ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಪ್ರಸಾದ್ ಈಗ ನೆನಪಿನ ಪುಟಗಳಿಗೆ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಆರ್. ನಾಗೇಂದ್ರರಾವ್ ಅವರ ಸಾಧನೆ ಎಂದೂ ಮರೆಯಲಾರದಂತಹುದು. ಗುಬ್ಬಿ ವೀರಣ್ಣ, ರಾಜ್‌ಕುಮಾರ್ ಅವರ ಹಾಗೆ ಅವರೂ ಒಂದು ದೊಡ್ಡ ಆಲದ ಮರ. ಅವರ ಕುಟುಂಬವೇ ಚಿತ್ರರಂಗದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದೆ.
ಹೊಳಲ್ಕೆರೆಯಲ್ಲಿ ಹುಟ್ಟಿ, ಮೈಸೂರು, ಬೆಂಗಳೂರು, ಮದ್ರಾಸು, ಮುಂಬೈ ಹೀಗೆ ತನ್ನ ಜೀವನಮಾರ್ಗ ಹುಡುಕಿಕೊಂಡು ರಂಗಭೂಮಿ, ಸಿನಿಮಾ ಮೂಲಕವೇ ಪ್ರತಿಭೆ ಮೆರೆದವರು ನಾಗೇಂದ್ರರಾವ್. ಮೊದಲ ಕನ್ನಡ ವಾಕ್ಚಿತ್ರದ ಸೂತ್ರಧಾರಿಯೂ ಅವರೇ. ಸಿನಿಮಾ ಅವರನ್ನು ಹೇಗೆ ಆವರಿಸಿಕೊಂಡು ಬಿಟ್ಟಿತೆಂದರೆ ತಮ್ಮ ಇಡೀ ಕುಟುಂಬವನ್ನು ಅವರು ಚಿತ್ರರಂಗದ ಮಡಿಲಿಗೆ ಹಾಕಿದರು.

ಅವರ ಪುತ್ರರಾದ ಆರ್.ಎನ್. ಕೃಷ್ಣಪ್ರಸಾದ್ ಛಾಯಾಗ್ರಾಹಕರಾಗಿ, ನಿರ್ದೇಶಕರಾಗಿ ಹೆಸರಾದರು. ಆರ್.ಎನ್.ಜಯಗೋಪಾಲ್ ಚಿತ್ರ ಸಾಹಿತಿಯಾಗಿ, ಕವಿಯಾಗಿ, ನಿರ್ದೇಶಕರಾಗಿ ಮರೆಯಲಾಗದ ಚಿತ್ರಸಾಹಿತ್ಯವನ್ನು ನೀಡಿದರು.

ಅವರ ತೃತೀಯ ಪುತ್ರ ಸುದರ್ಶನ್ ನಾಯಕ ನಟನಾಗಿ, ಗಾಯಕನಾಗಿ, ಪೋಷಕನಟನಾಗಿ, ಕಿರುತೆರೆ ಕಲಾವಿದನಾಗಿ ಖ್ಯಾತರಾದರು. ಹೀಗೆ ಇಡೀ ಕುಟುಂಬವೇ ಚಿತ್ರರಂಗದಲ್ಲಿ ತೊಡಗಿಸಿಕೊಂಡು ಒಂದಲ್ಲಾ ಒಂದು ಸಾಧನೆ ಮಾಡಿರುವ ಕೆಲವೇ ಉದಾಹರಣೆಗಳು ನಮ್ಮ ಮುಂದಿವೆ.

ಇತ್ತೀಚೆಗೆ ಆರ್.ಎನ್. ಕೃಷ್ಣಪ್ರಸಾದ್ ಅವರು ನಿಧನರಾದರು. ಆರ್.ಎನ್.ಆರ್. ಪ್ರೊಡಕ್ಷನ್ಸ್ ಚಿತ್ರಸಂಸ್ಥೆಯ ಎರಡನೇ ಚಿತ್ರ `ಪ್ರೇಮದ ಪುತ್ರಿ~ (1957) ಕೃಷ್ಣಪ್ರಸಾದ್ ಕ್ಯಾಮರಾ ಹಿಡಿದ ಮೊದಲ ಚಿತ್ರ. ಅವರ ಸಂಪೂರ್ಣ ಪ್ರತಿಭೆ ಹೊರಬಂದದ್ದು `ಬೆಳ್ಳಿಮೋಡ~ ಚಿತ್ರದಲ್ಲಿ (1967) ಬೆಳ್ಳಿಮೋಡದ ಕಪ್ಪು ಬಿಳುಪಿನ ಕಾವ್ಯಾತ್ಮಕ ದೃಶ್ಯ ನಿರೂಪಣೆ ಇಂದಿಗೂ ಅಮರ ದೃಶ್ಯವೆನಿಸಿದೆ.

ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಮೊದಲಚಿತ್ರ ಬೆಳ್ಳಿಮೋಡದಲ್ಲಿ ಆರ್.ಎನ್. ಕೃಷ್ಣಪ್ರಸಾದ್ ಅವರೊಡಗೂಡಿದ್ದು, ಅತ್ಯುತ್ಸಾಹದಲ್ಲಿದ್ದ ಯುವ ನಿರ್ದೇಶಕನ ಜೊತೆ ಕೆಲಸಮಾಡಿದ್ದು ಒಂದು ರೀತಿಯಲ್ಲಿ ಪ್ರತಿಭಾಸಂಗಮವೇ ಸರಿ. ಪುಟ್ಟಣ್ಣ ಕಣಗಾಲ್ ಅವರ ಆತ್ಮಕತೆಯಲ್ಲಿ ಪುಟ್ಟಣ್ಣ ಹಾಗೂ ಕೃಷ್ಣಪ್ರಸಾದ್ ಸೇರಿ ಒಂದು ಕಲಾಕೃತಿಯನ್ನು ಹೇಗೆ ರೂಪಿಸಿದರು ಎನ್ನುವುದನ್ನು ಡಿ.ಬಿ.ಬಸವೇಗೌಡರು ನಿರೂಪಿಸಿದ್ದಾರೆ.

ಬೆಳ್ಳಿಮೋಡದ ನಿರ್ಮಾಪಕರು ಮದ್ರಾಸಿನವರು. ಕನ್ನಡ ಚಿತ್ರಗಳಿಗೆ ಹಣ ತೊಡಗಿಸಲು ಹಿಂದೆ ಮುಂದೆ ನೋಡುತ್ತಿದ್ದ ಕಾಲ. ಚಿತ್ರೀಕರಣ ತಾಣವನ್ನು ಆಯ್ಕೆ ಮಾಡಲು ಚಿಕ್ಕಮಗಳೂರಿಗೆ ಹೋಗಬೇಕು ಎಂದು ನಿರ್ಮಾಪಕರನ್ನು ಕೇಳಿದರೆ, ಅದಕ್ಕೆಲ್ಲಾ ವೆಚ್ಚ ಜಾಸ್ತಿಯಾಗುತ್ತೆ ಎಲ್ಲೋ ಒಂದು ಕಡೆ ಮಾಡಿ ಎಂದರಂತೆ.

ಮೊದಲ ಚಿತ್ರವಾದ್ದರಿಂದ ಚೆನ್ನಾಗಿ ಮಾಡಲೇ ಬೇಕು ಎಂಬ ಉತ್ಸಾಹದಲ್ಲಿದ್ದ ಪುಟ್ಟಣ್ಣ ಹೆಸರು ಬರುತ್ತೆ ಎಂದೆಲ್ಲಾ ವಿವರಣೆ ಕೊಟ್ಟರಂತೆ. ಕೊನೆಗೆ ನಿರ್ಮಾಪಕರು ಬೇಕಾದರೆ, ನೀವು ಬಸ್ಸಿನಲ್ಲಿ ಹೋಗಿ ಎಂದು ಅಪ್ಪಣೆ ಕೊಟ್ಟರಂತೆ. ಹೊರಾಂಗಣ ಚಿತ್ರೀಕರಣಕ್ಕೆ 15 ದಿನ ಮುಂಚೆಯೇ ಪುಟ್ಟಣ್ಣನವರು ಛಾಯಾಗ್ರಾಹಕ ಆರ್.ಎನ್.ಕೆ. ಪ್ರಸಾದ್ ಅವರನ್ನು ಕರೆದುಕೊಂಡು ಚಿಕ್ಕಮಗಳೂರಿಗೆ ಬಂದು ವಸಂತವಿಹಾರ್ ಲಾಡ್ಜ್‌ನಲ್ಲಿ ತಂಗಿದರು.

ಅಷ್ಟು ದಿನವೂ ಆ ಸರಹದ್ದಿನಲ್ಲಿ ಬೆಟ್ಟಗುಡ್ಡಗಳ ಮೇಲೆಲ್ಲಾ ಸುತ್ತಾಡಿ ಯಾವ ಯಾವ ಸ್ಥಳಗಳಲ್ಲಿ ಯಾವ ಯಾವ ದೃಶ್ಯ ತೆಗೆಯಬೇಕೆಂದು ನಿರ್ಧರಿಸಿದರು. ಹೋಟೆಲ್‌ಗೆ ಹಿಂತಿರುಗಿ ಬಂದ ನಂತರ ಕೃಷ್ಣಪ್ರಸಾದ್ ಅವರು ಬಣ್ಣದ ಕ್ರೆಯಾನ್‌ನಲ್ಲಿ ಆಯಾಯ ಸ್ಥಳಗಳ ಸ್ಥೂಲ ರೂಪ ರಚಿಸಿ, ಪಕ್ಕದಲ್ಲಿ ತೆಗೆಯಬೇಕಾದ ದೃಶ್ಯಗಳ ಹಾಗೂ ನಟನಟಿಯರ ಪಟ್ಟಿಯನ್ನು ತಯಾರಿಸಿಕೊಟ್ಟರು.

ಹೊರಾಂಗಣ ಚಿತ್ರಿಕರಣ ವಾಟೇಕಾಲ್ ಮತ್ತು ತಿಪ್ಪನಹಳ್ಳಿ ಎಸ್ಟೇಟ್‌ಗಳಲ್ಲಿ ಪ್ರಾರಂಭವಾಯಿತು. ತಾನು ಕಷ್ಟಪಟ್ಟು ಆಯ್ಕೆ ಮಾಡಿದ ಸ್ಥಳದಲ್ಲಿ `ಮೂಡಲ ಮನೆಯ ಮುತ್ತಿನ ನೀರಿನ...~ ಹಾಡನ್ನು ಸೂರ್ಯ ಉದಯಿಸುವಾಗ ತನ್ನ ಕಲ್ಪನೆಯಂತೆಯೇ ತೃಪ್ತಿಕರವಾಗಿ ಚಿತ್ರೀಕರಿಸಿದರು.

ಮತ್ತೊಂದು ದೃಶ್ಯಕ್ಕಾಗಿ ಪುಟ್ಟಣ್ಣನವರಿಗೆ ತಾನು ಆಯ್ದುಕೊಂಡ ಮುಳ್ಳಯ್ಯನಗಿರಿ ಬೆಟ್ಟದ ತುದಿಯಲ್ಲಿ ಒಂದು ಮರ ಇದ್ದರೆ ಚೆನ್ನ ಎಂಬ ಕಲ್ಪನೆ ಬಂತು. ಅಂತಹ ಮರಕ್ಕಾಗಿ ಸುತ್ತಮುತ್ತಲ ಎಸ್ಟೇಟ್‌ಗಳೆನ್ನೆಲ್ಲಾ ಹುಡುಕಿದಾಗ ತಿಪ್ಪನಹಳ್ಳಿ ಬಸವೇಗೌಡರ ಎಸ್ಟೇಟಿನಲ್ಲಿ ಅಂತಹ ಮರ ಕಾಣಿಸಿತು. ಗೌಡರನ್ನು ಕಂಡು ಅವರ ಅಪ್ಪಣೆಯನ್ನು ಪಡೆದರು.

ಅಂದೇ ರಾತ್ರಿ ಆ ಮರವನ್ನು ಕಡಿಸಿ ಹೊತ್ತುಕೊಂಡು, ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ದಾರಿಯೇ ಇಲ್ಲದ ಆ ಸ್ಥಳ ತಲುಪಲು ಅಸಾಧ್ಯ ಕಷ್ಟವಾಯಿತು. ಅಲ್ಲಿ ಆರು ಅಡಿ ಆಳದ ಗುಂಡಿ ತೆಗೆಸಿ ಅದರೊಳಗೆ ನೆಡಿಸಿದರು. ಅದಕ್ಕೆ ಬೇರೆ ಮರಗಳಿಂದ ಹಸಿರು ಎಲೆಗಳನ್ನು ತಂದು ಜೋಡಿಸಿ ತಮಗೆ ಬೇಕಾದ ರೀತಿಯಲ್ಲಿ ಆವರಣವನ್ನು ಸೃಷ್ಟಿಸಿಕೊಂಡು ಚಿತ್ರೀಕರಣ ನಡೆಸಿದರು.
 
ಹೀಗೆ ಪ್ರತಿದಿನ ಆ ಮರಕ್ಕೆ ಹೊಸ ಎಲೆಗಳನ್ನು ಜೋಡಿಸಿ ಚಿತ್ರೀಕರಿಸಲಾಗುತ್ತಿತ್ತು. `ಇದೇ ನನ್ನ ಉತ್ತರ ಕೊಡುವೆ ಬಾರೆ ಹತ್ತಿರ...~ ಹಾಡನ್ನು ಇದೇ ಮರದ ಸುತ್ತ ಚಿತ್ರೀಕರಿಸಲಾಯಿತು. ಚಿತ್ರದ ಪರಾಕಾಷ್ಠೆಯ ದೃಶ್ಯವನ್ನೂ ಅಲ್ಲೇ ಚಿತ್ರೀಕರಿಸಲಾಯಿತು. ನಾಯಕಿ ಆವೇಶಭರಿತಳಾಗಿ ಆ ಮರವನ್ನು ಕೆತ್ತಿ, ಕೆತ್ತಿ ಚೂರು ಮಾಡುವ ದೃಶ್ಯ ಅದಾಗಿತ್ತು.

ಈ ಶಾಟ್ ಅನ್ನು ತುಂಬಾ ಸುಂದರವಾಗಿ ಮೂಡಿಸುವ ಸಲುವಾಗಿ ಪುಟ್ಟಣ್ಣ ಅದನ್ನು 360 ಡಿಗ್ರಿ ಸುತ್ತಿನಲ್ಲೇ ತೆಗೆಯಬೇಕೆಂದು ಛಾಯಾಗ್ರಾಹಕ ಕೃಷ್ಣಪ್ರಸಾದ್ ಅವರಿಗೆ ತಾಕೀತು ಮಾಡಿದ್ದರು. ಸುತ್ತಲೂ ಕುರುಚಲು ಗಿಡ, ಮುಳ್ಳು ಮತ್ತು ಸಣ್ಣಸಣ್ಣ ಕಲ್ಲುಬಂಡೆಗಳಿಂದ ಆವೃತವಾಗಿದ್ದ ಆ ಜಾಗದಲ್ಲಿ ಟ್ರಾಲಿ ಹಾಕಿ ಹಾಗೆ ಚಿತ್ರೀಕರಿಸುವುದು ಕಷ್ಟದ ಕೆಲಸವಾಗಿತ್ತು.

ಆ ಕಾಲದಲ್ಲಿ ಚಿಕ್ಕದಾಗಿ ಉಪಯೋಗಿಸಲು ಸುಲಭವಾಗಿದ್ದ `ಏರಿಫ್ಲೆಕ್ಸ್~ ಕ್ಯಾಮರಾ ಇಲ್ಲಿ ಬಳಕೆಗೆ ಇರಲಿಲ್ಲ. ಅದರಿಂದಾಗಿ ಸ್ಟುಡಿಯೋದಲ್ಲಿ ಉಪಯೋಗಿಸುತ್ತಿದ್ದ ದೊಡ್ಡದಾದ ಮಿಚೆಲ್ ಕ್ಯಾಮರಾವನ್ನೇ ಟ್ರಾಲಿಯ ಮೇಲೆ ಇರಿಸಿ ಆಕೆಯ ಜೊತೆಗೇ ಓಡಿ ಟ್ರಾಲಿ ಕೊನೆಯನ್ನು ತಲುಪಿದಾಗ ಚಿತ್ರೀಕರಣ ನಡೆಯುತ್ತಿರುವಾಗಲೇ ಟ್ರಾಲಿ ಹತ್ತಿ ಇನ್ನೊಂದು ಪಕ್ಕದಲ್ಲಿ ಇಳಿದು ಪುನಃ ಓಡುತ್ತಿರುವ ಆಕೆಯನ್ನು ಹಿಂಬಾಲಿಸಿ ನಾಯಕನನ್ನು ಸೇರುವವರೆಗೆ 360 ಡಿಗ್ರಿ ಸುತ್ತಿನ ಒಂದೇ ಟೇಕ್‌ನಲ್ಲಿ ಕೃಷ್ಣಪ್ರಸಾದ್ ಚಿತ್ರೀಕರಣ ಮುಗಿಸಿದರು.

ಕೃಷ್ಣಪ್ರಸಾದ್ ಅವರ ಈ ಸಾಹಸ ಪುಟ್ಟಣ್ಣ ಆದಿಯಾಗಿ ಎಲ್ಲರನ್ನೂ ಪುಳಕಿತ ರನ್ನಾಗಿಸಿತಂತೆ. ಪುಟ್ಟಣ್ಣ ಓಡಿ ಬಂದು ಕೃಷ್ಣಪ್ರಸಾದ್ ಅವರನ್ನು ಅಪ್ಪಿಕೊಂಡು ತಮ್ಮ ಸಂತಸ ವ್ಯಕ್ತಪಡಿಸಿದರು.

ಬೆಳ್ಳಿಮೋಡ ಚಿತ್ರದ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಆರ್.ಎನ್.ಕೃಷ್ಣಪ್ರಸಾದ್ ರಾಜ್ಯ ಸರ್ಕಾರದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಡೆದರು. ಬೆಳ್ಳಿಮೋಡ ಕನ್ನಡ ಚಿತ್ರರಂಗದ ಒಂದು ಮೈಲಿಗಲ್ಲಾಯಿತು. ಕನ್ನಡ ಚಿತ್ರಗಳನ್ನು ಹೀಗೂ ತಾಂತ್ರಿಕ ವೈಭವದಿಂದ ಚಿತ್ರೀಕರಿಸಬಹುದು ಎನ್ನುವುದು ಈ ಚಿತ್ರದಲ್ಲಿ ಬಳಸಿದ ಫ್ರೀಜ್‌ಫ್ರೇಂ, ಮಾಂಟಾಜ್‌ಗಳು ಸಾಬೀತು ಮಾಡಿದವು.

ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡ ಕೃಷ್ಣಪ್ರಸಾದ್, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದರು. ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಸಿನಿಮಾಟೋಗ್ರಫಿ  ಮಾಡಿಕೊಂಡರು.

ನಾಗೇಂದ್ರರಾವ್ ಅವರ ದೂರದೃಷ್ಟಿ ಅದು. ಮತ್ತೊಬ್ಬ ಪುತ್ರ ಜಯಗೋಪಾಲ್ ಇದೇ ಸಂಸ್ಥೆಯಲ್ಲಿ ಸೌಂಡ್ ಎಂಜಿನಿಯರ್ ಡಿಪ್ಲೊಮಾ ಮಾಡಿಕೊಂಡರು. ಸಿನಿಮಾಟೋಗ್ರಫಿ ಕಲಿತ ನಂತರ ಕೃಷ್ಣಪ್ರಸಾದ್ ಮದರಾಸಿನ ಎವಿಎಂ ಸ್ಟುಡಿಯೋದಲ್ಲಿ ಮುಖ್ಯ ಕ್ಯಾಮರಾಮನ್ ಆಗಿದ್ದ ಮುತ್ತುಸ್ವಾಮಿ ಎನ್ನುವ ಹೆಸರಾಂತ ಕ್ಯಾಮರಾಮನ್ ಅವರ ಬಳಿ ಸಹಾಯಕರಾಗಿ ತರಬೇತಿ ಪಡೆದರು.

ನಾಗೇಂದ್ರರಾಯರ ಸ್ವಂತ ತಯಾರಿಕೆ `ಪ್ರೇಮದ ಪುತ್ರಿ~ಯಲ್ಲಿ ಇಬ್ಬರಿಗೂ ಅವಕಾಶ ದೊರಕಿತು. ಕೃಷ್ಣ ಪ್ರಸಾದ್ ಮೊದಲಬಾರಿಗೆ ಸ್ವತಂತ್ರವಾಗಿ ಕ್ಯಾಮರಾ ಹಿಡಿದ ಈ ಚಿತ್ರಕ್ಕೆ ಆ ವರ್ಷ ಕೇಂದ್ರ ಸರ್ಕಾರದ ಅತ್ಯುತ್ತಮ ಪ್ರಶಸ್ತಿ ದೊರಕಿತು. ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಆರ್ವೊ ವರ್ಣ ನೆಗೆಟಿವ್ ಫಿಲಂ ಬಳಸಿ ಛಾಯಾಗ್ರಹಣ ಮಾಡಿದ ಮೊದಲಿಗ ಕೃಷ್ಣ ಪ್ರಸಾದ್.

ನಗುವ ಹೂವು (1971) ಚಿತ್ರದ ನಿರ್ದೇಶನಕ್ಕಾಗಿ ಉತ್ತಮ ಪ್ರಾಂತೀಯ ಭಾಷಾ ಚಿತ್ರ ಪ್ರಶಸ್ತಿ ಪಡೆದರು. 1980-81 ನೇ ಸಾಲಿನಲ್ಲಿ `ಮರೆಯದ ಹಾಡು~ ಚಿತ್ರದ ಛಾಯಾಗ್ರಹಣಕ್ಕಾಗಿ ಎರಡನೇ ಬಾರಿ ರಾಜ್ಯ ಪ್ರಶಸ್ತಿ ಪಡೆದರು.

ತಮಿಳು `ಮೈಕೆಲ್ ಮದನ ಕಾಮರಾಜನ್~ ಸೇರಿದಂತೆ ಕೆಲವು ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದರು. ಕಳೆದ ಸಾಲಿನಲ್ಲಷ್ಟೇ 83 ವರ್ಷ ವಯಸ್ಸಿನ ಕೃಷ್ಣ ಪ್ರಸಾದ್ ಅವರಿಗೆ ರಾಜ್ಯ ಸರ್ಕಾರ ಜೀವಮಾನದ ಸಾಧನೆಗಾಗಿ ವಿಷ್ಣುವರ್ಧನ್ ಪ್ರಶಸ್ತಿ ನೀಡಿ ಗೌರವಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT