ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲರಿಗೆ ಹೆದರುತ್ತಾರೆಯೇ ನರೇಂದ್ರ ಮೋದಿ!

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‌ದಿನಕಳೆದಂತೆ ‘ಡೆಲ್ಲಿ ಮೆಟ್ರೊ’ ದಿಲ್ಲಿವಾಲಗಳ ಜೀವನ ರೇಖೆಯೇ ಆಗತೊಡಗಿದೆ. ಪ್ರಯಾಣ ದರಗಳನ್ನು ದುಪ್ಪಟ್ಟು ಏರಿಸಿ ಬಡ ಕಾರ್ಮಿಕ ಜನವರ್ಗವನ್ನು ಈ ಜೀವನರೇಖೆಯಿಂದ ದೂರ ಸರಿಸಿದ ಗಾಢ ಕ್ರೌರ್ಯದ ನಟ್ಟ ನಡುವಣ ರಾಜಕೀಯ ವಿದ್ಯಮಾನವೊಂದು ಬಹುಚರ್ಚೆಯ ವಸ್ತುವಾಯಿತು. ಪ್ರಧಾನಸೇವಕ ನರೇಂದ್ರ ಮೋದಿ ಅವರು ದೆಹಲಿ ಎಂಬ ಅರ್ಧಂಬರ್ಧ ರಾಜ್ಯದ ಗುಬ್ಬಚ್ಚಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕುರಿತು ಆಳದಲ್ಲಿ ಹೊಂದಿರುವ ಭಯ ಮತ್ತು ಅಭದ್ರ ಭಾವನೆಗೆ ಕನ್ನಡಿ ಹಿಡಿಯಿತು. ಭಾರೀ ಧೈರ್ಯವಂತರನ್ನು, ಅಸೀಮ ಸಾಹಸಿಗಳನ್ನು ಕೆಲ ಬಾರಿ ಸಣ್ಣ ಪುಟ್ಟ ಭಯಗಳು ಸುಪ್ತಪ್ರಜ್ಞೆಯಲ್ಲಿ ಅಡಗಿ ಸದಾ ಕಾಡುತ್ತಿರುತ್ತವೆ ಎಂಬ ಮಾತೊಂದಿದೆ. ಈ ಮಾತಿಗೆ ನಮ್ಮ ಪ್ರಧಾನಿ ಮೋದಿಯವರೂ ಹೊರತಲ್ಲ ಎಂಬ ಸೂಚನೆಗಳಿವೆ.

ದೆಹಲಿಯೊಂದು ನಗರರಾಜ್ಯ. ನೆರೆಹೊರೆಯ ಉತ್ತರಪ್ರದೇಶ ಮತ್ತು ಹರಿಯಾಣದ ಭಾಗಗಳೂ ಸೇರಿ ರೂಪು ತಳೆದಿರುವುದು ದೆಹಲಿ ರಾಷ್ಟ್ರೀಯ ರಾಜಧಾನಿ ವಲಯ. ಉತ್ತರಪ್ರದೇಶದ ನೊಯಿಡಾ, ಘಾಜಿಯಾಬಾದ್, ಹರಿಯಾಣದ ಗುರುಗ್ರಾಮವು ದೆಹಲಿಯದೇ ಭೂ ಭಾಗಗಳೇನೋ ಎಂಬಷ್ಟು ರಾಜಧಾನಿಯೊಂದಿಗೆ ಕಲೆತ ಜನವಸತಿಗಳು.

ನೊಯಿಡಾ ಸಿಟಿ ಸೆಂಟರ್ ನಿಲ್ದಾಣದಿಂದ ದೆಹಲಿಯ ಕಾಲ್ಕಾಜಿವರೆಗೆ ಮೆಟ್ರೊ ಸಂಪರ್ಕ ಕಲ್ಪಿಸುವ ‘ಕೆನ್ನೇರಳೆ’ ಮಾರ್ಗವನ್ನು ಮೋದಿ ವಾರದ ಹಿಂದೆ ಉದ್ಘಾಟಿಸಿದರು. ಈ ಮಾರ್ಗದ ಶೇ 30ರಷ್ಟು ಭೂಪ್ರದೇಶ ನೊಯಿಡಾದಲ್ಲಿ ಸಾಗಿದರೆ ಉಳಿದ ಶೇ 70ರಷ್ಟು ಮಾರ್ಗ ದಿಲ್ಲಿಯಲ್ಲಿದೆ. ಉದ್ಘಾಟನೆ ಸಮಾರಂಭವನ್ನು ನೊಯಿಡಾದಲ್ಲಿ ಇರಿಸಲಾಗಿತ್ತು. ಈ ತಾಂತ್ರಿಕ ಕಾರಣದ ನೆವ ಮುಂದೆಮಾಡಿ ಕೇಜ್ರಿವಾಲ್ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಿಲ್ಲ. ಯಾಕೆಂದರೆ ಅವರ ನೆರಳು ಕಂಡರೆ ಮೋದಿಯವರಿಗೆ ಆಗಿಬರುವುದಿಲ್ಲ. ಈ ಮಾತು ಗುಟ್ಟಾಗಿ ಉಳಿದಿಲ್ಲ. ಅವರಮರ್ಜಿ ಅನುಸರಿಸಿಯೇ ದೆಹಲಿ ಮುಖ್ಯಮಂತ್ರಿಯನ್ನುದೂರ ಇಡಲಾಗಿದೆ ಎಂದು ಮೂಲಗಳು ಹೇಳಿವೆ. ಡೆಲ್ಲಿ ಮೆಟ್ರೊದಲ್ಲಿ ದೆಹಲಿ ಸರ್ಕಾರದ ಶೇ 50ರಷ್ಟು ಪಾಲುದಾರಿಕೆ
ಯಿದೆ. ಎಲ್ಲ ಸಮಾರಂಭಗಳಿಗೂ ದೆಹಲಿಯ ಮುಖ್ಯಮಂತ್ರಿಯನ್ನು ಆಹ್ವಾನಿಸಲಾಗುತ್ತಿತ್ತು. ಡೆಲ್ಲಿ ಮೆಟ್ರೊದ ಆಡಳಿತವರ್ಗವು ಕೇಂದ್ರದ ಒತ್ತಡಕ್ಕೆ ಮಣಿದಿರುವ ಇಂತಹ ಲೋಪ ಈವರೆಗೆ ಆಗಿರಲಿಲ್ಲ. ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರವು ಸಹಕಾರಿ ಒಕ್ಕೂಟ ಸ್ವರೂಪದ ಸೌಹಾರ್ದ ಸಂಬಂಧ ಇರಿಸಿಕೊಳ್ಳಲಿದೆ ಎಂಬ ಮೋದಿ ಮಾತು ಪೊಳ್ಳಾಗಿ ಧ್ವನಿಸಿದ ಹಲವು ನಿದರ್ಶನಗಳಿವೆ. ಅವುಗಳ ಸಾಲಿಗೆ ದೆಹಲಿಯೂ ಸೇರಿಕೊಂಡು ಬಹಳ ದಿನಗಳಾದವು.

ಚಕ್ರವರ್ತಿಗಳು ಅಪಮಾನವನ್ನು ಸುಲಭಕ್ಕೆ ನುಂಗಿಕೊಳ್ಳುವುದಿಲ್ಲವಂತೆ. ಬಾನೆತ್ತರಕ್ಕೆ ಕಟ್ಟಿಕೊಂಡ ತಮ್ಮ ಕೀರ್ತಿ ಶಿಖರದ ಮೇಲೆ ಬಿದ್ದ ಕೇಜ್ರಿವಾಲ್ ಪ್ರಹಾರವನ್ನು ತೀವ್ರ ಅವಹೇಳನ ಎಂದೇ ಭಾವಿಸಿದ್ದಾರೆ ಮೋದಿ. 2015ರ ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಎಪ್ಪತ್ತು ಸ್ಥಾನಗಳ ಪೈಕಿ 67ನ್ನು ಗೆದ್ದು, ಬಿಜೆಪಿಯನ್ನು ಅರ್ಥಾತ್ ಮೋದಿ-ಅಮಿತ್ ಷಾ ಜೋಡಿಯನ್ನು ಕೇವಲ ಮೂರು ಸ್ಥಾನಗಳ ಗಾತ್ರಕ್ಕೆ ಕತ್ತರಿಸಿದ ಅಪಮಾನವನ್ನು ಮರೆಯುವುದು ಸುಲಭ ಅಲ್ಲ ಪ್ರಧಾನಿಗೆ. ಸೋತು ಅಭ್ಯಾಸವಿಲ್ಲ ಅವರಿಗೆ. 2014ರ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮಂತಹ ಬ್ರಹ್ಮಾಸ್ತ್ರಕ್ಕೆ ಸಡ್ಡು ಹೊಡೆದದ್ದು ಇದೇ ‘ಯಕಃಶ್ಚಿತ್’ ಆಪ್ ಗುಬ್ಬಚ್ಚಿ ಎಂಬ ಸಿಟ್ಟು ಅವರದು. ಈ ಲೋಕಸಭಾ ಚುನಾವಣೆಗೆ ಮುನ್ನ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ
ದ್ದಾಗಲೇ, ‘ಗುಜರಾತ್ ಮಾದರಿ ಲೊಳಲೊಟ್ಟೆಯಲ್ಲದೆ ಇನ್ನೇನೂ ಅಲ್ಲ’ ಎಂದು ಗುಜರಾತಿನ ನೆಲದಲ್ಲಿ ನಿಂತು ಹೇಳಿದ್ದಲ್ಲದೆ, ಮೋದಿ ಭೇಟಿಗೆ ಸಮಯ ಕೋರಿದ ‘ಅಧಿಕ ಪ್ರಸಂಗತನ’ ಮಾಡಿದ್ದವರು ಕೇಜ್ರಿವಾಲ್.

ಭ್ರಷ್ಟಾಚಾರ ವಿರೋಧಿ ಆಂದೋಲನದ ನಡುವಿನಿಂದ ಹುಟ್ಟಿ ಬಂದು ಭಾರತೀಯ ರಾಜಕಾರಣದ ಅಡಿಗಲ್ಲನ್ನೇ ಅಲ್ಲಾಡಿಸುವ ಶಕ್ತಿಯನ್ನು ಹುದುಗಿಸಿಕೊಂಡಿದ್ದ ಹೊಸಪ್ರಯೋಗವಾಗಿತ್ತು ಆಮ್ ಆದ್ಮಿ ಪಕ್ಷ. ಮಧ್ಯಮವರ್ಗ ಮತ್ತು ಬಡಜನ ವರ್ಗಗಳೆರಡರ ಬೆಂಬಲವನ್ನೂ ಬಾಚಿಕೊಂಡ ಈ ಪ್ರಯೋಗ ದೆಹಲಿಯ ಗಡಿಗಳನ್ನು ದಾಟಿ ದೇಶದಉದ್ದಗಲಕ್ಕೆ ಹಬ್ಬಿದರೆ ಅದರ ಮೊದಲ ಅಪಾಯ ತಮ್ಮ ಕಾಲಿನ ಬುಡಕ್ಕೇ ಬರುತ್ತದೆ ಎಂಬ ಘೋರ ವಾಸ್ತವ ಮೋದಿಯವರ ದೂರದೃಷ್ಟಿಗೆ ಅರ್ಥವಾಗಿತ್ತು.

ಮೋದಿ ಮತ್ತು ಕೇಜ್ರಿವಾಲ್ ಅವರನ್ನು ಪರಸ್ಪರ ಹೋಲಿಕೆ ಮಾಡುವುದು ಉಚಿತವೇ ಎಂಬುದು ವರ್ಷಗಳ ಹಿಂದೆಯೇ ರಾಜಕೀಯ ಪಂಡಿತರು ನಡೆಸಿದ್ದ ಪರಾಮರ್ಶೆ. ಮೋದಿಯವರಾದರೋ ದೇಶದ ಪ್ರಧಾನಮಂತ್ರಿ. ಈ ಪದವಿ ಏರುವ ಮುನ್ನ ಸತತ 13 ವರ್ಷಗಳ ಕಾಲ ರಾಜ್ಯವೊಂದರ ಮುಖ್ಯಮಂತ್ರಿ. ಶಕ್ತಿ ರಾಜಕಾರಣದ ಒಳಸುಳಿಗಳನ್ನು ಗುಜರಾತಿನ ಕೋಮುವಾದಿ ಪ್ರಯೋಗಶಾಲೆಯಲ್ಲಿ ಪಳಗಿಸಿಕೊಂಡ ಪ್ರಚಂಡ ಪಟು. ಮುಖ್ಯಮಂತ್ರಿ ಗಾದಿಗೇರುವ ಮೊದಲು ದಶಕಗಳ ಕಾಲ ಆರೆಸ್ಸೆಸ್ ಪ್ರಚಾರಕರಾಗಿ, ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕಟ್ಟರ್ ಹಿಂದುತ್ವದ ನರನಾಡಿಗಳನ್ನು ಮೀಟಿದವರು. ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿ. ವಯಸ್ಸಿನಲ್ಲಾಗಲಿ, ಅನುಭವದಲ್ಲಾಗಲಿ, ಒಡೆದು ಆಳುವ ರಾಜಕಾರಣದಲ್ಲಾಗಲಿ ಮೋದಿಯವರಿಗೆ ಸರಿಸಾಟಿ ಅಲ್ಲ. ದೆಹಲಿ ಎಂಬುದು ಕೂಡ ಪೂರ್ಣಪ್ರಮಾಣದ ರಾಜ್ಯವಲ್ಲ. ಬಹುಮುಖ್ಯವಾದ ಪೊಲೀಸ್ ಮತ್ತು ಲೋಕೋಪಯೋಗಿ ಇಲಾಖೆಗಳ ಮೇಲೆ ಕೇಂದ್ರ ಸರ್ಕಾರದ್ದೇ ಅಧಿಕಾರ. ಚುನಾಯಿತ ಮುಖ್ಯಮಂತ್ರಿಗಿಂತ ಕೇಂದ್ರ ಸರ್ಕಾರ ನೇಮಿಸುವ ಲೆಫ್ಟಿನೆಂಟ್ ಗವರ್ನರ್ ಅವರೇ ಹೆಚ್ಚು ಶಕ್ತರು. ಸಂಪುಟದ ನೀತಿ ನಿರ್ಧಾರಗಳನ್ನು ತಡೆಹಿಡಿಯಬಲ್ಲಮತ್ತು ಬದಲಿಸಬಲ್ಲ ಅಧಿಕಾರ ಅವರದು. ಇತರೆ ಚುನಾಯಿತ ಸರ್ಕಾರಗಳಂತೆ ತನ್ನಿಚ್ಛೆಯ ಪ್ರಕಾರ ಕೆಲಸ ಮಾಡುವ ಸ್ವಾತಂತ್ರ್ಯ ದೆಹಲಿ ಸರ್ಕಾರಕ್ಕೆ ಇಲ್ಲ. ಅದೊಂದು ನಗರ ರಾಜ್ಯ. ವೈಭವೀಕೃತ ಮುನಿಸಿಪಾಲಿಟಿ. ಸಾರಾಂಶದಲ್ಲಿ ಹೇಳುವುದಾದರೆ ದೆಹಲಿ ಸರ್ಕಾರದ ಕೈಕಾಲು ಕಟ್ಟಿ ಹಾಕುವ ಶಕ್ತಿ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಉಂಟು. ಇಂತಹ ಅಧಿಕಾರ, ಜನತಂತ್ರ ವಿರೋಧಿ ಎಂದು ಕೇಜ್ರಿವಾಲ್ ನೇತೃತ್ವದ ಸರ್ಕಾರ ಕೇಂದ್ರದ ವಿರುದ್ಧ ಕಾನೂನು ಸಮರ ಸಾರಿದೆ. ದೆಹಲಿ ಸರ್ಕಾರದ ಅಧಿಕಾರದ ಆಳ ಅಗಲಗಳ ಕುರಿತು ಸಂವಿಧಾನದಲ್ಲಿ ಮಾಡಲಾಗಿರುವ ಪ್ರಸ್ತಾಪ ಕುರಿತು ಬಿಜೆಪಿ ಮತ್ತು ಆಪ್ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ನಡೆಸಿವೆ. ಸುಪ್ರೀಂ ಕೋರ್ಟ್ ತೀರ್ಪು ಹೇಳಬೇಕಿದೆ.

ತಮ್ಮಷ್ಟು ಎತ್ತರದಲ್ಲಿರುವವರು ಒಂದು ಅರ್ಧಂಬರ್ಧ ರಾಜ್ಯದ ಮುಖ್ಯಮಂತ್ರಿಯ ಮಾತುಗಳಿಗೆ ಪ್ರತಿಕ್ರಿಯಿಸುವುದು ತಮ್ಮ ಸ್ಥಾನಮಾನಕ್ಕೆ ತಕ್ಕುದಲ್ಲ ಎಂಬುದು ಮೋದಿಯವರ ನಂಬಿಕೆ. ಹೀಗಾಗಿ ಅವರು ಆ ಕೆಲಸವನ್ನು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಬಿಟ್ಟುಬಿಡುತ್ತಾರೆ. ಜೊತೆ ಜೊತೆಗೆ ಮುಖ್ಯಮಂತ್ರಿ ಕಚೇರಿಯ ಮೇಲೆ ಸತತ ಸಿಬಿಐ ದಾಳಿಗಳು ನಡೆಯುತ್ತವೆ. 67 ಮಂದಿ ಆಪ್ ಶಾಸಕರ ಪೈಕಿ 13ಮಂದಿಯನ್ನು ಫೋರ್ಜರಿ, ಸುಲಿಗೆ, ಅತ್ಯಾಚಾರದಂತಹ ಗಂಭೀರ ಆಪಾದನೆಗಳಡಿ ದೆಹಲಿ ಪೊಲೀಸರು ಬಂಧಿಸುತ್ತಾರೆ. ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿಯ ಪೊಲೀಸ್ ಆಯುಕ್ತರು ಕೇಂದ್ರದ ಕೈಗೊಂಬೆಗಳಂತೆ ವರ್ತಿಸುತ್ತಾರೆ. ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಕೂಡ ದೆಹಲಿ ಸರ್ಕಾರದೊಡನೆ ಅಸಹಕಾರದ ಪರ್ವವೇ ಆರಂಭ ಆಗುತ್ತದೆ. ಅನನುಭವಿ ಕೇಜ್ರಿವಾಲ್ ನೇತೃತ್ವದ ಸರ್ಕಾರದ ಸಣ್ಣಪುಟ್ಟ ದೋಷಗಳಿಗೂ ಭೂತಕನ್ನಡಿ ಹಿಡಿಯಲಾಗುತ್ತದೆ. ತನ್ನ ಆಯ್ಕೆಯ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಸ್ವಾತಂತ್ರವನ್ನೂ ದೆಹಲಿ ಸರ್ಕಾರಕ್ಕೆ ನಿರಾಕರಿಸಲಾಗುತ್ತದೆ.

ಕೇಂದ್ರದಲ್ಲಿ ಮೋದಿಯವರನ್ನು ಬಯಸಿದ ಅದೇ ಮತದಾರರು ದೆಹಲಿಯಲ್ಲಿ ಕೇಜ್ರಿವಾಲ್ ಅವರನ್ನು ಆರಿಸಿದ್ದು ಇತ್ತೀಚಿನ ಇತಿಹಾಸ. ಈ ಮತದಾರರನ್ನು ಒಲಿಸಿಕೊಳ್ಳಲು ಮೋದಿಯವರ ಪಾಕಿಸ್ತಾನ ನೀತಿಯನ್ನು ಕಟು ಟೀಕೆಗೆ ಗುರಿಪಡಿಸಿದ್ದಾರೆ ಕೇಜ್ರಿವಾಲ್‌. ಕಾಂಗ್ರೆಸ್ ಪಾರಿವಾಳದಂತೆ ಪ್ರತಿಕ್ರಿಯಿಸಿದರೆ, ಕೇಜ್ರಿವಾಲ್ ಗಿಡುಗನಂತೆ ಎರಗಲು ಹಿಂಜರಿದಿಲ್ಲ. ‘ಕಡುರಾಷ್ಟ್ರೀಯತೆಯ ನಿಮ್ಮ ನಿರೀಕ್ಷೆಯನ್ನು ಮೋದಿ ಹುಸಿಗೊಳಿಸಿದ್ದಾರೆ. ಅವರ ಅನಿರೀಕ್ಷಿತ ಪಾಕಿಸ್ತಾನ ಭೇಟಿಗಳು ಮತ್ತು ಪಠಾಣ್ ಕೋಟ್ ವಾಯನೆಲೆ ದಾಳಿಯ ತನಿಖೆಗೆ ಐ.ಎಸ್.ಐ.ಯನ್ನು ಭಾರತಕ್ಕೆ ಆಹ್ವಾನಿಸಿದ್ದೇ ಈ ಮಾತಿಗೆ ಸಾಕ್ಷಿ. ನವಾಜ್ ಷರೀಫ್ ಮತ್ತು ಮೋದಿ ನಡುವೆ ಒಳಒಪ್ಪಂದ ಆದಂತಿದೆ. ಅದೇನೆಂದು ಬಹಿರಂಗ ಮಾಡಬೇಕು’ ಎಂದರು. ಕೇಜ್ರಿವಾಲ್ ಸಂಪುಟದ ಸಹೋ
ದ್ಯೋಗಿಯೊಬ್ಬರು ಇನ್ನೂ ಮುಂದೆ ಹೋಗಿ ಮೋದಿಯವರನ್ನು ಐ.ಎಸ್.ಐ. ಏಜೆಂಟ್ ಎಂದು ಕರೆದಿದ್ದರು. ಪಾಕಿಸ್ತಾನ ಕುರಿತ ತಮ್ಮ ಗಿಡುಗ ನೀತಿಯಿಂದ ಎಡಪಂಥೀಯರು, ಉದಾರವಾದಿಗಳು ದೂರವಾಗಬಹುದು ಎಂಬ ಅಂದಾಜು ಅವರಿಗೆ ಉಂಟು. ಹೀಗಾಗಿ ಕೂಡಲೇ ಸಂಘ ಪರಿವಾರದ ಮೇಲೆ ದಾಳಿ ನಡೆಸಿ ಸರಿದೂಗಿಸಲು ಮುಂದಾಗುತ್ತಾರೆ- ‘ಭಾರತ ಅಂದರೆ ಮೋದಿ ಅಲ್ಲ, ಆರೆಸ್ಸೆಸೇ ಸಂಸತ್ ಅಲ್ಲ, ಮನುಸ್ಮೃತಿಯು ಸಂವಿಧಾನವೂ ಅಲ್ಲ... ಅವರು ಸಾವರ್ಕರ್‌ರನ್ನು ಬೋಧಿಸಲಿ, ನಾವು ಅಂಬೇಡ್ಕರ್ ತತ್ವವನ್ನು ಹೇಳಿಕೊಡುತ್ತೇವೆ’.

ಯುಪಿಎ ಸರ್ಕಾರ ವಿನಾಕಾರಣವಾಗಿ ತಮ್ಮ ಮೇಲೆ ದಾಳಿ ನಡೆಸಿದೆಯೆಂದು ಮತದಾರರನ್ನು 2014ರಲ್ಲಿ ಯಶಸ್ವಿಯಾಗಿ ನಂಬಿಸಿದ್ದರು ಮೋದಿ. ತಾವು ಪ್ರಯೋಗಿಸಿದ ಈ ತಂತ್ರವನ್ನು ಮತ್ತೊಬ್ಬರು ತಮ್ಮ ಮೇಲೆ ಪ್ರಯೋಗಿಸಬಹುದು ಎಂಬ ಅಂದಾಜು ಅವರಿಗೆ ಇದ್ದಂತೆ ತೋರುತ್ತಿಲ್ಲ. ರಾಹುಲ್ ಗಾಂಧಿಯಷ್ಟು ಭೋಳೆಯಲ್ಲ ಕೇಜ್ರಿವಾಲ್. ಮೋದಿಯವರಷ್ಟೇ ಪರಿಣಾಮಕಾರಿಯಾಗಿ ಜನಸಮೂಹದೊಂದಿಗೆ ಸಂವಾದ ನಡೆಸಬಲ್ಲ ಪ್ರತಿಭೆಯುಳ್ಳವರು. ಹೊಸ ನುಡಿಗಟ್ಟಿನ ರಾಜಕಾರಣವನ್ನು ಹುಟ್ಟಿಹಾಕುವ ಸಾಮರ್ಥ್ಯ ಉಳ್ಳವರು. ಇವರ ಅಧ್ಯಾಯ ಮುಗಿಯಿತೆಂದು ರಾಜಕಾರಣದಲ್ಲಿ ಅಷ್ಟು ಸಲೀಸಾಗಿ ಯಾರದೇ ‘ನಿಧನವಾರ್ತೆ’ಯನ್ನು ಬರೆಯಲು ಬರುವುದಿಲ್ಲ. ಇತರೆ ಹೇಮಾಹೇಮಿ ತಲೆಯಾಳುಗಳಿಗೆ ಹೋಲಿಸಿದರೆ ಮುಪ್ಪಿನಿಂದ ಇನ್ನೂ ಬಲು ದೂರವಿದ್ದಾರೆ. ರಾಜಕಾರಣದಲ್ಲಿ ಬಹು ದೂರದ ಇನಿಂಗ್ಸ್ ಅವರ ಮುಂದಿದೆ. ಮೋದಿ ತಮ್ಮನ್ನು ವಿನಾಕಾರಣತುಳಿಯುತ್ತಿದ್ದಾರೆ, ಚುನಾವಣಾ ಸೋಲಿನ ಕಡು ದ್ವೇಷದ ಕಹಿ ಕಾರುತ್ತಿದ್ದಾರೆ ಎಂಬುದಾಗಿ ಕೇಜ್ರಿವಾಲ್ ಕೂಡ ಜನರನ್ನು ನಂಬಿಸಬಲ್ಲರು ಎಂಬುದನ್ನು ಮೋದಿಯವರು ಮನಗಾಣಬೇಕಿದೆ.

ಮೋದಿಯವರಂತೆಯೇ ಜನರ ಅಪಾರ ನಿರೀಕ್ಷೆಯ ಬೆಟ್ಟಗಳಡಿ ಕೇಜ್ರಿವಾಲ್ ಕೂಡ ಕುಸಿದಿರುವುದು ಹೌದು. ಹಾಗೆ ನೋಡಿದರೆ ಕೇಜ್ರಿವಾಲ್ ನೇತೃತ್ವದ ಸರ್ಕಾರದ ಸಾಧನೆ ಕಳಪೆಯೇನೂ ಅಲ್ಲ. ಆದರೆ ತನ್ನ ಎಲ್ಲ ವೈಫಲ್ಯಗಳಿಗೂ ಮೋದಿ ಮತ್ತು ಕೇಂದ್ರ ಸರ್ಕಾರವೇ ಕಾರಣ ಎಂದು ಹಳಿದು ಕೈ ಚೆಲ್ಲಿದರೆ ಮತದಾರರು ಮರುಳಾಗಿಬಿಡುವುದಿಲ್ಲ. ಈ ಅಂಶ ಕೇಜ್ರಿವಾಲ್‌ ಅವರಿಗೆ ತಡವಾಗಿಯಾದರೂ ಅರ್ಥವಾಗಿದೆ. ಇತ್ತೀಚೆಗೆ ಮೋದಿ ಮೇಲೆ ನೇರ ಆಕ್ರಮಣ ಮಾಡುವುದನ್ನು ಅವರು ಕೈಬಿಟ್ಟಿದ್ದಾರೆ. ಬದಲಿಗೆ ಜನರೊಡನೆ ಬೆರೆತು ಅವರ ಮನ ಅರಿಯುವ ತಮ್ಮ ಹಳೆಯ ವಿಧಾನಕ್ಕೆ ಮರಳಿದ್ದಾರೆ. ಹೀಗಾಗಿಯೇ ನಾಲ್ಕು ತಿಂಗಳ ಹಿಂದೆ ದೆಹಲಿ ಉಪಚುನಾವಣೆಯೊಂದನ್ನು ಆಪ್ ಪುನಃ ಗೆದ್ದಿತು. ಪಂಜಾಬಿನಲ್ಲಿ ಗೆಲ್ಲಬೇಕಾದ ಚುನಾವಣೆಯನ್ನು ಸೋತದ್ದು, ಗೋವಾದಲ್ಲಿ ದವಡೆ ಮುರಿಸಿಕೊಂಡದ್ದು, ದೆಹಲಿಯ ಮೂರು ಮಹಾನಗರಪಾಲಿಕೆಗಳ ಪೈಕಿ ಒಂದನ್ನೂ ಗೆಲ್ಲದೆ ಹೋದ ಸೋಲಿನ ಸುಳಿಯ ನಂತರ ದಕ್ಕಿದ್ದು ದೆಹಲಿಯ ಬವಾನಾ ವಿಧಾನಸಭಾ ಉಪಚುನಾವಣೆಯ ಗೆಲುವು. ಆದರೆ ಬವಾನಾ ದೆಹಲಿಯನ್ನು ಪ್ರತಿನಿಧಿಸುವ ಕ್ಷೇತ್ರವಲ್ಲ. ಯಾಕೆಂದರೆ ದೆಹಲಿಯ 70 ಕ್ಷೇತ್ರಗಳ ಪೈಕಿ ಆರ್ಧಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಮಧ್ಯಮವರ್ಗದ ಮತದಾರರು ಬವಾನಾದಲ್ಲಿ ಇಲ್ಲ. ಇಲ್ಲಿನ ಬಹುಪಾಲು ಮತದಾರರು ಕೊಳೆಗೇರಿಗಳು ಮತ್ತು ಅನಧಿಕೃತ ಕಾಲನಿಗಳ ನಿವಾಸಿಗಳು.

ಜನಪರ ಚಳವಳಿಯ ಹಿನ್ನೆಲೆಯಿಂದ ಬಂದ ಅರವಿಂದರಂತಹ ಅಪ್ಪಟ ಜನತಂತ್ರವಾದಿಯ ಆಳದ ಕತ್ತಲ ಮೂಲೆಯಲ್ಲೊಬ್ಬ ಸರ್ವಾಧಿಕಾರಿ ಮೊದಲೇ ಅಡಗಿ ಕುಳಿತಿದ್ದಾನೆ. ಪಕ್ಷದ ಒಳಗೆ ಹೊರಗೆ ತನಗೆ ಇದಿರಾಗಿ ನಿಂತವರನ್ನು ನಿರ್ದಯವಾಗಿ ತುಳಿಯತೊಡಗಿದ್ದಾನೆ. ಈ ವಿಕಾರ ವಿಕೃತಿಗಳಿಗೆ ಆಮ್ ಆದ್ಮಿ ಪಾರ್ಟಿಯ ನಿಸ್ವಾರ್ಥಿ ಕಾರ್ಯಕರ್ತರ ಸೇನೆ, ಒಳಗೇ ಹಿಗ್ಗಿದ್ದ ಹಿತೈಷಿಗಳು-ಬೆಂಬಲಿಗ ಬಳಗ ಬೆಚ್ಚಿ ಬಿದ್ದಿದೆ. ಭ್ರಮನಿರಸನಕ್ಕೆ ಜಾರಿದೆ. ಅವನನ್ನು ಗೆಲ್ಲುವ ಸೂಚನೆಗಳನ್ನು ಕೇಜ್ರಿವಾಲ್‌ ಈವರೆಗೆ ತೋರಿಲ್ಲ.

ತುಳಿಯುವ ದಾರಿ ಕೂಡ ಸಾಧಿಸಬೇಕಾದ ಗುರಿಯಷ್ಟೇಮುಖ್ಯವಾದದ್ದು ಎಂದ ಪ್ರಶಾಂತ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರನ್ನು ಹೀನಾಯವಾಗಿ ಹೊರ ಹಾಕಿದ್ದು ಯಾಕೆಂದು ಕೇಜ್ರಿವಾಲ್ ಇನ್ನೂ ಮನದಟ್ಟು ಮಾಡಿಕೊಟ್ಟಿಲ್ಲ. ಮೇಧಾ ಪಾಟ್ಕರ್ ಅವರಂತಹ ಜನಪರ ಚೈತನ್ಯವೇ
ಈ ನಡೆಗೆ ಬೇಸತ್ತು ಪಕ್ಷದಿಂದ ಹೊರ ನಡೆದದ್ದು ಅಧಃಪತನಕ್ಕೆ ಹಿಡಿದ ಕೈಮರ. ಪಕ್ಷಕ್ಕೆ ಐದು ವರ್ಷ ತುಂಬಿರುವ ಈ ಹೊತ್ತಿನಲ್ಲಿ ಆತ್ಮಶೋಧನೆ ಮಾಡಿಕೊಳ್ಳದಿದ್ದರೆ ಕೈಯಾರೆ ಭವಿಷ್ಯವನ್ನು ನಿರಾಕರಿಸಲಿದ್ದಾರೆ ಕೇಜ್ರಿವಾಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT