ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆ ಬಂದ ಸಂದರ್ಭವನ್ನು ಚೆಲ್ಲುತ್ತಿರುವ ಕಾಂಗ್ರೆಸ್

Last Updated 18 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಾವು ದೇಶದಲ್ಲಿ ವಿಚಿತ್ರ ರಾಜಕೀಯ ಸಂದರ್ಭವೊಂದನ್ನು ಕಾಣುತ್ತಿದ್ದೇವೆ. ಎರಡೂವರೆ ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ತೊಂದರೆಯಲ್ಲಿದೆ ಎಂಬುದು ಒಂದೆಡೆ ಭಾಸವಾಗುತ್ತಿದೆ. ಇನ್ನೊಂದೆಡೆ, ಸನ್ನಿವೇಶವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಅಥವಾ ದೇಶದ ಬಹುಜನರ ಭಾವನೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯ, ಶಕ್ತಿ ವಿರೋಧ ಪಕ್ಷಕ್ಕೆ ಇಲ್ಲ ಎಂಬ ಭಾವನೆಯೂ ಇದೆ.

ಇಲ್ಲಿ ಚರ್ಚಿಸುತ್ತಿರುವುದು ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಕ್ರಮವಲ್ಲದೆ ಬೇರೇನೂ ಅಲ್ಲ. ನೋಟು ರದ್ದತಿ ಆದೇಶ ಆಗಿ ಎರಡನೆಯ ತಿಂಗಳ ಉತ್ತರಾರ್ಧ ಆರಂಭವಾಗುತ್ತಿದೆ. ಬ್ಯಾಂಕುಗಳಿಗೆ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಹಣದ ಪೂರೈಕೆ ಆಗುತ್ತಿಲ್ಲ, ಎಟಿಎಂ ಯಂತ್ರಗಳಲ್ಲಿ ಕೂಡ ಅಗತ್ಯ ಪ್ರಮಾಣದಲ್ಲಿ ಹಣ ಸಿಗುತ್ತಿಲ್ಲ. ಆದರೆ ಇವುಗಳಿಗಿಂತ ಮುಖ್ಯವಾಗಿ, ದೇಶದಲ್ಲಿ ಚಲಾವಣೆಯಲ್ಲಿದ್ದ ಬಹುಪಾಲು ನೋಟುಗಳನ್ನು ರದ್ದು ಮಾಡಿದ ಆರಂಭದಲ್ಲಿ ಉಂಟಾದ ಆಘಾತ ಅರ್ಥವ್ಯವಸ್ಥೆಯಲ್ಲಿ ಇಂದಿಗೂ ಕಾಣಿಸುತ್ತಿದೆ. ಅರ್ಥ ವ್ಯವಸ್ಥೆಗೆ ತೊಂದರೆ ಆಗುವಂತಹ ಕ್ರಮ ಕೈಗೊಂಡಾಗಿದೆ. ಆದರೆ ಅಸ್ಥಿರತೆಯನ್ನು ನಿಭಾಯಿಸಲು ಬೇಕಿರುವ ನಿಯಂತ್ರಣ ವ್ಯವಸ್ಥೆ ಇರುವಂತೆ ಕಾಣುತ್ತಿಲ್ಲ.

ನೋಟು ರದ್ದತಿ ಆದೇಶ ಹೊರಡಿಸಿದ ಒಂದು ವಾರದ ನಂತರ, ಪರಿಸ್ಥಿತಿಯನ್ನು ಮೊದಲಿನಂತೆ ಮಾಡಲು ಸಾಧ್ಯವಾಗುತ್ತಿತ್ತೇನೋ. ನೋಟು ರದ್ದತಿ ಕ್ರಮ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ಆರಂಭವಾದ ಹೊತ್ತಿನಲ್ಲಿ, ರದ್ದಾದ ಹಳೆಯ ನೋಟುಗಳು ಇನ್ನೂ ಜನರ ಕೈಯಲ್ಲೇ ಇದ್ದವು.

ಆದರೆ, ಆ ಕಾಲ ಈಗ ಸರಿದುಹೋಗಿದೆ. ಭೌತಿಕವಾಗಿಯೂ ಹಣ ಮಾಯವಾಗಿದೆ. ಅದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಥವಾ ಇತರ ಬ್ಯಾಂಕುಗಳ ಪೆಟ್ಟಿಗೆ ಸೇರಿದೆ. ಆದರೆ, ಅಗತ್ಯ ಪ್ರಮಾಣದ ಹೊಸ ನೋಟುಗಳು ಚಲಾವಣೆಗೆ ಬಂದಿಲ್ಲ. ವ್ಯವಸ್ಥೆ ಸ್ಥಿರವಾಗಲು ಇನ್ನೂ ಒಂದು ತಿಂಗಳು, ಅಂದರೆ ಜನವರಿ ಮಧ್ಯ ಭಾಗದವರೆಗೆ ಕಾಲಾವಕಾಶ ಬೇಕು ಎಂದು ಸರ್ಕಾರ ಹೇಳುತ್ತಿದೆ.

ಇದನ್ನು ಸತ್ಯವೆಂದು ಭಾವಿಸಿದರೂ, ನೋಟುಗಳನ್ನು ಮುದ್ರಿಸಿದ ಮಾತ್ರಕ್ಕೆ ಅವು ಅರ್ಥ ವ್ಯವಸ್ಥೆಯಲ್ಲಿ ಚಲಾವಣೆಗೆ ಬರುತ್ತವೆ ಎಂದು ಹೇಳಲಾಗದು. ವ್ಯವಸ್ಥೆಯ ಆದಿಯಿಂದ ಅಂತ್ಯದವರೆಗೆ ಹಣದ ಹಂಚಿಕೆ ಆಗಬೇಕು. ಅದು ಆಗಲು ಎಷ್ಟು ಸಮಯ ಬೇಕು ಎಂಬುದರ ನೈಜ ಲೆಕ್ಕಾಚಾರ ಯಾರ ಬಳಿಯೂ ಇಲ್ಲ.

‘ನೋಟು ರದ್ದತಿಯಿಂದ ತುಸು ತೊಂದರೆ ಆಗುತ್ತದೆ’ ಎಂದು ಭಾಷಣಗಳಲ್ಲಿ ಹೇಳಿದ್ದ ಪ್ರಧಾನಿಯವರೂ ಸೇರಿದಂತೆ ಕೆಲವರು ಇನ್ನು ಮುಂದೆ ಯಾವುದೇ ತೊಂದರೆ ಆಗಲಿಕ್ಕಿಲ್ಲ ಎಂದು ನಂಬಿದ್ದಾರೆ. ಇಂಥದ್ದೊಂದು ಸಂದರ್ಭವನ್ನು, ರಾಜಕೀಯ ಪರಿಸ್ಥಿತಿಯನ್ನು ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಯಾವುದೇ ವಿರೋಧ ಪಕ್ಷ ಬಳಸಿಕೊಳ್ಳಬೇಕಿತ್ತು. ಅರ್ಥ ವ್ಯವಸ್ಥೆಯ ವೇಗಕ್ಕೆ ಕಡಿವಾಣ ಹಾಕುವ ಉದ್ದೇಶಪೂರ್ವಕ ಕೃತ್ಯ, ಕೋಟ್ಯಂತರ ಜನರಿಗೆ ತಿಂಗಳುಗಳ ಕಾಲ ಪ್ರತಿದಿನ ತೊಂದರೆ ಕೊಡುವ ಕ್ರಮವನ್ನು ಪ್ರತಿಪಕ್ಷ ತನ್ನ ಪಾಲಿಗೆ ಸಿಕ್ಕ ಕೊಡುಗೆ ಎಂದು ಭಾವಿಸುತ್ತದೆ.

ನೋಟು ರದ್ದತಿಯ ಮೊದಲ ಎರಡು ವಾರಗಳಲ್ಲಿ ಸರ್ಕಾರ ಪರಿಸ್ಥಿತಿಯ ಪ್ರಯೋಜನ ಪಡೆದುಕೊಂಡಿತು. ಆ ಹೊತ್ತಿನಲ್ಲಿ ಮಾಧ್ಯಮಗಳು ಕೂಡ ನೋಟು ರದ್ದತಿಯ ಪರವಾಗಿ ಇದ್ದವು. ದೇಶಕ್ಕಾಗಿ, ಭಯೋತ್ಪಾದನೆ ಹಾಗೂ ಕಪ್ಪುಹಣದ ನಿಯಂತ್ರಣಕ್ಕಾಗಿ ಜನ ಸರತಿ ಸಾಲಿನಲ್ಲಿ ಖುಷಿಯಿಂದ ನಿಂತಿದ್ದಾರೆ ಎಂದು ತೋರಿಸಲಾಯಿತು. ‘ನೋಟು ರದ್ದತಿ ಕ್ರಮವನ್ನು ಬೆಂಬಲಿಸುತ್ತೇವೆ. ಆದರೆ, ಪರಿಸ್ಥಿತಿಯನ್ನು ಸರ್ಕಾರ ಸರಿಯಾಗಿ ನಿಭಾಯಿಸಬೇಕು. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಕಾಂಗ್ರೆಸ್ ಹೇಳಿತು.

ಇದು ಆತ್ಮವಿಶ್ವಾಸದ ಕೊರತೆಯನ್ನು, ಮುಂದೇನು ಆಗಲಿದೆ ಎಂಬುದನ್ನು ಅಂದಾಜಿಸುವಲ್ಲಿ ಎಡವಿರುವುದನ್ನು ತೋರಿಸಿತು. ಪರಿಸ್ಥಿತಿ ಹೀಗಾಗಬಹುದು ಎಂಬುದು ತಜ್ಞರೂ ಸೇರಿದಂತೆ ಹಲವರಿಗೆ ಗೊತ್ತಿರಲಿಲ್ಲ ಎಂದು ಹೇಳಬಹುದು. ರಾಜ್ಯ ಮತ್ತು ಕೇಂದ್ರದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದ ಅನುಭವ ಕಾಂಗ್ರೆಸ್ಸಿಗೆ ಇದೆ. ಹಾಗಾಗಿ ಮುಂದೇನು ಆಗಬಹುದು ಎಂಬುದನ್ನು ಊಹಿಸಲು ಬೇಕಿರುವ ಮಾಹಿತಿ ಕಾಂಗ್ರೆಸ್ ಬಳಿ ಇದೆ. ಇಲ್ಲ ಎಂದರೆ ಅದು ಆ ಪಕ್ಷದ ಅಸಾಮರ್ಥ್ಯವನ್ನು ತೋರಿಸುತ್ತದೆ.

ನೋಟು ರದ್ದತಿ ಕ್ರಮವನ್ನು ಆರಂಭದಿಂದಲೂ ವಿರೋಧಿಸಿದವರು ತಳಮಟ್ಟದ ನಾಯಕರಾದ ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್. ಅಪಾಯಗಳನ್ನು ಪರಿಗಣಿಸದೆ ಕೈಗೊಂಡ ಕ್ರಮ ಇದು, ಈ ಕ್ರಮಕ್ಕೆ ದೊರೆತಿರುವ ಜನಬೆಂಬಲ ಕ್ರಮೇಣ ಕಡಿಮೆ ಆಗುತ್ತದೆ ಎಂಬುದು ಬಹುಶಃ ಇವರಿಬ್ಬರಿಗೆ ತಿಳಿದಿತ್ತು. ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದಾಗ, ನೋಟು ರದ್ದತಿಯ ಉದ್ದೇಶ ಕಪ್ಪುಹಣದ ಕಡಿವಾಣಕ್ಕಿಂತ ಹೆಚ್ಚಾಗಿ ಡಿಜಿಟಲ್ ಅರ್ಥವ್ಯವಸ್ಥೆ ರೂಪಿಸುವುದರ ಕಡೆ ಹೊರಳಿದಂತೆಲ್ಲ ಸರ್ಕಾರದ ಕ್ರಮದ ಬಗ್ಗೆ ಜನರಲ್ಲಿ ಇದ್ದ ಉತ್ಸಾಹ ಕುಗ್ಗಲು ಆರಂಭವಾಯಿತು.

ಈ ವಿದ್ಯಮಾನವು ಕಾಂಗ್ರೆಸ್ಸಿನ, ಅದರಲ್ಲೂ ಮುಖ್ಯವಾಗಿ ಆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ನೋಟು ರದ್ದತಿಯ ಸಮಸ್ಯೆಗಳನ್ನು ಅಕ್ಷರಗಳಲ್ಲಿ ಹಿಡಿದಿಡುವ ತಮ್ಮದೇ ಆದ ಹೊಸ ಘೋಷಣೆಗಳನ್ನು ಸೃಷ್ಟಿಸಲು ಅವರಿಗೆ ಆಗಿಲ್ಲ. ಬಹುಜನರ ಬೆಂಬಲದ ಆಧಾರದಲ್ಲಿ ರಾಜಕೀಯ ಮಾಡಬೇಕು ಎಂದಿದ್ದರೆ, ಜನಪ್ರಿಯ ಘೋಷಣೆಗಳು ಬೇಕಾಗುತ್ತವೆ.

ಇಂಥ ಘೋಷಣೆಗಳನ್ನು ಬ್ರಿಟಿಷರ ವಿರುದ್ಧ ರೂಪಿಸುವುದರಲ್ಲಿ ಮಹಾತ್ಮ ಗಾಂಧಿ ಸಿದ್ಧಹಸ್ತರಾಗಿದ್ದರು. ಅದೇ ರೀತಿ, ನಮ್ಮ ಕಾಲದ ಅತ್ಯಂತ ಪ್ರತಿಭಾವಂತ ರಾಜಕಾರಣಿ, ಪ್ರಧಾನಿ ಮೋದಿ ಕೂಡ ಇಂಥ ಕೆಲಸ ಮಾಡಬಲ್ಲರು. ಆದರೆ, ಇಂಥ ಸಾಮರ್ಥ್ಯ ಕಾಂಗ್ರೆಸ್ಸಿಗೆ ಇಲ್ಲ. ಅದು ಗೊಂದಲಕ್ಕೆ ಈಡಾದಂತೆ ವರ್ತಿಸುತ್ತಿದೆ. ಅತ್ಯಂತ ಅಮೂಲ್ಯವಾದ ರಾಜಕೀಯ ಪರಿಸ್ಥಿತಿ ಕೈಯಲ್ಲಿದ್ದರೂ, ಅದನ್ನು ಬಳಸಿ ಏನು ಮಾಡಬೇಕು ಎಂಬುದು ಆ ಪಕ್ಷಕ್ಕೆ ಗೊತ್ತಾಗುತ್ತಿಲ್ಲ.

ಈ ಬಿಕ್ಕಟ್ಟನ್ನು ರಾಹುಲ್ ಅವರು ನಿಭಾಯಿಸಿದ ರೀತಿಗೆ ಅರ್ಥವೇ ಇಲ್ಲ. ರಾಹುಲ್ ಅವರು ಆರಂಭದಲ್ಲಿ ಯಾವುದೇ ತೀರ್ಮಾನಕ್ಕೆ ಬದ್ಧರಾಗಿರಲಿಲ್ಲ. ನಂತರ ಕಾಂಗ್ರೆಸ್ಸಿನ ಏಕಪಕ್ಷೀಯ ನಿರ್ಧಾರದ ಮೂಲಕ ವಿರೋಧ ಪಕ್ಷಗಳ ಒಗ್ಗಟ್ಟನ್ನು ಮುರಿದರು. ಪ್ರಧಾನಿಯವರು ವೈಯಕ್ತಿಕವಾಗಿ ಭಾಗಿಯಾಗಿರುವ ಭ್ರಷ್ಟಾಚಾರವೊಂದನ್ನು ಬಯಲಿಗೆಳೆಯುವುದಾಗಿ ಎಚ್ಚರಿಸಿದ ರಾಹುಲ್, ನಂತರ ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ ವಿಷಯಾಂತರ ಮಾಡಿ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ರಾಹುಲ್ ಅವರ ನಡೆಗಳಲ್ಲಿ ಶಿಸ್ತು, ಕಾರ್ಯತಂತ್ರ ಇದ್ದಂತೆ ಕಾಣುತ್ತಿಲ್ಲ. ಪ್ರಧಾನಿಯವರು ವೈಯಕ್ತಿಕವಾಗಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ನಂಬುವವರ ಸಂಖ್ಯೆ ತೀರಾ ಕಡಿಮೆ. ಹಾಗಾಗಿ ಅವರು ವೈಯಕ್ತಿಕ ಮಟ್ಟದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪವನ್ನು ‘ಹೀಗೇ ಸುಮ್ಮನೆ’ ಎಂಬಂತೆ ಮಾಡಬಾರದಿತ್ತು. ಆದರೂ ರಾಹುಲ್ ಅದೇ ಬಗೆಯಲ್ಲಿ ಆರೋಪ ಹೊರಿಸಿದಂತಿದೆ.

ನಾವು ಈಗ ಈ ಸರ್ಕಾರ ತಾನಾಗಿಯೇ ಸೃಷ್ಟಿಸಿಕೊಂಡಿರುವ ಅತಿದೊಡ್ಡ ಬಿಕ್ಕಟ್ಟಿನ ನಡುವೆ ನಿಂತಿದ್ದೇವೆ. ಈ ಬಿಕ್ಕಟ್ಟು ಪ್ರತಿ ನಾಗರಿಕನನ್ನು ತಟ್ಟುತ್ತದೆ. ನಾವು ಬದುಕುವ ರೀತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಬಿಕ್ಕಟ್ಟು ವ್ಯಕ್ತಿಗಳ ಮಟ್ಟದಲ್ಲಿ ಹೊಸ ವರ್ಷದ ಆರಂಭದ ಕೆಲವು ವಾರಗಳಲ್ಲಿಯೂ ಇರುತ್ತದೆ. ಅರ್ಥ ವ್ಯವಸ್ಥೆಯ ಮಟ್ಟದಲ್ಲಿ ಹೊಸ ವರ್ಷದ ಆರಂಭದ ಕೆಲವು ತಿಂಗಳುಗಳವರೆಗೆ ಮುಂದುವರಿಯುತ್ತದೆ.

ಈ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಕೆಟ್ಟ ರೀತಿಯಲ್ಲಿ ನಿಭಾಯಿಸುತ್ತಿದೆ. ಅದಕ್ಕಿಂತಲೂ ಕೆಟ್ಟದ್ದಾಗಿ ಇದನ್ನು ವಿರೋಧ ಪಕ್ಷ ನಿಭಾಯಿಸುತ್ತಿದೆ.
(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT