ರೋಗ ರುಜಿನಗಳು. ತಲೆಮಾರಿನಿಂದ ತಲೆಮಾರಿಗೆ ಛಿದ್ರಗೊಂಡು ‘ಅಂಗೈ ಅಗಲ’ಕ್ಕೆ ಕುಗ್ಗತೊಡಗಿರುವ ಭೂ ಹಿಡುವಳಿಗಳು, ಸಾವಿನ ಶೂಲದಂತಹ ಸಾಹುಕಾರಿ ಸಾಲಗಳು, ಆಕಾಶಕುಸುಮವಾದ ಸಾಹುಕಾರಿ ಸಾಲಗಳು, ಮೊಳಕೆ ಒಡೆಯದೆ ಮಣ್ಣಿನಲ್ಲೇ ಕರಟಿ ಹೋಗುವ ಕಳಪೆ ಬಿತ್ತನೆ ಬೀಜಗಳು, ದುಬಾರಿ ಬೀಜ- ಗೊಬ್ಬರ- ಕೀಟನಾಶಕಗಳು. ಕಸುವು ಕಳೆದು ಜೌಳಾಗುತ್ತಿರುವ ಜಮೀನುಗಳು.

ಈ ಕಂಗೆಟ್ಟ ಕಳವಳಗಳ ಪಟ್ಟಿಗೆ ಕಳಶವಿಡುವ ಇನ್ನೊಂದು ಅಂಶವಿದೆ. ಅದು ಕೃಷಿ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಸಿಗದಿರುವುದು. ಅಸಲೂ ಹುಟ್ಟದ ರೈತ, ಭಾರತದಲ್ಲಿ ಕಂಗೆಟ್ಟು ಬಹಳ ಕಾಲ ಉರುಳಿದೆ. ಸುಲಭಕ್ಕೆ ಹರಿದು ಒಗೆಯಲಾಗದ ದುಷ್ಟ ಜೇಡನ ಬಲೆಯನ್ನು ಆತನ ಸುತ್ತ ಹೆಣೆಯಲಾಗಿದೆ. ಅದೃಶ್ಯ ಶವಪೆಟ್ಟಿಗೆಗೆ ಮತ್ತಷ್ಟು ಮೊಳೆಗಳನ್ನು ಜಡಿಯಲಾಗುತ್ತಿದೆ. ಬದುಕಿಸುವ ಕ್ರಮಗಳು ಕೇವಲ ಬಾಯಿ ಮಾತುಗಳಾಗಿ ಉಳಿದಿವೆ.

ಸರಣಿ ಆತ್ಮಹತ್ಯೆಗಳ ಸುಳಿಗೆ ಸಿಲುಕಿವೆ ರೈತ ಕುಟುಂಬಗಳು. ಪ್ರಾಣ ನೀಗಿದ ಆತನೇನೋ ಬಾರದೂರಿಗೆ ಹೊರಟು ಹೋದ. ಬಿಟ್ಟು ಹೋದ ಪತ್ನಿ, ಮಕ್ಕಳ ಬದುಕು ನಿತ್ಯ ನರಕಗಳಾಗಿವೆ. ಬದುಕುಳಿದಿರುವವರು ಅನುದಿನ ಎದುರಿಸಬೇಕಿದೆ ಸಾವಿರ ಸಾವುಗಳನ್ನು. ಆದರೂ ಘನತೆಯ ಬದುಕುಗಳು ಇವರಿಂದ ಗಾವುದ ದೂರ.

ರೈತಾಪಿ ಬಿಕ್ಕಟ್ಟಿನ ಬೇರುಗಳನ್ನು ಅರಸಿ ಹೊರಟರೆ ಕಾಣುವುದು 1991ರಲ್ಲಿ ಪರಿಚಯಿಸಿದ ಹೊಸ ಆರ್ಥಿಕ ನೀತಿ ಮತ್ತು ಅಲ್ಲಿಂದ ನಾಲ್ಕು ವರ್ಷಗಳ ನಂತರ ಜಾರಿಗೆ ಬಂದ ಕೃಷಿಗೆ ಸಂಬಂಧಿಸಿದ ಒಪ್ಪಂದವಾದ ಡಬ್ಲ್ಯೂ.ಟಿ.ಒ. ನಿಯಮಗಳು. ರೈತರ ಅಳಿವು ಉಳಿವುಗಳು, ಜಾಗತಿಕ ಮಾರುಕಟ್ಟೆಗಳು ಮತ್ತು ದೈತ್ಯ ಕಾರ್ಪೊರೇಟ್‌ ಸಂಸ್ಥೆಗಳ ಅದೃಶ್ಯ ಹಸ್ತಗಳ ಕೈಗೆ ವರ್ಗವಾಗಿ ದಶಕಗಳೇ ಉರುಳಿವೆ.

ವಿಷಣ್ಣತೆ ಮತ್ತು ಖಿನ್ನತೆಗಳ ತಿರುಗಣಿ ಮಡುವಿಗೆ ಬಿದ್ದಿದೆ ರೈತಾಪಿ ವರ್ಗ. ಅವುಗಳನ್ನು ಇನ್ನಷ್ಟು ಅಂಧಕಾರದ ಆಳಕ್ಕೆ ತುಳಿಯುವ ಸನ್ನಾಹಗಳು ಛದ್ಮವೇಷ ಧರಿಸಿ ಮೆರೆಯತೊಡಗಿವೆ. ರೈತ ಕುಟುಂಬಗಳ ನಿಟ್ಟುಸಿರಿಗೆ ಸರ್ಕಾರ ಮತ್ತು ಸಮಾಜ ಕಂಡೂ ಕಾಣದ ಜಾಣತನ ತೋರಿವೆ. ಆದರೆ ಊರಿಗೆ ಬಿದ್ದ ಬೆಂಕಿ ಕೇರಿಗೆ ಬೀಳಲು ಬಹಳ ಕಾಲವೇನೂ ಹಿಡಿಯುವುದಿಲ್ಲ. ರೈತನ ಹೊಟ್ಟೆ ಬೆಂಕಿ, ಮೋಜು ಮಜಾ ಐಷಾರಾಮಗಳ ಮತ್ತಿನಲ್ಲಿ ಮುಳುಗಿ ಏಳುವವರ ಕಾಲ ಕೆಳಕ್ಕೂ ಹರಿದು ಉರಿಯಲಿದೆ.

ನಮಗೆ ಸಂಬಂಧವಿಲ್ಲದ ಸಮಸ್ಯೆಯಿದು ಎಂಬ ಆತ್ಮವಂಚನೆಯ ಧೋರಣೆಯನ್ನು ಸೊಕ್ಕಿರುವ ಸಮುದಾಯಗಳು ಬಿಟ್ಟುಕೊಡಲೇಬೇಕು. ಷೇರು ಸರ್ಟಿಫಿಕೇಟುಗಳು, ಕಾಗದದ ರೂಪಾಯಿ ನೋಟುಗಳು, ಲೋಹದ ನಾಣ್ಯಗಳು, ಬೆಳ್ಳಿ ಬಂಗಾರಗಳೆಂಬ ದುಬಾರಿ ಲೋಹಗಳು ಹೊಟ್ಟೆ ತುಂಬಿಸುವುದಿಲ್ಲ. ಹೊಟ್ಟೆ ತುಂಬಲು, ನೆತ್ತಿ ತಂಪಾಗಲು ನೆಲವ ಉತ್ತು ಬಿತ್ತಿ ಬೆಳೆದ ಆಹಾರವೇ ಬೇಕು ಎಂಬುದನ್ನು ಈ ವರ್ಗ ನೆನಪಿನಲ್ಲಿ ಇರಿಸಿಕೊಳ್ಳಬೇಕಿದೆ.

ಸಣ್ಣದೊಂದು ಉದಾಹರಣೆ ನೋಡೋಣ- ಮಧ್ಯಪ್ರದೇಶದಲ್ಲಿ ಗೋಧಿ ಬೆಳೆಯಲು 2004-05ರಲ್ಲಿ ಹೆಕ್ಟೇರಿಗೆ ₹1,241  ಬೆಲೆಯ ಗೊಬ್ಬರ ಬಳಕೆಯಾಗುತ್ತಿತ್ತು. ಹತ್ತು ವರ್ಷಗಳಲ್ಲಿ ಈ ವೆಚ್ಚ ದುಪ್ಪಟ್ಟು ಮೀರಿ ಬೆಳೆಯಿತು. 2014-15ರ ಹೊತ್ತಿಗೆ ₹2,695  ಆಯಿತು. ಬಿತ್ತನೆ ಬೀಜ ವೆಚ್ಚ ₹998 ರಿಂದ ₹2,653ಕ್ಕೆ  ಏರಿತು. ನೀರಾವರಿ ವೆಚ್ಚ ₹1,961ರಿಂದ ₹2,599ಕ್ಕೆ  ಹೆಚ್ಚಿತು. ಆದರೆ ಗೋಧಿಯ ಬೆಲೆ ಇದೇ ಅನುಪಾತದಲ್ಲಿ ಏರಲಿಲ್ಲ. ರೈತನ ಜೇಬು ಖಾಲಿಯೇ ಉಳಿಯಿತು.

ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ರಾಷ್ಟ್ರೀಯ ರೈತ ಆಯೋಗ ನೀಡಿರುವ ವರದಿಯಲ್ಲಿನ ಕೆಲವು ಅಂಶಗಳು ಜಾರಿಗೆ ಬಂದರೆ ಕೃಷಿ ವಲಯಕ್ಕೆ ಹೊಸ ಉಸಿರು ಸಿಕ್ಕೀತು. ಆಯೋಗ ಮಾಡಿರುವ ಕೆಲ ಪ್ರಮುಖ ಸಲಹೆಗಳು ಹೀಗಿವೆ- ಹೊಳಪು ಕಳೆದುಕೊಂಡಿರುವ ಒಕ್ಕಲುತನಕ್ಕೆ ಯುವಜನರು ಬೆನ್ನು ತಿರುಗಿಸಿ ದಶಕಗಳೇ ಉರುಳಿವೆ. ಇತ್ತೀಚಿನ ವರ್ಷಗಳಲ್ಲಿ ಈ ನಿರಾಸಕ್ತಿ ದೊಡ್ಡ ಪ್ರಮಾಣದಲ್ಲೇ ಬೆಳೆಯುತ್ತ ನಡೆದು ಬಿಕ್ಕಟ್ಟು ಎಂಬಂತಹ ದಿನಮಾನಗಳನ್ನು ತಲುಪುವುದರಲ್ಲಿದೆ.

ಬೇಸಾಯ ಆರ್ಥಿಕವಾಗಿ ಲಾಭದಾಯಕವೂ ಮತ್ತು ಬೌದ್ಧಿಕವಾಗಿ ಉದ್ದೀಪಕವೂ ಆದರೆ ಮಾತ್ರ ಯುವಜನರು ಮತ್ತೆ ಅದರತ್ತ ಮುಖ ಮಾಡಿಯಾರು. ಜೈವಿಕ ತಂತ್ರಜ್ಞಾನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಊರ್ಜಾನವೀಕರಣ ಮುಂತಾದ ತಂತ್ರಜ್ಞಾನಗಳ ಬಳಕೆ ಈ ವಲಯದಲ್ಲಿ ಆಗಬೇಕಿದೆ. ವೆಂಚರ್ ಕ್ಯಾಪಿಟಲ್ ಫಂಡಿನಂತಹ ಆರಂಭಿಕ ಬಂಡವಾಳ ಹೂಡಿಕೆ, ಸುಲಭ ಬಡ್ಡಿ ದರದ ಸಾಲ ಸೌಲಭ್ಯ ಮುಂತಾದ ಕ್ರಮಗಳಿಂದ ಸುಶಿಕ್ಷಿತ ಯುವಜನರನ್ನು ಬೇಸಾಯ ಮತ್ತು ತತ್ಸಂಬಂಧಿ ಉದ್ಯಮಗಳತ್ತ ಸೆಳೆಯಬಹುದು. ಎಳೆಯ ಉದ್ಯಮಸಾಹಸಿಗಳು ಮತ್ತು ಖಾಸಗಿ ಕ್ಷೇತ್ರದ ನಡುವೆ ಪರಸ್ಪರರನ್ನು ಬೆಳೆಸುವ ಪಾಲುದಾರಿಕೆಗಳು ಅರಳುವುದು ಈ ವಲಯದಲ್ಲಿ ಸಾಧ್ಯವಿದೆ.

ಗೇಣಿ ಕಾಯ್ದೆಗಳು, ಜಮೀನು ಗುತ್ತಿಗೆ, ಹೆಚ್ಚುವರಿ ಜಮೀನು ಮತ್ತು ಬಂಜರು ಭೂಮಿಯ ಮರುವಿತರಣೆಗೆ ಸಂಬಂಧಿಸಿದ ಭೂಸುಧಾರಣೆ ಕ್ರಮಗಳು ತುರ್ತಾಗಿ ಜರುಗಬೇಕು. ಬಂಜರು ಭೂಮಿಯನ್ನು ಬಂಜರು ಮಾಡಲಾದ ಭೂಮಿಯೆಂದು ಕರೆಯುವುದೇ ಉಚಿತ ಎಂದಿತ್ತು ಮೋಹನ ಧಾರಿಯಾ ಸಮಿತಿ. ಈ ಸಮಿತಿಯ ಶಿಫಾರಸುಗಳು ಜಾರಿಯಾಗಬೇಕು.

ಮಹಿಳಾ ರೈತರಿಗೆ ಸಾಲ ಸಿಗುವಂತಾಗಲು ಮನೆ ಮತ್ತು ಜಮೀನು ಒಡೆತನದಲ್ಲಿ ಜಂಟಿ ಪಟ್ಟಾಗಳ ವಿತರಣೆ ಆಗಬೇಕು. ಫಲವತ್ತಾದ ಕೃಷಿ ಪ್ರಧಾನ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಬಿಟ್ಟುಕೊಡಬಾರದು. ಕೃಷಿ ಮತ್ತು ಕೈಗಾರಿಕೆಗಳು ಪರಸ್ಪರ ಪೂರಕವಾಗಿ ಬೆಳೆಯಬೇಕೇ ವಿನಾ ಮಾರಕ ಆಗಬಾರದು. ಸಾಧ್ಯವಿದ್ದಲ್ಲೆಲ್ಲ ಭೂರಹಿತ ಕೃಷಿ ಕಾರ್ಮಿಕ ಕುಟುಂಬಗಳಿಗೆ ತಲಾ ಒಂದು ಎಕರೆಯಂತೆ ಜಮೀನು ಹಂಚಿಕೊಡಬೇಕು. ಈ ದಿಸೆಯಲ್ಲಿ ತಮಿಳುನಾಡಿನ ಉದಾಹರಣೆ ಅನುಕರಣೀಯ.

ಅಂತರ್ಜಲ ಮರುಪೂರಣ- ಮಳೆ ನೀರಿನ ಸಂಗ್ರಹ- ನೀರು ಬಳಕೆಯಲ್ಲಿ ದಕ್ಷತೆಯಂತಹ ಕ್ರಮಗಳು ಕಡ್ಡಾಯ ಆಗಬೇಕು. ಜಲಸಾಕ್ಷರತೆಯ ಕ್ರಮಗಳು ತುರ್ತಾಗಿ ಜರುಗಬೇಕು. ಇರುವ ನೀರನ್ನು ಸಮನಾಗಿ ಹಂಚಿಕೊಳ್ಳುವ ಜಲಪಂಚಾಯಿತಿಗಳು ಹಳ್ಳಿ ಹಳ್ಳಿಗಳಲ್ಲಿ ಕಾರ್ಯರೂಪಕ್ಕೆ ಬರಬೇಕು.
ಸಕಾಲಕ್ಕೆ ಸಾಕಷ್ಟು ಕೃಷಿ ಸಾಲ ಸರಳ ದರದ ಬಡ್ಡಿಯಲ್ಲಿ ದೊರೆಯುವುದು ಬಹುಮುಖ್ಯ.

ಈ ದಿಸೆಯಲ್ಲಿ ಕಾರ್ಯದಕ್ಷವಾದ ಗ್ರಾಮೀಣ ಬ್ಯಾಂಕಿಂಗ್ ಜಾಲದ ವಿಸ್ತರಣೆ ನಿರ್ಣಾಯಕ ಆಗಬಲ್ಲದು. ಒಕ್ಕಲುತನದ ಉದ್ಯೋಗಕ್ಕೆ ಕಷ್ಟನಷ್ಟಗಳ ಅಪಾಯ ಬಹುತೇಕ ತಪ್ಪಿದ್ದಲ್ಲ. ಬಿತ್ತನೆಯಿಂದ ಕಟಾವಿನ ತನಕ ಎದುರಾಗುವ ಕಷ್ಟನಷ್ಟಗಳು ಮತ್ತು ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಅಪಾಯಗಳನ್ನು ಎದುರಿಸಲು ಸೂಕ್ತ ವಿಮೆಯ ರಕ್ಷಣೆ ಅತ್ಯಗತ್ಯ.

ಉಪಗ್ರಹಗಳ ನೆರವಿನ ಮೂಲಕ ಬೆಳೆ ನಷ್ಟವನ್ನು ಅಳೆದು 24 ತಾಸುಗಳಲ್ಲಿ ರೈತನ ಖಾತೆಗೆ ವಿಮೆಯ ಪರಿಹಾರ ಜಮಾ ಆಗುವಂತಿರಬೇಕು. ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರು ಹಾಗೂ ಭೂರಹಿತ ಕೃಷಿ ಕಾರ್ಮಿಕರಿಗೆ ಸಮಗ್ರ ರಾಷ್ಟ್ರೀಯ ಸಮಾಜಿಕ ಸುರಕ್ಷತೆಯ ಯೋಜನೆ ಜಾರಿಗೆ ಬರಬೇಕು. ಆಸ್ಪತ್ರೆ ಚಿಕಿತ್ಸೆ, ಬಾಣಂತನ, ಜೀವವಿಮೆ, ವೃದ್ಧಾಪ್ಯವೇತನ ಮುಂತಾದ ಖರ್ಚು ವೆಚ್ಚಗಳು ಇಂತಹ ಯೋಜನೆಯಲ್ಲಿ ಸೇರಬೇಕು.

ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆಗೆ ಹೆಚ್ಚಿನ ಕಸುವು ತುಂಬಬೇಕೇ ವಿನಾ ದುರ್ಬಲಗೊಳಿಸುವ ಪ್ರಯತ್ನಗಳು ಸಲ್ಲದು. ದಿನದಿಂದ ದಿನಕ್ಕೆ ಹೆಚ್ಚುತ್ತ ನಡೆದಿರುವ ಉತ್ಪಾದನಾ ವೆಚ್ಚಗಳನ್ನು ಗಮನದಲ್ಲಿ ಇರಿಸಿಕೊಂಡು ಕನಿಷ್ಠ ಬೆಂಬಲ ಬೆಲೆಯ ದರಗಳನ್ನು ನಿಗದಿಪಡಿಸಬೇಕು. ಪೌಷ್ಟಿಕ ತೃಣಧಾನ್ಯಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ದೊರೆಯುವಂತಾಗಬೇಕು.

ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಕನಿಷ್ಠ ಬೆಂಬಲ ಬೆಲೆಯ ದರಗಳು ಶೇ50ರಷ್ಟಾದರೂ ಹೆಚ್ಚಿರಬೇಕು. ಕೃಷಿ ವೆಚ್ಚ ಮತ್ತು ದರಗಳ ಆಯೋಗ (ಸಿಎಸಿಪಿ) ಶಾಸನಬದ್ಧ ಸ್ವಾಯತ್ತ ಸಂಸ್ಥೆ ಆಗಬೇಕು.ಮಣ್ಣು, ಹವೆ, ಒಕ್ಕಲುತನದ ವಿಧಾನಗಳು ಹಾಗೂ ಸಂಪನ್ಮೂಲಗಳನ್ನು ಗಮನಿಸಿದರೆ ಭಾರತೀಯ ಒಕ್ಕಲುತನದ ವೈವಿಧ್ಯ ಬೆರಗಿನದು. ಭಿನ್ನ ಕೃಷಿಹವೆ, ಸಾಮಾಜಿಕ-ಆರ್ಥಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಅಂಶಗಳಿಗೆ ತಕ್ಕಂತೆ ವಿಶಾಲ ರಾಷ್ಟ್ರೀಯ ನೀತಿಯೊಂದು ರೂಪುಗೊಳ್ಳಬೇಕಿದೆ

ಮಧ್ಯಪ್ರದೇಶದ ಆಂದೋಲನವನ್ನು ಸಿಡಿಸಿ ಹಬ್ಬಿಸಿರುವ ರೈತ ತಲೆಯಾಳುಗಳು ಒಕ್ಕಲುತನವನ್ನು ನೆಚ್ಚಿದ ಪಾಟೀದಾರ ಸಮುದಾಯಕ್ಕೆ ಸೇರಿದವರು. ಗುಜರಾತ್ ಮೂಲದ ವಲಸೆಗಾರರು. ಬಿಜೆಪಿಯ  ಕಟ್ಟಾ ಬೆಂಬಲಿಗರು. ಗೋಲಿಬಾರಿನಲ್ಲಿ ಸತ್ತಿರುವ ಆರು ಮಂದಿ ರೈತರ ಪೈಕಿ ಐವರು ಪಾಟೀದಾರರು.

ಗುಜರಾತಿನ ಬಲಿಷ್ಠ ಜಾತಿಯಾದ ಪಟೇಲರೇ ಈ ಪಾಟೀದಾರರು. ಆ ರಾಜ್ಯದಲ್ಲಿ ಬಿಜೆಪಿಯ ಬೆನ್ನೆಲುಬಾಗಿದ್ದವರು. ಗುಜರಾತಿನಲ್ಲಿ ಪಾಟೀದಾರರು ಈಗಾಗಲೇ ಬಿಜೆಪಿ ವಿರುದ್ಧ ತಿರುಗಿದ್ದಾರೆ. ಇದೀಗ ಮಧ್ಯಪ್ರದೇಶದ ಸರದಿ. ಗುಜರಾತ್ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳು ಕದ ಬಡಿದಿರುವ ದಿನಗಳಲ್ಲಿ ಬಿಜೆಪಿಯ ಪಾಲಿಗೆ ಈ ಬೆಳವಣಿಗೆ ಕೆಟ್ಟ ಸುದ್ದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT