ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿಗೆ ವೆನಿಲ್ಲಾ ಐಸ್‌ಕ್ರೀಂ ಅಲರ್ಜಿ!

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇದೊಂದು ಸತ್ಯ ಘಟನೆ. ಅಮೆರಿಕದ ಜನರಲ್ ಮೋಟಾರ್ಸ್‌ ಕಂಪನಿ­ಯವರು ದಾಖಲಿಸಿದ ತಮಾಷೆ­ಯೆನ್ನಿಸುವ ಆದರೆ ವಿಶೇಷ ಅರ್ಥ ನೀಡುವ ಪ್ರಸಂಗ ಇದು. ಒಂದು ದಿನ ಜನರಲ್ ಮೋಟಾರ್ಸ್‌ ಕಂಪನಿಯ ಪಾಂಟಿಯಾಕ್ ವಿಭಾಗದ ಅಧ್ಯಕ್ಷರಿಗೆ ಒಂದು ಪತ್ರ ಬಂತು. ಅದರಲ್ಲಿ ಈ ಕೆಳಕಂಡಂತೆ ಬರೆಯ­ಲಾಗಿತ್ತು.

‘ಇದು ನಾನು ನಿಮಗೆ ಬರೆಯುತ್ತಿರುವ ಎರಡನೇ ಪತ್ರ. ಮೊದಲನೆಯ ಪತ್ರಕ್ಕೆ ನಿಮ್ಮಿಂದ ಉತ್ತರ ಬರಲಿಲ್ಲವೆಂಬ ಬೇಜಾರು ನನಗಿಲ್ಲ. ಯಾಕೆಂದರೆ ನನ್ನ ಪತ್ರದ ವಿಷಯವೇ ಒಂದು ತರಹದ ಮೂರ್ಖತನದ್ದೆನಿಸುತ್ತದೆ. ಈ ಚಳಿಗಾಲ­ದಲ್ಲಿ ಐಸ್‌ಕ್ರೀಂ ತುಂಬ ರುಚಿಯಾಗಿ­ರುತ್ತದೆಂಬುದು ನಿಮಗೆ ತಿಳಿದ ವಿಷಯವೇ. ನಮ್ಮ ಮನೆಯಲ್ಲಿ ರಾತ್ರಿ ಊಟವಾದ ಮೇಲೆ ಯಾವ ಐಸ್‌ಕ್ರೀಂ ತಿನ್ನಬೇಕೆನ್ನುವುದನ್ನು ಮತಕ್ಕೆ ಹಾಕುತ್ತೇವೆ.

ಯಾವ ಐಸ್‌ಕ್ರೀಂ ಎಂಬುದು ತೀರ್ಮಾನವಾದ ತಕ್ಷಣ ನಾವು ಹೊಸದಾಗಿ ಕೊಂಡ ನಿಮ್ಮ ಪಾಂಟಿಯಾಕ್ ಕಾರನ್ನು ತೆಗೆದು­ಕೊಂಡು ಐಸ್‌ಕ್ರೀಂ ಅಂಗಡಿಗೆ ಹೋಗಿ ತರುತ್ತೇವೆ.  ಸಮಸ್ಯೆ ಏನೆಂದರೆ ನಾವು ವೆನಿಲ್ಲಾ ಐಸ್‌ಕ್ರೀಂ ಕೊಂಡುಕೊಂಡ ಮೇಲೆ ಮರಳಿ ಬಂದು ಕಾರು ಪ್ರಾರಂಭಿಸಿದರೆ ಶುರುವೇ ಆಗುವುದಿಲ್ಲ. ವಿಚಿತ್ರವೆಂದರೆ ಬೇರೆ ಐಸ್‌ಕ್ರೀಂ ಕೊಂಡಾಗ ಅಂದರೆ ಸ್ಟ್ರಾಬೆರ್ರಿ ಅಥವಾ ಚಾಕ್‌ಲೇಟ್ ಐಸ್‌ಕ್ರೀಂ ಕೊಂಡಾಗ ಕಾರು ತಕರಾರಿಲ್ಲದೇ ಪ್ರಾರಂಭವಾ­ಗುತ್ತದೆ. ಇದನ್ನು ಹತ್ತಾರು ಬಾರಿ ಪರೀಕ್ಷಿಸಿ ನೋಡಿದ್ದೇವೆ. ವೆನಿಲ್ಲಾ ಐಸ್‌ಕ್ರೀಂ ಕೊಂಡಾಗ ಮಾತ್ರ ಕಾರು ತಕರಾರು ಮಾಡುತ್ತದೆ. ಇದು ಮೂರ್ಖತನದ ಮಾತು.

ಕಾರಿಗೇನು ವೆನಿಲ್ಲಾ ಐಸ್‌ಕ್ರೀಂನ ಅಲರ್ಜಿ ಇರಲಿಕ್ಕಿಲ್ಲ ಎಂಬುದು ನಮಗೂ ತಿಳಿ­ದಿದೆ. ಆದರೆ ಇದು ವಾಸ್ತವ. ದಯವಿಟ್ಟು ಪರೀಕ್ಷಿಸಿ ಸಮಸ್ಯೆಯನ್ನು ಪರಿಹರಿಸಬೇಕಾಗಿ ಕೇಳುತ್ತೇನೆ’. ಕಂಪನಿಯ ಅಧ್ಯಕ್ಷರಿಗೆ ಇದೊಂದು ತಮಾಷೆಯ ವಿಷಯವಾದರೂ ಅದನ್ನು ಉಪೇಕ್ಷೆ ಮಾಡದೇ ಒಬ್ಬ ಎಂಜಿನಿಯರ್‌ನನ್ನು ಕಳುಹಿಸಿ­ಕೊಟ್ಟರು. ಅವನು ಎಂಜನಿಯರ್ ಆಗಿದ್ದರಿಂದ ತರ್ಕದಿಂದಲೇ ಯೋಚಿಸಿ ಇದು ಪರಿವಾರದವರದೇ ಏನೋ ಕಿತಾಪತಿ ಇರಬೇಕು ಎಂದುಕೊಂಡ.

ಮೊದಲನೇ ರಾತ್ರಿ ಅವನೂ ಕಾರಿನಲ್ಲಿ ಹೋದ. ಅವರು ಚಾಕಲೇಟ್ ಐಸ್‌ಕ್ರೀಂ ಕೊಂಡರು. ಕಾರು ತಕ್ಷಣ ಪ್ರಾರಂಭ­ವಾಯಿತು. ಮರುದಿನ ಸ್ಟ್ರಾಬೆರ್ರಿ ಐಸ್‌ಕ್ರೀಂ ಪಾಳಿ. ಅಂದೂ ಕಾರು ತಕರಾರಿಲ್ಲದೇ ಶುರುವಾಯಿತು. ಮೂರನೆಯ ರಾತ್ರಿ ವೆನಿಲ್ಲಾ ಸ್ಟ್ರಾಬೆರ್ರಿ ಕೊಂಡುಬಂದರೆ ಕಾರು ಪ್ರಾರಂಭ­ವಾಗಲಿಲ್ಲ. ಇದೊಂದು ಆಕಸ್ಮಿಕ ಎಂದುಕೊಂಡು ಮರುದಿನವೂ ವೆನಿಲ್ಲಾ ಕೊಂಡರು. ಅಂದೂ ಶುರುವಾಗಲೇ ಇಲ್ಲ. ಇದನ್ನೇ ನಾಲ್ಕಾರು ಬಾರಿ ನೋಡಿದ ಎಂಜನಿಯರ್, ಹೌದು, ವೆನಿಲ್ಲಾ ಕೊಂಡಾಗಲೆಲ್ಲ ಕಾರು ಪ್ರಾರಂಭವಾಗಲಿಲ್ಲ. ಅವನಿಗೂ ಇದು ಆಶ್ಚರ್ಯ ಎನ್ನಿಸಿತು.

ನಂತರ ಆತ ನಿಜವಾದ ತಂತ್ರಜ್ಞನಂತೆ ಎಲ್ಲ ವಿಷಯಗಳನ್ನು ದಾಖಲು ಮಾಡಿಕೊಳ್ಳ ತೊಡಗಿದ. - ಐಸ್‌ಕ್ರೀಂ ತರುವ ಸಮಯ, ಯಾವ ಕಂಪನಿಯ ಪೆಟ್ರೋಲ್ ಬಳಸಿದ್ದು, ಐಸ್‌ಕ್ರೀಂ ತೆಗೆದುಕೊಳ್ಳಲು ಬೇಕಾದ ಸಮಯ, ಮನೆ ತಲುಪಲು ಬೇಕಾದ ಸಮಯ ಇತ್ಯಾದಿ. ನಾಲ್ಕಾರು ದಿನಗಳ ದಾಖಲೆಗಳನ್ನು ತಾಳೆ ಹಾಕಿ ನೋಡಿದಾಗ ಅವನಿಗೊಂದು ವಿಷಯ ಹೊಳೆಯಿತು. ವೆನಿಲ್ಲಾ ಐಸ್‌ಕ್ರೀಂನ್ನು ಅಂಗಡಿಯಿಂದ ತರಲು ಅತ್ಯಂತ ಕಡಿಮೆ ಸಮಯ ತೆಗೆದು ಕೊಂಡಿತ್ತು. ಆದರೆ ಉಳಿದ ಯಾವುದೇ ಮಾದರಿಯ ಐಸ್‌ಕ್ರೀಂ ತರಲು ಹೆಚ್ಚಿನ ಸಮಯ ಬೇಕಾಗಿತ್ತು!     
  
ಯುರೇಕಾ! ಎಂಜಿನಿಯರ್‌ಗೆ ಸಮಸ್ಯೆಗೆ ಉತ್ತರ ದೊರಕಿತ್ತು. ಕಾರು ಪ್ರಾರಂಭವಾಗದೇ ಇರುವುದಕ್ಕೆ ವೆನಿಲ್ಲಾ ಐಸ್‌ಕ್ರೀಂ ಕಾರಣವಲ್ಲ, ಅದನ್ನು ತರಲು ತೆಗೆದುಕೊಂಡ ಸಮಯ. ವೆನಿಲ್ಲಾ ಅತ್ಯಂತ ಬೇಡಿಕೆಯ ಐಸ್‌ಕ್ರೀಂ ಆದ್ದರಿಂದ ಮುಂದೆಯೇ ಇಟ್ಟಿದ್ದಾರೆ, ತಕ್ಷಣ ತೆಗೆದು ಕೊಟ್ಟುಬಿಡುತ್ತಾರೆ. ಆದರೆ ಉಳಿದವುಗಳನ್ನು ಅಂಗಡಿಯ ಹಿಂಭಾಗದಲ್ಲಿ ಇಟ್ಟಿದ್ದರು. ಹೀಗಾಗಿ ಅವುಗಳನ್ನು ತರಲು ಹೆಚ್ಚಿನ ಸಮಯ ಬೇಕು. ವೆನಿಲ್ಲಾ ತರುವುದು ಬೇಗನೇ ಅದ್ದರಿಂದ ಎಂಜಿನ್ ಇನ್ನೂ ತಂಪಾಗಿರದೆ ಪೆಟ್ರೋಲ್ ಆವಿ ತುಂಬಿಕೊಂಡು ಬೀಗ ಹಾಕಿದಂತಾ­ಗುತ್ತಿತ್ತು.

ಉಳಿದ ಐಸ್‌ಕ್ರೀಂ ತರುವಾಗ ಅವಶ್ಯವಿದ್ದ ಹೆಚ್ಚಿನ ಸಮಯದಲ್ಲಿ ಎಂಜಿನ್ ತಂಪಾಗಿ ಪೆಟ್ರೋಲಿನ ಆವಿ ಕರಗಿಹೋಗುತ್ತಿತ್ತು. ತಕ್ಷಣ ಎಂಜಿನಿಯರ್ ಪೆಟ್ರೋಲಿನ ಆವಿಯ ಕವಾಟವನ್ನು ಬದಲಿಸಿ ಅದು ಲಾಕ್ ಆಗದಂತೆ ಮಾಡಿದ. ನಂತರ ಕಾರು ವೆನಿಲ್ಲಾ ಐಸ್‌ಕ್ರೀಂ ಕೊಂಡಾಗ ತಕರಾರು ಮಾಡದೇ ಪ್ರಾರಂಭವಾಗ­ತೊಡಗಿತು. ಇದೊಂದು ವಿಶೇಷ ಮಾರ್ಪಾಡನ್ನು ಮಾಡಿದಾಗ ಪಾಂಟಿ­ಯಾಕ್ ಕಾರು ಇನ್ನಷ್ಟು ಜನಪ್ರಿಯ­ವಾಯಿತು.

ಅಂದರೆ ಇಷ್ಟು ಉತ್ತಮ­ವಾದ ಕಾರಿನ ದೋಷವನ್ನು ಸರಿಪ­ಡಿಸಿದ್ದು ವೆನಿಲ್ಲಾ ಐಸ್‌ಕ್ರೀಂ! ವಿಚಿತ್ರ ಸಮಸ್ಯೆಗಳಿಗೆ ವಿಚಿತ್ರವಾದ ಪರಿಹಾರ­ಗಳು! ಸ್ವಲ್ಪ ತಾಳ್ಮೆಯಿಂದ, ಶಾಂತ ಚಿತ್ತದಿಂದ ಗಮನಿಸಿದರೆ ತೋರಿಕೆಗೆ ವಿಚಿತ್ರವೆನಿಸುವ ಘಟನೆ­ಗಳಿಗೆ ವೈಜ್ಞಾನಿಕ ಕಾರಣಗಳು ತೋರಿರುವುದು ಅಪ­ರೂಪ­­ವಲ್ಲ. ಯಾವುದನ್ನೂ ನಿರಾಕರಿ­ಸದೇ ಚಿಕಿತ್ಸಕ ಬುದ್ಧಿಯಿಂದ ನೋಡುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT