ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನೆ ಪದರದವರು ಹಾಗೂ ಹಾಲಿನ ಬಳಕೆದಾರರು

Last Updated 2 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬಡವರಿಗೆ ಉದ್ಯಮಶೀಲತೆ ಕಲಿಸುವ ಪ್ರಯತ್ನ ಆರಂಭಿಸಬೇಕಿದೆ...

ಹಾಲು ಕಾಯಿಸಿದಾಗ ಅದರ ಸತ್ವ ನಿಧಾನವಾಗಿ ಮೇಲೇರಿ ಬರುತ್ತದೆ. ಬಂದು ಮೇಲ್ಪದರದಲ್ಲಿ ಕೆನೆ ಕಟ್ಟಿ ನಿಲ್ಲುತ್ತದೆ. ಹಾಲು ಮಾತ್ರ ತೆಳುವಾಗಿ ಕೆಳಗೆ ಉಳಿಯುತ್ತದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಆರಂಭಿಸಿದ ಸಾಮಾಜಿಕ ನ್ಯಾಯದ ಚಳವಳಿಯಲ್ಲಿಯೂ ಹೀಗೆಯೇ ಆಯಿತು. ಚಳವಳಿಯೆಂಬ ಬಿಸಿಯಿಂದ ದಲಿತ ಸಮುದಾಯವೆಂಬ ಹಾಲನ್ನು ಬಾಬಾಸಾಹೇಬರು ಕಾಯಿಸಿದಾಗ ಅದು ಇಡಿಯಾಗಿ ಮೇಲೆ ಬರಲಿಲ್ಲ. ಕಾನೂನಿನ ಬಲ, ಪ್ರತಿಭೆಯ ಬೆಂಬಲ, ಒಂದಿಷ್ಟು ಶಿಸ್ತು ಇದ್ದ ದಲಿತ ಜನಾಂಗದ ಕೆಲವರು ಮೇಲೇರಿ ಬಂದರು, ಬಂದು ಕೆನೆ ಕಟ್ಟಿ ನಿಂದರು. ಮಿಕ್ಕವರು, ಮತ್ತಷ್ಟು ತೆಳುವಾಗಿ ಕೆಳಗುಳಿದರು. ಇಂದು ದಲಿತ ಜನಾಂಗದ ಸುಲಭಜೀವಿಗಳನ್ನು ಕೆನೆಪದರದವರು ಎಂದು ಕರೆಯುವುದು ಈ ಕಾರಣಕ್ಕಾಗಿ.

ಮೇಲೆ ಬಂದ ಮೇಲೂ ಸಮಸ್ಯೆಗಳಿವೆ ಕೆನೆಪದರದವರಿಗೆ. ಮಧ್ಯಮ ವರ್ಗಕ್ಕೆ ಸೇರಿದ ನಮ್ಮ ನಿಮ್ಮಂತಹವರಿಗೆ ಇರುವ ಸಮಸ್ಯೆಗಳೆಲ್ಲ ಅವರಿಗೂ ಇವೆ. ನಮ್ಮ ನಿಮ್ಮವರಿಗಿಂತ ಜಾಸ್ತಿ ಇವೆ. ಹಾಲಿನ ರೂಪಕವನ್ನೇ ಮುಂದುವರೆಸಿ ಹೇಳುವುದಾದರೆ, ಅವರು ಮೇಲೇರಬೇಕೆಂದರೆ, ಕೆನೆಯು ಖೋವಾ ಆಗಬೇಕು, ಖೋವಾ ಪೇಡಾ ಆಗಬೇಕು... ಇತ್ಯಾದಿ. ಅರ್ಥಾತ್ ತಮ್ಮ ಸಾಮಾಜಿಕ ಪರಿಸ್ಥಿತಿಯಿಂದಾಗಿ ಅವರಿಗೆ ಮುಂದೆ ನುಗ್ಗುವುದು ಕಷ್ಟವಾಗುತ್ತಿದೆ. ಆದರೆ ಮಾತು ಕಲಿತ ದಲಿತರಿವರು, ಕಲಿತ ಮಾತುಗಳನ್ನು ಗಟ್ಟಿಸಿ ಆಡಬಲ್ಲವರು, ಆಡುತ್ತಿದ್ದಾರೆ. ಇವರ ಗಟ್ಟಿಸಿದ ಮಾತುಗಳಿಂದಾಗಿ, ಕೆಳಗುಳಿದಿರುವ ಬಡವರು ಕೆಲವೊಮ್ಮೆ ಕೆಟ್ಟ ಹೆಸರು ಪಡೆಯುತ್ತಿದ್ದಾರೆ, ಇರಲಿ.

ಇಂದಿನ ಸಮಾಜವಾದರೋ, ಮೂಲತಃ ಅವಸರ ಪ್ರವೃತ್ತಿಯದಾದ್ದರಿಂದ ಗಟ್ಟಿಸಿ ಹೇಳಿದ ಮಾತನ್ನಷ್ಟೇ ಕೇಳಿಸಿಕೊಳ್ಳುತ್ತದೆ. ಬಡವರ ಮಾತು ಕೇಳಿಸದೆ ಉಳಿಯುತ್ತದೆ. ಬಡವರು, ಹಳೆಯ ಹಾಲಿನಂತೆ ಕೊಳೆಯಹತ್ತಿದ್ದಾರೆ. ಇದು ಇಂದಿನ ಪರಿಸ್ಥಿತಿ.

ಕೆನೆಪದರದವರಿಗೂ ಇತರೆ ಮೇಲ್ವರ್ಗಗಳಿಗೂ ನಡುವೆ ಗಟ್ಟಿಸಿ ಹೇಳುವ ಸ್ಪರ್ಧೆ ನಡೆದಿದೆ. ‘ನಿಮ್ಮಿಂದಾಗಿ ಹುಳಿಯಾಗುತ್ತಿದೆ ಹಾಲು’ ಎಂದು ಇತರರು ಕೆನೆಪದರದವರನ್ನು ದೂರಿದರೆ, ‘ನಿಮ್ಮ ಅಸಡ್ಡೆಯಿಂದಾಗಿ ಹಿಂದೆಯೂ ಹುಳಿತಿತ್ತು ಈಗಲೂ ಹುಳಿಯುತ್ತಿದೆ, ಹಾಲು’ ಎಂದು ಪ್ರತಿಮಾತನಾಡುತ್ತಿದ್ದಾರೆ ಕೆನೆಪದರದವರು. ಇಬ್ಬರಿಗೂ ಮೇಲೇರುವ ಚಿಂತೆ, ಸೀಮಿತ ಅವಕಾಶಗಳ ಚಿಂತೆ.

ಕೆನೆಪದರದವರ ವಿಚಾರ ಹೀಗಿದೆ: ಕೆನೆ, ಹಾಲಿನ ಜಾತಿ ತಾನೆ? ಹುಳಿಯಾಗುವ ಅನುಭವವಿದೆ ತಾನೆ ಅದಕ್ಕೆ? ಇತರರು ಹಾಲಿನ ಬಳಕೆದಾರರು ಮಾತ್ರ ತಾನೆ? ಹಾಗಾಗಿ ತಾನೇ ವಾರಸುದಾರ ಕೆಳಗುಳಿದ ಹಾಲಿಗೆ. ವಾರಸುದಾರ ಯಾರಾದರೇನಂತೆ ಕೆಳಗಿರುವವರು ಕೆಳಗೇ ಇದ್ದಾರೆ.

ಈ ಜಗಳ ನನಗೆ ನೆನಪಾದದ್ದಕ್ಕೆ ಕಾರಣವಿದೆ. ಕರ್ನಾಟಕದ ಹೆಸರಾಂತ ಬುದ್ಧಿಜೀವಿಯೊಬ್ಬರು ಇತ್ತೀಚೆಗೆ, ಅಂಬೇಡ್ಕರ್ ಬಗ್ಗೆ ಕರ್ನಾಟಕ ಸರ್ಕಾರ ಆಯೋಜಿಸಿದ್ದ ರಾಷ್ಟ್ರೀಯ ಸಮಾವೇಶದಲ್ಲಿ, ‘ದಲಿತರೂ ಏಕೆ ಅಂಬಾನಿ, ಅದಾನಿ ಆಗಬಾರದು?’ ಎಂದು ಗಟ್ಟಿಸಿ ಪ್ರಶ್ನೆ ಮಾಡಿದ್ದಾರೆ. ಹಾಗೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ಅಪಾಯಕಾರಿ ಹೇಳಿಕೆ.

ನಮಗೆಲ್ಲ ತಿಳಿದಿದೆ, ಅನುಭವವೂ ಆಗಿದೆ. ಎಲ್ಲ ಬಡವರೂ ಅಂಬಾನಿ, ಅದಾನಿ ಆಗಲಾರರು. ಅಂಬಾನಿ, ಅದಾನಿಯೂ ಸೇರಿದಂತೆ ನಾವೆಲ್ಲರೂ ಸರಳ ಜೀವಿಗಳಾಗಬಹುದು. ಅದು ಮಾತ್ರವೇ ಸಾಮಾಜಿಕ ನ್ಯಾಯದ ಸಮಸ್ಯೆಗೆ ಶಾಶ್ವತ ಪರಿಹಾರವಾಗಬಲ್ಲದು.

ಶ್ರೀಯುತರ ಪ್ರಶ್ನೆ ಅಪಾಯಕಾರಿ ಏಕೆಂದರೆ, ಅದು ಬಡವರನ್ನು ಉದ್ದೇಶಿಸಿಲ್ಲ ಅಥವಾ ತನ್ನನ್ನೇ ತಾನು ಕೇಳಿಕೊಂಡ ಆತ್ಮಾವಲೋಕನವೂ ಅಲ್ಲ . ಸರ್ಕಾರವನ್ನು ಕೇಳಿರುವ ಪ್ರಶ್ನೆಯದು. ನಮಗೆಲ್ಲ ತಿಳಿದಿದೆ, ಅನುಭವವೂ ಆಗಿದೆ. ದಲಿತರನ್ನು ಅಂಬಾನಿ, ಅದಾನಿಗಳನ್ನಾಗಿಸುವ ಪ್ರಯತ್ನದಲ್ಲಿ ಸರ್ಕಾರಗಳು ಈಗಾಗಲೇ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ಆಗಿದೆ. ಆ ಹಣದ ಹೆಚ್ಚಿನ ಭಾಗ ಭ್ರಷ್ಟರ ಪಾಲಾಗಿದೆ. ಮಾತ್ರವಲ್ಲ, ಸರ್ಕಾರದ ಪ್ರಯತ್ನದಿಂದಾಗಿ ಅಂಬಾನಿ, ಅದಾನಿಗಳು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಬಡವರು ಶ್ರೀಮಂತರಾಗಲಿಲ್ಲ. ಸರ್ಕಾರಗಳು ಪ್ರತಿವರ್ಷ ಬಿಡುಗಡೆ ಮಾಡುವ ಅಧಿಕೃತ ಅಂಕಿಅಂಶಗಳೇ ಈ ಮಾತನ್ನು ದೃಢೀಕರಿಸುತ್ತವೆ.

ಕೇವಲ ಸರ್ಕಾರಗಳ ಪ್ರಯತ್ನದಿಂದ ಬಡವ ಶ್ರೀಮಂತನಾಗಲಾರ. ಬುದ್ಧಜೀವಿಗಳೇ ಒಂದೊಮ್ಮೆ ಸರ್ಕಾರ ರಚಿಸಿದರೂ ಬಡವ ಶ್ರೀಮಂತನಾಗಲಾರ. ಏಕೆಂದರೆ ಸಮಸ್ಯೆ ಶ್ರೀಮಂತಿಕೆಯದ್ದಲ್ಲ, ಉದ್ಯಮಶೀಲತೆಯದ್ದು. ಉದ್ಯಮಶೀಲತೆಯಿಂದ ವಂಚಿತರಾಗಿದ್ದಾರೆ ಬಡವರು. ಶತಶತಮಾನಗಳಿಂದ ಕೂಲಿ ಮಾಡುವ ಕಸುಬಿಗೆ ಬಂಧಿತರಾದವರು ಅವರು.

ಶ್ರೀಯುತರ ಮಾತು ಕೆನೆಪದರದವರಿಗೆ ಆಪ್ಯಾಯ ಮಾನವಾಗಬಲ್ಲದು. ಶ್ರೀಯುತರು ಒಂದೊಮ್ಮೆ ಬಡವರ ಬಗ್ಗೆ ಚಿಂತಿತರಾಗಿದ್ದರೆ ಉದ್ಯಮಶೀಲತೆಯ ಬಗ್ಗೆ ಮಾತನಾಡಿರುತ್ತಿದ್ದರು, ಬಡವರಲ್ಲಿ ಉದ್ಯಮಶೀಲತೆಯನ್ನು ಬೆಳಸುವ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಮಾತನಾಡಿರುತ್ತಿದ್ದರು ಅಥವಾ ಬಡವರ ಸೃಜನಶೀಲತೆಯನ್ನು ಮೀಟುವಲ್ಲಿ ಸೋತಿರುವ ಇಂದಿನ ಶಿಕ್ಷಣ ಪದ್ಧತಿಯ ಬಗ್ಗೆ ಮಾತನಾಡಿರುತ್ತಿದ್ದರು. ನನಗೆ ನೆನಪಿರುವಂತೆ ಲೇಖಕ ದೇವನೂರ ಮಹಾದೇವ ಒಮ್ಮೆ ಈ ಮಾತನ್ನಾಡಿದ್ದರು. ‘ಮೀಸಲಾತಿ ನೀಡದಿದ್ದರೂ ಚಿಂತೆಯಿಲ್ಲ, ಅಂಬಾನಿ– ಅದಾನಿಗಳಿಗೆ ನೀಡುತ್ತಿರುವಷ್ಟೇ ಗುಣಮಟ್ಟದ ಶಿಕ್ಷಣವನ್ನು ನೀಡಿ ನಮಗೆ ಸಾಕು’ ಎಂದಿದ್ದರು.

ದಲಿತರ ಪ್ರಾತಿನಿಧ್ಯದಲ್ಲಿ ಅಸಮತೋಲನ ಇರುವುದು ವಿಧಾನಸೌಧದಲ್ಲಿ ಅಲ್ಲ. ಮಹಿಳೆಯರನ್ನು ಬಿಟ್ಟರೆ ಮಿಕ್ಕಂತೆ ವಿಧಾನಸೌಧ ಪ್ರಾತಿನಿಧಿಕವಾಗಿಯೇ ಇದೆ. ಅಸಮತೋಲನ ನಿಜವಾಗಿ ಇರುವುದು ಐ.ಐ.ಎಂ.ಗಳಲ್ಲಿ. ಅರ್ಥಾತ್, ಉದ್ಯಮಶೀಲತೆಯನ್ನು ಕಲಿಸುವ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ. ಮೇಲ್‌ಸ್ತರದ ಪ್ರೊಫೆಸರುಗಳ ನಡುವೆ. ಅಲ್ಲಿ, ಇತರೆಯವರ ಸಂಖ್ಯೆ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ ಇದೆಯಂತೆ.

ಅಂಬಾನಿ ಹಾಗೂ ಅದಾನಿ ಹೇಗೆ ಶ್ರೀಮಂತರಾದರೋ ನನಗೆ ತಿಳಿಯದು. ಆದರೆ, ಕಣ್‌ಕಟ್ಟು ಹಾಗೂ ಕೈಚಳಕಗಳ ಮೂಲಕ ಶ್ರೀಮಂತರಾದ ಕಳ್ಳರು ಈ ದೇಶದಲ್ಲಿ ಬಹಳಷ್ಟು ಮಂದಿ ಇದ್ದಾರೆ. ಅಂತಹ ಶ್ರೀಮಂತರು ಬಡವರ ಆದರ್ಶವಾಗಬೇಕಿಲ್ಲ. ಬಡವರು ಇನ್ನಷ್ಟು ದಿನ ಬಡವರಾಗಿ ಉಳಿದರೂ ಪರವಾಗಿಲ್ಲ, ಕಳ್ಳರಾಗದಿರಲಿ.

ನಮಗೆ, ಕೆನೆಪದರ ಈಗೀಗ ಅರ್ಥವಾಗತೊಡಗಿದೆ. ಕೆಳಪದರ ಈಗಲೂ ಅರ್ಥವಾಗುತ್ತಿಲ್ಲ. ಅದು ಅರ್ಥವಾಗಬೇಕೆಂದರೆ, ನಾವು ಬುದ್ಧಿಜೀವಿಗಳು, ಹಳ್ಳಿಗಳಿಗೆ ಅಥವಾ ನಗರಗಳ ಸ್ಲಮ್ಮುಗಳಿಗೆ ಹೋಗಬೇಕು. ಬಡವರಿಗೆ ಉದ್ಯಮಶೀಲತೆ ಕಲಿಸುವ ಪ್ರಯತ್ನ ಆರಂಭಿಸಬೇಕು. ಸುಲಭವಲ್ಲ ಅದು. ನಿಮ್ಮ ತಾಳ್ಮೆಯ ಪರೀಕ್ಷೆ ಮಾಡುತ್ತಾರೆ ಬಡವರು.

ಎರಡನೆಯದಾಗಿ, ಹಳ್ಳಿಗಳು ನಗರಗಳಲ್ಲ. ಹಳ್ಳಿಗಳ ಶ್ರೀಮಂತನೂ ಬಡವನೇ ಸರಿ. ಪೇಟೆಯ ಸಂಬಂಧ ಹೊಂದಿರದ ಜಮೀನುದಾರ, ಅದೆಷ್ಟೇ ಭೂಮಿಕಾಣಿ ಹೊಂದಿರಲಿ, ಪೇಟೆಯ ಹೋಲಿಕೆಯಲ್ಲಿ ಬಡವನೇ ಸರಿ. ಅನೇಕರಿಗೆ ಇಪ್ಪತ್ತು ಎಕರೆ ಭೂಮಿ ಇರುತ್ತದೆ, ಕೊಟ್ಟಿಗೆ ಇರುತ್ತದೆ, ಕೊಟ್ಟಿಗೆಯ ತುಂಬ ದನಕರುಗಳಿರುತ್ತವೆ, ದನಗಳ ಕೆಚ್ಚಲಿನಲ್ಲಿ ಹಾಲಿರುತ್ತದೆ. ಹಿತ್ತಲ ತುಂಬ ತರಕಾರಿ ಮಡಿಗಳಿರುತ್ತವೆ. ಕೋಳಿ ಕುರಿಗಳು ಆಡುತ್ತಿರುತ್ತವೆ, ಮಕ್ಕಳು ಮರಿ ಆಡುತ್ತಿರುತ್ತವೆ. ಎಲ್ಲ ಇರುತ್ತದೆ. ಆದರೆ ಕ್ಯಾಷ್ ಇರುವುದಿಲ್ಲ.

ಕ್ಯಾಷಿರದ ವ್ಯವಸ್ಥೆ ಹಳ್ಳಿ. ಕ್ಯಾಷಿರದ ವ್ಯವಸ್ಥೆ ಕೆಟ್ಟದ್ದೇನಲ್ಲ ಎಂದು ನಾವು, ಬಡವರ ಉದ್ಧಾರ ಬಯಸುತ್ತಿರುವವರು ಅರಿಯಬೇಕು. ಕ್ಯಾಷಿರದ ವ್ಯವಸ್ಥೆ ಅಸಮಾನ ವ್ಯವಸ್ಥೆಯಾಗಿತ್ತು ನಿಜ. ಆದರೆ ಸುಸ್ಥಿರ ವ್ಯವಸ್ಥೆಯಾಗಿತ್ತು. ಕ್ಯಾಷಿರದ ವ್ಯವಸ್ಥೆಯೊಳಗೆ ಸಮಪಾಲು ಸಿಗಬೇಕು ಬಡವನಿಗೆ.

ದಲಿತರನ್ನೂ ಅಂಬಾನಿ, ಅದಾನಿ ಮಾಡುವ ಪ್ರಯತ್ನದಲ್ಲಿ ನಾವು, ಬಡವನಾಗಿದ್ದವನನ್ನು ಸಾಲಗಾರ ಬಡವನನ್ನಾಗಿಸುತ್ತೇವೆ. ಸಾಲಗಾರ ಬಡವನನ್ನು ಗುಳೆಎದ್ದ ನಿರ್ಗತಿಕನನ್ನಾಗಿಸುತ್ತೇವೆ. ಗುಳೆಎದ್ದ ನಿರ್ಗತಿಕನ ಕೈಯಲ್ಲಿ ಲಾಂಗು– ಮಚ್ಚು ಹಿಡಿಸುತ್ತೇವೆ. ಕೋಟಿ ಕೋಟಿ ಬಡವರು ಹೀಗೆ ಲಾಂಗು– ಮಚ್ಚು ಹಿಡಿದು, ಬಾಟಲಿಯಿಂದ ಸಾರಾಯಿ ಕುಡಿದು, ಸಿರಿಂಜಿನಿಂದ ಮಾದಕತೆ ಚುಚ್ಚಿಕೊಂಡು, ಬಡಿದಾಡಿ ಸತ್ತರೆ, ಸತ್ತವರ ನಡುವಿನಿಂದ ಒಬ್ಬ ಅಂಬಾನಿ ಫೀನಿಕ್ಸಿನಂತೆ ಮೇಲೆದ್ದು ಬಂದರೆ, ಅದು ಸಾಮಾಜಿಕ ನ್ಯಾಯವೇ? ಇಲ್ಲ. ಎಲ್ಲ ಬಡವರೂ ಶ್ರೀಮಂತರಾಗಬೇಕಿಲ್ಲ.

ಹಳ್ಳಿಯಿಂದಾಚೆ ಹಾರಿದ ಕೆನೆಪದರದ ದಲಿತರ ಚಿಂತೆ ಬಿಡಿ. ದಾಟಿಯಾಗಿದೆ ಅವರು. ದಾಟಬೇಕಾದವರು ಬಹುಸಂಖ್ಯಾತರು, ಇನ್ನೂ ಇದ್ದಾರೆ ಹಳ್ಳಿಗಳಲ್ಲಿ. ಉದ್ಯಮಶೀಲತೆಯ ತರಬೇತಿ, ಬಡವರಿರುವಲ್ಲಿಯೇ, ಬಡತನದ ಪರಿಸರದಲ್ಲಿಯೇ, ಬಡತನವನ್ನು ಗೌರವಿಸುವ ಮೂಲಕವೇ ನಡೆಯಬೇಕು ಎಂದದ್ದು ಈ ಕಾರಣಕ್ಕಾಗಿ. ಜೆ.ಸಿ. ಕುಮಾರಪ್ಪ ಈ ಕೆಲಸ ಮಾಡಿದ್ದರು. ಉದ್ಯಮಶೀಲತೆಯ ತರಬೇತಿಯನ್ನವರು ರಚನಾತ್ಮಕ ಕಾರ್ಯಕ್ರಮವೆಂದು ತಿಳಿದು ಮಾಡಿದರು. ತರಬೇತುದಾರನ ಮೇಲೆ ಸರಳ ಬದುಕಿನ ಶಿಸ್ತನ್ನು ಕಡ್ಡಾಯವಾಗಿ ವಿಧಿಸಿದ್ದರು. ಹವಾನಿಯಂತ್ರಿತ ವಿಶ್ವವಿದ್ಯಾಲಯಗಳು, ಹವಾನಿಯಂತ್ರಿತ ಪ್ರೊಫೆಸರುಗಳು ಹಾಗೂ ಬಡವರು ಪ್ರವೇಶಿಸಲೇ ಸಾಧ್ಯವಿರದ ವಿಧಾನಸೌಧಗಳು ಮಾಡಲಾರವು ಈ ಕೆಲಸವನ್ನು. ಬಡವರ ಕೈಕಾಲು ಕೆಡಿಸಿಬಿಡುತ್ತವೆ ಅವು.

ಒಂದು ಕಥೆಯಿದೆ. ಅಂಬಾನಿ ಎಂಬ ಹೆಸರಿನ ಒಬ್ಬ ಹುಡುಗ, ರಸ್ತೆ ಬದಿಯಲ್ಲಿ ಬೋಂಡಾ ಕರಿಯುತ್ತಲೇ ಶ್ರೀಮಂತನಾದನಂತೆ. ಮೆಚ್ಚತಕ್ಕ ಸಂಗತಿ. ಆದರೆ ಉದ್ಯಮಶೀಲತೆಯೆಂದರೆ ಕಥೆಯಲ್ಲ. ಅಂಬಾನಿಗಳ ಹೆಸರಿನಲ್ಲಿ ಅಳವಡಿಸಲಾಗಿರುವ ದುಬಾರಿ ವ್ಯವಸ್ಥೆಗಳು ಅಗತ್ಯವಿಲ್ಲ ಉದ್ಯಮಶೀಲತೆಗೆ. ಖಾಸಗಿ ಆಸ್ತಿ, ಕಟ್‌ತ್ರೋಟ್ ಕಾಂಪಿಟಿಷನ್, ಕಿಕ್‌ಬ್ಯಾಕ್ ಯಾವುದೂ ಅಗತ್ಯವಿಲ್ಲ ಉದ್ಯಮಶೀಲತೆಗೆ. ಅಗತ್ಯವಿರುವುದು ಸಹಕಾರ ಮನೋಭಾವ ಮಾತ್ರ.

ಸಹಕರಿಸಿ ಬಾಳುವುದು ಬಡವರಿಗೆ ಈಗಾಗಲೇ ಗೊತ್ತಿದೆ. ಅವರಿಗೆ ಅನಿವಾರ್ಯ ಅದು. ಅನಿವಾರ್ಯವಾಗಿ ಅವರಲ್ಲಿರುವ ಸಹಕಾರ ಮನೋಭಾವವನ್ನು ಸಂಘಟಿಸಬೇಕು ನಾವು. ಅಂಬಾನಿ, ಅದಾನಿಗಳ ಖಾಸಗಿ ಉದ್ಯಮಶೀಲತೆಯು ಸಹಕಾರವನ್ನು ಕೊಲ್ಲುತ್ತದೆ. ಗುಲಾಮ ವ್ಯವಸ್ಥೆಯ ಮುಂದುವರೆದ ರೂಪು ಅದು.

ಬಡವರಲ್ಲಿಯೂ ಊನವಿದೆ. ಅದು ಅವರ ಹಿಂಜರಿಕೆ. ಶತಶತಮಾನಗಳಿಂದ ಗಟ್ಟಿಗೊಂಡಿರುವ ಹಿಂಜರಿಕೆಯದು. ಕರಗಿಸುವುದು ಸುಲಭವಲ್ಲ. ವಿಚಿತ್ರ ನೋಡಿ! ಮೊಬೈಲು ಕರಗಿಸಿತು ಮೊದಲ ಬಾರಿಗೆ, ಬಡವರ ಹಿಂಜರಿಕೆಯನ್ನು. ಬಡವರೆಲ್ಲ ಹರಟುತ್ತಿದ್ದಾರೆ ತಮ್ಮ ಗ್ರಾಮ್ಯಭಾಷೆಗಳಲ್ಲಿ ಮೊದಲ ಬಾರಿಗೆ. ಆದರೆ ಮೊಬೈಲು ಸಹ ಕರಗಿಸಲಾಗದ ಹಲವು ಬಗೆಯ ಹಿಂಜರಿಕೆಗಳಿವೆ ಬಡವರ ಬದುಕಿನಲ್ಲಿ. ಬಡವರು ಬದಲಾವಣೆಗೆ ಸಿದ್ಧರಾಗಿ ಕುಳಿತಿಲ್ಲ. ಸಿದ್ಧಗೊಳಿಸಬೇಕಿದೆ. ರಚನಾತ್ಮಕ ಚಳವಳಿಗಳ ಮೂಲಕ ಸಿದ್ಧಗೊಳಿಸಬೇಕಿದೆ. ಬಡವರನ್ನು ಮಾತನಾಡಿಸಿದರೆ ಸಾಕು, ಕೂಲಿ ಕೇಳುತ್ತಾರೆ. ಅಧಿಕಾರವನ್ನೂ ಸಹ ಕೂಲಿಯೆಂದೇ ಗ್ರಹಿಸುತ್ತಾರೆ ಅವರು.

ಅವರಿಗೆ ಗೊತ್ತಿರುವುದು ಕೂಲಿಕಾರ ವ್ಯವಸ್ಥೆ ಮಾತ್ರ. ಉದ್ಯಮಶೀಲತೆ ಕೂಲಿಕಾರ ಮನೋವೃತ್ತಿಗೆ ತದ್ವಿರುದ್ಧವಾದದ್ದು. ಅದು ಜವಾಬ್ದಾರಿ. ಇತರರ ಬಗ್ಗೆ ಜವಾಬ್ದಾರಿ; ಇತರೆ ನೌಕರರ ಬಗ್ಗೆ, ಇತರೆ ಮ್ಯಾನೇಜರುಗಳ ಬಗ್ಗೆ, ಇತರರ ಹಣದ ಬಗ್ಗೆ, ಮಾರ್ಕೆಟ್ಟಿನ ಬಗ್ಗೆ ಜವಾಬ್ದಾರಿ.

ಬಡವರ ಕಲಿಕೆ ತಾಳ್ಮೆಯ ಕಲಿಕೆ. ತಾಯಂದಿರು ಮಾಡುವುದಿಲ್ಲವೇ ಮಗುವಿಗೆ, ಮಗುವಿನೊಟ್ಟಿಗೆ, ಆ ರೀತಿಯ ಕಲಿಕೆ. ಕೆಲವೊಮ್ಮೆ ಗದರಿ ಕಲಿಸಬೇಕಾಗುತ್ತದೆ, ಕೆಲವೊಮ್ಮೆ ಗಟ್ಟಿಸಿ ಹೇಳಬೇಕಾಗುತ್ತದೆ, ಕೆಲವೊಮ್ಮೆ ಮುದ್ದು ಮಾಡಬೇಕಾಗುತ್ತದೆ.

ಆದರೆ, ಧೈರ್ಯ ಕಳೆದುಕೊಂಡವರು ನಾವು. ನೈತಿಕ ಧೈರ್ಯ ಕಳೆದುಕೊಂಡವರು. ಸರ್ಕಾರಗಳ ಮೊರೆ ಹೋಗುತ್ತೇವೆ ಮತ್ತೆ ಮತ್ತೆ, ಎಲ್ಲದಕ್ಕೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT