ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಂ ಮಾರಿ ಪೋಚು ಅಥವಾ ಕೈ ಕಟ್ಟ್‌ ಬಾಯ್‌ ಮುಚ್‌

Last Updated 23 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಆ  ದೈತ್ಯ ಮರಗಳು ಮನುಷ್ಯನ ಹತ್ಯಾರದೆದುರು ಏನೊಂಚೂರೂ ಪ್ರತಿಭಟಿಸದೆ ಕೈಕಾಲು ಚೆಲ್ಲಿ ಆಕಾಶಕ್ಕೆ ಮುಖ ಮಾಡಿ ಅಂಗಾತ ಕಂಗಾಲು ಬಿದ್ದಿವೆ. ತನ್ನ ಜೊತೆಯವರ ಜೀವ ಹೋಗುವುದನ್ನು ತಪ್ಪಿಸಲು ಆಗದೆ ನಿಂತಲ್ಲಿಂದ ಚಲಿಸಲಾರದ ಸಹೇಲಿ ಮರಗಳು ಮೂಕವಾಗಿ ಮರ್ಮರಿಸುತ್ತಿವೆ. ತಮ್ಮ ಅವಸಾನವೂ ಹತ್ತಿರ ಬಂತೆಂದು ತಿಳಿದೋ, ತಿಳಿಯದೆಯೋ.

`... ಜನರು ಸಾಲು ಮರಗಳಿಲ್ಲದೇ ಬಿಸಿಲಿಗೆ ಬಳಲುವುದನ್ನು ನಾನು ಕಾಣುತ್ತಲೆ ಇದ್ದೆ... ಕುಂದಾಪುರದಿಂದ ಸಾಲಿಗ್ರಾಮದವರೆಗೂ ದೇವದಾರುಗಿಡಗಳನ್ನು ನೆಟ್ಟು ಬೆಳೆಯಿಸುತ್ತಾ ಬಂದೆ... ಹಲವಾರು ವರ್ಷಗಳಿಂದ ವನಮಹೋತ್ಸವವನ್ನು ನಡೆಸಿಕೊಂಡು ಬರುವವರಿಗೆ ದನಕರುಗಳ ಬಾಯಿಗೆ ಅವುಗಳ ಕೋಡು ತಿಕ್ಕಾಟಕ್ಕೆ ಸಿಗುವ ಗಿಡಗಳನ್ನು ನೆಟ್ಟು ಪ್ರಯೋಜನವಿಲ್ಲ ಎಂಬ ಸಣ್ಣ ಸಂಗತಿ ಕೂಡ ಇನ್ನೂ ತಿಳಿದಿಲ್ಲ~.  ದಿವಂಗತ ಕೋ.ಲ.ಕಾರಂತರು ತಮ್ಮ `ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು~ ಕೃತಿಯ `ಸಮಾಜದ ಋಣ ಹೇಗೆ ತೀರಿಸಿಯೇನು~ ಅಧ್ಯಾಯದಲ್ಲಿ ತಾವು ದಾರಿಯುದ್ದಕ್ಕೂ ಗಾಳಿ ಗಿಡಗಳನ್ನು ದೇವದಾರು ಮರಗಳನ್ನು ನೆಟ್ಟ ಕತೆ ಹೇಳುತ್ತಾರೆ.

-ಇತ್ತೀಚೆಗೆ ಅವುಗಳೆಲ್ಲ ಚತುಷ್ಪಥ ರಸ್ತೆಯ ಒಡ್ಡೋಲಗದಲ್ಲಿ ತಲೆದಂಡ ಶಿಕ್ಷೆಗೆ ಒಳಗಾದಾಗ, `ಯಾವುದೇ ಆದರೂ ಅದಕ್ಕೊಂದು ಆಯುಷ್ಯ ಅಂತ ಉಂಟು. ಅದು ಮುಗಿದೊಡನೆ ಹೊರಡುವುದೇ... ಅಂಥಾ ಸಾಮ್ರಾಟ್‌ ಅಶೋಕ ನೆಟ್ಟ ಮರಗಳೇ ಈಗ ಎಲ್ಲಿವೆ ಚರಿತ್ರೆಯ ಪಾಠದಲ್ಲಿ ಬಿಟ್ಟರೆ? ಊರು ಬೆಳೆಯುವುದೆಂದರೆ ಹೀಗೇ ಮತ್ತೆ~, `ಕಡಿಯದೆ ದಾರಿಯುಂಟೆ? ರಸ್ತೆ ಬೇಕಲ್ಲ?~, `ಅಯ್ಯೋ, ಎಲ್ಲ ಹೋದವೆ, ಛೆ~, `ಮತ್ತೆ ಗಿಡ ನೆಡುವರೆ ಇಲ್ಲವೆ?~- ಇತ್ಯಾದಿ ಮಾತಾಡಿಕೊಂಡೆವು,
ಸಾಲುಮರದ ತಿಮ್ಮಕ್ಕನಿಗೆ ನಮ್ಮೂರ ಕತೆ ಕೇಳಿದರೆ ಏನನಿಸೀತು?

*
ಬಹಳ ಬಹಳ ಹಿಂದೆ ಆಗಿನ್ನೂ ನಮ್ಮೂರಲ್ಲಿ ಕೆಂಪುರಸ್ತೆಯಿತ್ತು. ಎತ್ತುಕೊರಳಿನ ಗಂಟೆ ಝಿಣಿಗುಡುವ ಗಾಡಿ ಸಂಚಾರವಿತ್ತು. ದಿನಾ ಸಂಜೆಯಾದೊಡನೆ ರಸ್ತೆಬದಿಯ ದೀಪದ ಕಂಬ ಹತ್ತಿ ಒಬ್ಬಾತ ಅದರ ತುದಿಯಲ್ಲಿರುವ ಗಾಜಿನ ಬುರುಡೆಯೊಳಗೆ ದೀಪ ಹಚ್ಚಿಟ್ಟು ಕೆಳಗಿಳಿಯುತ್ತಿದ್ದ. ಈಗ ಆತನ ಮುಖ ನೆನೆದರೆ ಕಣ್ಮಂದೆ ಬರುತ್ತಲೇ ಇಲ್ಲ! ಬರುವುದಾದರು ಹೇಗೆ? ದೂರದ ಕಂಬ ಹತ್ತಿ ತನ್ನ ಕೆಲಸ ಮುಗಿಸಿ ಇಳಿದು ಕ್ಷಣ ನಿಲ್ಲದೆ ಇನ್ನೊಂದು ದೀಪ ಹಚ್ಚುವ ಗಡಗುಟ್ಟಿನಲ್ಲಿ ಮಾಯವಾಗುತ್ತಿದ್ದ ಆತನನ್ನು ನಾವು ಹತ್ತಿರದಿಂದ ಕಂಡೇ ಇಲ್ಲ, ಆದರೂ ಕಂಡಂತೆಯೇ ಇದ್ದೆವು! ಮನಸ್ಸಿನಲ್ಲಿ ದಾಖಲಾದದ್ದು ಮುಸ್ಸಂಜೆಯ ಮಸುಕಲ್ಲಿ ದೀಪದ ಕಂಬ ಹತ್ತಿ ಇಳಿಯುವ ಆತನ ಆ ಅಸ್ಪಷ್ಟ ಗಿಡ್ಡ ಆಕೃತಿ ಮಾತ್ರ ಅಂತ ತಿಳಿದದ್ದೇ ಈಗ! ಕಾಣುವುದು ಎಂಬುದರ ವೈಚಿತ್ರವೆ! ಬೀದಿಯಲ್ಲಿ ಆ ದೀಪ, ಮನೆಯಲ್ಲಿ ಬೆಡ್‌ಲ್ಯಾಂಪ್‌, ಮೂನ್‌ಲ್ಯಾಂಪ್‌, ಚಿಮಿಣಿ, ಲಾಟೀನು. ನೆರಳಲ್ಲಿ ಆಟ, ಬೆಳಕಲ್ಲಿ ಓದು, ದೀಪ ಮುಂದೆ ಹೋಗುತ್ತಿದ್ದರೆ ಗೋಡೆಯ ಮೇಲೆ ಭೂತ, ಎಷ್ಟೆಲ್ಲ ಕತ್ತಲ ಮೂಲೆಗಳು! ಮೂಲೆಯಲ್ಲಿ ಏನೋ ಕಂಡಂತೆ ಆಗುವ ಆಕಾರಗಳು!... ಸಂಜೆ ಅಕ್ಕ ಬಾಮಿಕಟ್ಟೆಯಲ್ಲಿ ನೀರೆತ್ತಿ ದೊಡ್ಡ ತಾಮ್ರದ ಕಟಾರಿಗೆ ತುಂಬಿಸಿ ದೀಪದ ಬುರುಡೆಗಳಿಗೆ ಸುಣ್ಣ ಹಚ್ಚಿ ಮಸಿ ತೊಳೆಯುತ್ತಾಳೆ, ವರೆಸಿ ಶುಭ್ರ ಮಾಡುತ್ತಾಳೆ. ರಾತ್ರಿ ಮಲಗಿದಾಗ ಮೂಲೆಯಲ್ಲಿ ದೀಪ ಮಿಣಗುಡುತ್ತದೆ. ಸಣ್ಣದೊಂದು ಕನಸು ಕಣ್ಣು ಮುಚ್ಚಿ ಮುಚ್ಚಿ ತೆರೆದಂತೆ. ಮಧ್ಯರಾತ್ರಿ, ನಿಶ್ಯಬ್ದ;... ಎಚ್ಚರವಾದರೂ ಕಣ್ಣು ತೆರೆಯುವಂತಿಲ್ಲ, ಬಚ್ಚಲಿಗೆ ಹೋಗಬೇಕು. ಅಮ್ಮಾ ಅಮ್ಮಾ.... ಅಮ್ಮ ಎದ್ದು ಬರುತ್ತಾಳೆ. ಎಚ್ಚರಾಗದ ಮಕ್ಕಳನ್ನೂ ಎಬ್ಬಿಸಿ ಒಟ್ಟಿಗೆ ಬಚ್ಚಲಿಗೆ ಕರೆದುಕೊಂಡು ಹೋಗಿ ಬರುತ್ತಾಳೆ. ರಾತ್ರಿಯಲ್ಲಿ ಹೊರಗೆ ಬರಲು ಅಮ್ಮ ಒಬ್ಬಳಿದ್ದರೆ ದೀಪವೂ ಬೇಡ!
 

`ಅದೇ? ಡಾಮರು .... ನಾಳೆ ನೋಡಿ~
ನಮ್ಮೂರಿನ ಸಂತೆ ಎಂದರೆ ಅಂದಿನ ಮಟ್ಟಿಗೆ `ವರ್ಳ್ಡ್‌~ಫೇಮಸ್‌! ಅದು ಯಾವ ವರ್ಲ್ಡ್‌, ಹೇಳಲೇಬೇಕೆಂದರೆ ನಾವು ನಿಂತ ನೆಲ ಸುತ್ತಿನ ಮತ್ತೊಂದಿಷ್ಟು ನೆಲ. ಪ್ರಪಂಚವಾಗಲು ಏನು ಪ್ರಪಂಚವೇ ಬೇಕೆ? ನಾವು ನಾವು ತಿಳಿದುಕೊಂಡಹಾಗೆ ನಮ್ಮ ನಮ್ಮ ಪ್ರಪಂಚವಷ್ಟೆ? ಈ ಸಂತೆಗೆ ನಮ್ಮ ಧೂಲಿಧೂಸರಿತ ಮಾರ್ಗದ ಮೇಲಿಂದ ಆಗೆಲ್ಲ ಮೊಗ್ಗುಬೆಳಗಲ್ಲಿ ಲಾಟೀನು ಕಂಠದಲಿ ಮೆಲುಹಾಡಿನ ಗುನುಗಲ್ಲಿ ಜೋಡೆತ್ತಿನ ಕೊರಲ ಗೆಜ್ಜೆ ಝಿಣಿಝಿಣಿಯಲ್ಲಿ ಗಾಡಿಗಳ ಕೆರವಾನ್‌ ಸಾಗುತ್ತಿತ್ತು. ಸುತ್ತಮುತ್ತಣ ಹಳ್ಳಿಗಳಿಂದ ತರಕಾರಿ ದಿನಸು ತೆಂಗು ಏನೇನೆಲ್ಲವನ್ನು  ತುಂಬಿಕೊಂಡು ಬರುತ್ತಿದ್ದ ಅವುಗಳ ತಂಗುದಾಣಕ್ಕೆ `ಗಾಡಿಬೇಣ~ ಎನ್ನುತ್ತಿದ್ದರು. ಅದು ಊರ ನಡುಮಧ್ಯೆಯೇ ಇತ್ತು. ಸಂತೆಯಲ್ಲಿ ಖಾಲಿಯಾಗಿ ಮತ್ತೇನೋ ತುಂಬಿಕೊಂಡು ಮರಳುವ ಆ ಕೆರವಾನನ್ನು ಅಗೋ ಇಲ್ಲೆ ಈಗ ಕಂಡೆಕಂಡೆ ಅಂತಿದೆ. ಗಾಡಿಬೇಣದಲ್ಲಿ, ಪಾಪ ಎತ್ತುಗಳು ಅಂಗಾತ ಮಲಗಿ ಗೊರಸಿಗೆ ಲಾಳ ಹೊಡೆಸಿಕೊಳ್ಳುತ್ತಿರುತ್ತಿದ್ದ ದೃಶ್ಯವನ್ನು ಎಷ್ಟುಸಲ ದಾಟಿದ್ದೆವೋ. `ನೋವಾಗುವುದಿಲ್ಲವೆ ಅವಕ್ಕೆ?~. `ಇಲ್ಲ. ನೋವಾಗುವುದಿಲ್ಲ. ಬದಲು, ಲಾಳ ಹೊಡೆಯದಿದ್ದರೆ ಗಾಡಿ ಎಳೆಯುವಾಗ ನೇರ ಗೊರಸಿಗೇ ಪೆಟ್ಟಾಗುತ್ತದೆ~ ಅಂತ ಹೇಳುವುದು ಯಾರು, ಎತ್ತುಗಳಲ್ಲ, ಮನುಷ್ಯರು. ಏನೋ, ನಂಬಿಗೆ ಬರದೆ ವೇದನೆ ಆಗುತ್ತಿತ್ತೂ ಸ್ವಲ್ಪವಲ್ಲ. ಸಂತೆದಿನ ಹೇಗೂ ಆಯಿತಲ್ಲ, ಉಳಿದ ದಿನಗಳಲ್ಲಿಯೂ ಸೌದೆಗಾಡಿ, ಒಣಹುಲ್ಲಿನ ಗಾಡಿ ಮುಂತಾದ ನಾನಾ ಗಾಡಿಗಳು ಈ ಹಾದಿ ತಮಗೂ ಸಂದದ್ದು ಎಂಬಂತೆ ಎಂತಹ ಆತ್ಮವಿಶ್ವಾಸದಲ್ಲಿ ಸಾಗುತ್ತಿದ್ದವು. ಖರೀದಿಗೆ ಮಾತಾಡುವವರು ಕೂಗಿಯೋ ಕೈಯ್ಯಡ್ಡ ಹಾಕಿಯೋ ನಿಲ್ಲಿಸಿದರೆ ಅಲ್ಲೇ ತುಸುಸರಿದು ನಿಂತು, ವ್ಯಾಪಾರ ಕುದುರದಿದ್ದಲ್ಲಿ, ಭೂಮಿಗೆ ನೋವಾದೀತು ಎಂಬಂಥ ತಮ್ಮ ಮಂದಗತಿಯ ಚಲನೆಯನ್ನು ಮುಂದರಿಸುತ್ತಿದ್ದವು. ಒಟ್ಟಾರೆ ಅದೊಂದು ಗೋಧೂಲಿಯ ಮಾರ್ಗವಾಗಿತ್ತು.

ಒಂದು ದಿನ ನೋಡಿದರೆ, ನಮ್ಮ ಗೋವಿಂದನ ಮಗ, ಅರೆ, ರಸ್ತೆದೂಳು ಗುಡಿಸುತ್ತಿದ್ದಾನೆ. ಕೇಳಿದರೆ ರಸ್ತೆಗೆ ಡಾಮರು ಹಾಕುತ್ತಾರೆ ಎನ್ನುತ್ತಿದ್ದಾನೆ. ಡಾಮರು ಅಂದರೆ ಏನ ಎಂದರೆ `ಅದೇ, ಡಾಮರು! ನಾಳೆ ನೋಡಿ ಎಲ್ಲ~ ಎಂದ. ಹ್ಞಾಂ, ಇದಕ್ಕೆ ಸರಿಯಾಗಿ, ಮುಂಗೋಳಿಗಳಂತೆ, ಅಗಲ ಚಕ್ರಗಳುಳ್ಳ ರೋಡ್‌ ಎಂಜಿನನ್ನು, ಮಣ್ಣುರಸ್ತೆಯ ಮೇಲೆ ಇರುವೆ ಹರಿದಂತೆ ಬಿಡುತ್ತ ನೀರು ಹರಿಸುತ್ತ ಮಟ್ಟಸ ಮಾಡುತ್ತ ಬಂದ ಒಬ್ಬಾತ. ಎಂಜಿನಿನ ಹಿಂದೆಯೇ ರಟ್ಟು ಹಿಡಿದು ಚಕ್ರಕ್ಕೆ ಅಂಟುತ್ತಿದ್ದ ಕೆಸರನ್ನು ಕೀಸುತ್ತ ಇದ್ದ ಒಬ್ಬಾತ ಹೊಸ ಕಾಲದ ಆಗಮನವನ್ನು ಸಾರಿದರು. ಆಮೇಲೆ ಒಂದು ದಿನ, ಮತ್ತೊಂದು ದಿನ ಮಗದೊಂದು ದಿನ ಅಂತ ಒಂದೊಂದೇ ಲಾರಿ ಬಂದುಬಂದು ರಸ್ತೆ ಬದಿಯಲ್ಲಿ ಜಲ್ಲಿ ಸುರಿದು ಆಯತಾಕಾರದಲ್ಲಿ ಉದ್ದಕೂ ಒಪ್ಪಮಾಡಿ ಮಾಡಿ ಹೋಗತೊಡಗಿದುವು. ನಾವು ಅವುಗಳಲ್ಲಿ ಒಂದೇ ಹದದ ಕಲ್ಲುಗಳನ್ನು ಹೆಕ್ಕಿ ಗಜ್ಜುಗದಾಟ ಆಡಿದೆವು. ಕೆಲವನ್ನು ಒಯ್ದು ಮನೆಯಲ್ಲಿ ಆಟದ ಪೆಟ್ಟಿಗೆಯೊಳಗೆ ಜೋಪಾನವಾಗಿ ಇಟ್ಟೆವು ಕೂಡ. ಯಾಕೆ ಅಂತ ಯಾರಿಗೆ ಗೊತ್ತು? ಯಾಕೆ ಗೊತ್ತಿರಬೇಕು? ನಮಗೇ ಗೊತ್ತಿಲ್ಲದ ಮೇಲೆ? ನಾಳೆ ಎಂದರೆ ನಾಳೆಯೇ ಅಲ್ಲವಾದರೂ ಗೋವಿಂದನ ಮಗ ಹೇಳಿದ್ದು ಸುಳ್ಳಲ್ಲ, ಒಂದಿನ ಜಲ್ಲಿ ಬೆರೆಸುವ ಯಂತ್ರ ಬಂತು. ಡಾಮರು ಡ್ರಮ್ಮುಗಳು ಬಂದವು. ಕರಿಯ ದ್ರವ ಹೊತ್ತ ಕರಿಯ ಡ್ರಮ್ಮುಗಳು. ಅದುವರೆಗೆ ನಾವು ಅಂತಹ ಡ್ರಮ್ಮುಗಳನ್ನು ನೋಡಿದ್ದುಂಟೆ? ಇದ್ದಕ್ಕಿದ್ದಂತೆ ರಸ್ತೆ ತುಂಬ ಎಲ್ಲಿಂದಲೋ ಏನೋ, ಕೆಲಸದವರು ತುಂಬಿದರು. ಅವರು ಈ ಊರು, ಈ ರಸ್ತೆ ಅದಕ್ಕೆ ಡಾಮರು ಹಾಕುವ ಸುದ್ದಿ ಎಲ್ಲ ತಮಗೆ ಜನ್ಮಾಂತರದಿಂದ ಗೊತ್ತು ಎಂಬಂತೆ ಇದ್ದರು. ಹೆಡಗೆಯಲ್ಲಿ ಜಲ್ಲಿ ತುಂಬಿ ತಿರುವುವ ಯಂತ್ರದೊಳಗೆ ಸುರಿಯುವರು, ಡಾಮರು ಸುರಿಯುವರು. ಯಂತ್ರವನ್ನು ರಂಯ್ಯರಂಯ್ಯ ತಿರುಗಿಸುವರು. ಕೆಂಪುದೂಳಿನ ರಸ್ತೆಯ ಮೇಲೆ ಜಲ್ಲಿಡಾಮರು ಮಿಶ್ರಣವನ್ನು ಗರ್‌ರ್‌ರ್ರ ಮಗುಚುವರು, ಹರಡುವರು, ಗೋಣಿಚೀಲವನ್ನು ಕಾಲಿಗೂ ಕೈಗೂ ಸುತ್ತಿ ಬೂಟ್ಸಿನಂತೆ ಗೌಸಿನಂತೆ ಕಟ್ಟಿಕೊಂಡವರು. ಆನೆಭಾರದ ರೋಡ್‌ ಎಂಜಿನು ಮತ್ತೆ ಇರುವೆಯಂತೆ ರಸ್ತೆಯ ಮೇಲೆ ಹರಿಯುವುದು.
ಮಟ್ಟಸ ಮಾಡುವುದು. ಪಾಪ ಅದಕ್ಕೆ ಮಟ್ಟಸ ಮಾಡುವುದೇ ಕೆಲಸ. ರಸ್ತೆಯೆಂದರೆ ಈಗ, ಹೇಗುಂಟು! `ಎಲೆ ಹಾಕಿ ಬಡಿಸಿದರೆ ಊಟ ಮಾಡಬಹುದು!~. ಅಯ್ಯೊ ರಾಮಾ, ಇಷ್ಟು ದಿವಸ ದೂಳು ತಿಂದದ್ದೇ! ಒಂದು ಮೋಟರು ಹೋಯಿತು ಅಂದರೆ ಕಣ್ಣ ಮುಂದೆ ದೂಳಿನದೇ ಸ್ಕ್ರೀನು! ಆದರೂ ಹೆಜ್ಜೆಯೆಂಬುದು ನಿಲ್ಲದೆ ಅಂದಾಜಿನ ಮೇಲೆ ಮುಂದೆ ಹೋಗುತ್ತಲೇ ಇರುತ್ತಿತ್ತಲ್ಲ (`ಉಳಿದದ್ದು ಆಕಾಶ~ ಎಂದಂತೆ) ಹೋದದ್ದೇ ರಸ್ತೆ ಅಂತ.
ಸರಿ, ಈಗ ಸರಿಯಾಯ್ತು. ಎಷ್ಟೋ ದಿನಗಳಿಂದ ಚೂರುಚೂರು ಚಿತ್ರಗಳಂತೆ ಕಂಡವೆಲ್ಲ ಈಗ ಒಂದಕ್ಕೊಂದು ಸಂಬಂಧಪಟ್ಟು ಇದೆಲ್ಲ ಹೀಗೆ ಎಂಬ ತಿಳಿವು ಹೊಳೆಸಿದವು. ನೋಡುತ್ತ ನಿಂತರೆ ಶಾಲೆಗೀಲೆ ಏನೂ ಬೇಡ. ಅಲ್ಲ, ಅಗ, ಗೋವಿಂದನ ಮಗ ಮಾತ್ರವಲ್ಲ ಅಲ್ಲಿ, ಈಗ ಗೋವಿಂದನೂ ಇದ್ದಾನೆ! ಕೆಲಮಂದಿ ಗುರುತಿನ ಕೆಲಸದವರೂ. ಹೊಸಕೆಲಸದ ಹುರುಪಿನಲ್ಲಿದ್ದಾರೆ. ನಮ್ಮನ್ನು ನೋಡಿದೊಡನೆ ಮುಗುಳ್ನಕ್ಕರು. ಶಾಲೆಗೆ ಹೊರಟಿರಾ ಅಂತ ಕೇಳಿದರು. `ಹ್ಞೂ. (ಹೋಗಲೇ ಬೇಕಲ್ಲ)~. ಅಂದಹಾಗೆ ಅರೆವಣಗಿದ ಡಾಮರಿನ ಮೇಲೆ ಮೆಲ್ಲಕಾಲಿಟ್ಟು ನೋಡಿದ್ದೀರಾ ನೀವು? ಎಷ್ಟು ಮೇತ್ತಗೆ ಅದು, ಕಾಲಿಗೂ ಅಂಟುವುದಿಲ್ಲ. ನಾವು ಹಾಗೆ ಕಾಲಿಟ್ಟು ಕುಣಿಯುವುದನ್ನು ಯಾರೋ ಬೇರೆ ಕಸುಬಿಲ್ಲದವರು ಕಂಡಾಯಿತಲ್ಲ, ಚಾಡಿ ಹೇಳಿಯಾಯಿತು. ಕಡೆಗೆ ಎಲ್ಲ ಮನೆಗಳಲ್ಲಿಯೂ ಮಕ್ಕಳೆದುರು ಒಂದೇ ಕತೆ- ಬಿಸೀ ಡಾಮರಿನ ಮೇಲೆ ಯಾರೋ ಕಾಲಿಟ್ಟು ಸುಟ್ಟುಕೊಂಡ ಕತೆ. ಆತನ ಕಾಲು ಅದರೊಳಗೆ ಸಿಕ್ಕಿಕೊಂಡು ಬೆಂದು ಮುದ್ದೆಯಾದ ಕತೆ. ಎಷ್ಟು ಎಳೆದರೂ ಹೊರಬರದೆ ಕಡೆಗೆ ಗೌರ್ಮೆಂಟ್‌ ಅಸ್ಪತ್ರೆ ಡಾಕ್ಟರು ಬಂದು ಕೊಯ್ದು ಆಪರೇಶನ್‌ ಮಾಡಿದ ಕತೆ. ನಂಬುವವರಿಲ್ಲದೆ ಕತೆಗಳೆಲ್ಲಿ? ಸತ್ಯ ಹೊಟ್ಟಿ ಹಾರುವಂತೆ ಹೇಳಿದರೆ ಮಕ್ಕಳೇನು ದೊಡ್ಡವರೂ ನಂಬಬೇಕು. ಅಬ್ಬಬ್ಬ ನಮಗೆ ಬೇಡ ಈ ಆಟ.

ಡ್ರಮ್ಮರೇ ಡ್ರಮ್ಮ್‌...
ಏನು? ಖಾಲಿ ಡಾಮರು ಡ್ರಮ್ಮುಗಳನ್ನು ನಾಕಾಣೆಗೆ ಕೊಡುತ್ತಾರೆಯೆ? ಕೇಳಿದೊಡನೆ ಹೇಗೆ ಅದು ಬೇಕೇಬೇಕಾದ ವಸ್ತುವಾಗಿ ಬಿಟ್ಟಿತೋ. ಎಲ್ಲರ ಮನೆಯಲ್ಲಿಯೂ ಸೇರಿಕೊಂಡು ನೀರುತುಂಬಿ ನಿಲ್ಲುವ ಕೆಲಸಕ್ಕೆ ನೇಮಕಗೊಂಡಿತು. ಮತ್ತೆ, ನಮ್ಮ ರುಕ್ಕು ಧರವಟ್ಟೆ ಕೊಡಪಾನಕ್ಕೆ ಮೆದೂ ಡಾಮರುಮುದ್ದೆಯನ್ನು ತಂದು ತೇಪೆಹಾಕಿದ್ದು? ಹೌದಲ್ಲ, ಮರೆತೇ ಬಿಟ್ಟೆ.. ಅಷ್ಟೆಯೇ? ನಮ್ಮ ಓಲಿ ಕೊಡೆಗೆ ಬಾಳ್ಪಣೆ ಬರಲು ಹೊರಗೆ ಡಾಮರನ್ನು ಬಳಿದರು. ಒಳಗೆ ಅದರಲ್ಲೇ ಹೆಸರನ್ನೂ ಬರೆದರು, ಡಬ್ಬಿಗಳಿಗೆ ತುಕ್ಕುಹಿಡಿಯದಂತೆ ಬಳಿದರು, ಗೋಡೆಯಂಚಿಗೆ ಬಳಿದರು... ಅಯ್ಯೊ, ಅಷ್ಟು ಕ್ಷಿಪ್ರವಾಗಿ ಆ ಕರಿಯ ದ್ರವ ಹೇಗೆಹೇಗೆಲ್ಲ ಮುಖ್ಯವಾಯಿತು, ಹೇಗೆಹೇಗೆಲ್ಲ ಅದನ್ನು ಬಳಸಿದರು ಅಂತೆಲ್ಲ ಒಂದೇ ಪೆಟ್ಟಿಗೆ ಹೇಗೆ ನೆನಪಾಗುತ್ತದೆ? ಅಲ್ಲದೆ, ಎಲ್ಲ ನೆನಪುಗಳನ್ನೂ ನೆನೆಯುತ್ತೇನೆ ಅಂತ ಹೊರಟರೆ ಜೀವಮಾನವೆಲ್ಲ ಅದರಲ್ಲೇ ಕಳೆದೀತು. ಬಿಡುವ ಅದನ್ನು, ಅಲ್ಲಿಗೇ. ಬಿಟ್ಟು ನಮ್ಮ ಕೆಂಪುದೂಳಿನ ದಾರಿ ಡಾಮರುರಸ್ತೆಯಾಗಿ ತಕ್ಕ ಅಗಲ ದಪ್ಪ ಪಡೆದು ಹಳೆಯ ಊರು ಹೊಚ್ಚಹೊಸ ಸೀರೆಯುಟ್ಟಂತೆ ಮೆರೆವ ಪರಿಯ ಹಾಡೋಣ ಬನ್ನಿರೋ!
 
ನಿಂತ ಕಾಲ ನಡೆಯತೊಡಗಿತು!
ಅಂದಹಾಗೆ ಅದುವರೆಗಿನ ಕಾಲ ತಟಸ್ಥ ನಿಂತಿತ್ತೆಂಬುದು ನಮಗೆ ಗೊತ್ತಾದದ್ದೇ ಅದು ನಡೆಯತೊಡಗಿದಾಗ! ಕಾಲ ನಿಂತಿತ್ತು ಹೇಗೆ ಎಂಬುದಕ್ಕೆ ಒಂದು ಪುಟ್ಟ ಉದಾಹರಣೆ ಕೊಡುತ್ತೇನೆ. ಧಡಬಡವೆಂಬುದು ನನ್ನ ತಂದೆಯ ಜಾಯಮಾನವೇ ಅಲ್ಲ. ಆದರೆ ನಿಧಾನ ಪ್ರವೃತ್ತಿಗೂ ಒಂದು ಮಿತಿ ಬೇಕಲ್ಲ. ಸಮಯಾಸಮಯವೂ? ಇಲ್ಲ, ಆಗೆಲ್ಲ ಅದು ಬೇಕೇ ಇರಲಿಲ್ಲ. ಕೇಳಿ. ಬಸ್ಸು `ಮೋಟರು~ ಅಂತ ಕರೆಸಿಕೊಳ್ಳುತ್ತಿದ್ದ ಕಾಲವದು. ಊರ ದೊಡ್ಡ ಮನುಷ್ಯರು (ಅವರು ಶ್ರೀಮಂತರೇ ಆಗಿರಬೇಕಿಲ್ಲ. ಗಣ್ಯಸ್ಥಾನದಲ್ಲಿರುವವರು, ಹೆಚ್ಚಾಗಿ ವಯಸ್ಸಾದ ವಕೀಲರು ಡಾಕ್ಟರುಗಳು) ಬರುವುದಿದ್ದರೆ ಅದು ಅವರಿಗಾಗಿ ಕಾಯುತ್ತಿತ್ತು. ತಂದೆ ಒಮ್ಮೊಮ್ಮೆ ಮೋಟರಿನಲ್ಲಿ ಎಲ್ಲಿಗಾದರೂ ಹೋಗುವುದಿತ್ತು. ಆಗ ರಸ್ತೆಯಲ್ಲಿ ಅಲ್ಲಿಗೆ ಹೋಗುವ ಮೋಟರು ಬಂದೊಡನೆ ಮನೆಯ ಗಂಡುಮಕ್ಕಳೋ, ತಂದೆಯ ಗುಮಾಸ್ತರೋ ಅದನ್ನು ಕೈ ಅಡ್ಡ ಹಾಕಿ ನಿಲ್ಲಿಸುತ್ತಿದ್ದರು. ಆದರೆ ಮೋಟರು ಬಂದರೂ ಹಾರ್ನು ಹೊಡೆದರೂ ತಂದೆಯವರಿಗಿನ್ನೂ ಕಚ್ಚೆಪಂಚೆಯ ನಿರಿಹಿಡಿಯುವುದೋ, ಸಿಗಿಸಿಕೊಳ್ಳುವದೋ ಮುಗಿಯುತ್ತಿರಲಿಲ್ಲ. ಆಚೆ, ರಸ್ತೆಯಲ್ಲಿ ನಡುನಡುವೆ ಎಚ್ಚರಾದಂತೆ ಹಾರ್ನ್‌ ಹೊಡೆಯುತ್ತ ಕಾಯುತ್ತ ನಿಂತೇ ಇರುವ ಉದ್ದಮೂತಿಯ ಮೋಟರು. ಈಚೆ ಮನೆಯೊಳಗೆ `ಇನ್ನೂ ಆಗಲಿಲ್ಲವೆ. ಬಸ್ಸು ಕಾಯುತ್ತಿದೆ~ ಎಂದು ಚಡಪಡಿಸುವ ಅಮ್ಮ. ತಂದೆಯೋ ಯಾವ ಚಡಪಡಿಕೆಯೂ ಇಲ್ಲದೆ ಅಂತೂ ಎಲ್ಲ ಮುಗಿಸಿ ಮೋಟರು ಹತ್ತುವರು. (ಅಂದಿನ ಕ್ರಮದಂತೆ) `ಫ್ರಂಟ್‌ ಸೀಟಿ~ನಲ್ಲಿ ಕುಳಿತುಕೊಳ್ಳುವರು. ಮೋಟರು ಹೊರಡುವುದು.
ಹೀಗೆ ಅಂದು ನಡೆಯುತ್ತಿದ್ದರೂ ನಡೆಯುವುದು ಕಾಣದಂತೆ, ನಿಂತಂತಿದ್ದ ಕಾಲ, ಈಗ ಕಾಣುವ ಹಾಗೆಯೇ ನಡೆಯಲಾರಂಭಿಸಿತು. ನಡೆಯ ತೊಡಗಿದ ಮೇಲೆ ಒಂದು ದಿನ ಇದು ಓಡುತ್ತದೆ ನೋಡುತ್ತಿರಿ ಅಂತ ಹಿರಿಯರೊಬ್ಬರು ನುಡಿದದ್ದು `ಹೌದಲ್ಲ!~ ಎಂದು ಉದ್ಗರಿಸುವುದರೊಳಗೆ ಅದು ನಡೆಯುವುದನ್ನೂ ಬಿಟ್ಟು ಧಾವಿಸತೊಡಗಿತು. ಎಲ್ಲಿಗೆ ಅಂತ ಕೇಳಿದರೆ ಪಾಪ, ಅದಕ್ಕೂ ತಿಳಿದಿದ್ದರೆ ತಾನೆ? ಮೋಟರು ಹೋಗಿ ಬಸ್ಸಾಯಿತು. ಉದ್ದ ಮೂತಿಕಳೆದು ಚಪ್ಪಟೆಯಾಯಿತು. ಎರಡಿದ್ದದ್ದು ಇಮ್ಮಡಿಮುಮ್ಮಡಿ ನಾಲ್ಮಡಿಯಾಗುತ್ತ ಹೋಗಿ ಡಾಮರುರಸ್ತೆಗೆ ವೇಗದಾನವಾಯಿತು. ಹೆಂಗಸರಿಗೆಂದೇ ಮೀಸಲಿದ್ದ ಊದ್ದ ಸೀಟು ಹೋಗಿ ಏಕಪ್ರಕಾರದ ಸೀಟುಗಳು ಬಂದುವು. `ಬೇಗ.. ಬಸ್ಸು ಕಾಯುತ್ತಿದೆ~ ಎಂಬ ವಾಕ್ಯ- `ಬೇಗ... ಬೇಗ ಹೊರಡಿ. ಬಸ್ಸು ನಮಗೋಸ್ಕರ ಕಾಯುತ್ತದೆಯೇ~ ಎಂದು ಬದಲಾಯಿತು. ಬಸ್ಸಿನ ಸಮಯಕ್ಕೆ ಸರಿಯಾಗಿ ಹೊರಟು ನಿಲ್ಲುವ ಧಾವಂತ ಸುರುವಾಯಿತು. ಸ್ವತಂತ್ರ ಇಂಡಿಯಾ ಸೇತುವೆ ಅಣೆಕಟ್ಟು ಅಂತ ಕನವರಿಸುತ್ತಿದ್ದ ಅವಧಿಯದು. ಪರಿಣಾಮ, ಅಜ್ಜನ ಮನೆಗೆ ಹೋಗುವ ದಾರಿಯಲ್ಲಿ ದಾಟಬೇಕಾಗಿದ್ದ ನದಿಗಳಿಗೆ ಸೇತುವೆಗಳಾದುವು. ಎಲ್ಲೆಂದರಲ್ಲಿ ಕಾಣುತ್ತಿದ್ದುದು ಆ ಇಡೀ ಸಾಲಾನುಸಾಲು ಸೇತುವೆ ಕೆಲಸದ ಕಂಟ್ರಾಕ್ಟು ವಹಿಸಿಕೊಂಡು ತಿಂಗಳುಗಟ್ಟಲೆ ಕೆಲಸಮಾಡಿದ ಗ್ಯಾಮನ್‌ ಇಂಡಿಯ ಕಂಪೆನಿಯ ಬೋರ್ಡ್‌ಗಳು. ಅವನ್ನು ನೋಡೀ ನೋಡೀ ನಮಗೆ ಆ ಕಂಪೆನಿಯ ಮೇಲೇನೇ ವಿನಾಕಾರಣ ಹುಟ್ಟಿದ ಪ್ರೀತಿಯೋ! ಅದೊಂದು ತನ್ನ ಕೆಲಸ ಮುಗಿಸಿ ಒಂದು ದಿನ ಗಂಟುಮೂಟೆ ಕಟ್ಟುವ ವ್ಯಾಪಾರೀ ಅವಧೂತ ಕಂಪೆನಿಯೆಂಬ ಅರಿವೇ ನಮಗಿರಲಿಲ್ಲ. ಸೇತುವೆಗಳು ಪೂರ್ತಿಯಾಗುತ್ತಲೂ ಸುಲಭಕ್ಕೆ ನಿಲುಕದ ಉಡುಪಿಗೆ ಮಂಗಳೂರಿಗೆ ನೋಡಿರೋ, ಈಗ ಎಕ್ಸ್‌ಪ್ರೆಸ್‌ ಬಸ್‌. ಅದೂ ಸಾಲದು, ನಮಗೆ `ಸುಪ್ಪರ್‌~ ಎಕ್ಸ್‌ಪ್ರೆಸ್‌ ಬೇಕು. ಸರಿ, ಇಕೊಳ್ಳಿ, ಸೂಪರ್‌ಎಕ್ಸ್‌ಪ್ರೆಸ್‌! ಬಂದಾಯಿತು. ಬೈಂದೂರು ಭಟ್ಕಳ ಹೊನ್ನಾವರ ಹತ್ತಿಹತ್ತಿಹತ್ತಿಹತ್ತಿ. ಟಿಕೆಟ್‌ ಎಷ್ಟು? ಎರಡು ರುಪಾಯಿ, ನಾಲ್ಕು ರುಪಾಯಿ, ಏನು ಎಷ್ಟು ಎನ್ನುವುದರೊಳಗೆ ಅದು ಏರುತ್ತ ಏರುತ್ತ ಆಚೆ ಈಚೆ ಬಸ್‌ ಓಡಾಟ, ಪೋಂ ಪೋಂ, ಕಾರು ಟಾಕ್ಸಿ... `ಈ ವೇಗ ನನಗೆ ಅಳವಲ್ಲ. ಬೇಗ ದಾಟಿಕೊಳ್ಳುವುದು ಕ್ಷೇಮ~- ಎಂದರು ತಂದೆ, ಸಾವಧಾನದವರು. ಆಮೇಲೆ ಅವರು ಹೆಚ್ಚು ಕಾಲ ಇರಲೂ ಇಲ್ಲ.
*
ಈಗ ನಾಲ್ಕು ದಾರಿಗಳಾಗುತ್ತಿವೆ. (`ಅಮೆರಿಕದಲ್ಲಿ ಗೊತ್ತೆ? ಎಂಟೆಂಟು!~). ಅದಿರುಲಾರಿಗಳು ಎಣ್ಣೆಲಾರಿಗಳು ನಾಟಾಲಾರಿಗಳು ಇನ್ನೇನು ಸುಂಯ್ಯ ಸುಂಯ್ಞ ಸಾಗಬಹುದು.
ಈ ನಾಲ್ಕು ರಸ್ತೆಗಳಲ್ಲಿ ಓಡುತ್ತ ಓಡುತ್ತ ಕಡೆಗೆ ನಾವಾದರೂ ತಲುಪುತ್ತೇವೆ ಎಲ್ಲಿಗೆ?
ನೋಡುತ್ತಿದ್ದೇವೆ ಸುಮ್ಮನೆ ಸಖೇದಾಶ್ಚರ್ಯವೋ, ಸಖೇದಾನಂದವೋ ತಿಳಿಯದೆ.
ಕೈಕಟ್ಟ್‌ ಬಾಯ್‌ ಮುಚ್ಚ್‌ ಭಂಗಿಯಲ್ಲಿ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT