ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಪ್ರತಿರೋಧದ ಹೊಸ ಮುಖ

Last Updated 1 ಮೇ 2017, 19:30 IST
ಅಕ್ಷರ ಗಾತ್ರ
ಕಾಶ್ಮೀರದಲ್ಲಿ ಟುಲಿಪ್ ಹೂಗಳು ಅರಳುವ ಸಮಯ ಇದು. ವಸಂತ ಕಾಲದ ಈ ರಂಗಿನ ನೋಟ ಕಣ್ತುಂಬುವ ಬದಲು ಕಲ್ಲುಗಳ ತೂರಾಟದ ಕಥನ ರಾಷ್ಟ್ರದ ಗಮನ ಸೆಳೆಯುತ್ತಿದೆ. ಅದೂ ಹದಿಹರೆಯದ  ಹೆಣ್ಣುಮಕ್ಕಳು  ಭದ್ರತಾಪಡೆಗಳತ್ತ ಕಲ್ಲು ಬೀಸುತ್ತಿರುವ ಛಾಯಾಚಿತ್ರಗಳು  ಹಾಗೂ ವಿಡಿಯೊ ದೃಶ್ಯಾವಳಿ, ಕಾಶ್ಮೀರದಲ್ಲಿನ ಪ್ರತಿರೋಧದ ಹೊಸ ಮುಖವನ್ನು ಅನಾವರಣಗೊಳಿಸಿದೆ. 
 
ಕಳೆದ ವರ್ಷವೂ ಅತ್ಯಂತ ಕೆಟ್ಟ ದಿನಗಳನ್ನು ಕಂಡಿತ್ತು ಕಾಶ್ಮೀರ. ಕಳೆದ ಜುಲೈನಲ್ಲಿ ಹಿಜ್‌ಬುಲ್ ಮುಜಾಹಿದ್ದೀನ್ ನಾಯಕ ಬುರ್ಹನ್ ವಾನಿ ಹತ್ಯೆಯಾದ ನಂತರ ಹಿಂಸಾತ್ಮಕವಾದ ಬೀದಿ ಪ್ರತಿಭಟನೆಗಳಲ್ಲಿ  90ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದರು.  ಅನೇಕ ಮಕ್ಕಳು ಸೇರಿದಂತೆ ನೂರಾರು ಜನ, ಸರ್ಕಾರಿ ಪಡೆಗಳ ಪೆಲೆಟ್ ಬಂದೂಕು ದಾಳಿಗಳಿಂದಾಗಿ ಕಣ್ಣು ಕಳೆದುಕೊಂಡಿದ್ದು ಜಗತ್ತಿನಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. 
 
ಬೀದಿಯಲ್ಲಿ  ಪ್ರತಿಭಟನೆ ನಡೆಸುತ್ತಿದ್ದ ಗುಂಪು ಚದುರಿಸಲು ಭದ್ರತಾ ಪಡೆಗಳು ಪೆಲೆಟ್ ಬಂದೂಕು ಬಳಸಿದ ಪರಿಣಾಮವಾಗಿ ಮನೆಯೊಳಗೆ ಓದುತ್ತಾ ಕುಳಿತಿದ್ದ  14 ವರ್ಷದ  ಇನ್ಷಾ  ಮಲಿಕ್  ತನ್ನೆರಡು ಕಣ್ಣುಗಳನ್ನೂ ಕಳೆದುಕೊಳ್ಳಬೇಕಾಯಿತು. ಹೀಗಾಗಿ 2016ರಲ್ಲಿ ಕಾಶ್ಮೀರದ ದುರಂತದ ಸಂಕೇತವಾದಳು ಇನ್ಷಾ.  

ಈಗ ಈ ವರ್ಷದ ವಸಂತಕಾಲದಲ್ಲಿ ಕುಡಿಯೊಡೆದಿರುವ ಹೊಸ ಹಿಂಸಾಚಾರಗಳ ಸಂದರ್ಭದಲ್ಲಿ ಸೇನೆ ಹಾಗೂ ಪೊಲೀಸರ ಮೇಲೆ ಕಲ್ಲುಗಳನ್ನೆಸೆಯುತ್ತಿರುವ ಹೆಣ್ಣುಮಕ್ಕಳ ಆಕ್ರೋಶ, ಪ್ರತಿಭಟನೆಯ ಹೊಸ ಮುಖವನ್ನು ಅನಾವರಣಗೊಳಿಸಿದೆ. ಹೆಣ್ಣುಮಕ್ಕಳು ಬೀದಿಗಳಲ್ಲಿ ಕಲ್ಲೆಸೆಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚಾಗಿ ಪ್ರಸಾರವಾಗುತ್ತಿವೆ. ಸಶಸ್ತ್ರ ಪೊಲೀಸ್ ವಾಹನಕ್ಕೆ ಹೆಣ್ಣುಮಗಳೊಬ್ಬಳು ಒದೆಯುತ್ತಿರುವ ದೃಶ್ಯವಂತೂ ಹೆಚ್ಚು ಗಮನ ಸೆಳೆದುಕೊಂಡಿದೆ.  ಆಕೆಯ ದೇಹಭಾಷೆ ಆಕೆಯ ಆಕ್ರೋಶವನ್ನು ಗಟ್ಟಿಯಾಗಿ ಪ್ರತಿನಿಧಿಸುತ್ತದೆ.  
 
‘ಯಾಕಾಗಿ ನಾವು ಹೆದರಬೇಕು?  ಈಗಾಗಲೇ ಕಾಶ್ಮೀರದಲ್ಲಾಗಿರುವುದಕ್ಕಿಂತ ಇನ್ನೂ ಕೆಟ್ಟದು ಸಂಭವಿಸುವುದು ಸಾಧ್ಯವಿಲ್ಲ. ಸತ್ತ ಹಾಗೂ ಛಿದ್ರವಾದ ದೇಹಗಳನ್ನು ನೋಡಿದ್ದೇವೆ. ಪೆಲೆಟ್‌ನಿಂದ ನಮ್ಮ ಸೋದರ ಸೋದರಿಯರ ಮುಖಗಳು ಕುರೂಪವಾಗಿರುವುದನ್ನು ಕಂಡಿದ್ದೇವೆ.  ಅಬ್ಬಬ್ಬಾ ಎಂದರೆ ನಾವೂ ಸಹ ಸಾಯಬಹುದು’  ಎಂಬುದು ವಿದ್ಯಾರ್ಥಿನಿಯೊಬ್ಬಳ  ಹತಾಶೆ, ಆಕ್ರೋಶದ ಮಾತು. 
 
ಕಲ್ಲೆಸೆಯುವುದನ್ನೇ ಅಸ್ತ್ರವಾಗಿ ಮಾಡಿಕೊಳ್ಳುವಂತಹ ಇಂತಹ ಪ್ರತಿಭಟನೆಗಳಿಗೆ ಪ್ರೇರಣೆ ಒದಗಿಸಿದ್ದು ಇಸ್ರೇಲ್ ಆಕ್ರಮಣದ ವಿರುದ್ಧ ಪ್ಯಾಲೆಸ್ಟೀನ್‌ನ ‘ಇಂಟಿಫಾಡಾ’ (ಬಂಡಾಯ) ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ತಮ್ಮ  ಅಸಮಾಧಾನ  ಹೊರಹಾಕಲು ಪ್ಯಾಲೆಸ್ಟೀನ್  ಜನರು ಭದ್ರತಾಪಡೆಗಳ ಮೇಲೆ ಕಲ್ಲೆಸೆತವನ್ನು ಕಾರ್ಯತಂತ್ರವಾಗಿ ವ್ಯಾಪಕವಾಗಿ ಬಳಸಿದ್ದರು.

2010ರಿಂದ ಕಾಶ್ಮೀರದಲ್ಲೂ  ಇದೇ ಕಾರ್ಯತಂತ್ರವನ್ನು ವ್ಯವಸ್ಥಿತವಾಗಿ, ವ್ಯಾಪಕವಾಗಿ ಸೇನೆ ಹಾಗೂ ಪೊಲೀಸರ ವಿರುದ್ಧ  ಪ್ರತಿಭಟನಾಕಾರರು ಬಳಸಲು ಆರಂಭ ಮಾಡಿದ್ದು ಈಗ ಇತಿಹಾಸ. ಚೀಲಗಟ್ಟಲೆ ಕಲ್ಲುಗಳನ್ನು ಸರಬರಾಜು ಮಾಡುವ ವ್ಯವಸ್ಥೆಯೂ ಆರಂಭವಾಯಿತು ಎಂಬಂತಹ ಮಾಹಿತಿಯನ್ನು  ಸೀಮಾ ಶೆಖಾವತ್ ಅವರು ತಮ್ಮ  ‘ಜೆಂಡರ್ , ಕಾನ್‌ಫ್ಲಿಕ್ಟ್ ಅಂಡ್ ಪೀಸ್ ಇನ್ ಕಾಶ್ಮೀರ್’ ಪುಸ್ತಕದಲ್ಲಿ ದಾಖಲಿಸಿದ್ದಾರೆ.

2010ರ ಪ್ರತಿಭಟನೆ, ಹಿಂಸಾಚಾರಗಳಲ್ಲಿ ಯುವಜನರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುವಜನರಿಗೆ ಹಣವನ್ನೂ ನೀಡಲಾಗುತ್ತಿತ್ತು ಎಂಬುದೂ  ಯುವಜನರೊಡನೆ ನಡೆಸಿದ ಮಾತುಕತೆಗಳಲ್ಲಿ ವ್ಯಕ್ತವಾಗಿದ್ದುದನ್ನೂ  ಅವರು ಬರೆದಿದ್ದಾರೆ.  ಆದರೆ ‘2010ರ ಹಿಂಸಾಚಾರಗಳು ಪಾಕಿಸ್ತಾನ ಪ್ರಾಯೋಜಿತ’ ಎಂಬಂಥ ಭಾರತ ಸರ್ಕಾರದ ವಾದವನ್ನು ಒಪ್ಪಿದರೂ, ಎದೆಯಾಳದ ಅಸಮಾಧಾನ ಹೊರಹಾಕುವುದೂ ಈ ಯುವಜನರಿಗೆ ಆಗ ಮುಖ್ಯವಾಗಿತ್ತು ಎಂಬುದೂ ಈ ಯುವಜನರ ಮಾತುಗಳಲ್ಲಿ ವ್ಯಕ್ತವಾಗಿದ್ದವು.
 
ಹೀಗಾಗಿಯೇ ಆ ಸಂದರ್ಭದ  ಸಾಮೂಹಿಕ ಪ್ರತಿಭಟನೆಗಳು ಕಾಶ್ಮೀರ ಕಣಿವೆಯೊಳಗೆ ತೀವ್ರವಾಗುತ್ತಿದ್ದ ಪರಕೀಯ ಪ್ರಜ್ಞೆಗೆ ಸಂಕೇತವಾಗಿತ್ತು. ಆದರೆ ಈ ಏಳು ವರ್ಷಗಳ ನಂತರ ಪರಿಸ್ಥಿತಿ ಬದಲಾಗಿಲ್ಲ. ಪರಕೀಯ ಪ್ರಜ್ಞೆ ಹಾಗೂ ಪ್ರತಿರೋಧದ ಕಿಚ್ಚು ಯುವಕ, ಯುವತಿಯರಲ್ಲಿ  ದಟ್ಟವಾಗಿದೆ ಎಂಬುದನ್ನು  ಕಲ್ಲೆಸೆತದ ಈ ಹೊಸ ಪ್ರಕರಣಗಳು ಸಾರಿ ಹೇಳುತ್ತಿವೆ. ಅದರಲ್ಲೂ ಕಾಶ್ಮೀರಿ ಹೆಣ್ಣುಮಕ್ಕಳು ಕಲ್ಲಸೆಯುತ್ತಿರುವ ದೃಶ್ಯ ಅಸಾಧಾರಣವಾದದ್ದು. 
 
1989ರಲ್ಲಿ ಸಶಸ್ತ್ರ ಬಂಡಾಯ ಕಾಶ್ಮೀರ ಕಣಿವೆಯಲ್ಲಿ ಶುರುವಾದಾಗಲೇ,  ಪ್ರತಿಭಟನೆ ಹಾಗೂ ಪ್ರದರ್ಶನಗಳ ಭಾಗವಾಗಿಯೇ  ಕಾಶ್ಮೀರಿ ಮಹಿಳೆಯರೂ  ಬೆಳೆದು ಬಂದಿದ್ದಾರೆ. ಪ್ರತ್ಯೇಕತಾವಾದ ಚಳವಳಿ ಪಸರಿಸುವಲ್ಲಿ ಈ ಮಹಿಳೆಯರೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದನ್ನೂ ಗಮನಿಸಬೇಕು. ನೇರವಾಗಿ ಬಂಡುಕೋರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಿದ್ದರೂ ಉಗ್ರ ಚಳವಳಿಯ ಪೋಷಕರಾಗಿ, ಪ್ರತಿಭಟನಾಕಾರರಾಗಿ, ಪ್ರೋತ್ಸಾಹಿಸುವವರಾಗಿ ಅಥವಾ ಅನೇಕ ಅನುಕೂಲ ಕಲ್ಪಿಸಿಕೊಡುವವರಾಗಿ ಈ ಮಹಿಳೆಯರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.  

ಸತ್ತ ಉಗ್ರರ ಅಮ್ಮಂದಿರಾಗಿ ಮನಮಿಡಿಯುವ ಭಾಷಣಗಳನ್ನು ಮಾಡಿ ಆಂದೋಲನಕ್ಕೆ ನೀರೆರಿದಿದ್ದಾರೆ. ಹಾಗೆಯೇ ಸೈನಿಕರಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತರು, ಪತಿ ಕಳೆದುಕೊಂಡ ವಿಧವೆಯರ ಅನುಭವಗಳು ಈ ಸಂಘರ್ಷಮಯ ಹೋರಾಟದ ಮೇಲೆ ಪ್ರಭಾವ ಬೀರಿವೆ.  ‘ಆಜಾದಿ’ಯ ಹೋರಾಟ ‘ಕುಟುಂಬದ ವಿಷಯ’ ಎಂಬಂಥ ಭಾವನಾತ್ಮಕ ಆಯಾಮಗಳೂ ಈ ಸಂಘರ್ಷಕ್ಕೆ ಲಭಿಸಿವೆ.  

ಬಂದೂಕು ಕೈಗೆತ್ತಿಕೊಳ್ಳದಿದ್ದರೂ  ಶಸ್ತ್ರಾಸ್ತ್ರ ಸಾಗಣೆ, ಹಣ ವರ್ಗಾವಣೆ  ಸೇರಿದಂತೆ ಹಲವು ಕೃತ್ಯಗಳ ಮೂಲಕ ಉಗ್ರ ಕಾರ್ಯಾಚರಣೆಗಳಿಗೆ ಗಣನೀಯ ನೆರವು ನೀಡಿದ್ದಾರೆ ಈ ಮಹಿಳೆಯರು.  ಭದ್ರತಾ ಪಡೆಗಳ ಕಣ್ಣುತಪ್ಪಿಸಿ ಉಗ್ರರಿಗೆ ಆಶ್ರಯ, ಬೆಂಬಲಗಳನ್ನೂ ನೀಡಿದ್ದಾರೆ  ಈ ಮಹಿಳೆಯರು.

ವೈಯಕ್ತಿಕ, ಧಾರ್ಮಿಕ, ಸೈದ್ಧಾಂತಿಕ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಾಧ್ಯತೆ ನೆಲೆಗಳಲ್ಲಿ ಸಶಸ್ತ್ರ ಹೋರಾಟಕ್ಕೆ ಬಹು ವಿಧದ ಬೆಂಬಲ ನೀಡಿದವರು ಈ ಮಹಿಳೆಯರು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಕಾಶ್ಮೀರಿ ಮಹಿಳೆಯರ ಈ ಬೆಂಬಲ ಇದ್ದಿರದಿದ್ದಲ್ಲಿ ಈ ಪ್ರತ್ಯೇಕತಾ ಆಂದೋಲನ ಇಷ್ಟೊಂದು  ಅಂತರರಾಷ್ಟ್ರೀಯ ಗಮನ ಸೆಳೆದುಕೊಳ್ಳುವುದೂ ಸಾಧ್ಯವಾಗುತ್ತಿರಲಿಲ್ಲ.
 
ಆದರೆ ಬರಬರುತ್ತಾ ಈ ಸಂಘರ್ಷಮಯ ವಾತಾವರಣದಲ್ಲಿ ದಿನನಿತ್ಯದ ಬದುಕು ದುಸ್ತರವಾಗುತ್ತಾ ಸಾಗಿರುವುದನ್ನು ಈ ಮಹಿಳೆಯರು ಅರಿತುಕೊಂಡಿದ್ದಾರೆ. ಕಾಶ್ಮೀರಿ ವಿಧವೆಯರ ಸಂಖ್ಯೆ 33,000ಕ್ಕಿಂತ ಹೆಚ್ಚಿದೆ. ಕಾಣೆಯಾದ ವ್ಯಕ್ತಿಗಳ ಪೋಷಕರ ಸಂಘದ (ಅಸೋಸಿಯೇಷನ್ ಆಫ್ ಡಿಸಪಿಯರ್ಡ್ ಪರ್ಸನ್ಸ್–  ಎಪಿಡಿಪಿ)  ಅಂದಾಜಿನ ಪ್ರಕಾರ, 8000ದಿಂದ 10,000 ಪುರುಷರು ಕಾಣೆಯಾಗಿದ್ದಾರೆ.

ಹೀಗಾಗಿ ಸುಮಾರು 2000ದಷ್ಟು ‘ಅರ್ಧ ವಿಧವೆ’ಯರಿದ್ದಾರೆ (ಹಾಫ್ ವಿಡೋಸ್) ಕಾಶ್ಮೀರದಲ್ಲಿ.  ಎಂದರೆ ಗಂಡ ಕಾಣೆಯಾಗಿದ್ದಾನೆ. ಆದರೆ ಸತ್ತಿದ್ದಾನೆ ಎಂಬುದು ಘೋಷಣೆಯಾಗಿರದಂತಹ ಅತಂತ್ರ ಸ್ಥಿತಿ ಇದು. ಈ ಅನಿಶ್ಚತತೆಯ ಸಂಕಟದ ಜೊತೆಗೆ ಕುಟುಂಬವನ್ನು ಏಕಾಂಗಿಯಾಗಿ  ಸಲಹಬೇಕಾದ ಸಂಕಷ್ಟವನ್ನೂ ಇಂದು  ಈ ಮಹಿಳೆಯರು ಎದುರಿಸುತ್ತಿದ್ದಾರೆ. 
 
ಭದ್ರತಾ ಪಡೆಗಳಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯರ ಕಥನಗಳನ್ನು  ಪ್ರತ್ಯೇಕತಾವಾದದ ಹೋರಾಟಕ್ಕೆ ಶಕ್ತಿ ತುಂಬಲು ಹಾಗೂ  ಭಾವನಾತ್ಮಕವಾಗಿ ಪ್ರಚೋದಿಸಲು ಬಳಸಿಕೊಳ್ಳಲಾಯಿತು. ಆದರೆ, ಸಮಾಜದೊಳಗೆ ಅತ್ಯಾಚಾರ ಸಂತ್ರಸ್ತರ ವಿರುದ್ಧದ ಅಸ್ಪೃಶ್ಯ ಭಾವನೆ  ಮಾತ್ರ ಬದಲಾಗಲಿಲ್ಲ. ಹೀಗಾಗಿ  ‘ಭಾರತೀಯ ಭದ್ರತಾಪಡೆಗಳು  ನನ್ನ ಮೇಲೆ ದೈಹಿಕವಾಗಿ ಅತ್ಯಾಚಾರ ಮಾಡಿದರು. ಆದರೆ  ಆ ನಂತರ  ನನ್ನದೇ ಜನ, ನನ್ನ ನಾಯಕರು, ನನ್ನ ಸಮಾಜ ಹಾಗೂ ನನ್ನ ಕುಟುಂಬದಿಂದ ಮಾನಸಿಕ ಅತ್ಯಾಚಾರಕ್ಕೊಳಗಾದೆ’ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ.
 
ಇದರ ಜೊತೆಗೆ ಇಸ್ಲಾಮಿಕ್ ಅಸ್ಮಿತೆಯ ನೆಪದಲ್ಲಿ ಮಹಿಳೆಯರ ಮೇಲೆ ಸಾಂಸ್ಕೃತಿಕ ನಿರ್ಬಂಧಗಳೂ ಹೆಚ್ಚಾಗತೊಡಗಿದವು. 2001ರ ಆಗಸ್ಟ್‌ನಲ್ಲಿ ತಲೆಗೆ ಮುಸುಕು ಧರಿಸದ ಇಬ್ಬರು ಮಹಿಳೆಯರ ಮೇಲೆ ಉಗ್ರರಿಂದ  ಆಸಿಡ್ ದಾಳಿಯೂ ನಡೆದುಹೋಯಿತು. ಹೀಗಾಗಿ ಪ್ರತ್ಯೇಕತಾವಾದದ ಉಗ್ರ ಹೋರಾಟದಲ್ಲಿ ಮಹಿಳೆಯರು ಪರೋಕ್ಷವಾಗಿ ಭಾಗವಹಿಸಿದ್ದರೂ ಲಿಂಗತ್ವ ಸಮಾನತೆಯ ದನಿ ಕಂಡುಕೊಳ್ಳಲಾಗಲಿಲ್ಲ ಎಂಬುದು ಸ್ಪಷ್ಟ. ಹೀಗಾಗಿ ಶಾಂತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶವೂ  ಈ ಮಹಿಳೆಯರಿಗೆ ನಿರಾಕರಣೆಯಾಯಿತು.
 
ಈಗ  ಹದಿಹರೆಯದ ಹೆಣ್ಣುಮಕ್ಕಳು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನೇರವಾಗಿ ಬೀದಿಗಿಳಿದು  ಕಲ್ಲೆಸೆಯುತ್ತಾ  ಆಕ್ರೋಶ ಹೊರಹಾಕಿದ್ದು ಇದೇ ಮೊದಲು.  ಈ ಪ್ರತಿಭಟನೆಯ ಸ್ವರ  ಕೆಲವೇ ದಿನಗಳಲ್ಲಿ ನಿಲ್ಲಬಹುದು. ಆದರೆ ಗಾಯಗಳು ಆಳವಾಗಿವೆ. ಬೇಗ ಮಾಯುವುದು ಕಷ್ಟ ಎಂಬುದಂತೂ ಸ್ಪಷ್ಟ. ಏಕೆಂದರೆ ಈ ಯುವಜನರಲ್ಲಿ  ಆಕ್ರೋಶ, ಹತಾಶೆಯ ಭಾವನೆ ದೊಡ್ಡದಾಗಿ ಬೆಳೆಯುತ್ತಿದೆ. ಸಶಸ್ತ್ರ ಉಗ್ರಗಾಮಿತನಕ್ಕಿಂತ ಇದು ಅಪಾಯಕಾರಿ.

ಯಾವುದೇ ನಾಯಕತ್ವವಿಲ್ಲದ ಬರೀ ವಿದ್ಯಾರ್ಥಿಗಳದೇ ಪ್ರತಿರೋಧವನ್ನು ನಿರ್ವಹಿಸುವುದೂ ಕಷ್ಟ. ಈ ಪ್ರತಿರೋಧದಲ್ಲಿ ಪಾಲ್ಗೊಂಡ ಬಹುತೇಕ ವಿದ್ಯಾರ್ಥಿಗಳು  ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳು ಶುರುವಾದ ನಂತರ ಜನಿಸಿದವರು. ಅವರು ಬರೀ ಬಂದೂಕು, ಹಿಂಸೆ, ಸಾವು, ಉಗ್ರರು ಹಾಗೂ ಭದ್ರತಾ ಪಡೆಗಳನ್ನಷ್ಟೇ ಬದುಕಿನಲ್ಲಿ ಕಂಡಿದ್ದಾರೆ.  ಸಹಜ ಜೀವನದ ಅರಿವೇ ಅವರಿಗಿಲ್ಲ.
 
ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ‘ಕಾಶ್ಮೀರಕ್ಕೆ ಭಯೋತ್ಪಾದನೆ ಬೇಡ. ಪ್ರವಾಸೋದ್ಯಮ ಆಯ್ಕೆ ಮಾಡಿಕೊಳ್ಳಿ’ ಎಂದು ಯುವಜನರಿಗೆ ನೀಡಿದ ಕರೆಯನ್ನು  ಕಿವಿ ಮೇಲೆ ಹಾಕಿಕೊಂಡಂತಿಲ್ಲ. ಜಮ್ಮು–ಕಾಶ್ಮೀರದಲ್ಲಿರುವ ಪಿಡಿಪಿ– ಬಿಜೆಪಿ ಸರ್ಕಾರವೂ ಈ ಪರಿಸ್ಥಿತಿಯನ್ನು ಕಾನೂನು ಸುವ್ಯವಸ್ಥೆ ಸಮಸ್ಯೆಯಾಗಿಯಷ್ಟೇ ನೋಡುತ್ತಿದೆ. ಹೀಗಾಗಿ ಅದು ಕೈಗೊಳ್ಳುವ ಕ್ರಮಗಳು,   ಆಕ್ರೋಶಕ್ಕೆ ಮೂಲ ಕಾರಣವಾದ ಪರಕೀಯ ಪ್ರಜ್ಞೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.  ಈ ಸಮಸ್ಯೆಯ ರಾಜಕೀಯ ಆಯಾಮವನ್ನು ನಿರ್ವಹಿಸುವುದು ಬಹಳ  ಅಗತ್ಯ.
 
ಈಗ  ಜಮ್ಮು– ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ  ಅವರು ಸ್ವತಃ ದೆಹಲಿಗೆ ಬಂದು ಪ್ರತ್ಯೇಕತಾವಾದಿಗಳ ಜೊತೆ ಮಾತುಕತೆ ನಡೆಸಲು ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಪಡಿಸಿದ್ದಾರೆ.
 
ವಿಶ್ವದಲ್ಲೇ ಅತ್ಯಂತ ಮಿಲಿಟರೀಕರಣಗೊಂಡ ಪ್ರದೇಶ ಕಾಶ್ಮೀರ.  ಅದರ ಪರಿಣಾಮ ಈಗ ಗೋಚರವಾಗುತ್ತಿದೆ. ಭದ್ರತಾ ಪಡೆಗಳನ್ನು ‘ಕಪ್ಪು ನಾಯಿ’, ‘ಇಂಡಿಯನ್ ನಾಯಿಗಳು’ ಹಾಗೂ ‘ಬಿಹಾರಿಗಳು’  ಎಂದು ತಿರಸ್ಕಾರದಿಂದ ಕರೆಯುವುದಾಗಿ ‘ವಾಷಿಂಗ್ಟನ್ ಪೋಸ್ಟ್‍’ ಜೊತೆ ಮಾತನಾಡಿರುವ ವಿದ್ಯಾರ್ಥಿನಿಯರು ಹೇಳಿದ್ದಾರೆ.
 
ಹೆಣ್ಣುಮಕ್ಕಳು ಕಲ್ಲೆಸೆತದಲ್ಲಿ ತೊಡಗಿಕೊಂಡ ಪ್ರಕರಣದ ನಂತರ ಪೂರ್ತಿ ಮಹಿಳೆಯರೇ ಇರುವ  ಮಹಿಳಾ ಭಾರತ ಮೀಸಲು ಪಡೆಯನ್ನು  (ಐಆರ್‌ಬಿ) ಜಮ್ಮು ಕಾಶ್ಮೀರದಲ್ಲಿ ನಿಯೋಜಿಸಲಾಗುತ್ತಿದೆ. ನಿರಂತರ ಹಿಂಸಾಚಾರದಲ್ಲಿ ನಲುಗುತ್ತಿರುವ  ಈ ರಾಜ್ಯಕ್ಕೆ ಈಗಾಗಲೇ  ಕೇಂದ್ರ ಮಂಜೂರು ಮಾಡಿರುವ 5 ಐಆರ್‌ಬಿಗಳಲ್ಲಿ ಇದೂ ಒಂದು.  
 
ವಿದ್ಯಾರ್ಥಿನಿಯರು ಹಾಗೂ ಇತರ ಸಾರ್ವಜನಿಕ ಸುರಕ್ಷೆ ವಿಚಾರಗಳ ನಿರ್ವಹಣೆ ಜೊತೆಗೆ  ಕಲ್ಲು ಎಸೆತದಂತಹ ಘಟನೆಗಳನ್ನೂ  ಮಹಿಳಾ ಬೆಟಾಲಿಯನ್ ನಿರ್ವಹಿಸಲಿದೆ  ಎಂದು  ಗೃಹ ಸಚಿವಾಲಯ ಹೇಳಿದೆ.  ಇತರ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳನ್ನೂ ಈ ಮಹಿಳಾ ಪಡೆ ನೋಡಿಕೊಳ್ಳಲಿದೆ.  ವಿಡಿಯೊಗಳು ಷೇರ್ ಆಗುವುದನ್ನು ತಪ್ಪಿಸಲು ವಾಟ್ಸ್ ಆ್ಯಪ್, ಫೇಸ್‌ಬುಕ್, ಟ್ವಿಟರ್ ಹಾಗೂ ಇತರ ಸಾಮಾಜಿಕ  ಜಾಲ ತಾಣಗಳಿಗೆ  ಒಂದು ತಿಂಗಳ ನಿಷೇಧವನ್ನೂ ಇದೇ ಸಂದರ್ಭದಲ್ಲಿ  ಹೇರಲಾಗಿದೆ.
 
ಸಂಘರ್ಷಮಯವಾದ ಪರಿಸ್ಥಿತಿಗಳಲ್ಲಿ  ಹಲವು ನೆಲೆಗಳಲ್ಲಿ ಗಣನೀಯ ಪಾತ್ರಗಳನ್ನು ನಿರ್ವಹಿಸುವ ಮಹಿಳೆಯರು  ಶಾಂತಿ ಸಂಧಾನಕ್ಕೂ  ಕೊಡುಗೆ ಸಲ್ಲಿಸಬಲ್ಲರು ಎಂಬುದನ್ನು ಮರೆಯಬಾರದು. ಆದರೆ ಮಿಲಿಟರಿ ಕಾರ್ಯಾಚರಣೆ ಮತ್ತು ಪ್ರತ್ಯೇಕತಾವಾದಿಗಳ ಅತಿರೇಕಗಳ ನಡುವೆ ಬಲಿಪಶುವಾಗುವ ಹೆಣ್ಣಿನ ದನಿ ಕೇಳಿಸಿಕೊಳ್ಳುವ  ವ್ಯವಧಾನ  ಅಥವಾ ಸೂಕ್ಷ್ಮತೆ ಸದ್ಯದ ವ್ಯವಸ್ಥೆಯಲ್ಲಿ ಕಂಡುಬರುತ್ತಿಲ್ಲ ಎಂಬುದೇ ದುರಂತ. ಈಗ  ಕಲ್ಲೆಸೆಯುವ ಮೂಲಕ ಸಂಘರ್ಷದ ಮುಂಚೂಣಿಗೆ ಬಂದಿರುವ ಈ ಹೆಣ್ಣುಮಕ್ಕಳ ಪ್ರತಿರೋಧ ಎಲ್ಲಿಗೆ ಹೋಗಿ ಮುಟ್ಟುತ್ತದೆ? ಕಾಯಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT