ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಬರೆದ ಒಂದು ಎಮ್ಮೆಯ ಕತೆ

Last Updated 12 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕುವೆಂಪು ಅವರ ಅಷ್ಟೊಂದು ಪ್ರಸಿದ್ಧವಲ್ಲದ ಒಂದು ಕತೆಯಿದೆ. ಅದರ ಹೆಸರು `ಶ್ರೀಮನ್ಮೂಕವಾಗಿತ್ತು~. ಬಹುಶಃ ಕುವೆಂಪು ತಮ್ಮ 30ರ ಪ್ರಾಯದ ಆಸುಪಾಸಿನಲ್ಲಿ ಬರೆದಿರಬಹುದಾದ ಕತೆಯಿದು. ಮೇಲ್ನೋಟಕ್ಕೆ ಇದು ಮಕ್ಕಳ ಕತೆಯಂತೆ ಸರಳವಾಗಿದೆ. “ರಂಗನದು ಬಡ ಸಂಸಾರ. ಅವನ ವಾಸಕ್ಕೆ ಸಣ್ಣ ಹುಲ್ಲುಮನೆ; ನಾಲ್ಕೈದು ಅಂಕಣದ್ದು; ಅವನಿಗೆ ಏಳೆಂಟು ಕಾಲ್ನಡೆಗಳಿವೆ.

ಅವನ ಜಮೀನು ಸ್ವಂತದ್ದಲ್ಲ” ಮುಂತಾದ ಪುಟ್ಟಪುಟ್ಟ ವಾಕ್ಯಗಳಿಂದ ಕೂಡಿದೆ. ಜತೆಗೆ ಮಕ್ಕಳು ಮತ್ತು ಪ್ರಾಣಿಗಳೇ ಇಲ್ಲಿನ ಮುಖ್ಯ ಪಾತ್ರಗಳು. ಇದೇನೂ ಈ ಕತೆಯ ವಿಶೇಷ ಲಕ್ಷಣವಲ್ಲ. ಕುವೆಂಪು ಅವರ ಮಹಾಕಾದಂಬರಿಗಳಲ್ಲೂ ಪ್ರಾಣಿ ಮತ್ತು ಮಕ್ಕಳ ಪಾತ್ರಗಳು ಬರುತ್ತವೆ. ಈ ಕತೆಯನ್ನು ಮಕ್ಕಳು ಓದಿದರೆ ಅವಕ್ಕೆ ಬೇಕಾದ ಅರ್ಥದ ಸ್ತರವೂ ಸಿಕ್ಕುತ್ತದೆ.

ಆದರೆ ಕತೆ ತನ್ನ ಹೊಟ್ಟೆಯೊಳಗೆ ಅಡಗಿಸಿಕೊಂಡಿರುವ ದಾರ್ಶನಿಕ ಆಶಯಗಳನ್ನು ಕಂಡರೆ, ಇದು ಮಕ್ಕಳ ಕತೆಯಲ್ಲ ಎಂದು ಭಾಸವಾಗುತ್ತದೆ. ಕುವೆಂಪು ಅವರ `ಬೊಮ್ಮನಹಳ್ಳಿಯ ಕಿಂದರಿಜೋಗಿ~ಯೂ ಹೀಗೇ. `ಟಿಂಗ್‌ಟಿಂಗ್! ಟಿಂಗ್‌ಟಿಂಗ್! ನಾದವ ಕೇಳಿ, ಚಂಗ್‌ಚಂಗ್ ನೆಗೆದರು ಬಾಲಕರೋಡಿ~ ಎಂಬ ಶಿಶುಪ್ರಾಸದ ಕುಣಿಯುವ ಸಾಲುಗಳು ಅಲ್ಲಿವೆ. ಓದುತ್ತ ಹೋದಂತೆ ಅದು ಕೇವಲ ಮಕ್ಕಳ ಪದ್ಯವಲ್ಲ ಎಂದು ಹೊಳೆಯುತ್ತಾ ಹೋಗುತ್ತದೆ.

ಮಹಾಕಾವ್ಯ-ಮಹಾಕಾದಂಬರಿಗಳನ್ನೂ ಮಕ್ಕಳ ಪದ್ಯಗಳನ್ನೂ ತರತಮವಿಲ್ಲದೆ ಬರೆದ ಲೇಖಕರಲ್ಲಿ ಕುವೆಂಪು ಒಬ್ಬರು. ಟಾಲ್‌ಸ್ಟಾಯ್ ಕೂಡ `ಬೆಪ್ಪುತಕ್ಕಡಿ ಐವಾನ್~ ಎಂಬ ಮಕ್ಕಳ ಕತೆಯನ್ನೂ `ಅನ್ನಾಕರೆನೀನಾ~ ಮಹಾಕಾದಂಬರಿಯನ್ನೂ ಸಮಾನ ಶ್ರದ್ಧೆಯಲ್ಲಿ ಬರೆದವನು. ಅವನ ನೀತಿಕತೆಗಳಲ್ಲಿ ಒಂದಾದ `ಒಬ್ಬನಿಗೆ ಎಷ್ಟು ನೆಲಬೇಕು?~ ಮಕ್ಕಳ ಕತೆಯಾಚೆ ಹೋಗಿಬಿಡುವ ಬಹು ಪದರದ ರಚನೆ. ಬಹುಶಃ ಈ ವಿಷಯದಲ್ಲಿ ಕುವೆಂಪು ಅವರಿಗೆ ಟಾಲ್‌ಸ್ಟಾಯ್ ಪ್ರಭಾವಿಸಿದ್ದರೆ ಸೋಜಿಗವಿಲ್ಲ.

ಮಲೆಯಾಳದಲ್ಲಿ ವೈಕಂ ಮಹಮದ್ ಬಶೀರರ `ಪಾತುಮ್ಮಳ ಆಡು~, `ಬಾಲ್ಯಕಾಲ ಸಖಿ~ ಕಾದಂಬರಿಗಳಲ್ಲೂ ಮಕ್ಕಳು ಮತ್ತು ಪ್ರಾಣಿ ಪಾತ್ರಗಳು ಬರುತ್ತವೆ. ಅವು ಕೂಡ ಏಕಕಾಲಕ್ಕೆ ಮಕ್ಕಳ ಮತ್ತು ವಯಸ್ಕ ಓದುಗ ಸ್ತರಗಳನ್ನು ಹೊಂದಿರುವ ಸರಳತೆ ಮತ್ತು ಗಹನತೆಯುಳ್ಳ ಕೃತಿಗಳು. ಈ ದೊಡ್ಡ ಲೇಖಕರೆಲ್ಲ ಆಳವಾದ ತತ್ವಶಾಸ್ತ್ರೀಯ ಬುನಾದಿಯ ಮೇಲೆ ಸರಳವಾಗಿ ಬರೆಯುವವರಾದ ಕಾರಣ, ಏನನ್ನು ಬರೆದರೂ ಅಲ್ಲೊಂದು ದಾರ್ಶನಿಕ ಛಾಪು ಸೃಷ್ಟಿಯಾಗಿಬಿಡುತ್ತದೆ.

`ಶ್ರೀಮನ್ಮೂಕವಾಗಿತ್ತು~ ಕತೆಯನ್ನು ಅನೇಕ ಸಲ ಓದಿದ್ದೇನೆ. ಪ್ರತಿ ಓದಿನಲ್ಲೂ ಬೇರೆಬೇರೆ ಅರ್ಥಗಳನ್ನು ಬಿಚ್ಚಿಕೊಡುತ್ತದೆ ಅದು.

ಈ ಕತೆಯ ಸಾರವಿದು: ಮಲೆನಾಡಿನಲ್ಲಿ ಕೆರೆಯೂರು ಎಂಬ ಒಂದು ಊರು. ಕೆರೆಯ ಪಕ್ಕ ಒಂದು ಮನೆಯಿರುವುದರಿಂದ ಅದಕ್ಕೆ ಈ ಹೆಸರು. ಅಲ್ಲಿ ರಂಗನೆಂಬ ಗೇಣಿದಾರ ರೈತನ ಗುಡಿಸಲಿದೆ. ಅದರಲ್ಲಿ ಅವನೂ ಅವನ ಹೆಂಡತಿ ನಾಗಿಯೂ ಮಗ ಸೇಸನೂ ವಾಸವಾಗಿದ್ದಾರೆ. ಇವರು ಕೆಲವು ಕಾಲ್ನಡೆಗಳನ್ನು ಸಾಕಿದ್ದಾರೆ.

ಅವುಗಳಲ್ಲಿ ಎಳಗರುವಿನ ತಾಯಿಯಾಗಿರುವ ಸೊಟ್ಟಕೋಡಿನ ಎಮ್ಮೆಯೂ ಒಂದು. ಮಳೆಗಾಲದ ಒಂದು ದಿನ. ರಂಗನು ದಿನವಿಡೀ ಗದ್ದೆ ಕೆಲಸ ಮಾಡಿ ಸಾಕಾಗಿ ಹಸಿದು ಮನೆಗೆ ಬರುತ್ತಾನೆ. ಕೈಕಾಲು ತೊಳೆದು ನೀರೊಲೆ ಮುಂದೆ ಕೂತು ಮೈಬೆಚ್ಚಗಾಗಿಸಿಕೊಂಡು, ಮಗನ ಜತೆ ಊಟಕ್ಕೆ ಕೂರುತ್ತಾನೆ. ಅವನ ಎಲೆಯ ಮೇಲೆ ನಾಗಿ ಬಿಸಿಬಿಸಿಯಾದ ಅಡುಗೆ ಬಡಿಸುತ್ತಾಳೆ.

ಇನ್ನೇನು ತುತ್ತು ಎತ್ತಬೇಕು, ಅಷ್ಟರಲ್ಲಿ ಕೊಟ್ಟಿಗೆಯೊಳಗಿಂದ ಎಮ್ಮೆಯ ಕರು ಕೂಗಿದ ಸದ್ದಾಗುತ್ತದೆ. ಅವನಿಗೆ ಸೋಜಿಗವಾಗಿ, `ಯಾಕೆ ತಾಯಿ ಎಮ್ಮೆ ಬಂದಿಲ್ಲವೇ~ ಎಂದು ವಿಚಾರಿಸುತ್ತಾನೆ. `ಯಾಕೊ ಇನ್ನೂ ಬಂದಿಲ್ಲ~ವೆಂದು ನಾಗಿ ಹೇಳುತ್ತಾಳೆ.

ರಂಗನು ಬಡಿಸಿದ ಎಲೆಯನ್ನು ಹಾಗೆಯೇ ಬಿಟ್ಟು ಕೊಟ್ಟಿಗೆಗೆ ಹೋಗಿ ನೋಡುತ್ತಾನೆ. ಕರು ಕಾಯಿಲೆಯಿಂದಲೂ ಹಸಿವಿನಿಂದಲೂ ತಾಯಿಯಿಲ್ಲದ ಕಾರಣದಿಂದಲೂ ಸುಸ್ತಾಗಿ ಬಿದ್ದಿದೆ. ಅದಕ್ಕೆ ಮರದ ಒಳಲೆಯ ಮೂಲಕ ಹಾಲು ಕುಡಿಸಲು ಯತ್ನಿಸುತ್ತಾನೆ.

ಸಾಧ್ಯವಾಗುವುದಿಲ್ಲ. ಎಮ್ಮೆಯನ್ನು ಎಲ್ಲಿಯಾದರೂ ಹುಲಿಗಿಲಿ ಹಿಡಿದಿದೆಯೋ ಎಂದು ಆತಂಕಪಟ್ಟು, ಅದನ್ನು ಹುಡುಕಲು ಬೆಳಕಿಗಾಗಿ ಒಂದು ದೊಂದಿ ಸಿದ್ಧಪಡಿಸಿಕೊಂಡು, ಊಟಮಾಡಿಯಾದರೂ ಹೋಗಿ ಎಂದು ಹೆಂಡತಿ ವಿನಂತಿಸಿದರೂ ಕೇಳದೆ, ತನ್ನ ನಾಯಿಗಳ ಜತೆ, ಆ ಅಪರಾತ್ರಿಯಲ್ಲಿ, ಆ ಕತ್ತಲ ಮಳೆಯಲ್ಲಿ, ಆ ಹಸಿವಿನಲ್ಲಿ ರಂಗ ಹೊರಟುಬಿಡುತ್ತಾನೆ.

ಎಮ್ಮೆ ಹುಡುಕುತ್ತ ಅವನು ಒಂದು ರಾತ್ರಿ ಮತ್ತು ಅರ್ಧ ಹಗಲಿನ ಕಾಲ ಕಾಣುವ ಸನ್ನಿವೇಶ ಹಾಗೂ ಪಡೆಯುವ ಅನುಭವಗಳ ನಿರೂಪಣೆಯೇ ಕತೆ.

ಕತೆಯ ವಿನ್ಯಾಸವು ಥೇಟು `ಮಲೆಗಳಲ್ಲಿ ಮದುಮಗಳು~ ಕಾದಂಬರಿ ತರಹವೇ ಇದೆ. ಅಲ್ಲಿ ಗುತ್ತಿ ತನ್ನ ಪ್ರಿಯತಮೆಯನ್ನು ಕಾಣಲು ನಾಯಿಯ ಜತೆ ಪ್ರಯಾಣ ಮಾಡಿದಂತೆಲ್ಲ, ಅವನ ಹಾದಿಯ ಆಸುಪಾಸಿನಲ್ಲಿ ಘಟಿಸುವ ಸನ್ನಿವೇಶಗಳು ಅವನ ಅನುಭವದ ಮೂಲಕ ಅನಾವರಣಗೊಳ್ಳುತ್ತ ಹೋಗುತ್ತವೆ; ಇಲ್ಲಿ ಎಮ್ಮೆ ಹುಡುಕುತ್ತ ಅಲೆಯುವ ರಂಗನ ಮೂಲಕ ಮಲೆನಾಡಿನ ಜೀವನ ವಿವರಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಎರಡೂ ಕಡೆ ಹುಡುಕಾಟ ಮತ್ತು ಪ್ರಯಾಣವಿದೆ.

ರಂಗನು ತನ್ನ ಪ್ರಯಾಣದಲ್ಲಿ ಒಟ್ಟು ಮೂರು ಮನೆಗಳನ್ನು ಭೇಟಿಮಾಡುತ್ತಾನೆ. ಈ ಮನೆಗಳು ಸಮಾಜದ ವಿಭಿನ್ನ ಸಮುದಾಯಗಳಿಗೆ ಸೇರಿದವು. ಮೊದಲನೆಯದಾಗಿ, ದೀವರಾದ ಚೌಕಿಮನೆ ಸುಬ್ಬೇನಾಯ್ಕರ ಮನೆ.

ನಾಯ್ಕರು ಅಪರಾತ್ರಿ ಕತ್ತಲಲ್ಲಿ ತಿರುಗುತ್ತಿರುವ ರಂಗನಿಗೆ ಬೈದು, ಬಾಯಿಗೆ ಎಲೆಯಡಿಕೆ ಕೊಟ್ಟು, ಆ ಹೊತ್ತಲ್ಲೂ ತಮ್ಮ ಮಗನನ್ನು ಎಬ್ಬಿಸಿ, ಎಮ್ಮೆ ಹೋದ ದಿಕ್ಕನ್ನು ತಿಳಿದು ಹೇಳಿ ಅವನಿಗೆ ಸ್ಪಂದಿಸುವರು. ಎರಡನೆಯದಾಗಿ ಕೀರಣಕೇರಿಯ ಜೋಯಿಸರಾದ ಶಂಕರ ಶಾಸ್ತ್ರಿಗಳ ಮನೆ. ರಂಗನು ಬೆಳಗು ಮುಂಚೆಯೇ ನಿಮಿತ್ತ ಕೇಳಿಸಲು ಬರಿಗೈಲಿ ಬಂದಿರುವುದಕ್ಕೆ ಜೋಯಿಸರು ಕಾಲ ಕೆಟ್ಟುಹೋಯಿತು ಎಂದು ಗೊಣಗುವರು. ಆದರೂ, ಅವನ ಎಮ್ಮೆ ಬದುಕಿರಬಹುದು ಎಂದು ಅಂದಾಜು ನಿಮಿತ್ತ ಹೇಳುವರು. ಇದು ರಂಗನಲ್ಲಿ ಒಂದು ರೀತಿಯ ಆಶೆ ಧೈರ್ಯ ಹುಟ್ಟಿಸುತ್ತದೆ.

ಮೂರನೆಯದಾಗಿ, ನಾಲೂರಿನ ಸಾಹುಕಾರರಾದ ನಾಗಣ್ಣಗೌಡರ ಮನೆ. ಗೌಡರ ಹಿರಿಯ ಮಗ ಓಬಯ್ಯಗೌಡ, ಎಮ್ಮೆ ಗದ್ದೆಯ ಪೈರುತಿಂದು ಹಾಳುಮಾಡಿದೆಯೆಂದು ದೊಡ್ಡಿಗೆ ಹೊಡೆಯಬೇಕೆಂದು ಕಟ್ಟಿಹಾಕಿದ್ದಾನೆ. ಮಾತ್ರವಲ್ಲ, ಅದರ ಕಾಲು ಕಟ್ಟಿ ಹಾಲನ್ನು ಸಹ ಹಿಂಡಿಕೊಂಡಿದ್ದಾನೆ. ಎಮ್ಮೆ ವಿಷಯದಲ್ಲಿ ಮೂರೂ ವ್ಯಕ್ತಿಗಳು ತೋರುವ ಪ್ರತಿಕ್ರಿಯೆಗಳು ಮೂರು ತೆರನಾಗಿವೆ.

ಕತೆಗೆ ನಾಟಕೀಯ ತಿರುವು ಬರುವುದು ಮೂರನೇ ಮನೆಯಲ್ಲಿ. ನಾಲೂರು ನಾಗನಗೌಡರ ಮನೆಯಲ್ಲಿ ಅವರ ಕಿರಿಯ ಮಗ ವಾಸು ಕಾಯಿಲೆ ಬಿದ್ದು, ಜೀವ ಇರುತ್ತದೋ ಹೋಗುತ್ತದೋ ಎಂಬಂತಹ ಅವಸ್ಥೆಯಲ್ಲಿ ಮಲಗಿರುತ್ತಾನೆ. ಅವನನ್ನು ನೋಡಲು ಊರಿನ ಬಡಜನರೆಲ್ಲ ಗೌಡರ ಜಗುಲಿಯಲ್ಲಿ ನೆರೆದಿರುತ್ತಾರೆ. ರಂಗನೂ ಜಗುಲಿಯಲ್ಲಿ ಸ್ವಲ್ಪ ಹೊತ್ತು ವಾಸುವಿನ ಕಾಯಿಲೆಗೆ ಮರುಗುತ್ತಾ ಕೂರುತ್ತಾನೆ.

ಅವನಿಗೆ ತಾಯಿ ಸತ್ತು ಅನಾಥನಾಗಿರುವ ವಾಸುವಿನ ಹಾಗೂ ತಾಯನ್ನಗಲಿ ಏಕಾಂಗಿಯೂ ಕಾಯಿಲೆಯೂ ಆಗಿರುವ ಎಮ್ಮೆಗರುವಿನ ಸ್ಥಿತಿ ಒಂದೇ ಅನಿಸುತ್ತದೆ. ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. “ಅಲ್ಲಿದ್ದವರ ಶೋಕವೆಲ್ಲಾ ಒಂದು ಜೀವದ ಯಾತನೆಗಾಗಿತ್ತು; ರಂಗನದು ಮಾತ್ರ ಎರಡು ಜೀವಗಳ ನೋವಾಗಿತ್ತು” ಎಂದು ಕತೆ ವ್ಯಾಖ್ಯಾನಿಸುತ್ತದೆ.

ರಂಗನು ಓಬಯ್ಯಗೌಡ ಯಾತಕ್ಕೋ ಹೊರಗೆ ಬಂದಾಗ, ತಾಯಿಲ್ಲದೆ ಹೋದರೆ ಅದರ ಎಳೆಗರು ಸತ್ತು ಹೋಗುತ್ತದೆ ಎಂದು ಅಳುತ್ತ ಎಮ್ಮೆ ಬಿಟ್ಟುಕೊಡಬೇಕೆಂದು ಬೇಡುತ್ತಾನೆ. ಓಬಯ್ಯಗೌಡ ಕರಗುವುದಿಲ್ಲ. ಸಿಟ್ಟಿನಿಂದ ಕೂಗುತ್ತ ಬೈಯತೊಡಗುತ್ತಾನೆ. ಗದ್ದಲ ಕೇಳಿದ ನಾಗನಗೌಡರು ಏನೆಂದು ಕರೆದು ಕೇಳಲು ರಂಗ ಸನ್ನಿವೇಶವನ್ನು ವಿವರಿಸುತ್ತಾನೆ. ಇದನ್ನು ಕೇಳಿಸಿಕೊಂಡ ವಾಸು ಇದ್ದಕ್ಕಿದ್ದಂತೆ ನರಳು ದನಿಯಲ್ಲಿ, “ಪಾಪ! ಎಳೆಗರು. ಎಮ್ಮೆ ಹೊಡೆದುಕೊಂಡು ಹೋಗೋ ನೀನು ರಂಗಾ” ಎಂದು ಹೇಳುತ್ತಾನೆ. ಮಗುವಿನ ಬಾಯಿಂದ ಬಂದ ಆರ್ತದನಿಗೆ ಬೆಲೆಕೊಟ್ಟು ನಾಗನಗೌಡರು ಎಮ್ಮೆಯನ್ನು ಬಿಟ್ಟುಕೊಡುತ್ತಾರೆ. ರಂಗ ಎಮ್ಮೆ ಹೊಡೆದುಕೊಂಡು ವಾಸುವಿನ ಕಾಯಿಲೆ ಗುಣವಾಗಲೆಂದು ಹಾರೈಸುತ್ತ ಮನೆಗೆ ಬರುತ್ತಾನೆ.

ಕತೆಗೆ ಎರಡನೇ ನಾಟಕೀಯ ತಿರುವು ಬರುವುದು ಎಮ್ಮೆ ಮನೆಗೆ ಮರಳಿ ಬಂದ ಮೇಲೆ. ಎಮ್ಮೆ ಕೊಟ್ಟಿಗೆಗೆ ಬಂದೊಡನೆ ರಂಗ ಕರುವನ್ನು ಅದರ ಕೆಚ್ಚಲಿಗೆ ಹಿಡಿಯುತ್ತಾನೆ. ಕರು ಹಾಲನ್ನು ಕೊಂಚ ಚಪ್ಪರಿಸಿ, ನಿಲ್ಲಲು ಶಕ್ತಿಯಿಲ್ಲದೆ ನೆಲಕ್ಕೆ ಕುಸಿಯುತ್ತದೆ. ಆಗ ಎಮ್ಮೆ ತನ್ನ ಕರುವನ್ನು ವಾತ್ಸಲ್ಯದಿಂದ ನೆಕ್ಕತೊಡಗುತ್ತದೆ. ಅದೇ ಹೊತ್ತಿಗೆ ನಾಲೂರ ಮನೆಯಲ್ಲಿ ನಾಗನಗೌಡರು ಜ್ವರದಲ್ಲಿ ಬೇಯುತ್ತಿದ್ದ ವಾಸುವಿನ ಹಣೆಯ ಮೇಲೆ ಕೈಯಾಡಿಸುತ್ತಿರುತ್ತಾರೆ. ಅವರಿಗೆ ಮಗುವಿನ ಜ್ವರ ಇಳಿದಿರುವುದು ಗೊತ್ತಾಗುತ್ತದೆ.

ಅವರು ಆಶ್ಚರ್ಯದಿಂದ ಹಿಗ್ಗಿ, “ನೋಡಿದಿರೋ! ನಮ್ಮ ಜೋಯಿಸರ ವಿಭೂತಿ ಮಹಿಮೆ. ಹುಡುಗಗೆ ಜ್ವರ ಬಿಟ್ಟೇ ಹೋಗದೆ!” ಎಂದು ಅಲ್ಲಿದ್ದವರಿಗೆಲ್ಲ ಕೂಗಿ ಹೇಳುತ್ತಾರೆ. ಅವರ ಹೇಳಿಕೆಗೆ ಎಮ್ಮೆಯ ಪ್ರತಿಕ್ರಿಯೆಯನ್ನು ಹೀಗೆ ದಾಖಲಿಸುವ ಮೂಲಕ ಕತೆ ಮುಗಿಯುತ್ತದೆ: “ದೂರದ ಕೆರೆಯೂರಿನಲ್ಲಿ ತನ್ನ ಮುದ್ದುಕರುವನ್ನು ಮೂಸಿ ನೆಕ್ಕುತ್ತಿದ್ದ ಮೂಗುಪ್ರಾಣಿಯ ಆನಂದದ ವಿಭೂತಿ ಅದನ್ನಾಲಿಸಿ ಶ್ರೀಮನ್ಮೂಕವಾಗಿತ್ತು!”.

ಕತೆಯ ಜೀವಾಳವೆಲ್ಲ `ಶ್ರೀಮನ್ಮೂಕವಾಗಿತ್ತು~ ಹಾಗೂ `ವಿಭೂತಿ~ ಎಂಬ ಎರಡು ಪದಗಳಲ್ಲಿ ತುಂಬಿಕೊಂಡಿರುವಂತೆ ತೋರುತ್ತದೆ. ಕುವೆಂಪು ಸಾಹಿತ್ಯದಲ್ಲಿ `ಶ್ರೀ~ ಎನ್ನುವುದು ಸಾಮಾನ್ಯವೆನಿಸಿಕೊಂಡಿರುವ ಸಂಗತಿಯನ್ನು ಘನತೀಕರಿಸಲು ಬಳಕೆಯಾಗುವ ತಾತ್ವಿಕ ಪರಿಭಾಷೆ. ಅವರ `ಶ್ರೀಸಾಮಾನ್ಯ~ ಪದವನ್ನು ಇಲ್ಲಿ ನೆನೆಯಬಹುದು. ಇಲ್ಲಿ ಸಹ ಎಮ್ಮೆಯ ಮೂಕತನವು `ಶ್ರೀಮತ್~ ಎಂಬ ವಿಶೇಷಣದ ಮೂಲಕ ಅನುಭೂತಿಯ ಮಟ್ಟಕ್ಕೇರುತ್ತದೆ. `ಮನ್ಮೂಕ~ ಪದದಲ್ಲಿ ಮನುಷ್ಯರಂತೆ ಮಾತನಾಡಲಾಗದ ಮೂಕಪ್ರಾಣಿ ಎಂಬರ್ಥದ ವಿವರಣೆಯಿರುವಂತೆ, ಎಮ್ಮೆಯು ನಡೆದ ಘಟನೆಗಳಿಂದ ವಿಸ್ಮಯಪಟ್ಟು ಮೂಕವಾಯಿತು ಎಂಬರ್ಥವೂ ಇದೆ.

ಅದರ ವಿಸ್ಮಯದಲ್ಲಿ ತನ್ನನ್ನು ಅಗಲಿದ ಕೂಸಿನೊಂದಿಗೆ ಕೂಡಿಸಿದ್ದಕ್ಕಾಗಿ ತಾಯೆಮ್ಮೆ ಮಾಡಿದ ಹಾರೈಕೆಯ ಫಲವನ್ನು ಜೋಯಿಸರ ವಿಭೂತಿ ಮಹಿಮೆಯು ಬಾಚಿಕೊಂಡಿರುವುದರ ಬಗೆಗಿನ ವ್ಯಂಗ್ಯವೂ ಇದೆ; ಅಮೂರ್ತವೂ ಅಲೌಕಿಕವೂ ಆದ ಜೀವಕರುಣೆಯ ಹರಿವಿನಿಂದ ಸಂಭವಿಸಿದ ಕೆಡಿಟ್ಟನ್ನು ಜೋಯಿಸರ ವಿಭೂತಿಗೆ ವರ್ಗಾಯಿಸಿದ ನಾಗನಗೌಡರ ಅವೈಚಾರಿಕತೆಯ ಟೀಕೆಯೂ ಇದೆ.

ಕುವೆಂಪು ದರ್ಶನಲ್ಲಿ `ವಿಭೂತಿ~ ಎನ್ನುವುದು ಅಲೌಕಿವಾದುದು ಭವ್ಯವಾದುದು ಸುಂದರವಾದುದು ಎಂಬರ್ಥ ಪಡೆದಿರುವ ಪರಿಭಾಷೆ. ಇದಕ್ಕೆ ಕತೆಯ ಕೊನೇ ಸಾಲಿನಲ್ಲಿ ಬರುವ `ಆನಂದದ ವಿಭೂತಿ~ ಎಂಬ ಮಾತೇ ಸಾಕ್ಷಿ. ಅವರ `ವಿಭೂತಿ ಪೂಜೆ~ಯನ್ನೂ ಇಲ್ಲಿ ಉಲ್ಲೇಖಿಸಬಹುದು. ಮಾತು ಬಾರದ ಎಮ್ಮೆಯು ಲೋಕದ ವಿದ್ಯಮಾನಗಳಿಗೆ ಅವ್ಯಕ್ತ ಹೃದಯವಂತಿಕೆಯಿಂದ ಸ್ಪಂದಿಸುತ್ತ ತನ್ನದೇ ಭಾಷೆಯಲ್ಲಿ ನಿಜವಾದ `ಆನಂದದ ವಿಭೂತಿ~ಯನ್ನು ಅನುಭವಿಸುತ್ತಿದೆ- ಕವಿಯಂತೆ, ದಾರ್ಶನಿಕರಂತೆ. ಇದಕ್ಕೆ ಹೋಲಿಸಿದರೆ, ಇಲ್ಲಿ ಬರುವ ಜೋಯಿಸರು ಕೊಡುವ `ವಿಭೂತಿ~ಯು ಮಾನವರ ವಿವೇಚನಾ ಶಕ್ತಿಯನ್ನು ಒತ್ತೆ ಪಡೆದು ಮೌಢ್ಯದ ಮೇಲೆ ಹುಟ್ಟಿದ ಕೇವಲ ಬೂದಿಯಾಗಿದೆ. ವಿಭೂತಿಯ ಎರಡೂ ಮುಖಗಳನ್ನು ಕತೆ ಮುಖಾಮುಖಿಯಾಗಿಸುತ್ತದೆ.

ಇಲ್ಲಿ ಮಾರ್ಮಿಕವಾದುದು ಮೂಗ ಪ್ರಾಣಿ ಹಾಗೂ ಮಕ್ಕಳ ಪ್ರಜ್ಞೆಯ ಮೂಲಕ ಬುದ್ಧಿಯುಳ್ಳ ಮನುಷ್ಯರ ವರ್ತನೆಗಳನ್ನು ನೋಡುವ, ವಿಶ್ಲೇಷಿಸುವ ಮತ್ತು ಮೌಲ್ಯಮಾಪನ ಮಾಡುವ ವಿಧಾನ. ಮನುಷ್ಯ ವರ್ತನೆಗಳ ವಿಮರ್ಶೆಗೆ ಮನುಷ್ಯನ ದೃಷ್ಟಿಕೋನ ಬಳಸುವುದು ಸಹಜ. ಆದರೆ ಕುವೆಂಪು ಸಾಹಿತ್ಯದಲ್ಲಿ ಇದು ಉಲ್ಟಾ ಆಗುತ್ತದೆ. ಗುತ್ತಿಯ ವರ್ತನೆಯನ್ನು ಅವನ ನಾಯಿಯ ದೃಷ್ಟಿಕೋನದಲ್ಲಿ ತೋರಿಸುತ್ತ, ದೊಡ್ಡವರೆನಿಕೊಂಡವರ ವರ್ತನೆಗಳನ್ನು ಮಕ್ಕಳ ಮೂಲಕ ನೋಡಿಸುತ್ತ, ಮೌಲ್ಯಮಾಪನ ಮಾಡುವ ಪ್ರಸಂಗಗಳು ಅವರ ಕಾದಂಬರಿಗಳಲ್ಲಿ ಬರುತ್ತವೆ. ಮಕ್ಕಳ ಮೂಲಕ ಲೋಕವನ್ನು ನೋಡಲು ಕುವೆಂಪು ಯಾಕೆ ಮತ್ತೆಮತ್ತೆ ಯತ್ನಿಸುತ್ತಾರೆ?

ಬಹುಶಃ ಎರಡು ಕಾರಣಗಳಿವೆ:
1. ಎಳೆಯವರು ಸಮಾಜದಲ್ಲಿರುವ ಜಾತಿ, ಮತ, ಅಂತಸ್ತು, ಲಿಂಗಭೇದ ಇತ್ಯಾದಿ ಕಾಯಿಲೆಗಳಿಗೆ ಒಳಗಾಗದೆ, ಸರಳವಾಗಿ ನೇರವಾಗಿ ವಿಶ್ವಮಾನವರಾಗಿ ಲೋಕವನ್ನು ಗಮನಿಸುವುದರಿಂದ; ತರತಮ ಭೇದ ಮಾಡದ ಮಕ್ಕಳ ಮತ್ತು ಪ್ರಾಣಿಗಳ ಕಣ್ಣಲ್ಲಿ ಬೆಳೆದವರು ದೊಡ್ಡವರು ಶ್ರೇಷ್ಠರು ಎನಿಸಿಕೊಂಡವರ ಮೌಢ್ಯ ಮತ್ತು ಸಣ್ಣತನಗಳು, ಲೋಕದ ಡೊಂಕುಗಳು ಅನಾವರಣಗೊಳ್ಳುತ್ತ ಹೋಗುತ್ತವೆ. ಎಲ್ಲ ಮನುಷ್ಯರು ಹುಟ್ಟುತ್ತಲೇ ವಿಶ್ವಮಾನವರಾಗಿದ್ದು ಬೆಳೆಯುತ್ತ ಜಾತಿಮತಗಳ ಅಂಕುಶಕ್ಕೆ ಒಳಗಾಗಿ, ಅಲ್ಪಮಾನವರಾಗುತ್ತಾರೆ. ಅವರನ್ನು ವಿಶ್ವಮಾನವರಾಗಿಸಲು ಮತ್ತೊಮ್ಮೆ ಯತ್ನಿಸಬೇಕಾಗುತ್ತದೆ ಎಂದು ಕುವೆಂಪು ಭಾವಿಸಿದವರು.

ಸರ್ವಜೀವಿಗಳ ಎದೆಯಲ್ಲಿ ಹುದುಗಿರುವ ಜೀವಕರುಣೆ ಸದಾ ಜಿನುಗಿ ಹರಿಯುತ್ತ ಲೋಕದ ಬದುಕನ್ನು ಸಹ್ಯವಾಗಿಸುತ್ತದೆ. ಆದರೆ ಮನುಷ್ಯರಲ್ಲಿ ಅದರ ಸರಾಗ ಹರಿವಿಗೆ ಲೋಕದ ಅನೇಕ ಉಪಾಧಿಗಳು ತಡೆಯೊಡ್ಡಿವೆ. ಕರುವಿಲ್ಲದ ಎಮ್ಮೆಯಿಂದ ಹಾಲನ್ನು ಹಿಂಡಿಕೊಳ್ಳುವುದು, ಜನರ ಅಸಹಾಯಕತೆಯನ್ನು ಬಳಸಿ ಕುರುಡುಶ್ರದ್ಧೆ ಬೆಳೆಸುವುದು- ಇಂತಹ ಉಪಾಧಿಗಳೇ. ಆದರೆ ವಾಸುವಿನಂತಹ ಮಕ್ಕಳಿಗೆ ತಾಯನ್ನಗಲಿರುವ ಕರುವಿನ ವೇದನೆ ಥಟ್ಟನೆ ಅರ್ಥವಾಗುತ್ತದೆ. (`ಹೆಗ್ಗಡಿತಿ~ಯಲ್ಲೂ ಒಬ್ಬ ವಾಸು ಇದ್ದಾನೆ.) ಒಂದು ಮಗು ಹಿರಿಯರ ಮುಚ್ಚಿದ ಕಣ್ಣನ್ನು ತನ್ನ ಸಹಜ ನಿರುದ್ಯಿಶ್ಯ ನಡೆಯಿಂದ ತೆರೆಸಬಲ್ಲದು. ಅವಕ್ಕೆ ಮನುಷ್ಯ ಮತ್ತು ಪ್ರಾಣಿಗಳ ನಡುವೆ, ಚರಾಚರಗಳ ನಡುವೆ ಭೇದವನ್ನು ಎಣಿಸದ ಅದ್ವೈತದೃಷ್ಟಿಯ ಸಮಾಜವಾದಿ ದರ್ಶನ ಸಾಧ್ಯವಾಗಿರುತ್ತದೆ. ಹೀಗಾಗಿಯೇ ಇಲ್ಲಿ ವಾಸು, ರಂಗ, ಎಮ್ಮೆಗರು ಎಲ್ಲವೂ ಸಮಾನ ಮನಸ್ಕತೆಯಲ್ಲಿ ಏಕೀಭವಿಸಿದ್ದಾರೆ.

2. ಮಕ್ಕಳು ಲೋಕಕ್ಕೆ ಹೊಸಬರಾಗಿದ್ದು ಲೋಕದ ಚರಾಚರವನ್ನು ಮುಗ್ಧವಾಗಿ ಅಪಾರ ಬೆರಗಿನಿಂದ ನೋಡುತ್ತವೆ. ಅವಕ್ಕೆ ಪರಿಸರದಲ್ಲಿ ಇರುವ ಸಣ್ಣಪುಟ್ಟ ಸಂಗತಿಗಳೂ ವಿನೂತನವಾಗಿ ಅದ್ಭುತವಾಗಿ ಕಾಣಿಸಬಲ್ಲವು. ನಿತ್ಯಬದುಕಿನ ಸವೆನೋಟಕ್ಕೆ ಸಿಕ್ಕು ಹಳತಾಗಿರುವ ಸಂಗತಿಗಳನ್ನು ಹೊಸದೆಂಬಂತೆ ಅವು ನೋಡಬಲ್ಲವು. ಕವಿಗಳೂ ದಾರ್ಶನಿಕರೂ ಇದನ್ನೇ ತಾನೇ ಮಾಡುವುದು?

ಯಾವ ಕಷ್ಟವೂ ಇಲ್ಲದೆ ಸರಳವಾಗಿ ಹುಟ್ಟಿರುವ ಒಂದು ಪುಟ್ಟ ಕತೆ, ಎಷ್ಟೊಂದು ಅರ್ಥಗಳನ್ನು ಅಡಗಿಸಿಕೊಂಡಿದೆ! ರಂಗನ ಮನೆಯನ್ನು “ಮಲೆನಾಡಿನ ಹುಲ್ಲಿನ ಮನೆಯನ್ನು ಬೇಟೆನಾಯಿಗಳ ಕೈಗೆ ಸಿಕ್ಕದೆ ತಪ್ಪಿಸಿಕೊಂಡು ಪೊದೆಯಲ್ಲಿ ಅಡಗಿದ ಮೊಲದಂತೆ, ಮರಗಳ ಗುಂಪಿನ ನಡುವೆ ತಲೆಮರೆಸಿಕೊಂಡಿತ್ತು” ಎಂದು ಕತೆ ಬಣ್ಣಿಸುವುದುಂಟು. ಇಲ್ಲಿ ಧರ್ಮ ದೈವಗಳ, ಜಾತಿ ಆಸ್ತಿಗಳ ಹೆಸರಲ್ಲಿ ಯಾರ‌್ಯಾರು ಯಾರ‌್ಯಾರನ್ನು ಬೇಟೆ ಆಡುತಿದ್ದಾರೆ? ತನ್ನ ಎಮ್ಮೆಯನ್ನು ಹುಲಿ ಹಿಡಿರಬಹುದೇನೊ ಎಂಬ ರಂಗನ ಭಯ ಸುಳ್ಳಾಗುತ್ತದೆ. ಆದರೆ ಅವನಂತಹವರ ಬದುಕಿನಲ್ಲಿ ಬೇಟೆಯಾಡುವ ಹುಲಿಗಳೇ ಬೇರೆ ಇವೆ; ಇಲ್ಲಿ ಬರುವ ಎಮ್ಮೆಗೆ ಸೊಟ್ಟ ಕೋಡಿದೆ. ಆದರೆ ಇಲ್ಲಿ ಬರುವ ಕೆಲವು ದೊಡ್ಡ ಮನುಷ್ಯರ ಬುದ್ಧಿಯೇ ಸೊಟ್ಟ; ಮಕ್ಕಳು ದೈಹಿಕವಾಗಿ ರೋಗಿಗಳಾಗಿರಬಹುದು. ಆದರೆ ಅವುಗಳ ಮನಸ್ಸು ನಿರ್ಮಲವಾಗಿದೆ- ಬಗೆದಷ್ಟೂ ಅರ್ಥಗಳು!

ಕುವೆಂಪು `ರಾಮಾಯಣ ದರ್ಶನಂ~ ಮಹಾಕಾವ್ಯ ರಚಿಸುವುದಕ್ಕೆ ಮುನ್ನ `ಚಿತ್ರಾಂಗದಾ~ ಖಂಡಕಾವ್ಯದ ಮೂಲಕ ರಿಹರ್ಸಲ್ ಮಾಡಿದ್ದರು. ಅದರಂತೆ, ತಮ್ಮ ಮಹಾ ಕಾದಂಬರಿಗಳನ್ನು ಬರೆಯುವ ಮುನ್ನ ಇಂತಹ ಚಿಕ್ಕಪುಟ್ಟ ಕತೆಗಳಲ್ಲಿ ಮತ್ತು `ಮಲೆನಾಡಿನ ಚಿತ್ರಗಳು~ ಸಂಕಲನದ ಲಲಿತ ಪ್ರಬಂಧಗಳಲ್ಲಿ ಪ್ರಯೋಗ ಮಾಡಿದರೇನೊ? ಎಂತಲೇ ಅವು ಕಿರಿದರೊಳು ಪಿರಿದರ್ಥದಿಂದ ತುಂಬಿಕೊಂಡಿವೆ. ಎಳೆಯರನ್ನು ಮನಸ್ಸಲ್ಲಿಟ್ಟುಕೊಂಡು ಬರೆದಂತೆ ತೋರಿದರೂ ಸೀಮೋಲ್ಲಂಘನೆ ಮಾಡುತ್ತಿವೆ. ಕೊರೆಯಲಾದ ಗಡಿಸೀಮೆಗಳನ್ನು ಉಲ್ಲಂಘನೆ ಮಾಡದೆ ಮಹತ್ ಹುಟ್ಟೀತಾದರೂ ಹೇಗೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT