ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೊರೇಟ್‌ ಜಗತ್ತಿಗೆ ಮೋದಿ ಅಪಥ್ಯ

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ದೇಶದ ಎರಡು ಮಹಾನಗರಗಳಾದ ದೆಹಲಿ ಮತ್ತು ಮುಂಬೈ, ತಮ್ಮ ನಡುವೆ ಇನ್ನೂ ರಾಜತಾಂತ್ರಿಕ ಸಂಬಂಧವೇ ಹೊಂದಿಲ್ಲದ ಪ್ರತ್ಯೇಕ ಸಾರ್ವಭೌಮ ಗಣರಾಜ್ಯಗಳಂತೆ ವರ್ತಿಸುತ್ತವೆ. ಈ ಎರಡೂ ನಗರಗಳ ಗುಣಲಕ್ಷಣಗಳು ಮತ್ತು ಅವುಗಳು ಹೊಂದಿರುವ ಪ್ರಭಾವ ಸಂಪೂರ್ಣ ಭಿನ್ನವಾಗಿವೆ. ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷದ ಸಾಮರ್ಥ್ಯ ಆಧರಿಸಿ ಇವುಗಳು ಬೀರುವ ಪ್ರಭಾವದ ಸಾಮರ್ಥ್ಯ ನಿರ್ಧಾರ ಆಗುತ್ತದೆ. ದೆಹಲಿಯು ರಾಜಕೀಯ ಅಧಿಕಾರಕ್ಕೆ ಮತ್ತು ಮುಂಬೈ ವಾಣಿಜ್ಯ ಹಣಕಾಸು ವಹಿವಾಟಿಗೆ ಖ್ಯಾತವಾಗಿವೆ.

ದೇಶದ ವಾಣಿಜ್ಯ ರಾಜಧಾನಿ ಖ್ಯಾತಿಯ ಮುಂಬೈನಲ್ಲಿನ ವಾಣಿಜ್ಯ ವಹಿವಾಟುಗಳೆಲ್ಲ ಪರಂಪರಾಗತವಾಗಿ ಬಳುವಳಿಯಾಗಿ ಬಂದಿರುವ ಸಿರಿವಂತ ಕುಟುಂಬಗಳು ಮತ್ತು ಸ್ನೇಹಿತರ ಗುಂಪುಗಳ ಮಧ್ಯೆ ಹಂಚಿಹೋಗಿವೆ. ಇವರೆಲ್ಲ ವೈವಾಹಿಕ, ಜನಾಂಗೀಯ, ಜಾತಿ, ಉಪಜಾತಿ, ಕುಲ ಸಂಬಂಧಗಳಿಂದ ಪರಸ್ಪರ ಸಂಬಂಧ ಹೊಂದಿದ್ದಾರೆ. ಇದೊಂದು ಬಗೆಯಲ್ಲಿ ದೇಶದ ಶಾಶ್ವತ ಬಂಡವಾಳಶಾಹಿ ಉದ್ಯಮಗಳ ಮತ್ತು ಹಣಕಾಸು ಸಂಸ್ಥೆಗಳ ನೆಲೆಯಾಗಿದೆ. ಅದು ಯಾವತ್ತೂ ಬದಲಾಗದು.

ದೆಹಲಿ ಗದ್ದುಗೆಯಲ್ಲಿ ಅಧಿಕಾರ ನಡೆಸುವವರು ಮೇಲಿಂದ ಮೇಲೆ ಬದಲಾಗುತ್ತಲೇ ಇರುತ್ತಾರೆ. 1989ರಲ್ಲಿ ಒಂದೇ ಪಕ್ಷದ ಆಡಳಿತ ಕೊನೆಗೊಂಡ ನಂತರ ವ್ಯಾಪಕ ಬದಲಾವಣೆಗೆ ದೆಹಲಿ ಸಾಕ್ಷಿಯಾಗಿದೆ. ಎಂಟನೇ ಪ್ರಧಾನಿ ಈಗ ಅಧಿಕಾರದಲ್ಲಿ ಇದ್ದಾರೆ.

ಆಡಳಿತಾರೂಢ ಪಕ್ಷ ಅಥವಾ ಸರ್ಕಾರ ರಚನೆಯ ಮೈತ್ರಿಕೂಟಗಳು ಸಂಪೂರ್ಣ ಜಾತ್ಯತೀತ ಧೋರಣೆಯ ಎಡಪಂಥೀಯ ಪಕ್ಷ ಮತ್ತು ಬಲಪಂಥೀಯ ಬಿಜೆಪಿಯ ಮಧ್ಯೆ ಡೋಲಾಯಮಾನ ಕಂಡಿವೆ. ದೇವೇಗೌಡರ ಸರ್ಕಾರದಲ್ಲಿ ಅದೇ ಮೊದಲ ಬಾರಿಗೆ ಸಿಪಿಐನ ಇಬ್ಬರು ಸಚಿವರು ಗೃಹ ಮತ್ತು ಕೃಷಿ ಖಾತೆಯ ಹೊಣೆ ಹೊತ್ತಿದ್ದರು. ತನ್ನ ಸ್ವಂತ ಬಲದ ಮೇಲೆ ಸಂಪೂರ್ಣ ಬಹುಮತ ಸಾಧಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಮುಸ್ಲಿಂ ಅಥವಾ ಕ್ರೈಸ್ತ ಸಮುದಾಯಕ್ಕೆ ಸೇರಿದವರನ್ನು ದೂರವೇ ಇಟ್ಟಿದೆ.

ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಮುಂಬೈ ನಗರವು ತನ್ನ ಉದ್ದೇಶ ಸಾಧನೆಗೆ ಅದಕ್ಕೆ ಹತ್ತಿರವಾಗಲು ಇರುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದರಲ್ಲಿಯೇ ಸಂತೋಷ ಕಾಣುತ್ತದೆ. ಯಾರ ಜತೆ ಹೇಗೆ ವ್ಯವಹರಿಸಬೇಕು ಎನ್ನುವುದು ಅದಕ್ಕೆ ಕರತಲಾಮಲಕವಾಗಿದೆ. ತನ್ನ ಉದ್ದೇಶ ಸಾಧನೆಗೆ ಸಹನೆಯಿಂದ ಕಾಯಬೇಕು ಎನ್ನುವುದೂ ಅದಕ್ಕೆ ಗೊತ್ತಿದೆ. ರಾಷ್ಟ್ರದ ರಾಜಧಾನಿಯಲ್ಲಿ ಅಧಿಕಾರ ನಡೆಸುವ ಪಕ್ಷದ ದೌಲತ್ತಿನ ರಾಜ್ಯಭಾರದ ಅವಧಿ ಬಗ್ಗೆ ಎಣಿಕೆ ಹಾಕುತ್ತಲೇ ಮುಂಬೈ ನಗರವು ಅವಕಾಶಕ್ಕಾಗಿ ಎದುರು ನೋಡುತ್ತಿರುತ್ತದೆ. ಹೀಗಾಗಿ ಅದು ದೆಹಲಿ ರಾಜಕಾರಣದಲ್ಲಿ ಅಥವಾ ಅಧಿಕಾರದಲ್ಲಿ ಇರುವ ಪಕ್ಷದ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸುವುದರಲ್ಲಿ ಅಥವಾ ಅಧಿಕಾರ ಬದಲಾವಣೆಯ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸುವುದೇ ಇಲ್ಲ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದೂ ಇಲ್ಲ.

ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ದೇಶದ ಕಾರ್ಪೊರೇಟ್‌ಗಳು 2011ರಲ್ಲಿ ವಿಭಿನ್ನ ನೆಲೆಯಲ್ಲಿ ಚಿಂತನೆ ನಡೆಸಲು ಆರಂಭಿಸುತ್ತವೆ. ‘ಅಧಿಕಾರಾರೂಢ ಪಕ್ಷ ಬದಲಾಯಿಸಲು ಕಾಲ ಕೂಡಿ ಬಂದಿದೆ. ಅಂತಹ ಬದಲಾವಣೆ ತರಲು ತಮ್ಮಿಂದ ಸಾಧ್ಯವಾಗಲಿದೆ’ ಎನ್ನುವ ನಿಲುವಿಗೆ ಕಾರ್ಪೊರೇಟ್‌ ದಿಗ್ಗಜರು ಬರುತ್ತಾರೆ. ಈ ಆಲೋಚನೆಯನ್ನು ಮೂರು ಶಕ್ತಿಗಳು ಮುನ್ನಡೆಸಿಕೊಂಡು ಹೋಗುತ್ತವೆ. ನನೆಗುದಿಗೆ ಬಿದ್ದಿದ್ದ ಆರ್ಥಿಕ ಸುಧಾರಣಾ ಕ್ರಮಗಳು, ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದ್ದರೂ ಅವುಗಳಿಗೆ ಪರಿಸರ ಅನುಮತಿ ನೀಡದಿರುವುದು, ವಿದ್ಯುತ್‌ ಪೂರೈಸದಿರುವುದು ಮತ್ತು ಅನಗತ್ಯ ಕಿರುಕುಳದಿಂದ ಉದ್ಯಮಿಗಳು ರೋಸಿ ಹೋಗಿದ್ದರು. ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸುವ, ಉದ್ಯಮದ ಪರ ಇರುವ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಅವರೆಲ್ಲ ಇಚ್ಛೆಪಟ್ಟಿದ್ದರು.

ಹೀಗಾಗಿ ದೇಶಿ ಕಾರ್ಪೊರೇಟ್‌ ಜಗತ್ತು ಮೋದಿ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಎಳೆದು ತರುವ (ಮಿಷನ್‌ ಮೋದಿ) ತನ್ನ ಉದ್ದೇಶಿತ ಕಾರ್ಯಸೂಚಿ ಕಾರ್ಯಗತಗೊಳಿಸಲು ಹೆಚ್ಚು ಹೆಚ್ಚಾಗಿ ಭಾಗಿಯಾಗತೊಡಗಿತು. ಕೆಲವೇ ವರ್ಷಗಳಲ್ಲಿ ತನ್ನ ಉದ್ದೇಶ ಸಾಧನೆಯಲ್ಲಿ ತಾನು ಯಶಸ್ವಿಯಾಗಿರುವುದಾಗಿ ಬೀಗಿದ ಉದ್ಯಮ ವಲಯವು ದೊಡ್ಡ ಗಂಟಲಿನಲ್ಲಿ ಜೈಕಾರ ಕೂಗುತ್ತ ಸಂಭ್ರಮಿಸಿತ್ತು.

ಆದರೆ, ಈ ಭಾವಾವೇಶದ ಸಂಭ್ರಮಾಚರಣೆ ಬಹಳ ದಿನ ಉಳಿಯಲಿಲ್ಲ. ನಾಲ್ಕೇ ವರ್ಷಗಳಲ್ಲಿ ಉದ್ಯಮಿಗಳ ನಿರೀಕ್ಷೆಗಳು ತಲೆಕೆಳಗಾಗಿವೆ. ಭ್ರಮೆಗಳೆಲ್ಲ ಕಳಚಿ ಬಿದ್ದಿವೆ. ಮೋದಿ ಅವರ ಬಗೆಗಿನ ಅಭಿಮಾನ ಈಗ ಭಯ ಮತ್ತು ಶಂಕೆಯಾಗಿ ಮಾರ್ಪಟ್ಟಿದೆ. ಮುಂಬೈ ಮಹಾನಗರವು ಈಗ ದೆಹಲಿ ಬಗ್ಗೆ ಭಯವಿಹ್ವಲಗೊಂಡಿದೆ. ಸದ್ಯದ ಪರಿಸ್ಥಿತಿಯು, ವಿ. ಪಿ. ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಉದ್ಯಮಿಗಳ ಮೇಲೆ ನಡೆದಿದ್ದ ದಾಳಿ (ರೇಡ್‌ ರಾಜ್‌) ಘಟನೆಗಳ ಸಂದರ್ಭದಲ್ಲಿ ಕಂಡು ಬಂದಿದ್ದ ಭೀತಿಯನ್ನು ನೆನಪಿಸುವಂತಿದೆ ಎಂದು ಹಳಬರು ನೆನಪಿಸಿಕೊಳ್ಳುತ್ತಾರೆ.

ಇದುವರೆಗೂ ಯಾವುದೇ ಉದ್ಯಮಿಯ ವಿರುದ್ಧ ದಾಳಿ ನಡೆದಿಲ್ಲ ಎನ್ನುವುದು ನಿಜವಾಗಿದ್ದರೂ, ಕಾರ್ಪೊರೇಟ್ ಜಗತ್ತಿನಲ್ಲಿ ಇಂತಹ ಭಾವನೆ ಮನೆ ಮಾಡಲು, ಅವರು ಈ ರೀತಿ ದೂರಲು ಕಾರಣಗಳೇನಿರಬಹುದು ಎನ್ನುವ ಪ್ರಶ್ನೆ ಇಲ್ಲಿ ಸಹಜವಾಗಿ ಉದ್ಭವವಾಗುತ್ತದೆ.

ಪ್ರೇಮಿಯ ದ್ರೋಹದಿಂದ ಹತಾಶರಾದವರು ಸಂಗಾತಿ ವಿರುದ್ಧ ಕಟುವಾಗಿ ಮಾತನಾಡುವಂತೆ ಇದು ತೋರುತ್ತದೆ. ‘ನರೇಂದ್ರ ಮೋದಿ ಸರ್ಕಾರದಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಗುಜರಾತ್‌ನಲ್ಲಿ ನಾವು ವೋಟ್‌ ನೀಡಿ ಬೆಂಬಲಿಸಿದ ನರೇಂದ್ರ ಮೋದಿ ಇವರಲ್ಲ’ ಎಂದು ಉದ್ಯಮಿಗಳು ಸಿಡಿಮಿಡಿಗೊಂಡಿದ್ದಾರೆ.‌‌

ದೆಹಲಿ ಮಟ್ಟದಲ್ಲಿ ಲಾಬಿ ಮಾಡಲು ಅವಕಾಶ ಮಾಡಿಕೊಡದಿರುವುದು ಮೋದಿ ಸರ್ಕಾರದ ಮಹತ್ವದ ಮತ್ತು ಸಕಾರಾತ್ಮಕ ಸಂಗತಿಯಾಗಿದೆ. ಯಾರಿಗೇ ಆಗಲಿ, ಯಾವುದೇ ಬಗೆಯಲ್ಲಿ ಉಪಕಾರದ ಋಣ ತೀರಿಸುವುದರಲ್ಲಿ ಮೋದಿ ಸರ್ಕಾರ ನಂಬಿಕೆ ಇರಿಸಿಲ್ಲ. ಬೃಹತ್‌ ಉದ್ದಿಮೆಗಳು ಇದನ್ನು ಇಷ್ಟಪಡುವುದೂ ಇಲ್ಲ. ಆದರೆ, ಮೋದಿ ಅವರು ಗುಜರಾತ್‌ನಲ್ಲಿ ಇದ್ದಂತೆ ದೆಹಲಿಯಲ್ಲಿಯೂ ಇರಬೇಕು ಎನ್ನುವುದು ಅವರ ಇಚ್ಛೆಯಾಗಿದೆ. ತಮಗಾಗಿ ಮೋದಿ ಕಚೇರಿ ಅಥವಾ ಮನೆಯ ಬಾಗಿಲು ಸದಾ ತೆರೆದಿರುವುದನ್ನು, ಅವರು ತಮ್ಮನ್ನು ಅದೇ ಹಳೆಯ ವಿಶಾಲ ಹೃದಯದಿಂದ ಸ್ವಾಗತಿಸುವುದನ್ನು ಉದ್ಯಮಿಗಳು ಬಯಸುತ್ತಿದ್ದಾರೆ. ಆದರೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಮೋದಿ ಅವರ ಧೋರಣೆ ಬದಲಾಗಿದೆ. ತಮಗೆ ವೋಟ್‌ ನೀಡುವವರತ್ತ ತಮ್ಮ ರಾಜಕೀಯವನ್ನು ಕೇಂದ್ರೀಕರಿಸಿದ್ದಾರೆ. ಹೀಗಾಗಿ ಅವರೀಗ ಉದ್ದಿಮೆದಾರರನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಬೃಹತ್‌ ಉದ್ದಿಮೆದಾರರು ಈ ರೀತಿ ರಾಜಕೀಯ ಪಡಸಾಲೆಯಲ್ಲಿ ಪ್ರಭಾವ ಕಳೆದುಕೊಂಡಿರುವುದು ದೇಶದ ಆರ್ಥಿಕ ಇತಿಹಾಸದಲ್ಲಿ ಅದರಲ್ಲೂ 1991ರಿಂದೀಚೆಗಂತೂ ಯಾವತ್ತೂ ಆಗಿರಲಿಲ್ಲ. ಉದ್ಯಮಿಗಳ ಪಾಲಿಗೆ ಮೋದಿ ಈಗ ಖಳನಂತೆ ಕಾಣುತ್ತಿದ್ದಾರೆ.

‘ತೆರಿಗೆ ಅಧಿಕಾರಿಗಳಿಗೆ ಅಸಾಮಾನ್ಯ ಎನಿಸುವಷ್ಟು ಅಧಿಕಾರ ನೀಡಿದ್ದಾರೆ’ ಎಂದು ಉದ್ಯಮಿಗಳು ದೂರು
ತ್ತಿದ್ದಾರೆ. ಮೋದಿ ಅವರ ಪ್ರಚಾರ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿರುವ ಮತ್ತು ಅವರಿಗಾಗಿ ಈಗಲೂ ಚುನಾವಣಾ ಬಾಂಡ್‌ ಹೆಸರಿನಲ್ಲಿ ಹಣ ತೊಡಗಿಸುತ್ತಿರುವ ಉದ್ದಿಮೆದಾರರನ್ನು ಕೇಳಿದರೆ, ‘ಉದ್ಯಮ ವಲಯದಲ್ಲಿ ಈಗ ‘ತೆರಿಗೆ ಭಯೋತ್ಪಾದನೆ’ ಕಂಡು ಬರುತ್ತಿದೆ’ ಎಂದು ‌ ಆರೋಪಿಸುತ್ತಾರೆ.

ವರಮಾನ ಸಂಗ್ರಹಿಸಲು ತೆರಿಗೆ ಇಲಾಖೆಗೆ ಗುರಿ ನಿಗದಿ ಮಾಡಲಾಗಿದೆ. ಹಿಂದೆಂದಿಗಿಂತ ಹೆಚ್ಚಿನ ಅಧಿಕಾರವನ್ನೂ ಅವರಿಗೆ ನೀಡಲಾಗಿದೆ. ಹೀಗಾಗಿ ಪ್ರತಿಯೊಬ್ಬ ಉದ್ಯಮಿಯದು ಭಯಾನಕ ಅನುಭವವಾಗಿದೆ. ಕೈಗಾರಿಕಾ ವಲಯದ ಪ್ರಾತಿನಿಧಿಕ ಸಂಘಟನೆಗಳಾಗಿರುವ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ), ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ), ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ), ಸರ್ಕಾರದ ಮೇಲೆ ಈ ಹಿಂದಿನಂತೆ ಪ್ರಭಾವ ಬೀರುತ್ತಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಅಧಿಕಾರಸ್ಥರನ್ನು ಒಪ್ಪಿಸಬಲ್ಲ ಇವುಗಳ ಅಧಿಕಾರ ಮಸುಕಾಗಿದೆ.

ಅಧಿಕಾರದಲ್ಲಿ ಇರುವ ಸರ್ಕಾರವನ್ನು ಕಾರ್ಪೊರೇಟ್‌ ಜಗತ್ತು ಪ್ರಾಸಂಗಿಕವಾಗಿ ಹೊಗಳುತ್ತಲೇ ಇರಬೇಕಾಗುತ್ತದೆ. ಗರಿಷ್ಠ ಮುಖ ಬೆಲೆಯ ನೋಟುಗಳನ್ನು ರದ್ದುಪಡಿಸಿದ ನಿರ್ಧಾರವನ್ನು ಟೀಕಿಸಿ ಪಿಸುಗುಟ್ಟಿದ್ದರೂ ಅವರಿಗೆ ಬುದ್ಧಿ ಕಲಿಸಲು ದೆಹಲಿಯಿಂದ ಬಂದ ಫೋನ್‌ ಕರೆಯೊಂದೆ ಸಾಕಾಗುತ್ತಿತ್ತು.
ಬ್ಯಾಂಕ್‌ಗಳ ಸಾಲ ನೀಡಿಕೆಯು ಬಹುಮಟ್ಟಿಗೆ ಸ್ಥಗಿತಗೊಂಡಿರುವುದು ದೇಶಿ ಉದ್ಯಮ ವಲಯವು ಸದ್ಯಕ್ಕೆ ಎದುರಿಸುತ್ತಿರುವ ಅತಿದೊಡ್ಡ ಸವಾಲಾಗಿದೆ. ಇಂತಹ ಪರಿಸ್ಥಿತಿ ಉದ್ಭವಿಸುವುದಕ್ಕೆ ಕೇಂದ್ರದಲ್ಲಿ ಸದ್ಯಕ್ಕೆ ಅಧಿಕಾರದಲ್ಲಿ ಇರುವ ಸರ್ಕಾರ ಕಾರಣವಲ್ಲ. ಈ ಹಿಂದೆ ಅಧಿಕಾರದಲ್ಲಿದ್ದ ‘ಯುಪಿಎ’ ಸರ್ಕಾರದ ಅಧಿಕಾರಾವಧಿಯಲ್ಲಿ, ಅದರಲ್ಲೂ ವಿಶೇಷವಾಗಿ 2009 ರಿಂದ 2012ರ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಮಂಜೂರಾಗಿದ್ದ ಸಾಲಗಳು ಈಗ ವಸೂಲಾಗದ ಸಾಲಗಳಾಗಿ (ಎನ್‌ಪಿಎ) ಪರಿವರ್ತನೆಗೊಂಡಿವೆ.

ಹಣಕಾಸು ವ್ಯವಸ್ಥೆಯಲ್ಲಿನ ಈ ಕೊಳೆತ ಸ್ಥಿತಿಯು ಕನಿಷ್ಠ ಮೂರು ವರ್ಷಗಳವರೆಗೆ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿತ್ತು. ಆದರೆ, ಅದನ್ನು ಪರಿಹರಿಸಲು ತುಂಬ ತಡವಾಗಿ ಕ್ರಮ ಕೈಗೊಳ್ಳಲಾಗಿತ್ತು. ಸಕಾಲದಲ್ಲಿ ಕ್ರಮ ಕೈಗೊಳ್ಳಲು ಹಲವು ವಿದ್ಯಮಾನಗಳು ಅಡ್ಡಿಯಾಗಿ ಪರಿಣಮಿಸಿದ್ದವು. ಮೊದಲನೆಯದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಬದಲಾದರು. ಅವರು ಅಧಿಕಾರ ವಹಿಸಿಕೊಂಡು ನೆಲೆಯೂರುವ ಮುನ್ನವೇ ನೋಟು ರದ್ದತಿಯ ಆಘಾತ ಅಪ್ಪಳಿಸಿತು. ‘ಎನ್‌ಪಿಎ’ ಸಮಸ್ಯೆಯನ್ನು ಬಗೆಹರಿಸಲು ಆರಂಭಿಸುತ್ತಿದ್ದಂತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದಿದ್ದರಿಂದ ಅದು ಅರ್ಧಕ್ಕೆ ಮೊಟಕುಗೊಂಡಿತು. ಈ ಎಲ್ಲ ಬದಲಾವಣೆಗಳನ್ನು ಸಮರ್ಥವಾಗಿ ಎದುರಿಸಲು ವ್ಯವಸ್ಥೆ ಸಿದ್ಧಗೊಂಡಿರಲಿಲ್ಲ. ಬ್ಯಾಂಕ್‌ಗಳ ವಸೂಲಾಗದ ಸಾಲದ ಸಮಸ್ಯೆಯ ಸಂಕಷ್ಟವು ಈ ಎಲ್ಲ ಕಾರಣ ಮತ್ತು ಪರಿಣಾಮಗಳ ಫಲಶ್ರುತಿಯಾಗಿದೆ.

ಉದ್ಯಮಿಗಳಲ್ಲಿನ ಈ ಭೀತಿ ಮತ್ತು ನೈತಿಕತೆಯ ನಷ್ಟವು ನಿಜವಾಗಿದ್ದರೂ ಸಕಾಲಿಕವಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಪೊರೇಟ್‌ಗಳು ಲಾಭದಾಯಕವಾಗಿ ಮುನ್ನಡೆದಿದ್ದು, ಸರಕು ಮತ್ತು ಸೇವೆಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಉಕ್ಕು ಮತ್ತು ಸಿಮೆಂಟ್‌ಗೂ ಹೆಚ್ಚಿನ ಬೇಡಿಕೆ ಬರುತ್ತಿದೆ. ದೊಡ್ಡ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವ 12 ಉದ್ದಿಮೆಗಳ ವಿರುದ್ಧ ದಿವಾಳಿ ಸಂಹಿತೆಯಡಿ ಸಾಲ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆ ಸುಸೂತ್ರವಾಗಿ ಸಾಗಿದ್ದು, ಗಮನಾರ್ಹ ಮೊತ್ತವು ಅದರಲ್ಲೂ ವಿಶೇಷವಾಗಿ ಉಕ್ಕು ಉದ್ದಿಮೆಗಳಿಂದ ಮರಳಿ ಬರಲಿದೆ ಎಂದು ಬ್ಯಾಂಕ್‌ಗಳು ನಿರೀಕ್ಷಿಸಿವೆ. ಸರ್ಕಾರಿ ಸ್ವಾಮ್ಯದ 21 ಬ್ಯಾಂಕ್‌ಗಳ ಪೈಕಿ, 12 ಬ್ಯಾಂಕ್‌ಗಳ ಸಾಲ ನೀಡಿಕೆ ಮೇಲೆ ಆರ್‌ಬಿಐ ತೀವ್ರ ನಿಗಾ ಇರಿಸಿದೆ. ತಾವು ನಿವೃತ್ತರಾದ ಮೇಲೂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ತಮ್ಮ ಮನೆ ಮೇಲೆ ದಾಳಿ ನಡೆಸಬಹುದು ಎನ್ನುವ ಭೀತಿಯಿಂದ ಸಾಲ ಮಂಜೂರು ಮಾಡಲು ಬ್ಯಾಂಕ್‌ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಇಂತಹ ಭಯದ ವಾತಾವರಣದಲ್ಲಿ ಸಾಲಗಾರರು, ಬ್ಯಾಂಕ್‌ಗಳು ಮತ್ತು ಆರ್‌ಬಿಐ ಅತಿಯಾದ ಎಚ್ಚರಿಕೆ ಧೋರಣೆ ಪ್ರದರ್ಶಿಸುತ್ತಿವೆ. ಫೆಬ್ರುವರಿಯಲ್ಲಿ ಆರ್‌ಬಿಐ, ವಾಣಿಜ್ಯ ಬ್ಯಾಂಕ್‌ಗಳಿಗೆ ಕಳಿಸಿರುವ ಸುತ್ತೋಲೆ ಇದಕ್ಕೆ ಒಂದು ನಿದರ್ಶನವಾಗಿದೆ. ನಿಗದಿತ ಕಾಲಮಿತಿಗೆ ಒಳಪಟ್ಟು ದಿವಾಳಿ ಸಂಹಿತೆ ಮೂಲಕವೇ ಸಾಲ ಮರು ಹೊಂದಾಣಿಕೆ ಪ್ರಕ್ರಿಯೆ ನಡೆಯಬೇಕು ಎಂದು ಕಟ್ಟಪ್ಪಣೆ ಮಾಡಲಾಗಿದೆ.

ಬೃಹತ್‌ ಉದ್ದಿಮೆದಾರರು ಮತ್ತು ಶ್ರೀಮಂತರು ತಮ್ಮ ಉದ್ದಿಮೆ ದಿವಾಳಿ ಎದ್ದಿರುವ ಬಗ್ಗೆ ಚಿಂತಿತರಾಗಿಲ್ಲ. ಪೊಲೀಸ್‌ ಭೀತಿ ಅವರನ್ನು ಅಧೀರರನ್ನಾಗಿಸಿದೆ. ಈ ಅಂಕಣದ ಆರಂಭದಲ್ಲಿ ಉಲ್ಲೇಖಿಸಿರುವಂತೆ, ಬಹುತೇಕ ಉದ್ದಿಮೆದಾರರ ಮೇಲೆ ಇದುವರೆಗೆ ಯಾವುದೇ ದಾಳಿ ನಡೆದಿಲ್ಲ ಮತ್ತು ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣವನ್ನೂ ದಾಖಲಿಸಿಲ್ಲ. ಆದರೆ, ವಿಜಯ್‌ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಅವರು ದೇಶಿ ಕಾರ್ಪೊರೇಟ್‌ ಜಗತ್ತಿಗೆ ಆರ್ಥಿಕ ಅಪರಾಧಗಳ ವಂಚನೆಯ ಪೂರ್ವಾನುಭವ ಒದಗಿಸಿದ್ದಾರೆ. ಹೀಗಾಗಿ ಉದ್ದಿಮೆದಾರರಲ್ಲಿ ವಾಸ್ತವ ಸಂಗತಿಗಳಿಂದ ಭೀತಿ ಕಾಡುತ್ತಿಲ್ಲ. ಅದರ ಬದಲಿಗೆ ಅವರೆಲ್ಲ ಭ್ರಮೆಯ ಭೀತಿಗೆ ಒಳಗಾಗಿ ಅಧೀರರಾಗಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ ಎನ್ನುವುದು ಸದ್ಯದ ಅತ್ಯಂತ ಜನಪ್ರಿಯ ಭ್ರಮೆಯಾಗಿದೆ. ಭ್ರಷ್ಟಾಚಾರ ವಿರುದ್ಧದ ಕಾರ್ಯಾಚರಣೆಯ ಸಾಚಾತನ ಸಾಬೀತುಪಡಿಸಲು 2019ರ ಸಾರ್ವತ್ರಿಕ ಚುನಾವಣೆಗೂ ಮುಂಚೆ ಖಾಸಗಿ ವಲಯದ ಪ್ರಮುಖರ ತಲೆದಂಡ ಪಡೆಯುವುದು ಮೋದಿ ಸರ್ಕಾರಕ್ಕೆ ಮುಖ್ಯವಾಗಿದೆ. ಹೀಗಾಗಿ ಖಡ್ಗವು ಯಾರ ಕೊರಳನ್ನು ಕತ್ತರಿಸಲಿದೆ ಎನ್ನುವುದನ್ನು ಎದುರು ನೋಡಲಾಗುತ್ತಿದೆ.

ಈ ದೃಷ್ಟಿಕೋನದಿಂದ ನೋಡಿದಾಗ, ಐಸಿಐಸಿಐ ಬ್ಯಾಂಕ್‌ ಮತ್ತು ವಿಡಿಯೊಕಾನ್‌ ಸಾಲದ ಹಗರಣದ ಕಥೆಯು ಬೆಳಕಿಗೆ ಬಂದಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಈ ಹಗರಣದ ಬಗೆಗಿನ ವಿವರಗಳನ್ನು 2016ರಲ್ಲಿಯೇ ಬಹಿರಂಗಪಡಿಸಿದ ಪತ್ರವೊಂದು ಕೆಲ ವಾರಗಳಿಂದ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿತ್ತು. ಅದೀಗ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿರುವುದರಿಂದ ಅನೇಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ವಿವಾದ ಬಹಿರಂಗಗೊಂಡಿರುವುದರಿಂದ ಎಲ್ಲ ಬಣಗಳೂ ತಮ್ಮ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಿವೆ. ಹೆದರಿಕೆಯು ವಾಸ್ತವವನ್ನು ಆಧರಿಸಿರುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಭೀತಿಯು ವಾಸ್ತವವಾಗಬಹುದು.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT