ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಹುರಿಯತ್‌ನ ವ್ಯರ್ಥ ಆಲಾಪ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ನೋಡಿ, ಇನ್ನು ಕಾಶ್ಮೀರದಲ್ಲಿ ಹಿಂಸಾಚಾರ ನಡೆಯು­ವು­ದಿಲ್ಲ...’ ಎಂದು ಜುಬಿನ್ ಮೆಹ್ತಾ ಹೇಳಿದ್ದರು. ಶ್ರೀನಗರದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿ­ಕೊಡುವುದಕ್ಕಾಗಿ ಆ ಸುಂದರ ನಗರಕ್ಕೆ ತೆರಳುವ ಮೊದಲು ಅವರು ಭಾವನಾತ್ಮಕವಾಗಿ ಅಂತಹ ಆಶಯ ವ್ಯಕ್ತಪಡಿಸಿದ್ದರು. ಜರ್ಮನಿಯ ರಾಯ­ಭಾರಿ ಮೈಕಲ್ ಸ್ಟೇನರ್ ಆ ಕಾರ್ಯಕ್ರಮ ಸಂಘ­ಟಿಸಲು ಬಹಳಷ್ಟು ಶ್ರಮಿಸಿದ್ದರು. ‘ಇವತ್ತು ಇಡೀ ಜಗತ್ತು ಕಾಶ್ಮೀರದ ಸ್ಥಿತಿಗತಿ, ಆಗು­ಹೋಗು ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದೆ’ ಎಂದೂ ಆ ಸಂದರ್ಭದಲ್ಲಿ ಸ್ಟೇನರ್ ಹೇಳಿ­ದ್ದರು. ಈ ಎರಡೂ ಗ್ರಹಿಕೆಗಳು ಸತ್ಯ. ಆ ಸಂಗೀತ ಕಾರ್ಯ­ಕ್ರಮದ ಯಶಸ್ಸು, ಅವರಿಬ್ಬರ ವಾಸ್ತವಕ್ಕೆ ಹತ್ತಿರದ ಮಾತುಗಳನ್ನು ಎತ್ತಿಹಿಡಿದಿದೆ.

ಇಂತಹದ್ದೊಂದು ಸಂದೇಶದ ಸುತ್ತಲೂ ನಡೆದ ಘಟನಾವಳಿಗಳನ್ನು ಗಮನಿಸಿದಾಗ ಹುರಿಯತ್‌ ಮುಖಂಡರು ಎಡವಿದಂತೆ ಕಂಡು ಬರುತ್ತಾರೆ. ಪ್ರತ್ಯೇಕತಾವಾದಿಗಳೆಂದೇ ಗುರುತಿಸಿ­ಕೊಂಡಿರುವ ಅವರು ಆ ಸಂಗೀತ ಕಾರ್ಯಕ್ರಮ­ವನ್ನು ಬಹಿಷ್ಕರಿಸುವುದಾಗಿ ಹೇಳಿಕೆ ನೀಡಿ ಅನಗತ್ಯ ವಿವಾದಕ್ಕೆ ಕಾರಣರಾದರು. ಒಂದು ವೇಳೆ ಆ ಮುಖಂಡರಿಗೆ ಸಂಗೀತ ಕಾರ್ಯಕ್ರಮ ಇಷ್ಟವಿಲ್ಲ ಎಂದೆನಿಸಿದ್ದರೆ ನಿರ್ಲಕ್ಷಿಸಬಹುದಿತ್ತೇನೋ. ಆದರೆ ಅವರ ಅಂತಹದ್ದೊಂದು ಹೇಳಿಕೆ ವ್ಯಾಪಕ ಸುದ್ದಿಯಾಗಿಬಿಟ್ಟಿತು. ಇಂತಹದ್ದೊಂದು ಸಂಗೀತ ಕಾರ್ಯಕ್ರಮ ನಡೆದಿರುವುದು ಇದೇ ಮೊದಲೇ­ನಲ್ಲವಲ್ಲ. ಹಿಂದೆ ಶ್ರೀನಗರದ ಹೃದಯ ಭಾಗ­ದಲ್ಲಿಯೇ ಜಗ್‌ಜಿತ್ ಸಿಂಗ್ ಅವರು ಗಜಲ್ ಕಾರ್ಯಕ್ರಮ ನಡೆಸಿಕೊಟ್ಟಿದ್ದರು ತಾನೇ?

ಶ್ರೀನಗರದಲ್ಲಿ ಪಾಕಿಸ್ತಾನದಿಂದ ಬಂದಿದ್ದ ಸಂಗೀತಗಾರರ ಕಾರ್ಯಕ್ರಮವೂ ಹಿಂದೆ ನಡೆ­ದಿತ್ತು. ದೆಹಲಿಯ ಆಡಳಿತಗಾರರು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆ ಕಾರ್ಯಕ್ರಮಕ್ಕೆ ಬಂದು ಹೋಗುವವರಿಗೆ ವೀಸಾ ನೀಡುವ ಪ್ರಕ್ರಿಯೆಯನ್ನು ಚುರುಕಾಗಿ ಮುಗಿಸಿಕೊಟ್ಟರು.  ಆಗ ಯಾರೂ ಆ ಬಗ್ಗೆ ಹೆಚ್ಚು ಗಮನ ಹರಿಸಲೇ ಇಲ್ಲ. ಮಾಧ್ಯಮದವರಂತೂ ಅದನ್ನು ಗಂಭೀರ­ವಾಗಿ ಪರಿಗಣಿಸಲೂ ಇಲ್ಲ. ಇವತ್ತಿಗೂ ಹುರಿಯತ್ ಮುಖಂಡರ ‘ಸ್ವಾತಂತ್ರ್ಯ’ದ ಬೇಡಿಕೆ ಅಸ್ಪಷ್ಟವಾಗಿದೆ, ಗೊಂದಲದಿಂದ ಕೂಡಿದೆ ಎಂಬುದಕ್ಕೆ ಪಾಕಿಸ್ತಾನದಿಂದ ಬಂದವರ ಸಂಗೀತ ಕಾರ್ಯಕ್ರಮದ ವೇಳೆ ಅದು ತೆಗೆದುಕೊಂಡ ನಿಲುವು ಇನ್ನಷ್ಟು ಪುಷ್ಟಿ ನೀಡುತ್ತದೆ.

ಪಾಕ್ ಸಂಗೀತಗಾರರು ಬಂದು ಹೋದಾಗ ಅದರ ಬಗ್ಗೆ ಹುರಿಯತ್ ಮುಖಂಡರು ಯಾವುದೇ ತೆರ­ನಾದ ಪ್ರತಿಭಟನೆಯ ಮಾತುಗಳನ್ನು ಹೇಳ­ದಿದ್ದುದು ಆ ಸಂಘಟನೆಯನ್ನು ಅನುಮಾನದಿಂದ ನೋಡುವುದಕ್ಕೆ ಆಸ್ಪದ ನೀಡುತ್ತದೆ. ಭಾರತ ಮತ್ತು ಪಾಕ್‌ನಿಂದ ಸಮಾನ ಅಂತರವನ್ನು ಕಾಯ್ದುಕೊಂಡಿದ್ದೇವೆಂದು ಹೇಳುತ್ತಾ, ‘ಸ್ವತಂತ್ರ ಕಾಶ್ಮೀರ’ದ ಬಗ್ಗೆ ಮಾತನಾಡುವ ಹುರಿಯತ್ ಮುಖಂಡರು ಪಾಕಿಸ್ತಾನದ ಕಡೆ ವಾಲಿರು­ವುದನ್ನು ಇಂತಹ ನಡೆಗಳ ಮೂಲಕ ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

ಹುರಿಯತ್, ಇವತ್ತು ಒಡೆದ ಮನೆಯಾಗಿದೆ. ಕೆಲವರು ಸಯ್ಯದ್ ಷಾ ಗಿಲಾನಿ ಬೆನ್ನ ಹಿಂದಿದ್ದಾರೆ. ಈ ಗುಂಪು ‘ಕಾಶ್ಮೀರವು ಪಾಕಿ­ಸ್ತಾನಕ್ಕೆ ಸೇರಬೇಕು’ ಎನ್ನುತ್ತಿರುವಂತಿದೆ. ಯಾಸೀನ್ ಮಲಿಕ್ ನೇತೃತ್ವದ ಇನ್ನೊಂದು ಗುಂಪು ‘ಸ್ವತಂತ್ರ ಕಾಶ್ಮೀರ’ದ ಬಗ್ಗೆ ಆಗ್ರಹಿ­ಸುತ್ತಿದೆ. ಇನ್ನು ಕೆಲವು ಗುಂಪುಗಳು ನಿಖರ ನಿಲುವನ್ನೇ ಹೊಂದಿಲ್ಲ ಎಂಬುದು ವಿವಿಧ ಸಂದರ್ಭಗಳಲ್ಲಿ ಎದ್ದು ಕಾಣುತ್ತದೆ. ಕೆಲವೇ ಕೆಲವು ವರ್ಷಗಳ ಹಿಂದೆ ಕಾಶ್ಮೀರ ಪ್ರದೇಶವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೇ ಅಥವಾ ಭಾರತ­ದೊಳಗೇ ಇರಬೇಕೇ ಎಂಬ ಆಯ್ಕೆಯನ್ನು ನೀಡಿ ಜನಮತ ಗಣನೆ ನಡೆಸಿದ್ದರೆ ಬಹಳಷ್ಟು ಕಾಶ್ಮೀರಿ­ಗಳು ಪಾಕಿಸ್ತಾನದತ್ತಲೇ ಒಲವು ತೋರಿಸು­ತ್ತಿದ್ದರೇನೋ. ಆದರೆ, ಇವತ್ತು ಗಮನಾರ್ಹ ಸಂಖ್ಯೆಯಲ್ಲಿ ಆ ಪ್ರದೇಶದ ಮಂದಿ ‘ಸ್ವಾತಂತ್ರ್ಯ’­ವನ್ನೇ ಬಯಸುತ್ತಿದ್ದಾರೆ. ಇಲ್ಲಿ ಯಾಸೀನ್ ಮಲಿಕ್ ಅಂತಹವರ ವಿಚಾರಧಾರೆಯ ಪ್ರಭಾವ ಇಲ್ಲವೆನ್ನುವಂತಿಲ್ಲ.

‘ಸ್ವಾತಂತ್ರ್ಯ’ ಅಥವಾ ‘ಆಜಾದಿ’ ಪರಿಕಲ್ಪನೆ ಒಂದು ಸುಂದರ ಚಿಂತನೆಯ ಸ್ವರೂಪವಷ್ಟೇ ಹೊರತು ವಾಸ್ತವಿಕ ನೆಲೆಯಲ್ಲಿ ಅದು ಸುಲಭ ಸಾಧ್ಯವಲ್ಲ ಎಂಬ ಸತ್ಯ ಹುರಿಯತ್ ಮುಖಂಡ­ರಿಗೆ ಅರಿವಾಗುತ್ತಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ನೀಡಿ ಹೊರಟು ನಿಂತಿದ್ದ ಬ್ರಿಟಿಷರು ‘ನೀವು ಸ್ವತಂತ್ರ­ವಾಗಿಯಾದರೂ ಇರಬಹುದು ಅಥವಾ ಭಾರತ ಇಲ್ಲವೇ ಪಾಕಿಸ್ತಾನದ ಜತೆಗಾದರೂ ಸೇರಿಕೊಳ್ಳ­ಬಹುದು’ ಎಂದು ಎಲ್ಲಾ ಸಂಸ್ಥಾನಗಳಿಗೆ ಸಂದೇಶ ಕಳುಹಿಸಿದ್ದರು. ಆಗ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿಸಿಂಗ್ ತಮ್ಮ ಸಂಸ್ಥಾನ ಸ್ವತಂತ್ರವಾಗಿಯೇ ಉಳಿಯಲಿದೆ ಎಂದು ಘೋಷಿಸಿದರು. ಆದರೆ ಸುತ್ತಲೂ ಭೂಮಿ­ಯನ್ನೇ ಹೊಂದಿರುವ ಆ ಸಂಸ್ಥಾನ ಹೊರ ಜಗತ್ತಿನ ಜತೆಗೆ ಸಂಪರ್ಕ ಇರಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನವನ್ನು ಅವಲಂಬಿಸಲೇ ಬೇಕಾದಂತಹ ಪರಿಸ್ಥಿತಿ ಉಂಟಾಗಿತ್ತು. ಆಗ ಆ ಮಹಾರಾಜ ಯಾವುದೇ ಒಂದು ದೇಶವನ್ನು ಅವಲಂಬಿಸಲು ಇಷ್ಟಪಡಲಿಲ್ಲ.

ಆದರೆ ಮುಸ್ಲಿಮರೇ ಬಹುಸಂಖ್ಯಾತರಾಗಿ­ರುವ ಜಮ್ಮು ಮತ್ತು ಕಾಶ್ಮೀರವು ಪಾಕಿಸ್ತಾನ-­ದೊಳಗೆ ಸಹಜವಾಗಿಯೇ ಸೇರಲಿದೆ ಎಂದು ಪಾಕಿಸ್ತಾನ ಸರ್ಕಾರ ಅಂದು ನಿರೀಕ್ಷಿಸಿತ್ತು. ಆ ರೀತಿ ನಡೆಯಲಿಲ್ಲವಾದ್ದರಿಂದ ಪಾಕ್ ಸಿಡಿಮಿಡಿ­ಗೊಂಡಿತ್ತು. ಅದು ದಂಗೆಕೋರರನ್ನು ಕಾಶ್ಮೀರ ಪ್ರದೇಶದೊಳಗೆ ಕಳುಹಿಸಿತು. ಅದರ ಬೆನ್ನಿಗೇ ಬೆಂಬಲವಾಗಿ ಸೇನೆಯನ್ನೂ ಕಳುಹಿಸಿತು. ಆಗ ಮಹಾರಾಜ ಹರಿಸಿಂಗ್, ಭಾರತ ಸರ್ಕಾರದ ನೆರವು ಕೋರಿದರು. ಭಾರತದೊಳಗೆ ಸೇರಿ­ಕೊಂಡರೆ ಮಾತ್ರ ಸೇನೆಯನ್ನು ನೆರವಿಗೆ ಕಳುಹಿ­ಸುವುದಾಗಿ ಭಾರತ ಸರ್ಕಾರ ಹರಿಸಿಂಗ್‌ಗೆ ಹೇಳಿತು. ಆಗ ಹರಿಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರ ಸಂಸ್ಥಾನವನ್ನು ಭಾರತದೊಳಗೆ ವಿಲೀನಗೊಳಿಸುವುದಾಗಿ ಸಹಿ ಹಾಕಿಕೊಟ್ಟರು.

ಆದರೆ ಇವತ್ತು ಹುರಿಯತ್ ಸಂಘಟನೆಗೆ ಎಲ್ಲವೂ ಸಲೀಸಾಗಿಲ್ಲ. ಅಂದು ಮಹಾರಾಜ ಹರಿಸಿಂಗ್ ಎದುರಿಸಿದ್ದ ಸಮಸ್ಯೆಗಿಂತಲೂ ಕಗ್ಗಂಟಾದ ಸಮಸ್ಯೆ ಎದುರಲ್ಲಿದೆ ಎಂಬುದನ್ನು ಹುರಿಯತ್ ಮುಖಂಡರು ಮರೆಯಬಾರದು. ಜಮ್ಮು ಮತ್ತು ಕಾಶ್ಮೀರದ ಎರಡು ಭಾಗಗಳ ಜನರು ‘ಸ್ವತಂತ್ರ’ರಾಗಲು ವಿರೋಧಿ ಸುತ್ತಿದ್ದಾರೆ. ಜಮ್ಮು ಪ್ರದೇಶದಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರು ‘ಸ್ವತಂತ್ರ ಕಾಶ್ಮೀರ’ವನ್ನು ಕಟುವಾಗಿ ವಿರೋಧಿಸಿದರೆ, ಬೌದ್ಧ ಧರ್ಮೀಯರೇ ಬಹುಸಂಖ್ಯಾತರಾಗಿರುವ ಲಡಾಖ್ ಪ್ರಾಂತ್ಯದ ಮಂದಿ ಭಾರತದೊಳಗೆ ಕೇಂದ್ರಾಡಳಿತ ಪ್ರದೇಶವಾಗಿರುವುದಕ್ಕೆ ಹೆಚ್ಚು ಇಷ್ಟಪಡುತ್ತಾರೆ. ಹೀಗಾಗಿ ಕಾಶ್ಮೀರ ಕಣಿವೆಯ ಕೇವಲ ಒಂದು ಚಿಕ್ಕ ಪ್ರದೇಶವೊಂದು ‘ಸ್ವಾತಂತ್ರ್ಯ’ ಬಯಸುತ್ತಿದೆ ಎಂದರೆ ಅತಿಶಯೋಕ್ತಿ­ಯಂತೂ ಅಲ್ಲ. ಏಕೆಂದರೆ ಆ ಪುಟ್ಟ ಕಣಿವೆ ಪ್ರದೇಶದಲ್ಲಿ ಮುಸಲ್ಮಾನರ ಸಂಖ್ಯೆಯೇ ಶೇ 98ರಷ್ಟಿದೆ.

ಭಾರತದ ರಾಜಕಾರಣದಲ್ಲಿ ಸಕ್ರಿಯ­ವಾಗಿರುವ ಬಹುತೇಕ ರಾಜಕೀಯ ಪಕ್ಷಗಳು ಜಾತಿ, ಮತಗಳ ಲೆಕ್ಕಾಚಾರವನ್ನು ಕಡೆಗಣಿಸು­ವುದೇ ಇಲ್ಲ. ಕಮ್ಯುನಿಸ್ಟರೂ ಇದರಿಂದ ಹೊರತಲ್ಲ. ಹೀಗಾಗಿ ಭಾರತದ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲ ಹುರಿಯತ್ ಸಂಘಟನೆಗೆ ಸಿಗುವ ಸಾಧ್ಯತೆ ಇಲ್ಲ. ಅದಲ್ಲದೆ­ಯೂ ಯಾವುದೇ ರಾಜಕೀಯ ಪಕ್ಷವೂ ಕಾಶ್ಮೀರ ಪ್ರದೇಶ ‘ಸ್ವತಂತ್ರ’ಗೊಳ್ಳುವುದನ್ನು ಬೆಂಬಲಿಸು­ವುದಿಲ್ಲ ಎನ್ನುವುದಂತೂ ನಿಜ.

ದೇಶ ವಿಭಜನೆಗೊಂಡು 66 ವರ್ಷಗಳು ಉರುಳಿವೆ. ವಿಭಜನೆಯ ಸಂದರ್ಭದಲ್ಲಿ ಉಂಟಾದ ಗಾಯಗಳ ನೆನಪು ಇಷ್ಟೊಂದು ವರ್ಷಗಳ ಮೇಲೂ ಕಾಡುತ್ತಲೇ ಇವೆ. ಪರಿಸ್ಥಿತಿ ಹೀಗಿರುವಾಗ ಇನ್ನೊಂದು ವಿಭಜನೆಗೆ ಭಾರತದ ಮಂದಿ ಒಪ್ಪುತ್ತಾರೆ ಎಂದು ಹುರಿಯತ್ ಅದು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ? ಒಂದು ವೇಳೆ ಧಾರ್ಮಿಕ ನೆಲೆಯಲ್ಲಿಯೇ ಅಂತಹದ್ದೊಂದು ವಿಭಜನೆ ಸಾಧ್ಯವಾಯಿತು ಎಂದಿಟ್ಟುಕೊಳ್ಳಿ, ಆ ನಂತರ ಆ ಭೂಪ್ರದೇಶದಲ್ಲಿ ಈಗಿನಂತೆ ಜಾತ್ಯತೀತ ವ್ಯವಸ್ಥೆ ಇರಲು ಸಾಧ್ಯವೇ? ಹೌದು, ಇವತ್ತು ಭಾರತದಲ್ಲಿರುವ ಹದಿನೈದು ಕೋಟಿ ಮುಸ್ಲಿಮರಿಗೂ ಇತರ ಧರ್ಮದವರಿಗೂ ಯಾವುದೇ ವ್ಯತ್ಯಾಸವಿಲ್ಲ. ಎಲ್ಲರೂ ಸರಿ ಸಮಾನ­ರಾಗಿ ಬದುಕುತ್ತಿದ್ದಾರೆ. ಇಲ್ಲಿ ಮುಸ್ಲಿಮರನ್ನು ಯಾವುದೇ ಕಾರಣಕ್ಕೂ ನಿರಾಶ್ರಿತರಂತೆ ಯಾರೂ ಕಂಡಿಲ್ಲ. ಆದರೆ ಕಾಶ್ಮೀರ ಕಣಿವೆ ಒಂದು ವೇಳೆ ವಿಭಜನೆಗೊಂಡಿತು ಎಂದಿಟ್ಟು­ಕೊಳ್ಳಿ,  ಆ ನಂತರದ ಭೀಕರ ಪರಿಸ್ಥಿತಿಯನ್ನು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆಯೇ ಭಾರತ ಮತ್ತು ಪಾಕಿಸ್ತಾನ ಈಗಾಗಲೇ ಎರಡು ಪ್ರಮುಖ ಯುದ್ಧಗಳನ್ನು ನಡೆಸಿವೆ. ಈ ನಡುವೆ ಕಾರ್ಗಿಲ್‌ನಲ್ಲಿಯೂ ದೊಡ್ಡಮಟ್ಟದಲ್ಲಿಯೇ ಕದನ ನಡೆದು ಅಪಾರ ಪ್ರಾಣಹಾನಿಗಳಾಗಿವೆ. ಕಣಿವೆ ಮಾತ್ರ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರದ ಆಡಳಿತದಲ್ಲಿಯೇ ಉಸಿರಾಡುತ್ತಿದೆ. ‘ಸ್ವಾತಂತ್ರ್ಯ’ಕ್ಕಾಗಿ ಹೋರಾಡಿದ ಸಾವಿರಾರು ಮಂದಿ ಕಾಶ್ಮೀರಿಗಳು ಈಗಾಗಲೇ ಪ್ರಾಣತ್ಯಾಗ ಮಾಡಿದ್ದಾರೆ. ಭಾರತದ ಮಟ್ಟಿಗೆ ಅವರೆಲ್ಲರೂ ನುಸುಳುಕೋರರು. ಅಂತಹವರನ್ನೆಲ್ಲಾ ಸೇನೆ ಬರ್ಬರವಾಗಿ ಕೊಂದು ಹಾಕಿದೆ. ಸೇನೆಯ ಕಡೆಯೂ ಸಾವಿರಾರು ಮಂದಿ ಸತ್ತಿದ್ದಾರೆ.  ಇವತ್ತಿಗೂ ಪಾಕ್ ಗಡಿ ದಾಟಿ ಒಳ ನುಗ್ಗಿ ಈ ಪ್ರದೇಶದಲ್ಲಿ ಹಾನಿ ಎಸಗಲು ಯತ್ನಿಸುವವರನ್ನು ಸೇನೆ ಕೊಂದು ಹಾಕುತ್ತಲೇ ಇದೆ. ಇಂತಹ ಗೊಂದಲಗಳು ಕಾಶ್ಮೀರದಲ್ಲಿ ಸಾಮಾನ್ಯ.  ಉದಾಹರಣೆಗೆ ಹೇಳುವುದಾದರೆ ಮೊನ್ನೆ ಜುಬಿನ್ ಮೆಹ್ತಾ ಅವರ ಸಂಗೀತ ಕಾರ್ಯ­ಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದ್ದಾಗಲೇ ಕಾಶ್ಮೀರದ ದಕ್ಷಿಣ ಭಾಗದಲ್ಲಿರುವ ಸಿಆರ್‌ಪಿಎಫ್ ಕೇಂದ್ರದ ಮೇಲೆ ಉಗ್ರರು ಕ್ಷಿಪಣಿ ದಾಳಿ ನಡೆಸಿದ್ದರು. ಆ ದಿನ ಶ್ರೀನಗರದಲ್ಲಿ ಹರತಾಳಕ್ಕೆ ಕರೆ ನೀಡಲಾಗಿತ್ತು.

ಇಂತಹ ವೈಷಮ್ಯ, ಭಿನ್ನಾಭಿಪ್ರಾಯ, ಕದನಗಳಿಗೆಲ್ಲಾ ಅಂತ್ಯ ಹೇಳುವ ನಿಟ್ಟಿನಲ್ಲಿ 1972ರಲ್ಲಿ ಶಿಮ್ಲಾದಲ್ಲಿ ಒಪ್ಪಂದವೊಂದಕ್ಕೆ ಉಭಯ ದೇಶಗಳ ಪ್ರಧಾನಿಗಳು ಸಹಿ ಹಾಕಿದ್ದರು. ದ್ವಿಪಕ್ಷೀಯ ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆಯೂ ಸೇರಿದಂತೆ ಎಲ್ಲಾ ತೆರನಾದ ವಿವಾದ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಎರಡೂ ದೇಶಗಳ ಸರ್ಕಾರಗಳು ಒಕ್ಕೊರಲಿನ ಆಶಯ ವ್ಯಕ್ತ ಪಡಿಸಿದ್ದವು. ಆದರೆ ನಂತರ ಈ ನಿಟ್ಟಿನಲ್ಲಿ ಕೆಲವೇ ಕೆಲವು ಸಭೆಗಳು ನಡೆದವಷ್ಟೇ. ಎಲ್ಲಾ ಸಂದರ್ಭ­ಗಳಲ್ಲಿಯೂ ‘ಕಾಶ್ಮೀರ ಎಂಬ ಹಗ್ಗ’ವನ್ನು ಜಗ್ಗಾಡುವುದರಲ್ಲಿಯೇ ಕಾಲ ವ್ಯಯವಾಗುತ್ತಾ ಬಂದಿದೆ.

ಎರಡು ದೇಶಗಳಲ್ಲಿ ಯಾವುದಾದರೂ ಒಂದು ದೇಶವಾದರೂ ತನ್ನ ಪಟ್ಟನ್ನು ಸಡಿಲಿಸದ ಹೊರತು ಯಾವುದೇ ಮಾತುಕತೆ ಫಲಪ್ರದ­ವಾಗಲು ಸಾಧ್ಯವೇ ಇಲ್ಲ ಎಂಬ ಅಂಶ ಈಗಾ­ಗಲೇ ನಿಚ್ಚಳವಾಗಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯ ಭಾರತದ ಅವಿಭಾಜ್ಯ ಅಂಗವಾಗಿದ್ದು ಯಾವುದೇ ಕಾರಣಕ್ಕೂ ಅದರ ಒಂದಿಂಚು ನೆಲವನ್ನೂ ಕಳೆದುಕೊಳ್ಳಲು ಸಾಧ್ಯವೇ ಇಲ್ಲ ಎಂದು ದೆಹಲಿಯ ಆಡಳಿತಗಾರರು ಪಟ್ಟು ಹಿಡಿದಿದ್ದರೆ, ಇಸ್ಲಾಮಾಬಾದ್‌ನಲ್ಲಿ ಕುಳಿತಿರುವ ಆಡಳಿತಗಾರರು ಹೇಗಾದರೂ ಸರಿ ಕಾಶ್ಮೀರ­ವನ್ನು ಪಾಕಿಸ್ತಾನದೊಳಗೆ ಸೇರಿಸಿಕೊಳ್ಳುವುದೇ ಪರಮ ಧ್ಯೇಯ ಎಂಬ ನಿಲುವು ತಳೆದಿದ್ದಾರೆ.

ಇಂತಹ ಸಂದಿಗ್ಧದಲ್ಲಿ ಹುರಿಯತ್ ಮುಖಂಡರು ಪರಿಹಾರ ಹುಡುಕುತ್ತಿರುವುದು ಈ ದಿನಗಳಲ್ಲಿ ಅರ್ಥವನ್ನೇ ಕಳೆದುಕೊಂಡಿದೆ. ಇಂತಹ ಗೊಂದಲ­ಮಯ ಸ್ಥಿತಿಯಲ್ಲಿ ಆರು ದಶಕಗಳು ಉರುಳಿ ಹೋಗಿವೆ. ಈ ನಿಟ್ಟಿನಲ್ಲಿ ಅಂತರ­ರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಯತ್ನಗಳು ನಡೆದಿವೆ. ಆದರೆ ಫಲಶ್ರುತಿ ಕಾಣಲೇ ಇಲ್ಲ. ಈಗ ಈ ಎರಡೂ ದೇಶಗಳೇ ಒಗ್ಗೂಡಿ ಕುಳಿತು ಏನಾದರೂ ಪರಿಹಾರ ಕಂಡುಕೊಳ್ಳಲಿ ಎಂದು ಅಂತರರಾಷ್ಟ್ರೀಯ ಮಟ್ಟದ ಸಂಧಾನಕಾರರಿಗೂ ಅನ್ನಿಸಿರಬೇಕು.

ಹುರಿಯತ್ ಮುಖಂಡರು ಈ ಎಲ್ಲಾ ಸೂಕ್ಷ್ಮಗಳ ಬಗ್ಗೆ ಆಲೋಚಿಸಬೇಕಿದೆ, ಆತ್ಮ­ವಿಮರ್ಶೆ ಮಾಡಿಕೊಳ್ಳಬೇಕಿದೆ. ಅವರು ತಮ್ಮ ತಂತ್ರ, ಪರಿಕಲ್ಪನೆಗಳನ್ನೂ ಬದಲಾಯಿಸಿ­ಕೊಳ್ಳಲೇ ಬೇಕಿದೆ. ಅವರು ಮೊದಲಿಗೆ ಕಾಶ್ಮೀರ ವಿಧಾನಸಭೆಯಲ್ಲಿ ತಮ್ಮ ಧ್ವನಿ ಕೇಳುವಂತೆ ಮಾಡಲಿ. ಹುರಿಯತ್ ಸಂಘಟನೆ ಕಾಶ್ಮೀರ ಮುಖ್ಯಮಂತ್ರಿ ಪಟ್ಟವನ್ನು ತನ್ನ ಕೈಗೆ ತೆಗೆದು­ಕೊಳ್ಳಲಿ. ಅಲ್ಲಿ ನಿಂತು ಅವರು ‘ಸ್ವತಂತ್ರ ಕಾಶ್ಮೀರ’ದ ಬಗ್ಗೆ ಮಾತನಾಡಲಿ. ಅದು ಸಾಧ್ಯವೇ? ಅಷ್ಟರ ಮಟ್ಟಿಗೆ ಹುರಿಯತ್ ಕಾಶ್ಮೀರದಲ್ಲಿ ಜನ ಬೆಂಬಲ ಹೊಂದಿದೆಯೇ? ಜನರನ್ನು ಎಲ್ಲೆಂದರಲ್ಲಿ ಗುಂಪುಗೂಡಿಸುವುದು ಬಲು ಸುಲಭ. ಆದರೆ ಅದನ್ನೇ ಮತವಾಗಿ ಪರಿವರ್ತಿಸುವುದು ಅಷ್ಟು ಸುಲಭವಲ್ಲ ಎಂಬ ಸತ್ಯ ಹುರಿಯತ್‌ನವರಿಗೂ ಗೊತ್ತಿರಬಹುದು.

ಹುರಿಯತ್ ಸಂಘಟನೆಯ ಮಂದಿ ಏಕ­ಕಾಲಕ್ಕೆ ಹಲವು ಕುದುರೆಗಳನ್ನು ಏರುವ ತವಕದಲ್ಲಿರುವಂತಿದೆ. ಕಣಿವೆಯ ಪ್ರತಿಯೊಬ್ಬ­ರಿಗೂ ಪ್ರತಿಯೊಂದೂ ಸಿಗಬೇಕೆಂದು ಅದು ಆಶಿಸುತ್ತಿರುವಂತೆ ಕಂಡು ಬರುತ್ತಿದೆ. ಅದೇ ವೇಳೆ ಜಮ್ಮು ಮತ್ತು ಲಡಾಖ್ ಪ್ರದೇಶವೂ ಕಣಿವೆಯ ಜತೆಗಿರಬೇಕೆಂದು ಇಷ್ಟಪಡುತ್ತಾರೆ. ಇಡೀ ರಾಜ್ಯವೇ ತನ್ನ ಅಂಕಿತದಲ್ಲಿರಬೇಕೆಂದು ಹುರಿ­ಯತ್ ಬಯಸುತ್ತದೆ. ಹಾಗಿದ್ದರೆ ಅದು ಜಮ್ಮು ಮತ್ತು ಲಡಾಖ್ ಪ್ರದೇಶದ ಮಂದಿಯ ಮನಸ್ಸು ಗೆಲ್ಲಬೇಕು. ಅದು ಸಾಧ್ಯವೇ? ಏಕೆಂದರೆ ಈ ಎರಡೂ ಪ್ರದೇಶದ ಬಹುಸಂಖ್ಯಾತರು ಹುರಿ­ಯತ್‌ನ ನೆರಳು ಕಂಡರೆ ಸಿಡಿಮಿಡಿಗೊಳ್ಳುತ್ತಾರೆ, ದ್ವೇಷಿಸುತ್ತಾರೆ. ಯಾರೇ ಆಗಲೀ ಸಮಗ್ರ ಕಾಶ್ಮೀರವನ್ನು ಪ್ರತಿನಿಧಿಸಬೇಕೆಂದರೆ, ಅಂತಹ­ವರು ಜಮ್ಮು ಮತ್ತು ಲಡಾಖ್ ಪ್ರದೇಶಗಳಲ್ಲಿ ತಮ್ಮ ಪ್ರಭಾವ ಹೊಂದಿರಲೇ ಬೇಕು. ಅದೆಲ್ಲಾ ಸಾಧ್ಯವಾಯಿತು ಎಂದಿಟ್ಟುಕೊಳ್ಳಿ, ಆಗ ಪಾಕಿಸ್ತಾನದ ಪ್ರಭಾವಕ್ಕೆ ಸಿಲುಕುವ ‘ಆಜಾದ್ ಕಾಶ್ಮೀರ’ ಹುರಿಯತ್‌ನ ಮಾತು ಕೇಳಬೇಕು! ಇದೆಲ್ಲಾ ‘ರೇ... ಸಾಮಾಜ್ಯ’ದ ಕಲ್ಪನಾ ಲಹರಿ.

ನಿಮ್ಮ ಅನಿಸಿಕೆ ತಿಳಿಸಿ: : editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT