ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಗುಮಾರಿ ಮಾದರಿಗೆ ಪ್ರಧಾನಮಂತ್ರಿ ಮಣೆ

Last Updated 3 ಜುಲೈ 2016, 19:30 IST
ಅಕ್ಷರ ಗಾತ್ರ

ಮಾತು ಮತ್ತು ಮೌನಗಳು ವಿಲಕ್ಷಣವಾಗಿ ಮುಖಾಮುಖಿಯಾಗುತ್ತಿರುವ ಕಾಲವಿದು. ಹಿಂದಿನ ಸರ್ಕಾರದ ಮುಖ್ಯಸ್ಥರು ಮಾತೇ ಆಡುತ್ತಿರಲಿಲ್ಲ ಎನ್ನುವುದು 2014ರ ಚುನಾವಣೆಯ ಸೆಣಸಾಟದಲ್ಲಿ ಒಂದು ಅಸ್ತ್ರವಾಗಿತ್ತು. ಮಾತು, ಮಾತು ಮತ್ತು ಮಾತು ಚುನಾವಣೆ ಗೆದ್ದಿತು.

ಹೊಸ ಸರ್ಕಾರದಲ್ಲಿ ಮೌನಕ್ಕೆ ಸ್ಥಾನವಿರಲಾರದು ಎಂದು ಜನ ಅಂದುಕೊಂಡದ್ದು ಬಹುಬೇಗ ಸುಳ್ಳಾಯಿತು. ಸರ್ಕಾರದ  ಮುಖ್ಯಸ್ಥರು ಅರ್ಥಾತ್ ಈಗಿನ ಪ್ರಧಾನಮಂತ್ರಿಗಳು ಮಾತು ಮತ್ತು ಮೌನದ ಹೊಸ ನೆರಳು-ಬೆಳಕಿನಾಟವನ್ನು ತಮ್ಮ ಆಳ್ವಿಕೆಯಲ್ಲಿ ಅಳವಡಿಸಿಕೊಂಡರು. ಮೌನ ಮಾತಿನ ಜತೆ ಇನ್ನಿಲ್ಲದಂತೆ ಬೆಸೆದುಕೊಂಡಿತು.

ಚುನಾವಣೆಗೆ ಮುನ್ನ ಮಾತನಾಡಿದ ಹಾಗೆ ಅಧಿಕಾರ ಪಡೆದುಕೊಂಡ ಮೇಲೆ ಮಾತನಾಡಲು ಸಾಧ್ಯವಿಲ್ಲ; ಅಧಿಕಾರದಲ್ಲಿರುವಾಗ ಕೆಲವೊಮ್ಮೆ ಮೌನ ಅಗತ್ಯವಾಗುತ್ತದೆ. ಆದರೆ ಅಧಿಕಾರ ಹೇರುವ ಅನಿವಾರ್ಯ ಮೌನ ಬೇರೆ, ಅಧಿಕಾರದಲ್ಲಿ ಇರುವವರು ಆಯ್ದುಕೊಳ್ಳುವ ಮೌನ ಬೇರೆ.

ಪ್ರಧಾನ ಮಂತ್ರಿಗಳ ವಿಷಯದಲ್ಲಿ ಒಗಟಾಗಿ ಕಾಣಿಸಿಕೊಂಡದ್ದು ಮಾತು ಮತ್ತು ಮೌನಗಳ ನಡುವಣ ಅವರ ಆಯ್ಕೆ. ದೇಶದ ಎಷ್ಟೋ ಕ್ಲಿಷ್ಟ ಬೆಳವಣಿಗೆಗಳ ಬಗ್ಗೆ ಅವರ ನಿಲುವೇನು ಎಂದು ದೇಶಕ್ಕೆ ದೇಶವೇ ಎದುರು ನೋಡುತ್ತಿದ್ದಾಗ ಮೌನ ಅವರ ಉತ್ತರವಾಗಿರುತ್ತಿತ್ತು ಅಥವಾ ಮೌನ ಮುರಿಯಲು ಅವರು ಸುದೀರ್ಘ ಸಮಯ ಕಾಯುತ್ತಿದ್ದರು.

ಅವರಿಗೆ ಎಲ್ಲೆಲ್ಲಿ ಮಾತನಾಡಬೇಕು ಎಂದು ಅನ್ನಿಸುತ್ತಿತ್ತೋ ಅಲ್ಲೆಲ್ಲಾ ಮತ್ತೆ ಮತ್ತೆ ಮಾತು ಮೆರೆಯಿತು. ಈ ಆಯ್ಕೆ ಅವರ ರಾಜಕೀಯ ತಂತ್ರಗಾರಿಕೆಯ ಭಾಗ. ಮಾತು ಮತ್ತು ಮೌನಗಳನ್ನು ತಾನು ನಂಬಿದ ರಾಜಕೀಯದಲ್ಲಿ ಹೇಗೆ ಬಳಸಬೇಕು ಎನ್ನುವುದು ನಾಯಕನೊಬ್ಬನಿಗೆ ಬಿಟ್ಟ ವಿಷಯ.

ಇರಲಿ, ಹೋದ ವಾರ ಅವರು ಎರಡು ವರ್ಷಗಳಿಂದೀಚೆಗೆ ಜತನದಿಂದ ಕಾಯ್ದು ಕೊಂಡು ಬಂದ ಮೌನದ ಒ೦ದು ಆವರಣದಿಂದ ಅನಿರೀಕ್ಷಿತವಾಗಿ ಹೊರಬಂದರು.  ಅಧಿಕಾರಕ್ಕೆ ಬಂದ ನಂತರ ಒಮ್ಮೆಯೂ ಮಾಧ್ಯಮದ ಮೂಲಕ ಮಾತನಾಡದ ಪ್ರಧಾನಮಂತ್ರಿ  ‘ಟೈಮ್ಸ್ ನೌ’ ಎಂಬ ಇಂಗ್ಲಿಷ್ ನ್ಯೂಸ್ ಚಾನೆಲ್‌ನ ಸಂಪಾದಕರಿಗೆ (ಹೆಸರು ಅರ್ನಾಬ್ ಗೋಸ್ವಾಮಿ) ಸುಮಾರು ಎರಡು ಗಂಟೆಗಳ  ಸುದೀರ್ಘ ಸಂದರ್ಶನ ನೀಡಿದರು.

ಕೆಲವೊಂದು ವಿಷಯಗಳಲ್ಲಿ ಮೌನ ಸಾಕು ಎಂದು ಅವರಿಗೆ ಅನಿಸಿರಬೇಕು. ಅವರು ಇನ್ನೊಂದು ಚಾನೆಲ್‌ಗೆ ಅಥವಾ ಯಾವುದಾದರೂ ಪತ್ರಿಕೆಗೆ ಈ ಸಂದರ್ಶನ ನೀಡುತ್ತಿದ್ದರೆ ಅದರಲ್ಲೇನೂ ವಿಶೇಷ ಇರಲಿಲ್ಲ. ಅಥವಾ ಈ ಹಿಂದಿನ ಪ್ರಧಾನಿಗಳು ಮಾಡುತ್ತಿದ್ದಂತೆ ಎಲ್ಲಾ ಮಾಧ್ಯಮ ಪ್ರತಿ
ನಿಧಿಗಳನ್ನು ಕರೆದು ಅವರು ಒಂದು ಪತ್ರಿಕಾಗೋಷ್ಠಿ ನಡೆಸುತ್ತಿದ್ದರೆ ಅದೂ ಸಹಜವಾಗುತ್ತಿತ್ತು. 

ಎಲ್ಲದಕ್ಕೂ ಒಂದು ಆರಂಭ ಎಂದು ಇರುತ್ತದೆ. ಪ್ರಧಾನಿಯವರ ಮಾಧ್ಯಮ ಸಂವಹನ ಈ ಮೂಲಕ ಪ್ರಾರಂಭವಾಯಿತು ಎಂದುಕೊಳ್ಳಬಹುದಿತ್ತು. ಆದರೆ ಈ ಉದ್ದೇಶಕ್ಕೆ ಅವರು ‘ಟೈಮ್ಸ್ ನೌ’ ಚಾನೆಲ್‌ನ ಸಂಪಾದಕರನ್ನೇ ಆಯ್ದುಕೊಂಡ ಕಾರಣ ಈ ಸಂದರ್ಶನವನ್ನು ಬೇರೆಯೇ ರೀತಿಯಲ್ಲಿ ನೋಡಬೇಕಿದೆ.

ಪ್ರಧಾನ ಮಂತ್ರಿ  ಒಬ್ಬ ವಿಶಿಷ್ಟ ರಾಜಕಾರಣಿ ಹೇಗೋ,  ಹಾಗೆ ಈ ‘ಟೈಮ್ಸ್ ನೌ’  ಸಂಪಾದಕ  ಒಬ್ಬ ವಿಲಕ್ಷಣ ಪತ್ರಕರ್ತ. ಪ್ರಧಾನಮಂತ್ರಿಗಳು  ಮಾತನ್ನು ವೈಭವೀಕರಿಸುವ ಮಾದರಿಯೊಂದನ್ನು ಬಳಸಿಕೊಂಡು ರಾಜಕೀಯದಲ್ಲಿ ಅದ್ಭುತವಾದ ಬೆಳೆ ತೆಗೆಯುತ್ತಿರುವ ಒಬ್ಬ ರಾಜಕಾರಣಿಯಾದರೆ, ಈ ‘ಟೈಮ್ಸ್ ನೌ’  ಸಂಪಾದಕ ಸಾರ್ವಜನಿಕ ಚರ್ಚೆಗಳಲ್ಲಿ ಮಾತಿನ ಬೆಲೆಯನ್ನು ಸಾರ್ವಕಾಲಿಕವಾಗಿ ಅಪಮೌಲ್ಯಗೊಳಿಸಿ ಮಿಂಚುತ್ತಿರುವ ಒಬ್ಬ ಪತ್ರಕರ್ತ. 

ರಾಜಕಾರಣಿಯೊಬ್ಬ ಮಾತನ್ನು ಬಳಸಿಕೊಳ್ಳುವ ಮೂಲಕ ಬೆಳೆಯುವುದು ಸಹಜ. ಪತ್ರಕರ್ತನೊಬ್ಬ ಮಾತಿನ ಮೌಲ್ಯವನ್ನು ಕೆಡಿಸುವುದರ ಮೂಲಕ ಯಶಸ್ಸು ಸಾಧಿಸುವುದು ಅಸಹಜ ಮಾತ್ರವಲ್ಲ ಅದು ಒಂದು ಅಪಾಯಕಾರಿ ಅಪಭ್ರಂಶ. ಮೊನ್ನೆಯ ಸಂದರ್ಶನದಲ್ಲಿ ದೇಶ ಕಂಡದ್ದು ಈ ಎರಡು ಮಾದರಿಗಳ ಮುಖಾಮುಖಿಯನ್ನು. ಇದನ್ನು ಕೇವಲ ಒಂದು ಸಂದರ್ಶನ ಎಂದಷ್ಟೇ ನೋಡಲಾಗದು. ಇಲ್ಲಿ ಕೆಲ ಮಹತ್ವದ ಸಂದೇಶಗಳಿವೆ.

ಸಾರ್ವಜನಿಕ ಚರ್ಚೆಗಳಲ್ಲಿ ಮಾತಿನ ಮೌಲ್ಯ ವಿಪರೀತವಾಗಿ ಕುಸಿದದ್ದು 21ನೇ  ಶತಮಾನದ ಎರಡನೆಯ ದಶಕದಲ್ಲಿ ಭಾರತ ಕ೦ಡ ಅತ್ಯಂತ ಅಪಾಯಕಾರಿ ಬೆಳವಣಿಗೆಗಳಲ್ಲಿ ಒಂದು. ಸಾರ್ವಜನಿಕವಾಗಿ ಯಾರ ಕುರಿತು ಏನನ್ನು ಆಡಬೇಕು, ಏನನ್ನು ಬಿಡಬೇಕು, ಯಾವುದರ ಬಗ್ಗೆ ಅವಸರದ ತೀರ್ಮಾನಕ್ಕೆ ಬರಬಹುದು, ಯಾವ ವಿಷಯಗಳಲ್ಲಿ ಕಣ್ಣಾರೆ ಕಂಡದ್ದನ್ನೂ ಪರಾಂಬರಿಸಬೇಕು ಎಂಬಿತ್ಯಾದಿ ನಾಗರಿಕ  ಸಮಾಜ ತನಗೆ ತಾನೇ ವಿಧಿಸುವ ಕಟ್ಟುಪಾಡುಗಳೆಲ್ಲಾ ಕಳಚಿ ಬಿದ್ದ ಕಾಲಘಟ್ಟವಿದು.

ಇದರ ಹೊಣೆಯನ್ನು ರಾಜಕಾರಣಿಗಳ ಮೇಲೆ ಹೊರಿಸುವುದು ಸಾಮಾನ್ಯ. ವಾಸ್ತವದಲ್ಲಿ ಈ ಬೆಳವಣಿಗೆಗೆ ರಾಜಕಾರಣಿಗಳು ಮತ್ತು ಧರ್ಮಕಾರಣಿಗಳಿಗಿಂತ ಹೆಚ್ಚು ಕಾರಣಕರ್ತರಾಗಿರುವುದು ಮಾಧ್ಯಮದ ಕೆಲ ಮಂದಿ. ಅವರ ಸಾಲಿನಲ್ಲಿ ಮೊದಲಿಗೆ ಕಾಣಿಸುವುದು ಈ ‘ಟೈಮ್ಸ್ ನೌ’ ಸಂಪಾದಕರ ಹೆಸರು.

ಪ್ರತೀ ರಾತ್ರಿ ಒಂಬತ್ತು ಗಂಟೆಗೆ ತಮ್ಮ ಚಾನೆಲ್‌ನಲ್ಲಿ ಅವರು ನಡೆಸಿಕೊಡುವ ‘ನ್ಯೂಸ್ ಅವರ್ ಡಿಬೇಟ್’ ಮತ್ತು ‘ಫ್ರಾಂಕ್ಲೀ ಸ್ಪೀಕಿಂಗ್’ ಮುಂತಾದ ಸುದ್ದಿ-ಆಧಾರಿತಗಳಲ್ಲಿ ಅಕ್ಷರಶಃ ರಣರಂಗ ಸೃಷ್ಟಿಯಾಗಿ ಬಿಡುತ್ತದೆ. ಕೇವಲ ರಣರಂಗವಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಅಲ್ಲಿ ಕಂಡು ಬರುವುದು ಸಾಕ್ಷಾತ್ ಬೀದಿನ್ಯಾಯದ ಚಿತ್ರಣ.

ಅಂದರೆ ಬೀದಿಯಲ್ಲಿ ಸಂಶಯ ಬಂದ ಮಾತ್ರಕ್ಕೆ ಜನ ಯಾರನ್ನೋ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಕಟ್ಟಿ ಥಳಿಸಿ ನಿರ್ದಾಕ್ಷಿಣ್ಯವಾಗಿ ಕೊಂದೇಬಿಡುತ್ತಾರಲ್ಲ- ಹಾಗೆ. ಅವರು ಚರ್ಚೆಗೆ ಆಹ್ವಾನಿಸಿದ ಅತಿಥಿಗಳು ಅವರ ನಿಲುವನ್ನು ಒಪ್ಪಿಕೊಂಡರೆ ಸರಿ- ಇಲ್ಲವಾದರೆ ಅವರಿಗೆ ಮಾತನಾಡಲು ಅವಕಾಶವೇ  ಇಲ್ಲ.

ಒಂದು ವೇಳೆ ಒತ್ತಾಯಪೂರ್ವಕವಾಗಿ ಯಾರಾದರೂ  ಮಾತನಾಡಿದ್ದೆ ಆದರೆ ಅಂತಹವರನ್ನು ಹೀನಾಮಾನ ಬಯ್ಯುವುದು, ಬುದ್ಧಿಗೇಡಿ, ಅಜ್ಞಾನಿ, ದೇಶ
ದ್ರೋಹಿ ಎಂದು ಕೂಗಾಡುವುದು, ಈ ಸಂಪಾದಕರ ಶೈಲಿ.

ವಿಷಯ ಯಾವುದೇ ಇರಲಿ, ಅದೆಷ್ಟೇ ಸಂಕೀರ್ಣವಾಗಿರಲಿ ಈ ಸಂಪಾದಕರು ತನ್ನದೇ ಆದ ಏಕಪಕ್ಷೀಯ  ನಿರ್ಣಯಕ್ಕೆ ಬಂದುಬಿಡುತ್ತಾರೆ. ಅದು ಕೆಲವೊಮ್ಮೆ ಸರಿಯಾಗಿಯೂ ಇರಬಹುದು. ಆ ವಿಷಯ ಬೇರೆ. ಒಬ್ಬರು ಮಾಧ್ಯಮ ವಿಶ್ಲೇಷಕರು ಹೇಳುವಂತೆ: ‘ಅವರು ಕೈಗೆತ್ತಿಕೊಂಡ ವಿಷಯದಲ್ಲಿ ಅವರೇ ಫಿರ್ಯಾದುದಾರರು, ಅವರೇ ತನಿಖಾಧಿಕಾರಿ, ಅವರೇ ವಕೀಲ, ಅವರೇ ನ್ಯಾಯಾಧೀಶ.

ಮಾತ್ರವಲ್ಲ ತಪ್ಪಿತಸ್ಥರನ್ನು ಗಲ್ಲಿಗೇರಿಸಲು ಕುಣಿಕೆ ಬಿಗಿಯುವವರು ಅವರೇ, ಕೊನೆಗೆ ಶವಸಂಸ್ಕಾರ ಮಾಡುವವರೂ ಅವರೇ’. ಭಾರತ ಭಾರತ ಎಂದು ದೇಶಭಕ್ತಿಯ ಮಂತ್ರ ಪಠಿಸುತ್ತಾ ಅಮೆರಿಕದ ಅತೀವ ಬಲಪಂಥೀಯ ‘ಫೋಕ್ಸ್ ನ್ಯೂಸ್’ ಮಾದರಿಯನ್ನೇ ಅನುಕರಿಸುವ ಇವರ ಕೂಗುಮಾರಿ ಮಾಧ್ಯಮ ಮಾದರಿ ಕೆಲವೊಮ್ಮೆ ತಮಾಷೆಯಾಗಿಯೂ, ಕೆಲವೊಮ್ಮೆ ಗಂಭೀರವಾಗಿಯೂ, ಕೆಲವೊಮ್ಮೆ ಅಸಂಗತ ನಾಟಕದಂತೆಯೂ ಕಾಣಿಸುತ್ತದೆ.

ಈ ಮಾದರಿಯ ಬಗ್ಗೆ ದೇಶವ್ಯಾಪಿ ಚರ್ಚೆಯಾಗಿದೆ. ಎರಡು ಪ್ರಮುಖ ನಿಯತಕಾಲಿಕಗಳು ಮುಖಪುಟ ಲೇಖನ ಪ್ರಕಟಿಸಿ ಈ ಮಾದರಿಯ ಅಪಾಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಈ ಸಂಪಾದಕರ ಶೈಲಿಯನ್ನು ಅನುಕರಿಸಿ ಇನ್ನೊಂದು ಚಾನೆಲ್‌ನಲ್ಲಿ ಬರುವ ಒಂದು ಅಣಕ ಕಾರ್ಯಕ್ರಮ ಕೂಡಾ ಬಹಳ ಜನಪ್ರಿಯ. ಅವರ ನುಡಿಗಟ್ಟುಗಳು, ಅವರು ಬಳಸುವ ಭಾಷೆ, ಅವರ ಹಾವ ಭಾವ ಇತ್ಯಾದಿಗಳ ಬಗ್ಗೆ ಜೋಕುಗಳು ಹರಿದಾಡುತ್ತವೆ. ಅವರ ಸುತ್ತ ಒಂದು ಆಧುನಿಕ ಜಾನಪದ ಸಾಹಿತ್ಯವೇ ಸೃಷ್ಟಿಯಾಗುತ್ತಿದೆ.

ಹೋಗಲಿ ಬಿಡಿ, ಇಂತಹವರನ್ನೆಲ್ಲ ಉಪೇಕ್ಷಿಸಿದರೆ ಆಯಿತು ಎನ್ನುವ ಹಾಗಿಲ್ಲ. ಯಾಕೆಂದರೆ ಅವರೀಗ ದೇಶದ ಅತ್ಯಂತ ಜನಪ್ರಿಯ ಟಿವಿ ಆ್ಯಂಕರ್.
ಅವರ ‘ನ್ಯೂಸ್ ಅವರ್ ಡಿಬೇಟ್’ ಅತ್ಯಂತ ಹೆಚ್ಚು ಜನ ವೀಕ್ಷಿಸುವ ನ್ಯೂಸ್ ಆಧಾರಿತ ಚರ್ಚಾ ಕಾರ್ಯಕ್ರಮ.

ಎಲ್ಲರನ್ನೂ ಕುಳ್ಳಿರಿಸಿ ಬಯ್ಯುವ ಮಾಧ್ಯಮ ಮಾದರಿಯೊಂದು ಈ ದೇಶದ ಇಂಗ್ಲಿಷ್ ವಾರ್ತೆ ನೋಡುವ ಮಧ್ಯಮ ವರ್ಗದವರ ಮಧ್ಯೆ ಇಷ್ಟೊಂದು ಜನಪ್ರಿಯವಾಗಿದ್ದು ಯಾಕೆ ಎನ್ನುವ ಪ್ರಶ್ನೆ  ನಾಯಕರನ್ನು ಚಿಂತೆಗೀಡು ಮಾಡಬೇಕಿತ್ತು. ಆದರೆ ಆಗುತ್ತಿರುವುದೇ ಬೇರೆ.

ಈಗ ಈ ಮಾದರಿಗೊಂದು ಅತ್ಯುನ್ನತ ಅಂಗೀಕಾರದ ಮುದ್ರೆ ಎಂಬಂತೆ ಸ್ವತಃ ಪ್ರಧಾನಮಂತ್ರಿಯವರು  ತಮ್ಮ ಚೊಚ್ಚಲ ಮಾಧ್ಯಮ ಸಂದರ್ಶನಕ್ಕೆ ಉಳಿದೆಲ್ಲರನ್ನೂ ಕಡೆಗಣಿಸಿ ‘ಟೈಮ್ಸ್ ನೌ’ ಸಂಪಾದಕರಿಗೆ ಅವಕಾಶ ನೀಡಿದ್ದಾರೆ. ಸಂದೇಶ ಸ್ಪಷ್ಟವಾಗಿದೆ.

ಈ ದೇಶದಲ್ಲಿ ಕೂಗುಮಾರಿ ಮಾಧ್ಯಮ ಮಾದರಿಯೊಂದು  ಮಾತ್ರ ಜನಸಾಮಾನ್ಯರಿಂದ ಹಿಡಿದು ಪ್ರಧಾನಮಂತ್ರಿಯವರ ತನಕ ಎಲ್ಲರನ್ನೂ ತಲುಪಬಲ್ಲದು ಎನ್ನುವುದೇ ಆ ಸಂದೇಶ.

ಪ್ರಧಾನಮಂತ್ರಿಯವರು ಈ ಹಿಂದೆ ಚುನಾವಣೆಯ ಸಂದರ್ಭದಲ್ಲೂ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಇದೇ  ಸಂಪಾದಕರಿಗೆ ಸಂದರ್ಶನ ನೀಡಿದ್ದರು. ಕಾಂಗ್ರೆಸ್ಸಿನ ಉಪಾಧ್ಯಕ್ಷರೂ ತಮ್ಮ ಮೊದಲ ಸಂದರ್ಶನ ನೀಡಿದ್ದು ಇದೇ ಚಾನೆಲ್‌ಗೆ. ಚುನಾವಣೆಯ ಸಂದರ್ಭ ಬೇರೆ, ಆಗ ಜನಪ್ರಿಯತೆ ಒಂದು ಮಾನದಂಡವಾಗಿರಬಹುದು. ಈಗ ಅದು ಪ್ರಸ್ತುತವಲ್ಲ. 

ಪ್ರಧಾನಿಯವರ ಮೊದಲ ಸಂದರ್ಶನ ಎಂದ ಮೇಲೆ ಅದನ್ನು ಯಾವ ಚಾನೆಲ್‌ಗೆ ನೀಡಿದ್ದರೂ ಜನ ಕಾದು ಕುಳಿತು ನೋಡುತ್ತಿದ್ದರು. ಬಹುಶಃ ಪ್ರಧಾನ ಮಂತ್ರಿಗಳಿಗೆ ಉಳಿದ ಇಂಗ್ಲಿಷ್ ಚಾನೆಲ್‌ಗಳ ಬಗ್ಗೆ ನಂಬಿಕೆ ಇಲ್ಲ, ಅಥವಾ ಆ ಚಾನೆಲ್‌ನವರು ಇವರು ಬಯಸಿದ ಪ್ರಶ್ನೆಗಳನ್ನಷ್ಟೇ ಕೇಳಲು ತಯಾರಿಲ್ಲ.ಇನ್ನು ದೂರದರ್ಶನ. ಅದನ್ನು ಜನ ನಂಬುವುದಿಲ್ಲ.

ಸಮಕಾಲೀನ ಮಾಧ್ಯಮ ಸಂಸ್ಥೆಗಳ ಬಗ್ಗೆ ಆಳುವ ಪಕ್ಷಕ್ಕೆ ಈ ರೀತಿಯ ಒಂದು ಮನೋಭಾವ ಇರಲು ಕಾರಣಗಳು ಏನೇ ಇರಬಹುದು. ಒಂದು ಮಾತ್ರ ನಿಜ. ಕೊನೆಗೂ ಎಲ್ಲರಿಗೂ ಪ್ರಿಯವಾಗುವ ಕನಿಷ್ಠ ಮಹತ್ತಮ ಮಾದರಿ ಎಂದರೆ ಎಲ್ಲ ರೀತಿಯ ಸಮತೋಲನಗಳನ್ನು ಕಳೆದುಕೊಂಡ ಕೂಗುಮಾರಿ ಮಾದರಿ, ಈ ಮಾದರಿ ಕೇವಲ ‘ಟೈಮ್ಸ್ ನೌ’  ಸಂಪಾದಕರ ಅಂಗಳದಲ್ಲೇ ಉಳಿದಿಲ್ಲ. ದೇಶದಾದ್ಯ೦ತ ಇದರ ತದ್ರೂಪಿಗಳು ಹುಟ್ಟಿಕೊಂಡಿದ್ದಾರೆ.

ಈ ತದ್ರೂಪಿಗಳ ತದ್ರೂಪಿಗಳು ಹುಟ್ಟಿಕೊಂಡಿದ್ದಾರೆ. ಯಾರಿಗೂ ಸತ್ಯವನ್ನು ಶೋಧಿಸುವ ಮತ್ತು ಪರಿಶೋಧಿಸುವ ವ್ಯವಧಾನವಿಲ್ಲ. ಪರಾಂಬರಿಸದ ಸತ್ಯಗಳನ್ನು ಆಧರಿಸಿ ವಿಪರೀತ ಹೊಗಳುವುದು ಮತ್ತು ವಿಪರೀತ ತೆಗಳುವುದು ಇಲ್ಲಿನ ಬಂಡವಾಳ. ವರ್ಷದ ಹಿಂದೆ ಐಎಎಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಾಗ ಕನ್ನಡ ಟಿವಿ ಚಾನೆಲ್‌ಗಳು ಮಾಡಿದ್ದೆಲ್ಲವನ್ನೂ ನೆನಪಿಸಿಕೊಂಡರೆ ಈ ಮಾದರಿ ಸುಲಭವಾಗಿ ಅರ್ಥವಾಗುತ್ತದೆ.

ಟೈಮ್ಸ್ ನೌ ಸಂಪಾದಕರು ಆಗಾಗ ತಳೆಯುವ ತೀರಾ ಬಲಪಂಥೀಯ ನಿಲುವುಗಳು ಬಿಜಿಪಿಯವರಿಗೆ ಅಪ್ಯಾಯಮಾನವಾಗಬಹುದು. ಇತರ ಕೆಲವು ಇಂಗ್ಲಿಷ್ ಟಿವಿ ಚಾನೆಲ್‌ಗಳು ‘ದೇಶ ಪ್ರೇಮದ’ ವಿಷಯದಲ್ಲಿ ತಮ್ಮ ಪರ ನಿಲ್ಲುವುದಿಲ್ಲ ಎನ್ನುವ ಬಿಜೆಪಿಯವರ ಅನಿಸಿಕೆ ಕೂಡ ಅವ
ರಿಗೆ ‘ಟೈಮ್ಸ್ ನೌ’  ಸಂಪಾದಕರು ಹೆಚ್ಚು ಇಷ್ಟವಾಗಲು ಕಾರಣವೋ ಏನೋ.

ಇತ್ತೀಚೆಗಿನ ಇಶ್ರತ್‌ ಜಹಾಂ ಪ್ರಕರಣ, ಜೆಎನ್‌ಯು ಪ್ರಕರಣ ಇತ್ಯಾದಿಗಳಲ್ಲಿ ಆಳುವ ಪಕ್ಷಕ್ಕೆ ದೊಡ್ಡ ಮಟ್ಟಿನ ಬೆಂಬಲ ನೀಡಿದ್ದು ‘ಟೈಮ್ಸ್ ನೌ’. ಆದರೆ ಹೈದರಾಬಾದ್ ವಿಶ್ವವಿದ್ಯಾಲಯದ ಆತ್ಮಹತ್ಯೆ ಪ್ರಕರಣ, ವಿದೇಶಾಂಗ ಸಚಿವೆ ಎದುರಿಸಿದ ಸ್ವಜನಪಕ್ಷಪಾತದ ಆಪಾದನೆ ಇತ್ಯಾದಿ ವಿಷಯಗಳಲ್ಲಿ ಟೈಮ್ಸ್ ನೌ ಬಿಜೆಪಿಯ ಮೇಲೆ ದಿನಗಟ್ಟಲೆ ಪ್ರಹಾರ ನಡೆಸಿದ್ದೂ ಇದೆ. ಮಾತ್ರವಲ್ಲ, ಬಿಜೆಪಿಯ ಮಂದಿಯೇ ಈ ಸಂಪಾದಕರ  ಶೈಲಿಯನ್ನು ವಿರೋಧಿಸಿದ್ದಿದೆ.

ಬಿಜೆಪಿಯ ಹಿಂದಿನ ಓರ್ವ ವಕ್ತಾರೆ (ಈಗವರು ಸಂಸದರು)  ಸಂಪಾದಕರ ಜತೆ ನಡೆಸಿದ ಜಟಾಪಟಿ ದೇಶ ಪ್ರಸಿದ್ಧ.  ಬಿಜೆಪಿಯ ಒಬ್ಬರು ರಾಜ್ಯಸಭಾ ಸದಸ್ಯರಂತೂ ಈ ಸಂಪಾದಕರನ್ನು ಇಲ್ಲಿ ಬರೆಯಲಾಗದಷ್ಟು ಕೆಟ್ಟ ಪದಗಳನ್ನು ಬಳಸಿ ಹೀಯಾಳಿಸಿದ್ದರು.

ಇಷ್ಟೆಲ್ಲ ಇದ್ದರೂ ಕೆಲವು ಬಾರಿಯಾದರೂ ತಮ್ಮ ಪಕ್ಷ ಮತ್ತು ಸರ್ಕಾರದ ನಿಲುವುಗಳನ್ನು ಸಮರ್ಥಿಸಲು ಈ ಚಾನೆಲ್‌ನ ಸಂಪಾದಕರು ಆವೇಶಭರಿತರಾಗಿ ವಾದಿಸುತ್ತಾರೆ ಎನ್ನುವ ಕಾರಣಕ್ಕೆ ಪ್ರಧಾನಮಂತ್ರಿಯವರುಸಂದರ್ಶನ ನೀಡಲು ಅವರನ್ನೇ ಆಯ್ದುಕೊಂಡಿರಬಹುದು.

ಪ್ರಧಾನಿಯವರಿಗೆ ಮತ್ತು ಅವರ ಪಕ್ಷಕ್ಕೆ ಇದು ಲಾಭನಷ್ಟದ ಲೆಕ್ಕಾಚಾರವಾಗಿರಬಹುದು. ಆದರೆ ತತ್ಪರಿಣಾಮವಾಗಿ ರವಾನೆಯಾದ ಸಂದೇಶ ಮಾತ್ರ ದೇಶಕ್ಕೆ ಅಪಾಯಕಾರಿ. ದೇಶ ಪ್ರೇಮಿಗಳಿಗೆ ಪಕ್ಷಕ್ಕಿಂತ ದೇಶ ಮುಖ್ಯವಾಗಬೇಕಿತ್ತಲ್ಲಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT