ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಬುದ್ಧಿಮತ್ತೆ: ಅಪಾಯ, ಸಾಧ್ಯತೆಗಳ ಸುತ್ತ

Last Updated 1 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

‘ಕೃತಕ ಬುದ್ಧಿಮತ್ತೆ’ ಎಂದು ಕನ್ನಡಕ್ಕೆ ಅನುವಾದಿಸಬಹುದಾದ ಇಂಗ್ಲಿಷಿನ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ಅಥವಾ ‘ಎಐ’ ಮತ್ತೆ ಸುದ್ದಿ ಮಾಡುತ್ತಿದೆ. ಹೌದು, ಇದನ್ನು ಮತ್ತೆ ಎಂದು ಹೇಳಲೇಬೇಕಾದ ಅಗತ್ಯವಿದೆ. ಈ ಪರಿಕಲ್ಪನೆ ಕಾಲಕಾಲಕ್ಕೆ ಬೇರೆ ಬೇರೆಯೇ ಸ್ವರೂಪದಲ್ಲಿ ಸುದ್ದಿ ಮಾಡುತ್ತಲೇ ಬಂದಿದೆ. ಆರಂಭದಲ್ಲಿ ಇದು ವೈಜ್ಞಾನಿಕ ಕಾದಂಬರಿ, ಕಥೆ ಮತ್ತು ಸಿನಿಮಾಗಳ ಮೂಲಕ ಸುದ್ದಿಯಾಗುತ್ತಿತ್ತು. ಅದು ಈ ಕಾಲಕ್ಕೂ ಸತ್ಯ. ರಜನಿಕಾಂತ್ ಅಭಿನಯದ ‘ಎಂದಿರನ್’ ಸುದ್ದಿ ಮಾಡಿ ಬಹುಕಾಲವೇನೂ ಆಗಿಲ್ಲವಲ್ಲ!

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಈ ಪರಿಕಲ್ಪನೆ ಭರವಸೆಯನ್ನೂ ಭಯವನ್ನೂ ಹುಟ್ಟಿಸುತ್ತಲೇ ಬಂದಿದೆ. ಇತ್ತೀಚೆಗೆ ಸ್ವಲ್ಪ ಭಯದ ಅಂಶ ಹೆಚ್ಚಾಯಿತು. ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಉದ್ಯೋಗ ಕಡಿತ ಮಾಡುತ್ತಾ ಇರುವ ದಿನಗಳಲ್ಲಿ ‘ಎಐ’ ಮತ್ತು ‘ಆಟೋಮೇಶನ್’ ಎಂಬುದು ಭಯ ಹುಟ್ಟಿಸದೇ ಇದ್ದರೇ ಆಶ್ಚರ್ಯ ಪಡಬೇಕು. ಕಳೆದ ಒಂದು ತಿಂಗಳ ಅವಧಿಯಲ್ಲಿ ‘ಕೃತಕ ಬುದ್ಧಿಮತ್ತೆ’  ಪರಿಕಲ್ಪನೆಗೆ ಸಂಬಂಧಿಸಿದಂತೆ ತಂತ್ರಜ್ಞಾನ ಕ್ಷೇತ್ರದ ದೈತ್ಯರು ಎಂದು ಕರೆಯಬಹುದಾದ ಇಬ್ಬರು ಭಿನ್ನ ನಿಲುವುಗಳನ್ನು ತಳೆದರು. ಸ್ವತಃ ಒಂದು ‘ಕೃತಕ ಬುದ್ಧಿಮತ್ತೆ’ ಕಂಪೆನಿಯನ್ನು ಆರಂಭಿಸಿರುವ ಸ್ಪೇಸ್ ಎಕ್ಸ್‌ನ ಎಲಾನ್ ಮಸ್ಕ್ ‘ಇದು ಮನುಷ್ಯರನ್ನೇ ಎರಡನೇ ದರ್ಜೆ ನಾಗರಿಕರನ್ನಾಗಿಸಬಹುದು. ಸರ್ಕಾರಗಳು ಇದರ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.


ಆದರೆ ಇದಕ್ಕೆ ಉತ್ತರವಾಗಿ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ‘ಇದೊಂದು ಬೇಜವಾಬ್ದಾರಿ ಹೇಳಿಕೆ. ಈ ವಿಷಯದಲ್ಲಿ ನಾನು ಆಶಾವಾದಿ’ ಎಂದರು. ಇದಕ್ಕೆ ಟ್ವೀಟ್ ಮೂಲಕ ಉತ್ತರ ಕೊಟ್ಟ ಎಲಾನ್ ಮಸ್ಕ್ ‘ಝುಕರ್‌ಬರ್ಗ್‌ಗೆ ವಿಷಯ ಜ್ಞಾನವಿಲ್ಲ’ ಎಂದರು.
ಸಾಮಾನ್ಯವಾಗಿ ಬಹುದೊಡ್ಡ ಕಂಪೆನಿಗಳ ಸಿಇಓಗಳು ಯಾವುದೇ ವಿಷಯಗಳ ಬಗ್ಗೆ ಹೀಗೆ ಬಹಿರಂಗ ಹೇಳಿಕೆ ಮತ್ತು ಪ್ರತಿಹೇಳಿಕೆಗಳ ಚಕ್ರವ್ಯೂಹದೊಳಗೆ ಸಿಕ್ಕಿಬೀಳುವುದಿಲ್ಲ. ಇಂಥದ್ದೇನಿದ್ದರೂ ಟ್ಯಾಬ್ಲಾಯ್ಡ್‌ಗಳು ಸಂಭ್ರಮಿಸುವ ಸಿಇಓಗಳ ಸ್ಥಾಯಿ ಗುಣ. ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಎಲ್ಲಾ ಚರ್ಚೆಗಳೂ ಯಾವತ್ತೂ ಎರಡು ಭಿನ್ನ ಧ್ರುವಗಳಲ್ಲೇ ಕೇಂದ್ರೀಕೃತವಾಗಿದೆ. ಇವರನ್ನು ‘ಯುಟೋಪಿಯನ್ನರು’ (ಆದರ್ಶ ಸ್ಥಿತಿವಾದಿಗಳು) ಮತ್ತು ‘ಡಿಸ್ಟೋಪಿಯನ್ನರು’ (ಅನಾದರ್ಶ ಸ್ಥಿತಿವಾದಿಗಳು) ಎಂದು ವಿಭಾಗಿಸಬಹುದು. ಯುಟೋಪಿಯನ್ನರ ಮಟ್ಟಿಗೆ ಕೃತಕ ಬುದ್ಧಿಮತ್ತೆಯೂ ಸೇರಿದಂತೆ ಎಲ್ಲಾ ವೈಜ್ಞಾನಿಕ ಮತ್ತು ತಾಂತ್ರಿಕ ಆವಿಷ್ಕಾರಗಳೂ ಮನುಷ್ಯನನ್ನು ಹೆಚ್ಚು ಬಲಗೊಳಿಸುತ್ತವೆ. ಅಷ್ಟೇ ಅಲ್ಲ ಅವರವರ ಆದರ್ಶದ ಸಮಾಜ ಸೃಷ್ಟಿಯನ್ನು ಸಾಧ್ಯ ಮಾಡುತ್ತವೆ. ಡಿಸ್ಟೋಪಿಯನ್ನರು ಈ ನಿಲುವಿಗೆ ವಿರುದ್ಧವಾಗಿರುತ್ತಾರೆ. ಅವರು ಕೃತಕ ಬುದ್ಧಿಮತ್ತೆಯಂಥ ಆವಿಷ್ಕಾರಗಳು ಅಪಾಯಕಾರಿಯಾಗಬಹುದು ಎಂದೇ ವಾದಿಸುತ್ತಾರೆ.


ಈ ಎರಡೂ ವಾದಗಳನ್ನು ಮಂಡಿಸುತ್ತಿರುವವರು ಸಾಮಾನ್ಯರೇನೂ ಅಲ್ಲ. ಗೂಗಲ್ ಡೀಪ್ ಮೈಂಡ್‌ನ ಸಂಸ್ಥಾಪಕ ಡೆಮಿಸ್ ಹಸಾಬಿಸ್ ಪ್ರಕಾರ ಕೃತಕ ಬುದ್ಧಿಮತ್ತೆ ಎಂಬುದು ಮನುಕುಲ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೊಂದು ‘ಅಂತಿಮ ಪರಿಹಾರ’. ವಾಷಿಂಗ್ಟನ್‌ನಲ್ಲಿರುವ ಮೈಕ್ರೋಸಾಫ್ಟ್ ರೆಡ್ಮಂಡ್ ಲ್ಯಾಬ್‌ನ ನಿರ್ದೇಶಕ ಎರಿಕ್ ಹಾರ್ವಿಟ್ಜ್ ಅವರ ಪ್ರಕಾರ ಇದು ಮನುಷ್ಯನನ್ನು ಇನ್ನಿಲ್ಲದಷ್ಟು ಸಬಲನನ್ನಾಗಿ ಮಾಡಬಹುದಾದ ಸಾಧ್ಯತೆ ಇರುವ ಪರಿಕಲ್ಪನೆ. ಇದಕ್ಕೆ ವಿರುದ್ಧವಾಗಿರುವವರೂ ಕಡಿಮೆಯವರೇನೂ ಅಲ್ಲ. ಸ್ಟೀಫನ್ ಹಾಕಿಂಗ್‌ರ ಮಟ್ಟಿಗಂತೂ ಇದು ‘ಮನುಕುಲನವನ್ನು ಕೊನೆಗೊಳಿಸಬಹುದಾದ ಪರಿಕಲ್ಪನೆ’. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಕಾರ ‘ಕಾಳಜಿ ವಹಿಸಬೇಕಾದ ವಿಚಾರ’. ಎಲಾನ್ ಮಸ್ಕ್ ಪ್ರಕಾರವಂತೂ ಇದು ಮನುಕುಲದ ಅಂತ್ಯಕ್ಕೆ ಕಾರಣವಾಗಬಹುದಾ ಪೆಡಂಭೂತವನ್ನು ಎಬ್ಬಿಸುವ ಕೆಲಸ.


ಎರಡೂ ವಾದಗಳನ್ನು ಮಂಡಿಸುವವರೂ ತಮ್ಮ ಸಮರ್ಥನೆಗೆ ಸಾಕಷ್ಟು ಉದಾಹರಣೆಗಳನ್ನೂ, ಸಂಭವನೀಯ ಸ್ಥಿತಿಗಳನ್ನೂ ಹೇಳುತ್ತಾರೆ. ಇವರ ಮಧ್ಯೆ ಇಬ್ಬರ ಆಸಕ್ತಿಗಳನ್ನೂ ಪ್ರಶ್ನಿಸುವ ಕೆಲ ವಾದಗಳೂ ಇವೆ. ಇವೆಲ್ಲವೂ ‘ಕೃತಕ ಬುದ್ಧಿಮತ್ತೆ’ಯ ಆವಿಷ್ಕಾರದ ಸುತ್ತ ಹುಟ್ಟಿಕೊಳ್ಳಬಹುದಾದ ವ್ಯಾಪಾರಿ ಸಾಧ್ಯತೆಗಳನ್ನು ಸಂಶಯದಿಂದ ಕಾಣುವ ವಾದಗಳು. ಸ್ವತಃ ಒಂದು ‘ಕೃತಕ ಬುದ್ಧಿಮತ್ತೆ’ ಕಂಪೆನಿಯನ್ನು ಸ್ಥಾಪಿಸಿರುವ ಎಲಾನ್ ಮಸ್ಕ್ ಏಕೆ ಅದನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಷೇರು ಮಾರುಕಟ್ಟೆಯ ಏರಿಳಿತದ ಮೂಲಕ ಅರ್ಥ ಮಾಡಿಕೊಳ್ಳುವವರ ಸಂಖ್ಯೆಯೂ ಕಡಿಮೆಯೇನಲ್ಲ.
ಈ ಎಲ್ಲಾ ವಾದಗಳಲ್ಲಿಯೂ ಕೆಲಮಟ್ಟಿಗಿನ ಹುರುಳಿದೆ. ಇದನ್ನು ಅರ್ಥ ಮಾಡಿಕೊಳ್ಳುವುದಕ್ಕೆ  ಮಾರ್ಕ್ ಝುಕರ್‌ಬರ್ಗ್ ಮತ್ತು ಎಲಾನ್ ಮಸ್ಕ್ ಅವರ ಮಾತುಗಳನ್ನು ಭಿನ್ನ ಧ್ರುವದ ವಾದಗಳ ಪ್ರಾತಿನಿಧಿಕ ಅಭಿಪ್ರಾಯಗಳೆಂದು ಪರಿಗಣಿಸಿ ವಿಶ್ಲೇಷಿಸಲು ಪ್ರಯತ್ನಿಸೋಣ. ಈ ದೃಷ್ಟಿಯಲ್ಲಿ ಮಾರ್ಕ್ ಝುಕರ್‌ಬರ್ಗ್ ಯುಟೋಪಿಯನ್ನರ ವರ್ಗಕ್ಕೆ ಸೇರುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸದ ಉದ್ದಕ್ಕೂ ಇಂಥವರಿದ್ದಾರೆ. ಅನೇಕ ವೈಜ್ಞಾನಿಕ ಸಂಶೋಧನೆಗಳ ಫಲವನ್ನು ನಾವು ಉಣ್ಣುತ್ತಿರುವುದು ಈ ಬಗೆಯ ಆಶಾವಾದಿಗಳಿಂದಲೇ. ಪಠ್ಯ, ಚಿತ್ರ ಮತ್ತು ಚಲಿಸುವ ಚಿತ್ರಗಳ ಮೂಲಕ ಮನುಕುಲದ ದೊಡ್ದದೊಂದು ವಿಭಾಗದ ಮಧ್ಯೆ ಸಂಪರ್ಕ ಕಲ್ಪಿಸಿದ ಮಾರ್ಕ್ ಝುಕರ್‌ಬರ್ಗ್ ಆಶಾವಾದಿಯಾಗಿರುವುದು ಸಹಜ. ಅವರ ‘ಐಡಿಯಾ’ ವಾಸ್ತವಕ್ಕೆ ಬರುವಾಗ ಬೀರಿದ್ದು ಸಕಾರಾತ್ಮಕ ಪರಿಣಾಮ. ಇದು ಝುಕರ್‌ಬರ್ಗ್ ವ್ಯಾಪಾರದ ಮಟ್ಟಿಗೂ ನಿಜ. ಅವರು ಒದಗಿಸಿದ ಸವಲತ್ತನ್ನು ಬಳಸುತ್ತಿರುವ ಗ್ರಾಹಕರು ಮತ್ತು ಜಾಹೀರಾತುದಾರರ ಮಟ್ಟಿಗೂ ನಿಜ.


ಗೂಗಲ್‌ ಕಂಪೆನಿಯ ಯಶಸ್ಸಿನ ಹಿಂದೆ ಇರುವುದೂ ಇಂಥದ್ದೇ ಒಂದು ‘ಐಡಿಯಾ’. ಹುಲ್ಲುಬಣವೆಯಲ್ಲಿ ಸೂಜಿಯನ್ನು ಹುಡುಕುವ ಕೆಲಸದಂತೆ ಆಗಬಹುದಾಗಿದ್ದ ಕೆಲಸವನ್ನು ಗೂಗಲ್ ಸರಳಗೊಳಿಸಿತು. ಅಷ್ಟೇ ಅಲ್ಲ ಹುಡುಕುವವರು ಯಾರೆಂದು ಅರಿತು ಅವರು ಇಚ್ಛಿಸುವ, ಇಷ್ಟವಾಗುವ ಮತ್ತು ಬೇಕಿರುವ ಫಲಿತಾಂಶವನ್ನು ಕೋಟ್ಯಂತರ ವೆಬ್‌ಸೈಟುಗಳನ್ನು ಜಾಲಾಡಿ ಒದಗಿಸುವ ಸೇವೆಯ ಹಿಂದೆಯೂ ‘ಕೃತಕ ಬುದ್ಧಿಮತ್ತೆ’ ಇದೆ. ನಮ್ಮ ಫೇಸ್‌ಬುಕ್‌ನ ನ್ಯೂಸ್ ಫೀಡ್‌ನಲ್ಲಿ ಏನು ಕಾಣಿಸಬೇಕು ಎಂಬುದರ ಹಿಂದೆಯೂ ಇದೇ ತಂತ್ರಜ್ಞಾನ ಕೆಲಸ ಮಾಡುತ್ತಿರುತ್ತದೆ. ಇವ್ಯಾವೂ ಭೌತಿಕವಾದ ತಂತ್ರಜ್ಞಾನಗಳಲ್ಲ. ಕೆಲಮಟ್ಟಿಗೆ ಅಮೂರ್ತ ಎನ್ನಬಹುದಾದುವು. ಈ ಆವಿಷ್ಕಾರಗಳನ್ನು ನಡೆಸಿದವರಿಗೆ ಇದರ ಅಪಾಯಗಳು ಕಾಣುವುದೇ ಇಲ್ಲ. ಕಂಡರೂ ಅದು ಮುಖ್ಯವೆನಿಸುವುದಿಲ್ಲ.


ಎಲಾನ್ ಮಸ್ಕ್ ಹೀಗೆ ಯೋಚಿಸಲೇ ಸಾಧ್ಯವಿಲ್ಲ. ಏಕೆಂದರೆ ಅವರು ಯೋಜಿಸುತ್ತಿರುವುದು ಮತ್ತೊಂದನ್ನೇ. ಅದು ಅಮೂರ್ತವಾದುದಲ್ಲ. ಮೆದುಳಿಗೇ ಅಳವಡಿಸಲಾದ ಕಂಪ್ಯೂಟರುಗಳು, ಸ್ವಯಂ ಚಾಲಿತ ಕಾರುಗಳು, ಮಂಗಳನಲ್ಲೊಂದು ಬಡಾವಣೆ, ಹೈಪರ್ ಲೂಪ್ ಸಂಚಾರದಂಥ ಭೌತಿಕ ಉತ್ಪನ್ನಗಳ ಪರಿಕಲ್ಪನೆಗಳಲ್ಲಿ ಆಲೋಚಿಸುತ್ತಿರುವ ಎಲಾನ್ ಮಸ್ಕ್‌ಗೆ ಕಾಣಿಸುವುದು ಮತ್ತು ಮುಖ್ಯವಾಗುವುದು ಕೃತಕ ಬುದ್ಧಿಮತ್ತೆಯ ಅಪಾಯಗಳು.
ಆಶಾವಾದಿಯಾಗಿರುವ ಝುಕರ್‌ಬರ್ಗ್ ಅವರ ಕಂಪೆನಿ ಕೃತಕ ಬುದ್ಧಿಮತ್ತೆಯ ಯೋಜನೆಯೊಂದನ್ನು ಇತ್ತೀಚೆಗೆ ನಿಲ್ಲಿಸಿತು. ನ್ಯೂರಲ್ ನೆಟ್‌ವರ್ಕ್ ತಂತ್ರಜ್ಞಾನವನ್ನು ಬಳಸಿಕೊಂಡು ಎದುರಿಗಿರುವ ಮನುಷ್ಯರ ಜೊತೆ ಸಂಭಾಷಿಸಬಹುದಾದ ತಂತ್ರಾಂಶವೊಂದನ್ನು ಫೇಸ್‌ಬುಕ್ ಅಭಿವೃದ್ಧಿ ಪಡಿಸಿತ್ತು. ಇದು ಎಷ್ಟರ ಮಟ್ಟಿಗೆ ಕಲಿಯುತ್ತಾ ಹೋಯಿತೆಂದರೆ ಒಂದು ಹಂತದ ನಂತರ ಅದು ಸಂಭಾಷಣೆಗೆ ಬಳಸುತ್ತಿದ್ದ ಇಂಗ್ಲಿಷ್ ಭಾಷೆಯನ್ನೇ ಬಿಟ್ಟು ಅದರದ್ದೇ ಆದ ಬೇರೊಂದು ಭಾಷೆಯನ್ನು ಆವಿಷ್ಕರಿಸಿತು. ಅದರ ದೃಷ್ಟಿಯಲ್ಲಿ ಅದು ಆವಿಷ್ಕರಿಸಿದ ಭಾಷೆ ಸಂವಹನಕ್ಕೆ ಹೆಚ್ಚು ಪರಿಣಾಮಕಾರಿ.
ಇದೇ ಉದಾಹರಣೆಯನ್ನು ಎಲಾನ್ ಮಸ್ಕ್‌ರ ಪರಿಕಲ್ಪನೆಯಲ್ಲಿರುವ ಸ್ವಯಂ ಚಾಲಿತ ಕಾರಿಗೆ ಅನ್ವಯಿಸಿ ನೋಡಿದರೆ ಇದು ಹೆಚ್ಚು ಅರ್ಥವಾಗುತ್ತದೆ. ಸ್ವಯಂ ಚಾಲನೆಯ ಕಲಿಕೆಯ ಪ್ರಕ್ರಿಯೆಯಲ್ಲಿ ದಾರಿಗೆ ಅಡ್ಡ ಬರುವುದನ್ನು ಹತ್ತಿ ಇಳಿಯುವುದು ಸುಲಭ ಎಂದು ಕಾರು ಭಾವಿಸಿಬಿಟ್ಟರೆ...? ಕೃತಕ ಬುದ್ಧಿಮತ್ತೆಯ ಕುರಿತ ಭಯ ಹುಟ್ಟುವುದು ಇಲ್ಲಿಂದ. ಆದರೆ ಸದ್ಯಕ್ಕೆ ಇಷ್ಟು ಸಂಕೀರ್ಣವಲ್ಲದ ಭಯಗಳೂ ಇವೆ. ಫೇಸ್‌ಬುಕ್ ಮತ್ತು ಗೂಗಲ್‌ಗಳು ಕೃತಕ ಬುದ್ಧಿಮತ್ತೆಯ ಸೀಮಿತ ಅನ್ವಯದ ಮೂಲಕವೇ ಸಂಗ್ರಹಿಸುವ ವೈಯಕ್ತಿಕ ಮಾಹಿತಿಗಳ ಪ್ರಮಾಣವನ್ನು ಗಮನಿಸಿದರೆ ಇಂಥ ಕಂಪೆನಿಗಳು ಮುಂದೊಂದು ದಿನ ಇಡೀ ವಿಶ್ವವನ್ನೇ ಆಳುವ ಸರ್ವಾಧಿಕಾರಿಗಳಾಗಿ ಬಿಡುತ್ತವೆಯೇನೋ ಅನ್ನಿಸುತ್ತದೆ.\


ಅಣುಬಾಂಬಿನ ಆವಿಷ್ಕಾರದ ಹೊತ್ತಿಗೂ ವಿಜ್ಞಾನಿಗಳಿಗೆ ಇದ್ದದ್ದು ಒಂದು ‘ಅಂತಿಮ ಪರಿಹಾರ’ದ ಉತ್ಸಾಹವೇ. ಈ ದೃಷ್ಟಿಯಲ್ಲೇ ಕೃತಕ ಬುದ್ಧಿಮತ್ತೆಯನ್ನು ನೋಡುವುದು ಅಗತ್ಯ. ಆಗ ಮಾತ್ರ ಅಣುಶಕ್ತಿಯ ಶಾಂತಿಯುತ ಬಳಕೆಯಂಥ ಸಾಧ್ಯತೆಗಳು ಗೋಚರಿಸುತ್ತವೆ.
ಈ ಶಾಂತಿಯುತ ಬಳಕೆ ಅದೆಷ್ಟು ಶಾಂತಿಯುತ ಎಂಬುದು ಮತ್ತೊಂದು ಚರ್ಚೆಯ ವಿಷಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT