ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪನ್ನು ಮತ್ತೆ ಮತ್ತೆ ಕಾಡಿದೆ ಕಾಂಗ್ರೆಸ್ಸು

Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ ಕೇರಳ, ತೆಲಂಗಾಣ ಹಾಗೂ ತ್ರಿಪುರಾದಲ್ಲಿ ಸಶಸ್ತ್ರ ಬಂಡಾಯಗಳನ್ನು ಮುನ್ನಡೆಸಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ). ಬಲು ಶೀಘ್ರವೇ ಸಶಸ್ತ್ರ ಹೋರಾಟದ ಹಾದಿ ಕೈಬಿಟ್ಟಿತು. ಸಂವಿಧಾನ- ಸಂಸದೀಯ ಚೌಕಟ್ಟಿನ ಒಳಗೆ ಕೆಲಸ ಮಾಡಲು ನಿರ್ಧರಿಸಿತು.

1964ರಲ್ಲಿ ಈ ಪಕ್ಷ ಒಡೆದು ಹೊರಬಿದ್ದ ಬಣವೇ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಅಥವಾ ಸಿಪಿಐ(ಎಂ). ಪಶ್ಚಿಮ ಬಂಗಾಳವನ್ನು ಸತತ ಏಳು ಅವಧಿಗಳ ಕಾಲ (1977-2011) ಆಳಿದ ವಾಮರಂಗ ಸರ್ಕಾರಕ್ಕೆ ಸಿಪಿಐ(ಎಂ) ಪಕ್ಷದ್ದೇ ಸಾರಥ್ಯ. ಹಾಗೆ ನೋಡಿದರೆ ಭಾರತದಲ್ಲಿ ಜನತಾಂತ್ರಿಕವಾಗಿ ಆರಿಸಿ ಬಂದ ಮೊದಲ ಕಮ್ಯುನಿಸ್ಟ್ ಸರ್ಕಾರ ಕೇರಳದ್ದು.

ಕೇರಳದ ಕಮ್ಯುನಿಸ್ಟ್ ಪಕ್ಷ ರೂಪು ತಳೆದದ್ದು ಅಲ್ಲಿನ ಬ್ರಿಟಿಷ್ ವಿರೋಧಿ ಆಂದೋಲನಗಳಲ್ಲಿ. ಕಾಂಗ್ರೆಸ್ ಪಕ್ಷದ ಭಾಗವೇ ಆಗಿದ್ದ ಎಡಪಂಥೀಯರು ತಮ್ಮನ್ನು ಸಮಾಜವಾದಿಗಳು ಎಂದು ಕರೆದುಕೊಳ್ಳುತ್ತಿದ್ದರು. ಕಾಂಗ್ರೆಸ್ ಮತ್ತು ಸಮಾಜವಾದಿ ನಾಯಕರ ನಡುವಣ ಒಡಕು 1939ರಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಹುಟ್ಟಿಗೆ ಕಾರಣವಾಯಿತು. 1957ರ ವಿಧಾನಸಭಾ ಚುನಾವಣೆಗಳಲ್ಲಿ ಸಿಪಿಐ ಅಧಿಕಾರ ಹಿಡಿಯಿತು. ಇ.ಎಂ.ಶಂಕರನ್ ನಂಬೂದರಿಪಾದ್ ಮುಖ್ಯಮಂತ್ರಿಯಾದರು. ಕಮ್ಯುನಿಸ್ಟ್ ಸರ್ಕಾರ ರಚನೆಯನ್ನು ತಡೆಯಲು ಕಾಂಗ್ರೆಸ್ ಬಹುವಾಗಿ ಪ್ರಯತ್ನಿಸಿತು.

ನಂಬೂದರಿಪಾದ್ ನೇತೃತ್ವದ ಸರ್ಕಾರ ಕೈ ಹಾಕಿದ ಕ್ರಾಂತಿಕಾರಕ ಭೂಸುಧಾರಣೆಗಳು ಮತ್ತು ಶೈಕ್ಷಣಿಕ ಸುಧಾರಣೆಗಳು ಕ್ಯಾಥೊಲಿಕ್ ಚರ್ಚ್, ಮುಸ್ಲಿಂ ಲೀಗ್, ನಾಯರ್ ಸರ್ವೀಸ್ ಸೊಸೈಟಿ ಹಾಗೂ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾದವು. ಕಮ್ಯುನಿಸ್ಟ್ ವಿರೋಧಿ ಆಂದೋಲನವನ್ನು ಭುಗಿಲೆಬ್ಬಿಸುವಲ್ಲಿ ಅಮೆರಿಕೆಯ ಬೇಹುಗಾರಿಕೆ ಸಂಸ್ಥೆ ಸಿ.ಐ.ಎ. ಪಾತ್ರವಿತ್ತು. ಈ ಸಂಸ್ಥೆ ಅಪಾರ ಹಣವನ್ನೂ ಖರ್ಚು ಮಾಡಿತ್ತು. ಭಾರತದಲ್ಲಿ ಇನ್ನಷ್ಟು ಕಮ್ಯುನಿಸ್ಟ್ ಸರ್ಕಾರಗಳು ತಲೆಯೆತ್ತಕೂಡದು ಎಂಬುದು ಅಮೆರಿಕೆಯ ‘ಆತಂಕ’ವಾಗಿತ್ತು. ಭಾರತದಲ್ಲಿ ಅಮೆರಿಕೆಯ ರಾಯಭಾರಿಯಾಗಿದ್ದ ಡೇನಿಯಲ್ ಪ್ಯಾಟ್ರಿಕ್ ಮೊಯ್ನಿಹಾನ್ ತಮ್ಮ ಪುಸ್ತಕವೊಂದರಲ್ಲಿ ಈ ಸಂಗತಿಯನ್ನು ಪುಷ್ಟೀಕರಿಸಿದ್ದಾರೆ.

ಜನತಾಂತ್ರಿಕವಾಗಿ ಆಯ್ಕೆಯಾಗಿದ್ದ ಸರ್ಕಾರವೊಂದನ್ನು ಕೇಂದ್ರದಲ್ಲಿನ ನೆಹರೂ ನೇತೃತ್ವದ ಸರ್ಕಾರ ವಜಾಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಿತು. ಹೀಗೆ ಭಂಗಗೊಂಡ ಭೂಸುಧಾರಣೆಗಳು ಪೂರ್ಣಪ್ರಮಾಣದಲ್ಲಿ ಜಾರಿಯಾದದ್ದು ನಂಬೂದರಿಪಾದ್ ನೇತೃತ್ವದ ಸರ್ಕಾರ ಎರಡನೆಯ ಬಾರಿಗೆ 1967ರಲ್ಲಿ ಆರಿಸಿ ಬಂದಾಗಲೇ.

ಸ್ವಾತಂತ್ರ್ಯಾನಂತರ, ಕಮ್ಯುನಿಸ್ಟ್ ಆಡಳಿತದ ಸೋವಿಯತ್ ಒಕ್ಕೂಟದತ್ತ ವಾಲಿದ್ದರು ನೆಹರೂ. ಭಾರತ ಸರ್ಕಾರದ ವಿರುದ್ಧ ದೇಶಿ ಕಮ್ಯುನಿಸ್ಟರು ತಮ್ಮ ದಾಳಿಯ ಮೊನಚನ್ನು ತಗ್ಗಿಸಬೇಕೆಂದು ಸೋವಿಯತ್ ಒಕ್ಕೂಟ ಬಯಸಿತ್ತು. ಸೋವಿಯತ್ ಮಾತು ಕೇಳಿ ವರ್ಗ ಹೋರಾಟವನ್ನು ಕೈಬಿಡುವುದು ತರವಲ್ಲ ಎಂಬುದು ಸಿಪಿಐ ನಿಲುವಾಗಿತ್ತು. ಸೋವಿಯತ್ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷಗಳ ನಡುವಣ ಸಂಬಂಧ ಹಳಸಿತ್ತು. ಮಾರ್ಕ್ಸ್ ಮತ್ತು ಲೆನಿನ್ ವಾದದಿಂದ ಸೋವಿಯತ್ ಒಕ್ಕೂಟ ದೂರ ಸರಿಯುತ್ತಿದೆ ಎಂಬುದು ಚೀನಾ ಟೀಕೆಯಾಗಿತ್ತು.

ಚೀನಾ ಮತ್ತು ಸೋವಿಯತ್ ನಡುವಣ ಸೈದ್ಧಾಂತಿಕ ಭಿನ್ನಮತಗಳು ಪರೋಕ್ಷವಾಗಿ ಭಾರತೀಯ ಕಮ್ಯುನಿಸ್ಟ್ ಪಕ್ಷದಲ್ಲೂ ಪ್ರತಿಫಲಿಸಿದವು. ಭಾರತೀಯ ಆರ್ಥಿಕ- ಸಾಮಾಜಿಕ ವಾಸ್ತವಗಳನ್ನು ಅಂದಾಜು ಮಾಡಿ ಕಾರ್ಯಕ್ರಮಗಳನ್ನು ರೂಪಿಸುವ ವಿಷಯದ ಸುತ್ತ ಈ ಭಿನ್ನಮತ ಕೇಂದ್ರೀಕೃತ ಆಗಿತ್ತು. ಒಂದು ಬಣ ಸೋವಿಯತ್ ಜೊತೆ ನಿಂತು ಅಂದಿನ ಆಳುವ ಪಕ್ಷ ಕಾಂಗ್ರೆಸ್ ಜೊತೆ ಕೈಜೋಡಿಸುವ ಪರವಾಗಿತ್ತು.

ಸಮಾಜವನ್ನು ಮೇಲು- ಕೀಳು ಎಂಬ ವರ್ಗಗಳಾಗಿ ವಿಭಾಗಿಸುವುದು ನಾಗರಿಕತೆಯ ಸಕಾರಾತ್ಮಕ ಮತ್ತು ಅತ್ಯಗತ್ಯ ಗುಣಲಕ್ಷಣ ಎಂದು ಪ್ರತಿಪಾದಿಸುವುದು ಸುಧಾರಣಾವಾದಿ ನೀತಿ ಮತ್ತು ಬಲಪಂಥೀಯ ನಿಲುವು ಎಂದು ಜರೆಯುವ ಬಣವೇ ಮುಂದಿನ ದಿನಗಳಲ್ಲಿ ಸಿಪಿಐ(ಎಂ) ಆಯಿತು. ಅವಿಭಜಿತ ಕಮ್ಯುನಿಸ್ಟ್ ಪಕ್ಷದಲ್ಲಿ ಶ್ರೀಪಾದ ಅಮೃತ ಡಾಂಗೆ ‘ಬಲಪಂಥೀಯ’ ಬಣವನ್ನೂ, ನಂಬೂದರಿಪಾದ್ ಎಡಪಂಥೀಯ ಬಣವನ್ನೂ ಪ್ರತಿನಿಧಿಸಿದ್ದರು.

ಬಲಪಂಥೀಯ ಎಂಬ ಟೀಕೆಗೆ ಗುರಿಯಾದ ಬಣ ಸಿಪಿಐ ಆಗಿಯೇ ಮುಂದುವರೆಯಿತು. ಇಂದಿರಾ ಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯನ್ನು ಬೆಂಬಲಿಸುವ ಹಂತಕ್ಕೆ ಹೋಯಿತು. ‘ಬಲಪಂಥೀಯ ಪ್ರತಿಗಾಮಿ ಶಕ್ತಿಗಳನ್ನು ಸೋಲಿಸಲು ತುರ್ತುಪರಿಸ್ಥಿತಿ ಸಹಕಾರಿ ಎಂಬ ನಮ್ಮ ನಂಬಿಕೆ ಹುಸಿಯಾಯಿತು. ಅದನ್ನು ಬೆಂಬಲಿಸಿದ್ದು ದೊಡ್ಡ ತಪ್ಪು’ ಎಂದು ಸಿಪಿಐ ನಾಯಕರು ಮುಂದಿನ ದಿನಗಳಲ್ಲಿ ಒಪ್ಪಿಕೊಂಡರು. ಕಾಂಗ್ರೆಸ್ ಮತ್ತು ಅದರ ನೀತಿಗಳ ಬೆಂಬಲವನ್ನು ಮುಂದುವರೆಸಿದ್ದ ನೇತಾರ ಶ್ರೀಪಾದ ಅಮೃತ ಡಾಂಗೆಯವರನ್ನು ಸಿಪಿಐ ಉಚ್ಚಾಟಿಸಿತು.

1967ರಲ್ಲಿ ಪಶ್ಚಿಮ ಬಂಗಾಳದ ನಕ್ಸಲ್‌ಬರಿ ಎಂಬಲ್ಲಿ ರೈತ ಬಂಡಾಯವೊಂದು ಭುಗಿಲೆದ್ದಿತ್ತು. ಸಿಪಿಐ(ಎಂ) ಒಳಗೇ ಕಟ್ಟರ್‌ವಾದಿಗಳೆಂದು ಗುರುತಿಸಲಾಗಿದ್ದ ಚಾರು ಮಜುಂದಾರ್ ಮತ್ತು ಕನು ಸನ್ಯಾಲ್ ಈ ಬಂಡಾಯದ ನಾಯಕತ್ವ ವಹಿಸಿದ್ದರು. ನಕ್ಸಲ್‌ಬರಿ ಬಂಡಾಯವು ಭಾರತದಲ್ಲಿ ಕ್ರಾಂತಿಗೆ ದಾರಿ ಮಾಡಲಿದೆ ಎಂದು ನಂಬಲಾಗಿತ್ತು. ಸಿಪಿಐ(ಎಂ) ಪಾಲುದಾರಿಕೆಯಿದ್ದ ಪಶ್ಚಿಮ ಬಂಗಾಳದ ಯುನೈಟೆಡ್ ಫ್ರಂಟ್ ಸರ್ಕಾರ ಈ ಬಂಡಾಯವನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿತ್ತು. ನಕ್ಸಲ್‌ಬರಿ ಕಾರ್ಯಾಚರಣೆಯನ್ನು ಸಮರ್ಥಿಸಿದ ಕಟ್ಟರ್‌
ಪಂಥೀಯರೆಲ್ಲ ಸೇರಿ ‘ಆಲ್ ಇಂಡಿಯಾ ಕೋಆರ್ಡಿನೇಷನ್ ಕಮಿಟಿ ಆಫ್ ಕಮ್ಯುನಿಸ್ಟ್ ರೆವಲ್ಯೂಷನರೀಸ್’ (ಎಐಸಿಸಿಸಿಆರ್) ಎಂಬ ಸಂಘಟನೆಯಡಿ ಸಿಪಿಐ(ಎಂ)ನಿಂದ ಹೊರಬಿದ್ದರು. ಇವರನ್ನು ನಕ್ಸಲೀಯರು ಎಂದೇ ಕರೆಯಲಾಯಿತು. ಆಂಧ್ರದಲ್ಲಿ ತರಿಮಲ ನಾಗಿರೆಡ್ಡಿಯವರ ನೇತೃತ್ವದಲ್ಲಿ ಇಂತಹುದೇ ಸಂಘಟನೆ ‘ಆಂಧ್ರಪ್ರದೇಶ ಕೋಆರ್ಡಿನೇಷನ್ ಕಮಿಟಿ ಆಫ್ ಕಮ್ಯುನಿಸ್ಟ್ ರೆವೆಲ್ಯೂಷನರೀಸ್’ ಹೆಸರಿನಲ್ಲಿ ಹೊರಬಿದ್ದಿತು.

ಹೀಗೆ ಹೊರಗಿನ ವಿಶಾಲ ರಾಜಕಾರಣದ ಎಡಪಂಥೀಯ– ಬಲಪಂಥೀಯ ವಿಭಾಗಗಳು ಒತ್ತಟ್ಟಿಗಿರಲಿ. ಕಮ್ಯುನಿಸ್ಟ್‌ ಪಕ್ಷದ ಒಳಗೇ ಎಡಪಂಥೀಯ- ಬಲಪಂಥೀಯ ಭೇದಭಾವದ ಭಿನ್ನಮತದ ಬೆಂಕಿ ಇಂದು ನೆನ್ನೆಯದಲ್ಲ.

ಕಾಂಗ್ರೆಸ್ ಪಕ್ಷದ ಜೊತೆಗೆ ಗೆಳೆತನ ಬೇಕೇ ಬೇಡವೇ ಎಂಬ ಪ್ರಶ್ನೆ ಭಾರತೀಯ ಎಡಪಕ್ಷಗಳನ್ನು ಆರಂಭದಿಂದಲೂ ಬಾಧಿಸುತ್ತ ಬಂದಿದೆ. ಕಳೆದ ವಾರ ಕೋಲ್ಕತ್ತದಲ್ಲಿ ಜರುಗಿದ ಸಿಪಿಐ (ಎಂ) ಕೇಂದ್ರೀಯ ಸಮಿತಿಯ ಸಭೆ ಕೂಡ ಇಂತಹುದೇ ಮುಖಾಮುಖಿಗೆ ಸಾಕ್ಷಿಯಾಯಿತು. 2019ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಯಾವುದೇ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಬಹುಮತದಿಂದ ನಿರ್ಧರಿಸಿತು. ಯಾವುದೇ ಹೊಂದಾಣಿಕೆ ಕೂಡದು ಎಂಬ ಪ್ರಕಾಶ್ ಕಾರಟ್ ಮಂಡಿಸಿದ ಕರಡು ಪ್ರಸ್ತಾವ 55-31 ಮತಗಳ ಅಂತರದಿಂದ ಅಂಗೀಕಾರ ಆಯಿತು. ಆಳುವ ವರ್ಗಗಳ ರಾಜಕೀಯ ಪಕ್ಷಗಳ ಜೊತೆ ಯಾವುದೇ ಚುನಾವಣೆ ಮೈತ್ರಿ ಮಾಡಿಕೊಳ್ಳದೆ, ಯಾವುದೇ ಚುನಾವಣಾ ರಂಗ ಕಟ್ಟದೆ ಜಾತ್ಯತೀತ ಶಕ್ತಿಗಳ ಜೊತೆ ಸಿಪಿಐ(ಎಂ) ಸಹಕರಿಸುವ ಅಗತ್ಯವಿದೆ ಎಂಬ ಸೀತಾರಾಂ ಯೆಚೂರಿ ಪ್ರಸ್ತಾವಕ್ಕೆ ಸೋಲಾಯಿತು. ಯೆಚೂರಿ ಪ್ರಸ್ತಾವದ ವಿರೋಧದ ಮುಂಚೂಣಿಯಲ್ಲಿದ್ದವರು ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್.

ಪಕ್ಷದ ಸೈದ್ಧಾಂತಿಕ ಚೌಕಟ್ಟಿನೊಳಗೆ ಎರಡು ವಿಚಾರಧಾರೆಗಳ ತಾಕಲಾಟವಿದು ಎನ್ನಲಾಗುತ್ತಿದೆ. ಸದಾ ರೋಚಕತೆ- ಅತಿರಂಜನೆಗಳ ಹುಡುಕಾಟದಲ್ಲಿರುವ ಸಮೂಹ ಮಾಧ್ಯಮಗಳು ಈ ವಿಚಾರಧಾರೆಗಳಲ್ಲಿ ಒಂದಕ್ಕೆ ಯೆಚೂರಿ ಮುಖವಾಡವನ್ನೂ ಮತ್ತೊಂದಕ್ಕೆ ಪ್ರಕಾಶ್
ಕಾರಟ್ ಮುಖವಾಡವನ್ನೂ ತೊಡಿಸಿ ಅತಿರಂಜನೆಯಲ್ಲಿ ತೊಡಗಿವೆ ಎಂಬುದು ಪಕ್ಷದೊಳಗಿನ ಮೂಲಗಳ ಅಭಿಪ್ರಾಯ.

2016ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಸಿಪಿಐ(ಎಂ) ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು. ಇಂದಿನಂತೆ ಅಂದು ಕೂಡ ಯೆಚೂರಿ-ಕಾರಟ್ ಮುಖಾಮುಖಿಯಾಗಿದ್ದರು. ಹೊಂದಾಣಿಕೆಯಿಂದ ಕಾಂಗ್ರೆಸ್‌ಗೆ ಲಾಭವಾಯಿತೇ ವಿನಾ ಸಿಪಿಐ(ಎಂ)ಗೆ ಹೆಚ್ಚೇನೂ ಗಿಟ್ಟಲಿಲ್ಲ.

‘ನವಉದಾರವಾದಿ ಆರ್ಥಿಕ ನೀತಿಗಳನ್ನು ಹಿಂದೆಂದಿಗಿಂತಲೂ ಹೆಚ್ಚಿನ ರಭಸದಿಂದ ಜಾರಿಗೆ ತಂದು ಬಡವ-ಬಲ್ಲಿದ ವರ್ಗಗಳ ಅಂತರ ಹೆಚ್ಚಳಕ್ಕೆ ಕಾರಣ ಆಗುತ್ತಿರುವ ಮತ್ತು ದೇಶವನ್ನು ಕೋಮುವಾದದ ಕಿಚ್ಚಿಗೆ ನೂಕಿರುವ ಬಿಜೆಪಿಯನ್ನು ಸೋಲಿಸುವುದು ಪ್ರಾಥಮಿಕ ಗುರಿ' ಎಂಬುದರ ಕುರಿತು ಸಿಪಿಐ(ಎಂ) ನಾಯಕರ ನಡುವೆ ಯಾವುದೇ ಭಿನ್ನಮತ ಇಲ್ಲ. ಈ ಗುರಿಯನ್ನು ತಲುಪುವ ದಾರಿಗಳು- ಅನುಸರಿಸಬೇಕಿರುವ ತಂತ್ರೋಪಾಯಗಳ ಕುರಿತು ಯೆಚೂರಿ-ಕಾರಟ್ ನಡುವೆ ಒಮ್ಮತ ಇಲ್ಲ. ಕಾಂಗ್ರೆಸ್ ಪಕ್ಷವೇ ಈ ಭಿನ್ನಮತದ ಕೇಂದ್ರಬಿಂದು.

1996ರಲ್ಲಿ ತೃತೀಯರಂಗ ಸರ್ಕಾರದ ಪ್ರಧಾನಿ ಪಟ್ಟಕ್ಕೆ ದೇವೇಗೌಡರು ಮೊದಲ ಆಯ್ಕೆಯೇನೂ ಆಗಿರಲಿಲ್ಲ. ಅಂದಿನ ಪಶ್ಚಿಮ ಬಂಗಾಳದ ವಾಮರಂಗ ಸರ್ಕಾರದ ಮುಖ್ಯಮಂತ್ರಿ ಜ್ಯೋತಿ ಬಸು ಅವರನ್ನು ಈ ಹುದ್ದೆ ವಹಿಸಿಕೊಳ್ಳುವಂತೆ ಆಗ್ರಹಿಸಲಾಗಿತ್ತು. ಈ ಪ್ರಸ್ತಾವವನ್ನು ಪಕ್ಷದ ಕೇಂದ್ರೀಯ ಸಮಿತಿ ತಳ್ಳಿ ಹಾಕಿತ್ತು. ಪಕ್ಷವನ್ನು ಆಗ ಕಾಡಿದ್ದೂ ಕಾಂಗ್ರೆಸ್ ಪ್ರಶ್ನೆಯೇ. ಹೌದು, ತೃತೀಯರಂಗ ಸರ್ಕಾರವನ್ನು ಕಾಂಗ್ರೆಸ್ ಪಕ್ಷ ಹೊರಗಿನಿಂದ ಬೆಂಬಲಿಸಿತ್ತು.

ಸಿಪಿಐ(ಎಂ) ನೇತಾರರೊಬ್ಬರು ಪ್ರಧಾನಿ ಹುದ್ದೆಗೇರುವ ಅವಕಾಶ ಕೈತಪ್ಪಿ ಹೋಗಿತ್ತು. ಕೇಂದ್ರೀಯ ಸಮಿತಿಯ ಅಂದಿನ ಈ ನಿರ್ಧಾರವನ್ನು ಮುಂದೊಮ್ಮೆ ಜ್ಯೋತಿ ಬಸು ಅವರು ‘ಐತಿಹಾಸಿಕ ಪ್ರಮಾದ’ ಎಂದು ಕರೆದಿದ್ದರು.

ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಬೇಕೆಂದು 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ-1 ಸರ್ಕಾರಕ್ಕೆ ಎಡಪಕ್ಷಗಳು ಹೊರಗಿನ ಬೆಂಬಲ ನೀಡಿದವು. ಅಮೆರಿಕೆಯೊಂದಿಗೆ ಮನಮೋಹನ್‌ ಸಿಂಗ್ ನೇತೃತ್ವದ ಸರ್ಕಾರ ಮಾಡಿಕೊಂಡ ನಾಗರಿಕ ಪರಮಾಣು ಒಪ್ಪಂದ
ವಿರೋಧಿಸಿ ಈ ಬೆಂಬಲವನ್ನು 2008ರಲ್ಲಿ ವಾಪಸು ಪಡೆವ ತೀರ್ಮಾನದಲ್ಲಿ ಕಾರಟ್ ಮತ್ತು ಅವರ ಕಟ್ಟರ್‌ಪಂಥೀಯ ಸಹೋದ್ಯೋಗಿಗಳು ಮಹತ್ತರ ಪಾತ್ರ ವಹಿಸಿದ್ದರು. ಈ ತೀರ್ಮಾನಕ್ಕೆ ಯೆಚೂರಿ ಅವರ ವ್ಯಕ್ತಿಗತ ಬೆಂಬಲ ಇರಲಿಲ್ಲ.

ಜನಾಂದೋಲನಗಳ ನಡುವಿನಿಂದ ಎದ್ದು ಬಂದ ನಾಯಕ ಹರಕಿಶನ್ ಸಿಂಗ್ ಸುರ್ಜೀತ್ ಅವರು ಬೆಳೆಸಿದ ತಲೆಯಾಳುಗಳು ಪ್ರಕಾಶ್ ಕಾರಟ್ ಮತ್ತು ಯೆಚೂರಿ. ಚಿದಂಬರಂ ಜೊತೆಗೂಡಿ 1996ರ ಸಂಯುಕ್ತ ರಂಗ ಸರ್ಕಾರಕ್ಕೆ ಸಮಾನ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಿದ
ವರು. 2004ರ ಯುಪಿಎ ಸಮ್ಮಿಶ್ರ ಸರ್ಕಾರದ ಆಧಾರ ಸ್ತಂಭಗಳನ್ನು ಎಬ್ಬಿಸಿ ನಿಲ್ಲಿಸಿದವರಲ್ಲಿ ಪ್ರಮುಖರು. ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ಹತ್ತಿರದವರು ಎನಿಸಿಕೊಂಡಿರುವವರು.

ವಿಶೇಷವಾಗಿ ಬಾಬರಿ ಮಸೀದಿ ಧ್ವಂಸದ ನಂತರ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಿ ಜಾತ್ಯತೀತ ಸರ್ಕಾರವನ್ನು ನೆಲೆಗೊಳಿಸುವುದು ಆದ್ಯತೆಯ ಕೆಲಸ ಎಂದು ಬಗೆದವರು ಸಿಪಿಐ(ಎಂ)ನ ಇಬ್ಬರು ಎತ್ತರದ ನಾಯಕರಾದ ಸುರ್ಜೀತ್ ಮತ್ತು ಜ್ಯೋತಿ ಬಸು.

ಚುನಾವಣಾ ರಾಜಕೀಯದಲ್ಲಿ ಭಾರೀ ಹಿನ್ನಡೆ ಎದುರಿಸಿರುವ ಸಿಪಿಐ(ಎಂ) ಮತ್ತು ಇತರೆ ಎಡಪಕ್ಷಗಳು ನಿಸ್ತೇಜ ಹಂತವನ್ನು ಹಾಯುತ್ತಿರುವ ಕಷ್ಟದ ದಿನಗಳಿವು. ಬಲಪಂಥೀಯ ರಾಜಕೀಯ ವ್ಯಾಖ್ಯಾನಕಾರರು ಎಡಪಂಥೀಯ ರಾಜನೀತಿಯ ಚರಮಗೀತೆ ಬರೆಯಲು ಅತೀ ಉತ್ಸುಕವಾಗಿರುವ ಕಾಲಖಂಡ.

ಅಬ್ಬರಿಸಿರುವ ಬಲಪಂಥೀಯ ಶಕ್ತಿಗಳನ್ನು ಸೋಲಿಸುವುದೇ ಪ್ರಾಥಮಿಕ ಉದ್ದೇಶವಾಗಿದ್ದಲ್ಲಿ ಜಾತ್ಯತೀತ ಶಕ್ತಿಗಳ ಜೊತೆ ಸಹಕರಿಸುವ ಬಾಗಿಲುಗಳನ್ನು ಮುಚ್ಚಕೂಡದು. ನಾವೇ ಬಲಿಷ್ಠ ಶಕ್ತಿಯಾಗುವ ತನಕ ಆಳುವ ವರ್ಗಗಳ ಪಕ್ಷಗಳೊಂದಿಗೆ ಸಹಕರಿಸಕೂಡದು ಎಂಬ ನಿಲುವು ತರವಲ್ಲ. ಅಲ್ಲಿಯ ತನಕ ಫ್ಯಾಸಿಸ್ಟ್ ಕಾರ್ಯಸೂಚಿ ಜಾರಿಯಾಗಿಬಿಡುತ್ತದೆ. ತಡೆಯಬೇಕಿದ್ದರೆ ಸಹಕಾರದ ನಿಲುವೇ ಸರಿ ಎಂಬ ಯೆಚೂರಿ ವಾದದಲ್ಲಿ ಹುರುಳಿದೆ.

‘ಸೈದ್ಧಾಂತಿಕ, ವ್ಯೂಹಾತ್ಮಕ, ಸಂಘಟನಾತ್ಮಕ ಹಾಗೂ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಬಹುಮುಖಿ ಬಿಕ್ಕಟ್ಟು ಪಕ್ಷವನ್ನು ಕಾಡಿದೆ. ದೇಶದ ಬಹುಸಂಖ್ಯಾತ ಜನ ಬಡವರು. ಅವರ ಹಿತಗಳನ್ನು ಕಾಯುವಲ್ಲಿ ಮುಖ್ಯಧಾರೆಯ ರಾಜಕೀಯ ಪಕ್ಷಗಳಿಗೆ ರುಚಿಯಿಲ್ಲ. ಇಂತಹ ಸನ್ನಿವೇಶದಲ್ಲಿ ದೀನದರಿದ್ರರ ಹಿತವನ್ನೇ ಕೇಂದ್ರಬಿಂದುವಾಗಿ ಉಳ್ಳ ಶುದ್ಧ ತತ್ವಬದ್ಧ ರಾಜಕಾರಣ ಮಾಡುವ ಶಕ್ತಿಯಾಗಿ ಎಡಪಕ್ಷಗಳು ಮರುಹುಟ್ಟು ಪಡೆಯಬೇಕು. ಈ ಪ್ರಕ್ರಿಯೆಯಲ್ಲಿ ತಮ್ಮನ್ನು ಬಾಧಿಸಿರುವ ಬಿಕ್ಕಟ್ಟುಗಳಿಗೆ ನೇರಾನೇರ ಮುಖಾಮುಖಿ ಆಗಲು ಹಿಂಜರಿಯಬಾರದು. ಆತ್ಮವಿಮರ್ಶೆಯ ಭಾವವನ್ನು ತಬ್ಬಿಕೊಳ್ಳಬೇಕು...’ ಎಂಬ ಎಡಪಂಥೀಯ ಚಿಂತಕ ಪ್ರಫುಲ್ ಬಿದ್ವಾಯಿ ಕಿವಿಮಾತು ಈಗಲೂ ಪ್ರಸ್ತುತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT