ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಬನ್ ಎಸ್‌ಟಿ10 ಮಧ್ಯಮ ದರದಲ್ಲಿ ಮಧ್ಯಮ ದರ್ಜೆಯ ಟ್ಯಾಬ್ಲೆಟ್

Last Updated 23 ಜನವರಿ 2013, 19:59 IST
ಅಕ್ಷರ ಗಾತ್ರ

ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಎಂದಿದ್ದ ಕುಮಾರವ್ಯಾಸ. ಮುಂದಿನ ಮಕ್ಕಳೂ ಅದನ್ನೇ ಹೇಳಬಹುದು. ಅವರು ಗಣಕ ಬಳಸಿ ಕಲಿಯುತ್ತಾರೆ. ಇನ್ನೂ ಸ್ವಲ್ಪ ಮುಂದೆ ಹೋಗಿ ಟ್ಯಾಬ್ಲೆಟ್ ಬಳಸಿ ಕಲಿಯುತ್ತಾರೆ ಎನ್ನಬಹುದು. ಟ್ಯಾಬ್ಲೆಟ್ ಗಣಕಕ್ಕೆ ಹಲಗೆ ಗಣಕ ಎನ್ನಬಹುದು ಎಂದು ಕನ್ನಡ ಪಂಡಿತರೊಬ್ಬರು ವ್ಯಾಖ್ಯಾನಿಸಿದ್ದಾರೆ. ಆಗ ಮತ್ತೆ ಹಲಗೆ ಬಳಕೆಗೆ ಬಂದಂತಾಯಿತು! ಈ ವಿಚಿತ್ರ ತರ್ಕ ಅಂತಿರಲಿ.

ಅಮೆರಿಕದಲ್ಲಿ ಶಾಲಾಮಕ್ಕಳಿಗೆ ಟ್ಯಾಬ್ಲೆಟ್ (ಗಣಕ) ನೀಡುತ್ತಿದ್ದಾರೆ. ಇನ್ನು ಸ್ವಲ್ಪ ವರ್ಷಗಳಲ್ಲಿ ಇದು ಭಾರತದಲ್ಲೂ ಆಚರಣೆಗೆ ಬರಬಹುದು. ಈಗಾಗಲೆ ಹಲವು ಮಂದಿ ಮಕ್ಕಳಿಗೆ ಲ್ಯಾಪ್‌ಟಾಪ್ ಜಾಸ್ತಿ ಆಯಿತು ಎಂದುಕೊಂಡು ಟ್ಯಾಬ್ಲೆಟ್ ಕೊಂಡು ನೀಡುತ್ತಿದ್ದಾರೆ. ಮಕ್ಕಳಿಗೆ ಮಾತ್ರವಲ್ಲ, ಹಲವು ರೀತಿಯಲ್ಲಿ ಮಕ್ಕಳಂತೆಯೇ ಇರುವ ವೃದ್ಧರಿಗೂ ಟ್ಯಾಬ್ಲೆಟ್ ಕೊಡುತ್ತಿದ್ದಾರೆ. ಅಂತರಜಾಲ ವೀಕ್ಷಣೆ, ಇಮೇಲ್, ವಿಡಿಯೋ ಚಾಟಿಂಗ್, ವಿದ್ಯುನ್ಮಾನ ಪುಸ್ತಕ ಓದುವಿಕೆ -ಹೀಗೆ ಹಲವು ಕೆಲಸಗಳನ್ನು ಟ್ಯಾಬ್ಲೆಟ್ ಮೂಲಕ ಮಾಡಬಹುದು. ಒಟ್ಟಿನಲ್ಲಿ ಹೇಳುವುದಾರೆ ಟ್ಯಾಬ್ಲೆಟ್ ಬಳಕೆ ಅತಿ ಸಹಜವಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಟ್ಯಾಬ್ಲೆಟ್ ಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿ ಆಗಿದೆ (ಗ್ಯಾಜೆಟ್ ಲೋಕ, ಡಿಸೆಂಬರ್ 13, 2012).

ಟ್ಯಾಬ್ಲೆಟ್ ಗಣಕಗಳು ಸುಮಾರು 4 ಸಾವಿರ ರೂ.ಗಳಿಂದ ಪ್ರಾರಂಭವಾಗುತ್ತವೆ. 7 ಇಂಚಿನಿಂದ ಹಿಡಿದು 10 ಇಂಚಿನವರೆಗೂ ಬೇರೆ ಬೇರೆ ಗಾತ್ರಗಳಲ್ಲಿ ದೊರೆಯುತ್ತವೆ. ಈ ವಾರ ಒಂದು ಮಧ್ಯಮ ದರದ, ಅಂದರೆ ಅತ್ತ ಅತಿ ದುಬಾರಿಯೂ ಅಲ್ಲದ ಇತ್ತ ಅತಿ ಅಗ್ಗವೂ ಅಲ್ಲದ ಒಂದು ಟ್ಯಾಬ್ಲೆಟ್ ಕಡೆಗೆ ನಮ್ಮ ಗಮನ ಹರಿಸೋಣ. ಅದುವೇ ಕಾರ್ಬನ್ ಎಸ್‌ಟಿ10 ಕಾಸ್ಮಿಕ್ ಟ್ಯಾಬ್ಲೆಟ್ (Karbonn Smart Tab 10 - Cosmic). ಇದರ ಬೆಲೆ ಸುಮಾರು ಹತ್ತು ಸಾವಿರ ರೂ.

ಗುಣವೈಶಿಷ್ಟ್ಯಗಳು
1.5 ಗಿಗಾಹರ್ಟ್ಸ್ ವೇಗದ ಎರಡು ಹೃದಯಗಳ (dualcore) ಪ್ರೋಸೆಸರ್, 9.7 ಇಂಚು ಗಾತ್ರದ 1024x768 ಪಿಕ್ಸೆಲ್ ರೆಸೊಲೂಶನ್‌ನ ಕೆಪಾಸಿಟಿವ್ ಸ್ಪರ್ಶಸಂವೇದಿ ಪರದೆ, 1 ಗಿಗಾಬೈಟ್ ಪ್ರಾಥಮಿಕ ಮೆಮೊರಿ ಮತ್ತು 1.5 ಗಿಗಾಬೈಟ್ ಅಧಿಕ ಮೆಮೊರಿ. 32 ಗಿಗಾಬೈಟ್ ತನಕ ಮೈಕ್ರೊಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ಹೆಚ್ಚಿಸಿಕೊಳ್ಳಬಹುದು, 2 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ, ಕಡಿಮೆ ರೆಸೊಲೂಶನ್‌ನ ಇನ್ನೊಂದು (ಎದುರುಗಡೆಯ) ಕ್ಯಾಮೆರಾ, ಎಕ್ಸೆಲೆರೋಮೀಟರ್, 6000 mAh ಬ್ಯಾಟರಿ, ವೈಫೈ, ಯುಎಸ್‌ಬಿ ಮತ್ತು ಎಚ್‌ಡಿಎಂಐ ಕಿಂಡಿಗಳು, 1080p ಹೈಡೆಫಿನಿಶನ್ ವಿಡಿಯೋ ಪ್ಲೇ, 3.5 ಮಿಮೀ ಇಯರ್‌ಫೋನ್ ಕಿಂಡಿ, ಇತ್ಯಾದಿ. ಮೇಲ್ನೋಟಕ್ಕೆ ಒಂದು ಉತ್ತಮ ಆಧುನಿಕ ಟ್ಯಾಬ್ಲೆಟ್‌ನ ಎಲ್ಲ ಗುಣಲಕ್ಷಣಗಳಿವೆ.

ಬಹುಮಟ್ಟಿಗೆ ಇದೇ ಮಾದರಿಯ ಗುಣವೈಶಿಷ್ಟ್ಯಗಳನ್ನು ಒಳಗೊಂಡ ಸ್ಯಾಮ್‌ಸಂಗ್ ಟ್ಯಾಬ್ಲೆಟ್‌ಗೆ ಇದರ ಎರಡರಷ್ಟು ಬೆಲೆ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದರ ಎರಡು ಪ್ರಮುಖ ಕೊರತೆಗಳೆಂದರೆ ಜಿಪಿಎಸ್ ಮತ್ತು ಮೊಬೈಲ್ ಸಿಮ್‌ಕಾರ್ಡ್ ಸೌಲಭ್ಯ ಇಲ್ಲದಿರುವುದು. ಇದರ ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) ಆಂಡ್ರೋಯಿಡ್ 4.1.1 (ಜೆಲ್ಲಿಬೀನ್).
ಉತ್ತಮ ಶಕ್ತಿಶಾಲಿಯಾದ ಪ್ರೋಸೆಸರ್ ಇರುವುದರಿಂದ ಇದರ ಬಳಕೆಯ ವೇಗ ಚೆನ್ನಾಗಿದೆ. ಎಲ್ಲೂ ತಡೆ ಎನ್ನಿಸುವುದಿಲ್ಲ.

ಆಟಗಳನ್ನು ಚೆನ್ನಾಗಿ ಆಡಬಹುದು. ಬಳಸುವಾಗ ಒಮ್ಮೆಯೂ ತಟಸ್ಥವಾಗಲಿಲ್ಲ. ಹಲವು ತಂತ್ರಾಂಶಗಳನ್ನು ಒಟ್ಟಿಗೆ ತೆರೆದು ಕೆಲಸ ನಿರ್ವಹಿಸಿದಾಗಲೂ (multitasking) ಏನೂ ತೊಂದರೆ ಅನ್ನಿಸಲಿಲ್ಲ. ನಾನು ಆಡಿದ ಯಾವ ಆಟವೂ ನಿಧಾನವಾಗಿ ಕೆಲಸ ಮಾಡಲಿಲ್ಲ ಮತ್ತು ಯಾವುದೇ ತೊಂದರೆ ನೀಡಲಿಲ್ಲ. ಇದರ ಸ್ಪರ್ಶಪರದೆಯ ಸಂವೇದನೆ (touch response)ಪರವಾಗಿಲ್ಲ.

ದುಬಾರಿ ಬೆಲೆಯ ಟ್ಯಾಬ್ಲೆಟ್‌ಗಳಷ್ಟು (ಸ್ಯಾಮ್‌ಸಂಗ್ ಗ್ಯಾಲಕ್ಸಿ, ಆಪಲ್ ಐಪ್ಯಾಡ್) ಉತ್ತಮ ಅನುಭವ ನೀಡದಿದ್ದರೂ ಕೊಟ್ಟ ಹಣಕ್ಕೆ ಈ ವಿಷಯದಲ್ಲಿ ಮೋಸವಿಲ್ಲ. ಟ್ಯಾಬ್ಲೆಟ್‌ಗೆ ಅವರು ಒಂದು ಪಾರದರ್ಶಕ ಪ್ಲಾಸ್ಟಿಕ್ ಹೊದಿಕೆ ಅಂಟಿಸಿಯೇ (screen protector) ಕಳುಹಿಸಿದ್ದಾರೆ. ಗೊರಿಲ್ಲ ಗ್ಲಾಸ್ ಇಲ್ಲದಿರುವುದರಿಂದ ಇದರ ಅಗತ್ಯವಿದೆ. ಆದರೆ ಇದರಿಂದಾಗಿ ಇದರ ಸ್ಪರ್ಶಸಂವೇದನೆ ಸ್ವಲ್ಪ ಕುಂಠಿತವಾಗಿದೆ.

ಇದರ ಪರದೆಯ ರೆಸೊಲೂಶನ್ 1024x768 ಅಂದರೆ 4:3 ರ ಅನುಪಾತ. ಹಳೆಯ ಮಾದರಿಯ ಸಿನಿಮಾ ಮತ್ತು ವಿಡಿಯೋ ನೋಡಲು ಇದು ಸರಿಯಾಗಿದೆ. ಹೈಡೆಫಿನಿಶನ್ ಸಿನಿಮಾ ಅಥವಾ ವಿಡಿಯೋಗಳು ಸಾಮಾನ್ಯವಾಗಿ 16:9ರ ಅನುಪಾತದಲ್ಲಿರುತ್ತವೆ. ಈ ಟ್ಯಾಬ್ಲೆಟ್‌ನಲ್ಲಿ ಅಂತಹ ವಿಡಿಯೋಗಳನ್ನು ನೋಡಬಹುದು. ಆಗ ಪರದೆಯ ಮೇಲಿನ ಮತ್ತು ಕೆಳಗಿನ ಭಾಗಗಳಲ್ಲಿ ಕಪ್ಪು ಪಟ್ಟಿ ಕಂಡುಬರುತ್ತದೆ.

ಇಂತಹ ಅನುಭವ ನಿಮಗೆ ನಿಮ್ಮ ಮನೆಗಳಲ್ಲಿರುವ ಹಳೆಯ ಸಿಆರ್‌ಟಿ ಟಿ.ವಿ.ಗಳಲ್ಲೂ ಆಗಿರಬಹುದು. ಈ ಟ್ಯಾಬ್ಲೆಟ್‌ನಲ್ಲಿ ವಿಡಿಯೋ ವೀಕ್ಷಣೆಯ ಅನುಭವ ಚೆನ್ನಾಗಿದೆ. ಇದರ ಬೆಲೆಗೆ ಹೋಲಿಸಿದರೆ ವಿಡಿಯೋ ಪ್ಲೇಯರ್ ಆಗಿ ಇದು ನಿಜವಾಗಿಯೂ ಉತ್ತಮ ಗ್ಯಾಜೆಟ್. ಕೇವಲ ವಿಡಿಯೋ ಪ್ಲೇಯರ್ ಆಗಿ ಮಾತ್ರವಲ್ಲ ಉತ್ತಮ ಇಬುಕ್ ರೀಡರ್ ಆಗಿಯೂ ಬಳಸಬಹುದು.  

ಅಂತರಜಾಲ ಸಂಪರ್ಕಕ್ಕೆ ವೈಫೈ ಇದೆ. ಜೊತೆಗೆ 3ಜಿ ಮೋಡೆಮ್ ಡಾಂಗಲ್ ಕೂಡ ಬಳಸಬಹುದು. ಇದಕ್ಕೆಂದೇ ಅಗತ್ಯ ಅಡಾಪ್ಟರ್ ಒಂದನ್ನು ಕೂಡ ಜೊತೆಯಲ್ಲೇ ನೀಡಿದ್ದಾರೆ. ಹೈಡೆಫಿನಿಶನ್ ವಿಡಿಯೋ ಪ್ಲೇ ಮಾಡುತ್ತಿದ್ದಲ್ಲಿ ಅದರ ಔಟ್‌ಪುಟ್ ಅನ್ನು ನಿಮ್ಮ ಮನೆಯಲ್ಲಿರುವ ಹೈಡೆಫಿನಿಶನ್ ಟಿ.ವಿ.ಗೆ ಊಡಿಸಲು ಎಚ್‌ಡಿಎಂಐ ಕಿಂಡಿ ಇದೆ.

ಆದರೆ ಸೂಕ್ತ ಕೇಬಲ್ ನೀಡಿಲ್ಲ. ಅದನ್ನು ನೀವು ಮಾರುಕಟ್ಟೆಯಲ್ಲಿ ಕೊಳ್ಳಬೇಕು. ಗಣಕಕ್ಕೆ ಸೂಕ್ತ ಕೇಬಲ್ ಮೂಲಕ ಜೋಡಿಸಲು ಯುಎಸ್‌ಬಿ ಕಿಂಡಿ ಇದೆ. ಈ ಕೇಬಲ್ ಅನ್ನು ಅವರೇ ನೀಡಿದ್ದಾರೆ. ಆದರೆ ಯುಎಸ್‌ಬಿ ಚಾರ್ಜಿಂಗ್ ಇಲ್ಲ. ಚಾರ್ಜಿಂಗ್‌ಗೆ ಪ್ರತ್ಯೇಕ ಕಿಂಡಿ ಇದೆ. ಸೂಕ್ತ ಅಡಾಪ್ಟರ್ ನೀಡಿದ್ದಾರೆ. ಯುಎಸ್‌ಬಿ ಚಾರ್ಜಿಂಗ್ ಸೌಲಭ್ಯ ನೀಡದಿರುವುದು ಒಂದು ಪ್ರಮುಖ ಕೊರತೆ.

ಇದರ ಕ್ಯಾಮೆರಾದ ಗುಣಮಟ್ಟ ಅಷ್ಟಕ್ಕಷ್ಟೆ. ಅಷ್ಟಕ್ಕೂ ಟ್ಯಾಬ್ಲೆಟ್ ಅನ್ನು ಕ್ಯಾಮೆರಾ ಆಗಿ ಎಷ್ಟು ಜನ ಬಳಸುತ್ತಾರೆ? ಬಳಸಲು ಇಷ್ಟ ಪಡುತ್ತಾರೆ? ನಾನಂತೂ ಟ್ಯಾಬ್ಲೆಟ್ ಮತ್ತು ಫೋನ್‌ಗಳಲ್ಲಿ ಇರುವ ಕ್ಯಾಮೆರಾ ಬಳಸುವುದು ತುಂಬ ಕಡಿಮೆ. ಕ್ಯಾಮೆರಾ ಬಳಸಬೇಕಾದಾಗಲೆಲ್ಲ ನನ್ನ ಡಿಎಸ್‌ಎಲ್‌ಆರ್ ಕ್ಯಾಮೆರಾ ಹೊರಗೆ ಬರುತ್ತದೆ. ಈ ಟ್ಯಾಬ್ಲೆಟ್‌ನ ಆಡಿಯೋ ಗುಣಮಟ್ಟ ಅಷ್ಟಕ್ಕಷ್ಟೆ. ಅದರ ವಾಲ್ಯೂಮ್ ಮಟ್ಟ ಕೂಡ ತುಂಬ ಕಡಿಮೆ ಇದೆ. ಇದು ಸ್ವಲ್ಪ ವಿಚಿತ್ರ. ಉತ್ತಮ ವಿಡಿಯೋ ಗುಣಮಟ್ಟ ನೀಡಿ ಕಳಪೆ ಆಡಿಯೋ ನೀಡಿದ್ದು ಯಾಕೋ ಸರಿಯಿಲ್ಲ.

ಇದು ಆಂಡ್ರೋಯಿಡ್ ಆವೃತ್ತಿ 4.1.1 (ಜೆಲ್ಲಿಬೀನ್) ಬಳಸುತ್ತದೆ. ಇದರಲ್ಲಿ ಕನ್ನಡ (ಯುನಿಕೋಡ್) ಪಠ್ಯವನ್ನು ತೋರಿಸುವ (ರೆಂಡರಿಂಗ್) ಸೌಲಭ್ಯ ಇದೆ. ಅಂದರೆ ಕನ್ನಡದ ಜಾಲತಾಣಗಳ ವೀಕ್ಷಣೆ, ಇಮೇಲ್, ಫೇಸ್‌ಬುಕ್, ಟ್ವಿಟ್ಟರ್, ಇತ್ಯಾದಿ ಸಾಧ್ಯ. ಕನ್ನಡದ ಕೀಲಿಮಣೆ ನೀಡಿಲ್ಲ. ಕನ್ನಡದ ಕೀಲಿಮಣೆ ಬೇಕಿದ್ದಲ್ಲಿ Anysoftkeyboard ಮತ್ತು Kannada for anysoftkeyboard ಗಳನ್ನು ಗೂಗ್ಲ್ ಪ್ಲೇ ಜಾಲತಾಣದಿಂದ (play.google.com) ಹಾಕಿಕೊಳ್ಳಬೇಕು.
ಒಟ್ಟಿನಲ್ಲಿ ಮಧ್ಯಮ ದರದಲ್ಲಿ ಒಂದು ಮಧ್ಯಮ ದರ್ಜೆಯ ಟ್ಯಾಬ್ಲೆಟ್ ಎನ್ನಬಹುದು.

ಗ್ಯಾಜೆಟ್ ಸಲಹೆ
ಪೂಜಾ ಗೌಡ ಅವರ ಪ್ರಶ್ನೆ:
ಕನ್ನಡದಿಂದ ಇಂಗ್ಲಿಷಿಗೆ ಅನುವಾದ ಮಾಡುವ ಜಾಲತಾಣ ಇದೆಯೇ?
ಉ: ಗೂಗ್ಲ್ ಅನುವಾದ ಇದೆ. ಅದರ ವಿಳಾಸ -  translate.google.com ಆದರೆ ಅದರ ಅನುವಾದ ತೃಪ್ತಿದಾಯಕವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT