ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಬದಲಾದ ಭಾರತದ ನಿಲುವು

Last Updated 3 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ ಮೊನ್ನೆ ದೆಹಲಿಗೆ ಭೇಟಿ ನೀಡಿದಾಗ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ (ಐಐಟಿ) ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಕಾರ್ಯಕ್ರಮವನ್ನು ನಾನೇ ನಿರ್ವಹಿಸಿದ್ದೆ.  ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕ್ಯಾಪಿಟಲ್‌ ಹಿಲ್‌ನಲ್ಲಿ ಭಾಷಣ ಮಾಡುವಾಗ ಉಲ್ಲೇಖಿಸಿದ್ದ ‘ಅಮೆರಿಕ ಮತ್ತು ಭಾರತ ಇತಿಹಾಸದ ಹಿಂಜರಿಕೆಯಿಂದ ಹೊರ ಬಂದಿವೆ’ ಎಂಬ ಮಾತನ್ನು ಕೆರಿ ಆ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು.

ಇತಿಹಾಸದ ಹಿಂಜರಿಕೆಯಷ್ಟೇ ಅಲ್ಲ, ಇತಿಹಾಸದ ಆಷಾಢಭೂತಿತನಕ್ಕೂ ಭವ್ಯ ಸಾಕ್ಷಿಯಾಗಿರುವ ತಾಣಕ್ಕೆ ಮಾತ್ರ ಅವರು ಭೇಟಿ ನೀಡಲಿಲ್ಲ. ಅವರು ಮನಸ್ಸು ಮಾಡಿದ್ದರೆ,  ಐಐಟಿ ಕ್ಯಾಂಪಸ್‌ನ ಕೂಗಳತೆ ದೂರದಲ್ಲಿಯೇ ಇದ್ದ ದೆಹಲಿ ಹೊರ ವರ್ತುಲ ರಸ್ತೆಗೆ ಭೇಟಿ ನೀಡಬಹುದಾಗಿತ್ತು. ಶೀತಲ ಸಮರ ಮತ್ತು ಅಲಿಪ್ತ ಚಳವಳಿಯ ಸಂದರ್ಭದಲ್ಲಿ ಈಜಿಪ್ಟ್‌ನಲ್ಲಿ ಸರ್ವಾಧಿಕಾರಿಯಾಗಿ ಮೆರೆದಿದ್ದ ಜಮಾಲ್‌ ಅಬ್ದೆಲ್‌ ನಾಸೀರ್‌ನ ಹೆಸರನ್ನು ಈ ರಸ್ತೆಗೆ ಇಡಲಾಗಿದೆ. ನಾಸೀರ್‌ನನ್ನು ಆತನ ದೇಶಬಾಂಧವರೇ ಸಂಪೂರ್ಣವಾಗಿ ತಿರಸ್ಕರಿಸಿದ್ದರು. ಈ ರಸ್ತೆಯಿಂದ ಪೂರ್ವಕ್ಕೆ ಒಂದು ಮೈಲಿ ದೂರದಲ್ಲಿ ಅದೇ ಮಾರ್ಗಕ್ಕೆ ವಿಯೆಟ್ನಾಂನ ಕಮ್ಯುನಿಸ್ಟ್‌ ಕ್ರಾಂತಿಕಾರಿ ಮುಖಂಡ ಹೊ ಚಿ ಮಿನ್ಹ್‌ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಇದು ಭಾರತದ ರಾಜಧಾನಿಯ ರಸ್ತೆಗಳಲ್ಲಿ ಈಗಲೂ ಶೀತಲ ಸಮರ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ. ಇದು ಅರ್ಧ ಕತೆಯಷ್ಟೆ. ವಿವರಗಳು  ಇನ್ನೂ ಸಾಕಷ್ಟು ಬಾಕಿ ಇವೆ.

ಅದೇ ದಿನ ಸಂಜೆ ಕೆರಿ ಅವರು ತಮ್ಮ ಭಾರತ ಭೇಟಿಯನ್ನು ವಿಸ್ತರಿಸಿ ಅಚ್ಚರಿ  ಮೂಡಿಸಿದರು. ಭೇಟಿ ವಿಸ್ತರಣೆಗೆ ಸಂಬಂಧಿಸಿದಂತೆ ರಾಜಧಾನಿಯ ರಾಜತಾಂತ್ರಿಕ ವಲಯದಲ್ಲಿ ಹಲವಾರು ಊಹಾಪೋಹಗಳೂ ಹರಿದಾಡಿದವು. ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದರೂ ವಿಮಾನ ನಿಲ್ದಾಣ ಸುರಕ್ಷಿತವಾಗಿಯೇ ಇತ್ತು! ಮರುದಿನವೇ ಭೇಟಿ ಮುಂದೂಡಿಕೆಯ ಕಾರಣ ಬಹಿರಂಗಗೊಂಡಿತ್ತು. ಭಾರತದ ಅಧಿಕೃತ ಭೇಟಿಗೆ ಬರಲಿದ್ದ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತಾಹ್‌ ಅವರನ್ನು ಭೇಟಿಯಾಗುವ ಕಾರಣಕ್ಕೆ ಕೆರಿ ತಮ್ಮ ಪ್ರಯಾಣ ಮುಂದೂಡಿದ್ದರು.

ಭಾರತವು ಇತಿಹಾಸದ ಹಿಂಜರಿಕೆ ಮತ್ತು ಆಷಾಢಭೂತಿತನದ ವಿಚಿತ್ರ ಸಮೀಕರಣದ ದೇಶವಾಗಿರುವುದನ್ನು ಇದು ಸೂಚಿಸುತ್ತದೆ. 25 ವರ್ಷಗಳ ಹಿಂದೆಯೇ ಶೀತಲ ಸಮರ ಕೊನೆಗೊಂಡು ಹೊಸ ಜಾಗತಿಕ ವ್ಯವಸ್ಥೆಯೊಂದು ರೂಪುಗೊಂಡಿತ್ತು. ಕ್ಯೂಬಾ, ಅಮೆರಿಕ ಮತ್ತು ಇರಾನ್‌ ತಮ್ಮ  ಹಳೆಯ ದ್ವೇಷ ಮರೆತಿದ್ದವು.  ಆದರೆ, ಭಾರತ  ಮಾತ್ರ ಹಿಂಜರಿಕೆಯ ಧೋರಣೆ ತಳೆದಿತ್ತು. ಹೊಸ ವ್ಯವಸ್ಥೆಯನ್ನು ಭಾರತ ಆತ್ಮೀಯವಾಗಿ ಅಪ್ಪಿಕೊಂಡರೂ  ಅನೇಕ ಸಂಗತಿಗಳನ್ನು ಇತಿಹಾಸದ  ಶೈತ್ಯಾಗಾರದಲ್ಲಿ ಸುರಕ್ಷಿತವಾಗಿ ಇರಿಸಿತ್ತು. ಈ ವಿಷಯದಲ್ಲಿ ಭಾರತದ ನಿಲುವು ಹೇಗಿತ್ತು ಎಂದರೆ, ಒಂದು ಹೆಜ್ಜೆ ಮುಂದೆ ಇರಿಸಿ, ಎರಡು ಹೆಜ್ಜೆ ಹಿಂದೆ ಇಟ್ಟಂತೆ ಎಂಬಂತೆ ಇತ್ತು. ಕ್ರಿಕೆಟ್‌ ಆಟಗಾರನು ಫ್ರಂಟ್‌ ಫೂಟ್‌ನಲ್ಲಿ ಆಡಲು ಮುಂದಾದರೂ, ಕ್ರೀಸ್‌ನಿಂದ ತನ್ನ ಬ್ಯಾಕ್‌ ಫೂಟ್‌ ಮೇಲೆತ್ತಲು  ಹಿಂಜರಿಕೆ ತೋರುವ ರೀತಿಯಲ್ಲಿತ್ತು.

ಜಾನ್‌ ಕೆರಿ ಅವರು ಈಜಿಪ್ಟ್‌ ಅಧ್ಯಕ್ಷರನ್ನು ಭೇಟಿಯಾಗಲು ದೆಹಲಿಯಲ್ಲಿಯೇ ಉಳಿದುಕೊಂಡಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇಬ್ಬರಿಗೂ ಜಂಟಿಯಾಗಿ ಔತಣಕೂಟ ಏರ್ಪಡಿಸಿದ್ದರು.  ಇದು ಭಾರತದ ಇತಿಹಾಸದ ಹಿಂಜರಿಕೆಯ ಮತ್ತು ಆಷಾಢಭೂತಿತನದ ಧೋರಣೆಗೆ ಕನ್ನಡಿ ಹಿಡಿದಿತ್ತು.
ಬರ್ಲಿನ್‌ ಗೋಡೆ ಬಿದ್ದು ಹೋದ ನಂತರ, ಭಾರತದ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್‌, ಅಟಲ್‌ ಬಿಹಾರಿ ವಾಜಪೇಯಿ ಮತ್ತು ಮನಮೋಹನ್‌ ಸಿಂಗ್‌ ಅವರು ಈ ಹಳೆಯ ಇತಿಹಾಸದ ಹಿಂಜರಿಕೆಯ ಧೋರಣೆಯಿಂದ ಹೊರ ಬರಲು ಮುಂದಾಗಿದ್ದರು. ಈ ಮೂವರೂ ತಮ್ಮ ಅಧಿಕಾರಾವಧಿಯಲ್ಲಿ ತಮ್ಮದೇ ಆದ ವಿಧಾನದಲ್ಲಿ ಈ ನಿಟ್ಟಿನಲ್ಲಿ ಮುಂದುವರೆದಿದ್ದರು. ಆದರೆ, ಯಾವುದೋ ಒಂದು ಹಂತದಲ್ಲಿ ಹಿಂಜರಿಕೆ ಮತ್ತು ಅದಕ್ಕೂ ಹೆಚ್ಚಾಗಿ ಆಷಾಢಭೂತಿತನದಿಂದಾಗಿ ಈ ಮೂವರ ಪ್ರಯತ್ನಗಳನ್ನು ನಿಷ್ಫಲಗೊಳಿಸಲಾಗಿತ್ತು.

ಅಮೆರಿಕದ ಜತೆ ಬಾಂಧವ್ಯ ಸುಧಾರಣೆಗೆ ರಾವ್‌ ಬಯಸಿದ್ದರು. ವಾಜಪೇಯಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಮೆರಿಕದ ಜತೆ ಒಪ್ಪಂದಕ್ಕೆ ಸಹಿಯನ್ನೂ ಹಾಕಿದ್ದರು. ಇವರ ಈ ನಡೆಯನ್ನು  ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್‌ ಅನುಮಾನದಿಂದಲೇ ನೋಡಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ನಿರಂಕುಶ ಸ್ವಭಾವದ ಬ್ರಜೇಶ್‌ ಮಿಶ್ರಾ ಅವರು ಅಮೆರಿಕದ ಪರ ಅತಿಯಾಗಿ ವಾಲಿದ್ದಾರೆ  ಎಂದು ಅವರ ವಿರುದ್ಧ ಟೀಕಾಪ್ರಹಾರವನ್ನೂ ನಡೆಸಿತ್ತು. ಮನಮೋಹನ್‌ ಸಿಂಗ್‌ ಅವರೂ ಅಮೆರಿಕವನ್ನು ಭಾರತದ ಸಹಜ ಮಿತ್ರ ಎಂದು ಪರಿಗಣಿಸಿ ಆ ದೇಶದ ಜತೆ ಪರಮಾಣು ಒಪ್ಪಂದ ಮಾಡಿಕೊಂಡು ತಮ್ಮ ಸರ್ಕಾರದ ಅಸ್ತಿತ್ವವನ್ನೇ ಗಂಡಾಂತರಕ್ಕೆ ಒಡ್ಡಿದ್ದರು.  ನಂತರ ಸೇನಾ  ಒಪ್ಪಂದ, ಜಂಟಿ ಸಮರಾಭ್ಯಾಸ, ರಕ್ಷಣಾ ಮಾಹಿತಿ ವಿನಿಮಯಕ್ಕೆ  ಸಂಬಂಧಿಸಿದಂತೆ ಮಾತುಕತೆಗೂ ಮುಂದಾಗಿದ್ದರು. ಆದರೆ, ಅವರ ಈ  ಎಲ್ಲ ಪ್ರಯತ್ನಗಳನ್ನು ಅಂದಿನ ರಕ್ಷಣಾ ಸಚಿವ ಎ.ಕೆ.ಆಂಟನಿ ನೇತೃತ್ವದಲ್ಲಿನ ಶೀತಲ ಸಮರ ಸೇನಾನಿಗಳು ವ್ಯರ್ಥಗೊಳಿಸಿದ್ದರು.

ಆದರೆ, ನರೇಂದ್ರ ಮೋದಿ ಅವರು ಮಾತ್ರ ಅಮೆರಿಕದ ಜತೆಗಿನ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಭೂತಕಾಲವನ್ನು ಸಂಪೂರ್ಣವಾಗಿ ಹಿಂದೆ ಬಿಟ್ಟು  ದಿಟ್ಟತನದಿಂದಲೇ  ಮುನ್ನಡೆದಿದ್ದಾರೆ.
ಅಮೆರಿಕದ ಕಾಂಗ್ರೆಸ್‌ ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಉಭಯ ದೇಶಗಳ ಪಾಲುದಾರಿಕೆಯನ್ನು ‘ಕಡೆಗಣಿಸಲಾಗದ ಬಾಂಧವ್ಯ’ ಎನ್ನುವ ವಿಶೇಷಣ ಬಳಸಿ ಇನ್ನೊಂದು ಮಜಲಿಗೆ ಕೊಂಡೊಯ್ದರು.
ರಕ್ಷಣೆ, ಸೇನೆ ಮತ್ತು ಭದ್ರತಾ ವಿಷಯಗಳು ಈ ಪಾಲುದಾರಿಕೆ ನಿರ್ಧರಿಸುವ ಇತರ ಪ್ರಭಾವಶಾಲಿ ಸಂಗತಿಗಳಾಗಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಭಾರತವು ಅಮೆರಿಕದ ಕಡೆಗಣಿಸಲಾಗದ ರಕ್ಷಣಾ ಮತ್ತು ಭದ್ರತಾ ಪಾಲುದಾರ ದೇಶ ಎನ್ನುವುದನ್ನು ಮೋದಿ ಬಲವಾಗಿ ಪ್ರತಿಪಾದಿಸಿದ್ದರು. ಅದೊಂದು ಸೂಕ್ಷ್ಮ ಸ್ವರೂಪದ ರಾಜತಾಂತ್ರಿಕ ನಡೆಯಷ್ಟೇ ಆಗಿರಲಿಲ್ಲ. ಅಮೆರಿಕವು ಭಾರತದ ಮಿತ್ರ ದೇಶವಾಗಿದೆ ಎನ್ನುವುದನ್ನು ಭಾರತದ ಪ್ರಧಾನಿಯೊಬ್ಬರು ಸ್ಪಷ್ಟಪಡಿಸಿದ್ದ ನಡೆ ಯಾಗಿತ್ತು.

1979ರಲ್ಲಿ ಪ್ರಧಾನಿ ಚೌಧರಿ ಚರಣ್‌ಸಿಂಗ್‌ ಅವರು ದೇಶದಲ್ಲಿನ ರಾಜಕೀಯ ಪರಿಸ್ಥಿತಿಯ ಕಾರಣಕ್ಕೆ ಅಲಿಪ್ತ ದೇಶಗಳ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಿರಲಿಲ್ಲ. ಅಲ್ಪಾವಧಿವರೆಗೆ ಮಾತ್ರ ಅಧಿಕಾರದಲ್ಲಿದ್ದ ಚರಣ್‌ಸಿಂಗ್‌ ಅವರು ಸಮ್ಮೇಳನಕ್ಕೆ ಗೈರು ಹಾಜರಾಗಿದ್ದನ್ನು ರಾಜಕೀಯ ಕಾರಣಗಳಿಗಾಗಿ ಅರ್ಥೈಸಿಕೊಳ್ಳಬಹುದು. 30 ವರ್ಷಗಳ ನಂತರ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದು ಇದುವರೆಗೂ ದೃಢಪಟ್ಟಿಲ್ಲ. ಈ ಬಗ್ಗೆ ಅಧಿಕೃತ ಹೇಳಿಕೆಯೂ ಬಿಡುಗಡೆಯಾಗಿಲ್ಲ.
ನಿರಂತರವಾಗಿ ಮುಂದುವರೆಸುವುದು, ಸ್ಥಿರತೆ ಸಾಧಿಸುವುದು  ಮತ್ತು ಬದಲಾವಣೆಯು ಭಾರತದ ವಿದೇಶಾಂಗ ನೀತಿಯ ಚರ್ಚಾಸ್ಪದ ವಿಷಯಗಳಾಗಿವೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೈ ಬದಲಾಯಿಸುತ್ತಲೇ ಇರುತ್ತದೆ. ಹಾಗೆಂದು, ವಿದೇಶಾಂಗ ನೀತಿ ಮತ್ತಿತರ ಪ್ರಮುಖ ನಿರ್ಧಾರಗಳ ವಿಷಯದಲ್ಲಿ ಬದಲಾವಣೆ ನಡೆಯಬೇಕು ಎಂದೂ ಅರ್ಥವಲ್ಲ. ಇಂತಹ ವಿಷಯಗಳಲ್ಲಿ ರಾಷ್ಟ್ರೀಯ ಒಮ್ಮತಾಭಿಪ್ರಾಯ ಆಧರಿಸಿ ಧೋರಣೆಗಳನ್ನು ಮುಂದುವರೆಸಿಕೊಂಡು ಹೋಗಬೇಕಾಗುತ್ತದೆ.

ನರೇಂದ್ರ ಮೋದಿ ಅವರು ಈಗ ತಮ್ಮ ಅಧಿಕಾರಾವಧಿಯ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಬಗೆಗಿನ ಗೊಂದಲಗಳಿಗೆ ತೆರೆ ಎಳೆಯಬೇಕಾಗಿದೆ.
ಮೋದಿ ಅವರು ಯಾವುದೇ ಹಿಂಜರಿಕೆ ಇಲ್ಲದೆ ಅಮೆರಿಕದ ಸ್ನೇಹವನ್ನು ಅಪ್ಪಿಕೊಂಡಿದ್ದಾರೆ. ಅಮೆರಿಕದಲ್ಲಿ ಈ ವರ್ಷಾಂತ್ಯಕ್ಕೆ ಯಾರು ಅಧ್ಯಕ್ಷರಾಗಲಿದ್ದಾರೆ ಎನ್ನುವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಮೋದಿ ದೃಢ ನಿರ್ಧಾರ ಕೈಗೊಂಡಿದ್ದಾರೆ.

ಚೀನಾ ಮತ್ತು ಮುಸ್ಲಿಂ ದೇಶಗಳ ಬಗೆಗಿನ ನಿಲುವಿನಲ್ಲಿಯೂ ಮೋದಿ ಅವರಲ್ಲಿ  ಇದೇ ಬಗೆಯ ನಿಲುವು ಕಂಡು ಬಂದಿದೆ. ಚೀನಾ ಜತೆಗೆ ಸ್ನೇಹಪರವಾಗಿ ಇರಲು ಮುಂದಾಗಿದ್ದರೂ ಅವರ ಪ್ರಯತ್ನಗಳು ಇನ್ನೂ ಸಂಪೂರ್ಣವಾಗಿ ಯಶಸ್ಸು ಕಂಡಿಲ್ಲ. ಚೀನಾಕ್ಕೆ ಭಾರತದ ಮಾರುಕಟ್ಟೆ ಬೇಕಾಗಿದೆ, ನಮಗೆ ಚೀನಾದ ಸರಕುಗಳು ಬೇಕಾಗಿವೆ, ಇದರಿಂದ ವ್ಯಾಪಾರ ಸಮತೋಲನ ಸಾಧಿಸಲು ಸಾಧ್ಯವಾಗಲಿದೆ ಎನ್ನುವುದು ಮೋದಿ ಅವರ ದೃಢ ನಿಲುವಾಗಿದೆ. ಆದರೆ, ಭಾರತದ ಸ್ನೇಹ ಹಸ್ತಕ್ಕೆ ಪ್ರತಿಯಾಗಿ, ಪರಮಾಣು ಪೂರೈಕೆ ಗುಂಪಿನ ಸದಸ್ಯತ್ವ ಪಡೆಯುವ (ಎನ್‌ಎಸ್‌ಜಿ) ಭಾರತದ ಪ್ರಯತ್ನಗಳಿಗೆ ಚೀನಾ ಅಡ್ಡಗಾಲು ಹಾಕಿತ್ತು. ಮಸೂದ್‌ ಅಜರ್‌ ಪ್ರಕರಣದಲ್ಲಿಯೂ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ನಿರ್ಣಯ ಕೈಗೊಂಡಿತ್ತು.
ಚೀನಾ- ಪಾಕಿಸ್ತಾನ ನಡುವಣ ಆರ್ಥಿಕ ಕಾರಿಡಾರ್‌, ಕಳಪೆ ತಂತ್ರಜ್ಞಾನ ಹಾಗೂ ಕಳಪೆ ಕೌಶಲದ ಚೀನಾ ತಯಾರಿಕೆಯ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಎತ್ತುವ ಪ್ರಶ್ನೆಗಳಿಗೆ ಮೋದಿ ಅವರಲ್ಲಿ ಸಮರ್ಥನೀಯ ಉತ್ತರ ಇಲ್ಲ.
ಮುಸ್ಲಿಂ ದೇಶಗಳಲ್ಲಿ  (ಶಿಯಾ ಮತ್ತು ಸುನ್ನಿ) ತಮ್ಮ ವೈಯಕ್ತಿಕ ವರ್ಚಸ್ಸು ಮತ್ತು ಭಾರತದ ಪ್ರಭಾವ ಬಳಸಿ ದ್ವಿಪಕ್ಷೀಯ ಮತ್ತು ವಾಣಿಜ್ಯ ಸಂಬಂಧಿ ಬಾಂಧವ್ಯ ವೃದ್ಧಿಸಲು ಮೋದಿ ಶ್ರಮಿಸುತ್ತಿದ್ದಾರೆ.

ಜಾಗತಿಕವಾಗಿ ರೂಪುಗೊಂಡಿರುವ ಹೊಸ ಪರಿಸರದಲ್ಲಿ, ಅಮೆರಿಕ, ಚೀನಾ, ಯುರೋಪ್‌, ಸೌದಿ ಅರೇಬಿಯಾ ಮತ್ತು ಅರಬ್‌ ಅಮೀರರ ಒಕ್ಕೂಟ (ಯುಎಇ) ಸೇರಿದಂತೆ ಬಹುತೇಕ ಪ್ರತಿ ದೇಶವೂ ಸಾಂಪ್ರದಾಯಿಕ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರನ್ನು ಸದೆಬಡಿಯಲು  ಸಮರ ಸಾರಿವೆ. ಈ ಪರಿಸ್ಥಿತಿಯನ್ನು ಸದ್ಬಳಕೆ ಮಾಡಿಕೊಳ್ಳಲು ಮೋದಿ ಅವರಿಗೆ ವಿಶಿಷ್ಟ ಅವಕಾಶ ದೊರೆತಿದೆ.  ಮೋದಿ ಅವರು ಈ ನಿಟ್ಟಿನಲ್ಲಿಯೂ ಕಾರ್ಯೋನ್ಮುಖರಾಗಿದ್ದಾರೆ.  ಪ್ಯಾಲೆಸ್ಟೀನ್‌ ಮತ್ತು ಇಸ್ರೇಲ್‌ ಮಧ್ಯದ ಬಿಕ್ಕಟ್ಟಿನ ಕಾರಣಕ್ಕೆ ಇದುವರೆಗೆ ಮುಸ್ಲಿಂ ದೇಶಗಳ ಜತೆಗೆ ಸೂಕ್ಷ್ಮ ರೀತಿಯ ಸಂಬಂಧ ಕಾಯ್ದುಕೊಳ್ಳುವ ಅನಿವಾರ್ಯಕ್ಕೆ ಒಳಗಾಗಿದ್ದ ಭಾರತ, ಈಗ ಅದರಿಂದ ಹೊರ ಬಂದಿದೆ.

ಇದೇ ಕಾರಣಕ್ಕೆ ಭಾರತ ಈಗ ಪಾಕಿಸ್ತಾನ, ಪಾಕ್‌ ಆಕ್ರಮಿತ ಕಾಶ್ಮೀರ, ಗಿಲ್‌ಗಿಟ್‌– ಬಾಲ್ಟಿಸ್ತಾನ್‌ ಮತ್ತು ಬಲೂಚಿಸ್ತಾನ್‌ ಬಗ್ಗೆ ಹೊಸ ಧೋರಣೆ ಅನುಸರಿಸಲು ಮುಂದಾಗಿದೆ. ಕಾಶ್ಮೀರಕ್ಕೆ ಸಂಬಂಧಿಸಿದಂತೆ 25 ವರ್ಷಗಳಷ್ಟು ಹಳೆಯದಾದ ಎಚ್ಚರಿಕೆಯ ಧೋರಣೆಯು ಇದುವರೆಗೆ ಭಾರತಕ್ಕೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸಿದೆ ಎಂದು ಪ್ರತಿಪಾದಿಸಿದರೂ ಅದನ್ನು ಈಗ ಕೈಬಿಡಲಾಗುತ್ತಿದೆ.

ಹಳೆಯ ಧೋರಣೆಯಿಂದ ಯಾವುದೇ ಪ್ರಯೋಜನ ಇಲ್ಲ, ಅದರಿಂದ ದೂರ ಸರಿಯಲು ಇದು ಸಕಾಲ ಎನ್ನುವುದು ಬಹುಶಃ ಮೋದಿ ಅವರ ಆಲೋಚನೆ ಆಗಿರಬಹುದು. ಅದರಲ್ಲೂ ವಿಶೇಷವಾಗಿ ಪಾಕಿಸ್ತಾನ ಏಕಾಂಗಿಯಾಗುತ್ತಿರುವ ಸದ್ಯದ ಸಂದರ್ಭದಲ್ಲಿ, ಭಾರತದ ವಿರುದ್ಧ ಅದು ಅನುಸರಿಸುತ್ತಿರುವ ಬ್ಲ್ಯಾಕ್‌ಮೇಲ್‌ ತಂತ್ರದ ಪ್ರಭಾವ ಕೂಡ ಕಡಿಮೆಯಾಗುತ್ತಿದೆ.

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವು ಈಗ ಹೊಸ ವರಸೆ ಆರಂಭಿಸಿದೆ. ಕಾಶ್ಮೀರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲು 22 ರಾಯಭಾರಿಗಳನ್ನು ವಿವಿಧ ದೇಶಗಳಿಗೆ ಕಳಿಸಿಕೊಡಲು ಉದ್ದೇಶಿಸಿದೆ. ಪಾಕಿಸ್ತಾನವು ವಿಶ್ವದ ವಿವಿಧ ದೇಶಗಳಿಗೆ ನೂರು ಮಂದಿ ರಾಯಭಾರಿಗಳನ್ನು ಕಳಿಸಿಕೊಟ್ಟು, ಭಾರತದ ಜತೆಗಿನ ಕಾಶ್ಮೀರ  ಸಮಸ್ಯೆಯನ್ನು ಹೇಳಿಕೊಳ್ಳಲಿ.

ಇದಕ್ಕೆ ಪ್ರತಿಯಾಗಿ ಭಾರತ, ಪ್ರತಿಯೊಬ್ಬರೂ ಪಾಕಿಸ್ತಾನದ ಜತೆ ಸಮಸ್ಯೆ ಹೊಂದಿದ್ದಾರೆ, ಪಾಕಿಸ್ತಾನವು ಮುಸ್ಲಿಂ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂದು ಇಡೀ ವಿಶ್ವಕ್ಕೆ ಪ್ರಚಾರ ಮಾಡಬಹುದು. ಇಂತಹ ನಿಲುವು ಫಲ ನೀಡಬಹುದು.  ಕಾಶ್ಮೀರ ಮತ್ತು ಪಾಕಿಸ್ತಾನ ಕುರಿತು ಭಾರತ ಇದುವರೆಗೂ ಅನುಸರಿಸಿಕೊಂಡು ಬರುತ್ತಿರುವ ಧೋರಣೆಯನ್ನು ಮೋದಿ ಅವರು ಕೈಬಿಡುವುದನ್ನೂ ಈ ವಾದವು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ. ಮೋದಿ ಸರ್ಕಾರವು ಪರಮಾಣು ಹಿಂಜರಿಕೆ ಧೋರಣೆಯನ್ನೂ ಕೈಬಿಡಲು ಇದು ಸಕಾಲವಾಗಿದೆ.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT