ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡುಕ ಹೆಲ್ತ್ ಇನ್ಸ್‌ಪೆಕ್ಟರ್

Last Updated 4 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಈ ಹಳ್ಳಿಯ ಕಾಲೇಜಿಗೆ ವರ್ಗವಾಗಿ ಹೋದೆ. ಅದು ಹೊಸದಾಗಿ ಆರಂಭವಾಗಿತ್ತು. ಅಲ್ಲಿ ಒಂದೇ ಒಂದು ತರಗತಿ ಇತ್ತು. ಹುಡುಗರ ಸಂಖ್ಯೆಯೂ ಅಷ್ಟಾಗಿ ಇರಲಿಲ್ಲ. ಹಳ್ಳಿಯ ಹುಡುಗರಿಗೆ ಅನುಕೂಲವಾಗಲೆಂದು ಸರ್ಕಾರದವರು ಈ ಕಾಲೇಜು ಕಟ್ಟಿಸಿದ್ದರೂ ಮಕ್ಕಳು ಮಾತ್ರ ದಾಖಲಾಗಿರಲಿಲ್ಲ. ಅಲ್ಲಿನ ವಿದ್ಯಾರ್ಥಿಗಳು ಅಷ್ಟೇ, ಹಳ್ಳಿಯಲ್ಲೇ ಕಾಲೇಜಿದ್ದರೂ ನಗರದ ಕಾಲೇಜಿಗೆ ಹೋಗುತ್ತಿದ್ದರು. ಈ ಹುಡುಗರನ್ನು ಹಿಡಿದು ಕೇಳಿದರೆ, ಇಲ್ಲಿ ಉಪನ್ಯಾಸಕರಿಲ್ಲ, ಹಾಸ್ಟೆಲ್ ಸೌಲಭ್ಯವಿಲ್ಲ, ನಗರಕ್ಕೆ ಹೋದರೆ ಈ ಯಾವ ತಾಪತ್ರಯಗಳೂ ಇರೋದಿಲ್ಲ ಎಂದು ಕಾರಣ ಕೊಟ್ಟರು. ಈ ಹಳ್ಳಿಯಿಂದ ನಗರಕ್ಕೆ ಹೋಗುವುದೂ ಅಷ್ಟು ಸುಲಭವಿರಲಿಲ್ಲ. ಆದರೂ ಅವರೆಲ್ಲಾ ಕಷ್ಟಬಿದ್ದು, ಹೆಣಗಾಡಿಕೊಂಡು ನಗರಗಳತ್ತ ಮುಖ ಮಾಡಿದ್ದರು.

ಈಗ ನಾನು ಹೊಸದಾಗಿ ಬಂದಿದ್ದೇನೆ. ಇನ್ನು ಕೆಲವೇ ದಿನದಲ್ಲಿ ಇನ್ನಷ್ಟು ಜನ ಉಪನ್ಯಾಸಕರು ಬರ್ತಾರೆ. ನಿಮ್ಮನ್ನು ಕಾಳಜಿಯಿಂದ ತಯಾರು ಮಾಡ್ತೀವಿ. ದಯವಿಟ್ಟು ನಮ್ಮಲ್ಲಿಗೇ ಬಂದು ಸೇರಿ. ಒಳ್ಳೇ ಪಾಠ ಮಾಡಿ ನಿಮ್ಮನ್ನು ಓದಿಸುವ ಜವಾಬ್ದಾರಿ ನಮ್ಮದು ಎಂದು ಪುಸಲಾಯಿಸಿ ಒಂದಿಷ್ಟು ವಿದ್ಯಾರ್ಥಿಗಳನ್ನು ಈ ಹಳ್ಳಿ ಕಾಲೇಜಿಗೆ ವಾಪಸ್ಸು ಎಳೆದು ತಂದೆ. ಆದರೆ ನಗರದ ರುಚಿ ಕಂಡಿದ್ದ ಕೆಲ ವಿದ್ಯಾರ್ಥಿಗಳು ನನ್ನ ಈ ಘರ್‌ವಾಪಸ್ಸಿ ಕಾರ್ಯಕ್ರಮವನ್ನು ಒಪ್ಪಲಿಲ್ಲ. ಹಳ್ಳಿ ಕಾಲೇಜಿನಲ್ಲಿದ್ದರೆ ತಮ್ಮ ವರ್ಚಸ್ಸಿಗೆ ಕುಂದೆಂದು ಅವರು ಭಾವಿಸಿ ಬಿಟ್ಟಿದ್ದರು.  ಹಳ್ಳಿ ಕಾಲೇಜಿನಲ್ಲಿದ್ದರೆ ಓದು ಮುಗಿಸಿ ಬೇಗ ಮನೆ ಸೇರಬೇಕು. ಆಗ ಮನೆಯಲ್ಲಿ ಕೆಲಸ ಹೇಳುತ್ತಾರೆ, ಈ ಸಂಕಟವೇಕೆ ಎಂದು ಕೆಲ ಮೈಗಳ್ಳರು ಹಿಂದೇಟು ಹಾಕಿದರು. ನಗರದ ಥಳಕು ಬಳುಕಿಗೆ ಈಗಾಗಲೇ ಮಾರುಹೋಗಿದ್ದ ಅವರನ್ನು ಮತ್ತೆ ಹಿಡಿದು ತರುವುದು ಅಸಾಧ್ಯದ ಕೆಲಸವಾಗಿತ್ತು. ಹೀಗಾಗಿ ಅಂಥವರನ್ನು ಸಂತೈಸಲು ಸಾಧ್ಯವಾಗದೆ  ಕೈಬಿಟ್ಟೆ.

ಕಾಲೇಜಿಗೆ ಪೂರ್ಣ ಪ್ರಮಾಣದ ಉಪನ್ಯಾಸಕರು ಬರುವ ಮೊದಲು ಪಾಪ ಆ ಹುಡುಗರಿಗೆ ಮೇಷ್ಟ್ರುಗಳೇ ಇರಲಿಲ್ಲ. ವಾರಕ್ಕೆ ಮೂರು ದಿನ ಪಕ್ಕದ ಕಾಲೇಜಿನಿಂದ ಬರುತ್ತಿದ್ದ ಮೇಡಂ ಒಬ್ಬರು ಅಷ್ಟೋ ಇಷ್ಟೋ ಪಾಠ ಮಾಡಿದ್ದರು. ಉಳಿದಂತೆ ಹುಡುಗರು ದಿನಾ ಆಟ ಆಡಿಕೊಂಡು ಕಾಲ ಕಳೆಯುತ್ತಿದ್ದರು. ನಾನು ಹೋದ ಮೊದಲ ದಿನವೂ ಈ ಹುಡುಗರು ರೋಡಿನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಹುಡುಗಿಯರು ಮರದ ನೆರಳಿನಲ್ಲಿ ಕುಂಟಬಿಲ್ಲೆ ಆಡುತ್ತಿದ್ದರು. ಕೆಲವರು ತರಗತಿಯಲ್ಲಿ ಕೂತು ಆರಾಮಾಗಿ ಹರಟೆ ಕೊಚ್ಚುತ್ತಿದ್ದರು. ಇನ್ನೊಂದಿಷ್ಟು ಜನ ಹತ್ತಿರದ ಕಾಡಿನಲ್ಲಿ ಹಣ್ಣುಗಳ ಆಯ್ದು ತಿನ್ನಲು ಹೋಗಿದ್ದರು.

ಈ ಕಾಲೇಜಿನಲ್ಲಿ ರುದ್ರಪ್ಪ ಎಂಬ ಅಟೆಂಡರ್ ಬಿಟ್ಟರೆ ಮತ್ತ್ಯಾರೂ ಇರಲಿಲ್ಲ. ಪ್ರಿನ್ಸಿಪಾಲರು ಅಂತ ಒಬ್ಬರಿದ್ದರೂ ಅವರು ತಿಂಗಳಿಗೊಂದು ಸಲ ಬೆಂಗಳೂರಿನಿಂದ ಬಂದು ಸಹಿ ಜಡಿದು ಹೋಗುತ್ತಿದ್ದರು. ಬೆಂಗಳೂರಿನಲ್ಲಿ ಏನೋ ತರ್ಲೆ ಎಬ್ಬಿಸಿದ್ದಾರೆಂದು ಅವರನ್ನು ಇಲ್ಲಿಗೆ ಪನಿಶ್‌ಮೆಂಟ್ ಟ್ರಾನ್ಸ್‌ಫರ್ ಮಾಡಲಾಗಿತ್ತು. ಅವರಿಗೂ ಈ ಹಳ್ಳಿಗೆ ಕಾಲಿಡಲು ಇಷ್ಟವಿರಲಿಲ್ಲ. ಅನಿವಾರ್ಯವಾಗಿ ಬಂದಿದ್ದ ಅವರು ‘ಈ ಕಾಲೇಜಿನಲ್ಲಿ ಹುಡುಗರೂ ನೆಟ್ಟಗಿಲ್ಲ. ಪಾಠ ಹೇಳುವ ಉಪನ್ಯಾಸಕರೂ ಇಲ್ಲ. ಇಂಥ ದರಿದ್ರ ಕಾಲೇಜಿನಲ್ಲಿ ನಾನೊಬ್ಬ ಇದ್ದು ಏನು ಭಜನೆ ಮಾಡಬೇಕಾ? ಆದಷ್ಟು ಬೇಗ ಇಲ್ಲಿಂದ ಟ್ರಾನ್ಸ್‌ಫರ್ ಮಾಡಿಸಿಕೊಂಡು ಹೋಗುತ್ತೇನೆ’ ಎಂದು ಊರವರಿಗೆಲ್ಲಾ ಟಾಂಟಾಂ ಮಾಡಿಕೊಂಡಿದ್ದರು. ಹೀಗಾಗಿ, ನೆನಪಾದಾಗೊಮ್ಮೆ ಕಾಲೇಜಿಗೆ ಬಂದು ಮುಖ ತೋರಿಸಿ ಹೋಗುತ್ತಿದ್ದರು.

ಊರಿನವರು ‘ನೀವು ಹೀಗೆಲ್ಲಾ ಯಾವಾಗ ಬೇಕೋ ಆಗ ಕಾಲೇಜಿಗೆ ಬಂದ್ರೆ ಸರಿಯಿರಲ್ಲ ನೋಡ್ರಿ ಪ್ರಿನ್ಸಿಪಾಲ್ರೆ. ಕಷ್ಟಪಟ್ಟು ಊರಿಗೆ ಕಾಲೇಜು ತಂದಿದ್ದೇವೆ. ಇದನ್ನು ನೀವು ಉಳಿಸಿ ಬೆಳೆಸಬೇಕು. ಅದನ್ನು ಬಿಟ್ಟು, ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಕಾಲೇಜಿಗೆ ಬಂದ್ರೆ ನಾವು ಸರ್ಕಾರಕ್ಕೆ ಕಂಪ್ಲೇಂಟ್ ಮಾಡ್ತೀವಿ ನೋಡ್ರಿ’ ಎಂದು ಗದರಿಸಿದರು.

ಇದರಿಂದ ಖುಷಿಗೊಂಡ ಪ್ರಾಂಶುಪಾಲರು ‘ಮೊದಲು ಆ ಕೆಲ್ಸ ಮಾಡಿ ಪುಣ್ಯ ಕಟ್ಕೊಳಿ. ನೀವು ನನ್ನ ಮೇಲೆ ದೂರು ಕೊಟ್ರೆ ನನಗೂ ಅನುಕೂಲವಾಗುತ್ತೆ. ಇದೇ ನೆವದಲ್ಲಿ ಮತ್ತೆ ಟ್ರಾನ್ಸ್‌ಫರ್ ಸಿಗುತ್ತೆ. ಈ ದರಿದ್ರ ಹಳ್ಳಿಗೆ ಬರೋ ಸಂಕಷ್ಟವೂ ತಪ್ಪುತ್ತೆ’ ಎಂದು ಹೆದರಿಸಲು ಬಂದವರನ್ನೇ ಉಲ್ಟಾ ಬೆದರಿಸಿ ಆಘಾತಗೊಳಿಸಿದರು. ‘ಇವನೆಂಥ ಭಂಡ ನನ್ಮಗ ಇದಾನ್ರಿ. ನಾವು ಸರ್ಕಾರಕ್ಕೆ ದೂರು ಬರೀತೀವಿ ಅಂದ್ರೆ ಬರೀರಿ ಅಂತಾನಲ್ರಿ. ಥೂ ಇವನ ಜನ್ಮಕ್ಕೆ ಬೆಂಕಿ ಹಾಕ’ ಎಂದು ಊರಿನವರು ಶಪಿಸಿಕೊಂಡು ಕಣ್ಮರೆಯಾದರು.

ಇಂಥ ಕಾಲೇಜಿಗೆ ಹೋದ ನನಗೆ ಅಲ್ಲಿನ ಹುಡುಗರ ಸ್ಥಿತಿ ಕಂಡು ಮರುಕ ಬಂದಿತು. ಇಡೀ ದಿನ ಅವರ ಜೊತೆ ಕಳೆಯುತ್ತಿದ್ದೆ. ಅವರಿಗೆ ನನ್ನ ಕೈಲಾದ ಎಲ್ಲಾ ಸಬ್ಜೆಕ್ಟ್‌ಗಳನ್ನೂ ಹೇಳಿ ಕೊಡುತ್ತಿದ್ದೆ. ಆ ಹುಡುಗರೂ ಮುಗ್ಧರು. ನಾನು ಹೇಳಿದ ಪಾಠಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದವು.

ಒಂದು ದಿನ ನಾನು ಬರುವ ಬಸ್ಸು ಹತ್ತು ನಿಮಿಷ ತಡವಾಗಿತ್ತು. ಬಸ್ಸು ಇಳಿದರೆ ಎದುರಿಗೇ ಕಾಲೇಜಿನ ಒಂಟಿ ತರಗತಿ ಎದ್ದು ಕಾಣುತ್ತಿತ್ತು. ನಾನು ಬರುವ ತನಕ ರಸ್ತೆಯಲ್ಲಿ ಆಟ ಆಡಿಕೊಂಡಿರುತ್ತಿದ್ದ ಹುಡುಗರು ನನ್ನ ಮುಖ ಕಾಣುತ್ತಲೇ ಓಡಿ ಹೋಗಿ ತರಗತಿ ಸೇರುತ್ತಿದ್ದರು. ಈ ದೃಶ್ಯ ನನಗೆ ಸಾಮಾನ್ಯವಾಗಿ ಹೋಗಿತ್ತು. ಆದರೆ ಇವತ್ತು ಏನಾಶ್ಚರ್ಯ! ಒಬ್ಬ ವಿದ್ಯಾರ್ಥಿಯೂ ದಾರಿಯಲ್ಲಿ ಕಾಣುತ್ತಿಲ್ಲ. ನೋಡಿದರೆ ಎಲ್ಲಾ ತರಗತಿಯಲ್ಲಿ ಹೋಗಿ ಶಿಸ್ತಾಗಿ ಕೂತಿದ್ದಾರೆ. ಒಂದಿನಿತೂ ಅವರ ಅಬ್ಬರವಿಲ್ಲ. ಇವತ್ತು ಏನಾಗಿದೆ ಇವರಿಗೆ ಎಂದು ನನಗೆ ದಿಗಿಲಾಯಿತು.

ಒಂದು ಕ್ಷಣ ಸಣ್ಣ ಹೆದರಿಕೆಯೂ ಮೂಡಿತು. ಓಹೋ ಯಾರೋ ಹಿರಿಯ ಅಧಿಕಾರಿಗಳು ಕಾಲೇಜಿಗೆ ಬಂದು ಬಿಟ್ಟಿದ್ದಾರೆ. ನಾನೋ ಹತ್ತು ನಿಮಿಷ ತಡವಾಗಿ ವಕ್ಕರಿಸಿದ್ದೇನೆ. ಇವತ್ತು ಏನ್ ಗ್ರಹಚಾರ ಕಾದಿದೆಯೋ ಏನೋ? ಇವತ್ತು ಉಗಿಸಿಕೊಳ್ಳೋದಂತೂ ಗ್ಯಾರಂಟಿ. ಅವರೇನಾದರೂ, ನಮ್ಮ ಅಮಾವಾಸ್ಯೆ ಪ್ರಿನ್ಸಿಪಾಲರಾಗಿರಬಹುದಾ? ಊಹ್ಞೂ ಇರಲಿಕ್ಕಿಲ್ಲ. ಯಾಕೆಂದರೆ ಅವರು ಪ್ರತ್ಯಕ್ಷವಾದರೂ ಮಧ್ಯಾಹ್ನದ ಮೇಲೇನೆ. ಬೆಂಗಳೂರಿನಿಂದ ಬೆಳಿಗ್ಗೆ ರೈಲು ಹತ್ತಿ ಇಲ್ಲಿಗೆ ಬರುವಾಗ ಕನಿಷ್ಠ ನಾಲ್ಕು ಗಂಟೆಯಾದರೂ ಆಗಿರುತ್ತೆ. ಬಂದರೂ ಆ ಗಿರಾಕಿ ಅಪ್ಪಿತಪ್ಪಿಯೂ ತರಗತಿಯೊಳಗೆ ಕಾಲಿಡೋದಿಲ್ಲ. ಹಂಗಿದ್ದ ಮೇಲೆ ಇವರ್‍್ಯಾರೋ ಇಲಾಖೆಯ ಹಿರಿಯ ಅಧಿಕಾರಿಗಳೇ ಇರಬೇಕು. ಏನಪ್ಪಾ ಮಾಡುವುದು ಈಗ ಎಂದು ಚಡಪಡಿಸಿಕೊಂಡೇ ನಿಧಾನವಾಗಿ ತರಗತಿಯ ಹತ್ತಿರ ಹೋದೆ. ಕಿಟಕಿಯಿಂದ ಇಣುಕಿ ನೋಡಿದೆ. ಹುಡುಗರು ಗಂಭೀರವಾಗಿ ಕೂತು ಆ ಅಧಿಕಾರಿಯ ದಿವ್ಯ ವಾಣಿಗಳನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದರು. ಆ ಅಧಿಕಾರಿ ಚೇರಿನ ಮೇಲೆ ಕೂತು ಯಾವ್ಯಾವುದೋ ಪಟಗಳನ್ನು ತೋರಿಸಿ ವಿಷಯ ಹೇಳುತ್ತಿದ್ದರು. ಅವರು ಹೇಳುತ್ತಿರುವುದನ್ನು ಸ್ಪಷ್ಟವಾಗಿ ಕೇಳುವ ಚೈತನ್ಯವೂ ನನಗೆ ಹೊರಟು ಹೋಗಿತ್ತು. ನಾನು ಹೊರಗೇ ನಿಂತು ಬೆವರು ಒರೆಸಿಕೊಳ್ಳತೊಡಗಿದೆ.

ನಾನು ತರಗತಿಯಿಂದ ಹೊರಗೆ ಹೋಗಿ ಚಡಪಡಿಸುತ್ತಾ ನಿಂತಿರುವುದನ್ನು ದೂರದ ಅಂಗಡಿಯಲ್ಲಿ ಬೀಡಿ ಸೆಳೆಯುತ್ತಿದ್ದ ಅಟೆಂಡರ್ ರುದ್ರಪ್ಪ ನೋಡಿದ. ಅವನಿಗೂ ಆಶ್ಚರ್ಯವಾಗಿತ್ತು. ಯಾಕೆ ಹೀಗೆ ನಿಂತಿದ್ದಾರೆ ಎಂದು ಅವನಿಗೂ ಅನುಮಾನ. ಬೀಡಿ ಒಗೆದ ಆತ ನನ್ನ ಹತ್ತಿರಕ್ಕೆ ಓಡೋಡಿ ಬಂದ. ಆಗ ನಾನು  ‘ನೋಡು ರುದ್ರಪ್ಪ ನಾನು ಬರುವ ಬಸ್ಸು ಇವತ್ತು ಹತ್ತು ನಿಮಿಷ ತಡವಾಗಿ ಬಂತು. ಇಲ್ಲಿ ನೋಡಿದರೆ ಅದ್ಯಾರೋ ಹಿರಿಯ ಅಧಿಕಾರಿ ಬಂದು ಕ್ಲಾಸ್ ತಗೊಂಡು ಬಿಟ್ಟಿದ್ದಾರೆ. ಹೀಗಾಗಿ ಭಯಬಿದ್ದು ಹೊರಗೆ ನಿಂತಿದ್ದೇನೆ. ಒಂಚೂರು ನೀನೇ ವಿಚಾರಿಸಿ ನೋಡಿ ಹೇಳು. ಅವರ್‍್ಯಾವ ಅಧಿಕಾರಿ ಅಂತ ನನಗೂ ಗೊತ್ತಿಲ್ಲ’ ಎಂದು ದೈನ್ಯತೆಯಿಂದ ಅವನಲ್ಲಿ ಬೇಡಿಕೊಂಡೆ.

ಹತ್ತು ಗಂಟೆಗೆ ಬೆಲ್ಲು ಹೊಡೆದು ಯಥಾಪ್ರಕಾರ ಬೀಡಿ ಊದಲು ಅಂಗಡಿಗೆ ಹೋಗಿದ್ದ ರುದ್ರಪ್ಪ ಮೊದಲು ನನ್ನಂತೆಯೇ ಕಿಟಕಿಯಿಂದ ಇಣುಕಿ ನೋಡಿದ. ಒಳಗಿನ ಅಧಿಕಾರಿಯನ್ನು ಕಂಡ ರುದ್ರಪ್ಪ ಭಯ ಭಕ್ತಿಯಿಂದ ಮುದುಡಿಕೊಳ್ಳುತ್ತಾನೆ ಎಂದು ಭಾವಿಸಿದ್ದ ನಾನು ಅವನ ಹಿಂದೆ ಹೆದರಿ ನಿಂತಿದ್ದೆ. ಆದರೆ ಆನಂತರ ನಡೆದ ದೃಶ್ಯಾವಳಿಗಳು ನಾನು ಊಹಿಸಿದ್ದಕ್ಕಿಂತ ಭಾರಿ ಭಿನ್ನವಾಗಿ ಬಿಟ್ಟವು. ರುದ್ರಪ್ಪ ನಿಂತಲ್ಲೇ ಒಮ್ಮೆ ಗುಡುಗಿಬಿಟ್ಟ. ಒಳಗಿನ ಅಧಿಕಾರಿಯನ್ನು ಕಂಡ ರುದ್ರಪ್ಪನ ಮೈಮೇಲೆ ದೆವ್ವವೇ ಹೊಕ್ಕಿಬಿಟ್ಟಿತು. ಒಮ್ಮೆಲೇ ಆವೇಶದಿಂದ ರುದ್ರಪ್ಪ ತರಗತಿಯೊಳಗೆ ನುಗ್ಗಿಬಿಟ್ಟ. ಗಲೀಜು ಮಾತುಗಳನ್ನು ಉದುರಿಸುತ್ತಲೇ ಹಾರಿ ಆ ಅಧಿಕಾರಿಯ ಕುತ್ತಿಗೆ ಪಟ್ಟಿ ಹಿಡಿದುಬಿಟ್ಟ. ಧರಧರ ಎಂದು ಎಳೆದುಕೊಂಡು ಬಂದವನೇ ಬಾಗಿಲಿನಿಂದ ಹೊರಗೆ ನೂಕಿಬಿಟ್ಟ.

ಟೈ ಕಟ್ಟಿಕೊಂಡು, ಕೈಯಲ್ಲಿ ಚರ್ಮದ ಬ್ಯಾಗು ಹಿಡಿದಿದ್ದ ಆ ಅಧಿಕಾರಿ ‘ಏಯ್ ಬಿಡಲೇ ಹಲ್ಕಟ್ ನನ್ಮಗನೇ’ ಎಂದು ಕೂಗುತ್ತಿದ್ದ. ನಾನು ಆ ಅಧಿಕಾರಿಗೆ ನಮಸ್ಕರಿಸುವುದೋ, ಬೇಡವೋ ಎಂಬ ಗೊಂದಲದಲ್ಲಿ ಸಿಲುಕಿದೆ. ನನಗೊಂದೂ ಅರ್ಥವಾಗುತ್ತಿರಲಿಲ್ಲ. ಬೀಡಿ ಸೇದುತ್ತಿದ್ದ ರುದ್ರಪ್ಪನಿಗೆ ಏನಾಯಿತು, ಮರೆತು ಬೀಡಿ ಬದಲಿಗೆ ಗಾಂಜಾ ಏನಾದರೂ ಎಳೆದುಬಿಟ್ಟನೋ ಏನೋ? ಎಂದು ನನಗೆ ಕಳವಳವಾಯಿತು. ಅಧಿಕಾರಿಯನ್ನೇ ಹೊರಗೆಳೆದು ತಂದನಲ್ಲ! ಏನು ಅನಾಹುತ ಕಾದಿದೆಯೋ ಏನೋ ಎಂದು ಗರಬಡಿದು ಮುಂದಿನ ದೃಶ್ಯಗಳನ್ನು ನೋಡುತ್ತಾ ನಿಂತೆ.

ಸಿಟ್ಟಿನಲ್ಲಿ ಮುಳುಗಿದ್ದ ರುದ್ರಪ್ಪ ‘ಲೇ ಇಷ್ಟು ಸಲಾನ್ಲೇ ಲಫಂಗ ನನ್ಮಗನೆ ನಿಂಗೆ ಹೇಳೋದು. ಮಕ್ಕಳ ಕ್ಲಾಸು ನಡಿಬೇಕಾದ್ರೆ ಒಳಗೆ ನುಗ್ಗಿ ಹೋಗಿ ಪಾಠ ಹೇಳ್ಬೇಡ ಅಂತ. ಹಲ್ಕ ಬಡ್ಡೀ ಮಗನೆ. ಹಳ್ಳಿ ಸುತ್ತೋಕೆ ಹೋಗೊ ತಿರುಬೋಕಿ ಅಂತ ಸರ್ಕಾರದೋರು ಸಂಬಳ ಕೊಟ್ರೆ, ಇಲ್ಲಿಗ್ ಬಂದು ತೊಂದರೆ ಕೊಡ್ತೀಯಾ. ಇನ್ನೊಂದು ಸಲ ಇಲ್ಲೀಗ್ ಬಂದ್ ಮೇಷ್ಟ್ರಿಗೆ, ಹುಡುಗರಿಗೆ ತೊಂದ್ರೆ ಕೊಟ್ಟೆ ಅಂದ್ರೆ ನಿನಗೆ ಮರಕ್ಕೆ ಕಟ್ಟಾಕಿ ಹೊಡೀತಿನಿ ನೋಡ್ ಬದ್ಮಾಶ್ ನನ್ಮಗನೆ ಮೊದ್ಲು ನಡೆಯಲೇ ಆಚ್ಕೆ’ ಎಂದು ಸುಧಾರಿಸಿಕೊಳ್ಳುತ್ತಿದ್ದ ಆ ಅಧಿಕಾರಿಯನ್ನು ಮತ್ತೊಮ್ಮೆ ಹಿಡಿದು ದಬ್ಬಿದನು.

ಇನ್‌ಶರ್ಟ್ ಮಾಡಿಕೊಂಡಿದ್ದ ಆ ಅಧಿಕಾರಿಗೆ ಈ ರುದ್ರಪ್ಪ ಇಷ್ಟು ಸಲೀಸಾಗಿ ರೋಪು ಹಾಕುವುದನ್ನು ನೋಡಿಯೇ ನನಗೆ ದಿಗಿಲಾಯಿತು. ಆ ಅಧಿಕಾರಿಯ ಹತ್ತಿರಕ್ಕೆ ಹೋದೆ. ಬೆಳಿಗ್ಗೆಯಷ್ಟೇ ಫ್ರೆಶ್ ಆಗಿ ಏರಿಸಿದ್ದ ಶರಾಪು ವಾಸನೆ ಗಮ್ ಎನ್ನುತ್ತಿತ್ತು. ಆ ಅಧಿಕಾರಿ ಭಕ್ತಿಯಿಂದ ನನಗೆ ನಮಸ್ಕಾರ ಸಾರ್ ಅಂದ. ಅವನ ಅವಸ್ಥೆ ನೋಡಿ ನನಗೆ ಕಸಿವಿಸಿಯಾಗುತ್ತಿತ್ತು. ಆದರೂ ಪ್ರತಿ ನಮಸ್ಕಾರ ಹೇಳಿದೆ.

ಇವರ್‍ಯಾರು ರುದ್ರಪ್ಪ ಎಂದು ವಿಚಾರಿಸಿದೆ. ‘ಅಯ್ಯೋ ನಮ್ಮ ಹಳ್ಳಿ ಹೆಲ್ತ್ ಇನ್ಸ್‌ಪೆಕ್ಟರ್ರು ಸಾರ್. ಪಕ್ಕಾ ಕುಡುಕ ನನ್ಮಗ. ಹಳ್ಳಿ ಮೇಲೆ ಹೋಗಿ ಮಾತ್ರೆ ಹಂಚೋ ಅಂದ್ರೆ ಕಾಲೇಜಿಗೆ ನುಗ್ಗಿ ಪಾಠ ಮಾಡ್ತಾನೆ. ಈ ಹುಡುಗ್ರು ಎಷ್ಟು ದಡ್ಡರು ಅಂದ್ರೆ ಯಾರು ಬಂದು ಕೂತು ಏನು ಹೇಳಿದ್ರೂ ಕೇಳ್ತಾವೆ. ಬಹಳ ದಿವ್ಸದಿಂದ ಮೇಷ್ಟ್ರು ಮಖಾನೆ ನೋಡಿಲ್ಲ ನೋಡಿ. ಪಾಪ ಅವು ತಾನೆ ಇನ್ನೇನ್ ಮಾಡ್ತಾವೆ ಹೇಳಿ ಸಾರ್. ಈ ಅಡ್ಡಕಸುಬಿ ನನ್ಮಗನ್ನೂ ಮೇಷ್ಟ್ರು ಅಂತಾನೆ ತಿಳ್ಕೊಂಡಿದ್ದಾವೆ. ಈ ಕುಡುಕ ನನ್ಮಗ ಅವಾಗ್ ಅವಾಗ್ ಬಂದು ಹಿಂಗ್ ತೊಂದ್ರೆ ಕೊಡ್ತಾನೆ ಇರ್ತಾನೆ ಸಾರ್. ನೀವೇನೂ ಯೋಚ್ನೆ ಮಾಡ್ಬೇಡಿ ನಾನಿದ್ದೇನಲ್ಲ. ಈಗ ನೀವು ಹೋಗಿ ಧೈರ್ಯದಿಂದ ಪಾಠ ಮಾಡಿ ಸಾರ್. ಇವನಿಗೆ ನಾನು ಓಡಿಸ್ತೀನಿ’ ಎಂದು ನನಗೆ ಧೈರ್ಯ ತುಂಬಿದ. ರುದ್ರಪ್ಪನಿಂದ ಉಗಿಸಿಕೊಂಡ ಹೆಲ್ತ್‌ ಇನ್ಸ್‌ಪೆಕ್ಟರ್ ಅಲ್ಲೇ ಸೋತು ಕೂತು ತನ್ನ ಚೀಲದಲ್ಲಿ ಪೊಲೀಸ್ ಕಂಪ್ಲೇಂಟ್ ಬರೆಯಲು ಪೆನ್ನು ಕಾಗದ ಹುಡುಕುತ್ತಿದ್ದ. ‘ಗ್ರೇಟ್ ಇನ್‌ಸಲ್ಟ್ ರುದ್ರಪ್ಪ. ನಿನ್ನ ನೋಡ್ಕೋತೀನಿ’ ಎಂದು ಕೊಸರಾಡುತ್ತಿದ್ದ. ‘ರುದ್ರಪ್ಪ, ಅವರು ಅವರ ಕಂಟ್ರೋಲ್‌ನಲ್ಲೇ ಇಲ್ಲ. ಆ ಅಂಗಡಿ ತನಕ ಅವರನ್ನ ಬಿಟ್ಟು ಬಾ’ ಎಂದು ಹೇಳಿದೆ.

ರುದ್ರಪ್ಪ ಆ ಅಧಿಕಾರಿಗೊಂದು ಬೀಡಿ ಹಚ್ಚಿಕೊಟ್ಟು ಏನೇನೋ ಬುದ್ಧಿ ಮಾತುಗಳ ಅವನಿಗೆ ಒಪ್ಪಿಸುತ್ತಾ ಕೈ ಹಿಡಿದು ಆಪ್ತ ಗೆಳೆಯನಂತೆ ಅವರನ್ನು ಕರೆದುಕೊಂಡು ಹೋದ. ಎಷ್ಟೋ ತಿಂಗಳಿಂದ ಉಪನ್ಯಾಸ ಕರ ಮುಖವನ್ನೇ ನೋಡದ ಈ ಹೊಸ ಕಾಲೇಜಿನ ಹುಡುಗರ ಪರಿಸ್ಥಿತಿ ಕಂಡು ನನಗಂತೂ ಸಂಕಟವಾಯಿತು. ಬೀದಿಯಲ್ಲಿ ಹೋಗುವವರು ಯಾರು ಬಂದು ಏನು ಹೇಳಿದರೂ ಪಾಠವೆಂದು ಶ್ರದ್ಧೆಯಿಂದ ಕೇಳುವ ಇಂಥ ಮುಗ್ಧ ಹುಡುಗರು ಇನ್ನು ಅದೆಷ್ಟು ಇದ್ದಾರೋ ಗೊತ್ತಿಲ್ಲ. ಪಾಠಕ್ಕಾಗಿ ಹಂಬಲಿಸುವ ಇಂಥ ಮುಗ್ಧ ಏಕಲವ್ಯರಿಗೆ ಕಲಿಸುವ ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯವೆಂದು ನಾನು ಭಾವಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT