ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ವಾದಗಳ ವಾಸ್ತವ ಅರಿತಿದ್ದೇವೆಯೇ?

Last Updated 6 ಅಕ್ಟೋಬರ್ 2016, 19:38 IST
ಅಕ್ಷರ ಗಾತ್ರ

ಅಂತರರಾಜ್ಯ ಜಲ ಇಲ್ಲವೆ ಗಡಿ ವಿವಾದಗಳು ತಲೆದೋರಿದಾಗಲೆಲ್ಲ ಕನ್ನಡಿಗರನ್ನು ಜಗಳಗಂಟರೆಂದು, ನ್ಯಾಯಪರರಲ್ಲವೆಂದು ಹೊರಗಿನವರು ಕೆಲವೊಮ್ಮೆ ಹೇಳುವುದುಂಟು. ಇಂತಹ ಗ್ರಹಿಕೆಗಳು ಕನ್ನಡಿಗರ ಸ್ವಕಥನಗಳಿಗಿಂತ ಹಾಗೂ ಐತಿಹಾಸಿಕ ವಾಸ್ತವಕ್ಕಿಂತ ಭಿನ್ನವಾದವು ಎನ್ನುವುದು ಸ್ಪಷ್ಟವೇ.. ಕರ್ನಾಟಕದ ಒಳಗಿರಲಿ ಅಥವಾ ಹೊರಗಿರಲಿ ಸಾಮಾನ್ಯವಾಗಿ ಕನ್ನಡಿಗರು ಹೊಂದಿಕೊಂಡು ಹೋಗುವವರು.

ಉತ್ತರ ಭಾರತದವರಂತೆ ಒರಟಾಗಿ ನಡೆದುಕೊಳ್ಳುವ ಸ್ವಭಾವದವರಲ್ಲ. ತಮ್ಮ ಭಾಷೆಯ ಬಗ್ಗೆ ಅಂಧಾಭಿಮಾನದಿಂದ ನಡೆದುಕೊಳ್ಳುವವರಲ್ಲ ಎನ್ನುವುದೆಲ್ಲವೂ ಸತ್ಯವೆ. ಇದನ್ನು ವಿವಾದಗಳ ಸಂದರ್ಭದಲ್ಲಿ ಕನ್ನಡಿಗರನ್ನು ದೂರುವವರೂ ಸಾಮಾನ್ಯವಾಗಿ ಮಿಕ್ಕಂತೆ ಬಹುಪಾಲು ಒಪ್ಪುತ್ತಾರೆ. ಆದರೆ ಇತ್ತೀಚಿನ ಕಾವೇರಿ ನದಿ ನೀರು ಬಿಡುಗಡೆಯಂತಹ ಸನ್ನಿವೇಶಗಳಲ್ಲಿ ಸಾಮಾನ್ಯವಾಗಿ ನಮ್ಮ ಬಗ್ಗೆ ಇರುವ ಗ್ರಹಿಕೆಗಳಿಗಿಂತ ಭಿನ್ನವಾದ ಕಥನಗಳು ಹುಟ್ಟಿಕೊಳ್ಳುತ್ತಿವೆ.

ಹಾಗಾದರೆ ಕನ್ನಡಿಗರಾದ ನಾವು ನಮ್ಮನ್ನು ಹೇಗೆ ಗ್ರಹಿಸುತ್ತೇವೆ ಹಾಗೂ ಪ್ರತಿನಿಧಿಸಿಕೊಳ್ಳುತ್ತೇವೆ? ಇಂತಹ ನಮ್ಮ ಗ್ರಹಿಕೆಗಳಿಂದ ನಾವು ಹೊರಗಿನ ಪ್ರಪಂಚವನ್ನು ಅರಿಯಲು, ವ್ಯವಹರಿಸಲು ಅಡ್ಡಿಯಾಗುತ್ತಿದೆಯೇ? ಈ ಪ್ರಶ್ನೆಗಳಿಗೆ ಸಾಧ್ಯವಿರುವ ಉತ್ತರಗಳನ್ನು ಕಂಡುಕೊಳ್ಳುವ ಪುಟ್ಟ ಪ್ರಯತ್ನವನ್ನು ಇಂದಿನ ಅಂಕಣದಲ್ಲಿ ಮಾಡುತ್ತಿದ್ದೇನೆ.

ನಮ್ಮ ಚರ್ಚೆಗೆ ಪೂರಕವಾಗಿ ಕನ್ನಡದ ಐತಿಹಾಸಿಕ ಚಲನಚಿತ್ರಗಳ ಕಡೆಗೆ ಗಮನ ಹರಿಸೋಣ. ಅದರಲ್ಲೂ ನಿರ್ದಿಷ್ಟವಾಗಿ ಡಾ. ರಾಜ್‌ಕುಮಾರ್ ಅಭಿನಯಿಸಿರುವ ‘ಮಯೂರ’, ‘ಇಮ್ಮಡಿ ಪುಲಕೇಶಿ’, ‘ಕೃಷ್ಣದೇವರಾಯ’ ಮತ್ತು ‘ರಣಧೀರ ಕಂಠೀರವ’ ಚಲನಚಿತ್ರಗಳನ್ನು ನೋಡಿ. ಈ ಎಲ್ಲ ಚಿತ್ರಗಳೂ ಸಾಂಸ್ಕೃತಿಕ ಮಹತ್ವ ಹೊಂದಿರುವುದು ಅವುಗಳಲ್ಲಿರುವ ಕನ್ನಡಿಗ, ಕನ್ನಡತನ ಇವುಗಳ ವ್ಯಾಖ್ಯಾನದಿಂದ. ಈ ನಾಲ್ಕೂ ಚಿತ್ರಗಳ ಅತ್ಯುತ್ತಮ ಕ್ಷಣಗಳು ಕನ್ನಡಿಗ ನಾಯಕನೊಬ್ಬ ಹೊರಗಿನವರೊಡನೆ ವ್ಯವಹರಿಸುವಾಗ ತೋರಿಸುವ ನೈತಿಕ ವ್ಯಕ್ತಿತ್ವದ ಕಾರಣದಿಂದಲೇ ರೂಪುಗೊಂಡಿರುವುವು.

ಕನ್ನಡಿಗರೆಂದರೆ ಧರ್ಮಭೀರುಗಳು. ತಮ್ಮ ನಾಡಿನಲ್ಲಾಗಲಿ, ಹೊರಗಡೆಯಿರಲಿ ಸೌಹಾರ್ದದಿಂದ ಬದುಕುವವರು. ಕಷ್ಟಗಳನ್ನು ಸಹಿಸುವವರು ಆದರೆ ಇತರರಿಗೆ ತೊಂದರೆ ನೀಡುವವರಲ್ಲ. ಶರಣಾಗತರನ್ನು ರಕ್ಷಿಸುವವರು ಮತ್ತು ಅನಿವಾರ್ಯವಾದರೆ ಅದಕ್ಕಾಗಿ ತಮ್ಮ ಜೀವವನ್ನು ಕೊಡಲೂ ಹಿಂಜರಿಯದವರು. ಹೀಗೆ ಕನ್ನಡಿಗರ ಬಗ್ಗೆ ನಾವೇ ಕಟ್ಟಿಕೊಂಡಿರುವ ಸ್ವಕಥನಗಳ ಬಹುಮುಖ್ಯ ಅಂಶಗಳು ಈ ಮೇಲಿನ ಚಲನಚಿತ್ರಗಳಲ್ಲಿ ಅಭಿವ್ಯಕ್ತಿ ಪಡೆದುಕೊಳ್ಳುತ್ತವೆ.

ಇದನ್ನೇ ವಿಸ್ತರಿಸುತ್ತ ಮತ್ತೊಂದು ಮಾತನ್ನೂ ಸೇರಿಸಿಕೊಳ್ಳುತ್ತೇವೆ. ಅದೇನೆಂದರೆ ಕನ್ನಡಿಗರ ಒಳ್ಳೆಯತನವನ್ನೇ ಅವರ ದೌರ್ಬಲ್ಯವೆಂದು ಹೊರಗಿನವರು ತಪ್ಪಾಗಿ ಗ್ರಹಿಸುತ್ತಾರೆ. ಆದುದರಿಂದ ಕನ್ನಡನಾಡಿನಲ್ಲಿ ಬದುಕಿರುವ ಅನ್ಯಭಾಷಿಕರು ತಮ್ಮ ಸಾಂಸ್ಕೃತಿಕ ಬೇರುಗಳನ್ನು, ಅದರಲ್ಲೂ ಭಾಷಾಸ್ಮೃತಿಯನ್ನು ಉಳಿಸಿಕೊಂಡೇ ಇಲ್ಲಿ ಬದುಕುತ್ತಾರೆ. ಕನ್ನಡ ಭಾಷಾ ಜ್ಞಾನವನ್ನಾಗಲಿ, ಕನ್ನಡತನದ ಯಾವ ಗುಣಗಳನ್ನೂ ಯಾವ ಅನ್ಯಭಾಷಿಕರೂ ತಮ್ಮದಾಗಿಸಿಕೊಳ್ಳುವುದಿಲ್ಲ. ಹಾಗಾಗಿ ಕನ್ನಡಿಗರ ಸಹನೆ, ಔದಾರ್ಯ ಮತ್ತು ಹೊಂದಿಕೊಳ್ಳುವ ಗುಣಗಳಿಂದಲೇ ಕನ್ನಡದ ಬೆಳವಣಿಗೆ ಸಾಧ್ಯವಾಗುತ್ತಿಲ್ಲ, ಕನ್ನಡದ ನೆಲ-ಜಲ-ಗಡಿಗಳ ರಕ್ಷಣೆ ಸಾಧ್ಯವಾಗುತ್ತಿಲ್ಲ ಎಂದು ಕನ್ನಡ ಚಳವಳಿಯ ನೇತಾರರು ಕೆಲವು ದಶಕಗಳಿಂದಲೂ ಪ್ರತಿಪಾದಿಸುತ್ತಿದ್ದಾರೆ.

ಆತಂಕ ಕೇಂದ್ರಿತ ಕನ್ನಡ ಚಳವಳಿಯೊಂದರ ಉಗಮ ಇಂತಹ ಕಥನಗಳಿಂದಲೇ ಆಗುತ್ತಿದೆ ಎನ್ನುವುದು ಹೊಸ ವಿಚಾರವೇನಲ್ಲ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ, ಆತಂಕ ಕೇಂದ್ರಿತ ಕನ್ನಡ ಭಾಷಾ ರಾಜಕಾರಣಕ್ಕೆ ಪೂರಕವಾಗಿ ಎಂ.ಚಿದಾನಂದ ಮೂರ್ತಿಯವರಂತಹ ಹಿರಿಯ ವಿದ್ವಾಂಸರು ಕನ್ನಡ ನಾಡಿನ ಭೌಗೋಳಿಕ- ರಾಜಕೀಯ ಪರಿಕಲ್ಪನೆಗಳನ್ನು ಕೆಲವು ದಶಕಗಳಿಂದಲೇ ಮುಂದಿಡುತ್ತಿದ್ದಾರೆ. ಇಂತಹ ಕನ್ನಡದ ಕಥನಗಳಲ್ಲಿ ಗೋದಾವರಿಯಿಂದ ಕಾವೇರಿಯವರೆಗಿನ ವಿಶಾಲ ನೆಲದಲ್ಲಿ ಕನ್ನಡದ ಭಾಷಾ ಬೇರುಗಳು ಮತ್ತು ರಾಜಕೀಯ ಪ್ರಭಾವ ಹರಡಿತ್ತು.

ಇದನ್ನು ಸಮರ್ಥಿಸಿಕೊಳ್ಳಲು ಅವರು ಕನ್ನಡ ಶಾಸನಗಳು ಭೌಗೋಳಿಕವಾಗಿ ಹರಡಿದ್ದ ವಿಸ್ತೀರ್ಣ, ನೆರೆಹೊರೆಯ ಭಾಷಾ ಪ್ರದೇಶಗಳಲ್ಲಿ ಕಾಣಸಿಗುವ ಕನ್ನಡದ ಭಾಷಾ ಪ್ರಭಾವ, ಕವಿರಾಜ ಮಾರ್ಗದಂತಹ ಪ್ರಾಚೀನ ಕಾವ್ಯಗಳಲ್ಲಿ ವ್ಯಕ್ತವಾಗುವ ಕನ್ನಡದ ಭೌಗೋಳಿಕ ವ್ಯಾಪ್ತಿ ಇತ್ಯಾದಿ ಅಂಶಗಳನ್ನು ಪ್ರಸ್ತಾಪಿಸುತ್ತಾರೆ. ಜೊತೆಗೆ ಚಾಲುಕ್ಯ ಅಥವಾ ರಾಷ್ಟ್ರಕೂಟರಂತಹ ಕನ್ನಡ ಹಿನ್ನೆಲೆಯ ರಾಜಮನೆತನಗಳು ಕಟ್ಟಿದ ಸಾಮ್ರಾಜ್ಯಗಳ ವಿಸ್ತೀರ್ಣವನ್ನು ಪರಿಗಣಿಸುತ್ತಾರೆ. ಈ ಸಾಮ್ರಾಜ್ಯಗಳು ಇಂದಿನ ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳ ಕೆಲವು ಭಾಗಗಳ ಮೇಲೆ ರಾಜಕೀಯ ನಿಯಂತ್ರಣವನ್ನು ಹೊಂದಿದ್ದರೆ, ಆ ಭಾಗಗಳು ನಮ್ಮ ಹತೋಟಿಯಲ್ಲಿ ಇಲ್ಲದಿರುವುದು ನಮ್ಮ ರಾಜಕೀಯ ಮತ್ತು ಸಾಂಸ್ಕೃತಿಕ ವೈಫಲ್ಯ ಎನ್ನುವ ಮಾತುಗಳನ್ನೂ ಆಡುತ್ತಾರೆ.

ಈ ಬಗೆಯ ಇತಿಹಾಸದ ಪುನಾರಚನೆ ಬೌದ್ಧಿಕವಾಗಿ, ನೈತಿಕವಾಗಿ ಸಮರ್ಥನೀಯವಲ್ಲ. ಏಕೆಂದರೆ ಹಿಂದೆಂದೋ ಆಗಿರಬಹುದಾದ ಸಾಂಸ್ಕೃತಿಕ ಪ್ರಭಾವ ಹಾಗೂ ಹೊಂದಿರಬಹುದಾಗಿದ್ದ ರಾಜಕೀಯ ನಿಯಂತ್ರಣಗಳನ್ನು ಆಧರಿಸಿ ಇಂದಿನ ರಾಜಕಾರಣವನ್ನು ಮಾಡುವುದು, ಹಕ್ಕುಗಳನ್ನು ಸ್ಥಾಪಿಸುವುದು ಅಸಾಧ್ಯ ಮತ್ತು ಅವಾಸ್ತವಿಕ. ಅಲ್ಲದೆ ಹಿಂದೆ ನಮ್ಮ ಬಳಿಯಿದ್ದುದನ್ನು ಕಳೆದುಕೊಂಡಿದ್ದೇವೆ, ಆದುದರಿಂದ ಇಂದು ನಾವು ಎಚ್ಚರವಾಗಿರಬೇಕು ಎನ್ನುವ ಆತಂಕದಲ್ಲಿಯೇ ಒಂದು ಅಸಹಜ ಮನಸ್ಥಿತಿಯನ್ನು ರೂಪಿಸಿಕೊಳ್ಳುವುದೂ ಅಷ್ಟೊಂದು ಆರೋಗ್ಯಕರವಾದ ವಿಚಾರವಲ್ಲ.

ಎಲ್ಲ ಭಾಷೆಗಳೂ, ಸಂಸ್ಕೃತಿಗಳೂ, ರಾಜಕೀಯ ವ್ಯವಸ್ಥೆಗಳೂ ಇತರರ ಪ್ರಭಾವಕ್ಕೊಳಗಾಗುತ್ತಿರುತ್ತವೆ, ಬದಲಾಗುತ್ತವೆ. ಕರ್ನಾಟಕ ಅಥವಾ ಭಾರತವೆಂದು ನಾವು ಇಂದು ಕರೆಯುವ ರಾಜಕೀಯ ಸಮುದಾಯಗಳೇ ಏಳು ದಶಕಗಳ ಇತಿಹಾಸವನ್ನು ಹೊಂದಿರುವುವು ಮಾತ್ರ. ಭಾರತದ ಸಾಂಸ್ಕೃತಿಕ ಪ್ರಭಾವ ದಕ್ಷಿಣಪೂರ್ವ ಏಷ್ಯಾದ ಕೆಲವು ದೇಶಗಳ ಮೇಲಾಗಿತ್ತು ಎಂದರೆ ಅವುಗಳ ಮೇಲೆ ನಮ್ಮ ರಾಜಕೀಯ ನಿಯಂತ್ರಣ ಸ್ಥಾಪಿಸಲು ಸಾಧ್ಯವೇ? ಹಾಗಿದ್ದರೆ ಕೇವಲ ಎಪ್ಪತ್ತು ವರ್ಷಗಳ ಹಿಂದೆಯಷ್ಟೆ ಭಾರತದ ಮೇಲೆ ನಿಯಂತ್ರಣ ಹೊಂದಿದ್ದ ಬ್ರಿಟಿಷರು ಯಾವ ಬಗೆಯ ವಾದಗಳನ್ನು ಮುಂದಿಡಬಹುದು? ಇಂತಹ ಆಕ್ರಮಕ ಸಾಮ್ರಾಜ್ಯಶಾಹಿ ಮನೋಭಾವ ನಮ್ಮ ಕಾಲಕ್ಕೆ ಸೂಕ್ತವಾದುದಲ್ಲ. 

ಇದು ಒಂದೆಡೆಯಿರಲಿ. ನಮ್ಮ ಸ್ವಕಥನಗಳು ಮತ್ತು ನಮ್ಮ ಸದ್ಗುಣಗಳ (ವರ್ಚ್ಯೂ) ಬಗ್ಗೆ ನಮಗೇ ಇರುವ ಖಚಿತತೆಗಳು ಹೊರಗಿನ ಪ್ರಪಂಚ ನಮ್ಮನ್ನು ಹೇಗೆ ಗ್ರಹಿಸುತ್ತಿದೆ, ನಮ್ಮೊಡನೆ ಹೇಗೆ ವ್ಯವಹರಿಸುತ್ತಿದೆ ಎನ್ನುವುದಕ್ಕೆ ಕುರುಡಾಗಿಸುತ್ತಿದೆಯೇ ಎನ್ನುವ ಅನುಮಾನ ನನ್ನಲ್ಲಿ ಮೂಡುತ್ತಿದೆ. ಉದಾಹರಣೆಗೆ ಕಾವೇರಿ ವಿವಾದವನ್ನು ನಮ್ಮ ಸುದ್ದಿಮಾಧ್ಯಮಗಳಲ್ಲಿ ಇಲ್ಲವೆ ಖಾಸಗಿ ಮಾತುಕತೆಗಳಲ್ಲಿ ನಾವು ಹೇಗೆ ಚರ್ಚಿಸುತ್ತಿದ್ದೇವೆ ಎನ್ನುವುದನ್ನೇ ಪರಿಗಣಿಸಿ. ಸುದ್ದಿವಾಹಿನಿಗಳಲ್ಲಿರಲಿ, ಖಾಸಗಿ ಚರ್ಚೆಗಳಲ್ಲಿರಲಿ. ನಮ್ಮೆಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಿದು: ಸರ್ವೋಚ್ಚ ನ್ಯಾಯಾಲಯದ ಮುಂದೆ ಕರ್ನಾಟಕದ ಜಲಾಶಯಗಳಲ್ಲಿ ಕುಡಿಯಲು ಮಾತ್ರ ನೀರಿದೆ ಎಂದಾಗಲೂ, ಈ ವಾದಕ್ಕೆ ಪೂರಕ ದಾಖಲೆಗಳನ್ನು ನೀಡಿದರೂ ನೀರು ಬಿಡುಗಡೆ ಮಾಡುವಂತೆ ಸತತವಾಗಿ ಆದೇಶಗಳೇಕೆ ಬರುತ್ತಿವೆ?

ಈ ಪ್ರಶ್ನೆಗೆ ಎರಡು ಉತ್ತರಗಳನ್ನು ನಮ್ಮ ಸಾರ್ವಜನಿಕ ಚರ್ಚೆಗಳಲ್ಲಿ ಕೊಟ್ಟುಕೊಳ್ಳುತ್ತಿದ್ದೇವೆ. ಒಂದು, ನಮ್ಮ ವಕೀಲರನ್ನೇ ಸಂಶಯದಿಂದ ನೋಡುತ್ತಿದ್ದೇವೆ. ಕರ್ನಾಟಕದ ಪರವಾಗಿ ಕಳೆದ ಮೂರೂವರೆ ದಶಕಗಳಿಂದ ಹಲವಾರು ಅಂತರರಾಜ್ಯ ಜಲವಿವಾದಗಳಲ್ಲಿ ವಾದಿಸುತ್ತಿರುವ ಫಾಲಿ ಎಸ್. ನಾರಿಮನ್ ಮತ್ತು ಅವರ ತಂಡದ ಸಾಮರ್ಥ್ಯ, ಬದ್ಧತೆಗಳನ್ನೇ ಸಾರ್ವಜನಿಕವಾಗಿ ಪ್ರಶ್ನಿಸಲಾಗುತ್ತಿದೆ. ಈ ಹಿಂದೆಯೂ ಈ ಅಂಕಣದಲ್ಲಿ ಪ್ರತಿಪಾದಿಸಿದಂತೆ ಕರ್ನಾಟಕದ ಅಗತ್ಯಗಳ ಪೂರೈಕೆಯಾದ ಮೇಲೆ ತಮಿಳುನಾಡಿಗೆ ನೀರು ಬಿಡುತ್ತೇವೆ ಎನ್ನುವ ವಾದವನ್ನು ಯಾವ ವಕೀಲನೂ ನ್ಯಾಯಾಲಯದ ಮುಂದಿಡಲಾರ. ಏಕೆಂದರೆ ನಮ್ಮ ರಾಜ್ಯದಲ್ಲಿ ಶೇಖರಣೆಯಾಗುವ ಕಾವೇರಿ ನದಿ ಕಣಿವೆಯ ನೀರಿನ ಮೇಲೆ ಕರ್ನಾಟಕಕ್ಕೆ ಒಡೆತನವಿದೆ ಎನ್ನುವುದು ಸ್ಥಾಪಿತ ನ್ಯಾಯಸಿದ್ಧಾಂತಗಳಲ್ಲಿ ತಳಹದಿಯಿರುವ ಲೀಗಲ್ ವಾದವಲ್ಲ.

ಸುದ್ದಿವಾಹಿನಿಗಳ ಸ್ಟುಡಿಯೊಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಇಲ್ಲವೆ ವಿಧಾನಮಂಡಲದೊಳಗೆ ನಾವು ಪ್ರತಿಪಾದಿಸುತ್ತಿರುವ ಬಹುತೇಕ ವಾದಗಳು ನ್ಯಾಯಾಲಯಗಳು ಅನುಸರಿಸುವ ನ್ಯಾಯಸಿದ್ಧಾಂತಗಳಲ್ಲಿ ಮನ್ನಣೆ ಪಡೆದಿಲ್ಲ ಎನ್ನುವುದು ನಾವು ಎದುರಿಸಬೇಕಿರುವ ವಾಸ್ತವ. ಉದಾಹರಣೆಗೆ, ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಕೊರತೆಯಿದೆ ಎನ್ನುವುದು ನಿಜವಾದರೂ, ಮುಂದಿನ ಮೂರು ತಿಂಗಳಲ್ಲಿ ಕುಡಿಯುವ ನೀರಿನ ಪೂರೈಕೆಯಾಗುವಷ್ಟು ಜಲ ಶೇಖರಣೆಯಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ನಾನು ಇದನ್ನು ಪ್ರಸ್ತಾಪಿಸುವಾಗ ತಮಿಳುನಾಡಿಗೆ ನೀರು ಬಿಡುವುದು ಸಮರ್ಥನೀಯ ಎಂದು ಹೇಳುತ್ತಿಲ್ಲ. ಕರ್ನಾಟಕದಲ್ಲಿಯೂ ಕನಿಷ್ಠ ನಾಲ್ಕು ಲಕ್ಷ ಎಕರೆಗಳಲ್ಲಿ ಬೆಳೆದು  ನಿಂತಿರುವ ಬೆಳೆಗೂ ನೀರು ಬೇಕಿದೆ. ಈಗಿರುವ ನೀರನ್ನು ಹಂಚುವಾಗ ನ್ಯಾಯಾಲಯವು ಈ ಎಲ್ಲ ಅಂಶಗಳನ್ನು ಪರಿಗಣಿಸುತ್ತದೆ ಎನ್ನುವುದನ್ನು ನಾವು ಮರೆಯುವಂತಿಲ್ಲ.

ಆದುದರಿಂದ ನಾರಿಮನ್ ಅವರ ಬದ್ಧತೆ ಮತ್ತು ನ್ಯಾಯತಂತ್ರಗಳ ಬಗೆಗಾಗಲಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ವಿವೇಚನೆಯ ಕುರಿತಾಗಲಿ ಪ್ರಶ್ನೆಗಳನ್ನು ಎತ್ತುವುದಕ್ಕೆ ಆಧಾರವಿದ್ದರೂ ಮತ್ತೊಂದು ಪ್ರಶ್ನೆಯನ್ನು ಕೇಳಿಕೊಳ್ಳಬೇಕು: ನಾವು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಾದಗಳ ವಾಸ್ತವವನ್ನು ಅರಿಯುವಲ್ಲಿ ಎಡವುತ್ತಿದ್ದೇವೆಯೆ? ನಮ್ಮ ಇಂದಿನ ಚರ್ಚೆಗಳಲ್ಲಿ ಇಲ್ಲದಿರುವ ಈ ಸಂಶಯ ಆಗೊಮ್ಮೆ ಈಗೊಮ್ಮೆಯಾದರೂ ನಮ್ಮ ಮನಸ್ಸಿನಲ್ಲಿ ಮೂಡುವುದು ಆರೋಗ್ಯಕರವೆಂದು ನಾನು ಭಾವಿಸುತ್ತೇನೆ.

ಎರಡನೆಯದಾಗಿ, ನಾವು ಸತ್ಯಸಂಧರು, ಸೌಹಾರ್ದದಲ್ಲಿ ವಿಶ್ವಾಸ ಹೊಂದಿರುವವರು ಎನ್ನುವುದು ನಮ್ಮ ನಂಬಿಕೆಯಾಗಿದ್ದರೂ ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ಹೊರಗಿನ ಪ್ರಪಂಚವು ಆ ಗ್ರಹಿಕೆಯನ್ನು ಒಪ್ಪಬೇಕಿಲ್ಲ, ಒಪ್ಪುವುದೂ ಇಲ್ಲ. ನಾನು ಮೇಲೆ ಪ್ರಸ್ತಾಪಿಸಿದ ರೀತಿಯ ಸ್ವಕಥನಗಳು ನಾವು ಕಟ್ಟಿಕೊಳ್ಳುವಂತಹವು. ಅವುಗಳು ಐತಿಹಾಸಿಕ ಇಲ್ಲವೇ ಪ್ರಸ್ತುತದ ವಾಸ್ತವವನ್ನು ಪ್ರತಿನಿಧಿಸುತ್ತವೆಯೇ ಎನ್ನುವುದಕ್ಕಿಂತ ನಮ್ಮ ಆದರ್ಶಗಳಾಗಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ.

ಆದರೆ ಹೊರಗಿನ ಪ್ರಪಂಚ ನಮ್ಮನ್ನು ಅಳೆಯುವುದು ನಮ್ಮ ಹೇಳಿಕೆಗಳು ಮತ್ತು ನಡವಳಿಕೆಗಳು ಹೇಗಿವೆ ಎನ್ನುವ ಆಧಾರದ ಮೇರೆಗೆ. ಆ ನೆಲೆಯಲ್ಲಿ ಹೊರಗಿನ ಪ್ರಪಂಚವು ಒಮ್ಮೊಮ್ಮೆ ನಮ್ಮನ್ನು ಸಂಶಯದಿಂದ ನೋಡುವ ರೀತಿಯಲ್ಲಿ ನಮ್ಮ ನಡವಳಿಕೆಗಳಿರುತ್ತವೆ. ಕಳೆದ ತಿಂಗಳ ಹಿಂಸಾತ್ಮಕ ಘಟನೆಗಳು ಇಂತಹುದಕ್ಕೆ ಒಂದು ನಿದರ್ಶನ. ನಮಗೆ ತಾರ್ಕಿಕ ಹಾಗೂ ಸಮರ್ಥನೀಯವೆನಿಸುವ ವಾದಗಳು, ನಡವಳಿಕೆಗಳು ಹೊರಗಿನವರಿಗೆ ಹಾಗೆ ತೋರದಿರಬಹುದು ಎಂಬ ಅನುಮಾನ ನಮ್ಮಲ್ಲಿ ಮೂಡಿದರೆ ಒಳಿತು ಎನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT