ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಂತರೆಂಬ ವಟವೃಕ್ಷದ ನೆರಳಿಗೆ...

ಅಕ್ಷರ ಗಾತ್ರ

1973ರ ಅಕ್ಟೋಬರ್ ತಿಂಗಳ ಒಂದು ದಿನ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕೋಟ ಶಿವರಾಮ ಕಾರಂತರು ಮತ್ತು ಬಿ.ವಿ. ಕಾರಂತರ ನೇತೃತ್ವದಲ್ಲಿ `ಭೀಷ್ಮ ವಿಜಯ' ಪ್ರದರ್ಶನ. ನಾನಾಗ ಯಕ್ಷಗಾನ ಕೇಂದ್ರದ ವಿದ್ಯಾರ್ಥಿ. ಆ ತಂಡದಲ್ಲಿ ಭಾಗವಹಿಸುವ ಮಟ್ಟಕ್ಕೆ ನಾನು ಬೆಳೆದಿರಲಿಲ್ಲ. ಚಾರಿತ್ರಿಕವಾಗಿ ಅದೊಂದು ಮುಖ್ಯ ಪ್ರದರ್ಶನ ಎನಿಸಿದ್ದರಿಂದ ನಾನು ಕೇಳಿದಷ್ಟು ಸಂಗತಿಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ.

ಇ. ಅಲ್ಕಾಝಿಯವರು ಆಗ `ಎನ್‌ಎಸ್‌ಡಿ'ಯ ನಿರ್ದೇಶಕರು. ಅಂದಿನ `ಭೀಷ್ಮವಿಜಯ' ಡ್ಯಾನ್ಸ್ ಡ್ರಾಮಾದಲ್ಲಿ ರಾಜ್‌ಬಬ್ಬರ್ ಕೂಡ ಪಾತ್ರ ನಿರ್ವಹಿಸಿದ್ದರಂತೆ. ಅಂಬೆಯ ಪಾತ್ರಕ್ಕೆ ಜೀವ ತುಂಬಿದವರು ಪ್ರಸಿದ್ಧ ಅಭಿನೇತ್ರಿ, ಅಟೆನ್ ಬರೊ `ಗಾಂಧಿ'ಯ ಕಸ್ತೂರಬಾ ಖ್ಯಾತಿಯ ರೋಹಿಣಿ ಹಟ್ಟಂಗಡಿ. ಕಿರಾತನಾಗಿ ಕಾಣಿಸಿದವರು ಪ್ರಸಿದ್ಧ ರಂಗ ನಿರ್ದೇಶಕ ರತನ್ ಥಿಯಾಂ. ಉಳಿದ ಪಾತ್ರಗಳನ್ನು ಯಾರ‌್ಯಾರೆಲ್ಲ ನಿರ್ವಹಿಸಿದ್ದರೆಂದು ನನಗೆ ಗೊತ್ತಿಲ್ಲ. ಕಾರಂತರೊಂದಿಗೆ ಯಕ್ಷಗಾನದ ಹೆಜ್ಜೆಗಳನ್ನು ಕಲಿಸಲು ಗುರು ಹೆರಂಜಾಲು ವೆಂಕಟರಮಣ ಗಾಣಿಗರು ಇದ್ದರು. ಭಾಗವತಿಕೆಗೆ ಐರೋಡಿ ರಾಮ ಗಾಣಿಗರು. ಮದ್ದಲೆವಾದನಕ್ಕೆ ಹಿರಿಯಡಕ ಗೋಪಾಲ ರಾಯರು. ಚೆಂಡೆಗೆ ಬ್ರಹ್ಮಾವರ ಅನಂತರವರು.

ಹೀಗೊಂದು ಕಾರ್ಯಕ್ರಮ ದೆಹಲಿಯಲ್ಲಿ ನಡೆಯುತ್ತಿರುವುದು ವಿದ್ಯಾರ್ಥಿಗಳಾಗಿದ್ದ ನಮಗೆ ಗೊತ್ತಾದದ್ದೇ ಆ ಸಮಯದಲ್ಲಿ ಕೇಂದ್ರದಲ್ಲಿ ಮೂವರ ಬದಲಿಗೆ ಇಬ್ಬರೇ ಗುರುಗಳಿದ್ದ ಕಾರಣಕ್ಕಾಗಿ. ಹಿರಿಯಡಕ ಗೋಪಾಲ ರಾಯರ ಬೋಧನೆಯ ಅವಧಿಯನ್ನು ವೀರಭದ್ರ ನಾಯಕರು ಮತ್ತು ನೀಲಾವರ ರಾಮಕೃಷ್ಣಯ್ಯನವರು ಬಳಸಿಕೊಳ್ಳುತ್ತಿದ್ದರು. ಭಾಗವತ ನೀಲಾವರ ರಾಮಕೃಷ್ಣಯ್ಯನವರು ಸ್ವತಃ ಮದ್ದಲೆ ನುಡಿಸಿಕೊಂಡು ಹಾಡುತ್ತಿದ್ದರು. ಅವರು ಬಡಗುತಿಟ್ಟು ಭಾಗವತಿಕೆಯ ಮಾರ್ಗಪ್ರವರ್ತಕರಲ್ಲೊಬ್ಬರಾದ ಕುಂಜಾಲು ಶೇಷಗಿರಿ ಕಿಣಿಯವರಿಗೆ ಮೇಳದಲ್ಲಿ ಮದ್ದಲೆ ಸಾಥಿ ನೀಡುತ್ತಿದ್ದರೆಂದು ಗೊತ್ತಾದುದು ಆಗಲೇ. ವೀರಭದ್ರ ನಾಯಕರು ಗುರುವಾಗಿ ನೃತ್ಯಾಭಿನಯಗಳ ಬೋಧಿಸುತ್ತಿದ್ದ ಪರಿಯನ್ನು ಕಂಡ ನನಗೆ ಅವರ ವೇಷಗಾರಿಕೆಯನ್ನು ನೋಡಿ ಆನಂದಿಸಬೇಕೆಂದು ಅನ್ನಿಸತೊಡಗಿತ್ತು.

ಹಾಗೊಂದು ಸಂದರ್ಭವೂ ಒದಗಿ ಬಂತು. `ಪಠದ ಸಂಧಿ'ಯ ಲವಕುಶ ಕಾಳಗ ಪ್ರಸಂಗ. ವೀರಭದ್ರ ನಾಯಕರದ್ದು ರಾಮನ ಪಾತ್ರ. ಕುಳಿತ ಮಂಚ ಅಲುಗಾಡಿ, ಕುಳಿತ ರಾಮನೂ ಅತ್ತಿತ್ತ ಓಲಾಡುವ ಅಭಿನಯವನ್ನು ವೀರಭದ್ರ ನಾಯಕರು ರಂಗದ ಮೇಲೆ ಎಷ್ಟೊಂದು ಅದ್ಭುತವಾಗಿ ಪ್ರಸ್ತುತಪಡಿಸಿದರೆಂದರೆ... ಅದು ಇವತ್ತಿಗೂ ನನ್ನ ಕಣ್ಣಮುಂದಿದೆ. ನಾನು ಮಾತ್ರವಲ್ಲ, ನೋಡಿದವರೆಲ್ಲ ಬೆರಗಾಗುವಂತೆ.
ಅವರ ವೇಷವೈಭವವನ್ನು ಮೆಚ್ಚಿಕೊಂಡವರು, `ಯಕ್ಷರಂಗ'ದ ಯಕ್ಷಗಾನ ಪ್ರಯೋಗಗಳಲ್ಲಿ ಬಳಸಿಕೊಳ್ಳುವ ಬಗ್ಗೆ ಯೋಚನೆ ಮಾಡಿದರೂ ವೀರಭದ್ರನಾಯಕರಿಗೆ ಅದರಲ್ಲಿ ಭಾಗವಹಿಸುವ ಆಸಕ್ತಿ ಇದ್ದಂತಿರಲಿಲ್ಲ. ಯಕ್ಷಗಾನದ ಸಾಂಪ್ರದಾಯಿಕ ಚೌಕಟ್ಟಿನಾಚೆಗೆ ಸರಿಯಲು ಅವರಿಗೆ ಸಹಮತವಿರಲಿಲ್ಲವೆಂದು ತೋರುತ್ತದೆ. ಅಲ್ಲದೆ, ವೃತ್ತಿಪರ ಮೇಳದ ತಿರುಗಾಟ ಅವರನ್ನು ಮತ್ತೆ ಸೆಳೆದಿರಬೇಕು. `ಇನ್ನು ನಾನಿಲ್ಲಿ ನಿಲ್ಲುವವನಲ್ಲ' ಎಂದು ನಿರ್ಧರಿಸಿಬಿಟ್ಟಿದ್ದರು.

ಯಕ್ಷಗಾನ ಕೇಂದ್ರದ ಮಹಾಪೋಷಕರಾದ ಡಾಕ್ಟರ್ ತೋನ್ಸೆ ಮಾಧವ ಅನಂತ ಪೈಗಳನ್ನು ನಾನು ನೋಡಿದ್ದು ದೂರದಿಂದ. ಸಾವಿರಾರು ಮಂದಿಯ ಅನ್ನದಾತರೆಂದಷ್ಟೇ ಅವರ ಬಗ್ಗೆ ಗೊತ್ತಿತ್ತು. ಅವರು ಕೇಂದ್ರಕ್ಕೆ ಬಂದಾಗಲೆಲ್ಲ ಗೌರವದಿಂದ ಎದ್ದು ನಿಲ್ಲುತ್ತಿದ್ದೆವು. ಅವರಿಗೆ ವೀರಭದ್ರ ನಾಯಕರ ಮೇಲೆ ತುಂಬ ಅಭಿಮಾನ. ರಾಷ್ಟ್ರ ಪ್ರಶಸ್ತಿ ಪಡೆದವರೆಂಬ ಮೆಚ್ಚುಗೆ. ಯಕ್ಷಗಾನ ಕೇಂದ್ರಕ್ಕೆ ಡಾಕ್ಟರ್ ಪೈಗಳು ವೀರಭದ್ರ ನಾಯಕರೊಂದಿಗೆ ಬಂದಾಗಲೆಲ್ಲ ಕೊಂಕಣಿಯಲ್ಲಿ ಮಾತನಾಡುತ್ತಿದ್ದರು. ಅವರು, ಅವರ ಸಂಭಾಷಣೆಯನ್ನು ವಿಸ್ಮಯದಿಂದ ನೋಡುತ್ತಿದ್ದೆವು.  ನಾಯಕರು ಕೇಂದ್ರದಿಂದ ಒಂಟಿಯಾಗಿ ಹೊರಟು ನಿಂತಿದ್ದರು. ನಮ್ಮ ಕಲಿಕೆಯ ಅವಧಿಯೂ ಮುಗಿದು ನಾವೂ ಗುರುಗಳೊಂದಿಗೆ ಕೇಂದ್ರಕ್ಕೆ ವಿದಾಯ ಹೇಳಲು ಸಿದ್ಧರಾಗಿದ್ದೆವು. ಮುಂದೆ, ಹೆರಂಜಾಲು ವೆಂಕಟರಮಣ ಗಾಣಿಗರು ಕೇಂದ್ರದಲ್ಲಿ ನಾಟ್ಯ ಗುರುಗಳಾಗಿ ಸೇರಿಕೊಂಡರು. ನಾನು ನನ್ನ ಬಟ್ಟೆಬರೆಗಳನ್ನು ಮೂಟೆ ಕಟ್ಟಿ ಯಥಾಪ್ರಕಾರ ಗುಂಡಿಬೈಲು ನಾರಾಯಣ ಶೆಟ್ಟರ ಮನೆಗೆ ಮರಳಿದೆ.

ದೀಪಾವಳಿ ಬಳಿಕದ ಒಂದು ದಿನ ವೀರಭದ್ರ ನಾಯಕರು ನಾರಾಯಣ ಶೆಟ್ಟರ ಮನೆಗೆ ಬಂದಿದ್ದರು. ಯಕ್ಷಗಾನ ಕೇಂದ್ರದ ಗುರುತ್ವವನ್ನು ತೊರೆದು ವೃತ್ತಿಪರ ಮೇಳ ಸೇರುವ ಬಗ್ಗೆ ಶೆಟ್ಟರಲ್ಲಿ ಮಾತನಾಡಿದರು. `ಸಂಜೀವನೂ ನನ್ನ ಜೊತೆ ಬರಲಿ. ಮೇಳದಲ್ಲಿ ಹೆಚ್ಚಿನದನ್ನು ಕಲಿಯಬಹುದು' ಎಂದೂ ಸೇರಿಸಿಬಿಟ್ಟರು. ಆದರೆ, ನನಗೇಕೋ ಅಳುಕು. `ಬೇಡ' ಎಂದೆ ನಯವಾಗಿ. `ರಾಮನಾರಿಯೂ ಬರುತ್ತಾನೆ' ಎಂದು  ಹೇಳಿದಾಗ ನಾನು ಒಪ್ಪಿದೆ.

ಸಾಲಿಗ್ರಾಮ ಗುರುನರಸಿಂಹ ಪ್ರಸಾದಿತ ಯಕ್ಷಗಾನ ಮಂಡಲಿ ನಾನು ವೃತ್ತಿಪರವಾಗಿ ಅನುಭವವನ್ನು ಪಡೆದ ಮೊದಲ ಮೇಳ. ನಾನು ಅರ್ಧ ವರ್ಷದ ತಿರುಗಾಟ ನಡೆಸಿದ್ದು ಅದೊಂದೇ ಮೇಳದಲ್ಲಿ. ವೀರಭದ್ರ ನಾಯಕರು ನನ್ನನ್ನೂ ರಾಮನಾರಿಯನ್ನೂ ಕರೆದು ದೇವರ ಮುಂದೆ ಗೆಜ್ಜೆ ಕಟ್ಟಲು ಅನುವಾದರು. `ಈಗಾಗಲೇ ಗುರುಗಳಾದ ಮಾರ್ಗೋಳಿ ಗೋವಿಂದ ಸೇರೆಗಾರರ ಸಮಕ್ಷಮದಲ್ಲಿ ಒಮ್ಮೆ ಗೆಜ್ಜೆ ಕಟ್ಟಿಯಾಗಿದೆ' ಎಂದೆ ಮೆಲುದನಿಯಲ್ಲಿ. `ಅಡ್ಡಿಯಿಲ್ಲ, ಇಲ್ಲಿ ದೇವರ ಮುಂದೆ ಮತ್ತೊಮ್ಮೆ ಗೆಜ್ಜೆ ಕಟ್ಟಿದರೆ ತಪ್ಪಿಲ್ಲ' ಎಂದು ಗೆಜ್ಜೆಯನ್ನು ಎತ್ತಿ ಕೊಟ್ಟರು. ನಾನು ಕೈಯೊಡ್ಡಿ ಗೆಜ್ಜೆಯನ್ನು ಪಡೆದು ದೇವರಿಗೂ ಗುರುಗಳಿಗೂ ನಮಸ್ಕರಿಸಿ ಕಾಲಿಗೆ ಕಟ್ಟಿಕೊಂಡೆ.ಕೈಯ ಬೊಗಸೆಯೊಳಗೆ ಮೌನವಾಗಿದ್ದವು ಗೆಜ್ಜೆಗಳು. ಕಾಲಿಗೆ ಸುತ್ತಿಕೊಂಡ ಮೇಲೆ ಕೊಂಚ ಅಲುಗಿದರೂ ಕಿಣಿ ಕಿಣಿ ಕಿಣಿ ಕಿಣಿ ದನಿ.
                                                                                 
                                                                         ***

ಗೆಜ್ಜೆಗಳು, ತಮ್ಮನ್ನು ನುಡಿಸುವವರನ್ನು ಕಾಯುತ್ತ ಕುಳಿತಂತೆ, ಸರಸ್ವತಿಯ ಚಿತ್ರದ ಮುಂದೆ ಮೌನವಾಗಿ ಇದ್ದವು. ಚಿತ್ರದ ಸಮೀಪದಲ್ಲಿ ಗುರು ಮಾರ್ಗೋಳಿ ಗೋವಿಂದ ಸೇರೆಗಾರರು ಕುಳಿತಿದ್ದರು. ಅವರ ಮುಂದೆ ಇಬ್ಬರು ತೆರೆ ಹಿಡಿದು ನಿಂತಿದ್ದರು. ತೆರೆಯ ಮುಂದೆ ಒಂದೆರಡು ಸೇರು ಭತ್ತದ ರಾಶಿ.

ನನಗಾಗ ಹದಿಮೂರು- ಹದಿನಾಲ್ಕರ ಹರೆಯ. ಅಂದರೆ, 1968ರ ಆಸುಪಾಸು.ನಾನು ಭತ್ತದ ರಾಶಿಯ ಮೇಲೆ ಪಾದಗಳನ್ನಿಟ್ಟು ಕುಣಿಯಲು ಗುರುಗಳ ಆದೇಶವನ್ನೇ ಕಾಯುತ್ತಿದ್ದೆ. ಗುರುಗಳು ಗಣಪತಿಯನ್ನು ಪ್ರಾರ್ಥಿಸಿ ಬಾಯಿತಾಳ ಹೇಳಲಾರಂಭಿಸಿದರು. ನಾನೂ ಬಾಯಿತಾಳ ಹೇಳುತ್ತ ಭತ್ತದ ಕಾಳುಗಳ ಮೇಲೆ ಹೆಜ್ಜೆ ಹಾಕಲಾರಂಭಿಸಿದೆ. ಕುಣಿಯಬೇಕು... ಎಷ್ಟು ಹೊತ್ತಿನವರೆಗೆ ಕುಣಿಯಬೇಕು? ಭತ್ತ ಹೋಗಿ ಅಕ್ಕಿಯಾಗುವವರೆಗೂ ಕುಣಿಯಬೇಕು! ನಡುವೆ ಇದ್ದ ತೆರೆಯ ಅಂಚನ್ನು ಕುಳಿತಲ್ಲಿಂದಲೇ ಕೊಂಚ ಎತ್ತಿ ಭತ್ತ ಅಕ್ಕಿಯಾಗಿದೆಯೇ ಎಂದು ಗುರುಗಳು ಪರಿಶೀಲಿಸುತ್ತಿದ್ದರು.

ಹಾಗಾದ ಕೂಡಲೇ ಗುರುಗಳು, `ಸಾಕು' ಎಂದರು. ನಾನು ನಿಲ್ಲಿಸಿದೆ. ಗುರುಗಳು ಎದ್ದು ನಿಂತು ತೆರೆಯ ಮೇಲಿನ ಅಂಚನ್ನು ಬಾಗಿಸಿ ಸರಸ್ವತಿಯ ಚಿತ್ರದ ಮುಂದೆ ಇದ್ದ ಗೆಜ್ಜೆಯನ್ನು ಎತ್ತಿಕೊಟ್ಟರು. ತೆರೆ ತೆಗೆಯಲಾಯಿತು. ನಾನು ದೇವರಿಗೂ ಗುರುಗಳಿಗೂ ನಮಸ್ಕರಿಸಿದೆ. ಗುರುಗಳ ಸೂಚನೆಯಂತೆ, ಗೆಜ್ಜೆ ಸರಪಣಿಯ ಒಂದು ತುದಿಯನ್ನು ಕಾಲಿನ ಹೆಬ್ಬೆರಳಿಗೆ ಸುತ್ತಿ, ಒತ್ತಿ ಹಿಡಿದು, ಪ್ರದಕ್ಷಿಣಾಕಾರವಾಗಿ ಕಾಲಿಗೆ ಸುತ್ತಲಾರಂಭಿಸಿದೆ. ಅದನ್ನು ಕಟ್ಟುವ ಕ್ರಮವೂ ವಿಶಿಷ್ಟವಾಗಿದೆ. ಅಲ್ಲಿ `ಸರಸ್ವತಿ ಗಂಟು' ಎಂಬ ಪವಿತ್ರ ಗಂಟನ್ನು ಹಾಕಿಕೊಳ್ಳುವುದು ಸಂಪ್ರದಾಯ. ಮುಂದೆ, ನಾನು ಚೆಂಡೆ-ಮದ್ದಲೆಗಳ ಮುಚ್ಚುಗೆ ಹಾಕಲು ಕಲಿತ ಮೇಲೆ, ಈ ಗಂಟಿನ ಮಹತ್ವ ಗೊತ್ತಾಯಿತು. ಹೀಗೆ ಪವಿತ್ರ ಗಂಟು ಹಾಕಿಕೊಳ್ಳುವುದೊಂದು ಸಂಪ್ರದಾಯವಷ್ಟೇ ಅಲ್ಲ, ಕೌಶಲವೂ ಹೌದು.

ಗೆಜ್ಜೆ ಕಟ್ಟಿ ಸಿದ್ಧನಾದೆ. ಗುರುಗಳು ದೇವರ ಮುಂದಿದ್ದ ಕುಂಕುಮದಲ್ಲಿ ಅದ್ದಿದ ಬೆರಳ ತುದಿಯನ್ನು ನನ್ನ ಭ್ರೂಮಧ್ಯಕ್ಕೆ ಸ್ಪರ್ಶಿಸಿದರು. ಆವರೆಗೂ ಪಾದಗಳನ್ನು ಘಾತಿಸಿ ಕಲಿಸುತ್ತ್ದ್ದಿದ ಗುರುಗಳು ತಮ್ಮೆರಡೂ ಕೈಗಳನ್ನು ನೆಲಕ್ಕೆ ಲಯಬದ್ಧವಾಗಿ ಬಡಿಯುತ್ತ ಹೇಳಿಕೊಡತೊಡಗಿದರು. ನಾನು ಅವರ ಹಸ್ತಗಳ ಮುಂದೆ ಹೆಜ್ಜೆ ಹಾಕತೊಡಗಿದೆ... ತದ್ದಿಮಿ ತಕಧಿಮಿ ತದ್ದಿಮಿ ತಕಧಿಮಿ!
`ಗೆಜ್ಜೆ ಕಟ್ಟುವುದು' ಆರಾಧನ ಕಲೆಗಳ ಮುಖ್ಯ ಸಂಪ್ರದಾಯಗಳಲ್ಲೊಂದು. ದೇವದಾಸಿಯರಲ್ಲಿಯೂ ಗೆಜ್ಜೆ ಕಟ್ಟುವ ಪದ್ಧತಿ ಇದೆ. ಅದು, ನಾನು ಮೇಲೆ ವಿವರಿಸಿದ ರೀತಿಯನ್ನೇ ಹೋಲುತ್ತದೆ ಎಂಬುದನ್ನು ಅವರಿವರು ಹೇಳುವುದನ್ನು ಕೇಳಿದ್ದೇನೆ.

ನಡೆದಾಡುವಾಗ `ಕಿಣಿ ಕಿಣಿ' ಎನ್ನುವ ಗೆಜ್ಜೆಗಳು ಲಯಬದ್ಧವಾಗಿ ಕುಣಿಯುವಾಗ `ಝಣಕ್ ಝಣಕ್' ಎಂದು ಸದ್ದು ಮಾಡುತ್ತ ಕಲಾ ಸಂಪ್ರದಾಯಕ್ಕೆ ಬದ್ಧವಾಗಿರಬೇಕಾದ ಎಚ್ಚರವನ್ನು ನೆನಪಿಸುತ್ತಿರುತ್ತವೆ.

                                                                        ***
`ಝಣ್ ಝಣ್' ಹೊಮ್ಮುವ ನಾದಕ್ಕೆ ನಾನು ಮೈಮರೆತುಬಿಟ್ಟೆ. `ಬಂದನು ದೇವರು ದೇವಾ' ಎಂದು ಕೆರೆಮನೆ ಮಹಾಬಲ ಹೆಗಡೆಯವರು ಹಾಡುತ್ತಿದ್ದಂತೆ ಬಿರ್ತಿ ಬಾಲಕೃಷ್ಣರವರು ಮದ್ದಲೆಯಲ್ಲಿ ದದ್ದಿನದ್ದಿ ನಕ್ಕದಿನ್ನ ದದ್ದಿನದ್ದಿ ನಕ್ಕದಿನ್ನ ದಿತ್ತೊಂ ಕ್‌ಡ್ತಕ ತತ್ತೊಂ ಕ್‌ಡ್ತಕ... ನುಡಿಸಲಾರಂಭಿಸಿದರು. ನಾನು ಲಯಬದ್ಧವಾಗಿ ಜಿಗಿಯುತ್ತ ಪ್ರವೇಶಿಸಿದೆ. ಮುಂದೆ ಸ್ವತಃ ಮಾಯಾ ರಾವ್ ಇದ್ದರು. ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕಪಿಲಾ ವಾತ್ಸಾಯನರಿದ್ದರು. ನಾಟ್ಯಾಭಿನಯ ಮುಗಿದ ಮೇಲೆ ಎಲ್ಲರೂ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು. ರಂಗವನ್ನು ಪ್ರವೇಶಿಸುವಾಗ ನನ್ನಲ್ಲಿದ್ದ ಭಯವೆಲ್ಲ ಚಪ್ಪಾಳೆಯ ಧ್ವನಿಯೊಂದಿಗೆ ಕರಗಿಹೋಗಿತ್ತು.

ದೆಹಲಿಯಲ್ಲಿ ರೈಲಿನಲ್ಲಿ ಇಳಿದ ನನ್ನನ್ನೂ ಬಿರ್ತಿ ಬಾಲಕೃಷ್ಣರವರನ್ನೂ ಎಳ್ಳಂಪಳ್ಳಿ ವಿಠಲಾಚಾರ್ ಅವರು ಮಾಯಾ ರಾವ್ ಅವರ ಮನೆಗೆ ಕರೆದೊಯ್ದಿದ್ದರು. ಅಲ್ಲಿಂದ ಜರ್ಮನಿ, ಹಾಲೆಂಡ್ ಮುಂತಾದ ದೇಶಗಳಿಗೆ ತೆರಳಬೇಕು. ಟೈಲರಿಂಗ್ ವೃತ್ತಿಗಾಗಿ ಫಾರಿನ್‌ಗೆ ಹೋಗಲು ಪಾಸ್‌ಪೋರ್ಟ್ ಮಾಡಿದ್ದ ನನಗೆ ಅದರ ಪ್ರಯೋಜನ ಈ ರೀತಿಯಲ್ಲಾಗುತ್ತದೆ ಎಂಬ ಊಹೆ ಇರಲಿಲ್ಲ. ಅಲ್ಲಿ, ಕೆರೆಮನೆ ಮಹಾಬಲ ಹೆಗಡೆಯವರನ್ನು ನೋಡಿ ನಾನು ಅಂಜಿದೆ.

ಆದರೆ, ಪ್ರೀತಿಯಿಂದ ನನ್ನನ್ನು ಮಾತನಾಡಿಸಿ ನನ್ನೊಳಗಿದ್ದ ಭಯವನ್ನು ಹೋಗಲಾಡಿಸಿದರು. ವಿದೇಶಗಳಿಗೆ ಹೊರಟ ಭಾರತೀಯ ತಂಡದ ನೇತೃತ್ವವಹಿಸಿದವರು ವಿದುಷಿ ಮಾಯಾರಾವ್. ಜೊತೆಗೆ, ಕಥಕಳಿ, ಭರತನಾಟ್ಯ, ಕೂಚಿಪುಡಿ, ಒಡಿಸ್ಸಿ, ಮಣಿಪುರಿ ಹೀಗೆ ವಿವಿಧ ಪ್ರಕಾರಗಳ ಕಲಾವಿದರು ಅಲ್ಲಿದ್ದರು. ಯಕ್ಷಗಾನವನ್ನು ಪ್ರತಿನಿಧಿಸಲು ನಾವಿದ್ದೆವು. ಒಮ್ಮೆ, ಎಲ್ಲ ತಂಡಗಳ ಪ್ರದರ್ಶನದ ತಾಲೀಮನ್ನು ನೋಡುವ ಅಪೇಕ್ಷೆಯನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರು ವ್ಯಕ್ತಪಡಿಸಿದ್ದರು. ಒಂದೊಂದೇ ಕಲೆಗಳ ಪ್ರದರ್ಶನ ನಡೆಯಿತು. ನಮ್ಮ ಯಕ್ಷಗಾನ ಉಳಿದವುಗಳ ನಡುವೆ ಕಡಿಮೆ ಎನಿಸಲಿಲ್ಲ.

`ನಿಮ್ಮಲ್ಲಿ  ಕೃಷ್ಣನ ಒಡ್ಡೋಲಗ ತುಂಬ ಪ್ರಸಿದ್ಧವಂತೆ. ಒಮ್ಮೆ ನೋಡೋಣ' ಎಂದು ಹೇಳಿದ್ದರಿಂದ ನಾನು ಕೃಷ್ಣನಾಗಿ ಅಭಿನಯಿಸಿದೆ. ನನ್ನ ಚುರುಕು ಹೆಜ್ಜೆಗಾರಿಕೆಯನ್ನು ಗಮನಿಸಿದ ಮಾಯಾ ರಾವ್ ಅವರು, `ಮಣಿಪುರಿ ತಂಡಕ್ಕೊಬ್ಬರ ಅಗತ್ಯವಿದೆ. ನೀನು ಮಾಡುತ್ತೀಯಾ? ಹೆಜ್ಜೆ ಹೇಳಿಕೊಡಲು ವ್ಯವಸ್ಥೆ ಮಾಡುತ್ತೇನೆ' ಎಂದು ಹೇಳಿದರು. ನಾನು `ಸರಿ' ಎಂದೆ. ಛತ್ರಿ ಹಿಡಿದುಕೊಂಡು ಆಗಷ್ಟೇ ಕಲಿತ ಮಣಿಪುರಿಯ ಹೆಜ್ಜೆಗಳೊಂದಿಗೆ ಲಯಬದ್ಧವಾಗಿ ಕುಣಿಯುತ್ತ ಬಂದೆ. ಹಾಗೆಯೇ ಒಡಿಸ್ಸಿ ನೃತ್ಯತಂಡದಲ್ಲಿಯೂ ಒಮ್ಮೆ ರಂಗಕ್ಕೆ ಹೋಗಿಬಂದೆ.

ಯಾವುದನ್ನು ಎಷ್ಟು ಕಲಿತೆ ಎಂಬುದಕ್ಕಿಂತ ಅನ್ಯ ಕಲೆಗಳಿಗೆ ತೆರೆದುಕೊಳ್ಳುವ ವಿಶಾಲ ಮನಸ್ಸನ್ನು ತಂದುಕೊಟ್ಟ ಸಂದರ್ಭವದು. ಮಾಯಾರಾವ್ ತಂಡದೊಂದಿಗೆ ಸೇರಿಕೊಳ್ಳುವ ಭಾಗ್ಯ ಸಿಗದಿರುತ್ತಿದ್ದರೆ ನಾನು ಇಂದಿನಂತೆ ಇರುತ್ತಿರಲ್ಲ್ಲಿಲ. ಈವರೆಗೆ ದೇಶದ ವಿವಿಧ ಕಲೆಗಳನ್ನು ಹತ್ತಿರದಿಂದ ಕಂಡಿದ್ದೇನೆ. ತಾಳ, ಲಯಗಳಲ್ಲಿ ಸಾಕಷ್ಟು ಸಾಮ್ಯಗಳನ್ನು ಗಮನಿಸಿದ್ದೇನೆ. ಒಂದು ಕಲೆಯನ್ನು ಪೂರ್ಣ ಕರಗತ ಮಾಡಿಕೊಂಡವನಿಗೆ ಮತ್ತೊಂದು ಕಲೆಯ ಆಂತರ್ಯವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಲ್ಲ!

                                                                           ***
ನನ್ನ ಆಂತರ್ಯವನ್ನು ಬಲ್ಲವರಂತೆ ಗುಂಡಿಬೈಲು ನಾರಾಯಣ ಶೆಟ್ಟರು ನವಭಾರತ ಪತ್ರಿಕೆಯಲ್ಲಿ ಬಂದ ಜಾಹೀರಾತು- ಸುದ್ದಿಯೊಂದನ್ನು ಓದಿ ಹೇಳಿದರು : `ಶಿವರಾಮ ಕಾರಂತರ ಯಕ್ಷರಂಗಕ್ಕೆ ಕಲಾವಿದರು ಬೇಕಾಗಿದ್ದಾರೆ'.`ಹೇಗೂ ಯಕ್ಷಗಾನ ಕೇಂದ್ರದಲ್ಲಿ ಕಲಿತಾಗಿದೆ. ಮೇಳದಲ್ಲಿ ನಿಲ್ಲುವುದಿಲ್ಲವೆಂದು ಓಡಿ ಬಂದಿದ್ದಿ... ನೀನು ಕಾರಂತರ ತಂಡಕ್ಕೆ ಸೇರುವುದೇ ಒಳ್ಳೆಯದು' ಎಂದರು. `ಸರಿ' ಎಂದೆ.

ಸಂದರ್ಶನದ ದಿನ ತಾವೇ ಕೋಟದ ಶಿವರಾಮ ಕಾರಂತರ ಮನೆಗೆ ನನ್ನನ್ನು ಕರೆದುಕೊಂಡು ಹೋದರು. ಅಲ್ಲಿ ಸಂದರ್ಶನಕ್ಕೆ ಹೊರಗೆ ಕಾದು ಕುಳಿತಿದ್ದೆವು. ಕಾರಂತರು ಬಂದರು. `ಹೋ... ಭಾಗವತರು! ಹೇಗಿದ್ದೀರಿ?' ಎಂದರು ನಾರಾಯಣ ಶೆಟ್ಟರನ್ನು ನೋಡಿ. ಒಂದೆರಡು ವರ್ಷಗಳ ಹಿಂದೆ ಉಡುಪಿಯಲ್ಲಿ ಶಿವರಾಮ ಕಾರಂತರು ಸಂಯೋಜಿಸಿದ ಭಾಗವತಿಕೆಯ ಕಮ್ಮಟದಲ್ಲಿ ನಾರಾಯಣ ಶೆಟ್ಟರು ಕೂಡ ಭಾಗವಹಿಸಿದ್ದರು. ಕಾರಂತರಿಗೆ ಅವರ ಬಗ್ಗೆ ಆದರಾಭಿಮಾನವಿತ್ತು. ಆದರೆ, ನಾರಾಯಣ ಶೆಟ್ಟರು ನನ್ನ ಬಗ್ಗೆ ಏನೂ ಹೇಳದೆ, `ಹುಡುಗನನ್ನು ಸಂದರ್ಶನಕ್ಕೆ ಕರೆದುಕೊಂಡು ಬಂದಿದ್ದೇನೆ' ಎಂದಷ್ಟೇ ಹೇಳಿದರು. `ಸ್ವಂತ ಸಾಮರ್ಥ್ಯದಲ್ಲಿ ಸಂದರ್ಶನವನ್ನು ಗೆಲ್ಲಲಿ' ಎಂಬ ಭಾವ ಅವರಲ್ಲಿದ್ದಿರಬೇಕು. ನಾನು ಮತ್ತು ನನ್ನಂತೆಯೇ ಬಂದಿದ್ದ ಇನ್ನೊಬ್ಬ ಹುಡುಗ ಹಿರಿಯ ಕಲಾವಿದರ ಮುಂದೆ ಹೆಜ್ಜೆ ಹಾಕಿದೆವು. ಪೂರ್ವರಂಗವೂ ಸೇರಿದಂತೆ ವಿವಿಧ ನಾಟ್ಯಗಳನ್ನು ಕಾಣಿಸಿದೆವು.ಮರಳಿದ ಮೇಲೆ ಅವರಿಂದ ಯಾವುದೇ ಕರೆ ಬರಲಿಲ್ಲ. ಸಂದರ್ಶನದಲ್ಲಿ ನಾನು ಅನುತ್ತೀರ್ಣನಾಗಿದ್ದೆ. ಮತ್ತೆ ಆ ಬಗ್ಗೆ ಅನ್ಯಥಾ ಯೋಚಿಸದೆ ಸುಮ್ಮನಾದೆ.

ಮಾಯಾ ರಾವ್ ತಂಡದಲ್ಲಿ ನಾನು ವಿದೇಶಗಳಿಗೆ ಹೋಗಿ ಬಂದ ಮೇಲೆ ಯಕ್ಷಗಾನ ವಲಯದಲ್ಲಿ ಅದೊಂದು ದೊಡ್ಡ ಸುದ್ದಿಯಾಯಿತು. ನಾನು ಠಿಕಾಣಿ ಹೂಡಿದ್ದ ಗುಂಡಿಬೈಲು ನಾರಾಯಣ ಶೆಟ್ಟರ ಮನೆಯ ವಿಳಾಸಕ್ಕೆ ಒಂದು ಕಾರ್ಡು ಬಂತು. ಭಾಗವತ ನೀಲಾವರ ರಾಮಕೃಷ್ಣಯ್ಯನವರ ಪತ್ರವದು. `ಪ್ರೀತಿಯ ಸಂಜೀವನಿಗೆ, ನೀನು ಯಕ್ಷಗಾನ ಕೇಂದ್ರಕ್ಕೆ ಕೂಡಲೇ ಬಂದು ಹೋಗು' ಎಂಬ ಒಕ್ಕಣೆಯಿತ್ತು. ಶಿವರಾಮ ಕಾರಂತರು ಯಕ್ಷಗಾನ ತಂಡವೊಂದನ್ನು ಇಟಲಿಗೆ ಕರೆದೊಯ್ಯುತ್ತಿದ್ದುದರಿಂದ, ಆ ತಂಡದಲ್ಲಿ ಸೇರುವಂತೆ ನನ್ನಲ್ಲಿ ಆಹ್ವಾನಿಸಲಾಗುತ್ತಿದೆ ಎಂದು ಆಮೇಲೆ ಗೊತ್ತಾಯಿತು.

ಅವರು ಸೂಚಿಸಿದ ದಿನ ನಾನು ಹೊರಟು ನಿಂತಾಗ ಕುಂಭದ್ರೋಣ ಮಳೆ. ಉಡುಪಿ ಬಳಿಯ ಕಲ್ಸಂಕ ಮುಳುಗಿ ಹೋಗಿತ್ತು. ಮಾಯಕದ ನೆರೆ ಬಂದಿತ್ತು. ಯಕ್ಷಗಾನ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ ಕಲ್ಸಂಕದ ಬಳಿಗೆ ಬಂದಾಗ ಸಂತ್ರಸ್ತರಾದ ಮನೆಯವರಿಗೆ ನೆರವಾಗುವಲ್ಲಿ ಕೆಲವರು ನಿರತರಾಗಿದ್ದರು. ನಾನು ಕೂಡ ಅವರೊಂದಿಗೆ ಸೇರಿಕೊಂಡೆ. ಕೊಂಚ ಹೊತ್ತು ಕಳೆದ ಬಳಿಕ ಯಕ್ಷಗಾನ ಕೇಂದ್ರಕ್ಕೆ ಹೋಗಬೇಕಾದ್ದು ನೆನಪಾಗಿ ಅವಸರದಿಂದ ಹೊರಟು ನಿಂತೆ. ಸಹೃದಯಿಗಳಾದ ರಾಜಾರಾಮ ಎಂಬುವರು ನನ್ನನ್ನು ಸ್ಕೂಟರ್‌ನಲ್ಲಿ ಯಕ್ಷಗಾನ ಕೇಂದ್ರದವರೆಗೆ ಕರೆತಂದು ಒಳಗೆ ಕರೆದೊಯ್ದರು. `ಬಂದದ್ದು ತಡವಾಯಿತು' ಎಂಬ ಆತಂಕ ನನ್ನ ಮನಸ್ಸಿನಲ್ಲಿಯೂ ಮೂಡಿತ್ತು. ನನ್ನನ್ನು ನೋಡಿದವರೇ, ನೀಲಾವರ ರಾಮಕೃಷ್ಣಯ್ಯನವರು, `ಯಾಕೆ ತಡಮಾಡಿದೆ, ಅವರಿಗೆ ಸಿಟ್ಟು ಬರುತ್ತದೆ' ಎಂದರು. ನನ್ನನ್ನು ಒಳಗೆ ಕರೆದೊಯ್ದಾಗ, `ಈಗ ರಿಹರ್ಸಲ್ ನಡೆಯುತ್ತಿದೆ. ಆಮೇಲೆ ಬರಲಿ' ಎಂದಿತು ನಿಷ್ಠುರವಾದ ಧ್ವನಿ.

ಅಂದಿನ ರಂಗತಾಲೀಮಿನಲ್ಲಿ ಪ್ರಸ್ತುತ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿರುವ ಪ್ರೊಫೆಸರ್ ಮಲ್ಪೆ ಲಕ್ಷ್ಮೀನಾರಾಯಣ ಸಾಮಗರು ಕಾರಂತರ ಮುಂದೆ ಅಭಿನಯಿಸುತ್ತ ಮಾರ್ಗದರ್ಶನ ಪಡೆಯುತ್ತಿದ್ದುದನ್ನು ನೋಡಿದ ನೆನಪು. ಸುತ್ತಲೂ ಹಾರಾಡಿ ಮಹಾಬಲ ಗಾಣಿಗರು, ನಾವುಂದ ಮಹಾಬಲ ಗಾಣಿಗರು, ಉಳ್ತೂರು ಸೀತಾರಾಮನವರು, ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯನವರು, ದಯಾನಂದ ನಾಗೂರರು, ಶಿರಳಗಿ ಭಾಸ್ಕರ ಜೋಶಿಯವರು ಮತ್ತಿತರ ಕಲಾವಿದರು ಮೌನವಾಗಿ ಕುಳಿತಿದ್ದರು.

ರಿಹರ್ಸಲ್ ಮುಗಿದು ನನಗೆ ಕರೆ ಬಂತು. `ಏನು ತಡ? ಸಮಯಪ್ರಜ್ಞೆ ಇಲ್ಲವೆ?' ಮೊದಲ ಪ್ರಶ್ನೆ. `ಕಲ್ಸಂಕದಲ್ಲಿ ನೆರೆ ಬಂದಿತ್ತು. ಅಲ್ಲಿ ಯಾರಿಗೋ ಸಹಾಯ ಮಾಡುತ್ತ ನಿಂತಿದ್ದನಂತೆ. ಹಾಗೆ ತಡವಾಯಿತು' ಯಾರೋ ಹೇಳಿದರು. `ಅದನ್ನೇ ಮಾಡಲಿ... ಇಲ್ಲಿ ಯಾಕೆ ಬಂದದ್ದು' ಧ್ವನಿ ಗಡಸಾಗಿತ್ತು. ಇದನ್ನು ಕೇಳಿದ ನನಗೆ, ಕಾರಂತರ ತಂಡದಲ್ಲಿ ಸೇರುವ ಎರಡನೇ ಪ್ರಯತ್ನವೂ ವಿಫಲವಾಯಿತೆಂಬ ಭಾವನೆ ಬಂತು.

ಪುಣ್ಯವಶಾತ್ ಅಲ್ಲಿಯೇ ಇದ್ದ ಪ್ರೊಫೆಸರ್ ಕು.ಶಿ. ಹರಿದಾಸ ಭಟ್ಟರು, `ಮಾಯಾರಾವ್ ತಂಡದಲ್ಲಿ ವಿದೇಶಕ್ಕೆ ಹೋಗಿಬಂದಿದ್ದಾನೆ. ಚುರುಕಿದ್ದಾನೆ. ನಮ್ಮ ತಂಡದಲ್ಲಿ ಸಹಾಯಕನಾಗಿದ್ದರೆ ಅನುಕೂಲವಾಗುತ್ತದೆ' ಎಂದು ನನ್ನ ಪರವಾಗಿ ಮಾತನಾಡಿದರು. ಕಾರಂತರು `ಹೂಂ' ಎಂದರು.

ಹೊರಗೆ ಬಂದವನೇ ಆನಂದದಿಂದ ಕುಣಿದಾಡಿಬಿಟ್ಟೆ. ಇಟಲಿಯಲ್ಲಿ ಸಾಂಪ್ರದಾಯಿಕ ಶೈಲಿಯ ಪ್ರದರ್ಶನ ನೀಡುವ ತಂಡದಲ್ಲಿ ಒಬ್ಬನಾಗುವ ಅವಕಾಶ ಸಿಕ್ಕಿತು ಎಂಬುದಕ್ಕಾಗಿ ಆ ಆನಂದವಲ್ಲ; ಶಿವರಾಮ ಕಾರಂತರೆಂಬ ವಟವೃಕ್ಷದ ನೆರಳಿನಾಶ್ರಯ ಸಿಕ್ಕಿತಲ್ಲ... ಅದಕ್ಕಾಗಿ!
(ಸಶೇಷ)
ನಿರೂಪಣೆ: ಹರಿಣಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT