ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಾಂತರಿ ಆಹಾರ ಮತ್ತು ನಿಲ್ದಾಣ ಬಿಟ್ಟ ರೈಲು

Last Updated 10 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನಮಗೆ ಮತ್ತು ನಮ್ಮ ಭವಿಷ್ಯದ ತಲೆಮಾರಿನವರಿಗೆ ಹೆಚ್ಚು ಮಹತ್ವವಾದ ಸಂಗತಿಗಳ ಬಗ್ಗೆ ಅರಿಯುವ ಆಸಕ್ತಿ ನಿಮಗೆ ಇದ್ದರೆ, ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್‌ಗೆ ಒಂದು ಸುತ್ತು ಹೋಗಿ ಬರಲು ನನ್ನೊಂದಿಗೆ ಬನ್ನಿ. ಆರ್‌.ಟಿ.ರಾಮ್ ಮಾರ್ಗದ ವಾಯವ್ಯ ದಿಕ್ಕಿನಲ್ಲಿ ಇರುವ, ಪ್ರತಿಷ್ಠಿತ ಸ್ಪ್ರಿಂಗ್‌ಡೇಲ್ಸ್‌ ಸ್ಕೂಲ್‌ಗಿಂತ ಮುಂಚೆಯೇ ಇರುವ ಈ ಸಂಸ್ಥೆಯ ಬಗ್ಗೆ ದೆಹಲಿಯಲ್ಲಿ ಹುಟ್ಟಿ ಬೆಳೆದ ಬಹುತೇಕರಿಗೇ ಮಾಹಿತಿ ಇಲ್ಲ.

ಅಲ್ಲಿಗೆ ತಲುಪುವುದು ಕೂಡ ಒಂದು ಬಗೆಯಲ್ಲಿ ಹರಸಾಹಸವಿದ್ದಂತೆ. ಈಗಾಗಲೇ ಸಾಕಷ್ಟು ವಿಳಂಬವಾಗಿರುವ ಮೆಟ್ರೊ 3ನೇ ಹಂತದ ಯೋಜನೆಗೆ ರಸ್ತೆ ಅಗೆಯಲಾಗಿದೆ. ರಿಂಗ್‌ ರೋಡ್‌ ಮಾರ್ಗವಾಗಿ ಬಂದರೆ ಒಂದು  ಕಿಲೊಮೀಟರ್‌ನಷ್ಟು ದೂರ ನಡೆಯಬೇಕಾಗುತ್ತದೆ.

ರಸ್ತೆ ಬದಿ ಗುಡ್ಡೆ ಹಾಕಿರುವ ಕಸದ ಗಬ್ಬುನಾತ ಸಹಿಸಿಕೊಂಡೇ ಮಾರ್ಗ ಕ್ರಮಿಸಬೇಕಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಭಿತ್ತಿಪತ್ರಗಳು ಕಣ್ಣಿಗೆ ರಾಚುತ್ತವೆ. ಸುಂದರ, ಶಾಂತಿ ನೆಲೆಸಿದ, ಹಸಿರಿನಿಂದ ಕಂಗೊಳಿಸುವ ಕ್ಯಾಂಪಸ್‌ ಇದಾಗಿದೆ. ಇಲ್ಲಿ ಇರುವ ಸಂಶೋಧನಾ ಸಂಸ್ಥೆಗಳ ಪೈಕಿ ಜೈವಿಕ ತಂತ್ರಜ್ಞಾನ ಕೇಂದ್ರವು ದೇಶದ ಅತ್ಯಂತ ಮಹತ್ವದ ಸಂಶೋಧನಾ ಪ್ರಯೋಗಾಲಯವಾಗಿದೆ.

ಅದೊಂದು ಪುಟ್ಟ ಪ್ರಯೋಗಾಲಯ. ಬಹುಶಃ 10 ಸಾವಿರ ಚದರ ಅಡಿಗಳಷ್ಟು  ಸ್ಥಳಾವಕಾಶ ಹೊಂದಿದೆ. 22ರಿಂದ 65ರ ವಯೋಮಾನದವರೆಗಿನ 12 ಸಂಶೋಧಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಭಸ್ಮಾಸುರ’ ಕುಖ್ಯಾತಿಗೆ ಒಳಗಾಗಿರುವ, ಭಯ ಮೂಡಿಸಿರುವ  ಕುಲಾಂತರಿ ಬೆಳೆಗಳ ಬಗ್ಗೆ ಅವರೆಲ್ಲ ಸಂಶೋಧನೆಯಲ್ಲಿ ತೊಡಗಿದ್ದಾರೆ.

‘ಕುಲಾಂತರಿ’ ಎನ್ನುವ (Genetically Modified– GM) ಶಬ್ದವೇ ತಪ್ಪು ಅರ್ಥ ಕೊಡುತ್ತದೆ’ ಎಂದು ಈ ತಂಡದ ಮುಖ್ಯಸ್ಥರಾಗಿರುವ ಪ್ರೊ. ದೀಪಕ್‌ ಪೆಂಟಲ್‌ ಪ್ರತಿಪಾದಿಸುತ್ತಾರೆ. ‘ಜಿಎಂ’ ಶಬ್ದಕ್ಕೆ ಬದಲಾಗಿ ಅವರು  ‘ಜೆನೆಟಿಕಲಿ ಎಂಜಿನಿಯರ್ಡ್‌’ (Genetically Engineered’– GE)  ಶಬ್ದ ಬಳಸುವುದಕ್ಕೆ ಆದ್ಯತೆ ನೀಡುತ್ತಾರೆ.

ವೈಜ್ಞಾನಿಕ ಸಂಶೋಧನೆಗಳಿಗೆ ಹೆಸರು ಇಡುವ ಮತ್ತು ಅವುಗಳನ್ನು ವಿರೂಪಗೊಳಿಸುವ ಬಗ್ಗೆ ಅವರು ಹೆಚ್ಚಿಗೆ ತಲೆಕೆಡಿಸಿಕೊಂಡಿಲ್ಲ. ಕುಲಾಂತರಿ ಅನುಮೋದನಾ ಸಮಿತಿಯು (ಜಿಇಎಸಿ), ಈ ತಂಡದ 32 ವರ್ಷಗಳ ಪರಿಶ್ರಮಕ್ಕೆ ಮನ್ನಣೆ ನೀಡಿ ಕುಲಾಂತರಿ ಸಾಸಿವೆಯು ಎಲ್ಲ ಮಾನದಂಡಗಳ ಅನ್ವಯ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಪ್ರಮಾಣಪತ್ರ ನೀಡಿದೆ. ಇದು ಪ್ರೊ. ಪೆಂಟಲ್‌ ನೇತೃತ್ವದಲ್ಲಿನ ಸಂಶೋಧಕರಿಗೆ ಸಂಭ್ರಮ ಉಂಟುಮಾಡಿದ್ದು, ಸಮಾಧಾನವನ್ನೂ ತಂದಿದೆ.

‘ಈ ಕುಲಾಂತರಿ ಸಾಸಿವೆ ಬೀಜ 2002ರಲ್ಲಿಯೇ ಸಿದ್ಧಗೊಂಡಿತ್ತು’ ಎಂದು ಪ್ರೊ. ಪೆಂಟಲ್‌ ಹೇಳುತ್ತಾರೆ. ‘ವೈಜ್ಞಾನಿಕ ಸಂಶೋಧನೆಗಳನ್ನು ಬರೀ ಸಂದೇಹದಿಂದಲೇ ನೋಡುವ ಮತ್ತು ಯಾವಾಗಲೂ ನಕಾರಾತ್ಮಕವಾಗಿಯೇ ಚಿಂತಿಸುವವರ ಕಾರಣಕ್ಕಾಗಿ ಈ ಸಾಧನೆಯು ಇದುವರೆಗೆ ನನೆಗುದಿಗೆ ಬಿದ್ದಿತ್ತು. ಈಗ ಸಿಕ್ಕಿರುವ ‘ಜಿಇಎಸಿ’ ಅನುಮೋದನೆಯು ಎಲ್ಲ ಅನುಮಾನಗಳನ್ನು ನಿವಾರಣೆ ಮಾಡಿದೆ’ ಎಂದು ಅವರು ಹೇಳುತ್ತಾರೆ.

ಐದು ಸಂಪುಟಗಳಲ್ಲಿ ಇರುವ 4 ಸಾವಿರ ಪುಟಗಳ ಸಂಶೋಧನಾ ವರದಿಯಲ್ಲಿ ತಂಡವು ‘ಜಿಇಎಸಿ’ಗೆ ಸಲ್ಲಿಸಿರುವ ಅಗತ್ಯವಾದ ಎಲ್ಲ ಸುರಕ್ಷತಾ ಮಾನದಂಡಗಳ ವಿವರ ಇದೆ. ಕುಲಾಂತರಿ ಕೃಷಿ ಉತ್ಪನ್ನಗಳು ಭಾವನಾತ್ಮಕ ಮತ್ತು ರಾಜಕೀಯ ವಿಷಯವಾಗಿರುವುದು ನಮಗೆಲ್ಲ ಗೊತ್ತಿರುವ ಸಂಗತಿಯಾಗಿದೆ.

ಪರಿಣತರ ಪರಿಶೀಲನೆಗೆ ಒಳಪಟ್ಟ ಸಂಶೋಧನೆಗಳು ಸಾಬೀತಾಗದ ಮತ್ತು ಸಂಪೂರ್ಣವಾಗಿ ಕಾಲ್ಪನಿಕವಾದ ಭೀತಿಯ ಕಾರಣಕ್ಕೆ ಮಸುಕಾಗಿ, ಎಡ ಮತ್ತು ಬಲಪಂಥೀಯ ವಿಚಾರಧಾರೆಗಳನ್ನು ಒಂದುಗೂಡಿಸುತ್ತವೆ. ಗ್ರೀನ್‌ಪೀಸ್‌ ಸಂಸ್ಥೆ, ಸ್ವದೇಶಿ ಭಾವನೆ ಅಥವಾ ಆರ್‌ಎಸ್‌ಎಸ್‌ ಈ ವಿಷಯದಲ್ಲಿ ಕೈಜೋಡಿಸುತ್ತವೆ.

‘ಆಹಾರ ಉತ್ಪನ್ನಗಳ ವಿಷಯದಲ್ಲಿ ವಿದೇಶಿ ಸಂಸ್ಥೆಗಳ ಪ್ರಾಬಲ್ಯವು ಕುಲಾಂತರಿ ತಂತ್ರಜ್ಞಾನ ವಿರೋಧಿಗಳ ಪ್ರತಿಭಟನೆಗೆ ಇನ್ನಷ್ಟು ಕಿಚ್ಚು ಒದಗಿಸುತ್ತದೆ. ಕುಲಾಂತರಿ ಬೀಜಗಳನ್ನು ದುರಾಸೆ ಪ್ರವೃತ್ತಿಯ ಬಹುರಾಷ್ಟ್ರೀಯ ಸಂಸ್ಥೆಗಳು ಪೇಟೆಂಟ್‌, ತಂತ್ರಜ್ಞಾನ ಸ್ವಾಮ್ಯ, ವಂಶವಾಹಿಗಳ ಸಂಗ್ರಹದ ಮೂಲಕ ಪೂರೈಕೆ ಮತ್ತು ಬೆಲೆ ವಿಷಯದಲ್ಲಿ ನಿಯಂತ್ರಣ ಸಾಧಿಸುತ್ತವೆ.

ಈ ಮೂಲಕ ಬಡ ದೇಶಗಳ ರೈತರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುತ್ತವೆ’ ಎನ್ನುವುದು ಅವರ ಪ್ರಮುಖ ಆಕ್ಷೇಪ. ಈ ಕುಲಾಂತರಿ ಸಾಸಿವೆಯನ್ನು ಭಾರತ ಸರ್ಕಾರದ ಧನಸಹಾಯ ಪಡೆಯುವ ಸರ್ಕಾರಿ ಪ್ರಯೋಗಾಲಯವೇ ಅಭಿವೃದ್ಧಿಪಡಿಸಿದೆ. ದಿವಂಗತ ಡಾ. ವರ್ಗೀಸ್ ಕುರಿಯನ್‌ ಅವರು ಸ್ಥಾಪಿಸಿದ್ದ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ, ರಾಜೀವ್‌ ಗಾಂಧಿ ರಾಷ್ಟ್ರೀಯ ತೈಲಬೀಜ ಯೋಜನೆಗಳೂ ಇದರಲ್ಲಿ ಭಾಗಿಯಾಗಿವೆ.

ದೇಶದಲ್ಲಿ ಖಾದ್ಯ ತೈಲದ ಕೊರತೆ ಮೊದಲಿನಿಂದಲೂ ಇದೆ. ಪ್ರತಿ ವರ್ಷ ಗಮನಾರ್ಹ ಪ್ರಮಾಣದಲ್ಲಿ ಖಾದ್ಯ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿ ಬೆಳೆಯುವ ಎಲ್ಲ ಪ್ರಮುಖ ಖಾದ್ಯ ತೈಲ ಬೆಳೆಗಳಲ್ಲಿ ಸಾಸಿವೆ ಕೂಡ ಒಂದಾಗಿದೆ. ಹೊಸ ಸಾಸಿವೆ ಬೀಜದ ಇಳುವರಿಯು ಶೇ 25ರಿಂದ ಶೇ 30ರಷ್ಟು ಹೆಚ್ಚಾಗಲಿದೆ.

ದೀಪಕ್‌ ಪೆಂಟಲ್‌ ಅವರು 1987ರಲ್ಲಿ ಈ  ಪ್ರಯೋಗಾಲಯದ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಪ್ರೊ. ಪೆಂಟಲ್‌ ಮತ್ತು ನಾನು ಚಂಡೀಗಡದಲ್ಲಿ ಇರುವ ಪಂಜಾಬ್‌ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು. ಪೆಂಟಲ್‌ ಅವರು ನನಗಿಂತ ಹಿರಿಯರಾಗಿದ್ದರು. ನಾವಿಬ್ಬರೂ ಒಂದೇ ವಿದ್ಯಾರ್ಥಿ ನಿಲಯದಲ್ಲಿ ಇದ್ದೆವು.

ಸಸ್ಯ ವಿಜ್ಞಾನಿಯಾಗಿರುವ ಪ್ರೊ. ಪೆಂಟಲ್‌, ರಟ್‌ಗರ್ಸ್‌ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪಡೆದಿದ್ದಾರೆ. ಪೋಲೆಂಡ್‌ನಲ್ಲಿ ಬೋಧನಾ ವೃತ್ತಿ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾಗಲೇ ಅವರಿಗೆ ಸಾಸಿವೆ ಬಗ್ಗೆ ಸಂಶೋಧನೆ ನಡೆಸುವ ಒಲವು ಮೂಡಿತ್ತು. ಪೋಲೆಂಡ್‌ ಮತ್ತು ಭಾರತದ ಸಾಸಿವೆ ತಳಿಗಳನ್ನು  ಪರಾಗಸ್ಪರ್ಶ ವಿಧಾನದಲ್ಲಿ ಕೂಡಿಸಿ ಮಿಶ್ರ ತಳಿ ಪಡೆಯಲು ಪ್ರಯತ್ನಿಸಿದ್ದರು. ಆದರೆ, ಅದು ನಿರೀಕ್ಷಿಸಿದ ಫಲ ನೀಡಿರಲಿಲ್ಲ.

ಆ ದಿನಗಳಲ್ಲಿ ತಳಿವಿಜ್ಞಾನದ (ಜೆನೆಟಿಕ್‌) ಎಂಜಿನಿಯರಿಂಗ್‌ ವಿಷಯವು ಹೊಸದಾದ ಮತ್ತು ಹೆಚ್ಚು ಉತ್ತೇಜಕರವಾದ ಕ್ಷೇತ್ರವಾಗಿ ಗಮನ ಸೆಳೆದಿತ್ತು. ದೆಹಲಿ ವಿಶ್ವವಿದ್ಯಾಲಯದ ಪ್ರೊ. ಪೆಂಟಲ್‌ ಮತ್ತು ಅವರ ತಂಡವು ಈ ಹೊಸ ಸವಾಲನ್ನು ಅಂಗೀಕರಿಸಿತ್ತು. ದೇಶಿ ಸಾಸಿವೆ ತಳಿಗಳಾದ ಬರ್ನಸೆ, ಬಾರ್‌ಸ್ಟಾರ್‌ ಮತ್ತು ಬಾರ್‌ಗೆ ಹೊಸ ವಂಶವಾಹಿನಿಗಳನ್ನು ಸೇರಿಸಿ ಹೊಸ ದೇಶಿ ಸಾಸಿವೆ ತಳಿ ಪಡೆಯುವುದು ಅವರ ಒಟ್ಟಾರೆ ಸಂಶೋಧನೆಯ ತಿರುಳಾಗಿತ್ತು. ಸಾಸಿವೆಯಲ್ಲಿ 85 ಸಾವಿರದಷ್ಟು ವಂಶವಾಹಿನಿಗಳಿವೆ.

ಈ ಸಂಶೋಧನಾ ತಂಡದಲ್ಲಿದ್ದ ಯುವ ಮತ್ತು ಹಿರಿಯ ವಿಜ್ಞಾನಿಗಳು ಇದುವರೆಗೆ 40ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ. ಅನೇಕ ಯುವ ಸಂಶೋಧಕರು ಈ ವಿಭಾಗದಿಂದ ಹೊರ ಹೊಮ್ಮಿದ್ದಾರೆ. ಈಗ ಈ ಹೊಸ ಅದ್ಭುತ ಎನ್ನಬಹುದಾದ ಕುಲಾಂತರಿ ಸಾಸಿವೆಯ ಬೀಜ ಸಂಶೋಧಿಸಲಾಗಿದೆ.

ಸಂಶೋಧನಾ ಆಸಕ್ತಿಯ ಫಲವಾಗಿ ಇಲ್ಲಿಯ ಪ್ರತಿ ಸಂಶೋಧಕ ಹೆಚ್ಚು ಆಕರ್ಷಣೆಯ ಖಾಸಗಿ ವಲಯದ ಉದ್ಯೋಗ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ/ಬೋಧನೆ, ಸರ್ಕಾರದ ಉನ್ನತ ಹುದ್ದೆ ಮತ್ತಿತರ ಆಮಿಷಗಳಿಗೆ ಬಲಿಯಾಗದೆ ತಮ್ಮ ಗಮನವನ್ನೆಲ್ಲ ಸಂಶೋಧನೆಗೆ ಕೇಂದ್ರೀಕರಿಸಿದ್ದರು. ಪ್ರೊ. ಪೆಂಟಲ್‌ ಅವರು ದೆಹಲಿ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡರೂ, ಪ್ರಯೋಗಾಲಯದಲ್ಲಿನ ತಮ್ಮ ಕೆಲಸದಿಂದ ಎಂದಿಗೂ ವಿಮುಖರಾಗಿರಲಿಲ್ಲ. ಕುಲಪತಿ ಸೇವಾ ಅವಧಿ ಮುಗಿಯುತ್ತಿದ್ದಂತೆ ಅವರು ಸಂಶೋಧನೆಗಳಿಗೆ ಮತ್ತೆ ಪೂರ್ಣ ಪ್ರಮಾಣದಲ್ಲಿ ಮರಳಿದರು.

ದಶಕಗಳಿಂದ ನಮ್ಮ ದೇಶಿ ವಿಜ್ಞಾನವು ತನ್ನ ಮಹತ್ವ ಕಳೆದುಕೊಳ್ಳುತ್ತಿರುವುದು, ಪ್ರತಿಭಾನ್ವಿತರ ಪಲಾಯನ, ಮಹತ್ವದ ಉತ್ಪನ್ನಗಳ ಪೇಟೆಂಟ್‌ ಮೇಲಿನ ಅವಲಂಬನೆ ಬಗ್ಗೆ ನಾನು ಮತ್ತು ಪ್ರೊ. ಪೆಂಟಲ್‌ ಸಾಕಷ್ಟು ಬಾರಿ ಚರ್ಚಿಸಿ ಆತಂಕ ಹಂಚಿಕೊಂಡಿದ್ದೆವು. ‘ಉನ್ನತ ಹುದ್ದೆ ಸಿಗುತ್ತಿದ್ದಂತೆ ಅಥವಾ ನಿರ್ದೇಶಕರು, ಕುಲಪತಿಗಳಂತಹ ‘ವೈಜ್ಞಾನಿಕ ಅಧಿಕಾರಶಾಹಿ’ಯ ಭಾಗವಾಗುತ್ತಿದ್ದಂತೆ ನಮ್ಮ ವಿಜ್ಞಾನಿಗಳು ಸಂಶೋಧನೆಗೆ ತಿಲಾಂಜಲಿ ನೀಡುವುದು ನಾವು ಎದುರಿಸುವ ಅತಿದೊಡ್ಡ ಸಮಸ್ಯೆಯಾಗಿದೆ’ ಎಂದು ಅವರು ಹೇಳಿದ್ದರು.

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಐದು ವರ್ಷಗಳ ಸದಸ್ಯತ್ವದ ಆಕರ್ಷಕ ಹುದ್ದೆಯೂ ಹುಡುಕಿಕೊಂಡು ಬಂದಿತ್ತು. ಆ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದ್ದ ಅವರು ತಮ್ಮ ಅಚ್ಚುಮೆಚ್ಚಿನ ಸಾಸಿವೆ ಬಗೆಗಿನ ಸಂಶೋಧನೆಗೆ ಜೀವನ ಮುಡಿಪಾಗಿಟ್ಟರು. ‘ಯುಪಿಎಸ್‌ಸಿ’ಯಲ್ಲಿ ದೆಹಲಿಯ ಮಾಜಿ ಪೊಲೀಸ್‌ ಆಯುಕ್ತ ಬಿ.ಎಸ್‌.ಬಸ್ಸಿ ಅವರ ಜತೆ ಕೆಲಸ ಮಾಡುವ ಹೆಗ್ಗಳಿಕೆ ತಪ್ಪಿಹೋಯಿತೆನ್ನುವುದೂ ಅವರಿಗೆ ಗೊತ್ತಿರಲಿಲ್ಲ.

‘ನೀವು ಮತ್ತು ನಿಮ್ಮ ಸಹೋದ್ಯೋಗಿಗಳು ನೀವೇ ಸಂಶೋಧಿಸಿದ ಸಾಸಿವೆ ಖಾದ್ಯ ತೈಲವನ್ನು ಅಡುಗೆಗೆ ಬಳಸುವಿರಾ?’ ಎಂದು ಕೇಳಿದರೆ, ಯಾವುದೇ ಅಳುಕು ಇಲ್ಲದೆ ‘ಹೌದು’ ಎಂದು ಅವರೆಲ್ಲ ಉತ್ತರಿಸುತ್ತಾರೆ. ಕುಲಾಂತರಿ ಸಾಸಿವೆಗೆ ಅನುಮೋದನೆ ದೊರೆಯುತ್ತಿದ್ದಂತೆ ‘ನಮ್ಮ ಮಕ್ಕಳು ಮತ್ತು ನಾವು ಯಾವುದೇ ಹಿಂಜರಿಕೆ ಇಲ್ಲದೆ ಹೊಸ ಖಾದ್ಯ ತೈಲವನ್ನು ಸೇವಿಸುತ್ತೇವೆ’ ಎಂದು ಅವರು ಹೇಳುತ್ತಾರೆ.

ತಳಿ ಬದಲಾದ ಸಾಸಿವೆಯು ಎಲ್ಲ ಬಗೆಯ ವಿಷ ಮತ್ತು ಅಲರ್ಜಿಗಳಿಂದ ಹೊರತಾಗಿದೆ ಎಂದೂ ಅಧ್ಯಯನಗಳು ಸ್ಪಷ್ಟಪಡಿಸಿವೆ. ಕುಲಾಂತರಿ ಆಹಾರ ಪದಾರ್ಥಗಳು ಅಪಾಯಕಾರಿಯಾಗಿವೆ ಎನ್ನುವ ಯಾವುದೇ ದಾಖಲೆಗಳಿಲ್ಲದೆ, ವಿಶ್ವದಾದ್ಯಂತ ಪ್ರತಿ ದಿನ ಲಕ್ಷಾಂತರ ಜನ ಕುಲಾಂತರಿ ಬೆಳೆಗಳನ್ನು ಒಳಗೊಂಡಿರುವ ಆಹಾರ ಸೇವಿಸುತ್ತಾರೆ.

1996ರಲ್ಲಿ ಕೆನಡಾದಲ್ಲಿ ಮೊದಲ ಬಾರಿಗೆ ತಳಿಗುಣ ಬದಲಾದ ಸಾಸಿವೆ ಖಾದ್ಯ ತೈಲ ಕ್ಯಾನೊಲಾಕ್ಕೆ (Canola) ಅನುಮೋದನೆ ನೀಡಲಾಗಿತ್ತು. ಈ ಖಾದ್ಯತೈಲವನ್ನು ಭಾರತ ಪ್ರತಿ ವರ್ಷ 4 ಲಕ್ಷ ಟನ್‌ಗಳಷ್ಟು ಆಮದು ಮಾಡಿಕೊಳ್ಳುತ್ತಿದೆ. ಯಾರೊಬ್ಬರೂ ಈ ಬಗ್ಗೆ ದೂರು ನೀಡಿಲ್ಲ. ಭಾರತವು ಆಮದು ಮಾಡಿಕೊಳ್ಳುತ್ತಿರುವ ಖಾದ್ಯ ತೈಲ ಮತ್ತು ವನಸ್ಪತಿಯ ಬಹುಭಾಗವು ಆಮದು ಮಾಡಿಕೊಳ್ಳುವ ಸೋಯಾಬೀನ್‌ ತೈಲ ಒಳಗೊಂಡಿದೆ.

ಇದರ ಆಮದು ಪ್ರಮಾಣವು ಕ್ಯಾನೊಲಾಕ್ಕಿಂತ 10 ಪಟ್ಟು ಹೆಚ್ಚಿಗೆ ಇದೆ. ಸೋಯಾಬೀನ್‌ ತೈಲವು  ಕೂಡ ಕುಲಾಂತರಿ ಮೂಲ ಹೊಂದಿದೆ. ನಮ್ಮದೇ ಆದ ಹತ್ತಿ ಬೀಜದ ಖಾದ್ಯ ತೈಲವನ್ನು ನಾವು ಸಾಕಷ್ಟು ಪ್ರಮಾಣದಲ್ಲಿ ಸೇವಿಸುತ್ತೇವೆ. ನಮ್ಮ ಬಹುತೇಕ ಹತ್ತಿಯು (ಬಿ.ಟಿ ಹತ್ತಿ) ಕುಲಾಂತರಿಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಪ್ರತಿ ಭಾರತೀಯನೂ ಕುಲಾಂತರಿ ಖಾದ್ಯ ತೈಲ ಸೇವಿಸುತ್ತಲೇ ಬಂದಿದ್ದಾನೆ ಎಂದು ನಾವು ಹೇಳಬಹುದು. ಈ ಬಗ್ಗೆ ಯಾರೊಬ್ಬರೂ ಪ್ರತಿಭಟನೆ ನಡೆಸಿಲ್ಲ ಅಥವಾ ಪ್ರತಿಭಟಿಸಲು ಮುಂದಾಗಿಲ್ಲ.  ಕೆನಡಾ, ಅಮೆರಿಕ, ಲ್ಯಾಟಿನ್‌ ಅಮೆರಿಕ, ಆಫ್ರಿಕಾದ ಬಹುತೇಕ ದೇಶಗಳು ಮತ್ತು ಚೀನಾ ಈಗಾಗಲೇ ಕುಲಾಂತರಿ ಆಹಾರ ಪದಾರ್ಥಗಳನ್ನು ಒಪ್ಪಿಕೊಂಡಾಗಿದೆ.

ಸಾಕಷ್ಟು ಸಿರಿವಂತರಾಗಿರುವ ಯುರೋಪಿಯನ್ನರಂತೆ ನಾವು ಕೂಡ ಕುಲಾಂತರಿ ಆಹಾರಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಹೊರಟಿದ್ದೇವೆ. ಆದರೆ, ರೈಲು ಈಗಾಗಲೇ ನಿಲ್ದಾಣ ಬಿಟ್ಟು ಹೊರಟು ಹೋಗಿದೆ. ಕುಲಾಂತರಿ ಖಾದ್ಯ ತೈಲವು ನಮ್ಮ ಆಹಾರ ಸರಪಳಿಯಲ್ಲಿ ಸೇರಿಕೊಂಡಾಗಿದೆ. ನಿಮಗೆ ಕುಲಾಂತರಿ ಖಾದ್ಯ ತೈಲ ಬೇಡ ಎನಿಸಿದರೆ, ಬಾಬಾ ರಾಮ್‌ದೇವ್‌ ಅವರ  ಸಲಹೆ ಪರಿಗಣಿಸಿ, ಪೂಜನೀಯ ದೇಶಿ ಆಕಳ ಹಾಲಿನ ದೇಶಿ ಶುದ್ಧ ತುಪ್ಪ ಮಾತ್ರ ಸೇವಿಸಬಹುದು.

ಆಕಳುಗಳು ಬಿನೋಲಾ ಆಧಾರಿತ ಹಿಂಡಿ ಸೇವಿಸುವುದರಿಂದಲೇ ಹಾಲಿನಲ್ಲಿ ಕೊಬ್ಬಿನ ಅಂಶ ಇರಲಿದೆ. ಸದ್ಯಕ್ಕೆ ದೇಶದಲ್ಲಿ ಲಭ್ಯ ಇರುವ ಬಿನೋಲಾ ಕುಲಾಂತರಿ ಅಲ್ಲ ಎಂದು ಪತ್ತೆ ಹಚ್ಚುವುದು ತುಂಬ ಕಷ್ಟದ ಕೆಲಸವಾಗಿದೆ. ಈ ವಿಷಯದಲ್ಲಿ ನಾವು ಇನ್ನೂ ಪೆದ್ದರಾಗಿಯೇ ಇದ್ದೇವೆ. ಭಾರತ ಸಾರ್ವಭೌಮ ದೇಶವಾಗಿದ್ದರೂ, ವೈಜ್ಞಾನಿಕ ಸಂಶೋಧನೆಗಳು ಮತ್ತು ಹೊಸ ತಂತ್ರಜ್ಞಾನದ ವಿರೋಧಿಗಳ ಬಗ್ಗೆ ಮಾತನಾಡುತ್ತೇವೆ. 

ಕುಲಾಂತರಿ ಆಹಾರಗಳ ವಿಷಯದಲ್ಲಿ ಚೀನೀಯರು ಮಾತ್ರ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ವಿಶ್ವದ ಮೂರನೇ ಅತಿದೊಡ್ಡ ಬೆಳೆ ವಿಜ್ಞಾನ (ಕುಲಾಂತರಿ) ಸಂಶೋಧನಾ ಸಂಸ್ಥೆಯಾಗಿರುವ ಸಿಂಗೆಂಟಾ ಖರೀದಿಸಲು ₹ 2.9 ಲಕ್ಷ ಕೋಟಿ ವೆಚ್ಚ ಮಾಡಲು ಚೀನೀಯರು ಮುಂದಾಗಿದ್ದಾರೆ. ಮಾನ್ಸಾಂಟೊ ಖರೀದಿಗೆ ₹4.35 ಲಕ್ಷ ಕೋಟಿ ನೀಡಲು ಮುಂದೆ ಬರಲಾಗಿತ್ತು.

‘ಚೀನಾ ದೇಶದ ಸಂಸ್ಥೆಗಳು ನಾನು ಅಭಿವೃದ್ಧಿಪಡಿಸಿದ ಸಾಸಿವೆ ತಳಿ ಖರೀದಿಸಲು ಒಲವು ವ್ಯಕ್ತಪಡಿಸಿದ್ದಾರೆ’ ಎಂದು ಪ್ರೊ. ಪೆಂಟಲ್‌ ಹೇಳುತ್ತಾರೆ. ತಮ್ಮ ಸಂಶೋಧನಾ ಪ್ರಬಂಧಗಳಲ್ಲಿ ಪ್ರೊ. ಪೆಂಟಲ್‌ ಮತ್ತವರ ತಂಡದ ಸಂಶೋಧನೆಗಳ ಮಾಹಿತಿಯನ್ನು ಚೀನೀಯರು ಹಂಚಿಕೊಂಡಿದ್ದಾರೆ. ಬರ ವಿರೋಧಿ ಗುಣಗಳನ್ನು ಒಳಗೊಂಡಿರುವುದರಿಂದ ಈ ಹೊಸ ಸಾಸಿವೆ ತಳಿಯನ್ನು ಖರೀದಿಸಲು ಚೀನೀಯರು ಬಯಸಿದ್ದಾರೆ.

ಚೀನೀಯರು ಸಾಸಿವೆ ಖಾದ್ಯ ತೈಲ ಸೇವಿಸುವುದಿಲ್ಲ ಅಥವಾ ಅಂಗಮರ್ದನ (ಮಾಲೀಶ್‌) ಉದ್ದೇಶಕ್ಕೂ ಬಳಸುವುದಿಲ್ಲ. ಅವರು ತಮ್ಮ ಆಹಾರದಲ್ಲಿ ಕಡ್ಡಾಯವಾಗಿ ಹಸಿರು ತರಕಾರಿ ಇರಬೇಕೆಂದು ಬಯಸುತ್ತಾರೆ. ಬಾಕ್‌ ಚೋಯ್‌,  ಚೋಯಿ ಸಮ್‌, ಗ್ಯಾನ್‌ ಲ್ಯಾಂಗ್‌ ಮತ್ತು ಚೀನಾದ ಉದ್ದ ಎಲೆಯ ಎಲೆ ಕೋಸು ಇದೇ ಸಾಸಿವೆ ಕುಟುಂಬಕ್ಕೆ ಸೇರಿವೆ ಎನ್ನುವುದು ಗಮನಿಸಬೇಕಾದ ಸಂಗತಿ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT