ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಲ್ಟನ್‌ನ ಕರಾಳ ನೆನಪ ಕೆದಕುತ್ತಾ...

Last Updated 3 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಕಾರ್ಲ್ಟನ್ ಬೆಂಕಿಯ ನೆನಪು ಹಳೆಯ ಏರ್‌ಪೋರ್ಟ್ ರಸ್ತೆಯ ಕಾರ್ಲ್ಟನ್ ಟವರ್ಸ್ ಬೆಂಕಿ ಅಪಘಾತವಾಗಿ ಮೂರು ವರ್ಷ ಕಳೆದಿದೆ. ಫೆಬ್ರುವರಿ 23ರ ಆ ಘಟನೆ ನಿಮಗೆ ನೆನಪಿರಬಹುದು. ಹೊಗೆಯಾಡುತ್ತಿರುವ ಕಟ್ಟಡದ ಮೇಲಿಂದ ಗಾಬರಿಗೊಂಡವರು ಧುಮುಕುವುದನ್ನು ಟಿವಿಯಲ್ಲಿ ನೀವು ನೋಡಿರಬಹುದು. ಈ ಅಪಘಾತ ಒಂಬತ್ತು ಜನರನ್ನು ಬಲಿ ತೆಗೆದುಕೊಂಡಿತು. ಗಾಯಗೊಂಡ 60 ಜನರ ಪೈಕಿ ಹಲವರ ಜೀವನದ ದಿಕ್ಕೇ ಬದಲಾಗಿ ಹೋಗಿದೆ. 

ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ ಕಚೇರಿ ಅದೇ ಕಟ್ಟಡದಲ್ಲಿತ್ತು. ಬೆಂಕಿ ಅಪಘಾತದ ಎರಡು ತಿಂಗಳ ಮುನ್ನ ಅಲ್ಲಿಂದ ಮ್ಯೂಸಿಯಂ ರಸ್ತೆಗೆ ಕಚೇರಿ ವರ್ಗವಾಗಿತ್ತು. ಕಾರ್ಲ್ಟನ್ ಟವರ್ಸ್‌ನಲ್ಲಿ ಇಂಥ ಅಪಘಾತವಾಗಬಹುದು ಎಂಬ ಸೂಚನೆಯೇ ಇರಲಿಲ್ಲ. ಗಾಳಿ ಬೆಳಕು ಚೆನ್ನಾಗಿತ್ತು. ಅಕ್ಕಪಕ್ಕದ ಕಟ್ಟಡ ಕಾರ್ಲ್ಟನ್ ಕಟ್ಟಡಕ್ಕೆ ಅಂಟಿಕೊಂಡಿರಲಿಲ್ಲ. ಮೆಟ್ಟಿಲು ಅಗಲವಾಗಿತ್ತು. ಕಿಟಕಿ ದೊಡ್ಡದಾಗಿದ್ದವು.

ದೆಹಲಿಯ ಮುಖ್ಯ ವಾಣಿಜ್ಯ ಕೇಂದ್ರವಾದ ಕನಾಟ್ ಪ್ಲೇಸ್‌ನ ಹತ್ತಿರ ಒಂದು ಕಟ್ಟಡದಲ್ಲಿ ಸ್ವಲ್ಪ ವೇಳೆ ನಾನು ಕೆಲಸ ಮಾಡುತ್ತಿದ್ದೆ. ಅದರ ವಿನ್ಯಾಸ ಅಂಜಿಕೆ ತರಿಸುವಂತಿತ್ತು. ಮೆಟ್ಟಿಲು ಚಿಕ್ಕದಾಗಿ, ಕತ್ತಲು ಕತ್ತಲಾಗಿದ್ದವು. ಲಿಫ್ಟ್ ಕೇಬಲ್ ಕೆಟ್ಟ ಶಬ್ದ ಮಾಡುತ್ತಿತ್ತು. ದೆಹಲಿಯ ಅಗ್ನಿ ಶಾಮಕದಳ ಅಲ್ಲಿನ ಅಪಾಯಗಳನ್ನು ಅಂದಾಜು ಮಾಡಿ ಕಟ್ಟಡವನ್ನೇ ಕೆಡವಿ ಹಾಕಬೇಕು ಎಂದು ಶಿಫಾರಸು ಮಾಡಿತ್ತು. ಅದರಂತೆಯೇ ಆ ದೊಡ್ಡ ಕಟ್ಟಡವನ್ನು ನೆಲಸಮ ಮಾಡಿಬಿಟ್ಟರು.

ಅಗ್ನಿಶಾಮಕ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಬೆಂಗಳೂರಿನಲ್ಲಿ ಯಾವ ಸಾರ್ವಜನಿಕ ಕಟ್ಟಡದ ಮೇಲೂ ಇಂಥ ಕ್ರಮ ಕೈಗೊಂಡಿದ್ದೇ ಇಲ್ಲ. ರಿಯಲ್ ಎಸ್ಟೇಟ್ ದುರಾಸೆಯಲ್ಲಿ ನಿರ್ಮಾಣವಾಗುತ್ತಿರುವ ಅಂಗಡಿ ಮಳಿಗೆಗಳಲ್ಲಿ ಮತ್ತು ಮಾಲ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಂಕಿ ಅಪಘಾತವೇನಾದರೂ ಸಂಭವಿಸಿದರೆ ಆಗಬಹುದಾದ ಡ್ಯಾಮೇಜ್ ಯಾರಾದರೂ ಅಂದಾಜು ಮಾಡುತ್ತಿದ್ದಾರೆಯೇ?

ವಾಸ್ತುಶಿಲ್ಪ ಚೆನ್ನಾಗಿದ್ದರೂ ಕಾರ್ಲ್ಟನ್‌ನಲ್ಲಿ ಏನಾಯಿತು ನೋಡಿ. ಅಗ್ನಿಶಾಮಕ ದಳದ ವಾಹನಗಳು ಬಂದಾಗ ಅವು ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಮುಂದೆ ಜಾಗವಿದ್ದರೂ ಗೇಟ್ ವಿನ್ಯಾಸ ಸರಿಯಾಗಿರಲಿಲ್ಲ. ಫೈರ್ ಎಂಜಿನ್‌ಗಳು ಹೊರಗಡೆಯೇ ನಿಲ್ಲಬೇಕಾಯಿತು. ಇನ್ನು ಯಾರೋ ಬಿಲ್ಡಿಂಗ್ ಸೆಕ್ಯೂರಿಟಿಯ ಹೆಸರಲ್ಲಿ ತುರ್ತು ನಿರ್ಗಮನವನ್ನು ಮುಚ್ಚಿಸಿಬಿಟ್ಟಿದ್ದರಂತೆ.

ವೈರಿಂಗ್ ತೊಂದರೆಯಿಂದ ಶುರುವಾದ ಬೆಂಕಿ ಕಪ್ಪು ಹೊಗೆಯಾಗಿ ಮಹಡಿಯಿಂದ ಮಹಡಿಗೆ ಆವರಿಸಿ, ಕೆಲಸ ಮಾಡುತ್ತಿದ್ದವರನ್ನು ಅಸಹಾಯಕಗೊಳಿಸಿತು. ಕಟ್ಟಡದ ಮಾಲೀಕರ ಮೇಲೆ ಕೈಗೊಂಡ ಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇವೆ. ಈ ಮೂರು ವರ್ಷದಲ್ಲಿ ಅಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆದಿಲ್ಲ.

ಕಪ್ಪಾದ ಗೋಡೆಗಳು ಹಾಗೆಯೇ ಇವೆ. ಮತ್ತೆ ಅಲ್ಲಿ ಅಂಗಡಿಗಳು ತೆರೆಯಬಹುದು ಎಂದು ವರದಿಗಳು ಸೂಚಿಸುತ್ತಿವೆ. ಅದರ ವಿರುದ್ಧ ಅಭಿಪ್ರಾಯವೂ ವ್ಯಕ್ತವಾಗಿದೆ. ಆದರೆ ಒಂದು ವಿಷಯ ಗಮನಿಸಿದ್ದೀರಾ? ಆ ಕಟ್ಟಡಗಳನ್ನು ಸೇಫ್ ಎಂದು ಪ್ರಮಾಣ ಮಾಡಿದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಗುರಿಯಾಗಿಲ್ಲ. ಇಂಥ ದುರಂತವಾದಾಗ ಅವರನ್ನು ದಾರಿಗೆ ತರುವುದು ಮೊದಲ ಕೆಲಸವಾಗಬೇಕು.

ಮನೀಷಾ ರಾಮಕೃಷ್ಣನ್ (43 ವರ್ಷ) ಎಂಬುವರು ಕಾರ್ಲ್ಟನ್ ಕಟ್ಟಡದ ಏಳನೆಯ ಮಹಡಿಯಲ್ಲಿ  ಕೆಲಸ ಮಾಡುತ್ತಿದ್ದರು. ಅವರಿಗೆ ಬೆಂಕಿಯ ಸುದ್ದಿ ಸುಮಾರು ಮೂರು ಗಂಟೆಗೆ ಗೊತ್ತಾಯಿತು. ಬಾಗಿಲು ತೆರೆದ ಕೂಡಲೇ ಹೊಗೆ ಎಲ್ಲೆಲ್ಲೂ ಹರಡಿತು. ಉಸಿರುಕಟ್ಟುವ ಅನುಭವವಾಯಿತು. `ಹೊಗೆಯಲ್ಲಿ ಸಾವಿನ ವಾಸನೆಯಿತ್ತು' ಎಂದು ಅವರು ನೆನಪು ಮಾಡಿ ಕೊಳ್ಳುತ್ತಾರೆ.

ಏನು ಮಾಡಬೇಕು ಎಂದು ತೋಚದೆ ಕಿಟಕಿಯನ್ನು ತೆರೆದರು. ಎಲ್ಲೆಲ್ಲೂ ಜನ ಚೀರುತ್ತಿದ್ದರು. ಅಗ್ನಿಶಾಮಕ ದಳದವರು ಸುಮಾರು ಐದೂ ಕಾಲು ಗಂಟೆಗೆ ಅವರ ಮಹಡಿಯನ್ನು ತಲುಪಿದರು. ಅಷ್ಟು ಹೊತ್ತಿಗೆ ಇವರಲ್ಲಿ ತ್ರಾಣವೇ ಇಂಗಿ ಹೊಗಿತ್ತು. `ಇಲ್ಲಿ ಯಾರಾದರೂ ಇದ್ದೀರಾ?' ಎಂದು ಫೈರ್‌ಮೆನ್ ಕೂಗಿದಾಗ ಇವರಿಗೆ ಉತ್ತರಿಸಲೂ ಸಾಧ್ಯವಾಗಲಿಲ್ಲ.

ಅದೃಷ್ಟಕ್ಕೆ ಅಗ್ನಿ ಪಡೆಯವರ ಕಣ್ಣಿಗೆ ಬಿದ್ದರು. ಅವರ ಸಹಾಯದಿಂದ ಹೇಗೋ ಮೆಟ್ಟಿಲು ಇಳಿದರು. ಅಲ್ಲಿ ಅವರಿಗೆ ಪ್ರಜ್ಞೆ ತಪ್ಪಿ ಹೋಯಿತು. ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದರು. ಐಸಿಯುನಲ್ಲಿ ಮೂರೂವರೆ ತಿಂಗಳು ಕಳೆದು ಬದುಕುಳಿದರು. ಆಸ್ಪತ್ರೆಯ ರೂ.10 ಲಕ್ಷದ ಬಿಲ್ ಸರ್ಕಾರ ಭರಿಸಿತು.

ಔಷಧಿ ಪಥ್ಯದ ಖರ್ಚು ರೂ. 12 ಲಕ್ಷ ಆಯಿತು. ಇನ್ಸೂರೆನ್ಸ್ ಕಂಪೆನಿ ಅದನ್ನು ಭರಿಸಿತು. ಆದರೆ ಇಂದು ಮನೀಷಾ ಅವರ ಧ್ವನಿಯೇ ಅಡಗಿಹೋಗಿದೆ. ಕ್ಷೀಣವಾಗಿ ಮಾತಾಡಬಲ್ಲರು, ಅಷ್ಟೆ. ಗಂಟಲಲ್ಲಿ ಅಳವಡಿಸಿದ ಪುಟ್ಟ ಪೈಪ್‌ನ ಸಹಾಯದಿಂದ ಉಸಿರಾಡುತ್ತಾರೆ. ಯಾವುದೇ ವಾಸನೆ ಗೊತ್ತಾಗುವುದಿಲ್ಲ.

ಬೆಂಕಿ ಬಿದ್ದ ಕೂಡಲೇ ಎಷ್ಟೋ ಸಾರ್ವಜನಿಕರು ಬೆಡ್‌ಶೀಟ್ ಹಿಡಿದು ಮೇಲೆ ಸಿಕ್ಕಿಕೊಂಡವರನ್ನು ಉಳಿಸಲು ಪ್ರಯತ್ನಿಸಿದರು. ಅಷ್ಟು ಎತ್ತರದಿಂದ ಧುಮುಕಿದರೆ ಬೆಡ್‌ಶೀಟ್ ಭಾರ ತಡೆಯುವ, ಪ್ರಾಣ ಉಳಿಸುವ ಸಾಧ್ಯತೆಯೇ ಇಲ್ಲ. ಇದು ಜನರಿಗೆ ತಿಳಿದಿರಲಿಲ್ಲ. ಅಗ್ನಿಶಾಮಕ ದಳದವರ ಹತ್ತಿರ ಸೇಫ್ಟಿ ನೆಟ್‌ಗಳು ಇರಲಿಲ್ಲ.

ಪ್ರಾಣ ಉಳಿಸಲು ಪಶ್ಚಿಮ ದೇಶಗಳಲ್ಲಿ ಬಳಸುವ ಸರಳ ಸಲಕರಣೆಗಳು ಕೂಡ ಇಲ್ಲಿ ಇರಲಿಲ್ಲ. ಮೂರು ವರ್ಷದ ನಂತರ ಇಂಥ ಸಂದರ್ಭಗಳಲ್ಲಿ ಬೇಕಾದ ಎಕ್ವಿಪ್ಮೆಂಟ್ ಅಗ್ನಿಶಾಮಕ ದಳ ಖರೀದಿಸಿದೆಯೇ? ಪಾಲಿಕೆಯ ನಿಯಮಗಳನ್ನು ಮೀರಿ ಅಗ್ನಿ ಅಪಾಯಗಳ ಅರಿವೇ ಇಲ್ಲದೆ ಏಳುತ್ತಿರುವ ಕಟ್ಟಡಗಳನ್ನು ತಡೆಯಲು ಏನಾದರೂ ಆಗುತ್ತಿದೆಯೇ?

ಪುಸಿ ಕ್ಯಾಟ್ ಜೆಂಡರ್ ತಲೆಹರಟೆ 
ನೀವು ಎಫ್‌ಎಂ ರೇಡಿಯೋ ಕೇಳುಗರಾದರೆ ಪುಸಿ ಕ್ಯಾಟ್ ಪುಸಿ ಕ್ಯಾಟ್ ಎಂದು ಶುರು ಆಗುವ ಹಾಡು ಕೇಳಿರುವ ಸಾಧ್ಯತೆ ಇದೆ. ಐಟಂ ನಂಬರ್ ಎಂದು ಕರೆಸಿಕೊಳ್ಳುವ ಪ್ರಕಾರಕ್ಕೆ ಸೇರುವ ಈ ಹಾಡು ಸ್ವಲ್ಪ ಗೊಂದಲದಲ್ಲಿ ರಚಿಸಿದ ಹಾಗೆ ಕಾಣುತ್ತದೆ.

`ಪುಸಿ ಕ್ಯಾಟ್ ಪುಸಿ ಕ್ಯಾಟ್ ಮಿಸ್ಸಿಂಗ್ ನನ್ನ ಪುಸಿ ಕ್ಯಾಟ್' ಎನ್ನುವ ಮೊದಲ ಸಾಲಿನಲ್ಲೇ ಏನೋ ಹೆಚ್ಚು ಕಡಿಮೆಯಾಗಿದೆ ಎಂದೆನಿಸಿದರೆ ಅದಕ್ಕೆ ಕಾರಣವಿದೆ. `ಪುಸಿ ಕ್ಯಾಟ್' ಅಂದರೆ ಹೆಣ್ಣು ಬೆಕ್ಕು. ಗಂಡು ಬೆಕ್ಕಾದರೆ `ಟಾಮಿ ಕ್ಯಾಟ್ ಟಾಮಿ ಕ್ಯಾಟ್' ಎಂದು ಹಾಡು ಇರಬೇಕಾಗಿತ್ತು. ಅಥವಾ ಇದು ಹೊಸ ಯುಗದ ಲೆಸ್ಬಿಯನ್ ಹಾಡಿರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT