ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಉಳಿಸಿಕೊಳ್ಳುವುದು ಹೇಗೆ?

Last Updated 16 ಜುಲೈ 2016, 19:30 IST
ಅಕ್ಷರ ಗಾತ್ರ

ಕಾಶ್ಮೀರದಲ್ಲಿನ ಇತ್ತೀಚಿನ ಬೆಳವಣಿಗೆಗಳು ನಮ್ಮ ಆಂತರ್ಯದ ಕುರೂಪತನ ಬಹಿರಂಗಗೊಳಿಸಿವೆ. ಈ ಸಮಸ್ಯೆ ಈಗ ಬರೀ ಕಾಶ್ಮೀರದ ಭೂಪ್ರದೇಶ ಅಥವಾ ಕಾಶ್ಮೀರಿಗಳಿಗೆ ಸಂಬಂಧಿಸಿಲ್ಲ. ಭಾರತ ಅಥವಾ ಪಾಕಿಸ್ತಾನ ಮಧ್ಯದ ವಿವಾದಾತ್ಮಕ ವಿಷಯವಾಗಿಯೂ ಉಳಿದಿಲ್ಲ, ಈಗ ಅದು ಹಿಂದೂ ಮುಸ್ಲಿಂ ಸಂಘರ್ಷದ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಕಣಿವೆ ರಾಜ್ಯದ ಮತ್ತು ಅಲ್ಲಿನ ಜನರ ಮೇಲಿನ  ನಿಯಂತ್ರಣ ಮತ್ತು ಭಾವನಾತ್ಮಕ ಸಂಬಂಧಕ್ಕೆ ನಾವು ಎರವಾಗುತ್ತಿದ್ದೇವೆ.

ಕಡಿಮೆ ವಿವಾದಾತ್ಮಕವಾದ, ಅಷ್ಟೇನೂ ಗಂಭೀರವಲ್ಲದ ಸಂಗತಿಗಳನ್ನು ಈ ವಾದ ವಿವಾದದಿಂದ ಮೊದಲು ಹೊರಗೆ ಇರಿಸೋಣ. ಭದ್ರತಾ ಪಡೆಗಳು ಉಗ್ರರ ಮುಖಂಡ ಬುರ್ಹಾನ್‌ ವಾನಿಯನ್ನು ಹತ್ಯೆ ಮಾಡಿದ್ದರಿಂದ ಕಾಶ್ಮೀರ ಕಣಿವೆಯಲ್ಲಿ ಮತ್ತೆ ಅಶಾಂತಿ ತಲೆದೋರಿದೆ. ಈ ಹತ್ಯೆಯನ್ನು ತಡೆಯಲು ಸಾಧ್ಯವೇ ಇರಲಿಲ್ಲ. ಬುರ್ಹಾನ್‌, ಸರ್ಕಾರದ ವಿರುದ್ಧ ಹೋರಾಡಲು ಬಂದೂಕು ಕೈಗೆತ್ತಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಯುವಕರನ್ನು ಪ್ರಚೋದಿಸಲು ತೊಡಗಿದ ದಿನವೇ ಮುಂದೊಂದು ದಿನ ಆತನ ಸಾವು ನಿಶ್ಚಿತ ಎನ್ನುವುದು ಖಚಿತಪಟ್ಟಿತ್ತು.

ಆರು ವರ್ಷಗಳ ಕಾಲ ಆತ ಬದುಕುಳಿದದ್ದೇ ದೊಡ್ಡ ಕೌತುಕದ ಸಂಗತಿ. ಇದಕ್ಕೆ ಆತನ ಅದೃಷ್ಟದ ಜತೆಗೆ ತಂತ್ರಗಾರಿಕೆಯೂ ಕಾರಣ ಇರಬಹುದು. ದೇಶದ್ರೋಹದ ಚಟುವಟಿಕೆಗಳಲ್ಲಿ ತೊಡಗಿದ ಯಾರನ್ನೇ ಆಗಲಿ ಸಶಸ್ತ್ರ ಪಡೆಗಳು ‘ಬೇಕಾದ ವ್ಯಕ್ತಿ’ ಎಂದು ಗುರುತಿಸಿದರೆ ಆತನ ಕಥೆ ಮುಗಿಯಿತು, ಆತ ಹೆಚ್ಚು ಕಾಲ ಬದುಕಿರಲು ಸಾಧ್ಯವೇ ಇಲ್ಲ ಎಂದೇ ಅರ್ಥ.

ಬುರ್ಹಾನ್‌ ವಾನಿ ಬಗ್ಗೆ ನನ್ನಲ್ಲಿ ಸಹಾನುಭೂತಿ ಇದೆಯೇ ಎನ್ನುವ ಪ್ರಶ್ನೆಯನ್ನು ನನ್ನಷ್ಟಕ್ಕೆ ನಾನೇ ಕೇಳಿಕೊಂಡಿರುವೆ. ದೇಶದ ಯಾವುದೇ ಪ್ರಜೆ ಮೃತಪಟ್ಟರೂ ನಾನು ಅವರ ಬಗ್ಗೆ ಮರುಗುವೆ. ಇಂತಹ ಆತ್ಮಹತ್ಯಾಕಾರಿಯಾದ ಮಾರ್ಗ ತುಳಿಯಲು ಬುರ್ಹಾನ್‌ಗೆ ಆತನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಅವಕಾಶ ಮಾಡಿಕೊಟ್ಟ ಮತ್ತು  ಬೆಂಬಲಿಸಿದ್ದ ಕಾರಣಕ್ಕೆ ಮಾತ್ರ ಆತನ ಬಗ್ಗೆ ನನ್ನಲ್ಲಿ ಸಹಾನುಭೂತಿ ಇದೆ. ಆತನ ಹತ್ಯೆ ಹೇಗೆ ನಡೆಯಿತು ಎನ್ನುವುದು ಇಲ್ಲಿ ಅಪ್ರಸ್ತುತ.

ವ್ಯಕ್ತಿಯೊಬ್ಬ ಶಸ್ತ್ರಾಸ್ತ್ರ ಕೈಗೆತ್ತಿಕೊಂಡು ಅನ್ಯರನ್ನು ಕೊಲ್ಲಲು ಆರಂಭಿಸಿದರೆ, ಹತ್ಯೆಗೆ ಒಳಗಾಗುವುದರ ವಿರುದ್ಧ ದೂರುವ ನೈತಿಕ ಹಕ್ಕನ್ನೇ ಕಳೆದುಕೊಳ್ಳುತ್ತಾನೆ. ವಿಶಾಲ್‌ ಭಾರದ್ವಾಜ್‌ ಅವರ ‘ಹೈದರ್‌’ ಚಿತ್ರದ ನಾಯಕ ದಿಟ್ಟತನದಿಂದ ಆಡುವ ಮಾತು, ‘ನೀನು ಅವನನ್ನು ಆರಾಧಿಸು ಅಥವಾ ದ್ವೇಷಿಸು, ಆದರೆ ಅವನ ದಿಟ್ಟತನವನ್ನು ಮಾತ್ರ ಗೌರವಿಸಲೇಬೇಕು’ ಎನ್ನುವುದು ಸದ್ಯದ ಸಂದರ್ಭಕ್ಕೆ ವಿರೋಧಾಭಾಸವಾಗಿ ಕೇಳಿಸುತ್ತದೆ.

ಭಾರತದ ಪ್ರಜೆಯೊಬ್ಬ ಈ ರೀತಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗುವುದು ವಿಷಾದಕರ ಬೆಳವಣಿಗೆ ಎಂದರೂ, ಬುರ್ಹಾನ್ ತನ್ನ ಸಾವನ್ನು ಸ್ವಯಂ ಪ್ರೇರಿತನಾಗಿ ಆಹ್ವಾನಿಸಿಕೊಂಡಿದ್ದ. 40ಕ್ಕೂ ಹೆಚ್ಚು ನಾಗರಿಕರು, ಭದ್ರತಾ ಪಡೆಯ ಸಿಬ್ಬಂದಿ ಮೃತಪಟ್ಟಿರುವುದು ಮಾತ್ರ ಇದಕ್ಕಿಂತ ಹೆಚ್ಚು ದುಃಖಕರ ಸಂಗತಿಯಾಗಿದೆ.

ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರವು ದೇಶದಿಂದ ಬೇರ್ಪಟ್ಟು ಪರಭಾರೆಯಾಗದೆ ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ ಎನ್ನುವುದು ಯಾರೊಬ್ಬರೂ ಅಲ್ಲಗಳೆಯಲಿಕ್ಕೆ ಸಾಧ್ಯವಿಲ್ಲದ ಸತ್ಯ ಸಂಗತಿಯಾಗಿದೆ.  ಈ ಮಾತು ನನ್ನ ಮನದಾಳದ ಮಾತಷ್ಟೇ ಅಲ್ಲ, ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳುವುದಾದರೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘದವರೂ ಈ ಮಾತನ್ನು ಒಕ್ಕೊರಲಿನಿಂದ ಅನುಮೋದಿಸುತ್ತಾರೆ.

ಈ ಮಾತು ದೇಶದಲ್ಲಿನ ಅನೇಕರನ್ನು ಕೆರಳಿಸಿದರೂ, ಪಾಕಿಸ್ತಾನ ಮತ್ತು ಚೀನಾ ಆಕ್ರಮಿತ ಕಾಶ್ಮೀರ ಭೂಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಭಾರತದ ಸಂಸತ್ತು ಒಕ್ಕೊರಲಿನಿಂದ ಗೊತ್ತುವಳಿ ಅಂಗೀಕರಿಸಿರುವುದರಿಂದ ಯಾರೊಬ್ಬರೂ ಆ ಬಗ್ಗೆ ಚಿಂತಿತರಾಗುವ ಅಗತ್ಯ ಇಲ್ಲ.
ನೆರೆಹೊರೆಯಲ್ಲಿನ ಮೂರು ಪರಮಾಣು ಬಾಂಬ್‌ ಸಜ್ಜಿತ ದೇಶಗಳು ಯುದ್ಧದ ಮೂಲಕ ಇನ್ನೊಬ್ಬರ ಭೂಭಾಗ ವಶಪಡಿಸಿಕೊಳ್ಳಲು ಸಾಧ್ಯವೇ ಇಲ್ಲ.

ಕಾಶ್ಮೀರ ಮತ್ತು ಕಾಶ್ಮೀರಿಗಳು ಈ ಮೂರೂ ದೇಶಗಳ ನಡುವಿನ ಮಾರಣಾಂತಿಕ ರಕ್ತಸಿಕ್ತ ದಾಯಾದಿ ಕಲಹದಲ್ಲಿ ಸಿಲುಕಿಕೊಂಡು ನಲುಗುತ್ತಿದ್ದಾರೆ. ಸದ್ಯಕ್ಕೆ ಈ ವಿಷಯದಲ್ಲಿ ಭಾರತವು, ಪಾಕಿಸ್ತಾನ ಮತ್ತು ಚೀನಾಗಳನ್ನು ಎದುರು ಹಾಕಿಕೊಂಡಿದೆ. ಯಾರೊಬ್ಬರೂ ಕಾಲು ಕೆದರಿ ಯುದ್ಧಕ್ಕೆ ಮುಂದಾಗುತ್ತಿಲ್ಲ. ಭವಿಷ್ಯದಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ 12ಕ್ಕೂ ಹೆಚ್ಚು ಯುದ್ಧಗಳು ನಡೆದರೂ, ಎರಡೂ ದೇಶಗಳು ತಮ್ಮ ಬಳಿ ಇರುವ ಅಣ್ವಸ್ತ್ರಗಳನ್ನು ಬಳಸಿಕೊಂಡು ತಮ್ಮ ವಿನಾಶಕ್ಕೆ ತಾವೇ ಕಾರಣವಾಗಿ ಅಸ್ತಿತ್ವ ಕಳೆದುಕೊಳ್ಳಲಿವೆ.

ಯಾವುದೇ ದೇಶ ತನ್ನ ಭೂಭಾಗದಲ್ಲಿ ಇರುವ ಕಾಶ್ಮೀರವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ನಾನು ಬೇಕಿದ್ದರೆ ಬಾಜಿ ಕಟ್ಟುವೆ. ಸ್ವತಂತ್ರ ಕಾಶ್ಮೀರ ರಚನೆಯಾಗಬೇಕು ಮತ್ತು  ಜನಮತಗಣನೆ ನಡೆಸಬೇಕು ಎಂದು ಹೇಳುವ ಪಾಕಿಸ್ತಾನವು, ಕಾಶ್ಮೀರ ಜನತೆಗೆ ವಂಚನೆ ಎಸಗುತ್ತಲೇ ಅವರ ಜತೆ ಅತಿ ದೊಡ್ಡ ಜೂಜಾಟ ಆಡುತ್ತಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೂಡ, ಕಾಶ್ಮೀರದ ಜನತೆಯ ಮುಂದೆ ಎರಡೇ ಆಯ್ಕೆಗಳನ್ನು ಮುಂದಿಟ್ಟಿದೆ. ಭಾರತ ಅಥವಾ ಪಾಕಿಸ್ತಾನ– ಇವೆರಡರಲ್ಲಿ ಯಾವುದೇ ಒಂದು ದೇಶವನ್ನು ಆಯ್ಕೆ ಮಾಡಿಕೊಳ್ಳಲು ಮಾತ್ರ ಅವಕಾಶ ಮಾಡಿಕೊಟ್ಟಿದೆ. ಕಾಶ್ಮೀರ ಜನರಿಗೆ ಸ್ವಾತಂತ್ರ್ಯ (ಆಜಾದಿ) ಪಡೆಯುವ ಹಕ್ಕು ಇಲ್ಲವೇ ಇಲ್ಲ. ಸ್ಕಾಟ್ಲೆಂಡ್‌, ಕ್ಯುಬೆಕ್‌ ಅಥವಾ ‘ಬ್ರೆಕ್ಸಿಟ್‌’ನಂತಹ ಆಯ್ಕೆಗಳೂ ಅವರಿಗೆ ಇಲ್ಲ.

ಪಾಕಿಸ್ತಾನವೇ ವಿಶ್ವಸಂಸ್ಥೆಯ ನಿರ್ಧಾರವನ್ನು ಮೂಲೆಗುಂಪು ಮಾಡಿದೆಯೇ ಹೊರತು ಭಾರತವಲ್ಲ. ಇದಕ್ಕೆ ಶಿಮ್ಲಾ ಒಪ್ಪಂದವೂ ಕಾರಣವಲ್ಲ. ಈ ಒಪ್ಪಂದಕ್ಕೂ ಏಳು ವರ್ಷಗಳ ಮೊದಲೇ ಕಾಶ್ಮೀರದ ಮೇಲೆ ಸೇನಾ ದಾಳಿಗೆ ಮುಂದಾಗಿದ್ದ ಪಾಕಿಸ್ತಾನ ತನ್ನ ಉದ್ದೇಶ ಸಾಧನೆಯಲ್ಲಿ ಸಂಪೂರ್ಣ ವಿಫಲವಾಗಿತ್ತು. ಹೀಗಾಗಿ, ಕಾಶ್ಮೀರವನ್ನು ಕಳೆದುಕೊಳ್ಳುವ ಬಗ್ಗೆ ಭಾರತೀಯರಾದ ನಾವು ಚಿಂತೆ ಪಡಬೇಕಾದ ಅಗತ್ಯವೇ ಇಲ್ಲ. ಕಾಶ್ಮೀರವನ್ನು ಉಳಿಸಿಕೊಳ್ಳಲು ಸೇನೆಯೊಂದೇ ಸಾಕು. ಈ ಭೂಪ್ರದೇಶವನ್ನು ರಕ್ಷಿಸಿಕೊಳ್ಳಲು ನಮ್ಮ ರಾಷ್ಟ್ರೀಯ ನಿರ್ಧಾರವೂ ಸಶಕ್ತವಾಗಿದೆ.

‘ನಮ್ಮ’ ಕಾಶ್ಮೀರಿಗಳು ಎನ್ನುವುದು ಪ್ರತ್ಯೇಕವಾದ ವಿಷಯ. ನಾವು ಈಗ ಈ ವಿಷಯದಲ್ಲಿ ಹೆಚ್ಚು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದೇವೆ. ಸೇನಾಪಡೆಗಳು ಭೂಪ್ರದೇಶ ಮತ್ತು ನಾಗರಿಕರನ್ನು ರಕ್ಷಿಸುತ್ತವೆ. ಸೈನಿಕರು ಕೋಪೋದ್ರಿಕ್ತ ಜನರ ಮನಸ್ಸನ್ನು ಮಾತ್ರ ಬದಲಿಸಲಾರರು. ನನ್ನ ಅನೇಕ ಗೌರವಾನ್ವಿತ ಸೇನಾ ಸ್ನೇಹಿತರು ಈ ವಾದವನ್ನು ಒಪ್ಪಿಕೊಳ್ಳಲಾರರು. ಉದ್ರಿಕ್ತ, ಅವಮಾನಕ್ಕೀಡಾದ ಜನರ ಹೃದಯ ಮತ್ತು ಮನಸ್ಸನ್ನು ಸೇನಾಪಡೆಗಳು ಗೆಲ್ಲಲಾರವು. ವೈರಿಗಳನ್ನು ಸದೆಬಡಿಯಲು ಸೇನೆ ಬಳಸಬಹುದು. ಪರಿತ್ಯಕ್ತ ಸೋದರನ ಮನಸ್ಸು ಗೆಲ್ಲಲು ಹೃದಯ ವೈಶಾಲ್ಯ ತೋರಬೇಕು. ಕಾಶ್ಮೀರ ಜನತೆಯ ವಿಷಯದಲ್ಲಿ ಇಂತಹ ಸಾಧ್ಯತೆ ಫಲ ನೀಡುವುದೇ ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗಿದೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಆಡಿದ ಒಂದು ಸಾಲಿನ ಮಾತಿನ ಮೂಲಕ ಪಾಕಿಸ್ತಾನೀಯರ ಮನಸ್ಸು ಗೆದ್ದ ನಿದರ್ಶನವನ್ನು ನಾವು ಇಲ್ಲಿ ನೆನಪು ಮಾಡಿಕೊಳ್ಳಬೇಕು. ‘ಬರೀ ಸಂವಿಧಾನದ ಚೌಕಟ್ಟಿನ ಒಳಗೆ ಏಕೆ ಮಾತನಾಡಬೇಕು. ನಾನು ನಿಮ್ಮ ಜತೆ ಮಾನವೀಯ ನೆಲೆಯಲ್ಲಿ ಮಾತನಾಡಲು ಇಚ್ಛಿಸುವೆ’ ಎಂದು ಹೇಳಿದ್ದರು. ಆ ಒಂದು ಮಾತು ಪಾಕಿಸ್ತಾನದ ಜತೆ ಆರು ವರ್ಷಗಳ ಕಾಲ ಶಾಂತಿ ನೆಲೆಸುವಂತೆ ಮಾಡಿತ್ತು. ಮನಮೋಹನ್‌ ಸಿಂಗ್‌ ಅವರೂ ಈ ಹೇಳಿಕೆಯ ನೆಲೆಗಟ್ಟಿನ ಮೇಲೇ ಸೌಹಾರ್ದ ಸಂಬಂಧದ ಸೌಧ ಕಟ್ಟಿದ್ದರು.

ಮುಫ್ತಿ ಅವರ ಪಿಡಿಪಿ ಜತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವ ಮೂಲಕ ನರೇಂದ್ರ ಮೋದಿ ಅವರೂ ಅದೇ ಹಾದಿಯಲ್ಲಿ ಸಾಗಲಿದ್ದಾರೆ ಎಂದು ನಾವು ನಂಬಿದ್ದೆವು. ದೇಶದ ಮೈತ್ರಿಕೂಟದ ಇತಿಹಾಸದಲ್ಲಿಯೇ ಬಿಜೆಪಿ– ಪಿಡಿಪಿ ಸ್ನೇಹವು ವಿಶಿಷ್ಟ ಬಗೆಯದಾಗಿದೆ. ಈ ಮೈತ್ರಿಕೂಟದ ಹೊರತಾಗಿಯೂ ಒಂದು ಸಂಗತಿ ಮಾತ್ರ ಇಲ್ಲಿ ಪ್ರತ್ಯೇಕವಾಗಿ ಗಮನ ಸೆಳೆಯುತ್ತದೆ. ಬಿಜೆಪಿಯು ಈ ಮೈತ್ರಿಕೂಟವನ್ನು ತನ್ನ ಕಾರ್ಯಕರ್ತರ ಮನಸ್ಸು ಪರಿವರ್ತಿಸುವಲ್ಲಿ, ಅದರಲ್ಲೂ ವಿಶೇಷವಾಗಿ ತನ್ನ ಬೌದ್ಧಿಕ ಮತ್ತು ಸೈದ್ಧಾಂತಿಕ ನೀತಿ ನಿರೂಪಕರು, ಕಾರ್ಯಸೂಚಿ ಸಿದ್ಧಪಡಿಸುವವರ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗಿದೆ.

ನಾನು ಈ ಪ್ರಯತ್ನವನ್ನು ಸಾಚಾತನವಲ್ಲದ ಮೈತ್ರಿಕೂಟಕ್ಕಿಂತ ಮುತ್ಸದ್ದಿತನದ ಪ್ರಯತ್ನ ಎಂದು ಬಣ್ಣಿಸಲು ಇಚ್ಛಿಸುತ್ತೇನೆ. ಸೈದ್ಧಾಂತಿಕವಾಗಿ ಎರಡು ವಿಭಿನ್ನ ನೆಲೆಯಲ್ಲಿ ಇರುವ ಪಕ್ಷಗಳು ರಾಷ್ಟ್ರೀಯತೆ ವಿಷಯದಲ್ಲಿ ಜತೆಯಾಗಿ ಸಾಗಲು ನಿರ್ಧರಿಸಿರುವುದು ಮಹತ್ವದ ನಿರ್ಧಾರವಾಗಿದೆ. ದಿವಂಗತ ಮುಫ್ತಿ ಮೊಹಮ್ಮದ್‌ ಸಯೀದ್‌ ಮತ್ತು ಅವರ ರಾಜಕೀಯ ಸಿದ್ಧಾಂತವು ರಾಷ್ಟ್ರೀಯತೆಯನ್ನೇ ಆಧರಿಸಿತ್ತು. ರಾಜಕೀಯ ಪಕ್ಷಗಳಲ್ಲಿ ಒಡಕು ಮೂಡಿಸಿದ್ದ ಚುನಾವಣೆಯ ನಂತರ ಇವೆರಡು ಪಕ್ಷಗಳು ಜತೆಯಲ್ಲಿ ಸಾಗಲು ನಿರ್ಧರಿಸಿರುವುದು ಖಂಡಿತವಾಗಿಯೂ ಮುತ್ಸದ್ದಿತನದ ನಡೆಯಾಗಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಮುಸ್ಲಿಂ ಬಹುಸಂಖ್ಯಾತರು ಇರುವ ಪ್ರದೇಶವು ಒಂದು ದಿಕ್ಕಿನಲ್ಲಿ ಮತ ಚಲಾಯಿಸಿದ್ದರೆ, ಹಿಂದೂಗಳ ಪ್ರಾಬಲ್ಯದ ಪ್ರದೇಶವು ಇನ್ನೊಂದು ದಿಕ್ಕಿನಲ್ಲಿ ಮತ ಚಲಾಯಿಸಿತ್ತು. ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮತ್ತು ಕಾಂಗ್ರೆಸ್‌ಗಳ ಬಲ ಗಣನೀಯವಾಗಿ ಕ್ಷೀಣಿಸಿತ್ತು. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ, ಈ ಮೈತ್ರಿಕೂಟಕ್ಕೆ ಒಪ್ಪಿಗೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರಿ ಗಂಡಾಂತರವನ್ನೇ ಆಹ್ವಾನಿಸಿಕೊಂಡಿದ್ದರು.

ಪಕ್ಷದ ಕಾರ್ಯಕರ್ತರ ಸೈದ್ಧಾಂತಿಕ ನಿಲುವು ಮತ್ತು ಮೋದಿ ಅವರ ರಾಜಕೀಯ ತಂತ್ರಗಾರಿಕೆ ಮಧ್ಯೆ ಉದ್ಭವಿಸಿದ ವಿರೋಧಾಭಾಸವು, ಮೋದಿ ಅವರ ವರ್ಚಸ್ಸಿಗೆ ಸಾಕಷ್ಟು ಧಕ್ಕೆ ಮಾಡಿದೆ. ಪ್ರತಿ ದಿನ ಸಂಜೆ ಪ್ರಮುಖ ಟೆಲಿವಿಷನ್‌ ಚಾನೆಲ್‌ಗಳಲ್ಲಿ ಮೋದಿ ಬಂಟರು, ಕಾಶ್ಮೀರದಲ್ಲಿ ಸೇನಾ ಪಡೆಗಳ ಕಾರ್ಯಾಚರಣೆಯನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಹೆಣಗಾಡುವುದನ್ನು ಕಾಣಬಹುದು. ಮೃತಪಟ್ಟವರ ಬಗ್ಗೆ ಕನಿಷ್ಠ ಸಹಾನುಭೂತಿಯೂ ಅವರ ಮಾತುಗಳಲ್ಲಿ ಕಂಡುಬರುತ್ತಿರಲಿಲ್ಲ.

ಇದು, ಮೈತ್ರಿಕೂಟದ ಪಾಲುದಾರ ಪಕ್ಷಕ್ಕೆ ನೆರವಾಗುವ ವಿಚಿತ್ರ ನಡೆಯಾಗಿರುವುದರ ಜತೆಗೆ, ನಮ್ಮವರೇ ಆಗಿರುವ ಕಾಶ್ಮೀರ ಜನತೆಯ ವಿರುದ್ಧದ ರೋಗಗ್ರಸ್ತ ಮನೋಭಾವದ ವಾಗ್ದಾಳಿ ನಡೆಸುವ ಸ್ವಯಂ ನಾಶದ ಧೋರಣೆಯೂ ಆಗಿದೆ. ನಾನು ಇಲ್ಲಿ ಉದ್ದೇಶಪೂರ್ವಕವಾಗಿಯೇ ‘ನಮ್ಮವರೇ’ ಶಬ್ದಕ್ಕೆ ಹೆಚ್ಚು ಒತ್ತು ಕೊಡುತ್ತಿರುವೆ. ‘ಕಾಶ್ಮೀರ ನಮ್ಮದು, ಸಂಪೂರ್ಣವಾಗಿ ಭಾರತಕ್ಕೆ ಸೇರಿದ್ದು’ ಎಂದು ಎದೆತಟ್ಟಿಕೊಂಡು ಹೇಳುವ ನಮ್ಮೆಲ್ಲ ರಾಷ್ಟ್ರೀಯವಾದಿಗಳು ಈ ಸಂದರ್ಭದಲ್ಲಿ, ತಮ್ಮ ಹೃದಯದಲ್ಲಿ ಕಾಶ್ಮೀರದ ಕುರಿತು ಮೂಡುವ ಭಾವೋದ್ವೇಗವು ಕಾಶ್ಮೀರದ ನೆಲಕ್ಕಾಗಿಯೋ ಅಥವಾ ಅಲ್ಲಿನ ಜನರ ಒಳಿತಿಗಾಗಿಯೋ ಎಂದು ತಮ್ಮಷ್ಟಕ್ಕೆ ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.

ಕಾಶ್ಮೀರವು ದೇಶ ವಿಭಜನೆಯ ಅಪೂರ್ಣ ಕಾರ್ಯಸೂಚಿಯಾಗಿದೆ ಎಂದು ಪಾಕಿಸ್ತಾನವು ಮೊದಲಿನಿಂದಲೂ ಪ್ರತಿಪಾದಿಸುತ್ತಲೇ ಬಂದಿದೆ. ಅವರು (ಪಾಕಿಸ್ತಾನವು) ಕಾಶ್ಮೀರದ ಭೂಭಾಗ ಮತ್ತು ಮುಸ್ಲಿಮರು ತಮ್ಮ ಕಡೆ ಬರಬೇಕು ಎಂದು ಬಯಸುತ್ತಿದ್ದಾರೆ. ಕಾಶ್ಮೀರದ ನೆಲ ಮತ್ತು ಉಳಿದ ಜನರು ನಮಗೇ ಸೇರಬೇಕು ಎಂದು ನಾವು ಕೂಡ ಬಯಸುತ್ತಿದ್ದೇವೆ. ಬ್ರಿಟಿಷರು ನಮಗೆ ‘ಒಡೆದು ಆಳುವ ನೀತಿ’ ಬೋಧಿಸಿದರು. ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಮನಸ್ಸುಗಳನ್ನು ಒಡೆಯಿರಿ ಮತ್ತು ಕಳೆದುಕೊಳ್ಳಿ’ ಧೋರಣೆ ಅನುಸರಿಸುತ್ತಿದ್ದೇವೆ.  ನಾವು ಭೂಪ್ರದೇಶ ಕಳೆದುಕೊಳ್ಳುತ್ತಿಲ್ಲ. ಜನರ ಮನಸ್ಸುಗಳನ್ನೂ ಬೆಸೆಯುತ್ತಿಲ್ಲ. ಅವರನ್ನು ಕಳೆದುಕೊಳ್ಳುತ್ತಿದ್ದೇವಷ್ಟೆ.

ಭಾರತದಲ್ಲಿನ ಶೇ 97ರಷ್ಟು ಮುಸ್ಲಿಮರು ದೇಶದ ಪ್ರಮುಖ ಭೂಭಾಗದಲ್ಲಿಯೇ ನೆಲೆಸಿದ್ದಾರೆ. ಕಾಶ್ಮೀರಿಗಳು ಎದುರಿಸುತ್ತಿರುವ ಪರಿಸ್ಥಿತಿಯ ನೈಜ ಚಿತ್ರಣದ ಬಗ್ಗೆ ಅವರಿಗೆ ಹೆಚ್ಚಿನ ಅರಿವೂ ಇಲ್ಲ. ಕಾಶ್ಮೀರಿಗರನ್ನು ಅತಿಯಾಗಿ ಮುದ್ದು ಮಾಡಲಾಗುತ್ತಿದೆ ಎಂದೇ ಅವರು ಭಾವಿಸಿದ್ದಾರೆ. ಮುಸ್ಲಿಮರನ್ನು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ವಿಭಜನೆ ಮಾಡಿದ ಬಗ್ಗೆ ಅವರು ಈಗಲೂ ದೂರುತ್ತಾರೆ ಮತ್ತು ಈ ಬಗ್ಗೆ  ಪ್ರಶ್ನೆಗಳನ್ನು ಎತ್ತುತ್ತಲೇ ಇರುತ್ತಾರೆ. ಝಾಕಿರ್‌ ನಾಯ್ಕ್‌ ಅವರಂತಹ ಧರ್ಮ ಬೋಧಕರೂ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯ ನಿಲುವು ತಳೆದಿದ್ದಾರೆ. ಇವೆಲ್ಲವೂ ವಿವಾದವನ್ನು ಕಾಶ್ಮೀರ ಕಣಿವೆಗಷ್ಟೇ ಸೀಮಿತಗೊಳಿಸಲು ಸರ್ಕಾರಕ್ಕೆ ನೆರವಾಗಿದೆ.

ಭಾರತದ ಸೇನೆ ನಿಜವಾಗಿಯೂ ಜಾತ್ಯತೀತ ಸಂಸ್ಥೆಯಾಗಿದೆ. ಸೇನಾ ದೌರ್ಜನ್ಯದ ಬಗ್ಗೆ ದೂರುಗಳು ಕೇಳಿ ಬಂದಿದ್ದರೂ, ಸೇನೆಯ ಹಿರಿಯ ಅಥವಾ ಕಿರಿಯ ಅಧಿಕಾರಿಯು ಕೋಮು ಭಾವನೆಯಿಂದ ಮಾತನಾಡಿರುವುದು ಯಾವತ್ತೂ ಕೇಳಿ ಬಂದಿಲ್ಲ. ಜತೆಗೆ, ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿರುವುದೂ ಕಂಡು ಬಂದಿಲ್ಲ. ಅಭದ್ರತೆಯ ಅಲ್ಪಸಂಖ್ಯಾತರು, ಅದರಲ್ಲೂ ವಿಶೇಷವಾಗಿ ಮುಸ್ಲಿಮರು ಗಲಭೆ ಸಂದರ್ಭಗಳಲ್ಲಿ ಸೇನೆಯನ್ನೇ ಹೆಚ್ಚಾಗಿ ನಂಬುತ್ತಾರೆ.

ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಈಗ ಹೊಸ ದೃಷ್ಟಿಕೋನ ಬೆಳೆಯುತ್ತಿದೆ.   ಕಾಶ್ಮೀರ ಸಮಸ್ಯೆಯನ್ನು ಈಗ ಹಿಂದೂ ಮುಸ್ಲಿಂ ಉದ್ವಿಗ್ನತೆಯ ಭಾಗವಾಗಿ ನೋಡಲಾಗುತ್ತಿದೆ. ‘ಪಾಕ್‌ ಜತೆಗಿನ ಗಡಿ ತೆರವುಗೊಳಿಸಲಾಗಿದ್ದು, ಪಾಕಿಸ್ತಾನಕ್ಕೆ ಹೋಗಲು ಬಯಸುವ ಮುಸ್ಲಿಮರೆಲ್ಲ ಹೋಗಬಹುದು’ ಎಂದು ಒಂದು ವೇಳೆ ಭಾರತವು ತನ್ನೆಲ್ಲ ಮುಸ್ಲಿಂ ಪ್ರಜೆಗಳಿಗೆ ಕರೆ ನೀಡಿದರೆ ಏನಾಗಬಹುದು? ದೇಶದ ಪ್ರಮುಖ ಭಾಗದಲ್ಲಿ ನೆಲೆಸಿದ ಯಾವ ಮುಸ್ಲಿಮರೂ ಅದಕ್ಕೆ ಓಗೊಡಲಾರರು.

ಉತ್ತಮ ಬದುಕು ಅರಸಿ ಪಾಕಿಸ್ತಾನ ಮತ್ತು ಬಾಂಗ್ಲಾದಿಂದ ಅನೇಕ ಮುಸ್ಲಿಮರು ಭಾರತಕ್ಕೆ ಬರುತ್ತಿದ್ದಾರೆ ಎಂದೂ ನನಗೆ ಅನಿಸುತ್ತದೆ. ಸಾಂವಿಧಾನಿಕ ಮೂಲ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕಿಂತ ಆರ್ಥಿಕ ಮತ್ತು ರಾಜಕೀಯ ಸ್ಥಿರತೆಗಳೇ ಜನರು ತಮ್ಮ ನೆಮ್ಮದಿಯ ಬದುಕಿಗೆ ನೆಲೆ ಆಯ್ಕೆ ಮಾಡಿಕೊಳ್ಳಲು ಮುಖ್ಯ ಸಂಗತಿಯಾಗಿರುತ್ತವೆ. ಕಾಶ್ಮೀರದ ಜನರಿಗೂ ಇಂತಹ ಅವಕಾಶ ಒದಗಿಸಿದರೆ ಏನಾದೀತು ಎನ್ನುವ ಆಸಕ್ತಿದಾಯಕ ಪ್ರಶ್ನೆಗೆ, ಸ್ವಾತಂತ್ರ್ಯದ (ಆಜಾದಿ) ಭಾವನಾತ್ಮಕ ಆಕರ್ಷಣೆ  ಮತ್ತು ಐಎಸ್‌ಐನ ಜಿಹಾದಿ ಪ್ರಲೋಭನೆಗೆ ಒಳಗಾದ ಬೆರಳೆಣಿಕೆಯಷ್ಟು ಜನರು ಮಾತ್ರ ಗಡಿ ದಾಟಬಹುದು ಎಂದೇ ನನಗೆ ಅನಿಸುತ್ತದೆ. ಹಿಂದೂ ರಾಷ್ಟ್ರೀಯವಾದಿಗಳಿಗೂ ಇಂತಹದ್ದೇ ಪ್ರಶ್ನೆ ಕೇಳಬೇಕು ಎನಿಸುತ್ತದೆ.

‘ನಮ್ಮ ಕಾಶ್ಮೀರದ ಜನತೆ’ ತಮ್ಮ ನೆಲದೊಂದಿಗೆ ಇಲ್ಲಿಯೇ ಇರಬೇಕೇ ಅಥವಾ ಭೂಮಿಯನ್ನು ಇಲ್ಲಿಯೇ ಬಿಟ್ಟು ಪಾಕಿಸ್ತಾನಕ್ಕೆ ತೆರಳಬೇಕೇ’– ಇದಕ್ಕೆ ನಿಮ್ಮ ಉತ್ತರ ಏನು ಎಂದು ಪ್ರಶ್ನಿಸಬೇಕೆಂದು ನನಗೆ ಅನಿಸುತ್ತದೆ.

ಈ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ಬೇಕು ಎನ್ನುವುದು ನನ್ನ ಉದ್ದೇಶವಲ್ಲ. ಕಾಶ್ಮೀರ ವಿವಾದವನ್ನು ಹಿಂದೂ– ಮುಸ್ಲಿಂ ಎಂದು ಸರಳೀಕರಣಗೊಳಿಸಿ ಹೊಸದಾಗಿ ವ್ಯಾಖ್ಯಾನಿಸುವುದರ ಅಪಾಯ ಏನು ಎನ್ನುವುದನ್ನು ಸ್ಪಷ್ಟಪಡಿಸುವುದಷ್ಟೇ ನನ್ನ ಉದ್ದೇಶವಾಗಿದೆ. ನಾವು ಅದೇ ಹಾದಿಯಲ್ಲಿ ಮುನ್ನಡೆದರೆ, ಕಾಶ್ಮೀರವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಲಿದ್ದೇವೆ. ಆದರೆ, ನಮ್ಮ ಕಾಶ್ಮೀರದ ಜನರನ್ನು ಕಳೆದುಕೊಳ್ಳಲಿದ್ದೇವೆಯಷ್ಟೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT