ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂತಲ್ಲೇ ಕುಬೇರನಾಗುವ ‘ಭಾಗ್ಯ’

ಅಕ್ಷರ ಗಾತ್ರ

ಪೆಕರ ಬಹಳ ಡಲ್ಲಾಗಿದ್ದ. ಕಾಂಗ್ರೆಸ್ ಕಚೇರಿಗೆ ಸ್ಯಾಂಕ್ಷನ್ ಆದ ಜಾಗವನ್ನು ಪರ್ಸನಲ್ ಹೆಸರಿಗೆ ನೋಂದಾಯಿಸಿ ‘ಕೊಂಡ’ ನಂತರ ಸಿಕ್ಕಿಬಿದ್ದರೆ ಹೇಗೆ ಮುಖ ಹುಳ್ಳುಳ್ ಆಗುತ್ತೋ ಹಾಗೆ ಪೆಕರನ ಮುಖ ಜೋತು ಬಿದ್ದಿತ್ತು. ಯಾವತ್ತೂ ನಗುನಗುತ್ತಾ ಇರುವ ಪೆಕರ ‘ಜಿ’ ಕೆಟಗರಿಯಲ್ಲಿ ಸುಳ್ಳು ಪ್ರಮಾಣಪತ್ರ ಕೊಟ್ಟು ಸೈಟು ಪಡೆದವನೂ ಅಲ್ಲ, ಸಚಿನ್ ನಿವೃತ್ತಿ ಆಗ್ತಾ ಇದ್ದಾರೆ ಅಂತ ಬೇಜಾರ್ ಮಾಡಿ ಕೊಂಡವನೂ ಅಲ್ಲ.

‘ಏನ್ ಪೆಕರಾ ಅವರೇ, ನೀವು ಡಲ್ಲಾಗಿರೋದನ್ನು ನೋಡಿದ್ರೆ ಬೇಜಾರಾಗುತ್ತೆ. ದೀಪಾವಳಿ ಹಬ್ಬದ ದಿನ ಚಿನಕುರಳಿ ಪಟಾಕಿ ತರಹ ಪಟಪಟಾಂತ ಜೋಕ್ ಮಾಡ್ಕಂಡು ಜಾಲಿಯಾಗಿರೋದು ಬಿಟ್ಟು, ಏಕ್ ದಿನ್‌ ಕಾ ಕ್ರಿಕೆಟ್ ನಡೆಯೋ ಟೈಂನಲ್ಲಿ ಮಳೆ ಬಂದಾಗ ಅಭಿಮಾನಿಗಳು ಥಂಡಾ ಹೊಡೆದಂತೆ ನೀವೂ ಥಂಡಾ ಹೊಡೆದು ಬಿಟ್ಟಿದ್ದೀರಲ್ಲಾ ಏಕೆ?’ ಎಂದು ಪೆಕರನನ್ನು ಸ್ನೇಹಿತರು ಪ್ರಶ್ನಿಸಿದರು.

ಪೆಕರನದು ಮೌನವೇ ಉತ್ತರವಾಗಿತ್ತು, ‘ಅವರ ಕಡೆಯವರು ಯಾರಾದ್ರೂ ವೋಲ್ವೊ ಬಸ್ಸಿನಲ್ಲಿ ಹೈದರಾಬಾದ್ ಕಡೆ ಹೋಗಿದ್ರಾ?’
‘ಖಾಸಗಿ ಬಸ್‌ನವರ ಕಥೆ ಬಿಡಪ್ಪಾ, ದೀಪಾವಳಿ ಸೀಸನ್‌ನಲ್ಲಿ ಟಿಕೆಟ್ ರೇಟ್ ಡಬ್ಬಲ್ ಮಾಡಿ ಪ್ರಯಾಣಿಕ ರನ್ನು ಲೂಟಿ ಮಾಡ್ತಾ ಇದ್ದಾರೆ, ಬಸ್‌ಗಳಲ್ಲಿ  ಬ್ರೇಕ್ ಸರಿ ಇರಲ್ಲ, ತುರ್ತು ಬಾಗಿಲುಗಳು ಓಪನ್ನೇ ಆಗುವುದಿಲ್ಲ, ಡ್ರೈವರ್‌ಗಳಿಗೆ ಸರಿಯಾದ ಟ್ರೈನಿಂಗ್ ಇರಲ್ಲ, ನಿಲ್ಲಬಾರದ ಜಾಗದಲ್ಲಿ ನಿಂತರೂ ಪೊಲೀಸರು ಪ್ರಶ್ನಿಸುವುದಿಲ್ಲ. ಖಾಸಗಿ ಬಸ್‌ಗಳ ಅಟಾಟೋಪಕ್ಕೆ ಕಡಿವಾಣ ಹಾಕುವವರೇ ಇಲ್ಲವಲ್ಲಪ್ಪ. ರಾಜಕಾರಣಿಗಳೇ ಖಾಸಗಿ ಬಸ್‌ಗಳ ಕಂಪೆನಿ ಇಟ್ಕೊಂಡು ಆಡಬಾರದ ಆಟ ಆಡ್ತಾ ಇದ್ದಾರೆ. ಹೇಳೋರಿಲ್ಲ, ಕೇಳೋರಿಲ್ಲ’.
ಪೆಕರನ ಚಿಂತಾಕ್ರಾಂತ ಸ್ಥಿತಿಯನ್ನು ಮುಂದಿಟ್ಟುಕೊಂಡು ಸ್ನೇಹಿತರು ವಿಶ್ಲೇಷಣೆ ಆರಂಭಿಸಿದ್ದರು.

‘ಬಹುಶಃ ಪಂಚರಾಜ್ಯಗಳ ಚುನಾವಣೆ ವಿಶ್ಲೇಷಣೆಗೆ ಉತ್ತರ ಭಾರತ ಟೂರ್‌ ಮಾಡ್ರಿ ಅಂತ ಎಡಿಟರ್ ಹೇಳಿರಬೇಕು ಅದಕ್ಕೇ ಡಲ್ಲಾಗಿದ್ದಾರೆ’.

‘ಪೆಕರ ಅದಕ್ಕೆಲ್ಲಾ ಅಂಜುವವನಲ್ಲ ಅಂತ ಗೊತ್ತಿಲ್ವೆ? ಉತ್ತರ ಭಾರತ ಪ್ರವಾಸ ಮಾಡಿ ಅಂದರೆ ಹಮ್ ಆಪ್‌ ಕೆ ಕೌನ್ ಹೈ ಅಂತ ಹೊರಟೇ ಬಿಡ್ತಾನೆ, ದಕ್ಷಿಣ ಭಾರತ ಪ್ರವಾಸ ಅಂದ್ರೆ ವಣಕ್ಕಂ, ಪೋತಾಮು ಅಂತ ಹೊರಟೇ ಬಿಡ್ತಾನೆ’.

‘ಆದ್ರೂ ಪಟ್ನಾದಲ್ಲಿ ಸ್ಫೋಟ ನಡೆದ ನಂತರ ಇದ್ಯಾಕಪ್ಪಾ ಕಿರಿಕಿರಿ ಅಂತ ಅನ್ನಿಸಿರಬಹುದು. ಯುವರಾಜರು ಕೂಡ ನನ್ನ ಹತ್ಯೆ ಆದರೂ ಅಗಬಹುದು ಅಂತ ಹೇಳೋಕೆ ಶುರುಮಾಡಿ ದ್ದಾರೆ, ಇತ್ತ ನಮೋನಮೋ ಭಾಷಣಕ್ಕೆ ಮುನ್ನ ಸರಣಿ ಬಾಂಬ್ ಸ್ಫೋಟ ನಡೀತಾ ಇದೆ. ಇಲ್ಲಿಂದ ಅಲ್ಲಿಗೆ ಹೋಗಿ, ಈ ರಾಜಕಾರಣದ ನಡುವೆ ಸಿಕ್ಕಿಹಾಕಿಕೊಂಡು ಕಾರ್ಪೊರೇಷನ್ ಹೆಣ ಆಗೋ ಹಣೆಬರಹ ಯಾವನ್‌ಗ್ರೀ ಬೇಕು?’

ಪೆಕರನ ಸಂಕಷ್ಟಕ್ಕೆ ನಾನಾ ಕಾರಣಗಳು. ಪೆಕರ ಬಾಯಿ ಬಿಟ್ಟಿದ್ದರೆ ಇಷ್ಟೆಲ್ಲಾ ವಿವರಣೆ, ವ್ಯಾಖ್ಯಾನಗಳಿಗೆ ಜಾಗವಾದರೂ ಎಲ್ಲಿರುತ್ತಿತ್ತು.
ಸ್ನೇಹಿತರು ತನ್ನನ್ನು ನಿಮಿತ್ತ ಮಾಡಿಕೊಂಡು ಬಾಯಿಗೆ ಬಂದಂತೆ ಕಾರಣಗಳ ಮಹಾಪೂರವನ್ನೇ ಹರಿಸುತ್ತಿರುವುದನ್ನು ಕಂಡು ಪೆಕರನಿಗೆ ಸಹಿಸಲಾಗಲಿಲ್ಲ. ‘ಸ್ವಲ್ಪ ಬಾಯಿಗೆ ಬೀಗ ಹಾಕ್ಕೋತೀರಾ? ಟಿ.ವಿ.ಗಳಲ್ಲಿ ಸಂದರ್ಶನ ಮಾಡುವವರು ತಾವೇ ಪ್ರಶ್ನೆ ಕೇಳಿ, ತಾವೇ ಉತ್ತರಿಸುತ್ತಾ, ಸಂದರ್ಶನಕ್ಕೆ ಬಂದವರನ್ನು ಮಾತನಾಡಲೂ ಬಿಡದೆ, ‘ಬಕರ’ ಮಾಡೋ ಹಾಗೆ ಮಾಡ್ತಿದ್ದೀರಲ್ರಿ? ನಾನೊಬ್ಬ ಎದುರುಗಡೆ ನಿಂತಿದ್ದೀನಿ ಅನ್ನೋದು ಮರ್‌ತೇ ಹೋಯ್ತಾ?’ ಎಂದು ಸ್ನೇಹಿತರನ್ನು ದಬಾಯಿಸಿದ.

‘ನೀನು ಎಂದಿನಂತೆ ಇಲ್ಲ. ಡಲ್ಲಾಗಿದ್ದೀಯಾ, ಕಾರಣ ಕೇಳಿದ್ರೆ ಮಾತಾಡ್ತಾ ಇಲ್ಲ. ಅದಕ್ಕೆ ನಾವೇ ಕಾರಣ ಹುಡುಕ್ತಾ ಇದ್ದೇವೆ. ಈಗ್ಲಾದ್ರೂ ಕಾರಣ ಹೇಳಿಬಿಡು ಸುಮ್ಮನಾಗ್ತೀವಿ’ ಸ್ನೇಹಿತರು ಪೆಕರನಿಗೊಂದು ಗುನ್ನ ಕೊಟ್ಟರು.

‘ಏನಿಲ್ಲ, ಫೋಬ್ಸ್ ಪಟ್ಟಿಯಲ್ಲಿ ನನ್ನ ಹೆಸರೇ ಇಲ್ಲವಲ್ಲ ಅದಕ್ಕೆ ದುಃಖವಾಯ್ತು’ ಪೆಕರ ತನ್ನ ದುಃಖಕ್ಕೆ ಕಾರಣ ಹೇಳಿದ.
ಸ್ನೇಹಿತರು ಮೂರ್ಛೆ ಹೋಗುವುದೊಂದೇ ಬಾಕಿ.

‘ಭಾರತದಲ್ಲಿ ನೂರು ಕುಬೇರರಿದ್ದಾರೆ. ನೂರಿಪ್ಪತ್ತು ಕೋಟಿ ಜನರ ನಡುವೆ ನೂರೇ ಶ್ರೀಮಂತರು. ನಾನೂ ಕುಬೇರನಾಗುವುದು ಯಾವಾಗ? ಪಟ್ಟಿಯಲ್ಲಿ ನನ್ನ ಹೆಸರು ಬರುವುದು ಯಾವಾಗ?’ ಪೆಕರ ತಿರುಕನ ಕನಸನ್ನು ಸ್ನೇಹಿತರ ಮುಂದೆ ಬಿಚ್ಚಿಟ್ಟ.

‘ಅಲ್ಲಯ್ಯ, ಮುಕೇಶ್ ಅಂಬಾನಿ ೧.೩೦ ಲಕ್ಷ ಕೋಟಿ ರೂಪಾಯಿ ಆಸ್ತಿ ಇಟ್ಟುಕೊಂಡಿರೋದು ತಪ್ಪಲ್ಲ. ಅವರು ಬಾರ್ನ್‌ರಿಚ್. ಅಜೀಂ ಪ್ರೇಮ್‌ಜಿ ಹತ್ರ ೮೫,೫೬೦ ಕೋಟಿ ರೂಪಾಯಿ ಸಂಪತ್ತಿದೆ. ಎಲ್ಲಾರು ಹುಟ್ಟಿನಿಂದಲೇ ಶ್ರೀಮಂತರು. ದೊಡ್ಡದೊಡ್ಡ ಉದ್ಯಮಿಗಳ ಹತ್ರ ದುಡ್ಡು ಇಲ್ಲದೇ ಇರುತ್ತಾ? ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿರೋದೇ ಅಂಥವರ ಮನೇಲಿ’- ಸ್ನೇಹಿತರು ಪೆಕರನನ್ನು ಸಮಾಧಾನಪಡಿಸಲು ಯತ್ನಿಸಿದರು.

‘ಈ ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗಿಯೇ ಉಳಿದರೆ, ನನ್ನಂತಹ ಶ್ರೀಸಾಮಾನ್ಯರು ಶ್ರೀಮಂತರಾಗೋದು ಯಾವಾಗ ಮಾರಾಯ?’ ಎಂದು ಪೆಕರ ಪ್ರಶ್ನಿಸಿದ.

‘ಶ್ರೀಮಂತ ಆಗಬೇಕು ಅಂತ ಆಸೆ ಪಡ ಬೇಡಯ್ಯ. ಶ್ರೀಮಂತರೆಲ್ಲಾ ಸುಖವಾಗಿದ್ದಾರೆ ಅಂತ ಅನ್ಕೊಂಡಿದ್ದೀಯಾ? ಕೋಟೆಕಟ್ಟಿ ಮೆರೆದೋರೆಲ್ಲಾ ಏನಾದರೂ ಅಂತ ನಿನಗೆ ಗೊತ್ತಿಲ್ಲವೇ? ಕುದುರೆ ಸಾಕಿ, ಬಿಯರ್ ಮಾಡಿ, ಆಕಾಶದಲ್ಲಿ ಹಾರಾಡಿದ ಮಲ್ಯಸಾಹೇಬರ ಕತೆ ಏನಾಗಿದೆ ಅಂತ ನಿನಗೆ ಗೊತ್ತಿಲ್ಲವೇ? ೩೧ ಸಾವಿರ ಕೋಟಿ ರೂಪಾಯಿ ಕಳಕೊಂಡು ಶ್ರೀಮಂತರ ಪಟ್ಟಿಯಲ್ಲಿ ೮೪ ನೇ ಸ್ಥಾನಕ್ಕೆ ಜಾರಿಬಿದ್ದಿದ್ದಾರೆ. ಇನ್ಫೊಗಳ ಕತೆ ನಿನಗೆ ಗೊತ್ತಾಯ್ತಾ?  ಅಮೆರಿಕದ ದೊಡ್ಡಣ್ಣ ಸರಿಯಾಗಿ ಮಾಂಜಾ ಕೊಟ್ಟು ೨೧೭ ಕೋಟಿ ರೂಪಾಯಿ ಪೀಕಿಸಿಕೊಂಡಿದ್ದಾನೆ. ತಪ್ಪಾಯ್ತು ಅಂತ ಇವರು ದಂಡಕಟ್ಟಿ, ವ್ಯವಹಾರದಲ್ಲಿ ಇದೆಲ್ಲಾ ಕಾಮನ್ನು ಅಂತ ಸೈಲೆಂಟಾ ಗಿದ್ದಾರೆ.

ದುಡ್ಡಿದ್ದವರೆಲ್ಲಾ ದೊಡ್ಡವರಲ್ಲ ಅನ್ನೋದು ಗೊತ್ತಾಯ್ತಲ್ಲ. ಏನೂ ಇಲ್ಲದ ಪೆಕರಾನೇ ಗ್ರೇಟ್ ಅನ್ನೋದು ನಮ್ಮ ನಿಲುವು ಗೊತ್ತಾಯ್ತಾ?’
ಸ್ನೇಹಿತರು ಪೆಕರನ ಮೈಯಲ್ಲಿ ಉತ್ಸಾಹ ತುಂಬಲು ಅವನಿಗೆ ಬ್ಲೋಹಾಕಲು ಆರಂಭಿಸಿದ್ದರು.

‘ನಾನ್ಯಾವ ಗ್ರೇಟ್ ಮಾರಾಯ? ಸಾಯೋವರೆಗೂ ದುಡೀಬೇಕು, ತಿನ್ನಬೇಕು, ಬೆಲೆ ಏರಿಕೆ ಆದ್ರೂ ಬದುಕಬೇಕು’ ಎಂದು ಪೆಕರ ಗೋಳಾಡಿದ.

‘ಸಾಯೋವರೆಗೂ ದುಡೀಬೇಕು ಅಂದ್ರೆ ಏನರ್ಥ? ನೀನು ತಪ್ಪು ತಿಳ್ಕೊಂಡಿದ್ದೀಯಾ. ಕರ್ನಾಟಕದಲ್ಲಿ ಹುಟ್ಟಿದ ನೀನು ಪುಣ್ಯವಂತ. ನೀನು ಹುಟ್ಟು ಶ್ರೀಮಂತ ಅನ್ನೋದನ್ನೇ ಮರೆತು ಬಿಟ್ಟಿದ್ದೀಯಾ, ಹುಟ್ಟಿದರೇ ಕನ್ನಡನಾಡಲ್ ಹುಟ್ಟಬೇಕು...’

‘ನಾನು ಹುಟ್ಟು ಶ್ರೀಮಂತನೇ?! ಹೇಗೆ?! ಹೇಗೆ?!’ ಪೆಕರ ಅಚ್ಚರಿಯಿಂದ ಮುಖವನ್ನು ಮೊರದಗಲ ಮಾಡಿ ಪ್ರಶ್ನಿಸಿದ.

‘ನಮ್ಮ ಅಯ್ಯ ಅವರ ಸರ್ಕಾರದ ಜನಕಲ್ಯಾಣ ಯೋಜನೆಗಳಿರುವಾಗ ನೀನು ಹೇಗಯ್ಯಾ ಬಡವನಾಗಿರಲು ಸಾಧ್ಯ ಮಿಸ್ಟರ್ ಪೆಕರ? ಜನರನ್ನು ಹಸಿವುಮುಕ್ತ ಮಾಡಲು ‘ಅನ್ನಭಾಗ್ಯ’ ದಯಪಾಲಿಸಿದ್ದಾರೆ. ಒಂದ್ರುಪಾಯಿ ಇಟ್ಕಂಡು ನೀನು ನಿತ್ಯ ಮೂರುವೇಳೆ ಊಟ ಹೊಡ್ಕಂಡು ಆರಾಮ ವಾಗಿರಬಹುದು. ಮಧ್ಯೆ ಬಾಯಿ ಒಣಗಿದರೆ ‘ಕ್ಷೀರಭಾಗ್ಯ’ವಿದೆ. ಒಂದು ಲೋಟ ಹಾಲ್ಕುಡಿ. ಸಾಲಸೋಲ ಮಾಡಿ ಒದ್ದಾಡ್ತಾ ಇದೀಯಾ ಅಂತ ತಿಳ್ಕೋ, ‘ಋಣಮುಕ್ತ ಭಾಗ್ಯ’ ಕರುಣಿಸಿ ನಿನ್ನನ್ನು ಸ್ವತಂತ್ರ್ರ ಮಾಡ್ತಾರೆ. ಉದರ ಸಮಸ್ಯೆ ಪರಿಹಾರವಾಯ್ತು.
ಇನ್ನು ಸೂರು. ‘ವಸತಿ ಭಾಗ್ಯ’ ದಲ್ಲಿ ನಿನಗೊಂದು ಮನೆ ಗ್ಯಾರಂಟಿ. ರೋಟಿ, ಮಕಾನ್ ಆದ ಮೇಲೆ ಸಂಸಾರ ಹೂಡೋದು ಬೇಡವೇ? ‘ಶಾದಿ ಭಾಗ್ಯ’ದಲ್ಲಿ ನಿನ್ನ ಮದುವೆಯನ್ನೂ ಅಯ್ಯ ಅವರು ಮಾಡಿಬಿಡ್ತಾರೆ. ಮುಂದೆ ಮಕ್ಕಳಾದ ಮೇಲೆ ಹೆಣ್ಮಕ್ಕಳಿಗೆ ‘ಭಾಗ್ಯಜ್ಯೋತಿ’ ಇದೆ. ಓದಿಸಲು ‘ವಿದ್ಯಾಸಿರಿ’ ಇದೆ. ಇಷ್ಟೆಲ್ಲಾ ಇದ್ದ ಮೇಲೆ ಸುಮ್ಮನೆ ಸೋಂಬೇರಿಯಾಗಿ ಕುಳಿತುಕೊಳ್ಳುವುದು ಗ್ಯಾರಂಟಿ. ಆಗ ಆರೋಗ್ಯ ಕೈಕೊಟ್ಟರೆ, ‘ಯಶಸ್ವಿನಿ’,  ಇದೆ. ಇನ್ಯಾತಕ್ಕಯ್ಯಾ ನೀನು ದುಡಿಯಬೇಕು. ನಮ್ಮ ಅಯ್ಯ ಅವರ ರಾಜ್ಯಭಾರದಲ್ಲಿ ಕೂತಲ್ಲೇ ನೀನು ಕುಬೇರ. ಫೋಬ್ಸ್ ಪಟ್ಟಿಯಲ್ಲಿ ಸೇರಿಲ್ಲ ಅಂತ ಏಕೆ ವರಿ ಮಾಡ್ತಿದ್ದೀಯಾ ನಡಿ’ ಎಂದು ಸ್ನೇಹಿತರು ಪೆಕರನಿಗೆ ಧೈರ್ಯ ತುಂಬಿ ಬೈಟುಕಾಫಿ ಸೇವಿಸಲು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT