ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರಕ್ಕಾಗಿ ಶೇಷ ಭಾರತ ಮಾಡಬೇಕಾದ್ದೇನು?

Last Updated 1 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

2010ರ ಬೇಸಗೆಯ ಕೊನೆ ಮತ್ತು ಶರತ್ಕಾಲದ ಆರಂಭ ದಿನಗಳಲ್ಲಿ ಕಾಶ್ಮೀರ ಕಣಿವೆಯು ಈಗಿನ  ಹಾಗೆಯೇ ಪ್ರತಿಭಟನೆ, ಅತೃಪ್ತಿ, ಹಿಂಸೆ ಮತ್ತು ನೋವಿನಿಂದ ತುಂಬಿ ಹೋಗಿತ್ತು. 2010ರ ಆಗಸ್ಟ್ ಹೊತ್ತಿಗೆ ಬಿಕ್ಕಟ್ಟು ಮತ್ತು ಹಿಂಸೆ ಮೂರನೇ ತಿಂಗಳಿಗೆ ಕಾಲಿಟ್ಟಿತ್ತು ಮತ್ತು ಸಾವಿನ ಸಂಖ್ಯೆ 70 ತಲುಪಿತ್ತು.

ಈ ಸಂದರ್ಭದಲ್ಲಿ ಅನುಭವಿ ಪತ್ರಕರ್ತ ಮತ್ತು ಕಾಶ್ಮೀರದ ಬಗ್ಗೆ ನಿಗಾ ಇರಿಸಿದ್ದ ಸಿದ್ದಾರ್ಥ ವರದರಾಜನ್ ‘ದ ಹಿಂದೂ’ ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದು ‘ಕಾಶ್ಮೀರದ ಸಾಮಾನ್ಯ ಜನರ ಕುಂದು ಕೊರತೆಗಳನ್ನು ನಿವಾರಿಸಲು ಇಚ್ಛೆ ಇದೆ ಎಂಬುದನ್ನು ತೋರಿಸುವಂತೆ ದೃಢ ಕ್ರಮಗಳನ್ನು ಕೈಗೊಳ್ಳಿ’ ಎಂದು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಕೋರಿದರು.

‘ಆರ್ಥಿಕ ಪ್ಯಾಕೇಜುಗಳು, ದುಂಡು ಮೇಜಿನ ಸಭೆಗಳು ಮತ್ತು ಸರ್ವಪಕ್ಷ ನಿಯೋಗಗಳ ಬಗ್ಗೆ ಮಾತನಾಡಿ’ ಕಾಶ್ಮೀರಿಗಳ ಭಾವನೆಗಳಿಗೆ ಅವಮಾನ ಮಾಡಬಾರದು ಎಂದು ಸಿಂಗ್ ಅವರನ್ನು ಉದ್ದೇಶಿಸಿ ವರದರಾಜನ್ ಹೇಳಿದರು.

ಬದಲಾಗಿ, ‘ಕಳೆದ ಕೆಲವು ವಾರಗಳಲ್ಲಿ ಉಂಟಾದ ಸಾವು ನೋವಿಗೆ ಯಾವ ಮುಚ್ಚಮರೆಯೂ ಇಲ್ಲದೆ ವಿಷಾದ ವ್ಯಕ್ತಪಡಿಸಬೇಕು. ಕಳೆದ ಇಷ್ಟೆಲ್ಲ ವರ್ಷಗಳಲ್ಲಿ ನ್ಯಾಯ ಒದಗಿಸಲು ಭಾರತ ಸರ್ಕಾರ ವಿಫಲವಾಗಿದೆ ಎಂಬುದನ್ನು ಪ್ರಾಮಾಣಿಕವಾಗಿ ಮತ್ತು ವಿನಯದಿಂದ ಒಪ್ಪಿಕೊಳ್ಳಬೇಕು. ಎಲ್ಲವನ್ನೂ ಬದಲಾಯಿಸಲು ಒಂದು ಅವಕಾಶ ನೀಡುವಂತೆ ಕಾಶ್ಮೀರದ ಜನರನ್ನು ಕೇಳಿಕೊಳ್ಳಬೇಕು.

ಇಷ್ಟಾದರೂ ಸಾರ್ವಜನಿಕ ಸಿಟ್ಟಿನ ಲಾವಾರಸ ತಂಪಾಗುವ ಯಾವ ಖಾತರಿಯೂ ಇಲ್ಲ. ಈಗ ಒಂದು ರೀತಿಯ ರಾಜಕೀಯ ಅವಕಾಶ ಸೃಷ್ಟಿಸಲು ಪ್ರಧಾನಿ ಸರ್ವ ಪ್ರಯತ್ನ ನಡೆಸದಿದ್ದರೆ ಕಣಿವೆಯ ಮುಂದಿನ ಆಕ್ರೋಶದ ಸಿಡಿತ ನಮ್ಮನ್ನು ಎಲ್ಲಿಗೆ ಒಯ್ದೀತು ಎಂದು ಹೇಳಲು ಸಾಧ್ಯವಿಲ್ಲ’ ಎಂಬುದನ್ನೂ ವರದರಾಜನ್ ಸೂಚಿಸಿದ್ದರು.

ಐದು ವರ್ಷಗಳ ನಂತರ, 2015ರ ಆಗಸ್ಟ್‌ನಲ್ಲಿ ನಾನು ಕಾಶ್ಮೀರಕ್ಕೆ ಹೋಗಿದ್ದೆ ಮತ್ತು ಅಲ್ಲಿ ಕಂಡದ್ದನ್ನು ಇದೇ ಅಂಕಣದಲ್ಲಿ ಬರೆದಿದ್ದೆ. ‘ಭಾರತ ಸರ್ಕಾರ ಮತ್ತು ಅದರ ಉದ್ದೇಶಗಳ ಬಗ್ಗೆ ಅಲ್ಲಿ ವ್ಯಾಪಕವಾದ ಅಪನಂಬಿಕೆ’ಯನ್ನು ನಾನು ಕಂಡಿದ್ದೆ. ಯಾಕೆಂದರೆ, ‘ಕಾಶ್ಮೀರದ ಜನರಿಗೆ ನೀಡಿದ್ದ ಭರವಸೆಗಳನ್ನು ಭಾರತ ಸರ್ಕಾರ ಮತ್ತೆ ಮತ್ತೆ ಮರೆತುಬಿಟ್ಟದ್ದು ಇದಕ್ಕೆ ಕಾರಣ’.

2014ರಲ್ಲಿ ಉಂಟಾದ ಘೋರ ಪ್ರವಾಹದ ಸಂತ್ರಸ್ತರಿಗೆ ಸಮರ್ಪಕ ಮತ್ತು ಸರಿಯಾದ ಪರಿಹಾರ ನೀಡಲು ಸರ್ಕಾರ ವಿಫಲವಾಗಿದ್ದರ ಬಗ್ಗೆ ಜನರಲ್ಲಿ ಅತೃಪ್ತಿ ಇದ್ದುದನ್ನು ನಾನು ಗಮನಿಸಿದ್ದೆ.

ಈ ಪ್ರವಾಹ ಉತ್ತರ ಪ್ರದೇಶ ಅಥವಾ ಗುಜರಾತ್‌ನಲ್ಲಿ ಆಗಿದ್ದಿದ್ದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇದಕ್ಕಿಂತ ಬಹಳ ಹೆಚ್ಚು ಸಮರ್ಪಕವಾಗಿ ಪರಿಹಾರ ನೀಡುತ್ತಿತ್ತು ಮತ್ತು ಸಂತ್ರಸ್ತರಿಗೆ ತಮ್ಮ ಜೀವನವನ್ನು ಮರಳಿ ಕಟ್ಟಲು ನೆರವಾಗುತ್ತಿತ್ತು ಎಂದು ಜನರು ನನಗೆ ಹೇಳಿದ್ದರು.

ಭಾರತದ ಮಾಧ್ಯಮದಲ್ಲಿ ತಮ್ಮ ರಾಜ್ಯದ ಬಗ್ಗೆ ಏಕಪಕ್ಷೀಯ ಮಾಹಿತಿ ಮಾತ್ರ ಪ್ರಸಾರ ಆಗುತ್ತಿರುವ ಬಗ್ಗೆಯೂ ನಾನು ಮಾತನಾಡಿಸಿದ ಕಾಶ್ಮೀರಿಗಳು ದೂರಿದ್ದರು. ‘ಅತಿರೇಕದ ದೇಶಪ್ರೇಮದತ್ತ ವಾಲುವ ಭಾರತದ ಮಾಧ್ಯಮದ ಒಲವು ಕಾಶ್ಮೀರದಲ್ಲಿ ಭಾರತದ ಪರವಾಗಿರುವ ವಾದವನ್ನು ಆಳವಾಗಿ ಗಾಸಿಗೊಳಿಸುತ್ತದೆ’ ಎಂದು ನಾನು ಬರೆದಿದ್ದೆ.

‘ಟೈಮ್ಸ್ ನೌ’ನಂತಹ ಸುದ್ದಿ ವಾಹಿನಿಗಳ ಚಿತ್ತೋನ್ಮಾದ ‘ಕಾಶ್ಮೀರ ಕಣಿವೆಯ ಜನರಿಗೆ ಸಂಬಂಧಿಸಿ ನೈತಿಕ ಮತ್ತು ಸಾಂವಿಧಾನಿಕ ಬದ್ಧತೆಗಳ ಬಗೆಗಿನ ನಮ್ಮ ಸಮಚಿತ್ತದ ಚರ್ಚೆಯನ್ನು ಮಸುಕಾಗಿಸುವ ಬೆದರಿಕೆ ಒಡ್ಡುತ್ತದೆ’ ಎಂದು ವರ್ಷದ ಹಿಂದೆ ನಾನು ಬರೆದಿದ್ದೆ. (ಇದು ಈಗಲೂ ಇದೇ ಹಾನಿಯನ್ನು ಉಂಟು ಮಾಡುತ್ತದೆ).

2015ರ ಆಗಸ್ಟ್‌ನಲ್ಲಿ ಕಾಶ್ಮೀರದಲ್ಲಿ ಸೇನೆ ಹಿನ್ನೆಲೆಗೆ ಸರಿದಿತ್ತು ಮತ್ತು ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಶ್ರೀನಗರದ ಬೀದಿಗಳಲ್ಲಿ ಸೇನೆಯ ಉಪಸ್ಥಿತಿ ಅಷ್ಟಾಗಿ ಕಾಣಿಸುತ್ತಿರಲಿಲ್ಲ. ಪ್ರವಾಸೋದ್ಯಮ ಚಿಗುರಲಾರಂಭಿಸಿತ್ತು.

ಆದರೆ, ಈ ತುಲನಾತ್ಮಕ ಶಾಂತಿ ಮುಂದುವರಿಯಬೇಕಿದ್ದರೆ, ಕಾಶ್ಮೀರದ ಜನರ ನ್ಯಾಯಬದ್ಧವಾದ ಹಲವು ದೂರುಗಳಿಗೆ ಪರಿಹಾರ ಕಂಡುಕೊಳ್ಳಲು ಭಾರತ ಸರ್ಕಾರ ಹೆಚ್ಚು ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕಿತ್ತು.

ನನ್ನ ಲೇಖನವನ್ನು ನಾನು ಹೀಗೆ ಕೊನೆಗೊಳಿಸಿದ್ದೆ: ‘ಸ್ವಲ್ಪವಷ್ಟೇ ತೆರೆದುಕೊಂಡಿರುವ ಕಿಟಕಿ ಕಾಶ್ಮೀರದಲ್ಲಿ ಕಾಣಿಸಿಕೊಂಡಿದೆ; ಚಿಂತಿಸುವ ಮತ್ತು ಕಾಳಜಿ ಇರುವ ಸರ್ಕಾರ ಇದನ್ನು ನಿಧಾನವಾಗಿ ತೆರೆಯುವ ಕೆಲಸ ಮಾಡಬೇಕು. ಇಲ್ಲವಾದರೆ ಅದು ಮತ್ತೆ ಹಠಾತ್ ಮುಚ್ಚಿಹೋಗಬಹುದು’.

ವರದರಾಜನ್ ಆಗಲಿ, ನಾನಾಗಲಿ ಪ್ರವಾದಿಗಳು ಎಂದು ಹೇಳಿಕೊಳ್ಳಲಾಗದು. ನಾವು ಹೇಳಿದ್ದು ನಿಜವಾಯಿತು ಎಂಬ ಭಾವನೆ ನನ್ನಲ್ಲಾಗಲಿ ಅವರಲ್ಲಾಗಲಿ ಇಲ್ಲ. ಕಾಶ್ಮೀರಿಗಳನ್ನು ಎಲ್ಲ ಸರ್ಕಾರಗಳು ಅಸಡ್ಡೆ ಮತ್ತು ತಾತ್ಸಾರದಿಂದಲೇ ಕಂಡಿವೆ ಎಂಬುದು ಈ ಪ್ರದೇಶದ ಮತ್ತು ಇಲ್ಲಿನ ಹಿಂಸಾತ್ಮಕ ಇತಿಹಾಸ ಬಲ್ಲ ಎಲ್ಲರಿಗೂ ತಿಳಿದಿರುವಂತಹುದೇ ಆಗಿದೆ.

ಹಾಗಿದ್ದರೂ, ಮುಂದಿನ ಸರ್ಕಾರ ಅದನ್ನು ಸರಿಪಡಿಸುತ್ತದೆ ಎಂದು ನಾವು ಆಶಿಸುತ್ತಲೇ ಬಂದಿದ್ದೇವೆ. ಆದರೆ ಹಾಗೆ ಮಾತ್ರ ಎಂದೂ ಆಗಿಲ್ಲ.

ಇತ್ತೀಚೆಗೆ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ಬಿಜೆಪಿಯ ಹಿರಿಯ ಮುಖಂಡ ವಿನಯ ಸಹಸ್ರಬುದ್ಧೆ ನೀಡಿದ ಸಂದರ್ಶನದಲ್ಲಿ ಕಾಶ್ಮೀರದಲ್ಲಿ ಈಗ ನಡೆಯುತ್ತಿರುವ ದುರಂತಮಯ ಸಂಘರ್ಷದ ಬಗ್ಗೆ ಹೀಗೆ ಹೇಳಿದ್ದಾರೆ: ‘ಉಪಶಮನ, ಸಂವಾದ ಮತ್ತು ಮಾತುಕತೆಗಳೆಲ್ಲವೂ ಕೇಳುವುದಕ್ಕೆ ಚಂದದ ಪದಗಳು.

ಆದರೆ ಹೆಚ್ಚಾಗಿ ಸ್ವಯಂಕೃತವಾಗಿರುವ ಮತ್ತು ಒಂದು ವರ್ಗದ ಜನರು ಮತ್ತೆ ಮತ್ತೆ ಮಾಡಿಕೊಳ್ಳುವ ಗಾಯವನ್ನು ಸರ್ಕಾರ ವಾಸಿ ಮಾಡುವುದು ಹೇಗೆ?’

ಈ ಎಲ್ಲ ವರ್ಷಗಳಲ್ಲಿ ಕಾಶ್ಮೀರ ಮತ್ತು ಕಾಶ್ಮೀರದ ಜನರ ಬಗ್ಗೆ ನಾವು ಹಲವು ಮೂರ್ಖ ಹೇಳಿಕೆಗಳನ್ನು ನೋಡಿದ್ದೇವೆ. ಅವುಗಳಲ್ಲೆಲ್ಲ ಇದು ಅತಿ ಮೂರ್ಖವಾದ ಹೇಳಿಕೆ. ಶೇಖ್ ಅಬ್ದುಲ್ಲಾ ಅವರನ್ನು ಅಕ್ರಮವಾಗಿ ಬಂಧಿಸಿ ವಶದಲ್ಲಿ ಇರಿಸಿಕೊಂಡದ್ದು, ಅವರನ್ನು ಪದಚ್ಯುತಗೊಳಿಸಿ ಭ್ರಷ್ಟ ಮತ್ತು ಸ್ವಜನಪಕ್ಷಪಾತಿ ಬಕ್ಷಿ ಗುಲಾಂ ಮೊಹಮ್ಮದರನ್ನು ಅಧಿಕಾರಕ್ಕೇರಿಸಿದ್ದು, ನಂತರ ನಡೆದ ಚುನಾವಣೆಗಳಲ್ಲಿ ಅಕ್ರಮ ಎಸಗಿದ್ದು, 370ನೇ ವಿಧಿಯನ್ನು ಶಿಥಿಲಗೊಳಿಸುವ ಯತ್ನ.

ಸಂವಿಧಾನದ ಈ ವಿಧಿಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗುವುದು ಎಂದು ಆಗಾಗ ನೀಡುವ ಹೇಳಿಕೆಗಳು, ಪ್ಯಾಲೆಸ್ಟೀನ್ ಮತ್ತು ಟಿಬೆಟ್‌ಗಳಲ್ಲಿ ಆದ ಹಾಗೆ ಹೊರಗಿನವರನ್ನು ತಂದು ಕಣಿವೆಯಲ್ಲಿ ನೆಲೆಯೂರಿಸುವ ಬೆದರಿಕೆಗಳು, ಕಳೆದ ಎರಡೂವರೆ ದಶಕಗಳಿಂದ ಕಣಿವೆಯಲ್ಲಿ ಅಸಹನೀಯವಾಗಿರುವ ಸೇನೆಯ ಉಪಸ್ಥಿತಿ, ಪೊಲೀಸ್ ಮತ್ತು ಸೇನೆಯ ಗೋಲಿಬಾರ್‌ನಲ್ಲಿ ಮುಗ್ಧರ ಹತ್ಯೆ, ಅರೆ ಸೇನಾ ಪಡೆಗಳು ಮತ್ತು ಸೇನೆಯಿಂದಾದ ಅತ್ಯಾಚಾರ ಮತ್ತು ಚಿತ್ರಹಿಂಸೆ ಪ್ರಕರಣಗಳಿಗೆ ಯಾವ ಶಿಕ್ಷೆಯೂ ಆಗದಿರುವುದು ಮುಂತಾದವುಗಳು ‘ಸ್ವಯಂಕೃತ’ ಗಾಯಗಳು ಎಂದು ಸಹಸ್ರಬುದ್ಧೆ ಭಾವಿಸಿದ್ದಾರೆಯೇ?

ವಾಸ್ತವದಲ್ಲಿ, ಕಾಶ್ಮೀರಿ ಜನರ ಮೇಲೆ ಆಗಿರುವ ಈ ಗಾಯಗಳಲ್ಲಿ ಹೆಚ್ಚಿನವುಗಳನ್ನು ಮಾಡಿರುವುದು ಬಿಜೆಪಿ ಅಲ್ಲ. ನಾನು ಸಾಮಾನ್ಯವಾಗಿ ವಾದಿಸುವಂತೆ (ಈ ಅಂಕಣದಲ್ಲಿ ಮತ್ತು ‘ಇಂಡಿಯಾ ಆಫ್ಟರ್ ಗಾಂಧಿ’ ಪುಸ್ತಕದಲ್ಲಿ ವಿವರವಾಗಿ) ಕಾಶ್ಮೀರಕ್ಕೆ ಸಂಬಂಧಿಸಿ ಆಗಿರುವ ತಪ್ಪುಗಳ ದೊಡ್ಡ ಹೊಣೆಯನ್ನು ಕಾಂಗ್ರೆಸ್ ಹೊತ್ತುಕೊಳ್ಳಲೇಬೇಕು.

ಆದರೆ, ಕೆಲವು ಗಂಭೀರ ತಪ್ಪುಗಳನ್ನು ಎಸಗಬೇಕು ಎಂದು ಬಿಜೆಪಿ ನಿರ್ಧರಿಸಿದೆ. ವಿನಯ ಸಹಸ್ರಬುದ್ಧೆ ಅವರ ಹೇಳಿಕೆಗಿಂತ ಸ್ವಲ್ಪವೇ ಸ್ವಲ್ಪ ಕಡಿಮೆ ಸಂವೇದನಾಶೀಲತೆಯ ಹೇಳಿಕೆಯೊಂದನ್ನು ಬಿಜೆಪಿಪರ ಲೇಖಕ ಮತ್ತು ಸಂಸದ ಸ್ವಪನ್ ದಾಸ್‌ಗುಪ್ತಾ ನೀಡಿದ್ದಾರೆ. ‘ಈಗಿನ ಕಾಠಿಣ್ಯ ಹೆಚ್ಚು ಪ್ರೀತಿ ತೋರುವುದಕ್ಕೆ ನೆರವಾಗುವ ಪ್ರಕ್ರಿಯೆ’ ಎಂದು ಅವರು ಕಾಶ್ಮೀರದಲ್ಲಿ ನಡೆಯುತ್ತಿರುವ ಬಲಪ್ರಯೋಗವನ್ನು ಬಣ್ಣಿಸಿದ್ದಾರೆ.

ಪ್ರೀತಿ ಕಾಣುವ ಮೊದಲು ಕಾಶ್ಮೀರದ ಜನರು ಇನ್ನೆಷ್ಟು ಕಾಠಿಣ್ಯವನ್ನು ಕಾಣಬೇಕು ಮತ್ತು ಅನುಭವಿಸಬೇಕು? ಭಾರತದ ರಾಜಕಾರಣಿಗಳು ಮತ್ತು ಭಾರತದ ಸರ್ಕಾರದಿಂದ ಕಾಶ್ಮೀರದ ಜನರು ಅನುಭವಿಸಿರುವ ಕಾಠಿಣ್ಯದಲ್ಲಿ ಹೆಚ್ಚಿನ ಪ್ರಮಾಣ ಮತ್ತು ಕಡಿಮೆ ಪ್ರಮಾಣ ಎಂಬ ವ್ಯತ್ಯಾಸ ಮಾತ್ರ ಇದೆ. (ಎರಡು ಸಂದರ್ಭಗಳಲ್ಲಿ ಮಾತ್ರ ಕಾಶ್ಮೀರದ ಜನರು ಪ್ರೀತಿಯನ್ನು ಅನುಭವಿಸಿದ್ದಾರೆ- ಮೊದಲನೆಯದು, 1947ರಲ್ಲಿ ಮಹಾತ್ಮ ಗಾಂಧಿ ಕಣಿವೆಗೆ ಭೇಟಿ ಕೊಟ್ಟ ಸಂದರ್ಭವಾದರೆ ಎರಡನೆಯದು 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಭೇಟಿ.)

ಅದೇನೇ ಇದ್ದರೂ, ಪ್ರೀತಿ ತೋರುವುದಕ್ಕೆ ಮೊದಲು ಕಾಠಿಣ್ಯದ ಅನುಭವವಾಗಬೇಕು ಎಂಬುದು ಹಳೆಯ ಶಾಲಾ ಮಾಸ್ತರರ ನೀತಿ ಅಥವಾ ವಸಾಹತುಶಾಹಿ ಅಧಿಕಾರಿ ತನ್ನ ಪ್ರಜೆಗಳನ್ನು ನೋಡುವ ರೀತಿಯಂತಿದೆಯೇ ಹೊರತು ಭಾರತದ ಸಂಸತ್ತಿನಲ್ಲಿ ಸಂಸದನೊಬ್ಬ ಮಾತನಾಡುವ ರೀತಿಯಂತೆ ಇಲ್ಲ.

ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಕಾಶ್ಮೀರದಲ್ಲಿ ಬಿಜೆಪಿಯ ಮುಖ್ಯ ವ್ಯಕ್ತಿ. ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಕಾಶ್ಮೀರದಲ್ಲಿ ನಡೆದ ಗಲಭೆ ಸರ್ಕಾರಕ್ಕೆ ‘ಅನಿರೀಕ್ಷಿತ’ವಾಗಿತ್ತು ಎಂದು ಹೇಳಿದ್ದಾರೆ.

ಕಾಶ್ಮೀರದ ಎಷ್ಟು ಜನರ ಜತೆ ಮಾತನಾಡಿ ಮಾಧವ್ ಅವರು ಈ ನಿರ್ಧಾರಕ್ಕೆ ಬಂದರು ಎಂಬ ಪ್ರಶ್ನೆ ಏಳುತ್ತದೆ. ಸಿದ್ದಾರ್ಥ ವರದರಾಜನ್ ಮತ್ತು ಇತರ ಹಲವರು ಗಮನಿಸಿದಂತೆ, ಇಲ್ಲಿ ಪರಿಸ್ಥಿತಿ ಸಾಕಷ್ಟು ಶಾಂತವಾಗಿರುವಾಗಲೂ ಜನರಲ್ಲಿ ಸಂಗ್ರಹವಾಗಿರುವ ಅತೃಪ್ತಿ ಬೂದಿ ಮುಚ್ಚಿದ ಕೆಂಡದಂತಿರುತ್ತದೆ. ‘ಬೀದಿಗಳಲ್ಲಿ ಗಲಭೆ ಸ್ಫೋಟಗೊಳ್ಳಬಹುದು ಎಂದು ನಿರೀಕ್ಷಿಸಲಾಗಿರಲಿಲ್ಲ.

ಹಾಗಾಗಿ, ಆರಂಭದಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಸ್ವಲ್ಪ ಮಟ್ಟಿಗೆ ಗೊಂದಲ ಇತ್ತು’ ಎಂದು ಸಂದರ್ಶನದಲ್ಲಿ ಮಾಧವ್ ಹೇಳಿದ್ದಾರೆ.

ಆದರೆ, ಗೊಂದಲ ಮತ್ತೂ ಮುಂದುವರಿದಿದೆ. ಗೃಹ ಸಚಿವ ಸಮಾಧಾನಪಡಿಸುವಂತಹ ಹೇಳಿಕೆಗಳನ್ನು ನೀಡಿದರು; ರಕ್ಷಣಾ ಸಚಿವ ಮತ್ತು ಹಣಕಾಸು ಸಚಿವ ಪಾಕಿಸ್ತಾನವನ್ನು ದೂರಿದರು; ಸಂಧಾನ ಮತ್ತು ಮುಖಾಮುಖಿಯಾಗುವುದರ ನಡುವೆ ಪ್ರಧಾನಿ ಹೊಯ್ದಾಡಿದರು.

‘ಹಿಂಸೆ ಮತ್ತು ಕಲ್ಲು ತೂರಾಟದ ಪ್ರಚೋದನೆಗೆ ಪಾಕಿಸ್ತಾನಪ್ರೇರಿತ ಗುಂಪುಗಳು ಕಾರಣ’ ಎಂದು ಸಂದರ್ಶನದ ಒಂದು ಹಂತದಲ್ಲಿ ರಾಮ್ ಮಾಧವ್ ಹೇಳಿದರು. ‘ಇಂದಿನ ಅಶಾಂತಿಯ ಹಿಂದೆ ರಾಜ್ಯದ ಮುಖ್ಯ ಪ್ರತಿಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಇರುವ ಸಾಧ್ಯತೆಯೂ ಇದೆ’ ಎಂದೂ ಅವರು ಅಭಿಪ್ರಾಯಪಟ್ಟರು.

ಇದು  ಅತ್ಯುನ್ನತ ಹಂತದಲ್ಲಿ ಇರುವ ಗೊಂದಲವನ್ನು ಎತ್ತಿ ತೋರಿಸುತ್ತದೆ. ಯಾಕೆಂದರೆ, ಶೇಖ್ ಅಬ್ದುಲ್ಲಾ ಅವರ ದಿನಗಳಿಂದಲೇ ನ್ಯಾಷನಲ್ ಕಾನ್ಫರೆನ್ಸ್ ಪಾಕಿಸ್ತಾನದ ವಿರುದ್ಧ ಇದೆ. ಹೀಗಿರುವಾಗ ಅಶಾಂತಿ ಸೃಷ್ಟಿಸುತ್ತಿರುವವರ ಹಿಂದೆ ಪಾಕಿಸ್ತಾನ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ಗಳೆರಡೂ ಇರುವುದು ಹೇಗೆ ಸಾಧ್ಯ?

ಕಾಶ್ಮೀರದ ಬಗ್ಗೆ ಇತ್ತೀಚೆಗೆ ನೀಡಲಾದ ಕೆಲವು ಮೂರ್ಖ ಮತ್ತು ಸಂವೇದನಾರಹಿತ ಹೇಳಿಕೆಗಳನ್ನು ನಾನು ಇಲ್ಲಿ ಉಲ್ಲೇಖಿಸಿದ್ದೇನೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ (ಪಿಡಿಪಿ) ಹಿರಿಯ ಮುಖಂಡ ಮುಜಫ್ಫರ್ ಹುಸೇನ್ ಬೇಗ್ ಅವರು ಈ ಸಂದರ್ಭದಲ್ಲಿ ಅತ್ಯಂತ ಸೌಮ್ಯ ಮತ್ತು ರಚನಾತ್ಮಕ ಹೇಳಿಕೆ ನೀಡಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ.

ಕೇಂದ್ರ ಸರ್ಕಾರವು ಹುರಿಯತ್ ಕಾನ್ಫರೆನ್ಸ್ ಮತ್ತು ಇತರ ಪ್ರತ್ಯೇಕತಾವಾದಿ ಗುಂಪುಗಳ ಜತೆ ಮಾತುಕತೆ ಆರಂಭಿಸುವ ಮೊದಲು ಭಾರತ ಗಣರಾಜ್ಯಕ್ಕೆ ಬದ್ಧವಾಗಿರುವ ಮೂರು ಪ್ರಮುಖ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್, ರಾಜ್ಯ ಕಾಂಗ್ರೆಸ್ ಘಟಕ ಮತ್ತು ಬಿಜೆಪಿಯ ಮಿತ್ರಪಕ್ಷವಾದ ಪಿಡಿಪಿಗಳಿಗೆ ಏನು ಹೇಳಲಿಕ್ಕಿದೆ ಎಂಬುದನ್ನು ಕೇಳಬೇಕು ಮತ್ತು ಅವುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ವಿವಿಧ ಸುದ್ದಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಬೇಗ್ ಹೇಳಿದ್ದಾರೆ.

ಇಂತಹ ಸೌಹಾರ್ದ ಸಂಬಂಧ ಸ್ಥಾಪನೆಗೆ ದೊಡ್ಡ ತೊಡಕಾಗಿ ನಿಂತಿರುವುದು ಸಂಘ ಪರಿವಾರದ ಕಠಿಣ ನಿಲುವಿನ ಗುಂಪುಗಳು ಎಂಬುದನ್ನು ಬೇಗ್ ಗುರುತಿಸಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದತಿ, ಕಣಿವೆಯಲ್ಲಿ ಹಿಂದೂಗಳನ್ನು ನೆಲೆಯೂರಿಸುವುದು, ದನದ ಮಾಂಸ ಸೇವನೆ ಮೇಲೆ ನಿಷೇಧ, ರಾಜ್ಯದ ಧ್ವಜಕ್ಕೆ ನಿಷೇಧ ಮುಂತಾದ ನಿಲುವುಗಳೇ ಅಡ್ಡಿ ಎಂದು ಅವರು ಹೇಳಿದ್ದಾರೆ.

ಈ ಪ್ರಸ್ತಾವಗಳು ಸಹಜವಾಗಿಯೇ ಕಾಶ್ಮೀರಿಗಳಲ್ಲಿ ಭೀತಿ ಮತ್ತು ಅನುಮಾನ ಸೃಷ್ಟಿಸಿವೆ. ಈ ಪ್ರಸ್ತಾವಗಳನ್ನು- ಸದ್ಯಕ್ಕೆ ಕೈಬಿಡುವುದಲ್ಲ, ಸಂಪೂರ್ಣವಾಗಿ ತಿರಸ್ಕರಿಸಿಬಿಡದೇ ಇದ್ದರೆ ಅಪನಂಬಿಕೆ ಮುಂದುವರಿಯುತ್ತದೆ.

ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿಗಳು ಬಹಳ ದೀರ್ಘ ಕಾಲದಿಂದ ಪೂರ್ಣ ಮತ್ತು ಸಮರ್ಪಕ ಸ್ವಾಯತ್ತೆ ಬೇಕು ಎಂದು ಕೇಳುತ್ತಿದ್ದರೂ ಅದನ್ನು ನಿರಂತರವಾಗಿ ನಿರಾಕರಿಸಲಾಗಿದೆ. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿರುವ ಭಾರಿ ಬಹುಮತದಿಂದಾಗಿ ಈ ಪಕ್ಷಗಳು ಕೇಳುತ್ತಿರುವ ಸ್ವಾಯತ್ತೆ ನೀಡುವ ಧೈರ್ಯ ತೋರಬಹುದು ಎಂದು ಬೇಗ್ ಆಶಿಸಿದ್ದಾರೆ.

ಕಾಶ್ಮೀರ ವಿಚಾರದಲ್ಲಿ 1947ರಿಂದಲೇ ಪಾಕಿಸ್ತಾನ ಹಸ್ತಕ್ಷೇಪ ನಡೆಸುತ್ತಿದೆ ಮತ್ತು ಅದು ಇರುವ ತನಕ ಈ ಹಸ್ತಕ್ಷೇಪ ಮುಂದುವರಿಯಲಿದೆ ಎಂಬುದು ಖಚಿತ. ಆದರೆ ಕಾಶ್ಮೀರದಲ್ಲಿ ಇರುವ ಅತೃಪ್ತಿ ಸುಮ್ಮನೆ ಪಾಕಿಸ್ತಾನವನ್ನು ದೂಷಿಸುವಷ್ಟು ಸರಳವಲ್ಲ; ಅದು ಹೆಚ್ಚು ಆಳವಾದುದು, ವ್ಯಾಪಕವಾದುದು ಮತ್ತು ನಿರಂತರವಾದುದು.

ಕಾಶ್ಮೀರಕ್ಕೆ ಸಂಬಂಧಿಸಿ ಭಾರತ ಸರ್ಕಾರ ಹಲವು ತಪ್ಪುಗಳನ್ನು ಮಾಡಿರುವುದು ಮಾತ್ರವಲ್ಲ, ಹಲವು ಅಪರಾಧಗಳನ್ನೂ ಎಸಗಿದೆ. ಹಾಗಾಗಿ ಕಾಶ್ಮೀರಿ ಜನರ ವಿಶ್ವಾಸ ಮತ್ತು ಪ್ರೀತಿಯನ್ನು ಮರಳಿ ಗಳಿಸಲು ಸಾಕಷ್ಟು ಕ್ಷಮೆಯಾಚನೆ ಮಾಡಬೇಕಾಗುತ್ತದೆ.

2010ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪೂರ್ವಾಧಿಕಾರಿಗೆ ನೀಡಲಾದ ಸಲಹೆಯನ್ನು (ಆಗ ಅದನ್ನು ನಿರ್ಲಕ್ಷಿಸಲಾಯಿತು) ಈಗ ಅನುಷ್ಠಾನಕ್ಕೆ ತರುವ ಮೂಲಕ ಉತ್ತಮವಾಗಿ ಆರಂಭಿಸುವುದಕ್ಕೆ ಅವಕಾಶ ಇದೆ– ಸರ್ವ ಪಕ್ಷ ಸಭೆಗಳು ಮತ್ತು ಆರ್ಥಿಕ ಪ್ಯಾಕೇಜ್‌ಗಳನ್ನು ಮೀರಿ ನಡೆದುಕೊಳ್ಳಬೇಕು.

‘ಕಳೆದ ಕೆಲವು ವಾರಗಳಲ್ಲಿ ಉಂಟಾದ ಸಾವು ನೋವಿಗೆ ಯಾವುದೇ ಮುಚ್ಚುಮರೆ ಇಲ್ಲದೆ ಕ್ಷಮೆ ಯಾಚಿಸಬೇಕು; ಕಳೆದ ಇಷ್ಟೆಲ್ಲ ವರ್ಷಗಳಲ್ಲಿ ನ್ಯಾಯ ಒದಗಿಸಲು ಭಾರತ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಮತ್ತು ವಿನಯದಿಂದ ಒಪ್ಪಿಕೊಳ್ಳಬೇಕು’ ಮತ್ತು ಕೊನೆಯದಾಗಿ, ‘ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ಒಂದು ಅವಕಾಶ ಕೊಡಿ ಎಂದು ಕಾಶ್ಮೀರದ ಜನರನ್ನು ಕೇಳಿಕೊಳ್ಳಬೇಕು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT