ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾದಿದ್ದು ಕರಡಿಗಾಗಿ ಲಭಿಸಿದ್ದು ಗೂಬೆ ದರ್ಶನ

Last Updated 11 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಅನಂತರ ನಮ್ಮ ಮಾತುಕತೆಯು ಸಸ್ಯ ಪ್ರಪಂಚದಿಂದ ಪ್ರಾಣಿಪ್ರಪಂಚದ ಕಡೆಗೆ ತಿರುಗಿತು. ಸಸ್ಯ ಸಮೃದ್ಧಿ ಇರುವೆಡೆ ವನ್ಯ ಜೀವಿಗಳೂ ಸಮೃದ್ಧವಾಗಿರುತ್ತವೆ. ಅವೆರಡಕ್ಕೂ ಅವಿನಾಭಾವ ಸಂಬಂಧ. ಕಾಡಿಗೆ ತಕ್ಕಂತೆ ಪ್ರಾಣಿಗಳು. ಆದರೆ ಮನುಷ್ಯ ಮೃಗಾಲಯಗಳನ್ನು ನಿರ್ಮಿಸುವ ತೆವಲಿಗೆ ಬಿದ್ದ ಮೇಲೆ ಯಾವುದೋ ಪರಿಸರ, ಹವೆಯಲ್ಲಿ ಬದುಕುವ ಪ್ರಾಣಿಪಕ್ಷಿಗಳನ್ನು ಹಿಡಿದು ತಂದು ಇನ್ನಾವುದೋ ಸೆರೆಮನೆಯಲ್ಲಿ ಕೂಡಿಹಾಕುತ್ತಾನೆ. ಭಾರತದಲ್ಲಿ ಮೃಗಾಲಯಗಳು ಚಿಂತಾಜನಕವಾಗಿವೆ. ಪ್ರಾಣಿಗಳ ಆಹಾರದ ಬಜೆಟ್ ಅನ್ನೂ ನುಂಗುವವರಿದ್ದಾರೆ.

ಯಾರ ಸಂತೋಷಕ್ಕೆ ಹಿಡಿದು ತಂದಿರೋ ನನ್ನ ಎಂದು ಪ್ರಾಣಿಪಕ್ಷಿಗಳು ನರಳುತ್ತವೆ. ಆದರೆ ಮೃಗಾಲಯಗಳಿಗೂ ಹಲವು ಸದುದ್ದೇಶಗಳಿರುತ್ತವೆ. ಅವು ಕೇವಲ ಮನರಂಜನೆಗೆ ಮೀಸಲಲ್ಲ. ಪ್ರಾಣಿಗಳ ಸಂತಾನ ಅಭಿವೃದ್ಧಿ, ಅವನತಿಯ ಅಂಚಿನಲ್ಲಿರುವ ಸಂತತಿಗಳ ರಕ್ಷಣೆ, ಸಂಶೋಧನೆ, ಅಧ್ಯಯನ, ವಿನಿಮಯ ಮುಂತಾದ ಉದ್ದೇಶಗಳಿರುತ್ತವೆ.

ಈ ಅಲಾಸ್ಕ ಟ್ರಿಪ್‌ನ ಮರುಪ್ರಯಾಣದಲ್ಲಿ ನಾನು ನೋಡಿದ ಅಂಥದ್ದೊಂದು ಮೃಗಾಲಯವೆಂದರೆ ಟೊರಾಂಟೋ ಜ಼ೂ. ಅಲ್ಲಿ ಐದು ಸಾವಿರಕ್ಕೂ ಹೆಚ್ಚು ಪ್ರಾಣಿಗಳಿವೆ. ಈ ಸಂಖ್ಯೆ ಏನೂ ಮಹತ್ವದ್ದಲ್ಲ. ಆದರೆ ಅಲ್ಲಿರುವ ಪ್ರಾಣಿಗಳೆಲ್ಲ ಹುಲಿ, ಸಿಂಹ, ಆನೆ, ಜಿರಾಫೆ ಮುಂತಾದವುಗಳು.

ಆಫ್ರಿಕಾದ ಉಷ್ಣವಲಯದ ಮಳೆ ಕಾಡಿನಲ್ಲಿ, ಮಲೇಷ್ಯಾ, ಆಸ್ಟ್ರೇಲಿಯಾ ಮತ್ತು ಏಷ್ಯಾ ಖಂಡದ ಬಿಸಿಲಿನಲ್ಲಿ ವಾಸಿಸುವ ಈ ಪ್ರಾಣಿಗಳೆಲ್ಲ ಟೊರಾಂಟೋ ಜ಼ೂನಲ್ಲಿವೆ. ಟೊರಾಂಟೋ ನಗರ ಚಳಿಗಾಲದಲ್ಲಿ ಮೈನಸ್ ಏಳು ಡಿಗ್ರಿ ಉಷ್ಣಕ್ಕೆ ಕುಸಿಯುತ್ತದೆ! ಈ ಚಳಿಯನ್ನು ಪ್ರಾಣಿಗಳು ಹೇಗೆ ಸಹಿಸಿಕೊಳ್ಳುತ್ತವೆ? ದೊಡ್ಡದೊಂದು ಆಸ್ಟ್ರಿಚ್ ಪಕ್ಷಿಯು ನಮ್ಮ ಕಾರಿನೊಳಗೆ ಕತ್ತು ತೂರಿಸಿದಾಗ ಅದು ನನಗೊಂದು ಸ್ವೆಟರ್ ಇದ್ದರೆ ಕೊಡಿ ಎಂದು ಕೇಳಿದಂತಿತ್ತು.

ಇವು ಅತಿಶೀತವನ್ನು ಹೇಗೆ ತಾಳಿಕೊಳ್ಳುತ್ತವೆ ಎಂದು ಸಿಬ್ಬಂದಿಯನ್ನು ಕೇಳಿದ್ದಕ್ಕೆ ಅವರು ಚಳಿಗಾಲದಲ್ಲಿ ಪ್ರಾಣಿಗಳನ್ನು ಒಳಾಂಗಣದಲ್ಲಿರಿಸಿ ಹೀಟರ್ ಮೂಲಕ ಶಾಖವನ್ನು ಹೆಚ್ಚಿಸುವುದಾಗಿ ಹೇಳಿದ್ದರು. ಹೀಟರ್ ಮತ್ತು ಕೂಲರ್ ಮೃಗಾಲಯಗಳು ಈಗ ವಿಶ್ವಾದ್ಯಂತ ಇವೆ.

ಈ ಕೃತಕ ಶಾಖ ಮತ್ತು ಚಳಿಯ ಅನುಭವ ಹೇಗಿರುತ್ತದೆ ಎಂದು ಮಾತು ಬಾರದ ಪ್ರಾಣಿಗಳ ಪರವಾಗಿ ವಿವರಿಸುವುದು ಮತ್ತು ಊಹಿಸುವುದು ಕಷ್ಟ. ಮನುಷ್ಯನದು ಪ್ರಯೋಗಶೀಲ ಮನಸ್ಸು, -ಕುಚೇಷ್ಟೆಯ ಮನಸ್ಸು ಎಂದರೆ ಅನೇಕರಿಗೆ ಬೇಸರವಾಗುತ್ತದಾದ್ದರಿಂದ ಹಾಗೆಂದೆ. ಅವನು ಬಳ್ಳಾರಿಯ ಬಿಸಿಲಲ್ಲಿ ಏಸಿ ಹಾಕಿ ಪೆಂಗ್‌ವಿನ್‌ಗಳನ್ನು ಸಾಕಿಬಿಡಬಲ್ಲ.

ಕ್ರಿಸ್ ಮತ್ತು ನಾನು ಟೊಂಗಾಸ್ ಕಾಡಿನಲ್ಲಿ ಪ್ರಾಣಿಗಳ ಕಷ್ಟ ಸುಖದ ಬಗ್ಗೆ ಮಾತನಾಡುತ್ತಾ ನಡೆಯುತ್ತಿದ್ದಾಗ ಸರ ಸರ ಸದ್ದಾಯಿತು. ಒಂದು ಕ್ಷಣ ನಿಂತೆವು. ಯಾವ ಪ್ರಾಣಿಯೂ ಕಾಣಿಸಲಿಲ್ಲ. ಈ ಕಾಡಿನಲ್ಲಿರಬಹುದಾದ ಪ್ರಾಣಿಗಳ ಬಗ್ಗೆ ಒಂದು ಚಿಕ್ಕ ಪುಸ್ತಕವನ್ನು ಓದಿದ್ದೆ.

ಕಪ್ಪು ಕರಡಿ ಮತ್ತು ಕಂದು ಕರಡಿ, ತೋಳ, ಜಿಂಕೆ, ಎಮ್ಮೆ ಗಾತ್ರದ ದೇಹಕ್ಕೆ ಜಿಂಕೆಯ ಕೊಂಬು ಧರಿಸಿದಂತೆ ಕಾಣುವ ಮೂಸ್, ನಾಯಿ ಮೂತಿಯ ಬೆಕ್ಕಿನಂತೆ ಕಾಣುವ ಮಾರ್ಟೆನ್, ಬಿಳಿಮೇಕೆಯಂತಿರುವ ಮೌಂಟನ್‌ ಗೋಟ್ ಮುಂತಾದವುಗಳು ಈ ಕಾಡಿನಲ್ಲಿವೆ ಎಂದು ದಾಖಲಾಗಿತ್ತು. ಈಗ ಕರಡಿಗಳು ಎದುರಾದರೆ ಏನು ಮಾಡಬೇಕು ಎಂದು ಚಿಕ್ಕದೊಂದು ಉಪನ್ಯಾಸ ಕೊಟ್ಟ ಕ್ರಿಸ್. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಶುರುವಾಯಿತು.

ಕರಡಿಗಳು ಹಗಲಲ್ಲೂ ಇರುಳಲ್ಲೂ ಕ್ರಿಯಾಶೀಲವಾಗಿರುತ್ತವೆ. ಆದ್ದರಿಂದ ಅದು ಯಾವಾಗ ಎಲ್ಲಿ ಬೇಕಾದರೂ ಪ್ರತ್ಯಕ್ಷವಾಗಬಹುದು. ನಾವು ಆದಷ್ಟು ಜೋರಾಗಿ ಮಾತನಾಡುತ್ತ ಹೋಗುತ್ತಿರಬೇಕು. ಆ ಶಬ್ದ ಕೇಳಿಸಿದರೆ ಅದು ನಮ್ಮ ದಾರಿಗೆ ಬರುವುದಿಲ್ಲ. ಅಕಸ್ಮಾತ್ ಎದುರಿಗೆ ಬಂದರೆ ಸಾಧ್ಯವಾದಷ್ಟೂ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಬೇಕು. ಆದರೆ ಓಡಬಾರದು. ಕಲ್ಲಿನಂತೆ ನಿಂತು ಬಿಡಬೇಕು.

ಕೆಲವು ಕರಡಿಗಳು ನಿಮ್ಮ ಮೇಲೆ ಕಾಲೂರಿ ನಿಲ್ಲಬಹುದು. ಹೆದರಬಾರದು. ಅದು ಪರಿಚಯಿಸಿಕೊಳ್ಳುವ ರೀತಿ ಅಷ್ಟೆ. ಒಂದು ವೇಳೆ ಅದು ಆಕ್ರಮಣ ಮಾಡುತ್ತಿದೆ ಎನಿಸಿದರೆ ನೆಲದಲ್ಲಿ ಬಿದ್ದುಕೊಳ್ಳಿ. ಮಂಡಿಯೊಳಗೆ ಅಥವಾ ಮೊಣಕೈಗಳೊಳಗೆ ತಲೆ ಹುದುಗಿಸಿಕೊಂಡು ಅಲುಗಾಡದೆ ಸತ್ತಂತೆ ಮಲಗಿ. ನೀವು ಶತ್ರುವಲ್ಲ ಎಂದು ಖಾತರಿಯಾದ ಮೇಲೆ ಅದು ಹೊರಟು ಹೋಗುತ್ತದೆ.

ಅದು ಸಂಪೂರ್ಣ ಮರೆಯಾಗುವವರೆಗೂ ಅಲುಗಾಡದೆ ಹಾಗೆಯೇ ಇರಿ. ಆತುರ ಮಾಡಬೇಡಿ. ಹೊರಳಾಡಿದರೆ, ಶಬ್ದ ಮಾಡಿದರೆ ಅದು ಮತ್ತೆ ಬಂದು ಮರು ದಾಳಿ ಮಾಡುವ ಸಾಧ್ಯತೆ ಇರುತ್ತದೆ.

ಪುಸ್ತಕ ಓದಿದಂತೆ ಕ್ರಿಸ್ ಗಿಳಿಪಾಠ ಒಪ್ಪಿಸಿದ. ಇದೆಲ್ಲವನ್ನೂ ಬಿಡದೆ ಪಾಲಿಸಿದ ನಂತರವೂ ಕರಡಿ ಆಕ್ರಮಣ ಮಾಡಿದರೇನು ಮಾಡಬೇಕು? ಎಂದೆ. ಬೇರೆ ದಾರಿಯೇ ಇಲ್ಲ. ಹೋರಾಟಕ್ಕಿಳಿದು ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು ಎಂದ. ನಿನ್ನ ಮನೆ ಹಾಳಾಗ ಎಂದು ಬೈದುಕೊಂಡೆ. ಅವನು ಕೋಲು ಕೊಟ್ಟಿದ್ದು ಊರಿ ನಡೆಯಲು ಅಲ್ಲ; ಕರಡಿಯ ವಿರುದ್ಧ ಕಾದಾಡಲು ಎಂದು ಅರಿವಾಯಿತು.

ಹೆದರುವ ಅವಶ್ಯಕತೆ ಇಲ್ಲ. ಈ ದಾರಿಯಲ್ಲಿ ಅವು ಬರುವುದಿಲ್ಲ. ಹೊಳೆಗೆ ಅಡ್ಡ ಹಾಕಿರುವ ದಿಮ್ಮಿಯ ಮೇಲೆ ದಾಟುತ್ತಿರುವುದನ್ನು ನಾವು ಕ್ಷೇಮದ ಅಂತರದಿಂದ ನೋಡಬಹುದು ಎಂದು ಸಮಾಧಾನ ಹೇಳಿದ. ಮುಂದಿನ ದಾರಿಯನ್ನು ಕೊಂಚ ಆತಂಕದಲ್ಲೇ ನಡೆದೆವು.

ಸರಸರ ಎನ್ನುವುದು ಪ್ರಾಣಿಯ ಸದ್ದೋ, ಬೀಳುತ್ತಿರುವ ಜಿಟಿಜಿಟಿ ಮಳೆಗೆ ಎಲೆಯ ಸದ್ದೋ ಖಾತರಿಯಾಗಲಿಲ್ಲ. ಕರಡಿಯನ್ನು ನೋಡಬೇಕೆಂಬ ತವಕ, ಆದರೆ ಅದು ಕ್ಷೇಮದ ಅಂತರದಲ್ಲಿರಬೇಕೆಂಬ ಅಪೇಕ್ಷೆ. ಜೀವಭಯ ಮುಕ್ತವಾದ ರೋಮಾಂಚನದ ಆಸೆ. ಒಮ್ಮೆ ನನ್ನ ಬದುಕಲ್ಲಿ ಇಂಥದ್ದೇ ಸ್ವಾರಸ್ಯ ಘಟಿಸಿತ್ತು. ಇಬ್ಬರೂ ವನ್ಯಪ್ರೇಮಿಗಳಾದ್ದರಿಂದ ಹನಿಮೂನಿಗೆ ತೇಕಡಿ ಅರಣ್ಯಕ್ಕೆ ಹೋಗಿದ್ದೆವು.

ಮಧುಚಂದ್ರಯಾತ್ರೆಯಲ್ಲಿ ಇಂಥ ಆಸೆಗಳು ಬರುವುದು ಕೊಂಚ ವಿಚಿತ್ರವೇ. ಅಲ್ಲೊಬ್ಬ ಫಾರೆಸ್ಟ್ ಗಾರ್ಡಿಗೆ ಹುಲಿ ಆನೆ ತೋರಿಸು ಎಂದು ಗಂಟು ಬಿದ್ದಿದ್ದೆವು. ಅವನು ಕಾಡಿನ ಮಧ್ಯೆ ಒಂದು ವಾಚ್‌ಟವರ್‌ನಲ್ಲಿ ಇಡೀ ರಾತ್ರಿ ಕಳೆಯಿರಿ. ಪಕ್ಕದ ಕೊಳದಲ್ಲಿ ನೀರು ಕುಡಿಯಲು ಎಲ್ಲ ಪ್ರಾಣಿಗಳೂ ಬರುತ್ತವೆ.

ಬೆಳದಿಂಗಳ ರಾತ್ರಿಯಲ್ಲಿ ಎಲ್ಲ ಪ್ರಾಣಿಗಳೂ ಕಾಣಿಸುತ್ತವೆ ಎಂದು ಆಮಿಷ ಒಡ್ಡಿದ್ದ. ನಮ್ಮಂತೆಯೇ ಇನ್ನೊಂದು ಮಧುಚಂದ್ರದ ಜೋಡಿಗೂ ಪ್ರಾಣಿಗಳನ್ನು ನೋಡುವ ಕಾಯಿಲೆ ಇತ್ತು. ನಾವು ನಾಲ್ವರನ್ನೂ ಸೂರ್ಯ ಮುಳುಗುವ ಮುನ್ನ ವಾಚ್‌ಟವರ್‌ಗೆ ಬಿಟ್ಟುಕೊಟ್ಟರು. ಅವರು ಹೋದ ಮೇಲೆ ಕರಡಿ ಅಥವಾ ಹುಲಿ ವಾಚ್‌ಟವರ್ ಮೇಲೆ ನಡುರಾತ್ರಿಯಲ್ಲಿ ಹತ್ತಿ ಬಂದರೇನು ಗತಿ ಎಂದು ಹೆದರಿದ್ದೆವು. ಆದರೆ ಒಂದು ಸೊಳ್ಳೆಯೂ ಮೇಲೇರಿ ಬರಲಿಲ್ಲ. ಕಾಡು ಪ್ರಾಣಿಗಳ ದರ್ಶನವಾಗಲಿಲ್ಲ.

ಇಡೀ ರಾತ್ರಿ ಕಾಡನ್ನು ದಿಟ್ಟಿಸಿ ನೋಡಿದ್ದಷ್ಟೇ ಬಂತು. ಹೆಜ್ಜೆಹೆಜ್ಜೆಗೂ ಪ್ರಾಣಿಗಳನ್ನು ನೋಡಲು ಸಾಧ್ಯವಿರುವುದು ಆಫ್ರಿಕಾದ ಕಾಡುಗಳಲ್ಲಿ. ಸಿಂಹವು ನಿಮ್ಮ ಕಾರಿನ ಬಾನೆಟ್ ಮೇಲೇರಿ ಕೂರುವುದು ಅಲ್ಲಿ ಸಾಮಾನ್ಯ. ತಾಂಜಾನಿಯಾದಲ್ಲಿ ಕಣ್ಣು ದಣಿಯುವಷ್ಟು ಪ್ರಾಣಿಗಳನ್ನು ನೋಡಿದ್ದೆ.

ಕ್ರಿಸ್‌ಗೂ ನನಗೂ ಟೊಂಗಾಸ್ ಕಾಡಿನಲ್ಲಿ ಒಂದೇ ಒಂದು ಪ್ರಾಣಿಯೂ ಕಾಣಿಸಲಿಲ್ಲ. ಆ ಬೃಹದಾರಣ್ಯದಲ್ಲಿ ಐದು ಸಾವಿರ ಕರಡಿಗಳು ಎಲ್ಲಿ ಅಲೆದಾಡುತ್ತಿದ್ದವೋ, ಏನು ಕತೆಯೋ. ನಾವೇನು ಛಾನ್ಸ್ ಕೇಳಿಕೊಂಡು ಬರುವ, ಫೋಟೊಗೆ ಹಲ್ಲು ಕಿಸಿಯುವ, ಹೊಸ ಕಲಾವಿದರಲ್ಲ ಎಂಬಂತೆ ನಾಪತ್ತೆಯಾಗಿದ್ದವು. ಪ್ರವಾಸಿಗರ ಕ್ಯಾಮೆರಾಗಳಿಗೆ ಪೋಸ್ ಕೊಟ್ಟೂ ಕೊಟ್ಟೂ ಅವಕ್ಕೂ ಬೇಸರವಾಗಿರಬೇಕು. ಕಣ್ಮರೆಯಾಗಿದ್ದವು.

ನಮಗೂ ದಣಿವಾಗಿತ್ತು. ಕಾಡಿನ ಮಧ್ಯೆಯೂ ಒಂದು ವಿಶ್ರಾಂತಿ ತಾಣ, ಸಣ್ಣ ರೆಸ್ಟೊರೆಂಟ್, ಶೌಚಾಲಯ ಕಂಡವು. ಇಬ್ಬರೂ ಹಾಟ್ ಚಾಕೊಲೇಟ್ ಕುಡಿದೆವು. ಆಯಾಸ ಪರಿಹಾರವಾಯಿತು. ಕಾಡಿಗೆ ಬಂದು ಒಂದೇ ಒಂದು ಪ್ರಾಣಿಯನ್ನೂ ನೋಡಲಾಗಲಿಲ್ಲ ಎಂದು ಬೇಸರವಾಗುತ್ತಿದೆ ಎಂದು ಲೊಚಗುಟ್ಟಿದೆ. ಕ್ರಿಸ್‌ಗೂ ಬೇಸರವಾಯಿತೆಂದು ಕಾಣುತ್ತದೆ.

ನಿರಾಶನಾಗಬೇಡ, ಇಲ್ಲೇ ಪಕ್ಕದಲ್ಲಿ ಅಲಾಸ್ಕ ವೈಲ್ಡ್‌ಲೈಫ್ ಫೌಂಡೇಶನ್ ಸಿಬ್ಬಂದಿ ಸಣ್ಣ ಮೃಗಾಲಯವನ್ನು ನಿನ್ನಂಥವರಿಗಾಗಿ ಇಟ್ಟುಕೊಂಡಿದ್ದಾರೆ. ಅಲ್ಲಿ ಕೆಲವು ಪ್ರಾಣಿಗಳು ಸಿಕ್ಕೇ ಸಿಗುತ್ತವೆ ಬಾ ಎಂದು ಕರೆದುಕೊಂಡು ಹೋದ. ಅಲ್ಲಿ ಮಹಿಳೆಯೊಬ್ಬಳು ಗೂಬೆಯಂಥ ಪಕ್ಷಿಯನ್ನು ಸಾಕಿದ್ದಳು. ಅದು ಗೂಬೆಯೋ, ಅದರ ನೆಂಟನೋ ಹೇಳಲರಿಯೆ. ಆದರೆ ಆಕೆ ಅದನ್ನು ಹೆತ್ತ ಮಗುವಿನಂತೆ ಮುದ್ದಾಡುತ್ತಿದ್ದಳು.

ಅವಳು ಅದನ್ನು ಬಲಗೈನಲ್ಲಿ ಎತ್ತಿ ಹಿಡಿದು ತನ್ನ ಮುಖದ ನೇರಕ್ಕೆ ತಂದಳು. ಗೂಬೆಯ ಮುಖ ಮತ್ತು ಅವಳ ಮುಖ ಎರಡನ್ನೂ ನೋಡಿದೆ. ಗೂಬೆ ಕಣ್ಣರಳಿಸಿ ಉತ್ಸಾಹದಿಂದ ನೋಡುತ್ತಿತ್ತು. ಅವಳೋ ಕಣ್ಣು ಮುಚ್ಚಿ ಗೂಬೆಕಳೆ ಹೊತ್ತಿದ್ದಳು. ಚಿತ್ರ ತೆಗೆದೆ. ಇಬ್ಬರಲ್ಲಿ ಯಾರು ನಿಜವಾದ ಗೂಬೆ ಎಂಬ ಸಂಶಯ ಬರುವಂತಿದೆ ಆ ಚಿತ್ರ. ಕರಡಿಗಾಗಿ ಕಾಯ್ದರೆ ಗೂಬೆಯಾದರೂ ಸಿಕ್ಕಿತಲ್ಲ ಎಂದು ಸಮಾಧಾನಪಟ್ಟುಕೊಂಡೆ. ನೀನು ಒಂದು ವಾರ ಬಿಡುವು ಮಾಡಿಕೊಂಡರೆ ಅಲಾಸ್ಕದಲ್ಲಿರುವ ಎಲ್ಲ ಪ್ರಾಣಿಗಳನ್ನೂ ತೋರಿಸಬಲ್ಲೆ ಎಂದ ಕ್ರಿಸ್. ಮುಂದಿನ ವಾರ ಆದರೆ ಬರ್ತೀನಿ ಎಂದೆ.

ಐದು ನಿಮಿಷ ಮುಂಚೆಯೇ ಬಂದರು ಕಟ್ಟೆಗೆ ಬಂದೆ. ಆಗಲೇ ಎಲ್ಲ ಪ್ರಯಾಣಿಕರು ಹಡಗನ್ನೇರಿದ್ದರು. ನಾನೇ ಕೊನೆಯವ. ಕೆಟ್‌ಚಿಕಾನ್ ಊರನ್ನು ಕಣ್ತುಂಬಿಕೊಳ್ಳತೊಡಗಿದೆ. ನಮ್ಮವರು ಮನಸ್ಸು ಮಾಡಿದರೆ ಕಾರವಾರವನ್ನೂ ಹೀಗೇ ಇರಿಸಿಕೊಳ್ಳಬಹುದು. ಊರ ಬದಿಗೊಂದು ಕಡಲು, ಕಡಲ ಬದಿಗೊಂದು ಪರ್ವತಶ್ರೇಣಿ, ಸದಾ ಸುರಿವ ಮಳೆ, ರುಚಿಕಟ್ಟಾದ ಮೀನು, ಇಲ್ಲಿರುವ ಸಿದ್ಧಿ, ಹಾಲಕ್ಕಿಗಳಂತೆ ಅಲ್ಲಿರುವ ಟ್ಲಿಂಗೆಟ್, ಹಾಯ್‌ಡ, ಟ್ರಿಮ್‌ಶಿಯಾನ್ ಬುಡಕಟ್ಟುಗಳು. ಎಷ್ಟೊಂದು ಸಮಾನ ಅಂಶಗಳಿವೆ !

ಇಲ್ಲದಿರುವ ಏಕೈಕ ಅಂಶವೆಂದರೆ ಇಚ್ಛಾಶಕ್ತಿ. ಅವರು ಕಾಡನ್ನು ಇರಿಸಿಕೊಂಡಷ್ಟು ಸ್ವಚ್ಛವಾಗಿ ನಾವು ಊರನ್ನೂ ಇರಿಸಿಕೊಂಡಿಲ್ಲ. ಎಲ್ಲದಕ್ಕೂ ಜನಸಂಖ್ಯೆಯತ್ತ ಬೊಟ್ಟು ಮಾಡಿ ಪಲಾಯನವಾದಿಗಳಾಗುತ್ತೇವೆ. ತಪ್ಪಿಸಿಕೊಳ್ಳಲು ಭವ್ಯ ಭಾರತದಲ್ಲಿ ಅದೆಂಥ ಅದ್ಭುತ ಪದ ಸಂಪತ್ತಿದೆ !

ಗ್ಯಾಂಗ್‌ವೇನವರು ಮೇಲೆ ಬಾ ಎಂದು ಕರೆದರು. ಕೊಡೆ ಮಡಿಚಿ ಹಡಗಿನೊಳಕ್ಕೆ ಹೊರಟೆ. ಸಾವಕಾಶವಾಗಿ ಹಡಗು ತೀರ ತೊರೆಯಿತು. ಕಾಡಿನೊಳಗಿನದು ಒಂದು ಪ್ರಪಂಚವಾದರೆ ಹಡಗೇ ಇನ್ನೊಂದು ಪ್ರಪಂಚ. ಸರಸರನೆ ಮೇಲ್ತುದಿಗೆ ಹೋಗಿ ಕೆಟ್‌ಚಿಕಾನ್‌ನ ಪರಮಾದ್ಭುತ ದೃಶ್ಯಗಳನ್ನು ಗಮನಿಸತೊಡಗಿದೆ.

ಅದು ಮೌನದಲ್ಲಿ ಮರೆಯುತ್ತಿದ್ದರೆ ಹಡಗಿನೊಳಗೆ ಮನುಷ್ಯರ ಗೌಜು ಗದ್ದಲಗಳು ತಲೆಚಿಟ್ಟು ಹಿಡಿಸುವಂತಿದ್ದವು. ಸುತ್ತಣ ಸಣ್ಣ ದ್ವೀಪಗಳು ಗೋಚರಿಸಿದವು. ಗ್ರವಿನಾ ದ್ವೀಪದ ಪುಟಾಣಿ ಏರ್‌ಪೋರ್ಟ್ ಎಡಕ್ಕೂ, ಟೊಂಗಾಸ್ ಹೆದ್ದಾರಿ ಬಲಕ್ಕೂ ಮಲಗಿದ್ದವು. ಕೆಟ್‌ಚಿಕಾನ್ ಕಣ್ಮರೆಯಾಗುವವರೆಗೂ ಮೇಲಿನ ಡೆಕ್‌ನಲ್ಲೇ ಇದ್ದೆ. ಆ ಚಿತ್ರಿಕೆಯನ್ನು ಇನ್ಯಾವುದಕ್ಕೂ ಹೋಲಿಸುವುದು ಅಸಂಭವ ಎನಿಸಿ ಹಾಗೆಯೇ ಮನೋಭಿತ್ತಿಯಲ್ಲಿ ಇರಿಸಿಕೊಂಡಿದ್ದೇನೆ. ಅನುಪಮ ಎನ್ನುತ್ತಾರಲ್ಲ ಹಾಗೆ, ಹೋಲಿಕೆಯಿಲ್ಲದ ಸೊಗಸೊಂದು ನನ್ನೊಳಗೆ ಸ್ಥಾಯಿಯಾಯಿತು.            
(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT