ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್ ಮತ್ತು ಮಹಿಳಾ ಸಶಕ್ತೀಕರಣ

Last Updated 4 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಕಳೆದ ವಾರ ಮಂಡನೆಯಾದ ಕೇಂದ್ರ ಬಜೆಟ್ಟನ್ನು  ಮಹಿಳಾಪರ  ಆಯವ್ಯಯ ಎಂದು ಅನೇಕ ವಲಯಗಳಲ್ಲಿ ಬಿಂಬಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಬಜೆಟ್ಟುಗಳು ಮಹಿಳೆಯರನ್ನು ಗುರಿಯಾಗಿಸಿಕೊಂಡು ಯೋಜನೆಗಳನ್ನು ಹೆಣೆಯುತ್ತಿರುವುದನ್ನು ನಾವು ಗಮನಿಸುತ್ತಾ ಬಂದಿದ್ದೇವೆ.

ಈ ಬಾರಿಯಂತೂ ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗೆ ರೂ 97,134 ಕೋಟಿ ನಿಗದಿಯಾಗಿದ್ದು, ಇನ್ನೇನು ಮಹಿಳಾ ಅಭಿವೃದ್ಧಿಯ ಗುರಿಯನ್ನು ತಲುಪಲು ಹೆಚ್ಚು ಕಾಲ ಹಿಡಿಸುವುದಿಲ್ಲ ಎಂದು ಕೆಲ ವ್ಯಕ್ತಿಗಳು, ವ್ಯವಸ್ಥೆಗಳು ಈ ಬಜೆಟ್ಟನ್ನು ವೈಭವೀಕರಿಸುತ್ತಿದ್ದರೆ, ಮತ್ತನೇಕರು ಮೇಲ್ನೋಟಕ್ಕೆ ಮಹಿಳೆಯರ ಸುರಕ್ಷತೆ ಹಾಗೂ ಆರ್ಥಿಕ ಸ್ವಾವಲಂಬನೆಗೆ ಒತ್ತುಕೊಟ್ಟಂತೆ ಕಾಣುತ್ತಿದ್ದರೂ ವಾಸ್ತವದಲ್ಲಿ ಬಹುತೇಕ ಮಹಿಳೆಯರ ಬದುಕಿನಲ್ಲಿ ಈ ಯೋಜನೆಗಳಿಂದ ಯಾವ ಮಹತ್ತರವಾದ ಬದಲಾವಣೆಗಳೂ ಆಗುವುದಿಲ್ಲ ಎನ್ನುತ್ತಿದ್ದಾರೆ.

ಬಜೆಟ್ಟನ್ನು ಸಂಪೂರ್ಣವಾಗಿ ವೈಭವೀಕರಿಸುವುದಾಗಲಿ ಅಥವಾ ಸಾರಾಸಗಟಾಗಿ ತಿರಸ್ಕರಿಸುವುದಾಗಲಿ ಮಾಡುವ ಮೊದಲು ಈಗಿರುವ ಸ್ವರೂಪದಲ್ಲಿ ಮಹಿಳೆಯರ ಬದುಕನ್ನು ಹಸನಾಗಿಸಲು ಈ ಬಜೆಟ್ಟಿನಲ್ಲಿ ಸೂಚಿಸಿರುವ ಯೋಜನೆಗಳಿಂದ ಸಾಧ್ಯವೇ ಇಲ್ಲವೇ, ಅಥವಾ ಯಾವ ಯಾವ ಅಂಶಗಳಿಗೆ ಒತ್ತನ್ನು ಕೊಟ್ಟಿದ್ದರೆ ಅರ್ಥಪೂರ್ಣವಾದ ಬದಲಾವಣೆಗಳನ್ನು ತರಬಹುದಾಗಿತ್ತು ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಈ ಬಜೆಟ್ಟಿನ ವಿಶ್ಲೇಷಣೆ ನಡೆಯಬೇಕಾಗಿದೆ.

ಅದಕ್ಕೂ ಮುನ್ನ ಈ ಆಯವ್ಯಯದಲ್ಲಿ ಮಹಿಳೆಯರ ಜೀವನದ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವವನ್ನು ಬೀರುವಂಥ ಯೋಜನೆಗಳಾವುವು ಎಂಬುದನ್ನು ಗುರುತಿಸುವ ಅಗತ್ಯವಿದೆ.ಈ ಬಜೆಟ್ಟನ್ನು ಮಹಿಳಾಪರ ಎಂದು ಬಿಂಬಿಸಲು ಕಾರಣವಾಗಿರುವ ನಿರ್ಭಯ ನಿಧಿ ಮತ್ತು ಮಹಿಳಾ ಬ್ಯಾಂಕ್ ಯೋಜನೆಗಳನ್ನೇ ಮೊದಲಿಗೆ ತೆಗೆದುಕೊಳ್ಳೋಣ.

ಡಿಸೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ದೆಹಲಿಯ ಯುವತಿಯ ನೆನಪಿನಲ್ಲಿ, ಮಹಿಳೆಯರ ಸುರಕ್ಷತೆಗಾಗಿ ಘೋಷಿತವಾಗಿರುವ ನಿರ್ಭಯ ನಿಧಿಗಾಗಿರೂ1000 ಕೋಟಿ  ನಿಗದಿಪಡಿಸಲಾಗಿದೆ.ಹೆಣ್ಣು ಮಕ್ಕಳು ಸುರಕ್ಷಿತ ಮತ್ತು ಗೌರವಯುತ ಜೀವನವನ್ನು ನಡೆಸಲು ನೆರವಾಗುವಂತೆ ಸರ್ಕಾರಿ ಮತ್ತು ಸ್ವಯಂಸೇವಾ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಬಲ ನೀಡಲು ಈ ನಿಧಿಯನ್ನು ಬಳಸಿಕೊಳ್ಳಬಹುದೆಂದು ಬಜೆಟ್ಟಿನಲ್ಲಿ ಸೂಚಿಸಲಾಗಿದೆ.

ನಿರ್ಭಯ ನಿಧಿಯ ಸ್ವರೂಪ, ಅದರ ವ್ಯಾಪ್ತಿ ಮತ್ತು ಬಳಕೆಯ ಪರಿಯನ್ನು ಕುರಿತಂತೆ ರೂಪುರೇಷೆಗಳನ್ನು ತಯಾರಿಸುವ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಮಂತ್ರಾಲಯ ಹಾಗೂ ಸಂಬಂಧಿಸಿದ ಇತರ ಇಲಾಖೆಗಳಿಗೆ ವಹಿಸಲಾಗಿದೆ. ದೇಶದ ಜನಸಂಖ್ಯೆಯಲ್ಲಿ ಸುಮಾರು ಅರ್ಧ ಭಾಗದಷ್ಟಿರುವ ಸ್ತ್ರೀಯರು ಸುರಕ್ಷಿತವಾದ ಪರಿಸ್ಥಿತಿಗಳಲ್ಲಿ ಬದುಕಬೇಕೆನ್ನುವ ಕೇಂದ್ರ ಸರ್ಕಾರದ ಆಶಯವೇನೋ ಒಳ್ಳೆಯದೇ ಎಂದು ಒಪ್ಪಿಕೊಳ್ಳೋಣ.

ಆದರೆ ಹೆಣ್ಣಿನ ಸುತ್ತ ಈ ಸುರಕ್ಷಿತ ವಲಯವನ್ನು ನಿರ್ಮಾಣ ಮಾಡುವ  ಯೋಚನೆ  ಮತ್ತು  ಯೋಜನೆಗೆ ಓರ್ವ ಹೆಣ್ಣು ಅನುಭವಿಸಿದ ದೌರ್ಜನ್ಯ ಮತ್ತು ಆಕೆಯ ಅಸಹಜ ಸಾವು ಪ್ರೇರೇಪಣೆಯನ್ನು ನೀಡಬೇಕಾಯ್ತಲ್ಲ ಎನ್ನುವುದು ವಿಷಾದನೀಯ.ನಿರ್ಭಯ ನಿಧಿಯ ಬಗ್ಗೆ ಯೋಚಿಸುತ್ತಾ ಹೋದ ಹಾಗೆಲ್ಲ ಎರಡು ಪ್ರಶ್ನೆಗಳು ನನ್ನನ್ನು ಬಾಧಿಸುತ್ತವೆ. ಮೊದಲನೆಯದು, ದೆಹಲಿಯ ಘಟನೆ ಸಂಭವಿಸದೆ ಹೋಗಿದ್ದರೆ ಈ ಸರ್ಕಾರ ಮಹಿಳಾ ಸುರಕ್ಷತೆಯ ಬಗ್ಗೆ ಯೋಚಿಸುತ್ತಿರಲಿಲ್ಲವೇ ಎನ್ನುವುದು.

ಎರಡನೆಯ ಪ್ರಶ್ನೆ ದೆಹಲಿಯ ಯುವತಿ ಸಾಮೂಹಿಕ ಅತ್ಯಾಚಾರವನ್ನು ಎದುರಿಸಿ, ಸಾವನ್ನಪ್ಪುವ ಮುನ್ನವೇ ದೇಶದಾದ್ಯಂತ ಸಂಭವಿಸುತ್ತಿದ್ದ ಸಾವಿರಾರು ದೌರ್ಜನ್ಯ ಪ್ರಕರಣಗಳನ್ನು ತಾನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ ಎಂದು ಈ ಸರ್ಕಾರವೇ ಒಪ್ಪಿಕೊಳ್ಳುತ್ತಿದೆಯೇ ಎನ್ನುವುದು. ಪ್ರತಿ ಬಾರಿಯೂ ಒಂದು ದುರ್ಘಟನೆ ಸಂಭವಿಸಿ, ಅದು ಮಾನ -ಪ್ರಾಣಗಳನ್ನು ಆಹುತಿಯಾಗಿ ತೆಗೆದುಕೊಂಡ ನಂತರ, ಅದರಲ್ಲೂ ಆ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾದಾಗ ಸರ್ಕಾರವಾಗಲಿ ಸಮಾಜವಾಗಲಿ ಎಚ್ಚೆತ್ತುಕೊಳ್ಳುವ ಪರಿಪಾಠಕ್ಕೆ ನಾವು ಒಗ್ಗಿ ಹೋಗಿದ್ದೇವೆ.

ಬಹುತೇಕ ಸಂದರ್ಭಗಳಲ್ಲಿ ಈ ಘಟನೆಯಿಂದ ನೊಂದವರಿಗೆ ಪರಿಹಾರದ ಘೋಷಣೆ, ಅದಕ್ಕೆ ಕಾರಣರಾದವರಿಗೆ ಅಮಾನತು, ವರ್ಗಾವಣೆ ಅಥವಾ ವಿಚಾರಣೆಗಳಲ್ಲಿಯೇ ಸರ್ಕಾರಿ ಪ್ರತಿಕ್ರಿಯೆ ಪರಿಸಮಾಪ್ತಿಯಾಗುತ್ತದೆ.ಈ ಬಾರಿ ದೆಹಲಿಯ ಘಟನೆ ದೇಶವನ್ನು ಅಲುಗಾಡಿಸಿದ ರೀತಿಗೆ ಸರ್ಕಾರ ಬೆದರಿದ್ದರಿಂದ ಮಹಿಳಾ ಸುರಕ್ಷತೆಯೆಂಬ ಅಜೆಂಡಾ ಕೇಂದ್ರ ಬಜೆಟ್ಟನ್ನು ಪ್ರವೇಶಿಸಿದ್ದು.

ದೆಹಲಿಯ ಯುವತಿಯ ಸಾವು ತಂದ ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಸರ್ಕಾರ ಆಕೆಯ ವೈದ್ಯಕೀಯ ವೆಚ್ಚವನ್ನು ಭರಿಸಿ ಆ ಕುಟುಂಬಕ್ಕೆ ಮನೆಯೊಂದನ್ನು ಒದಗಿಸಲು ಮುಂದಾಯಿತು ನಿಜ. ಆದರೆ ಈ ಕ್ರಮ ಜನರ ಕಣ್ಣೊರೆಸಲು ಮಾಡಿದ ಒಂದು ರಾಜಕೀಯ ತಂತ್ರವಾಗಿದೆ. ಅದೇ ಸ್ವರೂಪದ ದೌರ್ಜನ್ಯವನ್ನು ಎದುರಿಸಿದ ಎಲ್ಲ ಹೆಣ್ಣು ಮಕ್ಕಳ ಬಗ್ಗೆಯೂ ಅಂತಹುದೇ ಕಾಳಜಿ ತನಗಿದೆ ಎಂದು ತೋರಿಸಲು ನಿರ್ಭಯ ನಿಧಿ ಸರ್ಕಾರಕ್ಕೆ ಅವಕಾಶವನ್ನೇನೋ ಕಲ್ಪಿಸಿದೆ. ಆದರೆ ಹಾಗಾಗುವುದೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಅದಕ್ಕೆ ಕಾರಣಗಳಿಲ್ಲದಿಲ್ಲ.

ದಿನನಿತ್ಯವೂ ದೇಶದ ನಾನಾ ಭಾಗಗಳಲ್ಲಿ ಅತ್ಯಾಚಾರಗಳಿಗೆ, ಆಸಿಡ್ ದಾಳಿಗಳಿಗೆ, ಮಾರಣಾಂತಿಕ ಹಲ್ಲೆಗಳಿಗೆ, ಖಾಪ್ ಪಂಚಾಯಿತಿಗಳಂಥ ಕ್ರೂರ ವ್ಯವಸ್ಥೆಯ ದೌರ್ಜನ್ಯಕ್ಕೆ, ಲೈಂಗಿಕ ಉದ್ದೇಶಗಳಿಗಾಗಿ ನಡೆಯುವ ಮಾನವ ಸಾಗಾಣಿಕೆಗೆ ಮತ್ತು ಇತರ ಲೈಂಗಿಕ ಸ್ವರೂಪದ ಕ್ರೌರ‌್ಯಗಳಿಗೆ ಅನೇಕ ಮಹಿಳೆಯರು ಬಲಿಯಾಗುತ್ತಿದ್ದಾರೆ.

ಈ ಹೆಣ್ಣುಗಳ ಬದುಕು ಬಹು ಸಂದರ್ಭಗಳಲ್ಲಿ ದುಸ್ತರವಾಗಿದ್ದು, ಅವರು ಸುರಕ್ಷಿತವಾದ ಜೀವನವನ್ನು ನಡೆಸಬೇಕಾದರೆ ವಿಶೇಷವಾದಂತಹ ರಕ್ಷಣಾ ವ್ಯವಸ್ಥೆಯನ್ನೇ ಸೃಷ್ಟಿಸಬೇಕಾಗಿದೆ. ದೌರ್ಜನ್ಯದ ಪರಿಸರದಿಂದ ಸುರಕ್ಷಿತವಾದ ತಾಣಗಳಿಗೆ ಮಹಿಳೆಯರನ್ನು ವರ್ಗಾಯಿಸಬೇಕಾದರೆ, ದೇಶದೆಲ್ಲೆಡೆ  ರಕ್ಷಣಾ ಗೃಹಗಳ ನಿರ್ಮಾಣವಾಗಬೇಕು. ಅಷ್ಟೇ ಅಲ್ಲ, ಇಂಥ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಲಿಂಗ-ಸೂಕ್ಷ್ಮ ಮನೋಭಾವವನ್ನು ಬೆಳೆಸಿಕೊಂಡ ಸಿಬ್ಬಂದಿ ವರ್ಗವೊಂದನ್ನು ಕೂಡ ಸೃಷ್ಟಿಸಬೇಕು.

ಇದನ್ನೆಲ್ಲಾ ಮಾಡಬೇಕಾದರೆ ಬಜೆಟ್ಟಿನಲ್ಲಿಯೇ ಸ್ಪಷ್ಟವಾದ ರೀತಿಯಲ್ಲಿ ಹಣಕಾಸು ಸಂಪನ್ಮೂಲ ನಿಗದಿಯಾಗಬೇಕಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಈ ನಿಧಿಯ ಬಳಕೆಯ ರೂಪುರೇಷೆಗಳನ್ನೊಳಗೊಂಡಂತೆ ಒಂದು ಮಾರ್ಗಸೂಚಿ ಸಿದ್ದವಾಗಬೇಕು. ಈಗಿರುವ ಸ್ವರೂಪದಲ್ಲಿಯೇ ನಿರ್ಭಯ ನಿಧಿಯನ್ನು ಬಳಸಿಕೊಂಡರೆ ಅದು ಕೂಡ ಇದುವರೆಗೂ ಬಂದು ಹೋಗಿರುವ ಅನೇಕ ಯೋಜನೆಗಳ ಹಾದಿಯನ್ನೇ ಹಿಡಿಯುತ್ತದಷ್ಟೆ.

ನಿರ್ಭಯ ನಿಧಿಗಾಗಿ ನಿಗದಿತವಾಗಿರುವ ಹಣದ ಬಳಕೆಯ ಸ್ವರೂಪವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ನಿರ್ವಹಿಸಲಿದೆ ಎಂದು ಸೂಚಿಸಲಾಗಿದೆ, ಎಂದರೆ ಈ ನಿಧಿಯ ಭವಿಷ್ಯ ಮತ್ತದೇ ಸರ್ಕಾರಿ ವ್ಯವಸ್ಥೆಯ ಕೈಯ್ಯಲಿದೆ ಎಂದರ್ಥ.

ಇತ್ತೀಚೆಗಷ್ಟೇ ತನ್ನ ವರದಿಯನ್ನು ಸಲ್ಲಿಸಿದ ನ್ಯಾಯಮೂರ್ತಿ ವರ್ಮಾ ಸಮಿತಿಯ ಕೆಲ ಪ್ರಮುಖ ಶಿಫಾರಸ್ಸುಗಳಿಗೆ ಸರ್ಕಾರ ತೋರಿದ ನೀರಸ ಪ್ರತಿಕ್ರಿಯೆ, ತಾನೇ ನೇಮಿಸಿದ ಈ ಸಮಿತಿ ತನ್ನ ವರದಿಯನ್ನು ಸಲ್ಲಿಸಿದ ಮೇಲೂ ಅದು ವ್ಯಕ್ತಪಡಿಸಿದ ಭಾವನೆಗಳಿಗೆ ಸೂಕ್ತ ಮನ್ನಣೆ ನೀಡದೆ ತರಾತುರಿಯಲ್ಲಿ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ, ದೆಹಲಿಯಿಂದ ಹಿಡಿದು ದೇಶದ ನಾನಾ ಭಾಗಗಳಲ್ಲಿ ಹೆಚ್ಚುತ್ತಲೇ ಹೋಗುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಅಥವಾ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಅಸಮರ್ಥವಾಗಿರುವ ಕಾನೂನು ಪಾಲನಾ ವ್ಯವಸ್ಥೆ, ರಾಜಕೀಯ ಹಗ್ಗ ಜಗ್ಗಾಟದಲ್ಲಿ ನಿರತವಾಗಿರುವ ವಿವಿಧ ಪಕ್ಷಗಳ ಧೋರಣೆಗಳಲ್ಲಿ ಕಂಡು ಬರುತ್ತಿರುವ ಲಿಂಗ ಸೂಕ್ಷ್ಮತೆಯ ಅಭಾವ ಮತ್ತು ಸರ್ಕಾರದ ವಿವಿಧ ಇಲಾಖೆಗಳ ನಡುವೆ ಕಂಡು ಬರುತ್ತಿರುವ ಸಮನ್ವಯದ ಕೊರತೆ- ಇವುಗಳನ್ನೆಲ್ಲಾ ನೋಡುತ್ತಾ ಹೋದರೆ ನಿರ್ಭಯ ನಿಧಿ ಒಂದು ಗಾಳಿ ಗೋಪುರವೇನೋ ಎಂಬ ಭಾವನೆ ಬರದಿರುವುದಿಲ್ಲ.

ಸರ್ಕಾರಕ್ಕೆ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ನೈಜ ಕಾಳಜಿಗಳಿದ್ದರೆ ನಿರ್ಭಯ ನಿಧಿಯ ಬಳಕೆಯನ್ನು ಕುರಿತಂತೆ ರೂಪುರೇಷೆಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ, ಮಹಿಳಾ ಚಳವಳಿಗಳಲ್ಲಿ, ಪ್ರಗತಿಪರ ಚಿಂತನೆಗಳಲ್ಲಿ ಮತ್ತು ತಳಸ್ತರಗಳಲ್ಲಿ ಮಹಿಳಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು, ಸಂಸ್ಥೆಗಳನ್ನು ತೊಡಗಿಸಿಕೊಳ್ಳುವುದು ಒಳಿತು.

ಈ ಬಾರಿಯ ಬಜೆಟ್ಟು ಮಹಿಳೋದ್ಧಾರಕ್ಕೆ ಅತಿ ಪ್ರಾಶಸ್ತ್ಯವನ್ನು ನೀಡಿದೆ ಎಂಬ ಭಾವನೆ ಮೂಡಲು ಕಾರಣವಾದ ಮತ್ತೊಂದು ಪ್ರಸ್ತಾವನೆ ಸಂಪೂರ್ಣ ಮಹಿಳಾ ಬ್ಯಾಂಕಿನ ಸ್ಥಾಪನೆಗೆ ಸಂಬಂಧಿಸಿದ್ದು, ದೇಶದಲ್ಲಿ ಪ್ರಥಮ ಬಾರಿಗೆ ಸರ್ಕಾರಿ ಸ್ವಾಮ್ಯದಲ್ಲಿ ಮಹಿಳಾ ಬ್ಯಾಂಕಿನ ಸ್ಥಾಪನೆಯ ಕಲ್ಪನೆಯೇ ನನ್ನ ದೃಷ್ಟಿಯಲ್ಲಿ ದೋಷಪೂರ್ಣ. ಮೊದಲಿಗೆ, ಸಂಪೂರ್ಣ ಮಹಿಳಾ ಬ್ಯಾಂಕ್ ಎಂದರೆ ಎಲ್ಲ ಸಿಬ್ಬಂದಿಯೂ ಮಹಿಳೆಯರು ಎಂದರ್ಥವೇ, ಅಥವಾ ಈ ಬ್ಯಾಂಕಿನ ವಹಿವಾಟುಗಳೆಲ್ಲ ಕೇವಲ ಮಹಿಳೆಯರಿಗಾಗಿ ಮೀಸಲು ಎಂದರ್ಥವೇ ಎಂಬ ಗೊಂದಲ ಮೂಡುತ್ತಿದೆ.

ಸುಮಾರು 50 ವರ್ಷಗಳ ಹಿಂದೆಯೇ ಖಾಸಗಿ ವಲಯದಲ್ಲಿನ ಬ್ಯಾಂಕೊಂದು ಸಂಪೂರ್ಣ ಮಹಿಳಾ ಶಾಖೆಗಳನ್ನು ತೆರೆದಿದ್ದು, ಅವುಗಳ ಗ್ರಾಹಕ ವರ್ಗದಲ್ಲಿ ಪುರುಷರೂ ಇದ್ದಿದ್ದು ಇಲ್ಲಿ ನೆನಪಿಗೆ ಬರುತ್ತದೆ. ಆದರೆ ಆಗಿನ ಕಾಲದಲ್ಲಿ ಈ ಬ್ಯಾಂಕು ಖಾಸಗಿ ವಲಯದಲ್ಲಿ ಇದ್ದಿದ್ದರಿಂದ ಪ್ರಾಯಶಃ ಈಗ ಪ್ರಥಮವಾಗಿ ಮಹಿಳಾ ಬ್ಯಾಂಕನ್ನು ಸರ್ಕಾರಿ ವಲಯದಲ್ಲಿ ತೆರೆಯುವ ಆಲೋಚನೆ ಮೂಡಿರಬಹುದು.

ಸ್ತ್ರೀ-ಪುರುಷರ ನಡುವೆ ಇರುವ ಸಂಸ್ಕೃತಿ ನಿರ್ಮಿತ ದೂರಗಳನ್ನು ಹೋಗಲಾಡಿಸಿ, ಮಹಿಳೆಯರು ಮುಕ್ತವಾಗಿ ಸಮಾಜದ ಎಲ್ಲ ಸಂಸ್ಥೆಗಳಲ್ಲೂ ಭಾಗವಹಿಸುವಂತಾಗಬೇಕೇ ಹೊರತು, ಮತ್ತೆ ಮತ್ತೆ ಅವರನ್ನು ಪ್ರತ್ಯೇಕಿಸುವ ಪ್ರಯತ್ನಗಳೇಕೆ? ದೇಶದ ಕೆಲ ಪ್ರಮುಖ ಬ್ಯಾಂಕುಗಳ ಮಹಿಳಾ ವ್ಯವಸ್ಥಾಪಕರು ಪ್ರತ್ಯೇಕ ಮಹಿಳಾ ಬ್ಯಾಂಕಿನ ಪ್ರಸ್ತಾವನೆಯನ್ನು ಹಾಡಿ ಹೊಗಳುತ್ತಿರುವುದು ಆಶ್ಚರ್ಯವನ್ನು ತಂದಿದೆ. ಮಹಿಳೆಯರಿಗೆ ಪುರುಷರಿರುವ ಬ್ಯಾಂಕುಗಳಿಗೆ ಹೋಗಲು ಸಂಕೋಚವಾಗುವುದರಿಂದಲೂ, ಅವರಿಗೆ ಆರ್ಥಿಕ ವ್ಯವಹಾರಗಳ ಬಗ್ಗೆ ತಿಳಿವಳಿಕೆಯಕೊರತೆಯಿಂದ, ಕೀಳರಿಮೆ ಇರುವುದರಿಂದಲೂ ಅವರಿಗಾಗಿಯೇ ಪ್ರತ್ಯೇಕ ಬ್ಯಾಂಕುಗಳಿದ್ದರೆ ಸೂಕ್ತ ಎಂಬ ಸಜಾಯಿಷಿಯನ್ನು ಬೇರೆ ನೀಡಲಾಗುತ್ತಿದೆ.

ಹಾಗಾದರೆ ದೇಶದಾದ್ಯಂತ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಎದ್ದು ನಿಂತಿರುವ ಮಹಿಳಾ ಸ್ವ-ಸಹಾಯ ಸಂಘಗಳು, ಈ ಗುಂಪುಗಳಿಗೆ ಬೆಂಬಲವಾಗಿ ನಿಂತಿರುವ ಗ್ರಾಮೀಣ ಬ್ಯಾಂಕುಗಳು ಮತ್ತು ಇದೇ ಸರ್ಕಾರಿ ಸ್ವಾಮ್ಯದಲ್ಲಿರುವ ವಾಣಿಜ್ಯ ಬ್ಯಾಂಕುಗಳು ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಗಮನ ನೀಡುತ್ತಿಲ್ಲವೆಂದು ನಾವು ಅರ್ಥೈಸಬೇಕೆ? ಮೇಲಾಗಿ ಒಂದು ಸಾವಿರ ಕೋಟಿ ಪ್ರಾರಂಭಿಕ ನಿಧಿಯಿಂದ ಆರಂಭಿಸಲು ಉದ್ದೇಶಿಸಲಾಗಿರುವ ಈ ಬ್ಯಾಂಕು ಎಲ್ಲಿ ಸ್ಥಾಪನೆಯಾಗುತ್ತದೆ, ಅದಕ್ಕೆ ಎಷ್ಟು ಶಾಖೆಗಳಿರುತ್ತವೆ ಮತ್ತು ಅದರ ವ್ಯವಹಾರಗಳ ಸ್ವರೂಪವಾದರೂ ಎಂತಹುದು- ಇವೇ ಮುಂತಾದ ಪ್ರಶ್ನೆಗಳಿಗೆ ಬಜೆಟ್ಟಿನಲ್ಲಿ ಉತ್ತರಗಳು ದೊರೆಯುತ್ತಿಲ್ಲ.

ಇನ್ನು ಮಹಿಳೆಯರು ವಿದೇಶದಿಂದ ತರಬಹುದಾದ ಚಿನ್ನದ ಕನಿಷ್ಠ ಮೌಲ್ಯವನ್ನು ಒಂದು ಲಕ್ಷಕ್ಕೇರಿಸಿ, ಪುರುಷರು ತರಬಹುದಾದ ಚಿನ್ನದ ಬೆಲೆಯನ್ನುರೂ50 ಸಾವಿರಕ್ಕೆ ನಿಗದಿಪಡಿಸಿರುವ ಪ್ರಸ್ತಾವನೆ. ಚಿನ್ನ ಎಂದು ಬಿಟ್ಟರೆ ಹೆಂಗಸರು ಖುಷಿಯಾಗಿ ಬಿಡ್ತಾರೆ, ಏಕೆಂದರೆ ಚಿನ್ನದ ಆಭರಣಗಳನ್ನು ಹೊಂದುವುದು ಅಥವಾ ಧರಿಸುವುದು ಅವರ ಜೀವನದ ಅತ್ಯಂತ ಮುಖ್ಯವಾದ ಗುರಿ ಎಂದು ಅನೇಕರು ತಿಳಿದಿದ್ದಾರೆ.

ಇಂಥ ಲಿಂಗ ಸ್ಥಿರಮಾದರಿಯನ್ನು ಸರ್ಕಾರವೇ ಪುಷ್ಟೀಕರಿಸುತ್ತಿರುವುದು ವಿಪರ್ಯಾಸ. ಬಜೆಟ್ಟಿನಲ್ಲಿ ನೀಡಲಾಗಿರುವ ಈ ಸವಲತ್ತಿನಿಂದ ಮೇಲ್‌ಮಧ್ಯಮ ವರ್ಗದ ಮತ್ತು ಶ್ರಿಮಂತ ಮಹಿಳೆಯರಿಗೆ ಮತ್ತಷ್ಟು ಚಿನ್ನವನ್ನು ವಿದೇಶಗಳಿಂದ ತರಲೋ ಅಥವಾ ತರಿಸಿಕೊಳ್ಳಲೋ ಸುಲಭವಾಗಬಹುದು. ಈಗಾಗಲೇ ವರದಕ್ಷಿಣೆಯ ದಾಳಿಯಿಂದ ತತ್ತರಿಸುತ್ತಿರುವ ಕೇರಳದಂಥ ಪ್ರದೇಶಗಳ ಹೆಣ್ಣು ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಬಜೆಟ್ಟು ನೀಡಿರುವ ಈ  ಉಡುಗೊರೆ ಮತ್ತಷ್ಟು ಹೊರೆಯಾದರೆ ಏನೂ ಆಶ್ಚರ್ಯವಿಲ್ಲ.

ಒಂದೆಡೆ ಹೆಣ್ಣು ಮಕ್ಕಳನ್ನು ದೌರ್ಜನ್ಯದಿಂದ ರಕ್ಷಿಸಲು ನಿರ್ಭಯ ನಿಧಿ, ಮತ್ತೊಂದೆಡೆ ದೌರ್ಜನ್ಯಕ್ಕೆ ಮೂಲ ಕಾರಣಗಳಲ್ಲಿ ಒಂದಾದ ಚಿನ್ನದ ದಾಹಕ್ಕೆ ನೀರೆರೆಯುವಂಥ ಚಿನ್ನದ ವ್ಯಾಪಾರದ ಮೇಲಿನ ನಿಯಂತ್ರಣದ ಸಡಿಲು- ಇದೊಂದು ವೈರುಧ್ಯ. ಬೆಲೆ ಏರಲಿ, ಇಳಿಯಲಿ ಅದರ ಮೇಲಿನ ತೆರಿಗೆ ಹೆಚ್ಚಿರಲಿ, ಕಡಿಮೆಯಿರಲಿ ಹಣವಂತರು ಅದರ ವ್ಯಾಪಾರವನ್ನಂತೂ ಬಿಡುವುದಿಲ್ಲ. ಇದರ ಬದಲು ಒಂದು ಹೊತ್ತಿನ ಕೂಳಿಗೂ ಹೆಣಗಬೇಕಾದ ಸ್ಥಿತಿಯಲ್ಲಿರುವ ಮಹಿಳೆಯರಿಗೆ ಆಹಾರ ಮತ್ತು ಉದ್ಯೋಗ ಭದ್ರತೆಯನ್ನು ನೀಡಿದ್ದರೆ ಒಂದು ಪ್ರಗತಿಪರ ಹೆಜ್ಜೆಯನ್ನಿಟ್ಟಂತಾಗುತ್ತಿತ್ತು.

ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಬದುಕಿನ ಮೇಲೆ ಪರೋಕ್ಷವಾಗಿ ಪ್ರಭಾವವನ್ನು ಬೀರಬಹುದಾಗಿದ್ದಂಥ ಸರ್ವ ಶಿಕ್ಷಾ ಅಭಿಯಾನ, ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನ, ಮಧ್ಯಾಹ್ನದ ಊಟದ ಯೋಜನೆ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಇನ್ನೂ ಹೆಚ್ಚಿನ ಹಣ ನಿಗದಿಯಾಗಬೇಕಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಕೇಂದ್ರ ಬಜೆಟ್ಟೊಂದನ್ನು ತಯಾರು ಮಾಡುವಾಗ ಎಲ್ಲ ವಲಯಗಳು, ಎಲ್ಲ ವರ್ಗಗಳು ಮತ್ತು ಎಲ್ಲ ಪ್ರದೇಶಗಳ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಸಾರ್ವತ್ರಿಕ ಸ್ವೀಕೃತಿಯನ್ನು ಪಡೆಯುವುದು ಸುಲಭದ ಕೆಲಸವಲ್ಲ ಎಂಬುದು ನಮಗೂ ಗೊತ್ತು.

ಆದರೆ ಅಭಿವೃದ್ಧಿ ಆಯವ್ಯಯದಲ್ಲಿ ಬಹುಕಾಲದಿಂದಲೂ ಅಸಮಾನ ಪಾಲನ್ನು ಪಡೆದುಕೊಂಡೇ ಬಂದಿರುವಂಥ ಮಹಿಳೆಯರ ಬದುಕಿನ ಪ್ರಾಧಾನ್ಯತೆಗಳನ್ನು ಗುರುತಿಸಿ, ಅನುಷ್ಠಾನದ ಹಂತದಲ್ಲಿ ಧನ ಮತ್ತು ಮಾನವ ಸಂಪನ್ಮೂಲ ಸೋರಿಕೆಯಾಗದಂಥ ವ್ಯವಸ್ಥೆಯನ್ನು ಸೃಷ್ಟಿಸಿದರೆ ಮಾತ್ರ ಈ ಬಜೆಟ್ಟು ಮಹಿಳಾ ಸಶಕ್ತೀಕರಣವನ್ನು ಒಂದು ನಿಜವಾದ ಅರ್ಥದಲ್ಲಿ ತರಲು ಸಾಧ್ಯವಾದೀತೇನೋ.
ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT