ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿ ಎಂದರು ವೀರಭದ್ರರು ಕುಣಿಸು ಎಂದ ಕಾರಂತರು

Last Updated 27 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಧಿತ್ತತ್ತ ಧಿತ್ತತ್ತತ್ತತ್ತ... ನಾಲ್ಕು ಸಲ. ಧಿತ್ತತ್ತ ಧೀಗ್ಡ್ ಧೀಗ್ಡ್ ಧೀಗ್ಡ್ ತಾ... ನಾಲ್ಕು ಸಲ. ಧೀಗ್ಡ್ ಧೀಗ್ಡ್... ತಾ... ನಾಲ್ಕು ಸಲ.
`ಸರಿಯಾಗಲಿಲ್ಲ, ಪುನಃ ಕುಣಿ' ಗುರು ವೀರಭದ್ರ ನಾಯಕರು ಜೋರುದನಿಯಲ್ಲಿ ಹೇಳುವಾಗಲೇ ಅರ್ಧಜೀವವಾದೆ.

`ಆಗ ಸುಧನ್ವನು ಬೇಗದಿ... ಧಿತ್ತತ್ತ ಧಿತ್ತತ್ತ...'
ಧಿತ್ತತ್ತ ಧಿತ್ತತ್ತ...ಧಿತ್ತತ್ತ ಧಿತ್ತತ್ತ... ಛೆ... ತಪ್ಪಿತು.

`ಕಳ್ಳ ನನ್ಮಗನೇ, ನೀನು ಹಸಿದ ಹೊಟ್ಟೆಯಲ್ಲಿ ಇರಬಾರದೆಂದು ದೇವಣ್ಣಯ್ಯನ ಹೊಟೇಲಿಗೆ ಕಳುಹಿಸಿ ಮೂಗಿನವರೆಗೆ ತಿನ್ನಿಸಿದೆ... ಈಗ ಇಲ್ಲಿ ತಪ್ಪು ತಪ್ಪು ಹೆಜ್ಜೆ ಹಾಕುತ್ತಿದ್ದಿ...' ಎಂದು ಬಿಲ್ಲನ್ನು ಎತ್ತಿ ಗದರಿಸುವ ರಭಸಕ್ಕೆ ನಾನು ಅದುರಿಹೋದೆ. ಗುರುಗಳು ಇಷ್ಟು ಹೇಳಿದರೆ ಆಮೇಲೆ ತರಗತಿಯಿಂದ ಹೊರಗೆಯೇ! ಕಲ್ಲುಗಳೇ ಹರಡಿರುವ ಬಾವಿಕಟ್ಟೆಯ ಮುಂಭಾಗದಲ್ಲಿ ಪಾದ ಒಡೆಯುವವರೆಗೆ ಕುಣಿಯಬೇಕು! ಅದು ಅಭ್ಯಾಸವೂ ಹೌದು, ಶಿಕ್ಷೆಯೂ ಹೌದು.

ನನ್ನ ಸಹಪಾಠಿಗಳಾದರೋ ಬಾಯಿತಾಳಗಳನ್ನು ಒಂದು ಕಾಗದದಲ್ಲಿ ಬರೆದುಕೊಂಡು ಅದನ್ನು ಉರು ಹೊಡೆದು ಹೆಜ್ಜೆ ಅಭ್ಯಾಸ ಮಾಡಿ ಅದನ್ನು ಮರುದಿನ ಪಾಠ ಒಪ್ಪಿಸುತ್ತಿದ್ದರು. ದೀರ್ಘ ಬಾಯಿತಾಳಗಳನ್ನು ಬರೆಯುವಷ್ಟು ನನ್ನ ಅಕ್ಷರ ಜ್ಞಾನ ಸಾಲದು. ನನ್ನದೇನಿದ್ದರೂ ಕೇಳ್ಮೆಯಲ್ಲಿ ಉಳಿದ ತಾಳಾಕ್ಷರಗಳು ಮಾತ್ರ. ಆ ದಿನದ ಏಕತಾಳದ ನಡೆಯಂತೂ ಕೊಂಚ ವಿಷಮದಲ್ಲಿ ಕೂಡುವಂಥಾದ್ದು. ನನಗದನ್ನು ಕೂಡಿಸಲು ಸಾಧ್ಯವಾಗಲೇ ಇಲ್ಲ.

ಸೂಜಿಯಂತೆ ಚುಚ್ಚುತ್ತಿದ್ದ ಕಲ್ಲುಗಳಿರುವ ಬಾವಿಕಟ್ಟೆಯ ಬಳಿಯ ಅವಕಾಶದಲ್ಲಿ ಸಂಜೆಯವರೆಗೂ ಹೆಜ್ಜೆ ಹಾಕಿದೆ. ಪಾದಗಳ ಅಡಿಭಾಗ ಒಡೆಯಲಾರಂಭಿಸಿ ಉರಿಯತೊಡಗಿತು. ಸುಮ್ಮನೆ ಅಳುತ್ತ ಕೂತೆ. ವೀರಭದ್ರ ನಾಯಕರು ಪಾಠದ ಮಟ್ಟಿಗೆ ತುಂಬ ನಿಷ್ಠುರಿಯಾಗಿದ್ದುದರಿಂದ ಅವರ ಕರುಣಾಕಟಾಕ್ಷ ಸಿಗುವ ಲಕ್ಷಣವಿರಲಿಲ್ಲ. ಆದರೆ, ನನ್ನ ಸ್ಥಿತಿಯನ್ನು ನೋಡಿ ಗುರು ನೀಲಾವರ ರಾಮಕೃಷ್ಣಯ್ಯನವರಿಗೆ ಕನಿಕರ ಬಂದು ನನ್ನನ್ನು ಒಳಗೆ ಕರೆದೊಯ್ದರು. `ನೋಡಿ, ಹುಡುಗನ ಪಾದ ಹೇಗಾಗಿದೆ ನೋಡಿ...' ಎಂದರು.

ಗುರು ವೀರಭದ್ರ ನಾಯಕರು ಮಾತ್ರ, `ಈಗ ಸರಿಯಾಗಿ ಕುಣಿಯಬಲ್ಲೆಯಾ?' ಎಂದಷ್ಟೇ ಕೇಳಿ, ಹೊರ ಹೋದವರೇ ಒಂದು ಕೆಸುವಿನ ಕಾಂಡವನ್ನು ಕಿತ್ತು, ಒಲೆಯ ಕೆಂಡದಲ್ಲಿ ಬಿಸಿ ಮಾಡಿ ಅದನ್ನು ಪಾದಕ್ಕೆ ಸವರಿದರು. `ಮುಂದೆಲ್ಲಾದರೂ ಹೀಗೆ ಆದರೆ ಇದೇ ಮದ್ದು' ಎಂದರು. ಆ ರಾತ್ರಿ ಹಾಗೇ ಮಲಗಿದೆ.

ಮರುದಿನ ನಿಜವಾಗಿಯೂ ನನ್ನ ಪಾದದ ನೋವು ಮಂಗಮಾಯವಾಗಿತ್ತು. ಆದರೆ, ಗುರುಗಳ ಮುಂದೆ ಬರುವಾಗ ಕುಂಟುತ್ತ ಬಂದೆ. `ಎಲ್ಲಿ ಪಾಠ ಒಪ್ಪಿಸು' ಎಂದರು.

`ಕಾಲು ನೋವು' ಎಂದೆ. `ಸುಳ್ಳು ಹೇಳುತ್ತೀಯಾ? ನಿನ್ನೆ ಮದ್ದು ಮಾಡಿದ್ದೇನಲ್ಲ...' ಎಂದವರೇ, `ಎಲ್ಲಿ ಪಾಠ ಒಪ್ಪಿಸು' ಎಂದು ಮತ್ತೆ ಜೋರುದನಿಯಲ್ಲಿ ಹೇಳಿದರು. ಎಂಥ ದುರದೃಷ್ಟ ನೋಡಿ ; ಅಭ್ಯಾಸದ ಸಂದರ್ಭದಲ್ಲಿ ಸರಿಯಾಗಿ ಕುಣಿದರೂ ಗುರುಗಳ ಮುಂದೆ ತಪ್ಪುತ್ತಿತ್ತು. ತಪ್ಪಿತು. ಮತ್ತದೇ ಬಾವಿಕಟ್ಟೆಯ ಬಳಿಗೆ ಓಡಿಸಿದರು. ಅದೃಷ್ಟಕ್ಕೆ ಅಂದು ಮಾಬಲನೂ ತಪ್ಪಿದ. ಅವನೂ ಬಾವಿಕಟ್ಟೆಯ ಬಳಿಗೆ. ನಮ್ಮ ಹೆಜ್ಜೆಗಳನ್ನು ಗಮನಿಸಲು ಮತ್ತೊಬ್ಬ ಸಹಪಾಠಿ ರಾಮನನ್ನೂ ಕಳಿಸಲಾಯಿತು. ಉಳಿದವರು ತರಗತಿಯೊಳಗೆ ಕುಣಿದರೆ ನಮ್ಮದು ಬಾವಿಕಟ್ಟೆಯ ಬಳಿಯೇ ಧಿತ್ತತ್ತ ಧಿತ್ತತ್ತ. ಮಾಬಲನೂ ರಾಮನೂ ಕೂಡಿಕೊಂಡಿದ್ದರಿಂದ ಅವರಲ್ಲಿ ಕೇಳಿ ನನಗೆ ಅಭ್ಯಾಸ ಮಾಡಿಕೊಳ್ಳಲು ಸಹಕಾರಿಯಾಯಿತು. ಸರಿಯಾಗಿ ಬರೆಯಲು ಬಾರದ ಕಾರಣ ಎಲ್ಲ ಬಾಯಿತಾಳಗಳನ್ನು ನೆನಪಿಟ್ಟುಕೊಳ್ಳುವುದು ಕೂಡ ಅನಿವಾರ್ಯವಾಗಿತ್ತು. ಓದು- ಬರಹ ಒಲಿಯದಿರುವುದರಿಂದಲೇ ಪಾಠಗಳೆಲ್ಲ ನನ್ನ ನಾಲಿಗೆಯಲ್ಲಿ ಉಳಿದು ಆತ್ಮವಿಶ್ವಾಸ ಹೆಚ್ಚಲೂ ಕಾರಣವಾಯಿತು- ಇವತ್ತಿಗೂ ನನ್ನ ಶಕ್ತಿ ಅದೇ.

ಒಮ್ಮೆ ನೀಲಾವರ ರಾಮಕೃಷ್ಣಯ್ಯನವರು ಹೇಳಿದ್ದರು, `ನಾಯಕರಿಗೆ ನಿನ್ನ ಮೇಲೆ, ಮಾಬಲನ ಮೇಲೆ, ರಾಮನ ಮೇಲೆ ತುಂಬ ಪ್ರೀತಿ ಮಾರಾಯ. ಹಾಗಾಗಿ, ನಿಮಗೆ ಚೆನ್ನಾಗಿ ವಿದ್ಯೆ ಹತ್ತಲೆಂದೇ ಅವರು ಕಠಿಣವಾಗಿ ಕಲಿಸುತ್ತಿದ್ದಾರೆ' ಎಂದಿದ್ದರು. ಇವತ್ತಿಗೆ ಆ ಮಾತನ್ನು ನೆನಪಿಸಿಕೊಂಡರೆ ಕಣ್ಣುಗಳು ತೇವಗೊಳ್ಳುತ್ತವೆ. ಅಂದು ನನ್ನ ಸಹಪಾಠಿಗಳಾಗಿ, ಬಾವಿಕಟ್ಟೆಯ ಬಳಿಯಲ್ಲಿ ಹೆಜ್ಜೆ ಹಾಕುತ್ತಿದ್ದ ನೀಲಾವರ ಮಹಾಬಲ ಶೆಟ್ಟರು, ರಾಮ ನಾರಿಯವರು ಬಡಗುತಿಟ್ಟಿನ ಪ್ರಸಿದ್ಧ ವೇಷಧಾರಿಗಳಾಗಿ ರಂಗದ ಮೇಲೆ ಘನತೆಯನ್ನು ಉಳಿಸಿಕೊಂಡಿರುವಾಗಲೇ ಬದುಕಿನಿಂದ ಮರೆಯಾದರು ಎಂದು ಈಗ ನೆನಪಿಸಿಗೊಳ್ಳುವಾಗ ಸಂಕಟವೆನಿಸುತ್ತದೆ.

ಇವತ್ತು, ಏಕತಾಳವೇನು, ಎಂಥ ತಾಳದ ವಿಷಮ ನಡೆಯನ್ನಾದರೂ ಹೊಂದಿಸಬಲ್ಲೆ, ಹೆಜ್ಜೆ ಹಾಕಿ ತೋರಬಲ್ಲೆ, ಯಕ್ಷಗಾನ ರಂಗದಲ್ಲಿ  ಸಂಪೂರ್ಣ ಮರೆಯಾಗಿರುವ ಅನೇಕ ಸಂಪ್ರದಾಯದ ಕುಣಿತಗಳನ್ನು, ಒಡ್ಡೋಲಗ ನೃತ್ಯಗಳನ್ನು, ಹತ್ತಾರು ಯುದ್ಧ ವೈವಿಧ್ಯಗಳನ್ನು ಗಂಟೆಗಟ್ಟಲೆ ಕುಣಿದು ತೋರಿಸಬಲ್ಲೆ. ಬಾಯಿತಾಳಗಳನ್ನು ಪಟಪಟನೆ ಹೇಳಬಲ್ಲೆ. ಹೀಗೆ `ಬಲ್ಲೆ' `ಬಲ್ಲೆ' ಎಂದು ಹೇಳುವುದು ಅಹಂಭಾವವಲ್ಲ, ಆತ್ಮವಿಶ್ವಾಸ. ಅಂಥ ಆತ್ಮವಿಶ್ವಾಸವನ್ನು ಕೊಟ್ಟದ್ದು ಅಂದಿನ ಗುರುಗಳ ನಿಷ್ಠುರ ಧೋರಣೆ.

ನೆನಪಿಸಿಕೊಂಡರೆ ನಗು ಬರುತ್ತದೆ, ಗುರುಗಳು ಕಲಿಸುವಿಕೆಯಲ್ಲಿ ಎಂಥ ಕಠಿಣರಾಗಿದ್ದರೆಂದರೆ ಒಮ್ಮೆ ಯಕ್ಷಗಾನ ಕೇಂದ್ರದಿಂದ ಹಿಂದಿರುಗಿಹೋಗಬೇಕೆಂದು ಯೋಚಿಸಿದ್ದೆ...

                                                                     -----------

`ಹಿಂತಿರುಗುವುದು! ಎಲ್ಲಿಗಂತೆ? ಯಾಕಂತೆ?' ಕೇಳಿದವರು ಸಾಕ್ಷಾತ್ ಬಿ.ವಿ. ಕಾರಂತರು. ನಾನು ಬಾಗಿ ನಿಂತಿದ್ದೆ. ಹತ್ತಿರದಲ್ಲಿಯೇ ಅವರ ಸಹಾಯಕರೂ ಆಪ್ತರೂ ಆದ ರಘುವೀರ ಹೊಳ್ಳರೂ ಇದ್ದರು.

ಆ ಮಧ್ಯಾಹ್ನ ದೆಹಲಿಯ ರೈಲ್ವೇ ಸ್ಟೇಷನಿನಲ್ಲಿ ಇಳಿಯುವಾಗ ನನ್ನ ಹಾಗೂ ಪೇತ್ರಿ ಮಂಜುನಾಥ ಪ್ರಭುಗಳ ತಲೆಯ ತುಂಬ `ಹಿಂದಿ ಗೊತ್ತಿಲ್ಲದೆ ಈ ಮಹಾನಗರವನ್ನು ಹೇಗೆ ನಿಭಾಯಿಸುವುದು' ಎಂಬ ವಿಚಾರವೇ ತುಂಬಿ ರೈಲಿನಲ್ಲಿ ಗಂಟು ಕಳವಾದ ಸಂಗತಿ ಮರೆತೇಹೋಗಿತ್ತು. ಒಂದು ಬಾಡಿಗೆ ಟ್ಯಾಕ್ಸಿಯನ್ನು ಹಿಡಿದು, ಎಡ್ರೆಸ್ ಚೀಟಿಯನ್ನು ಅವನಿಗೆ ತೋರಿಸಿ, ಅವನು ಹೇಳಿದಷ್ಟು ಬಾಡಿಗೆಯನ್ನು ಕೊಟ್ಟು ಆ ಮನೆಯಂಥ ಕಟ್ಟಡದ ಮುಂದೆ ನಿಂತಾಗ ಬಾಗಿಲು ತೆರೆದವರು ರಘುವೀರ ಹೊಳ್ಳರು. ಮೊದಲು ಅವರ ಪರಿಚಯವಿರಲಿಲ್ಲ. ಅವರು `ಬನ್ನಿ ಬನ್ನಿ' ಎಂದು ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಳ್ಳುವಾಗ ಇಲ್ಲಿ ಕನ್ನಡ ಗೊತ್ತಿದ್ದವರೂ ಇದ್ದಾರೆ ಎಂದು ಸಮಾಧಾನವೆನ್ನಿಸಿತು. `ಬಿ.ವಿ. ಕಾರಂತರು ಊರಲ್ಲಿಲ್ಲ. ಜರ್ಮನಿಗೆ ಹೋಗಿದ್ದಾರೆ, ನಾಡಿದ್ದು ಬರುತ್ತಾರೆ' ಎಂದೂ ಹೇಳಿದರು. ಅರೆಬರೆ ನೆನಪಿನಲ್ಲಿ ಹೇಳುವುದಾದರೆ ಇಂಡಿಯಾ ಗೇಟಿನ ಪಕ್ಕದ ಪಹೌಸ್ ಕಾಲೊನಿ. ಕಾರಂತರಿದ್ದ ಮನೆಯದು. ಮರುದಿನ ಬೆಳಿಗ್ಗೆಯೇ ಅಲ್ಲಿಂದ ರಾಷ್ಟ್ರೀಯ ನಾಟಕ ಶಾಲೆಗೆ. `ಸಂಜೆ ಕ್ಲಾಸ್ ಮುಗಿಸಿ ಬನ್ನಿ' ಎಂದವರೇ ಹೊಳ್ಳರು ಹೊರಟುಹೋದರು.

ನಾಟಕಶಾಲೆಯ ಮೊದಲ ವರ್ಷದ ವಿದ್ಯಾರ್ಥಿಗಳ ತರಗತಿ. ಕೆಲವರು ನನಗಿಂತಲೂ ಎತ್ತರವಿದ್ದರು! ನಾನೂ ಮಂಜುನಾಥ ಪ್ರಭುಗಳೂ ಅವರಿಗೆ ತ್ತಿತ್ತಿತ್ತೈ ತ್ತಿತ್ತಿತ್ತೈ ತಾಳದ ಪಾಠ ಹೇಳಿಕೊಡಲಾರಂಭಿಸಿದೆವು. ವಿದ್ಯಾರ್ಥಿಗಳೇನೊ ಚುರುಕಿದ್ದರು. ಆದರೆ ಭಾಷೆಯೇ ತೊಡಕು. ಮಂಜುನಾಥ ಪ್ರಭುಗಳಿಗೆ ಕೊಂಕಣಿ ಭಾಷೆಯ ಹಿನ್ನೆಲೆಯಿದ್ದುದರಿಂದ ಎಲ್ಲವನ್ನೂ ಸೇರಿಸಿ ಸಂವಹನ ಮಾಡಲು ಯತ್ನಿಸಿದರು.

ನನಗಾದರೋ ಹೆಜ್ಜೆಗಾರಿಕೆ ಬಿಟ್ಟು ಏನೂ ಗೊತ್ತಿಲ್ಲ. ಆ ದಿನ ಹೇಗೋ ತರಗತಿ ಮುಗಿಸಿ, ಅವರಿವರಲ್ಲಿ ದಾರಿ ಕೇಳಿ ಮರಳಿದೆವು. ಅಲ್ಲಿ ರಘುವೀರ ಹೊಳ್ಳರು ನಮ್ಮ ದಾರಿ ಕಾಯುತ್ತಿದ್ದರು. ಎರಡು- ಮೂರು ದಿನ ಹೀಗೆಯೇ ಸಾಗಿತು. ವಿದ್ಯಾರ್ಥಿಗಳೊಂದಿಗೆ ಸಂವಹನವೇ ತೊಡಕಾಯಿತು. ಇದು ನಮ್ಮಿಂದಾಗುವ ಕೆಲಸವಲ್ಲ, ಹೊಳ್ಳರಲ್ಲಿ ಹೇಳಿ ಮರಳುವುದೇ ಉತ್ತಮ ಎಂದು ಗಟ್ಟಿಯಾಗಿ ನಿರ್ಧರಿಸಿ ಸಂಜೆ ಬಂದಾಗ ಹೊಳ್ಳರು ಹೇಳಿದರು, `ಕಾರಂತರು ಬಂದಿದ್ದಾರೆ. ಭೇಟಿಯಾಗಿ'.

ನನಗೆ ಅರ್ಧ ಭಯವೂ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದೆಂಬ ಅರ್ಧ ಸಮಾಧಾನವೂ ಆಯಿತು.

`ಹಿಂದಿ ಬರುವುದಿಲ್ಲ...' ಎಂದು ಮೆಲ್ಲನೆ ಹೇಳಿದೆ.

ಕಾರಂತರು ಎರಡೂ ಕೈಗಳನ್ನು ಊರಿ ಒಂದು ಮೇಜಿನಂಥ ಆಸನದಲ್ಲಿ ಕಾಲಾಡಿಸುತ್ತ ಕುಳಿತಿದ್ದರು. ಅವರ ಹಿಂದೆ ನಾನಾ ಬಗೆಯ ವಾದ್ಯಸಾಧನಗಳು ರಾಶಿಬಿದ್ದಿದ್ದವು. ಮತ್ತೆ ಕೇಳಿದರು, `ಇಲ್ಲೇನಾದರೂ ಊಟ, ತಿಂಡಿ, ಉಳಕೊಳ್ಳುವ ಸಮಸ್ಯೆಯಾಗಿದೆಯೆ?'
`ಇಲ್ಲ ಇಲ್ಲ... ಎಲ್ಲವೂ ಚೆನ್ನಾಗಿದೆ. ಆದರೆ, ಹಿಂದಿ ಬರುವುದಿಲ್ಲ...'

`ನಿನ್ನ ಹೆಸರೇನು?'
ಹೆಸರು ಹೇಳಿದೆ.
`ಸಂಜೀವಾ, ನಿನಗೆ ಅಣ್ಣಾವ್ರ ಗೊತ್ತಾ?'
ನಾನು ಗೊತ್ತಿಲ್ಲವೆಂಬಂತೆ ತಲೆಯಲ್ಲಾಡಿಸಿದೆ.
`ರಾಜ್‌ಕುಮಾರ್ ಗೊತ್ತಾ?'

`ಗೊತ್ತು ಗೊತ್ತು... ಅವರ ಸಿನೆಮಾ ನೋಡಿದ್ದೇನೆ'. ಹುಡುಗಾಟಿಕೆಯ ದಿನಗಳಲ್ಲಿ ಅಲ್ಲಿಲ್ಲಿಂದ ಹಣ ಸೇರಿಸಿ ಟಾಕೀಸ್‌ಗೆ ಹೋಗಿ ಪಿಕ್ಚರ್ ನೋಡುತ್ತಿದ್ದುದು ನೆನಪಾಯಿತು.

`ಅವರಿಗೂ ಹಿಂದಿ ಬರುತ್ತಿರಲಿಲ್ಲ... ಅವರೂ ಎಲ್ಲವನ್ನೂ ಸ್ವಪ್ರಯತ್ನದಲ್ಲಿಯೇ ಸಾಧಿಸಿ ಹಂತ ಹಂತವಾಗಿ ಮೇಲೆ ಬಂದದ್ದು. ನಾನೂ ಅವರೂ ಗುಬ್ಬಿ ಕಂಪೆನಿಯಲ್ಲಿ ಜೊತೆಗಿದ್ದವು. ನನಗೂ ಮೊದಮೊದಲು ಹಿಂದಿ ಗೊತ್ತಿರಲಿಲ್ಲ... ಎಲ್ಲಿ, ಅದನ್ನು ಇತ್ತ ಕೊಡು' ಎಂದು ಯಾವುದೋ ಒಂದು ವಾದ್ಯವನ್ನು ಎತ್ತಿಕೊಂಡರು, `ಇದನ್ನು ನನಗೆ ನುಡಿಸುವುದಕ್ಕೆ ತಿಳಿಯುತ್ತಿರಲಿಲ್ಲ. ಆಮೇಲೆ ನನಗೆ ನಾನೇ ಕಲಿತುಕೊಂಡದ್ದು. ಇಲ್ಲಿರುವ ಎಲ್ಲ ವಾದ್ಯಗಳನ್ನು ನಾನು ಸ್ವತಃ ಕಲಿತೇ ನುಡಿಸುವುದು. ನುಡಿಸಲು ಕಲಿಯದಿದ್ದರೆ ಈ ಎಲ್ಲ ವಾದ್ಯಗಳು ನಿಷ್ಪ್ರಯೋಜಕ' ಎನ್ನುತ್ತಿದ್ದಂತೆ ನನಗೆ ಮಾತನಾಡಲು ಅವಕಾಶವೇ ಇರಲಿಲ್ಲ.

`ಕಳೆದ ವರ್ಷವೂ ನಿಮ್ಮ ಕೇಂದ್ರದಿಂದ ಇಲ್ಲಿಗೆ ಯಕ್ಷಗಾನ ಕಲಿಸಲು ಬಂದಿದ್ದಾರೆ. ಅವರು ಚೆನ್ನಾಗಿಯೇ ಕಲಿಸಿ ಹೋಗಿದ್ದಾರೆ. ನೀವೂ ಹಾಗೆ ಮಾಡಬೇಕು' ಎಂಬ ಆದೇಶದ ಧ್ವನಿಯ ಮಾತನ್ನು ಕೇಳುತ್ತಿದ್ದಂತೆ, ನಮ್ಮ ಯಕ್ಷಗಾನ ಕೇಂದ್ರದಲ್ಲಿ ಪ್ರಸ್ತುತ ಮುಖ್ಯ ಮದ್ಲೆಗಾರರೂ ಯಕ್ಷಗಾನದ ಬಗ್ಗೆ ಆಳವಾದ ಪರಿಶ್ರಮವುಳ್ಳವರೂ ಆಗಿರುವ ಕೂಡ್ಲಿ ದೇವದಾಸ ರಾಯರು ಬಿ.ವಿ. ಕಾರಂತರ ಗರಡಿಯಲ್ಲಿ ಮೂರು ತಿಂಗಳು ಇದ್ದು ಬಂದುದು ನೆನಪಾಯಿತು. ಕಾರಂತರು ಉಡುಪಿಯ ಕುಪ್ಪು ಸೇರಿಗಾರರ ವಾದ್ಯದಾದಿಯಾಗಿ ಜನಪದ ಮೂಲದ ಪ್ರಭಾವದಿಂದ ರಂಗಗೀತೆಯನ್ನು ರೂಪಿಸುತ್ತಿದ್ದುದನ್ನು ಎಂಜಿಎಂ ಕಾಲೇಜಿನಲ್ಲಿ ಈ ಹಿಂದೆ ಕಂಡಿದ್ದೆ.

`ನಾಳೆ ನಾನೇ ನಿಮ್ಮಂದಿಗೆ ಬರುತ್ತೇನೆ. ಏನು ಕಲಿಸಬೇಕು, ಹೇಗೆ ಕಲಿಸಬೇಕೆಂಬುದನ್ನು ಹೇಳುತ್ತೇನೆ' ಎಂಬ ಅಧಿಕೃತ ದನಿಯಲ್ಲಿ ಹೇಳುತ್ತ ಕಾರಂತರು ಮೇಜಿನ ಮೇಲಿದ್ದ ಒಂದು  ಗಾಜಿನ ಸೀಸೆಯನ್ನು ಬೆರಳ ತುದಿಗಳಲ್ಲಿ ನನ್ನತ್ತ ಸರಿಸುತ್ತಿರುವಾಗಲೇ ಮ್ಯಾಕ್‌ಬೆತ್ ನಾಟಕವನ್ನು ಯಕ್ಷಗಾನದ ಹೆಜ್ಜೆಗಳಲ್ಲಿ ಹೇಗೆ ರಂಗದ ಮೇಲೆ ನಿರೂಪಿಸಬೇಕು ಎಂಬ ಯೋಚನೆಯ ಅಲೆಗಳು ಅವರ ಮನದಲ್ಲಿ ಏಳಲಾರಂಭಿಸಿರಬಹುದು.

ಕಾರಂತರು ಆ ಮಾತುಗಳನ್ನು ಆಡಿ ಹೆಚ್ಚುಕಮ್ಮಿ ಮೂವತ್ತೈದು ವರ್ಷಗಳು ಉರುಳಿವೆ. ಆಮೇಲೆ ಕೆಲವು ಸಲ `ಎನ್‌ಎಸ್‌ಡಿ'ಗೆ ಹೋಗಿ ಬಂದಿದ್ದೇನೆ. ನಮ್ಮ ಕೇಂದ್ರಕ್ಕೆ ಬರುವ ಉತ್ತರಭಾರತದ, `ಎನ್‌ಎಸ್‌ಡಿ'ಯ ಪ್ರಾದೇಶಿಕ ಶಾಖೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿದ್ದೇನೆ. ಒಂದೆರಡು ವರ್ಷಗಳ ಕೆಳಗೆ ಅಸ್ಸಾಂನ ಗುವಾಹಟಿಯಿಂದ ಬಹುರುಲ್ ಇಸ್ಲಾಂರ ಪತ್ನಿ ಭಾಗೀರಥಿ ಬಾಯಿ ಕದಂರವರು ಅಲ್ಲಿನ ವಿದ್ಯಾರ್ಥಿಗಳನ್ನು ಕರೆತಂದಿದ್ದರು. ಸಂವಹನಕ್ಕೆ ಕೊರತೆಯಾಗದಷ್ಟು ಹಿಂದಿ ಈಗ ನನಗೆ ಒಲಿದಿದೆ.
ಅದಕ್ಕಾಗಿಯೇ ಬಿ. ವಿ. ಕಾರಂತರನ್ನು ಎಂದೆಂದಿಗೂ ನೆನೆಯುತ್ತೇನೆ.
                                                                      --------
ನೆನೆದರೆ ಕಣ್ಣೀರು ಬರುತ್ತದೆ. ನೆನೆಯದಿರಲೂ ಸಾಧ್ಯವಾಗುವುದಿಲ್ಲ. ಏತ ಎತ್ತುವ ಆಧಾರವಿರುವ ಅಡ್ಡ ಹಲಗೆ ಮುರಿದು, ಮರಾಯಿ ಸೊಂಟಕ್ಕೆ ಬಿದ್ದು ಬೆನ್ನುಮೂಳೆ ಮುರಿಸಿಕೊಂಡ ಅಪ್ಪನನ್ನು ಯಾರೋ ಮೂಡನಿಡಂಬೂರಿನ ನಮ್ಮ ಮನೆಗೆ ತಂದು ಮಲಗಿಸಿದ್ದರು. ಅಮ್ಮ ಧನಿಗಳ ಮನೆಗೆ ಓಡಿದಳು. ನೆರವಿಗೆ ಯಾಚಿಸಿದಳು. ಕೆಲವು ದಿನಗಳ ಬಳಿಕ ಅಪ್ಪ ನಡೆಯಲು ಶಕ್ತರಾದರು. ಆಮೇಲೆ ಮದ್ಯ ವ್ಯವಹಾರದಲ್ಲಿ ಸಹಾಯಕರಾಗಿ ಸೇರಿಕೊಂಡರು. ಆಗ ಕಳ್ಳಬಟ್ಟಿ ಸಾರಾಯಿಯ ಕಾಲ. ಮದ್ಯವನ್ನು ಲಾರಿ ಚಕ್ರದ ಅನುಪಯುಕ್ತ ಟ್ಯೂಬುಗಳ ಒಳಗೆ ತುಂಬಿಸಿ ಎರಡೂ ತುದಿಗಳನ್ನು ಕಟ್ಟಿ ಒಂದೆಡೆಯಿಂದ ಮತ್ತೊಂದೆಡೆಯಿಂದ ಸಾಗಿಸುವುದು. ಒಮ್ಮೆ ಪೊಲೀಸರು ಹಿಡಿದರು. ಪೊಲೀಸ್ ಸ್ಟೇಷನ್‌ನಿಂದ ಮರಳಿದ ಅಪ್ಪನಿಗೆ ಮತ್ತೆ ಬೆನ್ನುನೋವು ಕಾಣಿಸಿತು. ನಡೆಯಲು ಕಷ್ಟವಾಯಿತು. ಮುಂಬಯಿಯಿಂದ ಅಕ್ಕನ ದುಡ್ಡು ಬರುವುದು ನಿಂತುಹೋಯಿತು. ಎಲ್ಲ ರೀತಿಯಿಂದಲೂ ಕಷ್ಟಗಳೇ. ಅನಿರೀಕ್ಷಿತವಾಗಿ ಅಪ್ಪ ಜೀವ ತೆತ್ತುಕೊಂಡ ಕ್ಷಣದಲ್ಲಿ ತಬ್ಬಲಿಯಾದ ಭಾವ ನನ್ನಲ್ಲಿ ಗಾಢವಾಗಿ ಆವರಿಸಿತು. ಬೆಳಿಗ್ಗೆ ಮನೆ ಬಿಟ್ಟವನು ಸಂಜೆ ಬಂದರೂ ಬಂದೆ, ಇಲ್ಲದಿದ್ದರೆ ಇಲ್ಲ. ಬಂದರೂ `ಯಕ್ಷಗಾನಕ್ಕೆ ಹೋಗುತ್ತಾನೆ' ಎಂದು ಬೆತ್ತದ ಪೆಟ್ಟುಗಳು. ಆಮೇಲಾಮೇಲೆ ಮನೆಗೆ ಬರುತ್ತಿದ್ದದ್ದು ಕೇವಲ ಅಮ್ಮ ಇರುವವರೆಗೆ ಅಮ್ಮನನ್ನು ನೋಡಲು, ಆ ಬಳಿಕ ನನ್ನ ಅಕ್ಕನನ್ನು ಮಾತನಾಡಿಸಲು. ಒಂದು ಅಂಗಿ ಒಂದು ಲುಂಗಿ; ನಿಂತ ನಿಲುಮೆಯಲ್ಲಿಯೇ ಡಿಲ್ಲಿಗೆ ಹೊರಡಬೇಕಿದ್ದರೂ ಜರ್ಮನಿಗೆ ತೆರಳಬೇಕಿದ್ದರೂ ಯಾರಲ್ಲೂ ಕೇಳಬೇಕಿರಲಿಲ್ಲ, ಹೇಳಬೇಕಿರಲಿಲ್ಲ.
                                                                       ----------
`ಹೇಳಲು ಕೇಳಲು ಯಾರೂ ಇಲ್ಲದವನು ನೀನು ಮಾತ್ರ. ನೀನೇ ಒತ್ತೆಯಾಗಿ ನಿಲ್ಲು'- ನನ್ನನ್ನುದ್ದೇಶಿಸಿದವರ ಮಾತಿನಲ್ಲಿ ವ್ಯಂಗ್ಯವಿರಲಿಲ್ಲ. ಪರಿಸ್ಥಿತಿ ಅಷ್ಟು ಗಂಭೀರವಾಗಿತ್ತು. ತಿಂದ ತಿನಿಸಿನ ದುಡ್ಡು ಕೊಡದಿದ್ದರೆ ಬೆಳಗಾವಿಯ ಹೊಟೇಲಿನವರಾದರೂ ಏನು ಮಾಡುತ್ತಾರೆ! `ಊರಿಗೆ ಹೋಗಿ ದುಡ್ಡು ಕಳಿಸುತ್ತೇವೆ' ಎಂದರು ನಮ್ಮ ಯಕ್ಷಗಾನ ತಂಡದ ಸಂಚಾಲಕರು. `ಹೇಗೆ ನಂಬುವುದು. ನಿಮ್ಮಲ್ಲಿ ಯಾರಾದರೊಬ್ಬನನ್ನು ನಮ್ಮಲ್ಲಿ ಅಡವಿಟ್ಟರೆ ನಿಮ್ಮನ್ನೂ ನಿಮ್ಮ ಸಾಮಾನುಗಳನ್ನು ಬಿಡುತ್ತೇವೆ' ಹೊಟೇಲಿನವರ ಪ್ರತಿಸವಾಲು.
ನಮ್ಮ ತಂಡದಲ್ಲಿ ಒತ್ತೆಯಾಳಾಗಿ ನಿಲ್ಲುವವರು ಯಾರಿದ್ದಾರೆ! ಎಲ್ಲರೂ ಮನೆ, ಮಠ, ಹೆಂಡತಿ, ಮಕ್ಕಳು ಇರುವವರೇ. ಏನೂ ಇಲ್ಲದವನು ನಾನೊಬ್ಬನೇ! 

ಸರಿಯಾಗಿ ನೆನಪಿಲ್ಲ. 1976ರ ಆಸುಪಾಸಿನ ಯಾವುದೋ ಕಡುಬಿಸಿಲ ದಿನವೆಂದು ಭಾವಿಸೋಣ. ಬೆಳಗಾವಿ ಪೇಟೆಯಲ್ಲಿ ನಮ್ಮ ತಂಡದವರೆಲ್ಲ ಸಾಮಾನುಗಳನ್ನು ಎತ್ತಿಕೊಂಡು ಊರಿನ ಬಸ್ಸು ಹಿಡಿಯಲು ಹೊರಟಾಗ, ಹೊಟೇಲಿನವರ ಜೊತೆಗೆ ಒಂಟಿಯಾಗಿ ನಿಂತ ನನ್ನ ಕಣ್ಣಿನಿಂದ ಎರಡು ಹನಿಗಳು ಉರುಳಿದವು.

(ಸಶೇಷ)
ನಿರೂಪಣೆ: ಹರಿಣಿ

ಗುರು ವೀರಭದ್ರ ನಾಯಕರಿಗೆ ರಾಷ್ಟ್ರಪ್ರಶಸ್ತಿ ಪುರಸ್ಕಾರ ದೊರೆತ ಸಂದರ್ಭದಲ್ಲಿ `ಸುಧಾ' ವಾರಪತ್ರಿಕೆ ಮುಖಪುಟದಲ್ಲಿ (ಫೆ.27, 1972) ಈ ಮೇರುಕಲಾವಿದನ ಫೋಟೋ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT