ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿಯಿಂದ ಕೃಷ್ಣೆ ಕಲಿಯಬೇಕಾದ ಪಾಠ

Last Updated 3 ಜನವರಿ 2011, 7:15 IST
ಅಕ್ಷರ ಗಾತ್ರ

‘ದಕ್ಷಿಣ ಕರ್ನಾಟಕಕ್ಕೆ ಸಿಕ್ಕಂತಹ ರಾಜಕೀಯ ನಾಯಕರು ನಮಗೆ ಸಿಗಲಿಲ್ಲ’ ಎಂದು  ಉತ್ತರ ಕರ್ನಾಟಕದ ಜನತೆ ಆ ಭಾಗಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ ನಡೆದಾಗೆಲ್ಲ ವಿಷಾದದಿಂದ ಹೇಳುವುದುಂಟು. ಈ ರೀತಿ ನಿಟ್ಟುಸಿರು ಬಿಡುವವರನ್ನು ಒಳಗೊಳಗೆ ಕಾಡುತ್ತಿರುವವರು ಎಚ್.ಡಿ.ದೇವೇಗೌಡರು  ಎನ್ನುವುದು ಸ್ಪಷ್ಟ. ಇದು ಸ್ವಲ್ಪ ಮಟ್ಟಿಗೆ ನಿಜ ಕೂಡಾ. ಕಾವೇರಿ ನದಿನೀರಿನ ಜಗಳಕ್ಕೆ ಹೋಲಿಸಿದರೆ ಕೃಷ್ಣಾ ನದಿ ನೀರಿನ ಜಗಳದ ಸದ್ದು-ಗದ್ದಲ ಕಡಿಮೆ. ಅದೇ ರೀತಿ ಕಾವೇರಿ ಕಣಿವೆಯಲ್ಲಿ ಹರಿದುಹೋದಷ್ಟು ರಾಜಕೀಯದ ಕೆಸರುನೀರು ಕೃಷ್ಣಾ ಕಣಿವೆಯಲ್ಲಿ ಹರಿಯಲಿಲ್ಲ ಎನ್ನುವುದೂ ನಿಜ. ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆದಂತಹ ಅನ್ಯಾಯ ಕೃಷ್ಣಾ ನೀರು ಹಂಚಿಕೆಯಲ್ಲಿ ಆಗದಿರಲು ಇದು ಕೂಡಾ ಕಾರಣ ಇರಬಹುದೇ?

ಕಾವೇರಿ ಐತೀರ್ಪು ಹೊರಬಂದ ಕಾಲದಲ್ಲಿ ಸಂಸತ್ ಭವನದ ಲೋಕಸಭಾಧ್ಯಕ್ಷರ ಕೊಠಡಿಯಲ್ಲಿ ರಾಜ್ಯದ ಇಬ್ಬರು ರಾಜಕೀಯ ನಾಯಕರ ನಡುವೆ ನಡೆದ ಸಂಭಾಷಣೆಯೊಂದು ನೆನೆಪಾಗುತ್ತಿದೆ. ‘ಅರ್ಧ ಸತ್ತ ಹಾವು ಮತ್ತು ಅರ್ಧ ಸತ್ತ ರಾಜನನ್ನು ಬಿಟ್ಟುಬಿಡುವುದು ಬಹಳ ಅಪಾಯಕಾರಿ’ ಎಂದು ಮೊದಲು ಕೆಣಕಿದವರು ಆಗ ಸಂಸದರಾಗಿದ್ದ ಆರ್.ಎಲ್.ಜಾಲಪ್ಪ. ಈ ಮಾತು ಕೇಳಿದೊಡನೆ ಸ್ವಲ್ಪದೂರದಲ್ಲಿ ಕೂತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮುಖ ಇನ್ನಷ್ಟು ಗಂಟಾಗಿತ್ತು. ಜಾಲಪ್ಪ ಸುಮ್ಮನಿರುತ್ತಿದ್ದರೋ ಏನೋ? ಆದರೆ ಪಕ್ಕದಲ್ಲಿ ಕೂತಿದ್ದ ಇನ್ನೊಬ್ಬ ಸಂಸದ ಅನಂತಕುಮಾರ್ ‘ಏನ್ರೀ ಹಾವು, ಅದು ಜಾಲಪ್ಪನೋರೇ? ಎಂದು ಕೇಳಿಯೇ ಬಿಟ್ಟರು. ಹಾವಿನ ಕತೆ ಹೇಳಲು ಉತ್ಸುಕರಾಗಿದ್ದ ಜಾಲಪ್ಪನವರಿಗೆ ಅಷ್ಟೇ ಸಾಕಾಗಿತ್ತು.

‘ಕಾವೇರಿ ನ್ಯಾಯಮಂಡಳಿ ನದಿ ಕಣಿವೆ ರಾಜ್ಯಗಳಿಗೆ ಭೇಟಿ ನೀಡಿದಾಗ ತಮಿಳುನಾಡಿನವರು ನ್ಯಾಯಮೂರ್ತಿಗಳಿಗೆ ಸೀರೆ ಕೊಟ್ಟರು, ಬಳೆ ಕೊಟ್ಟರು ಎಂದು ಯಾರೋ ಒಬ್ಬರು ಸುಪ್ರೀಂ ಕೋರ್ಟಿಗೆ ದೂರು ಕೊಂಡೊಯ್ದರು. ಅದು ನ್ಯಾಯಮಂಡಳಿಗೆ ರಾಜ್ಯದ ಮೊದಲ ಏಟು. ನ್ಯಾಯಮೂರ್ತಿಗಳು ಜಗಳವಾಡುತ್ತಿರುವುದರಿಂದ ಈ ನ್ಯಾಯಮಂಡಳಿಯನ್ನೇ ಪುನರ್‌ರಚಿಸಿ ಎಂದು ಯಾರೋ ಇನ್ನೊಬ್ಬರು ಸುಪ್ರೀಂ ಕೋರ್ಟಿಗೆ ಹೋದರು. ಇದು ನ್ಯಾಯಮಂಡಳಿಗೆ ರಾಜ್ಯದ ಎರಡನೇ ಏಟು. ಅವಕಾಶ ಸಿಕ್ಕಾಗಲೆಲ್ಲ ಕರ್ನಾಟಕದ ನಮ್ಮ ನಾಯಕರು ನ್ಯಾಯಮಂಡಳಿಗೆ ಏಟು ಹಾಕುತ್ತಲೇ ಇದ್ದರು. ಇದರಿಂದಾಗಿ ಗಾಯಗೊಂಡ ಹಾವಿನಂತಾಗಿದ್ದ ನ್ಯಾಯಮಂಡಳಿ ಕಚ್ಚಿಯೇ ಬಿಟ್ಟಿತು. ಈಗ ಅನುಭವಿಸಿ...’ ಎಂದು ಜಾಲಪ್ಪ ಮೆಲ್ಲನೆ ಉಸಿರೆಳೆದುಕೊಂಡು ಸುಮ್ಮನಾದರು.ಇಷ್ಟು ಕೇಳಿದ ನಂತರ ದೇವೇಗೌಡರಿಗೆ ಸುಮ್ಮನಿರಲಾಗಲಿಲ್ಲ. ‘ಯಾರೋ ಎಂದು ಯಾಕೆ ಹೇಳುತ್ತಿದ್ದೀರಿ ಗುರುಗಳೇ, ಕೋರ್ಟಿಗೆ ಹೋಗಿದ್ದು ನಾನೇ’ ಎಂದು ವಾದಕ್ಕಿಳಿದೇ ಬಿಟ್ಟಿದ್ದರು. ಆ ಕ್ಷಣದಲ್ಲಿ ಅದೊಂದು ತಮಾಷೆಯಂತೆ ಕಂಡರೂ ಅದು ಕಾವೇರಿ ನದಿ ನೀರು ಹಂಚಿಕೆ ವಿವಾದದ ಅನೇಕ ಒಳಸುಳಿಗಳನ್ನು ಬಿಚ್ಚಿಟ್ಟದ್ದು  ಸುಳ್ಳಲ್ಲ.

ಕೃಷ್ಣಾ ನ್ಯಾಯಮಂಡಳಿಯಂತಲ್ಲ, ಕಾವೇರಿ ನ್ಯಾಯಮಂಡಳಿಯ ಸ್ಥಾಪನೆಯನ್ನೇ ಕರ್ನಾಟಕ ವಿರೋಧಿಸಿತ್ತು. 1991ರಲ್ಲಿ ಕಾವೇರಿ ಕಣಿವೆಗೆ ಭೇಟಿ ನೀಡಿದ್ದ ನ್ಯಾಯಮಂಡಳಿಯನ್ನು ಕರ್ನಾಟಕದ ಜನತೆ ಎದುರುಗೊಂಡದು ಕಪ್ಪುಬಾವುಟ ಮತ್ತು ‘ಗೋ ಬ್ಯಾಕ್’ಘೋಷಣೆಗಳೊಂದಿಗೆ. ಇದಕ್ಕೆ ತದ್ವಿರುದ್ಧವಾಗಿ ತಮಿಳುನಾಡು ನಡೆದುಕೊಂಡಿತ್ತು. ನ್ಯಾಯಮೂರ್ತಿಗಳು ಅಲ್ಲಿಗೆ ಹೋದಾಗ ಆಗಿನ ಮುಖ್ಯಮಂತ್ರಿ ಜೆ.ಜಯಲಲಿತಾ ಖುದ್ದಾಗಿ ಬಂದು ಸ್ವಾಗತಿಸಿದ್ದರು. ಅವರು ಹೋದಲ್ಲೆಲ್ಲ  ಸ್ವಾಗತದ ಕಮಾನುಗಳು, ಭಿತ್ತಿಪತ್ರಗಳು ರಾರಾಜಿಸುತ್ತಿದ್ದವು. ನ್ಯಾಯಮೂರ್ತಿಗಳಿಗೆ ಖಾಸಗಿ ಪ್ರವಾಸವನ್ನು ಅಲ್ಲಿನ ಸರ್ಕಾರವೇ ಏರ್ಪಡಿಸಿತ್ತು. ಅದೇ ಕಾಲದಲ್ಲಿ ನ್ಯಾಯಮೂರ್ತಿಗಳಿಗೆ ತಮಿಳುನಾಡು ಸರ್ಕಾರ ‘ಬೆಲೆಬಾಳುವ ಉಡುಗೊರೆಗಳನ್ನು ಕೊಟ್ಟಿದೆ’ ಎಂದು ಆರೋಪಿಸಿ ದೇವೇಗೌಡರು ಸುಪ್ರೀಂ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದು. ನಂತರ ನ್ಯಾಯಮಂಡಳಿಯ ಅಧ್ಯಕ್ಷ ಚಿತ್ತತೋಷ್ ಮುಖರ್ಜಿ ರಾಜೀನಾಮೆ ನೀಡಿದ್ದರು. ಅವರು ರಾಜೀನಾಮೆಗೆ ಸ್ಪಷ್ಟವಾದ ಕಾರಣ ನೀಡಿರದಿದ್ದರೂ ನ್ಯಾಯಮಂಡಳಿ ವಿರುದ್ದದ ಆರೋಪವೂ ಒಂದು ಕಾರಣವೆಂದು ಹೇಳಲಾಗಿತ್ತು.

ಕೊನೆಗೆ ಇನ್ನೇನು ಅಂತಿಮ ಐತೀರ್ಪು ನೀಡುವ ದಿನಗಳು ಹತ್ತಿರ ಬರುತ್ತಿರುವಾಗ ಮತ್ತೆ ಕರ್ನಾಟಕ ಸರ್ಕಾರ ನ್ಯಾಯಮಂಡಳಿಯ ಮೇಲೆ ಎರಗಿಬಿಟ್ಟಿತು. ಮೊದಲು ಇಬ್ಬರು ನ್ಯಾಯಮೂರ್ತಿಗಳು ಕಾವೇರಿ ಕಣಿವೆಯಲ್ಲಿ ಅಧ್ಯಯನ ಪ್ರವಾಸಕ್ಕೆ ಹೊರಡುವ ಆಶಯ ವ್ಯಕ್ತಪಡಿಸಿದಾಗ ಕರ್ನಾಟಕ ಅದನ್ನು ವಿರೋಧಿಸಿತ್ತು. ಈ ಪ್ರವಾಸದ ವಿಷಯದಲ್ಲಿ ನ್ಯಾಯಮೂರ್ತಿಗಳು ಪರಸ್ಪರ ವಿರುದ್ಧವಾದ ನಿಲುವು ತಳೆದಿದ್ದಾಗ ಕಾವೇರಿ ನ್ಯಾಯಮಂಡಳಿಯನ್ನೇ ಪುನರ್‌ರಚಿಸಬೇಕೆಂದು ಬೆಂಗಳೂರಿನ ಗಾಂಧಿ ಸಾಹಿತ್ಯ ಸಂಘ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿತ್ತು. ಅದನ್ನು ರಾಜ್ಯ ಸರ್ಕಾರ ಬೆಂಬಲಿಸಿತ್ತು. ಇದರ ಹಿಂದೆ ಇದ್ದದ್ದು ಆಗಿನ ಮುಖ್ಯ ಕಾರ್ಯದರ್ಶಿಗಳು ಮತ್ತು ಎನ್. ಧರ್ಮಸಿಂಗ್ ಸರ್ಕಾರದ ಜುಟ್ಟುಹಿಡಿದುಕೊಂಡಿದ್ದ ದೇವೇಗೌಡರು. ಸುಪ್ರೀಂ ಕೋರ್ಟ್ ಆ ಅರ್ಜಿಯನ್ನು ತಿರಸ್ಕರಿಸಿತು. ಆದರೆ ರಾಜ್ಯ ಸರ್ಕಾರದ ಈ ಉದ್ಧಟತನದಿಂದ ನ್ಯಾಯಮೂರ್ತಿಗಳ ಮನಸ್ಸಿಗೆ ಸಹಜವಾಗಿಯೇ ನೋವಾಗಿದ್ದು ನಿಜ.

ಕೃಷ್ಣಾ ನ್ಯಾಯಮಂಡಳಿಯ ಪ್ರಾರಂಭದ ದಿನಗಳಲ್ಲಿಯೂ ಒಂದಷ್ಟು ಎಡವಟ್ಟುಗಳನ್ನು ಕರ್ನಾಟಕ ಸರ್ಕಾರ ಮಾಡಿಕೊಂಡಿತ್ತು. ಕೃಷ್ಣಾ ಕಣಿವೆಯಲ್ಲಿ ಆಂಧ್ರ ಸರ್ಕಾರ ಅಕ್ರಮವಾಗಿ ನಿರ್ಮಿಸುತ್ತಿರುವ ನೀರಾವರಿ ಯೋಜನೆಗಳ ವಿರುದ್ಧ ದೂರು ನೀಡಲು ಧರ್ಮಸಿಂಗ್ ನೇತೃತ್ವದ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿ ಬಳಿ ಕೊಂಡುಹೋಗಿತ್ತು. ಈ ವಿವಾದವನ್ನು ಬಗೆಹರಿಸಲೆಂದೇ ನ್ಯಾಯಮಂಡಳಿ ಅಸ್ತಿತ್ವದಲ್ಲಿರುವಾಗ ಪ್ರಧಾನಿಗೆ ದೂರು ನೀಡುವುದು ಸರಿಯಾದ ಕ್ರಮ ಅಲ್ಲ, ನ್ಯಾಯಮಂಡಳಿಗೆ ಅಗೌರವ ಸೂಚಿಸಿದಂತೆ ಎಂದು ರಾಜ್ಯದ ವಕೀಲರು ಹೇಳಿದಾಗಲೂ ಸರ್ಕಾರ ಕಿವಿಗೆ ಹಾಕಿಕೊಂಡಿರಲಿಲ್ಲ. ನಂತರದ ದಿನಗಳಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಆರ್. ಎನ್.ನರಸಿಂಹಮೂರ್ತಿ ಅವರು ನ್ಯಾಯಮಂಡಳಿಯಲ್ಲಿ ಹಿರಿಯ ವಕೀಲ ಎಫ್.ಎಸ್. ನಾರಿಮನ್ ಬದಲಿಗೆ ತಾವೇ ವಕೀಲರ ತಂಡದ ನೇತೃತ್ವ ವಹಿಸುವುದಾಗಿ ಪಟ್ಟು ಹಿಡಿದಿದ್ದರು. ಕೊನೆಗೆ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ನಾರಿಮನ್ ಅವರನ್ನೇ ಮುಂದುವರಿಸಿತು. ಅದರ ನಂತರ ಬಂದ ಇನ್ನೊಬ್ಬ ಅಡ್ವೋಕೇಟ್ ಜನರಲ್ ಅವರ ಮಿತಿಮೀರಿದ ಮಧ್ಯಪ್ರವೇಶದಿಂದಾಗಿ ವಕೀಲರ ತಂಡದಲ್ಲಿಯೇ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಆ ಅಡ್ವೋಕೇಟ್ ಜನರಲ್ ಅತ್ಯುತ್ಸಾಹದಿಂದ ತಾವೇ ಪಾಟಿ ಸವಾಲು ಮಾಡಹೋಗಿದ್ದರು. ಐತೀರ್ಪಿನಲ್ಲಿ ಇದನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿಗಳು ‘ಕರ್ನಾಟಕದ ಅಡ್ವೋಕೇಟ್ ಜನರಲ್ ಅವರ ಪಾಟಿ ಸವಾಲು ದೀರ್ಘ ಮತ್ತು ತ್ರಾಸದಾಯಕವಾಗಿತ್ತು. ಅಂತಿಮವಾಗಿ ಅದರಿಂದೇನೂ ಹೊಸ ವಿಷಯ ಹೊರಬರಲಿಲ್ಲ’ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ (ಐತೀರ್ಪಿನ ಪುಟ-248-9). ಆದರೆ ರಾಜ್ಯಸರ್ಕಾರ ಹೆಚ್ಚಿನ ಅನಾಹುತಕ್ಕೆ ಅವಕಾಶವಾಗದಂತೆ ನಾರಿಮನ್ ನೇತೃತ್ವದ ವಕೀಲರ ತಂಡದ ಮೇಲೆಯೇ ವಿಶ್ವಾಸ ಇರಿಸಿದ್ದು ಕೃಷ್ಣಾ ಕಣಿವೆಯ ರೈತರ ಪಾಲಿನ ಪುಣ್ಯ.

ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಈಗಿನದಕ್ಕಿಂತ ತೃಪ್ತಿಕರವಾದ ಐತೀರ್ಪನ್ನು ಪಡೆಯುವುದು ಸಾಧ್ಯ ಇರಲಿಲ್ಲವೇನೋ.  ‘ಬಿ’ ಸ್ಕೀಮ್‌ನ ಹೆಚ್ಚುವರಿ ನೀರಿನಲ್ಲಿ ಕರ್ನಾಟಕಕ್ಕೆ ಅರ್ಧಭಾಗದಷ್ಟು ನೀಡಬೇಕೆಂಬ ಬಚಾವತ್ ನ್ಯಾಯಮಂಡಳಿಯ ಸೂಚನೆಯನ್ನು ಪಾಲಿಸದಿರುವುದಷ್ಟೇ ಈಗಿನ ಐತೀರ್ಪಿನಲ್ಲಿ ಹುಡುಕಿ ತೆಗೆಯಬಹುದಾದ ಏಕೈಕ ‘ಅನ್ಯಾಯ’. ಆದರೆ ಬಚಾವತ್ ನ್ಯಾಯಮಂಡಳಿ ‘ಎ’ ಸ್ಕೀಮ್‌ನಲ್ಲಿ  ಕರ್ನಾಟಕಕ್ಕೆ ನೀಡಿದ್ದ  734 ಟಿಎಂಸಿ ಅಡಿ ನೀರನ್ನು 37 ವರ್ಷಗಳ ನಂತರವೂ ಪೂರ್ಣವಾಗಿ ಬಳಸಿಕೊಂಡಿಲ್ಲ ಎನ್ನುವುದನ್ನು ಹೇಗೆ ಮುಚ್ಚಿಡಲು ಸಾಧ್ಯ?  ‘ಎ’ ಸ್ಕೀಮ್‌ನ 134 ಟಿಎಂಸಿ ಅಡಿನೀರನ್ನು ನಾವು ಬಳಸಿಕೊಂಡಿಲ್ಲ ಎನ್ನುವುದನ್ನು ಕರ್ನಾಟಕವೇ ನ್ಯಾಯಮಂಡಳಿಯ ಮುಂದೆ ಒಪ್ಪಿಕೊಂಡಿದೆಯಲ್ಲ. ಐತೀರ್ಪಿನ ಬಗೆಗಿನ ಇನ್ನೊಂದು ಆಕ್ಷೇಪ ಜೂನ್- ಜುಲೈ ತಿಂಗಳಲ್ಲಿ ಆಲಮಟ್ಟಿಯಿಂದ ಹತ್ತು ಟಿಎಂಸಿ ಅಡಿ ನೀರನ್ನು ಆಂಧ್ರಪ್ರದೇಶಕ್ಕೆ ಬಿಡಬೇಕೆಂಬ ಸೂಚನೆ. ಆದರೆ ಇದು ಆಲಮಟ್ಟಿ ಆಣೆಕಟ್ಟಿನ ಎತ್ತರದ ಹೆಚ್ಚಳಕ್ಕೆ ನ್ಯಾಯಮಂಡಳಿಯನ್ನು ಒಪ್ಪಿಸಲು ಕರ್ನಾಟಕವೇ ಹೂಡಿದ್ದ ಕಾರ್ಯತಂತ್ರ ಎನ್ನುವುದು ಬಹಳ ಮಂದಿಗೆ ತಿಳಿದಿಲ್ಲ. ಆಣೆಕಟ್ಟಿನ ಎತ್ತರವನ್ನು ಈಗಿನ 519 ಮೀಟರ್‌ಗಳಿಂದ 524 ಮೀಟರ್‌ಗೆ ಹೆಚ್ಚಿಸಲು ಅವಕಾಶ ನೀಡಿದರೆ ಸಂಗ್ರಹವಾಗುವ ಹೆಚ್ಚುವರಿ ನೀರಿನಲ್ಲಿ ಆಂಧ್ರಪ್ರದೇಶಕ್ಕೆ 8-10 ಟಿಎಂಸಿ ಅಡಿ ನೀರು ಬಿಡಲು ನಾವು ಸಿದ್ದ ಎಂದು ಕರ್ನಾಟಕ ನ್ಯಾಯಮಂಡಳಿಗೆ ತಿಳಿಸಿತ್ತು. ಇದು ಹತ್ತು ಟಿಎಂಸಿ ಅಡಿ ನೀರು ಬಿಟ್ಟುಕೊಟ್ಟು 130 ಟಿಎಂಸಿ ಅಡಿ ನೀರು ಪಡೆಯುವ ತಂತ್ರ (ಎತ್ತರ ಹೆಚ್ಚಳದಿಂದ ಆಣೆಕಟ್ಟಿನಲ್ಲಿ ಸಂಗ್ರಹಿಸಲು ಸಾಧ್ಯವಾಗುವ ಹೆಚ್ಚುವರಿ ನೀರಿನ ಪ್ರಮಾಣ 130 ಟಿಎಂಸಿ ಅಡಿ)

ನೆಲ-ಜಲ ವಿಷಯದಲ್ಲಿ ರಾಜಕೀಯ ಮಾಡಲು ಹೊರಟವರಿಗೆ ಅನ್ಯಾಯವಾಗಿದೆ ಎಂದು ಎದೆಬಡಿದುಕೊಂಡಾಗಲೇ ಲಾಭ, ನ್ಯಾಯಸಿಕ್ಕಿದೆ ಎಂದು ಹೇಳಿದರೆ ನಷ್ಟ. ಈ ಕಾರಣಕ್ಕಾಗಿ ಕೃಷ್ಣಾ ನ್ಯಾಯಮಂಡಳಿಯ ಐತೀರ್ಪಿನ  ಪುನರ್‌ಪರಿಶೀಲನೆಗೆ ಅರ್ಜಿ ಹಾಕಬೇಕೆಂಬ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ. ನ್ಯಾಯಮಂಡಳಿ ಐತೀರ್ಪು ನೀಡಿದ ಮೂರು ತಿಂಗಳೊಳಗೆ ಸಂಬಂಧಿತ ರಾಜ್ಯ ಸರ್ಕಾರಗಳು ಇಲ್ಲವೇ ಕೇಂದ್ರ ಸರ್ಕಾರ ‘ಪುನರ್‌ಪರಿಶೀಲನಾ ಅರ್ಜಿ’ ಸಲ್ಲಿಸಬಹುದು. ಅದರಲ್ಲಿ ‘ನ್ಯಾಯಮಂಡಳಿಯ ಗಮನಕ್ಕೆ ಇಲ್ಲಿಯವರೆಗೆ ತರದಿದ್ದ ಹೊಸ ಅಂಶಗಳ ಬಗ್ಗೆ ಸ್ಪಷ್ಟೀಕರಣ ಇಲ್ಲವೇ ಮಾರ್ಗದರ್ಶನ ಕೋರಬಹುದು. ನ್ಯಾಯಮಂಡಳಿ ಒಂದು ವರ್ಷದ ಅವಧಿಯೊಳಗೆ ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿ ಸ್ಪಷ್ಟೀಕರಣ ನೀಡಬೇಕು. ಕೇಂದ್ರ ಸರ್ಕಾರ ಬಯಸಿದರೆ ನ್ಯಾಯಮಂಡಳಿಯ ಒಂದು ವರ್ಷದ ಅವಧಿಯನ್ನು ಇನ್ನೂ ಹೆಚ್ಚಿನ ಅವಧಿಗೆ ವಿಸ್ತರಿಸಬಹುದು. ಇದು ಅಂತರರಾಜ್ಯ ನದಿ ವಿವಾದ ಕಾಯಿದೆಯ ಸೆಕ್ಷನ್ 5.3ರಲ್ಲಿ ಐತೀರ್ಪು ಪುನರ್‌ಪರಿಶೀಲನೆಗೆ ನೀಡಿರುವ ಅವಕಾಶ.

ತಾವು ಮಂಡಿಸಿದ ವಿಷಯವನ್ನು ನ್ಯಾಯಮಂಡಳಿ ತಪ್ಪಾಗಿ ವ್ಯಾಖ್ಯಾನ ಮಾಡಿದೆ ಎಂದು ಅರಿಕೆ ಮಾಡಿಕೊಳ್ಳಲು ಪುನರ್‌ಪರಿಶೀಲನಾ ಅರ್ಜಿಯಲ್ಲಿ ಅವಕಾಶ ಇಲ್ಲ. ‘ನ್ಯಾಯಮಂಡಳಿ ತನಗೆ ಒಪ್ಪಿಸಿದ ವಿಷಯದ ಬಗ್ಗೆ ತನಿಖೆ ನಡೆಸಿ ತಾನು ಕಂಡು ಹಿಡಿದ ನೈಜಾಂಶಗಳನ್ನು ಒಳಗೊಂಡ ಐತೀರ್ಪನ್ನು ಮೂರು ವರ್ಷಗಳೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಕಾಯಿದೆಯ ಸೆಕ್ಷನ್ 5.2 ಹೇಳುತ್ತದೆ. ಇದರ ಪ್ರಕಾರ ಐತೀರ್ಪು ಎನ್ನುವುದು ನ್ಯಾಯಮಂಡಳಿ ‘ತನಿಖೆ ನಡೆಸಿ ಕಂಡು ಹಿಡಿದ ನೈಜ ಅಂಶ’. ಹೀಗಿದ್ದಾಗ ಅದೇ ನ್ಯಾಯಮಂಡಳಿ ತನ್ನ ತನಿಖೆಯಲ್ಲಿ ಲೋಪವಾಗಿದೆ, ವಿಷಯದ ವ್ಯಾಖ್ಯಾನ ಸರಿಯಾಗಿ ಮಾಡಿಲ್ಲ ಎಂದು ಒಪ್ಪಿಕೊಳ್ಳುವುದು ಸಾಧ್ಯವೇ? ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸುವ ಮೂಲಕ ಹೆಚ್ಚೆಂದರೆ ಐತೀರ್ಪಿನ ಅನುಷ್ಠಾನವನ್ನು ಒಂದಷ್ಟು ದಿನ ವಿಳಂಬಗೊಳಿಸಲು ಸಾಧ್ಯ.

ರಾವಿ-ಬಿಯಾಸ್ ನದಿ ನೀರು ಹಂಚಿಕೆಗಾಗಿ ರಚನೆಯಾದ ಎರಾಡಿ ನ್ಯಾಯಮಂಡಳಿ ಕಳೆದ 23 ವರ್ಷಗಳಿಂದ ಅಸ್ತಿತ್ವದಲ್ಲಿದೆ. 1986ರಲ್ಲಿ ರಚನೆಗೊಂಡ ನ್ಯಾಯಮಂಡಳಿ ಕೇವಲ ಒಂಬತ್ತು ತಿಂಗಳಲ್ಲಿ ಐತೀರ್ಪು ನೀಡಿತ್ತು. ಅದರ ನಂತರ ಸಲ್ಲಿಸಲಾದ ಪರಿಶೀಲನಾ ಅರ್ಜಿ 22 ವರ್ಷಗಳಿಂದ ವಿಚಾರಣೆಯಲ್ಲಿದೆ. ಇದೇ ಪರಿಸ್ಥಿತಿ ಕಾವೇರಿ ನ್ಯಾಯಮಂಡಳಿಯದು. ಐತೀರ್ಪು ನೀಡಿ ಮುಂದಿನ ಫೆಬ್ರುವರಿಗೆ ನಾಲ್ಕು ವರ್ಷ. ಕರ್ನಾಟಕ ಮತ್ತು ತಮಿಳುನಾಡು ನ್ಯಾಯಮಂಡಳಿಯ ಮುಂದೆ ಪುನರ್‌ಪರಿಶೀಲನೆ ಅರ್ಜಿ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ಅರ್ಜಿ ಸಲ್ಲಿಸಿವೆ. ಈಗಲೂ ರಾಜ್ಯ ಸರ್ಕಾರ ಇಷ್ಟಪಟ್ಟರೆ ಕೃಷ್ಣಾ ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಬಹುದು. ಆದರೆ ಆ ಅರ್ಜಿ ಇತ್ಯರ್ಥವಾಗುವ ವರೆಗೆ ಐತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸುವಂತಿಲ್ಲ. ಗೆಜೆಟ್ ಪ್ರಕಟಣೆಯಾಗದೆ ಐತೀರ್ಪನ್ನು ಜಾರಿಗೊಳಿಸಲು ಸಾಧ್ಯವೇ? ಜಾರಿಯಾಗದೆ ಇದ್ದರೆ ಪಡೆದುದನ್ನೂ ಅನುಭವಿಸಲಾಗದ ಸ್ಥಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT