ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಧೋರಣೆ ಬದಲಾವಣೆಗೆ ಸಕಾಲ

Last Updated 8 ಏಪ್ರಿಲ್ 2017, 19:50 IST
ಅಕ್ಷರ ಗಾತ್ರ

ವಿಶ್ವದಾದ್ಯಂತ ಈಗ ಮತದಾರರು ಮೂರು ಸಂಗತಿಗಳನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. ಅದೇ ಹೊತ್ತಿಗೆ ಮೂರು ವಿದ್ಯಮಾನಗಳನ್ನೂ ತಿರಸ್ಕರಿಸುತ್ತಿದ್ದಾರೆ. ಬದಲಾವಣೆಗೆ ಮನಸ್ಸು ಮಾಡಿರುವುದು, ತಡೆ ಒಡ್ಡಲು ಮುಂದಾಗಿರುವುದು ಮತ್ತು ರಾಜಕೀಯ– ಸೈದ್ಧಾಂತಿಕ ವಿಚಾರಗಳನ್ನು ತಿರಸ್ಕರಿಸುವುದರ ಬಗ್ಗೆ ಅವರಲ್ಲಿ ಹೆಚ್ಚು ಒಲವು ಕಂಡು ಬರುತ್ತಿದೆ. ಅದೇ ಹೊತ್ತಿನಲ್ಲಿ, ಯಥಾಸ್ಥಿತಿವಾದ, ಹಳೆಯ ವ್ಯವಸ್ಥೆ,  ನಿರ್ದಿಷ್ಟ ಗುಂಪಿನ ಜನರನ್ನು ಘಾಸಿಗೊಳಿಸುವ ರಾಜಕಾರಣ ತಿರಸ್ಕರಿಸುವುದನ್ನು ರೂಢಿಸಿಕೊಂಡಿದ್ದಾರೆ.

ಡೊನಾಲ್ಡ್‌  ಟ್ರಂಪ್‌ ಅವರ ಗೆಲುವು ಮತದಾರರ ಮನೋಭಾವದಲ್ಲಿನ ಇಂತಹ ಬದಲಾವಣೆಯ ಪ್ರತೀಕವಾಗಿದೆ. ನಮ್ಮಲ್ಲೂ ನರೇಂದ್ರ ಮೋದಿ ಅವರನ್ನು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತಂದಿರುವುದು ಮತ್ತು ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿರುವುದಕ್ಕೂ ಇದೇ ಕಾರಣ ನೀಡಬಹುದು.

ಟ್ರಂಪ್‌ ಅವರು, ಅಮೆರಿಕದ ಜನಸಾಮಾನ್ಯರ ಆಸಕ್ತಿ ಮತ್ತು ಆದ್ಯತೆಗಳನ್ನು ಬದಿಗೊತ್ತಿ ಪ್ರಭಾವಶಾಲಿಗಳು, ಕಾರ್ಪೊರೇಟ್‌ ಶಕ್ತಿಗಳು ಮತ್ತು ಸಿರಿವಂತರ ಅಗತ್ಯಗಳಿಗೆ ಹೆಚ್ಚು ಒತ್ತು ನೀಡಿ ಗೆಲುವು ಸಾಧಿಸಿದ್ದರು. ಅದಕ್ಕೂ ಮುಂಚೆಯೇ ಮೋದಿ ಅವರು ಸಮಾಜದ ಗಣ್ಯರ ಮನೋಭಿಲಾಷೆಗೆ ತಕ್ಕಂತೆ ನಿರ್ಧಾರಗಳನ್ನು ಕೈಗೊಳ್ಳುತ್ತ ನಕಲಿ ನಯಗಾರಿಕೆ ಮೂಲಕ ಜನಮಾನಸದಲ್ಲಿ ಪ್ರಭಾವ ಬೀರಿದ್ದರು.

ಅರವಿಂದ ಕೇಜ್ರಿವಾಲ್‌ ಅವರೂ ತಮ್ಮ ಜನಪ್ರಿಯತೆ ಉತ್ತುಂಗದಲ್ಲಿ ಇದ್ದಾಗ, ತಮ್ಮ ವಿರುದ್ಧ ಎಲ್ಲರೂ ಒಂದಾಗಿದ್ದಾರೆ ಎಂದು ದೊಡ್ಡ ದನಿಯಲ್ಲಿ ಆರೋಪಿಸಿದ್ದರು.  ಅಂದರೆ, ಸಮಾಜದ ಗಣ್ಯ ವ್ಯಕ್ತಿಗಳು, ರಾಜಕೀಯ ಎದುರಾಳಿಗಳು ಒಂದಾಗಿ ಅಧಿಕಾರವನ್ನು ತಮ್ಮ ಕೈಯಲ್ಲಿಯೇ ಇಟ್ಟುಕೊಳ್ಳಲು ಮತ್ತು ತಮ್ಮೊಳಗೇ ಅಧಿಕಾರ ಹಂಚಿಕೊಳ್ಳಲು ಹವಣಿಸುತ್ತಿದ್ದಾರೆ ಎಂದೂ ಕೇಜ್ರಿವಾಲ್‌ ಗಟ್ಟಿ ದನಿ ಎತ್ತಿದ್ದರು.

ಟ್ರಂಪ್‌ ಅವರು ಒಡ್ಡಿರುವ ಹಲವಾರು ಬೆದರಿಕೆಗಳಲ್ಲಿ ಅಥವಾ ನೀಡಿರುವ ಭರವಸೆಗಳಲ್ಲಿ, ಯುರೋಪ್‌ ಬಗೆಗಿನ ಅಮೆರಿಕದ ದೃಷ್ಟಿಕೋನವನ್ನೇ ಬದಲಿಸುವುದಾಗಿ ಹೇಳಿರುವುದು ಮುಖ್ಯವಾಗಿದೆ.

ಇಲ್ಲಿಯವರೆಗೆ ರಿಪಬ್ಲಿಕನ್ನರು ಮತ್ತು ಡೆಮಾಕ್ರಾಟ್‌ ರಾಜಕಾರಣಿಗಳು, ಯುರೋಪನ್ನು ತಮ್ಮ ಆರ್ಥಿಕ ಮತ್ತು ತತ್ವ ಚಿಂತನೆಯ ಪ್ರಮುಖ ಮಿತ್ರ ಸಂಘಟನೆ  ಮತ್ತು ಆಧಾರಸ್ತಂಭ ಎಂದೇ ಭಾವಿಸಿದ್ದರು. ಇದೇ ಕಾರಣಕ್ಕೆ ಯುರೋಪನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುವುದು ಅಮೆರಿಕದ ಧೋರಣೆಯಾಗಿತ್ತು. ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ (ನ್ಯಾಟೊ) ಬಗೆಗಿನ ಬದ್ಧತೆಗೆ ಇದೇ ಮುಖ್ಯ ಕಾರಣ. ಆದರೆ, ಈಗ ಅಮೆರಿಕದ ಧೋರಣೆ ಬದಲಾಗಿದೆ.

ಈ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೇ ಸುಳಿವು ನೀಡಿದ್ದಾರೆ. ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಅವರ ಅಮೆರಿಕದ ಮೊದಲ ಭೇಟಿ ಸಂದರ್ಭದಲ್ಲಿ, ಟ್ರಂಪ್‌ ಅವರು ಮರ್ಕೆಲ್‌ ಎದುರು ಒಂದು ಪ್ರಸ್ತಾಪ ಮುಂದಿಟ್ಟಿದ್ದಾರೆ. ತನ್ನ ರಕ್ಷಣೆಗೆ ನ್ಯಾಟೊ ಮಾಡುತ್ತಿರುವ ಲಕ್ಷಾಂತರ ಡಾಲರ್‌ ವೆಚ್ಚವನ್ನು ಜರ್ಮನಿ ಪಾವತಿಸಬೇಕು ಎಂದು ಟ್ರಂಪ್‌ ಹೇಳಿದ್ದಾರೆ. ನ್ಯಾಟೊದ ರಕ್ಷಣಾ ವೆಚ್ಚವನ್ನು ಜರ್ಮನಿ ಹಂಚಿಕೊಳ್ಳಬೇಕು ಎನ್ನುವುದು ಅಮೆರಿಕದ ಹೊಸ ಧೋರಣೆಯಾಗಿದೆ.

ಇಲ್ಲಿಯವರೆಗೆ, ಅಮೆರಿಕವು ತಾನು ಒದಗಿಸಿದ ರಕ್ಷಣೆಗೆ ಪ್ರತಿಯಾಗಿ ತನಗೆ ಹಣ ನೀಡಬೇಕು ಎಂದು ಯುರೋಪ್‌ನ ಮಿತ್ರ ರಾಷ್ಟ್ರಗಳ ಮುಂದೆ ಬೇಡಿಕೆ ಮಂಡಿಸುತ್ತಿತ್ತು. ಅಮೆರಿಕದ ಚಿಂತಕರ ಚಾವಡಿ ಮತ್ತು ರಿಪಬ್ಲಿಕನ್‌ ಪ್ರಭಾವಿ ರಾಜಕಾರಣಿಗಳ ನಿಲುವನ್ನು ಟ್ರಂಪ್‌ ನಿರ್ಲಕ್ಷಿಸುತ್ತಿದ್ದಾರೆ. ಅವರದ್ದು ಹಳೆಯ ಚಿಂತನೆ ಎಂದು ಮೂಲೆಗುಂಪು ಮಾಡಿದ್ದಾರೆ.

ಇಂತಹದ್ದೇ ಬದಲಾವಣೆಯನ್ನು ನಾವು ಭಾರತದಲ್ಲಿಯೂ ಕಾಣಬಹುದು. ಕೇಂದ್ರ ಸರ್ಕಾರದ ಆಂತರಿಕ ಮತ್ತು  ವಿದೇಶಾಂಗ ನೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿದೆ. ಅಮೆರಿಕದ ಜತೆ ಪ್ರಭಾವಿ ಬಾಂಧವ್ಯ ಹೊಂದುವಂತಹ ವಿದೇಶಾಂಗ ಇಲಾಖೆಯ ಎಚ್ಚರಿಕೆ ನಡೆಯಂತಹ ಹಳೆ ನೀತಿಯನ್ನು ನರೇಂದ್ರ ಮೋದಿ ಅವರೂ ಕ್ರಮೇಣ ಕೈಬಿಡುತ್ತಿದ್ದಾರೆ.

ಚೀನಾ ಕುರಿತು ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್‌ ಅವರು ಅನುಸರಿಸಿಕೊಂಡು ಬಂದಿದ್ದ ನಿಲುವನ್ನು ಮೋದಿ ಈಗ ಕೈಬಿಟ್ಟಿದ್ದಾರೆ. ಚೀನಾದ ಜತೆ ಸಂಘರ್ಷದ ಹಾದಿ ತುಳಿಯುತ್ತಿದ್ದಾರೆ. ಕೇಂದ್ರ ಸರ್ಕಾರದ ನೀತಿ ನಿರೂಪಣೆ ಮೇಲೆ ಪ್ರಭಾವ ಬೀರುತ್ತಿದ್ದ ‘ಭಾವಿ ಗಣ್ಯರ ಮಾಫಿಯಾ’ದ ಮಾತು ಕೇಳಲೇಬೇಕೆಂಬ ನಿಲುವನ್ನೂ ಮೋದಿ ಕೈಬಿಡುತ್ತಿದ್ದಾರೆ.

ಹಳೆಯ ಧೋರಣೆಯನ್ನು ಕೈಬಿಡುವ ಬಗೆಗಷ್ಟೇ ಮೋದಿ ಆಲೋಚಿಸುತ್ತಿಲ್ಲ.  ಅವರೀಗ ತಮ್ಮದೇ ಆದ ಹೊಸ ಧೋರಣೆ ಅನುಸರಿಸಲು ಮತ್ತು ಸೈದ್ಧಾಂತಿಕ ವರ್ಚಸ್ಸು ಬೆಳೆಸಿಕೊಳ್ಳಲೂ ಮುಂದಾಗಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಇದೆಲ್ಲ ಸಹಜವಾದದ್ದು. ಇದೇ ಕಾರಣಕ್ಕೆ ನಾವು ಇನ್ನೊಂದು ಮಹತ್ವದ ಕ್ಷೇತ್ರವಾಗಿರುವ ಪಾಕಿಸ್ತಾನದ ಜತೆಗಿನ ಬಾಂಧವ್ಯದಲ್ಲಿ ಬದಲಾವಣೆ ನಿರೀಕ್ಷಿಸಿದ್ದೇವೆ.

ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆ ಅವರು ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯದ ಬಗ್ಗೆ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ‘ಎರಡೂ ದೇಶಗಳ ಮಧ್ಯೆ ಇರುವ ದ್ವೇಷ ಭಾವನೆಯು ನಿರಂತರವಾಗಿ ಮುಂದುವರೆಯುತ್ತಿರುವುದು ಅಮೆರಿಕೆಗೆ ಕಳವಳ ಉಂಟು ಮಾಡಿದೆ. ಪರಿಸ್ಥಿತಿ ಕೈಮೀರಿ ಹೋಗುವುದನ್ನು ಅಮೆರಿಕವು ಸುಮ್ಮನೆ ನೋಡುತ್ತ ಕುಳಿತುಕೊಳ್ಳಲಾರದು. ಎರಡೂ ನೆರೆಹೊರೆ ದೇಶಗಳ ನಡುವಣ ಬಿಕ್ಕಟ್ಟು ಬಗೆಹರಿಸುವ ಸಂಧಾನ ನಡೆಸಲು ಅಮೆರಿಕ ಸಿದ್ಧ ಇದೆ’ ಎಂದು ಅವರು ಹೇಳಿದ್ದಾರೆ.

ನಿರೀಕ್ಷೆಯಂತೆ, ಅಮೆರಿಕದ ಈ ಹೇಳಿಕೆಗೆ ಭಾರತದಲ್ಲಿ ತಕ್ಷಣ ತೀವ್ರ ಆಕ್ಷೇಪ ವ್ಯಕ್ತವಾಯಿತು. ವಿದೇಶಾಂಗ ವ್ಯವಹಾರ ಸಚಿವಾಲಯ ಮತ್ತು ಮಾಧ್ಯಮಗಳ ವಿಶ್ಲೇಷಕರು ಈ ಹೇಳಿಕೆಯನ್ನು ಖಂಡಿಸಿದರು. ಅವೇ ಹಳೆಯ ಮಾತುಗಳನ್ನು ಪುನರುಚ್ಚರಿಸಲಾಯಿತು.

‘ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಇರುವ ವಿವಾದಗಳನ್ನೆಲ್ಲ ದ್ವಿಪಕ್ಷೀಯವಾಗಿ ಮಾತ್ರ ಬಗೆಹರಿಸಲಾಗುವುದು. ಈ ವಿವಾದದಲ್ಲಿ ಮಧ್ಯ ಪ್ರವೇಶಿಸಲು ಮೂರನೇ ದೇಶಕ್ಕೆ ಅವಕಾಶವೇ ಇಲ್ಲ’  ಎಂದು ಸ್ಪಷ್ಟಪಡಿಸಲಾಯಿತು.

ಒಂದು ವೇಳೆ ನೀವು ಮೋದಿ ಅವರನ್ನು ಬೆಂಬಲಿಸಿ ವೋಟು ಚಲಾಯಿಸಿದ್ದರೆ ಅಥವಾ ಇನ್ನಷ್ಟು ಹೆಚ್ಚು ಸ್ಪಷ್ಟವಾಗಿ ಹೇಳುವುದಾದರೆ, ಗಮನಾರ್ಹ ಪ್ರಮಾಣದಲ್ಲಿ ಹೆಚ್ಚುತ್ತಿರುವ ಮೋದಿ ಅಭಿಮಾನಿ ಬಳಗದ ಪ್ರಭಾವಿ ಮಾಧ್ಯಮ ವಿಶ್ಲೇಷಕರ ತಂಡದಲ್ಲಿ ಒಬ್ಬರಾಗಿದ್ದರೆ, ನಿಮ್ಮಿಂದ ಅನಿರೀಕ್ಷಿತವಾದ ಹೊಸ ಹೇಳಿಕೆ ನಿರೀಕ್ಷಿಸಲು ಸಾಧ್ಯವೇ ಇಲ್ಲ.

ಶಿಮ್ಲಾ ಒಪ್ಪಂದದ ನಂತರ, ಪ್ರಮುಖ ವಿದೇಶಾಂಗ ನೀತಿ ಬಗ್ಗೆ ಪ್ರತಿಯೊಬ್ಬ ರಾಜಕೀಯ ಮುಖಂಡ ಮತ್ತು ರಾಜತಾಂತ್ರಿಕರು ಒಂದೇ ಒಂದು ಸಾಲನ್ನು ಪುನರಾವರ್ತಿಸುತ್ತ ಬಂದಿದ್ದಾರೆ. ಪ್ರಭಾವಿ ಮಾಧ್ಯಮ ವಿಶ್ಲೇಷಕರು, ಮೋದಿ ಸರ್ಕಾರದ ಪ್ರಮುಖರು, ಈ ರಾಷ್ಟ್ರೀಯ ಮಹತ್ವದ ವಿಷಯದಲ್ಲಿ  ಹಳೆಯ ಧೋರಣೆಯನ್ನೇ ಅನುಸರಿಸುವುದರ ಬಗ್ಗೆ ಹೆಚ್ಚು ನಂಬಿಕೆ ಹೊಂದಿರುವುದರಲ್ಲಿ ಆಶ್ಚರ್ಯಪಡುವುದಾಗಲಿ, ನಿರಾಶೆಗೆ ಒಳಗಾಗುವುದಾಗಲಿ ಏನೂ ಇಲ್ಲ. 

ಇಂತಹ ಧೋರಣೆ ಬದಲಾಗಲು, ಯಥಾಸ್ಥಿತಿ ವಾದ ಬದಲಿಸಲು, ಸ್ಥಾಪಿತ ಚಿಂತನಾ ಕ್ರಮ ಬದಲಿಸಲು ಮತ್ತು ಬೇಸರ ಮೂಡಿಸುವ ಹಳೆಯ ರಾಜಕೀಯ  ನಿಲುವು ಬದಲಾಗಲಿ ಎಂದೇ ಮತದಾರರು ವೋಟು ನೀಡಿದ್ದರೂ ಅದು ಸರಿಯಾದ ಅರ್ಥದಲ್ಲಿ ಕಾರ್ಯಗತಗೊಳ್ಳುತ್ತಿಲ್ಲ.

2017ರಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಹೊಂದಿರಬಹುದಾದ ಸ್ಥಾನಮಾನದ ಕುರಿತು ಚರ್ಚಿಸಲು ಇದು ಈಗ ಸೂಕ್ತ ಸಮಯವಾಗಿದೆ. ಆರ್ಥಿಕ ಸುಧಾರಣಾ ಕ್ರಮಗಳ ಫಲವಾದ ಬೆಳವಣಿಗೆ, ಆದಾಯ ಹೆಚ್ಚಳ, ರಾಜಕೀಯ ಸ್ಥಿರತೆ, ಪೂರಕವಾದ ಸೇನಾ ಬಲವು ಪಾಕಿಸ್ತಾನ ಅಥವಾ ಕಾಶ್ಮೀರದ ಬಗ್ಗೆ ನಮ್ಮ ಮೂಲಭೂತ ಧೋರಣೆ ಬದಲಾಗುವುದನ್ನು ಸಮರ್ಥಿಸಲಾರವು.

ಪಾಕಿಸ್ತಾನದ ಜತೆಗೆ ಉದ್ದಕ್ಕೂ ದ್ವಿಪಕ್ಷೀಯ ಬಾಂಧವ್ಯ ನೀತಿಯನ್ನೇ ಅನುಸರಿಸುತ್ತಿರುವುದು ಸದ್ಯಕ್ಕೆ ಅರ್ಥ ಕಳೆದುಕೊಂಡಿರುವಂತೆ ಭಾಸವಾಗುವುದಿಲ್ಲವೆ? ರಾಷ್ಟ್ರೀಯ ಆತ್ಮವಿಶ್ವಾಸ ಅಥವಾ ಅಭದ್ರತೆ ಕಾರಣಕ್ಕೆ ಇಂತಹ ಧೋರಣೆ ಅನುಸರಿಸಿಕೊಂಡು ಬರಲಾಗುತ್ತಿದೆಯೇ? ಮೂರನೆಯವರ ಮಧ್ಯಸ್ಥಿಕೆ ಸೂತ್ರವು ಭಾರತಕ್ಕೆ ಅಪಥ್ಯವಾಗಿರುವುದು ಏಕೆ? ಕಾಶ್ಮೀರದಲ್ಲಿ ಜನಮತಗಣನೆ ನಡೆಯಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು 1948ರಲ್ಲಿ ಕೈಗೊಂಡ ನಿರ್ಧಾರವನ್ನು ಕಾರ್ಯಗತಗೊಳಿಸದಿರುವುದು ಇದಕ್ಕೆ ಕಾರಣವೇ?– ಇಂತಹ ಪ್ರಶ್ನೆಗಳು ಈಗ ಎದುರಾಗುತ್ತಿವೆ.

ಅಂದಿನ ಸೋವಿಯತ್‌ ಒಕ್ಕೂಟವು 1966ರಲ್ಲಿ ತಾಷ್ಕೆಂಟ್‌ನಲ್ಲಿ ಕಾಶ್ಮೀರ ಸಮಸ್ಯೆ ಬಗೆಹರಿಸಲು ಮುಂದಾದ ಬಗೆಯಲ್ಲಿ ನೋಡುವುದಾದರೆ, ಯಾವುದೇ ಬಲಿಷ್ಠ ದೇಶ ಮಧ್ಯಸ್ಥಿಕೆ ವಹಿಸಲು ಮುಂದೆ ಬಂದರೆ ಅದರಿಂದ ಭಾರತದ ಹಿತಾಸಕ್ತಿಗೆ ಧಕ್ಕೆ ಒದಗಲಿದೆಯೇ ಎನ್ನುವ ಪ್ರಶ್ನೆಗಳೆಲ್ಲ ಅನೇಕರನ್ನು ಕಾಡುತ್ತಿವೆ. ಅಧಿಕಾರದ ಉತ್ತುಂಗದಲ್ಲಿ ಇರುವ ಮೋದಿ ಅವರು ಇಂತಹ ಜಡ್ಡುಗಟ್ಟಿರುವ ಮನೋಭಾವವನ್ನು ಬದಲಿಸಬೇಕಾಗಿದೆ.

44 ವರ್ಷಗಳಿಂದ ಚರ್ಚೆಗೆ ಒಳಪಡದ ಧೋರಣೆಯನ್ನು ಈಗ ಬಹಿರಂಗವಾಗಿ ಚರ್ಚಿಸಲು ಅವಕಾಶ ಮಾಡಿಕೊಡಬೇಕಿತ್ತು.  ಕಾಲ ಬದಲಾದಂತೆ, ವಿವಾದಗಳ ಸ್ವರೂಪವೂ ಬದಲಾಗುತ್ತದೆ. ಸಾಂಪ್ರದಾಯಿಕ  ಸಂಧಾನ ಪ್ರಕ್ರಿಯೆಯನ್ನೂ ಬದಲಾಯಿಸಬೇಕಾದ ಅಗತ್ಯ ಇದೆ.

ಭಾರತದ ದೃಷ್ಟಿಕೋನದಿಂದ ನೋಡುವುದಾದರೆ, ಶಿಮ್ಲಾ ಒಪ್ಪಂದದ ಪ್ರಕಾರ  ಕಾಶ್ಮೀರ ವಿವಾದವು ಸಂಪೂರ್ಣವಾಗಿ ದ್ವಿಪಕ್ಷೀಯ ವಿಷಯವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಗೊತ್ತುವಳಿಯು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿದೆ. ಶಿಮ್ಲಾ ಒಪ್ಪಂದ ತುಂಬ ಹಳೆಯದಾಯಿತು.

1989ರಿಂದ ಈಚೆಗೆ ನೋಡಿದರೂ, ಕಾಶ್ಮೀರದಲ್ಲಿ ಹೊಸದಾಗಿ ಸಮಸ್ಯೆ ಉಲ್ಬಣಗೊಂಡ ನಂತರ, ಭಾರತ, ಪಾಕಿಸ್ತಾನದ ಬಾಂಧವ್ಯವು ಗಮನಾರ್ಹ ಬದಲಾವಣೆ ಕಂಡಿದೆ. ಪಾಕಿಸ್ತಾನವು ಈಗಲೂ ತಲಾ ಆದಾಯದ ಲೆಕ್ಕದಲ್ಲಿ ಭಾರತಕ್ಕಿಂತ ಹೆಚ್ಚು ಶ್ರೀಮಂತ ಆರ್ಥಿಕತೆಯಾಗಿದೆ. ಉಭಯ ದೇಶಗಳ ನಡುವಣ ಸಮೀಕರಣ ಈಗ ವ್ಯಾಪಕ ಸ್ವರೂಪದಲ್ಲಿ ಬದಲಾಗಿದೆ. 

ಸೋವಿಯತ್ ಒಕ್ಕೂಟವು 1979ರಲ್ಲಿ ಆಫ್ಘಾನಿಸ್ತಾನವನ್ನು ಅತಿಕ್ರಮಿಸಿಕೊಂಡ ನಂತರ, ಪಾಕಿಸ್ತಾನವು ಪಶ್ಚಿಮದ ದೇಶಗಳ ಪ್ರಮುಖ ಮಿತ್ರ ಪಕ್ಷವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಆ ಸ್ಥಾನಮಾನವು ಕ್ರಮೇಣ ಕುಸಿಯತೊಡಗಿತ್ತು. ಅಮೆರಿಕದ ಮೇಲಿನ 9/11 ದಾಳಿಯ ನಂತರ ಮತ್ತು ಆಫ್ಘಾನಿಸ್ತಾನದಲ್ಲಿನ ಎರಡನೇ ಯುದ್ಧದ ನಂತರ ಪಾಕಿಸ್ತಾನಕ್ಕೆ ಮತ್ತೆ ಮಹತ್ವ ದೊರೆಯುತ್ತಿದೆ.

ಮಧ್ಯಸ್ಥಿಕೆದಾರನ ಪಾತ್ರ ನಿರ್ವಹಿಸುವ ಭಾರತದ ವರ್ಚಸ್ಸು ಈಗ ಜಾಗತಿಕವಾಗಿ ಏರುಗತಿಯಲ್ಲಿ ಇದೆ. ಇನ್ನೊಂದೆಡೆ, ಆರ್ಥಿಕ ದೈತ್ಯಶಕ್ತಿಯಾಗಿ ಬೆಳೆಯುತ್ತಿದೆ. ದೇಶದ ಸೇನಾ ಸಾಮರ್ಥ್ಯವು ದಿನೇ ದಿನೇ ಹೆಚ್ಚುತ್ತಿದೆ.  ಇಂದಿರಾ ಗಾಂಧಿ ಅವರ ಸರ್ಕಾರದ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಕಾರಣದ ಸ್ಥಿರತೆಯು ಉತ್ತುಂಗ ಮಟ್ಟದಲ್ಲಿ ಇರುವುದನ್ನು ಮೋದಿ ಸರ್ಕಾರದ ಬೆಂಬಲಿಗರು ಮತ್ತು ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ.

ಇದು ಭಾರತದ ಹಳೆಯ ಅಭದ್ರತೆಯ ಭಾವನೆ ದೂರ ಮಾಡಲು ಮತ್ತು 2014ರ ನಂತರ ಕಾಶ್ಮೀರ ಮತ್ತು ಪಾಕಿಸ್ತಾನದ ಬಗ್ಗೆ ಹೊಸ ಧೋರಣೆ ತಳೆಯಲು ಹೊಸ ಆತ್ಮವಿಶ್ವಾಸ ತುಂಬುತ್ತಿದೆ. ಇಂತಹ ಸಂದರ್ಭದಲ್ಲಿ ದ್ವಿಪಕ್ಷೀಯ ಧೋರಣೆ (ಅನ್ಯರ ನೆರವಿಲ್ಲದೆ ಉಭಯ ದೇಶಗಳು ಸಮಸ್ಯೆ ಬಗೆಹರಿಸಿಕೊಳ್ಳುವುದು) ಮಹತ್ವ ಕಳೆದುಕೊಳ್ಳಲಿದೆ.

ಸದ್ಯಕ್ಕೆ ಭಾರತ ಮತ್ತು ಪಾಕಿಸ್ತಾನ ಯಾವುದೇ ವಿಷಯದಲ್ಲಿ ಸಮಾನವಾಗಿಲ್ಲ. ಕ್ರಿಕೆಟ್‌, ಹಾಕಿ ಮತ್ತು ಸೂಫಿ ಸಂಗೀತದ ವಿಷಯದಲ್ಲಿಯೂ ಎರಡೂ ಬೇರೆ ಬೇರೆ  ಸಾಮರ್ಥ್ಯ ಹೊಂದಿವೆ. ದ್ವಿಪಕ್ಷೀಯ ಬಾಂಧವ್ಯ ಕಾರ್ಯಗತಗೊಳ್ಳಬೇಕೆಂದರೆ, ಸಂಧಾನಕ್ಕೆ ಕುಳಿತ ಎರಡು ಬಣಗಳ ಮಧ್ಯೆ ಸಮಾನತೆ ಇರಬೇಕು. ಅಂತಹ ಸಾಧ್ಯತೆಯೇ ಇಲ್ಲದಿರುವುವಾಗ ಭಾರತ ಆ ಬಗ್ಗೆ ದೂರುವುದು ಏಕೆ? ಅಥವಾ ಈ ಪರಿಸ್ಥಿತಿಯನ್ನು ಅದು ತನ್ನ ಅನುಕೂಲಕ್ಕೆ ಸಹ ಬಳಸಿಕೊಳ್ಳುತ್ತಿಲ್ಲ.

ಈ ಅಸಮಾನತೆಗೆ ಇನ್ನೂ ಒಂದು ಪ್ರಮುಖ ಕಾರಣ ಸೇರಿಸಬಹುದು. ದ್ವಿಪಕ್ಷೀಯ  ಮಾತುಕತೆಯು ಸಂವಿಧಾನಬದ್ಧ ದೇಶಗಳ ಮಧ್ಯೆ ಯಶಸ್ಸು ಕಾಣುತ್ತದೆ. ಮುಷರಫ್‌ ಅವರ ನಂತರ ಪಾಕಿಸ್ತಾನದ ಪ್ರಜಾಪ್ರಭುತ್ವವು ದೀರ್ಘ ಹಾದಿ ಕ್ರಮಿಸಿದೆ. ಆದರೆ, ನೀತಿ ನಿರೂಪಣೆ ವಿಷಯದಲ್ಲಿ ಪ್ರಜಾಪ್ರಭುತ್ವವು ಇನ್ನೂ ಸಂಪೂರ್ಣ ನಿಯಂತ್ರಣ ಸಾಧಿಸಿಲ್ಲ. ಪಾಕಿಸ್ತಾನದಲ್ಲಿ ಯಾರ ಜತೆ ಒಪ್ಪಂದಕ್ಕೆ ಸಹಿ ಹಾಕಬೇಕು ಎನ್ನುವುದೂ ಖಚಿತಪಡುವುದಿಲ್ಲ.

ಹಿಂದೆ ಅಧಿಕಾರದಲ್ಲಿ ಇದ್ದವರ ಹತ್ಯೆ ಮಾಡುವುದು, ಸೆರೆಮನೆ ವಾಸಕ್ಕೆ ತಳ್ಳುವುದು ಅಥವಾ ದೇಶದಿಂದ ಹೊರ ಹಾಕುವುದು ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನಕ್ಕೆ ತಿದ್ದುಪಡಿ ತರುವವರ ಮೇಲೆ ಯಾವ ಭರವಸೆ ಮೇಲೆ ವಿಶ್ವಾಸ ಇರಿಸಬೇಕು?

ಇಂತಹವರು ಅಂತರರಾಷ್ಟ್ರೀಯ ವಾಗ್ದಾನ ಈಡೇರಿಸುವರು ಎನ್ನುವುದಕ್ಕೆ ಯಾವುದೇ ಖಾತರಿಯೂ ಇರುವುದಿಲ್ಲ. ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ಅಧಿಕಾರಕ್ಕೆ ಬಂದರೆ, ನವಾಜ್‌ ಷರೀಫ್‌ ಅವರ ಬದ್ಧತೆಯನ್ನು ಅವರು ಮುಂದುವರಿಸುವರು ಎಂದು ಯಾರಾದರೂ ನಿರೀಕ್ಷಿಸಬಹುದೇ?

ಇಂತಹ ಅನುಮಾನಗಳ ಕಾರಣಕ್ಕೇ ಪಾಕಿಸ್ತಾನವು ಶಿಮ್ಲಾ, ಲಾಹೋರ್‌ ಮತ್ತು ಇಸ್ಲಾಮಾಬಾದ್‌ ಘೋಷಣೆಗಳನ್ನು ತಿರಸ್ಕರಿಸುತ್ತ ಬಂದಿದೆ. ಅದೇ ಧೋರಣೆ ಮುಂದುವರೆಸಲಿದೆ. ಎರಡೂ ದೇಶಗಳ ನಡುವಣ ವಿವಾದಗಳನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ವಿಫಲವಾಗಿರುವುದೇ ಇದಕ್ಕೆ ಬಲವಾದ ಸಾಕ್ಷ್ಯವಾಗಿದೆ.

ಅಂತರರಾಷ್ಟ್ರೀಯ ಸಮುದಾಯ ಅಥವಾ ಬಲಿಷ್ಠ ದೇಶಗಳ ಖಾತರಿ ಇಲ್ಲದೇ ಭವಿಷ್ಯದಲ್ಲಿ ಪಾಕಿಸ್ತಾನದ ಜತೆಗಿನ ಯಾವುದೇ ವಿವಾದ ಬಗೆಹರಿಸಿಕೊಳ್ಳಲು ಸಾಧ್ಯವಾಗಲಾರದು. ಶೀತಲ ಸಮರದ ಛಾಯೆಯಿಂದ ಹೊರಬಂದು ಮೂರನೇ ಶಕ್ತಿಯ ನೆರವಿನಿಂದ ಎರಡೂ ದೇಶಗಳು ತಮ್ಮ ವಿವಾದ ಬಗೆಹರಿಸಿಕೊಳ್ಳಬೇಕಾಗಿದೆ.  ಮೋದಿ ಅಧಿಕಾರಾವಧಿಯಲ್ಲಿ ಈ ಬಗ್ಗೆ ಹೊಸ ಚಿಂತನೆ, ಚರ್ಚೆ ನಡೆಯುವಂತಾಗಲಿ.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT