ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಟೀ ಶರ್ಟಿನ ಹುಡುಗ

Last Updated 22 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ನಾನು ಐಎಎಸ್ ಮಾಡಬೇಕೆಂದು ಅಪ್ಪಾಜಿ ಯಾವಾಗಲೂ ಬಯಸುತ್ತಿದ್ದರು. ನಾನು ವೈದ್ಯಕೀಯ ಕ್ಷೇತ್ರ ಆಯ್ದುಕೊಂಡಾಗ ಅವರಿಗೆ ಬೇಸರವಾದರೂ, ಅವರು ವೈದ್ಯವೃತ್ತಿ ಕಡೆಗಿನ ನನ್ನ ಒಲವನ್ನು ನಿರುತ್ಸಾಹಗೊಳಿಸಲಿಲ್ಲ.
 
ಕೆಲವೊಮ್ಮೆ ನಾನೇಕೆ ವೈದ್ಯಳಾಗಲು ಪ್ರಯತ್ನಿಸಿದೆ ಎಂದು ನನ್ನಷ್ಟಕ್ಕೆ ನಾನೇ ಆಶ್ಚರ್ಯದಿಂದ ಪ್ರಶ್ನಿಸಿಕೊಳ್ಳುತ್ತೇನೆ. ಬಹುಶಃ ಮುಂದೆ ನಾನು ಈ ಬಗೆಯಲ್ಲಿ ಚಿಂತಿಸುತ್ತೇನೆ ಎಂದು ಮಗಳ ಮಾನಸಿಕ ಸ್ಥಿತಿಯನ್ನು ಅಪ್ಪಾಜಿ ಆಗಲೇ ಅರಿತಿದ್ದರು ಎನಿಸುತ್ತದೆ.

ವೈದ್ಯರಾಗಿ ನಾವು ಸಾವನ್ನು, ಅದರಲ್ಲೂ ಸಾಂಕ್ರಾಮಿಕ ಸೋಂಕು ವ್ಯಾಪಿಸಿದ ಸಂದರ್ಭದಲ್ಲಿ ತುಸು ಹೆಚ್ಚಾಗಿಯೇ ನೋಡುತ್ತೇವೆ. ಈ ಕಾಯಿಲೆಗಳು ಒಡ್ಡುವ ಸವಾಲುಗಳು ಮತ್ತು ಮಕ್ಕಳನ್ನು ಸಾವಿನಿಂದ ರಕ್ಷಿಸುವುದು ಸುಲಭದ ಮಾತಲ್ಲ.

ಸಾಮಾಜಿಕ ಅಥವಾ ಖಾಸಗಿ ಬದುಕಿಗೆ ತೀರಾ ಗಟ್ಟಿಯಾಗಿ ಬದ್ಧರಾಗಿರುವ ವೈದ್ಯರನ್ನು ಈ ಪರಿಸ್ಥಿತಿ ತಲ್ಲಣಗೊಳಿಸುತ್ತದೆ. `ವೈದ್ಯ~ನೆಂಬ ಪದ ಗಳಿಸಿಕೊಳ್ಳಲು ಐದೂವರೆ ವರ್ಷ ಕಠಿಣ ಅಧ್ಯಯನ ನಡೆಸಬೇಕು ಮತ್ತು ತದನಂತರವೂ ಅದು ಸಾಲದು, ಮೂರು ವರ್ಷದ ಸ್ನಾತಕ ಪದವಿಯೂ ಬೇಕು. ಹೆಚ್ಚೂಕಡಿಮೆ ಒಂಬತ್ತು ವರ್ಷ ನಮ್ಮ ಯುವಜನತೆ ವೈದ್ಯರೆಂದು ಗುರುತಿಸಿಕೊಳ್ಳಲು ಪುಸ್ತಕದೊಳಗೇ ಮುಳುಗಿರಬೇಕು!
 
`ಪದವಿಯ ದಿನಗಳೆಂದರೆ ಹುರುಪಿನದು. ನಾವು ಈ ವೃತ್ತಿಗೆ ಸೇರಿಕೊಳ್ಳುವ ಮುನ್ನವೇ ಹತ್ತು ವರ್ಷದ ನಮ್ಮ ಬದುಕನ್ನು ಇದು ಕಸಿದುಕೊಳ್ಳುತ್ತದೆ~ ಎಂದು ನಮಗೆ ಪ್ರೊ. ನಿರ್ಮಲಾ ಕೇಸರಿ ಆಗಾಗ್ಗೆ ಹೇಳುತ್ತಿದ್ದರು.

ಯಾವುದಾದರೂ ಗಂಭೀರ ಅಸ್ವಸ್ಥ ಮಗುವನ್ನು ನೋಡಿದಾಗ ನನ್ನ ಮನಸ್ಸು ಕದಡುತ್ತದೆ. ನನ್ನ ಸ್ನೇಹಿತರು, ಕುಟುಂಬದವರನ್ನೆಲ್ಲಾ ಕೈ ಮುಗಿದು ಪ್ರಾರ್ಥಿಸುವಂತೆ ಕೇಳಿಕೊಳ್ಳುತ್ತೇನೆ. ದೇವರು ಅದಕ್ಕೆ ಸ್ಪಂದಿಸುತ್ತಾನೆ ಮತ್ತು ಈ ಮುದ್ದಾದ ಮುಗ್ಧ ಮಕ್ಕಳನ್ನು ರಕ್ಷಿಸುತ್ತಾನೆ ಎಂಬುದು ನನ್ನ ನಂಬಿಕೆ.

ರೋಗಿಗಳೊಂದಿಗೆ ಭಾವನಾತ್ಮಕವಾಗಿ ತೊಡಗಿಕೊಳ್ಳಬಾರದೆಂದು ಕಠಿಣ ರೀತಿಯ ಸೂಚನೆಗಳಿದ್ದರೂ ತಮ್ಮದಲ್ಲದ ತಪ್ಪಿಗೆ ಅಮಾಯಕ ಮಕ್ಕಳು ನರಳಾಡುವುದನ್ನು ನೋಡುವುದು ನನಗೆ ಕಷ್ಟವಾಗುತ್ತದೆ. ನಾವು ವೈದ್ಯರು ಮತ್ತು ದಾದಿಯರು ಮಕ್ಕಳ ಪೋಷಕರ ಜೊತೆಗೂಡಿ ಸಾವಿನ ದವಡೆಯಿಂದ ಅವರನ್ನು ರಕ್ಷಿಸಲು ಕಠಿಣ ಶ್ರಮ ಪಡುತ್ತೇವೆ.

ಕೆಂಪು ಟೀ ಶರ್ಟಿನಲ್ಲಿದ್ದ ಆ ಬಾಲಕನದು ಎಂದಿಗೂ ಮರೆಯಲಾಗದ ಮುಖಾಮುಖಿ.
2010ರ ಮೇ 14. ಕರ್ತವ್ಯದಲ್ಲಿದ್ದ ಡಾ. ಭಾರತಿ ಪ್ರಸಾದ್ ರಾತ್ರಿ ಒಂಬತ್ತು ಗಂಟೆಗೆ ವಿಶೇಷ ವಾರ್ಡ್‌ಗೆ (ಇದು ಪಿಐಸಿಯುಯಿಂದ ತುಂಬಾ ದೂರವಿರುವ, ಬೇರೆಯದೇ ಬ್ಲಾಕ್‌ನಲ್ಲಿರುವ ವಾರ್ಡ್) ದಾಖಲಾಗಿರುವ ರೋಗಿಯ ಬಗ್ಗೆ ತಿಳಿಸಿದರು.
 
ಸಣ್ಣ ಜ್ವರದ ಹೊರತಾಗಿ 11 ವರ್ಷದ ಆ ಬಾಲಕನ ಸ್ಥಿತಿ ಸಹಜವಾಗಿದೆ ಎಂದು ಹೇಳಿದರು. ಏನೇ ಇದ್ದರೂ ಮೂರು ಗಂಟೆಗೊಮ್ಮೆ ಆತನ ಆರೋಗ್ಯದ ಏರಿಳಿತಗಳನ್ನು ದಾಖಲಿಸಿಕೊಳ್ಳುವಂತೆ ಸೂಚಿಸಿದೆ. ಮಧ್ಯರಾತ್ರಿ 12.30ಕ್ಕೆ ಮತ್ತೆ ಕರೆ ಮಾಡಿದ ಆಕೆ ಬಾಲಕನ ರಕ್ತದೊತ್ತಡ ತೀವ್ರವಾಗಿ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.
 
ಕೂಡಲೇ ಆ ಮಗುವನ್ನು ಶಿಶುವೈದ್ಯದ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸುವಂತೆ ಸೂಚಿಸಿದೆ. ಮಗು ಸಹಜ ಸ್ಥಿತಿಯಲ್ಲಿದ್ದಂತೆ ಕಾಣುತ್ತಿದ್ದರಿಂದ ಪೋಷಕರು ಅದಕ್ಕೆ ವಿರೋಧಿಸಿದರು.
 
ಆ ಮಗು ಸಾಕಷ್ಟು ಸ್ಥಿತಿವಂತರ ಕುಟುಂಬದವರದ್ದು. ನನ್ನ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಆ ಮಗುವಿನ ಅಕ್ಕ.
 
ನಾನು ಮಗುವನ್ನು ದಾಖಲಿಸುವಂತೆ ಹೇಳುತ್ತೇನೆ ಎಂದು ಆಕೆ ಊಹಿಸಿರಲಿಲ್ಲ, ಅದೂ ಸರ್ಕಾರಿ ಆಸ್ಪತ್ರೆಯೊಂದರಲ್ಲಿ...! 2-7 ದಿನಗಳ ವೈರಲ್ ಜ್ವರದಿಂದ ಬಳಲುತ್ತಿದ್ದ ಈ ಮಗುವನ್ನು ದಾಖಲಿಸುವಂತೆ ಪೋಷಕರ ಹಾಗೂ ಈ ಭಾವೀ ವೈದ್ಯೆಯ ಮನವೊಲಿಸುವುದು ಸುಲಭದ ಕೆಲಸವಾಗಿರಲಿಲ್ಲ. ಈ ಮಗುವನ್ನು ಪಿಐಸಿಯುಗೆ ವರ್ಗಾಯಿಸಲು ಹರಸಾಹಸ ಪಡಬೇಕಾಯಿತು.

ಆ ಮಗುವನ್ನು ನಿರಂತರ ತಪಾಸಣೆಗೆ ಒಳಪಡಿಸಬೇಕಿತ್ತು. ಜೊತೆಗೆ ಪೋಷಕರಿಂದ ಆಸ್ಪತ್ರೆ ವಾತಾವರಣ ಶುಚಿಯಾಗಿಲ್ಲ, ತಮ್ಮ ಘನತೆಗೆ ತಕ್ಕುದಾದ ಆಸ್ಪತ್ರೆಯಲ್ಲ ಎಂಬ ದೂಷಣೆಗಳನ್ನೂ ಸಹಿಸಬೇಕಿತ್ತು. ನಾನು ಬೆಳಿಗ್ಗೆ ಬಂದು ಮಗುವನ್ನು ನೋಡುವವರೆಗೂ ಪೋಷಕರು ಅಲ್ಲಿಯೇ ಇರುವಂತೆ ಡಾ. ಭಾರತಿ ಪಟ್ಟುಹಿಡಿದಿದ್ದರು.

ನನ್ನ ಸೋದರನ ಮಗಳು ಬಿ.ಎಂ. ಅಶ್ವಿನಿ (ಅಂತರರಾಷ್ಟ್ರೀಯ ಟೇಬಲ್ ಟೆನಿಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಷ್ಟ್ರೀಯ ಕ್ರೀಡಾಪಟು) ವಿವಾಹ ಆರತಕ್ಷತೆಯೂ ಮೇ 14ರಂದೇ ನಿಶ್ಚಿತವಾಗಿತ್ತು. ಅದಕ್ಕೆ ಹೋಗುವುದು ಅಸಾಧ್ಯವಾಗಿದ್ದರಿಂದ ಮಾರನೇ ದಿನದ ಮುಹೂರ್ತಕ್ಕೆ ಹೋಗಬೇಕೆಂದು 15ನೇ ತಾರೀಕಿಗೆ ರಜೆ ಅರ್ಜಿ ಸಲ್ಲಿಸಿದೆ.

ಆಸ್ಪತ್ರೆಯ ಮುಂಭಾಗದಲ್ಲಿ ಎಲ್ಲವೂ ಸರಿಯಿರಲಿಲ್ಲ. ನೋಡಲು ಆರೋಗ್ಯವಂತನಂತೆ ಕಾಣುತ್ತಿದ್ದ ಆ ಬಾಲಕ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ. ಆ ಮಗುವಿಗೆ ಇಲ್ಲಿಯೇ ಚಿಕಿತ್ಸೆ ನೀಡುವಂತೆ ಪೋಷಕರ ಮನವೊಲಿಸುವುದು ಹಿರಿಯ ಪ್ರೊಫೆಸರ್‌ಗೆ ಸಾಧ್ಯ ಎಂದು ಡಾ. ಭಾರತಿಗೆ ಅನಿಸಿತ್ತು.

ಆ ವರ್ಷದಲ್ಲಿ ಡೆಂಗ್ಯೂ ಹರಡುವಿಕೆ ತುಂಬಾ ಕಡಿಮೆ ಇತ್ತು. ಅದು ಈ ವರ್ಷ ತುಂಬಾ ಹೆಚ್ಚಾಗಿದೆ. ವಾರಕ್ಕೆ 25-30 ಜನ ದಾಖಲಾಗುತ್ತಿದ್ದು, 2-3 ಸಾವುಗಳು ಸಂಭವಿಸುತ್ತಿವೆ. ವೈದ್ಯಕೀಯ ವೃತ್ತಿಪರರಾದ ನಾವು ಡೆಂಗ್ಯೂ ಪ್ರಕರಣಗಳ ನಿರ್ವಹಣೆಯಲ್ಲಿ ತೊಡಗಿದ್ದೇವೆ.
 
ನಮ್ಮ ಮಾತುಗಳು, ಎಷ್ಟು ರೋಗಿಗಳು ದಾಖಲಾಗಿದ್ದಾರೆ, ಆರೋಗ್ಯವಂತರಾಗಿ ಬಿಡುಗಡೆಯಾಗಿದ್ದಾರೆ ಅಥವಾ ಮರಣ ಹೊಂದಿದ್ದಾರೆ, ಅದಕ್ಕೆ ನೀಡಬಹುದಾದ ಬೇರೆ ಬೇರೆ ಚಿಕಿತ್ಸೆ ಮಾರ್ಗಗಳು- ಹೀಗೆ ಡೆಂಗ್ಯೂ ಸುತ್ತಲೇ ಸುತ್ತುತ್ತವೆ.
 
ಈ ಸಾಂಕ್ರಾಮಿಕ ಕಾಯಿಲೆಯ ಅಪಾಯವೆಂದರೆ ಅಧಿಕ ವೈದ್ಯರು, ನರ್ಸ್‌ಗಳು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಸಹ ಡೆಂಗ್ಯೂವಿನಿಂದಾಗಿ ಪರೀಕ್ಷೆಗೆ ಒಳಪಡುವ ಅಥವಾ ದಾಖಲಾಗುವ ಸ್ಥಿತಿ ಇದೆ. ಅದೃಷ್ಟವಶಾತ್ ಅವರಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ.

ಜುಲೈ, ಆಗಸ್ಟ್, ಸೆಪ್ಟೆಂಬರ್‌ಗಳನ್ನು ಡೆಂಗ್ಯೂ ತಿಂಗಳುಗಳೆಂದೇ ಪರಿಗಣಿಸಲಾಗಿದೆ. ಅದು ಸಾಮಾನ್ಯವಾಗಿ ಹರಡುವುದು ಮಳೆ ಬಂದ ಬಳಿಕ (ಅಪರೂಪದ ಸಂದರ್ಭದಲ್ಲಿ ಬೇರೆ ತಿಂಗಳಲ್ಲೂ ಹರಡಬಹುದು). ಡೆಂಗ್ಯೂ ವೈರಾಣುವಿನಿಂದ ತಗಲುವ ಕಾಯಿಲೆಯಾಗಿದ್ದು, ಇದು ಈಡೆಸ್ ಈಜಿಪ್ತಿ ಎಂಬ ಹೆಣ್ಣು ಸಂತತಿಯ ಸೊಳ್ಳೆಯಿಂದ ಹರಡುವಂತಹದ್ದು.
 
ಸೊಳ್ಳೆಯ ಕಡಿತದಿಂದ ಒಮ್ಮೆ ಮಾನವ ದೇಹದೊಳಗೆ ಪ್ರವೇಶಿಸುವ ವೈರಸ್ 2-7 ದಿನಗಳಲ್ಲಿ ಡೆಂಗ್ಯೂ ಜ್ವರಕ್ಕೆ ಕಾರಣವಾಗುತ್ತದೆ. ಇದು ಸಾಮಾನ್ಯ ವೈರಲ್ ಜ್ವರದಂತೆಯೇ ವರ್ತಿಸುತ್ತದೆ.

ರೋಗಿಯ ಕರುಳು, ವಸಡು ಮತ್ತು ಚರ್ಮದಿಂದ ರಕ್ತ ಹೊರಬರಲು ಪ್ರಾರಂಭಿಸಿದರೆ, ಇದು ಡೆಂಗ್ಯೂ ರಕ್ತಸ್ರಾವದ ಜ್ವರಕ್ಕೆ ಎಡೆಮಾಡಿಕೊಡುತ್ತದೆ. ರಕ್ತ ಮತ್ತು ದುಗ್ದರಸ (ರಕ್ತದ ನೀರಿನ ಭಾಗ) ಸ್ರಾವ ಮಗುವನ್ನು ಡೆಂಗ್ಯೂವಿನ ತೀವ್ರಮಟ್ಟಕ್ಕೆ ಕೊಂಡೊಯ್ದು ಕೊನೆಗೆ ಅದರ ಸಾವೂ ಸಂಭವಿಸುತ್ತದೆ.

ಡೆಂಗ್ಯೂ ಸೋರುವ ಲೋಮನಾಳ (ನಳಿಕೆ) ಕಾಯಿಲೆ ಎಂದು ಗುರುತಿಸಬಹುದು. ಈ ನಳಿಕೆಯಲ್ಲಿ ರಂಧ್ರಗಳಾಗಿ ರಕ್ತದಲ್ಲಿನ ನೀರಿನ ಅಂಶ ಹೊರಗೆ ಸೋರುತ್ತದೆ. ಹೀಗಾಗಿ ರಕ್ತ ದಪ್ಪಗಾಗುವುದರಿಂದ ದೇಹದ ಅಂಗಾಂಗಗಳಲ್ಲಿನ ರಕ್ತದ ಹರಿವು ತೀರಾ ದುರ್ಬಲವಾಗುತ್ತದೆ. ಇದರಿಂದ ಚಿಕಿತ್ಸೆ ಇನ್ನೂ ಕಷ್ಟಕರ.
 
ದ್ರವದ ಹರಿವನ್ನು ಸಮತೋಲಕ್ಕೆ ತರಬೇಕು ಹಾಗೂ ಅವು ಹೊರಗೆ ಸೋರಿಕೆಯಾಗಬಾರದು. ಅದು ಎಲ್ಲೆಡೆ ಹಂಚಿಕೆಯಾಗಲು ರಕ್ತನಾಳದಲ್ಲಿಯೇ ಉಳಿಯುವಂತೆ ಮಾಡಬೇಕು. ಕೆಲವೊಮ್ಮೆ ಅದು ತುಂಬಾ ಗಂಭೀರ ಸ್ವರೂಪದಲ್ಲಿ ಸೋರಿಕೆಯಾಗಿ (ನೀರಿನಂತಾಗುವ ರಕ್ತ ಶ್ವಾಸಕೋಶ ಮತ್ತು ಕಿಬ್ಬೊಟ್ಟೆಯ ಕುಳಿಯೊಳಗೆ ಸೇರಿಕೊಳ್ಳುತ್ತದೆ) ಉಸಿರಾಟಕ್ಕೆ ಅಡ್ಡಿಪಡಿಸುತ್ತದೆ.

ಡೆಂಗ್ಯೂ ವರ್ಗ (ಬಡವ-ಶ್ರೀಮಂತ), ಧರ್ಮ ಅಥವಾ ಜಾತಿಯ ಬೇಧವಿಲ್ಲದೆ ಎಲ್ಲಾ ಮನುಷ್ಯರಿಗೂ ಯಾವುದೇ ವಯಸ್ಸಿನವರಿಗೂ ತಗುಲಬಹುದಾದ ಕಾಯಿಲೆ.
 
ಆ ಹೆಣ್ಣು ಸೊಳ್ಳೆ ಶುದ್ಧನೀರು ಸಂಗ್ರಹಿತವಾದ (ಮಳೆ ನೀರು) ತೊಟ್ಟಿಗಳು, ಟೈರುಗಳು, ತೆಂಗಿನಕಾಯಿ ಚಿಪ್ಪು, ನಾಶಪಡಿಸಬಹುದಾದ ಎಸೆದ ಲೋಟಗಳು ಅಥವಾ ನೀರು ತುಂಬುವಂತಹ ಯಾವುದೇ ವಸ್ತುಗಳಿರಬಹುದು, ಎಲ್ಲದರಲ್ಲಿಯೂ ಇರುವಂತಹವಳು! ಆಕೆ ಕಡಿಯುವುದು ಹಗಲಿನ ವೇಳೆಯಲ್ಲಿ ಮಾತ್ರ.

ಬೇರೆ ಕಾಯಿಲೆಗಳಾದರೆ ನಮ್ಮನ್ನು ರಕ್ಷಿಸುತ್ತದೆ. ಆದರೆ ಡೆಂಗ್ಯೂವಾದರೆ ಅದು ಸಾಧ್ಯವಿಲ್ಲ. ಮೊದಲನೇ ದಾಳಿಯಿಂದ ಬಚಾವಾದರೂ ಎರಡನೆಯದು ನಿಮ್ಮನ್ನು ಸಾಯಿಸಬಲ್ಲದು.
 
ಇದು ನಿಮ್ಮ ನೆತ್ತಿಯ ಮೇಲೆ ಕತ್ತಿ ತೂಗುಹಾಕಿದಂತೆ. ಯಾವಾಗ ಬೇಕಾದರೂ ನಿಮ್ಮ ಮೇಲೆ ಬೀಳಬಹುದು. ಇತರ ಸಾಮಾನ್ಯ ವೈರಲ್ ಜ್ವರಗಳಂತೆ ಈ ಕಾಯಿಲೆಯನ್ನು ಪತ್ತೆಹಚ್ಚುವುದು ಸುಲಭವಲ್ಲ. ಪತ್ತೆಹಚ್ಚಿ ಅಷ್ಟಕ್ಕೆ ಚಿಕಿತ್ಸೆ ನೀಡಿದರೂ ಸಾಲದು.

ಒಮ್ಮೆ ಮಗು 2-7 ದಿನಗಳಲ್ಲಿ ಜ್ವರದಿಂದ ಚೇತರಿಸಿಕೊಂಡರೂ ಆ ಅವಧಿಯಲ್ಲಿ ಅನೇಕ ಸಮಸ್ಯೆಗಳು ಹುಟ್ಟಿಕೊಂಡಿರುತ್ತದೆ. ಜ್ವರ ಬೇರೂರಿದಂತೆ, ರಕ್ತ ಗರಣೆಗಟ್ಟುವುದರಲ್ಲಿ ಪ್ರಮುಖ ಪಾತ್ರವಹಿಸುವ ಬಿಲ್ಲೆಗಳು ಬಿದ್ದುಹೋಗಿ ದ್ರವ (ದುಗ್ದರಸ) ಸೋರಿಕೆಯಾಗುತ್ತದೆ. ಇದಾಗಿ 2-3 ದಿನಗಳ ಬಳಿಕ ಚೇತರಿಸಿಕೊಳ್ಳಲಾರಂಭಿಸುತ್ತದೆ.

ನನ್ನನ್ನು ಆಸ್ಪತ್ರೆ ಬಳಿ ಬಿಟ್ಟು ನನ್ನ ಕುಟುಂಬದವರು ಅಶ್ವಿನಿಯ ಮದುವೆಗೆ ತೆರಳಿದರು. ನಾನು ಕೂಡಲೇ ಕೆಂಪು `ಟೀ~ ಶರ್ಟಿನ ಬಾಲಕನನ್ನು ನೋಡಲು ಪಿಐಸಿಯುಗೆ ತೆರಳಿದೆ. ಆಗಲೇ ಅವರೆಲ್ಲಾ ಅಲ್ಲಿಂದ ಹೊರಡಲು ಸಿದ್ಧತೆ ನಡೆಸುತ್ತಿದ್ದರು. ಪಿಐಸಿಯುನ ಬಿ ಕ್ಯಾಬಿನ್‌ನ ಪಕ್ಕದಲ್ಲಿಯೇ ಆತನ ಹಾಸಿಗೆ ಇದ್ದದ್ದು.

ನೋಡಲು ಸುಂದರವಾಗಿದ್ದ, ಮುಗ್ಧ ಮಗು ಅದು. ಮಗುವನ್ನು ಪರೀಕ್ಷಿಸಿದ ನಾನು, ಜ್ವರ ಡೆಂಗ್ಯೂಗೆ ತಿರುಗುವ ಅಪಾಯದ ಲಕ್ಷಣಗಳು ಗೋಚರಿಸುತ್ತಿದೆ. ಇದಕ್ಕೆ ನಿರಂತರ ತಪಾಸಣೆ ಮತ್ತು ದ್ರವದ ವಿವೇಚನಾಯುತ ನಿರ್ವಹಣೆ ಅಗತ್ಯವಿದೆ ಎಂದು ಪೋಷಕರಿಗೆ ವಿವರಿಸಿದೆ.
 
ನಮ್ಮಲ್ಲಿಯೇ ಸಾಕಷ್ಟು ಉತ್ತಮ ನುರಿತ ವೈದ್ಯರಿದ್ದು, ಈ ಅವಧಿಯಲ್ಲಿ ಅನೇಕ ಡೆಂಗ್ಯೂ ರೋಗಿಗಳನ್ನು ಗುಣಪಡಿಸಿದ್ದಾರೆ ಎಂದೂ ವಿವರಿಸಿದೆ. ಒಂದು ವಾರ್ಡನ್ನು ಡೆಂಗ್ಯೂ ವಾರ್ಡ್ ಎಂದೇ ಪರಿವರ್ತಿಸಿ ಅದಕ್ಕೆ ಹೆಚ್ಚುವರಿ ಸಿಬ್ಬಂದಿ ಹಾಗೂ ತಪಾಸಣಾ ಉಪಕರಣಗಳನ್ನು ಒದಗಿಸಿದ್ದೆವು. ಹೀಗೆ ಅನೇಕ ಡೆಂಗ್ಯೂ ರೋಗಿಗಳ ಜೀವ ಉಳಿಸಿದ್ದೆವು.

ಇಷ್ಟೆಲ್ಲಾ ತಿಳಿಸಿದರೂ ತಲೆಕೆಡಿಸಿಕೊಳ್ಳದ ಆ ಮಗುವಿನ ತಾಯಿ ಭಾವಿ ವೈದ್ಯೆಯಾದ ತನ್ನ ಮಗಳು, ಮಗು ಆರೋಗ್ಯಪೂರ್ಣವಾಗಿದೆ ಎಂದು ಹೇಳಿದ್ದಾಳೆ ಎಂದು ವಾದಿಸತೊಡಗಿದರು.
 
ಏನೇ ಆದರೂ ಆಸ್ಪತ್ರೆಯಿಂದ ಮಗುವನ್ನು ಕರೆದುಕೊಂಡು ಹೋಗುವುದು ಆಕೆಯ ತೀರ್ಮಾನವಾಗಿತ್ತು. ಅಲ್ಲಿನ ಅನೇಕ ಬಡ ರೋಗಿಗಳ (ಆಕೆಯ ಪ್ರಕಾರ ತುಂಬಾ ಕೊಳಕು ಜನರು) ನಡುವೆ ಇರುವುದು ಆಕೆಗೆ ಇಷ್ಟವಿರಲಿಲ್ಲ. ಎಲ್ಲಾ ಬಗೆಯ ಸಲಹೆಗಳನ್ನು ನೀಡಿದರೂ ಆಕೆ ಅಲ್ಲಿರಲು ಒಪ್ಪಲಿಲ್ಲ.
 
ಮುಂದಿನ ಮೂರು ದಿನದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಮಗುವಿನ ಮುಂಜಿ ಕಾರ್ಯಕ್ರಮವನ್ನು ನಡೆಸುವುದು ಆಕೆಯ ಬಯಕೆಯಾಗಿತ್ತು. ನನ್ನ ಎಂಬಿಬಿಎಸ್ ವಿದ್ಯಾರ್ಥಿನಿಯೂ ತನ್ನ ತಂದೆಯ ಜೊತೆಗೆ ಮುಂಜಿ ಸಮಾರಂಭವನ್ನು ಅಣಿಗೊಳಿಸುವ ಕೆಲಸದಲ್ಲಿ ಮಗ್ನಳಾಗಿದ್ದಳು. ಹೀಗಾಗಿ ಆಕೆಯೂ ಅಲ್ಲಿ ಇರಲಿಲ್ಲ. ಕೊನೆಗೆ ತಾಯಿ ವೈದ್ಯಕೀಯ ಸಲಹಾ ಪತ್ರಕ್ಕೆ ವಿರುದ್ಧವಾಗಿ ಡಿಸ್‌ಚಾರ್ಜ್‌ಗೆ ಸಹಿ ಹಾಕಿ ನಿಷ್ಠುರವಾಗಿ ಹೊರಗೆ ನಡೆದುಬಿಟ್ಟರು.

ಎರಡು ದಿನಗಳ ಬಳಿಕ ಆ ಮಗುವನ್ನು ಕಾರ್ಪೊರೇಟ್ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. 48 ಗಂಟೆಯೊಳಗೇ ಮಗು ಅಸುನೀಗಿತು ಎಂದು ಡಾ. ಭಾರತಿ ತಿಳಿಸಿದರು.

ಇಂದಿಗೂ ಡಾ. ಭಾರತಿ ನನ್ನನ್ನು ಭೇಟಿಯಾದಾಗ ಆ ಕೆಂಪು ಟೀ ಶರ್ಟಿನ ಹುಡುಗನ ಬಗ್ಗೆ ಮಾತನಾಡುತ್ತೇವೆ. ಆತನ `ಮುಂಜಿ ಸಮಾರಂಭ~ ಕೊನೆಗೆ `ಸಾವಿನ ಸಮಾರಂಭ~ವಾಗಿ ಬದಲಾಗಿತ್ತು.

ಈ ಕಠಿಣ ಮನೋಭಾವದ ತಾಯಿಯನ್ನು ನಾನು ಹೇಗೆ ತಾನೆ ಮನವೊಲಿಸಲು ಸಾಧ್ಯ? ಆ ಮಗುವನ್ನು ನಮ್ಮಲ್ಲಿಯೇ ಉಳಿಸಿದ್ದರೆ ಆತ ಬದುಕುಳಿಯುತ್ತಿದ್ದನೆ? ಸಾವಿನಲ್ಲಿ ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ.

ಡೆಂಗ್ಯೂ ಕಾಯಿಲೆ ಬಂದು ಹೋಗುವಂತಹದ್ದು!
ಪ್ರಿಯ ಓದುಗರೆ, ಆ ಮಗು `ಆ ಕಾಯಿಲೆಯಿಂದ~ ಸತ್ತುಹೋದರೆ, ನಮ್ಮ ಮಗುವಿಗೇನೂ ಆಗುವುದಿಲ್ಲ- ಇಂತಹ `ಅವೇದನೀಯ ಕಲ್ಪನೆ~ಗಳಿಂದ ಎಚ್ಚರಗೊಳ್ಳಿ.

ನಮ್ಮ ಮತ್ತು ಸಮುದಾಯದ ಆರೋಗ್ಯದ ವಿಚಾರದಲ್ಲಿ ನಾವೆಲ್ಲರೂ ಸಮಾನ ಹೊಣೆಗಾರರು. ಡೆಂಗ್ಯೂ ಎಷ್ಟು ಅಪಾಯಕಾರಿ ಕಾಯಿಲೆಯೆಂದರೆ, ನಮ್ಮ ಮನೆ ಸುತ್ತಮುತ್ತ ಶುಚಿಯಾಗಿದೆಯೆಂದು ಅಂದುಕೊಂಡರೂ, ನೆರೆಮನೆಯಲ್ಲಿನ ಅಶುದ್ಧತೆ ನಮ್ಮನ್ನು ಕಾಯಿಲೆ ಬೀಳಿಸಬಹುದು ಅಥವಾ ಸಾವಿನಂಚಿಗೂ ತಳ್ಳಬಹುದು.

ನಮ್ಮ ಬಾಹ್ಯ ಆರೋಗ್ಯಕ್ಕಾಗಿ ನಾವೆಲ್ಲರೂ ವೈಯಕ್ತಿಕ ಮತ್ತು ಸಾಮೂಹಿಕವಾಗಿ ನಮ್ಮ ಪರಿಸರವನ್ನು ಶುಚಿಯಾಗಿಡಲು ಕಠಿಣ ಶ್ರಮಪಡಬೇಕು. ಕೆಲವು ವರ್ಷಗಳ ಹಿಂದೆ ನಾವು ಡೆಂಗ್ಯೂ ಬಗ್ಗೆ ಕೇಳಿಯೇ ಇರಲಿಲ್ಲ.
 
ಈಗ ಈ ವೈರಸ್‌ನ ಸಂಕೀರ್ಣತೆ ಅರಿವಾಗಿದೆ. ನಮ್ಮ ನಸು ನಿದ್ದೆಯನ್ನು ಕಿತ್ತುಕೊಂಡಿದೆ. ಹೇಗೆ ಈ ಅಮಾಯಕ ಮಕ್ಕಳು ಮತ್ತು ವಯಸ್ಕರು ಡೆಂಗ್ಯೂ ಹತ್ಯಾಕಾಂಡದ ಬಲಿಗಳಾಗುತ್ತಿದ್ದಾರೆ ನೋಡಿ.

ನಿಮ್ಮ ನೆರೆಹೊರೆಯ ಸುತ್ತಮುತ್ತ ಒಮ್ಮೆ ಸುತ್ತಾಡಿ, ಹೇಗೆ ನೀವು ವಿವೇಚನೆಯಿಲ್ಲದೆ ನೀರು ಸಂಗ್ರಹವಾಗುವಲ್ಲಿ, ಸೊಳ್ಳೆಗಳು ಉತ್ಪತ್ತಿಯಾಗುವಲ್ಲಿ ಹಾಗೂ ಕಾಯಿಲೆ ಹರಡುವಲ್ಲಿ ನೆರವಾಗಿದ್ದೀರಿ ಎಂಬುದು ತಿಳಿಯುತ್ತದೆ.

ಸ್ವಾಮಿ ವಿವೇಕಾನಂದರು ಹೇಳಿದ ಮಾತೊಂದು ನನ್ನ ಅಚ್ಚುಮೆಚ್ಚಿನ ಮಾತುಗಳಲ್ಲೊಂದು. ತಮ್ಮ ಸಂದೇಶವನ್ನು ಸಾರಲು ಕಳುಹಿಸಿದ್ದ ವಿದ್ಯಾರ್ಥಿ ಮರಳಿ ಬರುವಾಗ ಆತನಲ್ಲಿ ಅನೇಕ ದೂರುಗಳಿದ್ದವು. ಆಗ ಆತನಿಗೆ ಗುರು ಹೇಳಿದ್ದು- “ನಾನು ಹೇಳಿದ್ದು ನಿನ್ನ ಕಾಲುಗಳನ್ನು ರಕ್ಷಿಸಿಕೊಳ್ಳಲು ಚಪ್ಪಲಿ ಧರಿಸಲು, ಇಡೀ ವಿಶ್ವಕ್ಕೆ ಕಂಬಳಿ ಹಾಸುವ ಅಸಾಧ್ಯದ ಚಮತ್ಕಾರವನ್ನಲ್ಲ.”

ಆದರೆ ಡೆಂಗ್ಯೂ ವಿಚಾರದಲ್ಲಿ ನಮ್ಮ ಕಾಲುಗಳ ರಕ್ಷಣೆ ಕಾಯಿಲೆ ಹರಡುವುದನ್ನು ತಡೆಯಲಾರದು. ನಮಗೆ ಕಂಬಳಿಯ ಅಗತ್ಯವಿದೆ ಅಥವಾ ನಮ್ಮ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಗೊಳಿಸಲೇಬೇಕು.

ಕಿಬ್ಬೊಟ್ಟೆ ನೋವು ಅಥವಾ ಹೊಟ್ಟೆ ಸ್ಪರ್ಶಿಸಿದಾಗ ನೋವು, ಪದೇಪದೇ ವಾಂತಿ, ದೇಹದ ಕುಳಿಗಳಲ್ಲಿ (ಶ್ವಾಸಕೋಶ, ಹೊಟ್ಟೆ) ದ್ರವ (ನೀರು) ಸಂಗ್ರಹಗೊಳ್ಳುವುದು, ಕರುಳಿನ ಒಳಚರ್ಮದ ಲೋಳೆಗಳಿಂದ, ಚರ್ಮ ಅಥವಾ ವಸಡಿನಿಂದ ರಕ್ತಸ್ರಾವ, ನಿರುತ್ಸಾಹ, ಯಕೃತ್ತಿನ ಹಿಗ್ಗುವಿಕೆಯಿಂದ ವಿಶ್ರಾಂತಿಹೀನತೆ, ಇವೆಲ್ಲಾ ಡೆಂಗ್ಯೂವಿನ ಪ್ರಮುಖ ಲಕ್ಷಣಗಳು. ಕೆಂಪು ಟೀ ಶರ್ಟಿನ ಮಗುವನ್ನು ಮರೆಯಲು ನನಗೆ ಸಾಧ್ಯವಾಗಿಲ್ಲ. ಆತನ ಸಾವು ನನ್ನನ್ನು ಇನ್ನೂ ಕಾಡುತ್ತಿದೆ.

ಕಳೆದ ಅಂಕಣದಲ್ಲಿ ತಿಳಿಸಿದ್ದ ಕೋಟೇಶ್ವರಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರೋಜಾ ಮತ್ತು ಮೋನಿಕಾ ಲಂಡನ್‌ಗೆ ವಾಪಸಾಗಿದ್ದಾರೆ. ಆಕೆಯೀಗ ಭಾರತದ ಮುಂದಿನ ಭೇಟಿಗಾಗಿ (10 ವರ್ಷ!?) ಕಾದು ಕುಳಿತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT