ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆಟುಕುವ ಅವಕಾಶ ಕಳೆದುಕೊಳ್ಳಬೇಡಿ

Last Updated 2 ಜುಲೈ 2017, 19:50 IST
ಅಕ್ಷರ ಗಾತ್ರ

ಪೇಟೆಯಲ್ಲಿ ಹೆಚ್ಚಿನ ಕಂಪೆನಿಗಳ ಷೇರಿನ ಬೆಲೆಗಳು  ಸದ್ಯಕ್ಕೆ ಗರಿಷ್ಠ ಮಟ್ಟದಲ್ಲಿ ಇವೆ.  ಷೇರಿನ ಬೆಲೆಗಳು ಪೂರ್ವ ನಿರ್ಧಾರಿತ ದಾರಿಯಲ್ಲಿ  ಸಾಗುವುದಿಲ್ಲ ಎಂಬುದನ್ನು ಗುರುವಾರ ರೇಟಿಂಗ್ ಕಂಪೆನಿ ಕೇರ್ ರೇಟಿಂಗ್ಸ್ ಷೇರಿನ ಬೆಲೆಯಲ್ಲಿ ಉಂಟಾದ ಬದಲಾವಣೆ ಪುಷ್ಟೀಕರಿಸುತ್ತದೆ.  ಅಂದು ದಿನದ ಆರಂಭದಲ್ಲಿ ಷೇರಿನ ಬೆಲೆಯು ₹1,426 ರಲ್ಲಿತ್ತು. ಆನಂತರ ದಿಢೀರನೆ  ₹1,660 ನ್ನು ತಲುಪಿ ನಂತರ ₹ 1,570ರ ಸಮೀಪಕ್ಕೆ ಕುಸಿಯಿತು. ಇಷ್ಟೆಲ್ಲಾ ಕೇವಲ ಸುಮಾರು 20 ನಿಮಿಷಗಳಲ್ಲಿ ಘಟಿಸಿತು. 

ಇದು ಪೇಟೆಯಲ್ಲಿನ ಬದಲಾವಣೆಯ ವೇಗಕ್ಕೆ ಹಿಡಿದ ಕನ್ನಡಿಯಾಗಿದೆ.  ಈ ಬೆಳವಣಿಗೆಯ ಹಿಂದೆ ಕೆನರಾ ಬ್ಯಾಂಕ್ ಸಂಸ್ಥೆ ತಾನು ಹೊಂದಿರುವ ಶೇ 8.9 ರ ಭಾಗಿತ್ವವನ್ನು ಪ್ರತಿ ಷೇರಿಗೆ ₹ 1,660 ರಂತೆ ಮತ್ತೊಂದು ರೇಟಿಂಗ್ ಸಂಸ್ಥೆ ಕ್ರಿಸಿಲ್‌ಗೆ ಮಾರಾಟ ಮಾಡಿದ ಪ್ರಭಾವವಾಗಿದೆ.  ಈ ಖರೀದಿಯಿಂದ ಕ್ರಿಸಿಲ್ ಕಂಪೆನಿಯು ಕೇರ್ ರೇಟಿಂಗ್ಸ್‌ನ ಪ್ರವರ್ತಕ ಕಂಪೆನಿಯಾಗಿ ಪರಿವರ್ತನೆಗೊಂಡಂತಾಗಿದೆ.  ಈ ಮಾರಾಟದಿಂದ ಕೆನರಾ ಬ್ಯಾಂಕ್‌ಗೆ ಸುಮಾರು ₹430 ಕೋಟಿ ಹಣ ಸಂಗ್ರಹಣೆಯಾಗುವ ಕಾರಣ ಬ್ಯಾಂಕ್‌ನ ಷೇರಿನ ಬೆಲೆಯು ₹326 ರ ಸಮೀಪದಿಂದ ₹338 ರವರೆಗೂ ಜಿಗಿತ ಕಂಡು ನಂತರ ₹332.65 ರಲ್ಲಿ ಕೊನೆಗೊಂಡಿತು.

ಕಳೆದ ಕೆಲವು ತಿಂಗಳಿಂದ ಸತತವಾದ ಇಳಿಕೆಯಿಂದ ಷೇರುದಾರರ ಬಂಡವಾಳ ಕರಗಿಸಿದ ವಿಡಿಯೊಕಾನ್ ಇಂಡಸ್ಟ್ರೀಸ್ ಷೇರಿನ ಬೆಲೆಯು  ಮಂಗಳವಾರ  ₹16.35 ರವರೆಗೂ  ಕುಸಿದು ಅಂದೇ ಚೇತರಿಕೆಯ ಹಾದಿ ಹಿಡಿದು ಗುರುವಾರ  ₹19.85ರ ಗರಿಷ್ಠ ಆವರಣ ಮಿತಿಯಲ್ಲಿತ್ತು.  ಸ್ವಲ್ಪ ಸಮಯದ ನಂತರ ಷೇರಿನ ಬೆಲೆಯು ₹18.50 ಕ್ಕೆ  ಕುಸಿಯಿತಾದರೂ ಅದೇ ವೇಗದಲ್ಲಿ ₹19.85 ರ ಗರಿಷ್ಠ ಆವರಣ ಮಿತಿಗೆ ಜಿಗಿದು ಅದೇ ದರದಲ್ಲಿ ಕೊನೆಗೊಂಡಿತು.  ₹20.80 ರಲ್ಲಿ ವಾರಾಂತ್ಯ ಕಂಡಿತು.

ಸರ್ಕಾರಿ ವಲಯದ ತೈಲ ಮಾರಾಟ ಸಂಸ್ಥೆಗಳು ಹೆಚ್ಚಿನ ಮಾರಾಟದ ಒತ್ತಡದಿಂದ ಭಾರಿ ಕುಸಿತಕ್ಕೊಳಗಾಗಿ ನಂತರ ಅದೇ ವೇಗದಲ್ಲಿ ಚೇತರಿಕೆ ಕಂಡಿವೆ.  ಇಂಡಿಯನ್ ಆಯಿಲ್ ಕಾರ್ಪೊರೇಷನ್  ಷೇರಿನ ಬೆಲೆಯು ₹376 ರವರೆಗೂ ಇಳಿಕೆ ಕಂಡು ನಂತರ ₹399 ರವರೆಗೂ ಜಿಗಿತ ಕಂಡು ₹387 ರ ಸಮೀಪ ವಾರಾಂತ್ಯ ಕಂಡಿತು. 
ಪ್ರತಿ ಎರಡು ಷೇರಿಗೆ ಒಂದು ಷೇರಿನಂತೆ ಬೋನಸ್ ಷೇರು ವಿತರಿಸಲಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ಗಳು ಸಹ ಹೆಚ್ಚಿನ ಕುಸಿತಕ್ಕೊಳಗಾಗಿ ನಂತರ ಅಲ್ಪ ಚೇತರಿಕೆ ಕಂಡುಕೊಂಡವು.

ಟಾಟಾ ಸ್ಟೀಲ್ ಲಿಮಿಟೆಡ್ ಶುಕ್ರವಾರ ₹547 ನ್ನು ತಲುಪಿ ವಾರ್ಷಿಕ ಗರಿಷ್ಠ ದಾಖಲಿಸಿದೆ. ಕಳೆದ ಒಂದು ತಿಂಗಳಲ್ಲಿ ಹಿಂದೂಸ್ತಾನ್ ಜಿಂಕ್ ಲಾಭಾಂಶ ವಿತರಣೆಯ ನಂತರ   ₹230 ರವರೆಗೂ ಕುಸಿದಿತ್ತು ,  ಈ ವಾರ  ಚೇತರಿಕೆಯಿಂದ ₹266 ನ್ನು ದಾಟಿ ಉತ್ತಮ ಲಾಭ ಗಳಿಕೆಯ ಅವಕಾಶ ಒದಗಿಸಿತು.

ಒಂದು ಕಂಪೆನಿಯ ಷೇರಿನ ಬೆಲೆಯಲ್ಲಿ ಕಂಡುಬರುವ ಏರಿಳಿತದ ಕಾರಣವನ್ನು ಮತ್ತೊಂದು ಕಂಪೆನಿಯ ಏರಿಳಿತಕ್ಕೆ ಹೋಲಿಸುವುದು ಸರಿಯಲ್ಲ.  ಒಂದೇ ಬೆಳವಣಿಗೆಗೆ ಕಂಪೆನಿಗಳು ವಿಭಿನ್ನ ರೀತಿಯ ಏರಿಳಿತ  ಪ್ರದರ್ಶಿಸುವುದು ಇತ್ತೀಚಿಗೆ ಸಾಮಾನ್ಯವಾಗಿದೆ.  ಒಂದು ಕಂಪೆನಿಯ ಷೇರುಗಳು ಪೇಟೆಯ ಆರಂಭಿಕ ಸಮಯದಲ್ಲಿ ನಡೆಯುವ ಗಜಗಾತ್ರದ ವಹಿವಾಟಿನಲ್ಲಿ ಏರಿಕೆ ಕಂಡರೆ ಮತ್ತೊಂದು ಇಳಿಕೆ ಕಾಣಲೂಬಹುದು.  ಈ ವಾರದಲ್ಲಿ ನಡೆದ ಗಜಗಾತ್ರದ ವಹಿವಾಟಿನಲ್ಲಿ ನವೀನ್ ಫ್ಲೋರಿನ್ ಇಂಟರ್ ನ್ಯಾಷನಲ್‌ನ 4.71ಲಕ್ಷ ಷೇರುಗಳನ್ನು ಅದೇ ಕಂಪೆನಿಯ ಸಮೂಹ ಸಂಸ್ಥೆ ನೋಸಿಲ್ ಲಿಮಿಟೆಡ್  ಪ್ರತಿ ಷೇರಿಗೆ ₹2,875 ರಂತೆ ಎಚ್‌ಎಸ್‌ಬಿಸಿ ಗ್ಲೋಬಲ್  ಇನ್‌ವೆಸ್ಟ್‌ ಮೆಂಟ್ ಫಂಡ್ಸ್ ಮತ್ತು ಗೋಲ್ಡ್ ಮ್ಯಾನ್ ಸ್ಯಾಕ್ಸ್ ಸಂಸ್ಥೆಗಳಿಗೆ ಮಾರಾಟ ಮಾಡಿವೆ. 

ಇಲ್ಲಿ ₹2,875 ದಿನದ ಕನಿಷ್ಠ ಬೆಲೆಯಾಗಿದ್ದು ಮುಂದಿನ ದಿನಗಳಲ್ಲಿ ಅದು ಏರಿಕೆ ಕಂಡು ₹3,120 ನ್ನು ದಾಟಿತ್ತು. ಆದರೆ ಗುರುವಾರ ಕೆನರಾ ಬ್ಯಾಂಕ್ ಸುಮಾರು ಶೇ8.9 ರ ಭಾಗಿತ್ವದ ಕೇರ್ ರೇಟಿಂಗ್ ಷೇರನ್ನು ₹1,660 ರಲ್ಲಿ ಮಾರಾಟ ಮಾಡಿರುವುದು ದಿನದ ಗರಿಷ್ಠ ಬೆಲೆಯಾಗಿತ್ತು. ಯಾವುದೇ ಬೆಳವಣಿಗೆಗೆ ಇದೇ ರೀತಿ ಏರಿಳಿತ ಕಾಣಬೇಕೆಂಬ ನಿರ್ದಿಷ್ಟವಾದ, ನಿಖರವಾದ ನಿಯಮವಿಲ್ಲ.  ಅದೆಲ್ಲವೂ ವಹಿವಾಟುದಾರರ ಚಿಂತನೆಗಳಿಗೆ ಅನುಗುಣವಾಗಿರುತ್ತದೆ.

ಆಂತರಿಕ ಸಾಧನೆಗಳು, ಬೆಳವಣಿಗೆಗಳು ಷೇರಿನ ಬೆಲೆಗಳಲ್ಲಿ  ಚುರುಕು ಮೂಡಿಸಲು ಬಹು ಸಹಕಾರಿ.  ಆದರೆ, ಈಚಿನ ದಿನಗಳಲ್ಲಿ ಷೇರಿನ ಬೆಲೆಗಳ ಏರಿಳಿತಕ್ಕೆ ಪೇಟೆಯಲ್ಲಿ ತೇಲಿಬಿಡಲಾಗುವ ಸುದ್ದಿಗಳೇ  ಹೆಚ್ಚು  ಪ್ರಭಾವಿಯಾಗಿವೆ.  ಗುರುವಾರ  ಏರ್ ಇಂಡಿಯಾ ಕಂಪೆನಿಯನ್ನು ಇಂಟರ್ ಗ್ಲೋಬಲ್ ಏವಿಯೇಷನ್ ಕಂಪೆನಿ ಕೊಳ್ಳಲಿದೆ ಎಂಬ ಸುದ್ದಿಯು ಷೇರಿನ ಬೆಲೆಯನ್ನು ಇಳಿಕೆಗೊಳಪಡಿಸಿ, ಶುಕ್ರವಾರವೂ ಇಳಿಕೆ ಮುಂದುವರೆದಿದೆ.  ಮತ್ತೊಂದು ಸುದ್ದಿ– ಭಾರತ್ ಫೈನಾನ್ಶಿಯಲ್ ಇನ್‌ಕ್ಯೂಷನ್ ಕಂಪೆನಿಯನ್ನು ಆರ್‌ಬಿಎಲ್ ಬ್ಯಾಂಕ್ ನಲ್ಲಿ ವಿಲೀನಗೊಳ್ಳಲಿದೆ ಎಂಬ ಸುದ್ದಿಯು ಈ ಎರಡು ಕಂಪೆನಿಗಳ ಷೇರುಗಳಲ್ಲಿ ಸ್ವಲ್ಪ ಚುರುಕಾದ ವಹಿವಾಟಿಗೆ ದಾರಿಮಾಡಿಕೊಟ್ಟಿತು.  ಆದರೆ ಈ ಸುದ್ದಿಯು ಕೆಲವು ದಿನಗಳ ಹಿಂದೆಯೂ ಚಾಲ್ತಿಯಲ್ಲಿದ್ದ ಕಾರಣ ಪರಿಣಾಮಕಾರಿಯಾಗುವ ರೀತಿಯಲ್ಲಿ ಬದಲಾವಣೆ ಕಂಡುಬರಲಿಲ್ಲ ಎಂಬುದು ಗಮನಾರ್ಹ ಸಂಗತಿ.
ಒಟ್ಟಾರೆ  ನಾಲ್ಕು ದಿನಗಳ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ, ಮೂಲಾಧಾರಿತ ಪೇಟೆಯ ಚುಕ್ತಾ ಚಕ್ರದ ವಾರದಲ್ಲಿ, 216 ಅಂಶಗಳ ಇಳಿಕೆ ಕಂಡರೆ,  ಮಧ್ಯಮ ಶ್ರೇಣಿಯ ಸೂಚ್ಯಂಕ 60 ಅಂಶಗಳ, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 29 ಅಂಶಗಳ ಏರಿಕೆ ಪಡೆದುಕೊಂಡಿವೆ. 

ಸ್ವದೇಶಿ ವಿತ್ತೀಯ ಸಂಸ್ಥೆಗಳು ₹1,816 ಕೋಟಿ ಮೌಲ್ಯದ ಷೇರು ಖರೀದಿಸಿದರೆ, ವಿದೇಶಿ ವಿತ್ತೀಯ ಸಂಸ್ಥೆಗಳು ₹1,478 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ.  ಪೇಟೆಯ ಬಂಡವಾಳ ಮೌಲ್ಯವು ₹125.96 ಲಕ್ಷ ಕೋಟಿಗಳಲ್ಲಿ ಸ್ಥಿರತೆ ಕಂಡಿತ್ತು.
ಬೋನಸ್ ಷೇರು:
* ಪ್ಲಾಸ್ಟಿ ಬ್ಲೆಂಡ್ಸ್ ಇಂಡಿಯಾ ಲಿ ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್  ಷೇರಿಗೆ ಜುಲೈ 4 ನಿಗದಿತ ದಿನ.
* ಮದರ್ ಸನ್ ಸುಮಿ ಸಿಸ್ಟಮ್ಸ್ ಲಿಮಿಟೆಡ್ ವಿತರಿಸಲಿರುವ 1:2 ರ ಅನುಪಾತದ ಬೋನಸ್ ಷೇರಿಗೆ ಜುಲೈ 7 ನಿಗದಿತ ದಿನ.
* ಸನವಾರಿಯಾ ಅಗ್ರೊ ಅಯಿಲ್ಸ್ ಲಿ. ಕಂಪೆನಿ ವಿತರಿಸಲಿರುವ 1:1 ಬೋನಸ್ ಷೇರಿಗೆ ಜುಲೈ 4 ನಿಗದಿತ ದಿನ.

ಹೊಸ ಷೇರು:
* ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ  ಕಂಟೇನರ್ ವೇ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪೆನಿಯ ಷೇರುಗಳು ಜೂನ್ 30 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.
* ಪ್ರತಿ ಷೇರಿಗೆ ₹603 ರಂತೆ  ಆರಂಭಿಕ ಷೇರು ವಿತರಣೆ ಮಾಡಿದ ಎರಿಕ್ ಲೈಫ್ ಸೈನ್ಸಸ್ ಲಿಮಿಟೆಡ್ ಕಂಪೆನಿ ಗುರುವಾರ  ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿ ಆರಂಭದ ದಿನ ₹627 ರ ಸಮೀಪದಿಂದ ₹592 ಕ್ಕೆ ಕುಸಿದು ₹600 ರಲ್ಲಿ ವಾರಾಂತ್ಯ ಕಂಡಿತು.
 ಕಂಪೆನಿಗಳ ಪುನರ್‌ ರಚನೆ: ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿನ ಫೈನಾನ್ಶಿಯಲ್  ವಿಭಾಗವನ್ನು ಕಂಪೆನಿಯಿಂದ ಬೇರ್ಪಡಿಸಿ  ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್‌ನಲ್ಲಿ ವಿಲೀನಗೊಳಿಸಲು ನ್ಯಾಷನಲ್ ಕಂಪೆನಿ ಟ್ರಿಬ್ಯೂನಲ್ ಸಮ್ಮತಿ ನೀಡಿದ ಕಾರಣ ಪ್ರತಿ ಐದು ಗ್ರಾಸಿಮ್ ಷೇರಿಗೆ 7ಆದಿತ್ಯ ಬಿರ್ಲಾ ಕ್ಯಾಪಿಟಲ್ ಷೇರುಗಳನ್ನು ನೀಡಲಿದೆ. ಇದಕ್ಕಾಗಿ ಜುಲೈ 20 ನಿಗದಿತ ದಿನವಾಗಿದೆ.

ವಾರದ ವಿಶೇಷ
2010 ರ ನವೆಂಬರ್ 4 ರಂದು ಸರ್ಕಾರಿ ವಲಯದ ನವರತ್ನ ಕಂಪೆನಿ ಕೋಲ್ ಇಂಡಿಯಾ ಕಂಪೆನಿಯ ಷೇರುಗಳು   ಷೇರು  ವಿನಿಮಯ  ಕೇಂದ್ರಗಳಲ್ಲಿ ವಹಿವಾಟಿಗೆ  ಬಿಡುಗಡೆಯಾದವು.  ಪ್ರತಿ ಷೇರಿಗೆ ₹245 ರಂತೆ ಆರಂಭಿಕ ಷೇರು ವಿತರಣೆ ಮಾಡಿದ್ದ ಈ ಕಂಪೆನಿಯ ಷೇರುಗಳು ಆರಂಭದ   ದಿನ ₹287.45ರಿಂದ ₹344.75 ರವರೆಗೂ ವಹಿವಾಟಾಗಿ ಅಂದು ಪ್ರಕಟವಾಗಿದ್ದ ವಿವಿಧ ವಿಶ್ಲೇಷಣೆಗಳನ್ನು ಸಮರ್ಥಿಸಿದ್ದುದು ಗಮನಾರ್ಹ ಅಂಶ. ಫೆಬ್ರುವರಿ 2014 ರವರೆಗೂ ವಿತರಣೆ ಬೆಲೆಗಿಂತ  ಹೆಚ್ಚಿನ ಬೆಲೆಯಲ್ಲಿ ವಹಿವಾಟಾಗುತ್ತಿದ್ದ  ಕಂಪೆನಿ ಷೇರು ಮೊದಲ ಬಾರಿಗೆ ವಿತರಣೆ ಬೆಲೆಗಿಂತ ಕಡಿಮೆ ಬೆಲೆಗೆ ಕುಸಿದಿತ್ತು. 

ಅಲ್ಲಿಂದ ಮೂರುವರ್ಷಗಳಲ್ಲಿ ಏರಿಕೆಯಿಂದ ವಿಜೃಂಭಿಸಿ ಮತ್ತೆ ವಿತರಣೆ ಬೆಲೆಗಿಂತ ಕಡಿಮೆ ಬೆಲೆಗೆ ಈಗ ಕುಸಿದಿದೆ.  2015 ರ ಆಗಸ್ಟ್ ತಿಂಗಳಲ್ಲಿ ಷೇರಿನ ಬೆಲೆಯೂ ₹447ರ ಸಮೀಪಕ್ಕೆ ತಲುಪಿತ್ತು.  ನಂತರದ ಸುಮಾರು ಎರಡುವರ್ಷಗಳಲ್ಲಿ ₹243 ರ ಸಮೀಪಕ್ಕೆ ಕುಸಿದಿದೆ. ಅಂದರೆ ಆರಂಭಿಕ ಷೇರು ವಿತರಣೆಯ ನಂತರ ಷೇರಿನ ಬೆಲೆಯು ವಿತರಣೆ ಬೆಲೆಗೆ ಸಮೀಪಕ್ಕೆ ಇಳಿದು ನಂತರ ಚಿಗುರಿಕೊಂಡಿದೆ.  ಅಂದರೆ ದೀರ್ಘಕಾಲೀನ ಹೂಡಿಕೆ ಎಂಬ ಭ್ರಮೆಯಲ್ಲಿ ಕೈಗೆಟುಕಿದ ಅವಕಾಶಗಳನ್ನು ಕಳೆದುಕೊಂಡರೆ ಅನೇಕ ಬಾರಿ ಪಶ್ಚಾತ್ತಾಪ ಪಡಬೇಕಾಗಬಹುದು.  ಚಿಂತನಾ ಶೈಲಿಗಳನ್ನು ಬದಲಿಸಿಕೊಂಡು ವಾಸ್ತವಾಂಶವನ್ನರಿತು ಚಟುವಟಿಕೆ ನಡೆಸುವುದು ಲಾಭದಾಯಕವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT